(ವೀರಕಾಶೀಮ)
ಭಾವದಲ್ಲಿ:-
“ಅಸಮ ಆಶಾಪಾಶ ಹರಿದುಬಿಟ್ಟೆ
ವಿಷಮ ವಾಸನೆಗಳನ್ನು ಸುಟ್ಟುಬಿಟ್ಟೆ
ಈಶ ಕೋಪದ ಕತೆಯ ಬಲ್ಲೆ ನಾನು
ಈಶ ಕರುಣೆಯ ಮಹಿಮೆ ಅರಿತೆ ನಾನು
ಜಯಿಸಿ ಇಂದ್ರಿಯಗಳನು ವಶಕೆ ತಂದೆ
ಜಯಶೀಲನಾದೆನು ತಪಸಿನಿಂದೇ
ಆರುವಿನಸ್ತ್ರದಲಿ ಭವಪಾಶ ಹರಿದೆ
ಪರಮಪುರುಷಗೆ ಮೆಚ್ಚಿ ಎಲ್ಲ ತೊರೆದೆ
ಸುಖದುಃಖದಾ ತೆರೆಗೆ ಬೆದರಲಾರೆ
ಸುಖಶಾಂತಿಗಳ ಸವಿಗೆ ತೊಳಲಲಾರೆ
ಘನ್ನ ಬೆಸಿಕೆಯ ಜೀವ ದೇಹ ಕಂಡೆ
ಭಿನ್ನವಾಗಿಹವೆಂದು ಕಂಡುಕೊಂಡೆ
ನಿಂದೆ ಅವಮಾನ ಜಯವೊಂದೆಯೆಂದೆ
ಅಂದು ಮುಂದಿನ ಎಣಿಕೆ ಯಾತಕೆಂದೆ
ಕಮಲದೊಲು ನಿರ್ಲಿಪ್ತನಾದೆ ನಾನು
ವಿಮಲ ಪ್ರಭೆಯನು ಒಳಗೆ ಕಂಡೆ ನಾನು
ಲೋಕ ವಿಷಯದ ರಾಶಿ ವಿಷ ತೋರುತಿಹುದು
ನಾಕ ನರಕದ ಭಯವು ಕಸತೋರುತಿಹುದು
ಶತ್ರುಮಿತ್ರರ ಸೀಮೆ ದಾಟಿ ನಿಂತೆ
ಛತ್ರಚಾಮರದಾಶೆ ಮರೆತು ನಿಂತೆ
ಕಷ್ಟಸಂಕಟಗಳಿಗೆ ಕೈಮಾಡಿ ಕರೆದೆ
ನಷ್ಟ ನಿಷ್ಟುರಗಳಿಗೆ ಮೆಗೊಟ್ಟು ಪೊರೆದೆ
ಮರೆಯಲಾರೆನು ಪೂರ್ವ ಪಾಪಗಳನು
ಮರೆಯಲಾರೆನು ಪರರ ತಾಪಗಳನು
ಜಗದ ನಿಃಸ್ಸಾರತೆಯು ಕಯ್ಯ ಕನ್ನಡಿಯು
ಬಗೆಯ ಭಂಗುರತೆಯ ಕಂಡ ನೆಲೆಯು
ಪರಮಾತ್ಮನೇ ಪರಮ ಗುರುವು ತಾನು
ಪರಮನಾಜ್ಞೆಯೇ ನರಗೆ ನೆಲೆಯು ತಾನು
ಪರರಿಗುಪಕಾರ ಮಾಡಿದ್ದು ಮರೆವೆ
ಹಿರಿಹಾನಿ ಮಾಡಿದನ ಮರೆತು ಬಿಡುವೆ
ಕನಕಸಿರಿ ಕಸದಂತೆ ಕಂಡೆ ನಾನು
ಜನಪತಿಯ ವೈಭವವ ಬಯಸೆ ನಾನು
ಸತ್ಯಸುವಿಚಾರ ಜ್ಞಾನದಲ್ಲಿ ಹಾರುತಿಹೆ
ನಿತ್ಯನಿರ್ಮಲ ಅನಂತದಲ್ಲಿ ಆಡುತಿಹೆ
ನಾ ನಿನ್ನ ಶಿಶುವೆಂಬ ಗರ್ವವಿಹುದು
ನಾನೆಂಬಹಂಕಾರ ಕರಗಿರುವದು
ಹೀನ ಜನ ದೀನ ಜನ ಬಳಗ ಬಂಧು
ಮಾನಾಭಿಮಾನವನ್ನು ನೋಡೆನೆಂದು
ಮೇರುಗಿರಿಯಂಥ ದೃಢ ಭಕ್ತಿಯಿಹುದು
ಮೂರು ಲೋಕವೆ ಭಾವದಲ್ಲಾಡುತಿಹುದು
ಲೋಕ ಕಿಂಕರನಾಗಿ ಬಾಳುತಿರುವೆ
ಲೋಕದಲಿ ತ್ಯಾಗವನ್ನು ಸಾರುತಿರುವೆ
ಸುಳಿಯಲಾರದು ಸ್ವಾರ್ಥ ಸನಿಹದಲ್ಲಿ
ಅಳುಕಲಾರದು ಚಿತ್ತ ಕನಸಿನಲ್ಲಿ
ದಿವ್ಯ ನಭದಂತ ನಿಸ್ಸೀಮನಾಗಿರುವೆ
ಭವ್ಯ ಕಡಲಂತೆ ಗಂಭೀರನಿರುವೆ
ಕುಲಗೋತ್ರ ಬಂಧುಗಳ ಬಂಧನವು ಬೇಡ
