ಲೋಕಮಾನ್ಯರಾದ ಗುಲಾಮು ಅಲಿ ಹಾಗು ಮಾಯೆಯ ಆಹ್ವಾನಕ್ಕನುಸರಿಸಿ ಜಹಗೀರಿನೊಳಗಿನ ಶಸ್ತ್ರಹಿಡಿಯಲು ಶಕ್ತರಾದ ಎಲ್ಲ ಗಂಡಸರೂ ತಮ್ಮ ಮನೆಯಲ್ಲಿದ್ದ ಬಿದ್ದ ಶಸ್ತ್ರಗಳನ್ನು ತಕ್ಕೊಂಡು ಬಂದು ದಂಡಿನಲ್ಲಿ ಸೇರಿದರು. ಆ ಜಹಗೀರಿನೊಳಗಿನ ಎಲ್ಲ ಬಡಿಗ-ಕಮಾರರು ಹಗಲಿರಳುಗಳೆನ್ನದೆ – ಶಸ್ತ್ರಾಸ್ತ್ರಗಳನ್ನು ಮಾಡತೊಡಗಿದರು. ಜಹಗೀರದಾರನ ಈ ಸಂಪೂರ್ಣ ಸಿದ್ಧತೆಯ ಸುದ್ದಿ ಕೇಳಿ ನವಾಬನ ದಂಡು ಮುಂದರಿಯದಾಯಿತು ಅದು ಬಂದ ದಾರಿಯಿಂದಲೇ ಪಲಾಯನ ಹೇಳಿಸಿತು! ಹೀಗೆ ಗುಲಾಮನಿಗೆ ಮಾಯೆಯ ಸಹಾಯದಿಂದ ಒಂದು ಹನಿ ಕೂಡ ರಕ್ತಸ್ರಾವವಾಗದಂತೆ ವಿಜಯ ಪ್ರಾಪ್ತವಾಯಿತು!
ಇತ್ತ ಗುಲಾಮ ಆಲಿಯು ಜಯಭೇರಿಯನ್ನು ಹೊಡಿಸುತ್ತ ನಗರವನ್ನು ಪ್ರವೇಶಿಸುತ್ತಿರಲು, ಅತ್ತ ದಿಲ್ಲಿಯಿಂದ ಬರುತ್ತಿದ್ದ ಮಾನಸಿಂಗನು ದುರಾತ್ಮನಾದ ಮಜೀದಖಾನನ ದಂಡನ್ನು ನುಗ್ಗು ಮಾಡಿ, ಬಂಗಾಲ ಪ್ರಾಂತವನ್ನು ಆಕ್ರಮಿಸಿದನು. ಮಾನಸಿಂಹನಿಗೆ ಈ ಲೋಕಮಾನ್ಯ ಹಿಂದೂ-ಮುಸಲ್ಮಾನರನ್ನು ಐಕ್ಯಭಾವದಿಂದ ನಡೆಸಿಕೊಳ್ಳುವ ಗುಲಾಮ ಆಲಿಯ ನಿಪೃಹ ವರ್ತನ ತಿಳಿಯಲು, ಅವನು ಇವನ ಇಡಿ ಜಹಗೀರನ್ನು ಇವನಿಗೇ ಬಿಟ್ಟು ಕೊಟ್ಟನು.
ಯಾವನು ಧರ್ಮವನ್ನು ರಕ್ಷಿಸುವನೋ ಅದು ಅವನನ್ನು ತಪ್ಪದೇ ರಕ್ಷಿಸುವದು.
*****
ಸಂಪೂರ್ಣ