ಬೆಂಗಳೂರು ’೭೨

ಪರಚಿಕೊಂಡ ಪರಿಚಯದ ರಸ್ತೆ
ಉರುಳು
ತ್ತವೆ ಒಂದೇಸಮ ಮೈಮೇಲೆ ಅಟ್ಟಹಾಸದ ಸರಕು
ಬದುಕು ಬಿರುಕು
ಹೊತ್ತು ಗೊತ್ತಿಲ್ಲದೆ ಕತ್ತು ಕುಯ್ಯುತ್ತವೆ
ಪೆಡಸ್ಟ್ರ್‍ಐನಿನಲ್ಲಿ ಪೋಲೀಸನ ಕೈಗೇ ಕೈಕೊಟ್ಟು ನುಗ್ಗುತ್ತವೆ
ಕಾಲ
ಚಕ್ರದ
ಕೆಳಗೆ ಕರುಳ ಕಣ್ಣೊಡೆದು ಕೆಂಪು ಭೂಪಟ
ಬಿಡಿಸುತ್ತವೆ; ಇಲ್ಲಿ ಸಲ್ಲದೆ ಅಲ್ಲಿ ಸಲ್ಲುತ್ತವೆ.

ಇಲ್ಲಿ- ಪ್ರಜಾಪ್ರಭುತ್ವಕ್ಕೆ ಹೆಸರಾದ ಫುಟ್‍ಪಾತಿನಲ್ಲಿ
ಕಾಲುಗಳು ಇಂಟುಮಾರ್ಕು ಹಾಕುತ್ತವೆ ಸತತ.
ಮಧ್ಯೆ ಹರಿಯುವ ಮೀನು ಮೊಸಳೆಗಳ ಹೊಳೆ
-ಯಾಚೆ ದಡಕ್ಕೆ ಮತ್ತಕಣ್ಣು ಮುಕ್ಕಳಿಸಿ ಸುತ್ತುತ್ತವೆ ವೃತ್ತ.
ದಡದಿಂದ ದಡಕ್ಕೆ ಬ್ರಿಡ್ಜು ಕಟ್ಟಿ ನಿಂತಕಡೆಯೆ ಬದುಕಿ
-ನ ಬ್ಯಾಡ್ಜು ಧರಿಸಿ ಕೈಚಾಚಿ ಬರುತ್ತ
ಮಧ್ಯ ಹೊಳೆಯಲ್ಲಿ ತಣ್ಣನೆಯ ನೀರಲ್ಲಿ
ಬೆಚ್ಚನೆಯ ಬಂಧನದಲ್ಲಿ ಮತ್ತೆ
ಚುಂಬನದಲ್ಲಿ ಡೈವೊರ್‍ಸಿಗೆ ಸಹಿಮಾಡುತ್ತವೆ.

ಗುಪ್ತ
ಮಾರ್ಕೆಟ್ಟಿನ ಮುಂದೆ ಸುಪ್ತ ಚಿತ್ತ ಬಿಚ್ಚುತ್ತವೆ
ಅತ್ತ ಇತ್ತ ಸುತ್ತಮುತ್ತ ಮೆಲುಕುತ್ತ
ಆ ಈ ಭಾಷೆಗಳ ಕ್ರಾಸ್ ಬ್ರೀಡಿನಲ್ಲಿ
ಹೊಸದೊಂದು ಹುಟ್ಟಿಸುತ್ತವೆ; ಕಿವಿಬೆದರಿಸುತ್ತವೆ
ಅಲಂಕಾರದಲ್ಲಿ ಮುಳುಗಿ ಕಲ್ಪನಾಕ್ಕೆ ಪ್ರಭಾತ್ ಭೇರಿಹಾಕಿ
ಮೇನಕಾ ಮೈಯಲ್ಲಿ ಬಾಳು ಬರೆಯುತ್ತ
ಹಿಮಾಲಯ ಹತ್ತುತ್ತವೆ; ಹಡೆಯುತ್ತವೆ.