ಚಲವಿಚಲ ವಸ್ತುಗಳ ದುಃಖ ಬೇಡ
ಕ್ರೋಧಲೋಭದ ಬೆಂಕಿ ನಂದಿರುವುದು
ಭೇದಬೋಧದ ಬೂದಿ ಹಾರುತಿಹುದು
ಆರು ವೈರಿಗಳನ್ನು ತುಳಿದು ನಿಂದೆ
ಮರು ಬಾಧೆಗಳನ್ನು ದಾಟಿ ಬಂದೆ
ಸಂಕಟದ ಸೈನ್ಯವನ್ನು ಮೆಟ್ಟಿ ಚದರಿಸಿದೆ
ಕೊಂಕುಕುಟಿಲತೆಗಳನ್ನು ಕುಟ್ಟಿ ಓಡಿಸಿದೆ
ಸಾಧಿಸಿದೆ ಕಾರ್ಯವನು ಕರ್ತವ್ಯದಲ್ಲೇ
ಬೋಧಿಸುವ ಸ್ವಾವಲಂಬನದ ಮೇಲ್ಮೆ
ತಡೆಯದೈ ಕಣ್ಣೀರು ಪರದುಃಖ ನೋಡಿ
ಹಿಡಿದು ಪೀಡಿಸೆನು ಜೀವಿಗಳ ಕಾಡಿ
ಗುರುವಚನ ಲೀಲೆಯಲಿ ಲೋಲನಿರುವೆ
ಕರುಣೆಯನು ಕರುಳಲ್ಲಿ ತುಂಬಿಕೊಂಡಿರುವೆ
ದಾರಿದ್ರ್ಯದಾಹ ಬಾಧೆಗಳನ್ನು ಗಣಿಸೆ
ಘೋರತರ ಸಂಕಟಗಳನ್ನು ಎಣಿಸೆ
ನಿಂದೆ ನೀಚತ್ವಗಳ ಪೀಡೆ ಸಹಿಸಿ
ಬೆಂದು ಪರಿಪಕ್ವತೆಯ ಫಲವ ಗಳಿಸಿ
ಪರಮನಾಜ್ಞೆಯ ನಾನು ಅರಿತುಕೊಂಡೆ
ವರ ಸೇವೆಯಾ ಮರ್ಮ ಕಲಿತುಕೊಂಡೆ
ಪರರ ಮನ ಮುರಿದು ಅನ್ಯಾಯ ಮಾಡಿ
ದೊರಕಿಸಿದ ಅನ್ನವನು ದೂರ ನೋಡಿ
ಅನ್ಯಾಯದಾಟಕ್ಕೆ ಜೀವ ಹೇಸಿ
ಮಾನ್ಯಮಾರ್ಗವ ಹಿಡಿದೆ ಸೋಸಿ ಸೋಸಿ
ಜೀವ ಜಾಲಕ್ಕೆಲ್ಲ ದಾರಿ ಹಿಡಿಸಿ
ಸಾವು ನೋವಿನ ತೊಡಕನೆಲ್ಲ ಬಿಡಿಸಿ
ಕಷ್ಟನಷ್ಟ ವಿರೋಧಗಳ ದೂರಗೊಳಿಸಿ
ಸುಷ್ಟುತರ ಶಾಂತಿಸುಖ ಪ್ರೇಮ ಬೆಳಿಸಿ
ಬಲವಾಯ್ತು ವಾಣಿ ತಾ ನುಡಿದು ನಡೆದು
ಛಲವಳಿದು ನೆಲೆ ತಿಳಿದು ಫಲವ ಪಡೆದು
ಪರರ ನೋಯಿಸಿ ನಿಂದೆ ಹಿಂದಾಡಲಿಲ್ಲ
ನೆರೆಹೊರೆಯರೆದುರು ಪೌರುಷ ಹೇಳಲಿಲ್ಲ
ಕೆಟ್ಟನಡಿ ವೈರಿಗೂ ನುಡಿಯಲಿಲ್ಲ
ಕೊಟ್ಟರೂ ರಾಜ್ಯ ಸುಳ್ಳಾಡಲಿಲ್ಲ
ಕಾಣುವೆನು ಪ್ರೇಮವನು ಕಾಡುವವರಲ್ಲಿ
ಕಾಣುವದು ಪರದುಃಖ ತಿಳಿಗಣ್ಣಿನಲ್ಲಿ
ಅಡಗದೈ ಸೌಂದರ್ಯ ರೂಪದೃಷ್ಟಿ
ಅಡಗಿಕೊಂಡಿದೆ ಕಣ್ಣಿನಲಿ ಪೂರ್ಣಸೃಷ್ಟಿ
ಏರುತೇರುತ ಸಪ್ತಗಗನದಲ್ಲಿ
ಸೇರುವದು ಗುರುಚರಣ ಜ್ಯೋತಿಯಲ್ಲಿ
ಪರರ ಆಪತ್ತು ಅನ್ಯಾಯ ಕಂಡು
ತಿರುಗೆ-ನೆಂದೆಂದು ನಾ ಸಹಿಸಿಕೊಂಡು
ಪಾತಕದ ಪಂಕದಲಿ ಬೀಳದಂತೆ
ಆತ್ಮದಲ್ಲಿ ಎಚ್ಚರಿಕೆ ತುಂಬಿ ನಿಂತೆ
ಜ್ಞಾನದಯೆಗಳ ಸೈನ್ಯ ಸಿದ್ದವಿಹುದು
ವಿನಯ ತಾಳ್ಮೆಗಳ ಸಿಡಿ ಮದ್ದು ಇಹುದು
ಆತ್ಮರಾಜ್ಯದ ಅರಸನೇ ನಾನು ಇರುವೆ
ಆತ್ಮದಾನಂದಕ್ಕೆ ಬಾಧ್ಯನಿರುವೆ
