ಫಕ್ಕನೆ ಪುಕ್ಕ ಬಿಚ್ಚುತ್ತೆ; ಕೊಕ್ಕು ಕಚ್ಚುತ್ತೆ;
ಕಚ್ಚಿದ ಜಾಗದಲ್ಲಿ ಚಿಮ್ಮಿದ ಕೆಚ್ಚು
ನಿರಿನಿರಿ ಹೊಳೆಯುವ ಗರಿಗರಿಯಲ್ಲಿ ಹುಚ್ಚು
ಹೊಳೆಯಾಗಿ ಹೋಗುತ್ತೆ.
ಅವ್ಯಕ್ತ ನೋವು ರಸಪುರಿ ಮಾವಾಗಿ ಮಾಗಲು ತುಡಿಯುತ್ತೆ.
ಆಕಾಶದಗಲ ರೆಕ್ಕೆಯಲ್ಲಿ ಅದರ ತೆಕ್ಕೆಯಲ್ಲಿ
ಆಸೆಚಿಕ್ಕಿಗಳ ಚದುರಂಗ.
ಇಲ್ಲಿ ನಿಂತ ನೆಲದಲ್ಲಿ
ಹಾವು ಕಾವು ಅದರ ಮೈನುಣುಪು ಅಲೆಯಲೆಯಾಗಿ
ನಾನು ದೋಣಿಯಾಗಿ ಖುಷಿ ಹುಟ್ಟು ಹಾಕುವುದು;
ಸುಖಸುಂದರಿಗೆ ಕಟ್ಟು ಹಾಕುವುದು;
ಇಕ್ಕಳಗಣ್ಣಲ್ಲಿ ಹೊಕ್ಕುಳ ಹಿಡಿದು ನಡುವಿಗೆ ದೋಣಿ ಹೊಡೆದು
ಮತ್ತ ಮಾರುತದಲ್ಲಿ ಚಿತ್ತ ಮೊಳೆಯೊಡೆದು
ಹೆಪ್ಪು ಹಾಕದ ಹಾಲು ಕಡೆಯುವುದು;
ಒಳಗೆ ಹೊಡೆಯುವ ಸೆಖೆಗೆ ಸೆರಗು ಬೀಸಣಿಗೆ ಹಾಯೆನಿಸಿ
ಹೂವು ಮೈ ತೇಲುವುದು;
ಇವೆಲ್ಲ ಎಂಥ ಖುಷಿ ಗೊತ್ತ?
ವಾಸ್ತವದ ಉದ್ಘಾಟನೆಗೆ ಟೇಪು ಕತ್ತರಿಸಿದಾಗ
ತೆರೆದ ಕಣ್ಣಿನ ಮುಂದೆ:
ಖುಷಿ ಫಾಸಿಯಾಗಿ ಹಲ್ಗಿರಿವ ಹಗ್ಗದ ಅಣಕು
ಪ್ರಶ್ನೆ ಬದುಕು.
*****