ಇಲ್ಲಿ ಈ ಸಿಟಿ
ಮಾರ್ಕೆಟ್ಟಿನಲ್ಲಿ ಮೀನುಬಲೆ ಮಾತು
ಬಿಡಿಸಲಾಗದ ಜಟಿಲತೆ ಜಂಜಾಟ ಜೀಕು
ಅಮಾವಾಸ್ಯೆಯಲ್ಲಿ ಬೆಳದಿಂಗಳ ಬಯಕೆ
ಬೆನ್ನಮೇಲೆ ಹೊತ್ತು ಬೆವರು ಬಸಿಯುತ್ತವೆ.
ಬಿಡುವು ಸಿಕ್ಕಾಗ ಸಿಳ್ಳು ಸಂಭ್ರಮದಲ್ಲಿ ಬಣ್ಣಕ್ಕೆ ಕಣ್ಣು
ಕೆನೆಸುತ್ತ ಕಳ್ಳು ಕುಡಿಯುತ್ತವೆ; ಸ್ವರ್ಗದ ಬಾಗಿಲಿಗೆ ಡಿಕ್ಕಿ
ಹೊಡೆದು ದುಡುಮ್ಮನೆ ಬೀಳುತ್ತವೆ.
ಸಿಳ್ಳು ಕಳ್ಳುಗಳ ದಡದಲ್ಲಿ ಮಾಮೂಲು ಮುಳ್ಳುಗಳು
ಬಿಲದಲ್ಲಿದ್ದು ನೆಲದ ನೈಜವಾಸನೆ ಕುಡಿತ ಕಡಿತಗಳು
ಬಾಯಿಗೆ ಬೆಣೆ ಬಡಿಸಿಕೊಂಡು ಬಂಡೆ ಸಂದಿಯಲ್ಲೂ ಬದುಕು
ಬಿಕ್ಕುತ್ತವೆ; ಬರೆಯುತ್ತವೆ.
‘ಅವು ಇವು’ಗಳ ಬದಲು ‘ಅವರು ಇವರು’ ಆಗಲು ಒದ್ದಾಡುತ್ತವೆ
ಇವು ಕೊಳಚೆ ಕಾವ್ಯದ ನಾಯಕ ನಾಯಕಿಯರು.
ನರನರಕ್ಕೆ ಬರದ ಬರೆ ಬಿದ್ದು ಬೆಣೆಯೆದ್ದು
ಬಾಯಿ ಬಿಟ್ಟರೆ ಸಾಕು
ಮೂರಂತಸ್ತಿನ ತುಟ್ಟ ತುದಿಯಲ್ಲಿ ವಾಯುವಿಹಾರದಲ್ಲಿ
‘ಅವು’
ಸ್ಲೋ-ಗನ್ನುಗಳ ಗೋಡನ್ನು ತೋರಿಸಿ ಕೋಟೆ ಕಟ್ಟುತ್ತವೆ.
‘ಇವರು’
ಹತ್ತಲು ಉಡವಾಗುತ್ತಾರೆ; ಉಡ ಬಡವಾಗುತ್ತದೆ.
ಇಷ್ಟಿಷ್ಟೇ ಹಿಡಿತ ಇಲ್ಲವಾಗುತ್ತ
ಅರ್ಥ ಹುಡುಕುತ್ತ ಹುಡುಕುತ್ತ ನೆಲವಾಗುತ್ತದೆ.

ಎಲೆಕ್ಟ್ರಿಸಿಟಿ ಬೋರ್ಡು ಅದರದೇ ಹತ್ತಾರು ವಾರ್ಡು
ಇರುವ ಬೆಳ್ಳಂಬೆಳಗಿನ ಬೆಂಗಳೂರಲ್ಲಿ
ಏನು ಮಾಡುವುದು ಸ್ವಾಮಿ ತಂತಿ ಕತ್ತರಿಸುತ್ತದೆ ಇಲ್ಲ ಕಂಬ ಬೀಳುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂದೂಮುಸಲ್ಮಾನರ ಐಕ್ಯ – ೬
Next post ವಿರಹಿ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…