ಸೇವಕರ ಸೇವಕನು ನಾನಾಗಬೇಕು
ಯಾವ ಭೂಷಣ ಬೇಡ ಜ್ಞಾನ ಸಾಕು
ಅರಮನೆಯ ಗದ್ದುಗೆಯ ಬಯಸಲಾರೆ
ಇರಲಿ ಗುಡಿಸಲವಿದನೆ ಮರಿಯಲಾರೆ
ರತ್ನಮಾಣಿಕ ತೊರೆದೆ ಕಸಕೆ ಬಗೆದು
ಆತ್ಮರತಿಯೊಂದೆ ಆಭರಣವಿಹುದು
ತಪಜಪಾದಿಗಳಲ್ಲಿ ನಿಷ್ಕಾಮನಿರುವೆ
ಉಪವಾಸದಲ್ಲಿ ಫಲ ಕಾಣುತಿರುವೆ
ಸ್ವಾರ್ಥ ಸೇವೆಯ ಬಾಳು ಶುನಕನಂತೆ
ವ್ಯರ್ಥವಾಗಿಹುದಯ್ಯ ಕಾಡುಸಂತೆ
ಕೆಳಗಿಳಿಯಲಾರೆ ಭವಕೂಪದಲ್ಲಿ
ತಿಳಿದು ತೇಲಾಡುತಿಹೆನಂತರಂಗದಲ್ಲಿ
ದೋಷಗಳ ನಾನೆಣಿಸೆ ಸತ್ಯರಲ್ಲಿ
ಮೋಸ ಮೋಹವ ಕಾಣೆ ನಿತ್ಯರಲ್ಲಿ
ಕಷ್ಟಸಂಕಟಗಳನ್ನು ತುಳಿದಾಡುತಿರುವೆ
ಶೇಷ್ಠರಾಚರಣದೊಳು ಹೊರಳಾಡುತಿರುವೆ
ಹೇಸಿ ಹೆಣ್ಣಿಗೆ ಹಣಕೆ ಕಣ್ಣಿರಿಯಲಾರೆ
ವಾಸನೆಗೆ ವಶನಾಗಿ ಮಣ್ ಮುಟ್ಟಲಾರೆ
ಹಿಂಸೆ ಎಂದೆಂದು ವಡದು ಭಾವದಲ್ಲಿ
ಸಂಶಯವು ಸುಳಿಯದೈ ಬುದ್ದಿಯಲ್ಲಿ
ಸುಖದುಃಖ ಲೆಕ್ಕಿಸದ ಶಿಶುವ ನಾನು
ಸಕಲಬ್ರಹಾಂಡಕ್ಕೆ ಬಾಧ್ಯ ನಾನು
ವಚನಶಾಸ್ತ್ರಗಳೆಲ್ಲ ಉದರದಲ್ಲಿ
ರಚನೆ ರಂಜನೆ ಸ್ಮರಣೆ ವಕ್ಷದಲ್ಲಿ
ಸುರಿಯುತಿದೆ ಭಕ್ತಿ ಸುಧೆ ಧಾರೆಗೊಂಡು
ಹರಿಯುತಿವೆ ದೋಷಗಳು ಕೊಚ್ಚುಕೊಂಡು
ಒಮ್ಮೆಯೂ ಪರನಿಂದೆ ಕೇಳಲಾರೆ
ಹಮ್ಮು ಹಿರಸಿನ ಬಲೆಗೆ ಬೀಳಲಾರೆ
ಕುಟಿಲ ಗರ್ವದ ಗಣಕ ತಾಣವಿಲ್ಲಾ
ಕಟುವಾಕ್ಯ ಕನಸಿನಲಿ ನುಡಿಯಲಿಲ್ಲಾ
ಗುರು ಪದಾಂಬುಜದ ಗಂಧವನ್ನು ಮೂಸಿ
ಇರುವೆ ಗುಣಗಂಧದಲಿ ಕಾಸಿ ಸೋಸಿ
ಅಮರೇಂದ್ರ ಚಂದ್ರರೂ ಸೇವಿಸುವ ಗಂಧ
ಅಮರನಾಗಿಯೆ ಸೇವಿಸುವೆ ಶಕ್ತಿಯಿಂದ
ಭೋಗದಾಗರವೆಮ್ಮ ಭವವು ಅಹುದು
ಜಾಗತಿಕ ಪರಿಮಲವು ಕ್ಷಣಿಕವಿಹುದು
ರುಚಿಹೀನ ವಾಸನೆಯು ಪಸರಿಸಿಹುದು
ಶುಚಿಮಾಡಿ ಶೇಖರಿಸಿ ಘ್ರಾಣಿಸುವುದು
ದೊರೆತಷ್ಟೆ ಸವಿಮಾಡಿ ಸೇವಿಸುವುದು
ಪರಿಪೂರ್ಣ ತೃಪ್ತಿ ತಾ ನೆಲಿಸುತಿಹುದು
ಹಸಿವೆ ನೀರಡಿಕೆಗಳ ಸುದ್ದಿಯಿಲ್ಲಾ
ಕಸವಿಸಿಯು ಕಾತರವು ಮೊದಲೆ ಇಲ್ಲಾ
ಮೋಸಗಾರಿಕೆಯವಿತ ಮನಸಿನಲ್ಲಿ
ದೋಷವೇ ಕಾಣುವದು ಲೋಕದಲ್ಲಿ
ಕುರುಡನಾಗಿಹೆ ದುಷ್ಟ ವಿಷಯಗಳಲ್ಲಿ
ಸರಳತೆಯೆ ತುಂಬಿಹುದು ದೃಷ್ಟಿಯಲ್ಲಿ
ಖೇದಕೊಡು ಮೋದಕೊಡು ತಂದೆ ನೀನು
ಭೇದ ಮಾಡೆನು ಬೇಕು ಬೇಡೆನ್ನೆನು
