ಮುಲ್ಲನ ಗಡ್ಡ
ಹುಚ್ಚ ಮುಲ್ಲನ ಹೊಗಳೋಣ
ಉಳಿದವರೆಲ್ಲರ…
ಮುಲ್ಲನ ಗಡ್ಡ
ಹಿಡಿದಷ್ಟೂ ದೊಡ್ಡ
ಬೆಳೆಯಿತು ಉದ್ದ
ಬೆಳೆಯಿತು ಅಡ್ಡ
ಗುಡ್ಡವ ಹತ್ತಿತು
ಗುಡ್ಡವ ಇಳಿಯಿತು
ಊರ ಕೋಟೆಗೆ
ಲಗ್ಗೆ ಹಾಕಿತು
ಸಣ್ಣ ಕಿರಣಗಳ
ಬಣ್ಣ ಹೆಕ್ಕಿತು
ಇಬ್ಬನಿ ಕುಡಿದೇ
ಬಹಳ ಸೊಕ್ಕಿತು
ಮನೆ ಮನೆ ಕದವ
ತಟ್ಟಿ ನೋಡಿತು
ಕಿಟಕಿ ಹತ್ತಿ
ಒಳಗೂ ಇಣುಕಿತು
ಹಾವಂತಾಯಿತು
ಹಾವಸೆಯಾಯಿತು
ನದೀ ತೀರದ
ಜೊಂಡೂ ಆಯಿತು
ನೀವಿದ ಕೈಗೆ
ಸಿಗಲೇ ಇಲ್ಲ
ಅರೆ ಯಾರ್ ! ಅರೆ ಯಾರ್ !
ಎಂದನು ಮುಲ್ಲ
ಗಡ್ಡ ಹೇಳಿತು
ನಾನೇ ಮುಲ್ಲ
ನನ್ನ ಕೇಳಲು
ನೀ ಯಾರೆಂದು !
ಹುಚ್ಚ ಮುಲ್ಲನ ಹೊಗಳೋಣ
ಉಳಿದವರೆಲ್ಲರ…
ಹುಕ್ಕಾ
ಹುಚ್ಚ ಮುಲ್ಲನ ಹೊಗಳೋಣ
ಉಳಿದವರೆಲ್ಲರ…
ಓಡುವ ಮೋಡವ ಅಲ್ಲೇ ನಿಲ್ಲಿಸು !
ಅದರ ನೆರಳಲಿ ಕಂಬಳಿ ಹಾಸು
ನಾಕು ಲೋಟಾ ಶರಬತು ಬೆರೆಸು
ಹುಕ್ಕ ಸೇದಲು ಮುಲ್ಲನ ಕರೆಸು…
ಹೆದ್ದಾರಿ ಮೇಲೊಂದು ಕಾಫಿಲ ಸಾಗಿ
ಎಡಬಲ ದ್ರಾಕ್ಷಿಯ ಗೊಂಚಲು ತೂಗಿ
ಎಲ್ಲಿಂದ ಬಂತೋ ಇಷ್ಟೊಂದು ಕಾಗಿ
ತಿಂದರು ಮುಗಿಯದೆ ತೇಗಿ ತೇಗಿ….
ಆ ಪಲ್ಲಕಿಯೊಳಗೊಬ್ಬ ರಾಜಕುಮಾರಿ
ಕಾಣಸದಿದ್ದರು ಆಕಿಯ ಮಾರಿ
ರೇಶಿಮೆ ನೂಲಿನ ಪರದೆಯ ಮೀರಿ
ಚೆಲ್ಲುವ ಚೆಲುವೆಂಬುದು ಖಾತರಿ
ಆ ಚೆಲುವಿನ ದಾರಿಗೆ ಅಡ್ಡೆಯ ಕಟ್ಟಿ
ಆ ಅಡ್ಡೆಯ ಕೆಳಗೊಂದು ಹೂಗಿಡ ಹುಟ್ಟಿ
ಆ ಹೂಗಿಡ ಸ್ವರ್ಗದ ಬಾಗಿಲ ಮುಟ್ಟಿ
ಅಲ್ಲಿಂದದಕೆ ಪರಿಮಳ ತಟ್ಟಿ…
ಆ ಪರಿಮಳದಿಂದಲೆ ಅತ್ತರು ಮಾಡಿ
ಆ ಅತ್ತರು ನಮ್ಮನು ದಿನವೂ ಕಾಡಿ
ಹಿಡಿದರು ಸಿಗದ ಬಲು ದೊಡ್ಡ ದಾಡಿ
ಹಾಕಿತು ಹೇಗಿಂಥಾ ಮೋಡಿ…
ಆ ದಾಡಿಗೆ ಹಚ್ಚಲು ಸಂಜೆಯ ಬಣ್ಣ
ಜನವೆಲ್ಲಾ ಬಿಟ್ಟಿತು ಕಣ್ಣ
ಆಹಾ ! ಅಹಹಾ ! ಎನ್ನುವರಣ್ಣ
ಹಿಡಕೊಂಡು ಬರುವರು ಕೈತುಂಬ ಸುಣ್ಣ…
ಆ ಸುಣ್ಣವ ಕೆಲವರ ಕಣ್ಣಿಗೆ ಹಚ್ಚು
ಇನ್ನುಳಿದವರಿಗೆ ಬೆಣ್ಣೆಯೆ ಮೆಚ್ಚು
ಒಬ್ಬೊಬ್ಬರಿಗೆ ಒಂದೊಂದು ಹುಚ್ಚು
ಹೊಟ್ಟೆಯಲಿರಲಿ ಹೊಟ್ಟೆ ಕಿಚ್ಚು…
ಆ ಕಿಚ್ಚನು ಹುಕ್ಕದ ಚಿಲುಮೆಗೆ ಹಾಕಿ
ಸೇದಿದ ಜನವೇ ಬಲ್ಲುದು ಶೋಕಿ
ಹಾಗಿದ್ರೆ ತಡವೇಕೆ ಬರಲಿ ಮತ್ತಾಕಿ
ಮತ್ತಾಕಿ ಮುತ್ತಾಕಿ ಹವಳದ ತುಟಿಯಾಕಿ….
