ವಿಶ್ವಂಭರನೆ ವಿಶ್ವೇಶ್ವರನೆ |
ವಿಚಿತ್ರ ನಿನ್ನಯಲೀಲೆ ತಂದೇ || ಪ ||
ವಿಶ್ವ ವಿಶ್ವಗಳ ತಿರುಗಿಸುತಿರುವೆ |
ಎಲ್ಲಿಯೊ ಇರುವುದು ಸೂತ್ರ
ವಿಶ್ವದ ಕಣಕಣದಲ್ಲಿಯು ಕೂಡ |
ಹೊಳೆವುದು ನಿನ್ನಯ ಚಿತ್ರ || ೧ ||
ಅದೃಶ್ಯವೆಂಬರು ನಿನ್ನಯ ರೂಪ |
ಕೋಟಿ ರೂಪಗಳ ತಳೆದಿರುವೆ
ಅಸೀಮವೆಂಬರು ನಿನ್ನಾಕಾರಾ |
ಜಡಚೇತನಗಳ ತುಂಬಿರುವೆ || ೨ ||
ಕಡ್ಡಿಕಲ್ಲುನಲು ಕುಳಿತಿಹ ನೀನು
ಗುಡ್ಡ ತಿರುಗಿದರು ಕಂಡಿಲ್ಲ
ಅನೇಕವೆನ್ನುವ ಸಂತೆಯ ಹಿಂದಿಹ
ಏಕವ ಬಹುಜನ ಕಂಡಿಲ್ಲ || ೩ ||
ಹೆಣ್ಣು ಗಂಡುಗಳ ಭೇದವ ಗೈದು
ಸೃಷ್ಟಿಯ ಚೆಲುವಿನ ಬಲೆ ನೆಯ್ದೆ
ತಂದೇ ತಾಯೀ ಬಂಧೂ ಬಳಗಾ
ಕರುಳು ಬಳ್ಳಿಗಳ ಕಲೆ ಹೆಣೆದೆ || ೪ ||
ಭೂಮಿಯ ಮಣ್ಣಿನ ಬೊಂಬೆಯು ದೇಹವ
ಮಣ್ಣನೆ ಕಚ್ಚಲು ಹಚ್ಚಿರುವೆ
ಶಿರದಲಿ ಸಾವಿನ ಈಟಿಯು ತೂಗಿರೆ
ಬಾಳುವ ಆಶೆಯ ಮುಚ್ಚಿರುವೆ || ೫ ||
ವಿಶ್ವದಾಟದಲಿ ಗ್ರಹ ತಾರೆಗಳೇ
ಆಟದ ಗೋಲಿಗಳೆನುವಾಗ
ಜೀವನ ಮಣ್ಣಲಿ ನಾ ನೀ ಎಂಬುದು
ಸಾವಿರವಾಗುವ ಬಿಡಿ ಭಾಗ || ೬ ||
ದ್ವಂದ್ವಾತೀತನೆ ಹೇ ಪರಬೊಮ್ಮನೆ
ದ್ವಂದ್ವ ಮಧ್ಯದಲೆ ನಾನಿರರುವೆ
ಎರಡನು ಮೀರುತ ಒಂದಾಗಲಿಕೆ
ಜನುಮ ಜನುಮಗಳ ಸಾಗಿರುವೆ || ೭ ||
*****