ಚಿತ್‌ಪಕ್ಷಿ ನಿನ್ನಲ್ಲಿ ಹಾರುತಿಹುದು
ಸತ್ ಜ್ಯೋತಿ ಮಿರಮಿರನೆ ಮಿಂಚುತಿಹುದು
ದಿವ್ಯದಾ ತಣ್ಣೆರಳು ಹಬ್ಬುತಿಹುದು
ಭವ್ಯದಾಕಾಶದೊಳು ಪಸರಿಸಿಹುದು
ನಿನ್ನೆದೆಯೊಳಿರುವದೀ ಮೂರುಲೋಕ
ನನ್ನೆದೆಯೊಳಿದೆ ನಿನ್ನ ಶ್ರೀವಿವೇಕ
ಹಿರಿಬೆಳಕು ಕಿರಿಬೆಳಕು ಬೆಳಕೆ ಬೆಳಕು
ಸಿರಿಬೆಳಕು ಝಂಬೆಳಕು ಬೆಳಕೆ ಬೆಳಕು”
* * * *
ರಣದಲ್ಲಿ : –
ಮುಗಿಲೆಲ್ಲ ಔದಾಸ್ಯ ಮುಚ್ಚಿರುವದು
ಹಗಲೆಲ್ಲ ಕಣ್ಣೀರು ಹರಿಯುತಿಹುದು.
ಧ್ವನಿಯಲ್ಲಿ ಹಾಕಾರ ತುಂಬಿರುವದು
ಮನೆಮನೆಗೆ ಅಳುವ ಸ್ವರ ಕೇಳುತಿಹುದು.
ರಣವೀರ ಕಾಶೀಮ ಕುದುರೆಯೇರಿ
ರಣಕೆ ಹೊರಟಿರುವ ಘನಶೌರ್ಯ ತೋರಿ
ಕರಬಲ’ದ ಕಾರಡವಿ ಕಾಳಿನಲ್ಲಿ
ಮರಣವಾಳುತಿದೆ ಆ ನಾಡಿನಲ್ಲಿ
ಉರಿಯುತಿದೆ ಘೋರಾಗ್ನಿ ಗಾಳಿ ಬೀಸಿ
ಕರಗಿ ಅಂತಃಕರಣ ಕಾಸಿಕಾಸಿ
ಒಡೆದಾಟ ಹೊಡೆದಾಟ ನೋಡಿಕೇಡಾ
ಅಡಗುತಿದೆ ಸಡಗುತಿದೆ ಸಾವು ಕೂಡ
ಸಮಯವಿದು ಸಂಧಿಸಿತು ಧರ್ಮದಲ್ಲಿ
ವಿಮಲತೆಯ ಒರೆಗಲ್ಲು ಅಲ್ಲಿ ಇಲ್ಲಿ
ನಾಡನುಡಿ ಧರ್ಮಧನ ರಕ್ಷೆಗಾಗಿ
ಕುಡಿದಿಹನು ವೀರಸುಧೆಯನ್ನು ತ್ಯಾಗಿ
ನಡೆದಿಹನು ತಾಯಿ ಬಳಿ ಆಜ್ಞೆಗಾಗಿ
ನಾಡಪ್ರೇಮಾಮೃತದಿ ಮಗ್ನನಾಗಿ.
ನಮಿಸಿ ಪದ ಶಿರಬಾಗಿ ನಿಂತು ತಾನು
ಕಮಲಮುಖ ಕೆಂಪೇರಿ ನೋಡುತಿಹನು.
ಮಮತೆಯಿಂ ಮನವುಕ್ಕಿ ಪ್ರಾಣತುಂಬಿ
ಸುಮತಿಯನು ಅಪ್ಪಿದಳು ಕಣ್ಣು ತುಂಬಿ
ತಾಯಿ :-
“ಬಾ ತಾರೆ! ಬಾ ಚಂದ್ರ! ಬಾರೆನ್ನ ರನ್ನಾ!
ಏತಕ್ಕೆ ಪೇಳು ಗಡ ನಿನ್ನ ಈ ಮೌನ
ಅರಮನೆಯ ಸಿರಿಗೂಸೆ! ನೀರಿನಲ್ಲಿ
ವೈರಿಗಳು ಬೆರೆಸಿಹರು ವಿಷವನಿಲ್ಲಿ.
ಏನು ಉಣಿಸುವೆ ನಿನಗೆ ಏನು ಕುಡಿಸುವೆನು!
ಕನಸೆನಲೊ ನೆನಸೆನಲೊ ಏನು ಎಣಿಸುವೆನು!”
ಉಮ್ಮಳಿಸಿ ಹೊರಚಿಮ್ಮಿತೊಂದು ನುಡಿಯು
ಮಗು:-
“ಅಮ್ಮ! ಎನಗಾಜ್ಞೆ ಕೊಡು ಬೇಡ ತಡೆಯು
ಧರ್ಮಪಾಲನೆಯ ನಿಜಧೈಯವಿಹುದು
ಕರ್ಮಹೀನತೆ ನರಗೆ ತ್ಯಾಜ್ಯವಿಹುದು
ಕರಮುಗಿದು ಬೇಡುವೆನು ಆಜ್ಞೆ ಇಂದು
ಹರಸವ್ವ! ಆಯುಷ್ಯ ಬೆಳೆಯಲೆಂದು
ವಿಜಯಜಪ ಮಾಡುತಿರು ಜಯಿಸಿ ಬರುವೆ
ವಿಜಯಸಿರಿ ಕೈಹಿಡಿದು ಕರೆದು ತರುವೆ.”