ಆ ಹವಳದ ಮೇಲೂಬ್ಬ ಗಿಣಿರಾಯ
ಎಲ್ಲಿಂದ ಬಂದನೊ ಮಾರಾಯ
ಹಣ್ಣಿಲ್ಲ ಹೆಣ್ಣಿಲ್ಲ ಮಂಗ ಮಾಯ
ಮುಟ್ಟಿದರೆ ನೀ ಕೆಟ್ಟು ಹೋದಿಯಾ…
ಕೆಟ್ಟರೆ ಕೆಡಲಿ ಬಿಟ್ಟರೆ ಬಿಡಲಿ
ಅಟ್ಟದ ಮೇಲೊಂದು ಚಾಪೆ ಹಾಸಿರಲಿ
ಆಹಾ ! ನಿಮ್ಮ ನಮಾಜಿನ ವೇಳೆಯಲ್ಲಿ
ನಮ್ಮ ನಮಾಜಿಗು ಸ್ಥಳವಿರಲಿ !
ಹುಚ್ಚ ಮುಲ್ಲನ ಹೊಗಳೋಣ
ಉಳಿದವರೆಲ್ಲರ…
ಮುಲ್ಲನ ಲಾಂದ್ರ
ಹುಚ್ಚ ಮುಲ್ಲನ ಹೊಗಳೋಣ
ಉಳಿದವರೆಲ್ಲರ…
ಕಣ್ ಕಾಣಲ್ಲ
ಕಿವಿ ಕೇಳಲ್ಲ
ಆದರು ಮುಲ್ಲ
ಬಿಡೋನಲ್ಲ
ಅಲ್ಲಾ ಕರೆದರೆ
ಒಲ್ಲೇ ಎಂದ
ಬಾ ಎಂದರೆ
ಬಲ್ಲೇ ಎಂದ
ಹುಚ್ಚ ಮುಲ್ಲ
ನಮಾಜಿಗೆ ಕುಳಿತರೆ
ಭೂಮಿ ಗರ ಗರ
ತಿರುಗುತ ಇತ್ತು
ದೂರದ ಚಂದ್ರ
ನೋಡುತ ಇತ್ತು
ಲಾಂದ್ರ ಸುಮ್ಮನೆ
ಉರಿಯುತ ಇತ್ತು
ಎಲಾ ! ಎಲಾ !
ಎಂದನು ಮುಲ್ಲ
ಭೂಮಿ ತಿರುಗುವುದ
ನಿಲ್ಲಿಸಬೇಕು
ಚಂದ್ರನ ನಗೆಯ
ಕೊಲ್ಲಿಸಬೇಕು
ಎಂದವನೇ
ಎದ್ದೇ ಬಿಟ್ಟ
ಒಂದು ಕೈಯಲಿ
ಭೂಮಿಯ ತಡೆದ
ಇನ್ನೊಂದರಲಿ
ಚಂದ್ರನ ಹಿಡಿದ
ಹುಚ್ಚ ಮುಲ್ಲ
ನೆಲ ಬಿಟ್ಟೆದ್ದ
ಅವ ಮುಗಿಲಲಿ ಇದ್ದ !
ದಾರಿಯ ಉದ್ದಕು
ಕಾಮನ ಬಿಲ್ಲು
ಅಡಗಿತ್ತೆಲ್ಲಾ
ಮಂದಿಯ ಸೊಲ್ಲು
ಹಿಂದೆಂದೂ
ನಡೆಯದ ಹಾದಿ
ಇಂದಾದರು
ಯಾತಕೆ ಹೋದಿ
ಇಟ್ಟ ಹೆಜ್ಜೆ ಬಲು
ಹಗುರಾಗಿತ್ತು
ಹಿಂಜಿದ ಹತ್ತಿಗೆ
ಬಿದ್ದಂತಿತ್ತು
ನಕ್ಕನು ಮುಲ್ಲ
ಈ ತರ ಎಂದೂ
ನಕ್ಕದಿಲ್ಲ !
ನಗಬೇಕೆಂದೂ
ಅನಿಸಿದ್ದಿಲ್ಲ !
ಏನಿತ್ತಲ್ಲಿ ? ಏನಿರಲಿಲ್ಲ ?
ಬೆಳಕಿಗೆ ಮಾತೂ
ಬರುತಿತ್ತಲ್ಲಿ !
ಯಾತಕೆ ಯಾತಕೆ
ಎಂದನು ಮುಲ್ಲಾ
ಮುಂದಕೆ ಮುಂದಕೆ
ಎಂದನು ಅಲ್ಲಾ
ಮರೆಯಾಯಿತು ಆ-
ಕಾಶದ ಚಂದ್ರ
ಹಿಂದಕೆ ಉಳಿಯಿತು
ಉರಿಯುವ ಲಾಂದ್ರ
ಉರಿಯಿತು ಕೈ-
ಲಾಗುವ ವರೆಗೆ
ಮುಲ್ಲನ ಎಣ್ಣೆ
ಮುಗಿಯುವ ವರೆ !
ಅಂಥ ಮುಲ್ಲನ ಹೊಗಳೋಣ
ಉಳಿದವರೆಲ್ಲರ…
*****