ಮನದಲ್ಲಿ ನಾಟಿದವು ಮಾತು ಮೊದಲು
ಘನಪ್ರಳಯದಲೆಯೆದ್ದು ಬಡಿಯುತಿರಲು
ಒಡನೆ ಕಣ್ಕತ್ತಲಿಸಿ ಮಂಜುಗಟ್ಟಿ
ಒಡಲೊಳಗೆ ಉರಿಯೆದ್ದು ಅಡಗಿ ದೃಷ್ಟಿ
ದುಗುಡಗಡಲಿನ ಸೆಳವಿನಲ್ಲಿ ಹರಿದು
ಬಗೆಗೆಡುತಲಿದ್ದರೂ ಧೈರ್ಯ ಹಿಡಿದು
ತಾಯಿ:-
“ಮಲ್ಲಿಗೆಯ ದಂಡೆಗಳು ಮೆರೆಯುವಲ್ಲಿ
ಭಲ್ಲೆಗಳು ಮಿಂಚಿದವು ಏನು ಅಲ್ಲಿ!
ಸುರಿಸುರಿದು ಕಂಬನಿಯು ಕಣ್ಣುಮುಚ್ಚಿ
ಹರಿದು ಹೋಗುವೆನಶ್ರುಧಾರೆ ಕೊಚ್ಚಿ
ಬಿಡಲಾರೆ ನಿನ್ನನ್ನು ರಣಕೆ ನಾನು
ಬಿಡುವದಿದ್ದರೆ ಬಿಟ್ಟು ಹೋಗು ನೀನು.
ಜೀವವೇ ನನ್ನ ತಲೆಭಾರವಾದೀತು
ಜೀವನವೆ ನನ್ನನ್ನು ತಿಂದು ತೇಗೀತು.
ನಿನ್ನ ನಗಲಿದರೆನ್ನ ಬಾಳೆಯೆಲ್ಲಿ ?
ನನ್ನ ನೋಡುವರಾರು ಮುಪ್ಪಿನಲ್ಲಿ ?
ಮಗು :-
“ಸತ್ಯರಕ್ಷಣೆ ನಾಡು ಒಂದು ಕಡೆಗೆ
ತುತ್ತುಸಾವಿಗೆ ವಂಶ ಒಂದು ಕಡೆಗೆ
ಒಂದು ಕಡೆ ಕೆರೆಯೊಂದು ಕಡೆಗೆ ಬಾವಿ
ಒಂದು ತೋಚದು ನೀನೆ ಹೇಳು ತಾಯಿ
ದೇವದೇವನ ಇರವು ಇಲ್ಲವೇನು
ಪಾವನಾತ್ಮನ ಕಣ್ಣು ಕುರುಡು ಏನು ?
ಸಾಗರವೆ ಭೋರ್ಗರೆದು ಉಕ್ಕುತಿಹುದು
ತ್ಯಾಗರಾಜ್ಯದ ಜ್ಯೋತಿ ಆರುತಿಹದು.
ಸತ್ಯವೇ ಸಾಯುಜ್ಯವಲ್ಲವೇನು ?
ಸತ್ಯವನ್ನು ತೊರೆದು ನಾ ಬದುಕಲೇನು ?”
ತಾಯಿ :-
“ಧುರದಲ್ಲಿ ಚಳಿಯಲ್ಲಿ ಬಿಸಿಲಿನಲ್ಲಿ
ಇರುಳಲ್ಲಿ ಹೇಗಿರುವಿ ಗಾಳಿಯಲ್ಲಿ?”
ಮಗು :-
“ನಾಡಿನಾ ಉಪ್ಪುಂಡ ದೇಹವನ್ನು
ನೀಡುವೆನು ನಾಡಿನಾ ಸೇವೆಗಿನ್ನು
ಯಾರನೂ ಮರೆಯದಾ ದೇವನಿಹನು
ದೂರಗೊಳಿಸುವನವನೆ ಸಂಕಟವನು
ಯಾರಿಗೂ ಎಂದಿಗೂ ಮರಣ ಬಿಡದು
ಭೂರಿದಂದುಗವೇಕೆ ಆತ್ಮ ಕೆಡದು.”
ತಾಯಿ:-
“ಪ್ರಾಣವೇ! ನೀನಿದ್ದು ಫಲವು ಏನು!
ಪ್ರಾಣಪದಕದ ಜೊತೆಗೆ ಹೊರಡು ನೀನು!”
ಶೋಕಾರ್ತ ಜನನಿಯನು ಶಾಂತಗೊಳಿಸಿ
ಲೋಕರಕ್ಷಣೆಗಾಗಿ ಆಜ್ಞೆ ಬಯಸಿ
ಮಗು:-
“ತಂದೆತಾಯ್ಗಳ ಸೇವೆ-ಉಚಿತ ಅಹುದು
ಬಂಧುಬಳಗದ ಪ್ರೇಮ ಶ್ರೇಷ್ಠ ಅಹುದು
ವರ ಸುತನ ಕರ್ತವ್ಯ ಬಲ್ಲೆನೆಲ್ಲ
ವರ ಧರ್ಮದಿದುರಿನಲಿ ಸಾಧ್ಯವಿಲ್ಲ
ನಿನ್ನಿಷ್ಟ ನಡಿಸಿದರೆ ಉಳಿಗಾಲವಿಲ್ಲ
ಇನ್ನೇನು ಈ ಧರ್ಮದಳಿಗಾಲವೆಲ್ಲ
ಎರಡು ಕಡೆ ಇಕ್ಕಟ್ಟು ನೀನೆ ನೋಡು
ಎರಡಿಲ್ಲದೊಂದು ಮನ ನೀನೆ ಮಾಡು.”
ಕೇಳಿ ಮೂರ್ಛಿತಳಾಗಿ ತಿಳಿದು ಎದ್ದು
ಹೇಳುವಳು ಧೈರ್ಯದಿಂ ಕೊಟ್ಟು ಮುದ್ದು.
ದುಃಖಸಾಗರದಲ್ಲಿ ಮಿಂಚಿ ಧೈರ್ಯ
ಉಕ್ಕಿ ಬಂತಾಕ್ಷಣಕೆ ದಿವ್ಯ ಶೌರ್ಯ
ತಾಯಿ:-
“ಕರ್ತವ್ಯಪಾಲನೆಯೆ ನಿನ್ನ ಧ್ಯೇಯ
ಕರ್ತವ್ಯದಲ್ಲಿಯೇ ಮರಣ ಶ್ರೇಯ
ಕ್ಷಣದಲ್ಲಿ ಹೊರಡೆನ್ನ ಕುಲಮಣಿಯೆ ಚಿನ್ನಾ!
ರಣದೇವಿಯುಡಿಗೆ ನೀಡಿರುವೆ ನಿನ್ನ
ಸುಖವಾಗಿ ರಣದುಡಿಯು ತಣ್ಣಗಿರಲಿ
ಮುಖತೋರು ಬಯಸಿ ಮಗು! ವಿಜಯವಿರಲಿ.
ಪುತ್ರವತಿಯಾಗಿದ್ದೆ ಇಂದು ಸಂಜೆ
ಗೋತ್ರದಾ ಕದನದಲಿ ಆದೆ ಬಂಜೆ
ದೇವಾಧಿದೇವನೇ ಕಾಯೊ ಎನ್ನ
ಜೀವದಿಂದಧಿಕ ನೀ ಕಂದ ರನ್ನ
ಮನೆಯಲ್ಲಿ ಮೊಗದಲ್ಲಿ ತುಂಬಿ ನೀನು
ರಣದಲ್ಲಿ ರಕ್ಷಿಪನು ನೀನೆ ನೀನು
ಇದಕಾಗಿ ತುಂಬಿತ್ತೆ ಉಡಿಯು ಕೋಡಿ
ಎದೆಗೊಟ್ಟು ಸಲುಹಿದೆನು ಕಷ್ಟದೂಡಿ
ಕರ್ಮವಿಧಿ ಕಾದಿತ್ತೆ ಬಾಲಗಾಗಿ
ಧರ್ಮರಣ ಏರಿದನು ಸತ್ಯಕಾಗಿ
ಮನದಲ್ಲಿ ಅಳುಕುತಿದೆ ಮನದ ಮಾತು
ತನಯ ಏನೆಂಬೆ ಒಪ್ಪುವಿಯೆ ಅಂತು?”
ನಿಂತಿಹನು ಆ ನಡಿಗೆ ಶಿರವ ಬಾಗಿ
ಚಿಂತಾಗ್ನಿಯನು ಮರೆದು ಮುಗ್ದನಾಗಿ
ರಣವೆ ಹಂದರ ಭಲ್ಲೆಯೇ ಕಠಾರಿ
ರಣಗರ್ಜನೆಯೆ ವಾದ್ಯಘೋಷ ಭೇರಿ
ಕರದಲ್ಲಿ ಕಂಕಣವ ಕಟ್ಟಿಕೊಂಡು
ಶಿರದಲ್ಲಿ ಅಕ್ಷತೆಯನಿಟ್ಟುಕೊಂಡು
ರಣಗಹಳೆ ರಣಭೇರಿಗಳದೆ ನಾದಾ
ಉಣಲಿಲ್ಲ ಉಡಲಿಲ್ಲ ಲಗ್ನ ವಾದಾ
ಕತ್ತಿಢಾಲು ಕಠಾರಿ ಕುದುರೆಯೊಂದು
ಮುತ್ತಿರುವ ಕಣ್ಮುಸುಕೆ ಬಳಗಬಂಧು
ಮಾತೆಯಾಜ್ಞೆಯ ಪಾಲಿಸಿದನು ಕಂದ
ಖ್ಯಾತಿಗೊಳಿಸಿದ ತನ್ನ ವಂಶದಂದ
ಮೆರವಣಿಗೆ ಮದುವಣಿಗೆ ಹೊರಟನಿಂದು
ಸುರನರರ ಕಣ್ಣೀರು ತುಂಬಿ ಬಂದು
ಸ್ವಸ್ಥ ನಡೆದನು ತಾನು ತುಳಿದು ಚಿಂತೆ
ಆಸ್ತಾಚಲಕೆ ರವಿಯು ತೆರುಳುವಂತೆ
ನಡುರಾತ್ರಿ ಭೀಕರತೆ ಬೀರುವಲ್ಲಿ
ಕಡುಗಲಿಯ ಬಲಿಗೊಡುವ ರಂಗದಲ್ಲಿ
ಮಂದವಾಗಿದೆ ಗಾಳಿ ನಡಿಗೆ ಮರೆದು
ದಂದುಗವೆ ಧರಣಿಯಲಿ ಧುಮುಕುತಿಹುದು
ತರುಮರಗಳೆಲ್ಲ ತಾಪಸಿಗಳಂತೆ
ಸ್ಥಿರವಾಗಿ ನಿಂತಿಹವು ಕಲ್ಲಿನಂತೆ
ಬಾಡಿಹವು ಬಳ್ಳಿಗಳು ಬಳಲಿದಂತೆ
ನೋಡುತಿವೆ ನೆಲವನ್ನು ತುಂಬಿ ಚಿಂತೆ.
ಸೂರೆಗೊಂಡಿದೆ ಹೆಸರು ತುಥ್ಯದಂತೆ
ತೋರುತಿದೆ ಧರೆಯೆಲ್ಲ ವಿಷದ ಸಂತೆ
ನೆಲವೆಲ್ಲ ಉಸುಬಿನಾ ಬೈಲೆ ಬೈಲು
ಫಲಹೀನ ಗಗನವೋ ಮೊದಲೆ ಬಯಲು
ದೂರದಲಿ ನದಿಯೊಂದು ಹರಿಯುತಿಹುದು
ಚೀರುಸ್ವರ ಅಳುವಂತೆ ಕೇಳುತಿಹುದು
ಕೇಳುತಿದೆ ನಾದ ಚಿದ್ಗಗನದಲ್ಲಿ
ಕೇಳಿದನು ಏಕಾಗ್ರ ಚಿತ್ತದಲ್ಲಿ
ಕೇಳಿದಂತನಿಸಿ ನುಡಿ ಅರುವಿನಲ್ಲಿ
ಕೇಳಿಸಿತು ತೀರ ಹೊಸ ರೀತಿಯಲ್ಲಿ
ಎಲ್ಲಿಂದ ಬರುವದಿದು ಎಂಥ ನಾದ
ಕಲ್ಲಮನ ಕರಗುವದು ಇಲ್ಲ ಶೋಧ
ಮನಬಿರಿದು ಸೆಳೆವ ಸವಿ ಕರುಣವೇನು
ಚರಣ ಚರಣಕೆ ಈ ಮಂದ್ರ ತಾರವೇನು
ತರುಲತೆಯು ಗಿರಿತೊರೆಯು ಒಂದುಗೂಡಿ
ಮರುದನಿಯ ಕೊಡುತಿರಲು ಧರೆಯೆ ಹಾಡಿ
ನೋಡುತಿದೆ ಜಡಸೃಷ್ಟಿ ಕಣ್ಣು ತೆರೆದು
ಬಾಡಿಯೆದೆ ಕಣ್ಣೀರು ಧಾರೆ ಎರೆದು
ನೋಡುವಷ್ಟರೊಳೀತ ರಣಕೆ ಸಾಗಿ
ಮಾಡಿ ಗರ್ಜನೆ ವೈರಿಗಳನು ಕೂಗಿ
ತಿರುಗಿಸುವ ಖಡ್ಗ ಕೈಚಳಕವೇನು
ಬರುವ ಬಾಣವ ತಡೆವ ಧೈರ್ಯವೇನು
ಗುಂಡುಗಳಿಗೆದೆಗೊಟ್ಟು ಕಾದುತಿಹನು
ರುಂಡುಗಳ ನೀಡಾಡಿ ಕುಣಿಯುತಿಹನು
ಮನದ ಆಕಾಶ ವ್ಯಾಪಿಸಿದೆ ಮೋಡಾ
ಮಿನುಗುತಿದೆ ಒಳಬೆಂಕಿ ಜ್ವಾಲೆ ಜೋಡಾ
ಕತ್ತಲೆಯು ಮುತ್ತಿರುವ ಝುಂಪಿನಲ್ಲಿ
ತತ್ತರಿಸೆ ಆತ್ಮ ಜೋಕಾಲಿಯಲ್ಲಿ
ತೂಗುತಿರುವಂತೆ ತೋರುತಿದೆ ಕನಸು
ಸಾಗಿಹನು ರಣದಲ್ಲಿ ಉಬ್ಬಿ ಮನಸು
ಉರಿದುರಿದು ಆರಿರುವ ರಣರಂಗದಲ್ಲಿ
ಅರಳು ಮಲ್ಲಿಗೆಯಂಥ ಬೆಳದಿಂಗಳಲ್ಲಿ
ಹೃದಯದಾಕಾಶದೊಳು ಮೋಡ ಮುಸುಕಿ
ಅದುರಿ ಗದ್ದರಿಸಿ ಮಳೆ ಬಡೆದು ಕುಕ್ಕಿ
ಕೋಲ್ಮಿಂಚು ಅಲ್ಲಿ ಕುಣಿಕುಣಿದು ಮಿಂಚಿ
ಕೀಲುಚ್ಚಿ ಹೋದಂತೆ ಎದೆಯು ಬಿಚ್ಚಿ
ಒಳಗೆದ್ದ ಬಿರುಗಾಳಿ ಉಸಿರು ಕಟ್ಟಿ
ತಿಳುವಿನಾ ತೆರೆ ಹರಿದು ಆಚೆ ಅಟ್ಟಿ
ಸ್ವರಮರೆದು ಮೊರೆಯಿಟ್ಟ ದೇವನಲ್ಲಿ
ಸ್ವರವೇರಿ ಸುಳಿಯುತಿದೆ ಶಿಖರದಲ್ಲಿ
ಉಲುವಿಲ್ಲ ಅಲೆಯಿಲ್ಲ ಜಲವಿಲ್ಲದಲ್ಲಿ
ಅಲೆದೊಂದೆ ತೇಲುತಿದೆ ರಣಜಲಧಿಯಲ್ಲಿ
ಜೀವನದ ನೌಕೆಯದು ಕೊನೆದಂಡೆಯಲ್ಲಿ
ಸಾವಿನೆದುರಾಡುತಿದೆ ಸಂತೋಷದಲ್ಲಿ
ಎರಡಿಲ್ಲ ಬಗೆಯಲ್ಲಿ ಒಂದೆ ಒಂದು
ಎರಡೆಂಬುದರ ಸುಳಿವೆ ಸತ್ತಿತಿಂದು
ಪ್ರಳಯಾಗ್ನಿ ಪ್ರಳಯ ಜಲ ಮಧ್ಯದಲ್ಲಿ
ನೆಲ ಮುಗಿಲ ತುಂಬಿಬಹ ರೀತಿಯಲ್ಲಿ
ಮಿನುಗುತಿದೆ ಮಿಂಚುತಿದೆ ಆರುವಂತೆ
ಮಿಣಕು ಜ್ಯೋತಿಯ ಬೆಳಕು ಬೆಳ್ಳಿಯಂತೆ
ಮರಿಸಿಂಹ ಹುರಿಗೊಂಡು ಹಾರುತಿಹುದು
ತರಗೆಲೆಯವೊಲು ಸೇನೆ ಉರುಳುತಿಹುದು
ಕೋಲ್ಮಿಂಚು ಸಿಡಿದಂತೆ ಸಿಡಿಲು ಗುಂಡು
ಕೋಲಾಹಲಕೆ ಹೋಯ್ತು ಚದರಿ ದಂಡು
‘ವಿಜಿದ’ನ ಬಿರುಸಾದ ಬಾಣ ಬಂದು
ಮೂಜಗದ ವೀರ ಬಾಲಕನ ಕೊಂದು
ಬಾಣದೊಳು ಪ್ರಾಣಶಿಖೆ ಸೇರಿ ಹಾರಿ
ಕಾಣದೊಲು ಮರೆಯಾಯ್ತು ಶೌರ್ಯದೋರಿ
ಮಿಂಚಿನಾ ಹಿಲ್ಲಾಲ ಬೆಳಕಿನಲ್ಲಿ
ಮಿಂಚಿದನು ವೀರಮಣಿ ಯುದ್ಧದಲ್ಲಿ
ವೈರಿಗಳೆ ವರ್ಣಿಪರು ವೀರನನ್ನು-
“ಶೌರ್ಯವೇ ಅಗಲಿತೀ ಧರಣಿಯನ್ನು”
ಕಣ್ಮಸಕೆ ಆಯ್ತು ನಿಮಿಷಾರ್ಧದಲ್ಲಿ
ಕಣ್ಮಿಸುಕದಾಯ್ತು ಜಗವೀಗ ಇಲ್ಲಿ
ಹಸಿವು ನೀರಡಿಕೆಗಳ ಸುಳಿವು ಇಲ್ಲ
ಬಿಸಿಯುಸಿರೆ ಬೀಸುತಿದೆ ಸುತ್ತಲೆಲ್ಲ
ಸ್ವಾತಂತ್ರ್ಯ ತುತ್ತೂರಿಯೂದಿ ಆತ್ಮಾ
ಮಾತೃಭೂಮಿಯ ಋಣಕೆ ನೀಡಿ ಆತ್ಮಾ
ಚಿಕ್ಕೆಗಳ ಚುಕ್ಕಾಣಿ ಏರಿ ಹಾರಿ
ಚಿಕ್ಯಾತ್ಮ ನಲಿಯುತಿದೆ ಸ್ವರ್ಗಸೇರಿ
ಈರ್ಷೆತ್ವೇಷಗಳ ನಸು ಸುಳಿವು ಇಲ್ಲ
ಹರುಷವೇ ಬೀರುತಿದೆ ಸುತ್ತಲೆಲ್ಲ
ಮುಕಟಸಿಂಹಾಸನದ ಪ್ರಶ್ನೆಯಳಿದು
ಮುಕುತಿರಾಜ್ಯದ ಮಾರ್ಗ ಬೆಳಕು ಹರಿದು
ತೊರೆದ ಅಸು ಸ್ವಾತಂತ್ರ್ಯಯುದ್ಧದಲ್ಲಿ
ದೊರೆಕಿಸಿದ ಸ್ಥಿರಸ್ಥಾನ ಸ್ವರ್ಗದಲ್ಲಿ
ವೀರಮರಣದ ಕೀರ್ತಿ ಸಾರುತಿಹುದು
ವೀರಸ್ವರ್ಗದ ಭೇರಿ ಮೊಳಗುತಿಹುದು
ಅಳುತಿಹುದು ರಣಗಾಳಿ ಕೂಗಿಕೂಗಿ
ಉಳಿದವರ ಪಾಡೇನು ತಿರುಗಿಮುರಗಿ
ಸತ್ಯವೇ ಕಂಕಣವು ಅವನ ಕೈಯಲ್ಲಿ
ನಿತ್ಯವೇ ಅಕ್ಷತೆಯು ಅವನ ಶಿರದಲ್ಲಿ
ದಾರವಿಲ್ಲದ ಪಟವು ಹಾರುತಿಹುದು
ಸೂರ್ಯಮಂಡಲದಲ್ಲಿ ತೋರುತಿಹುದು
ಸುಳಿಗಾಳಿ ಸೊಗವಿಲ್ಲ ಬಿಸಿಯುಸಿರು ಇಲ್ಲ
ಕಳವಳವು ಇಲ್ಲ ಕನವರಿಕೆ ಇಲ್ಲ
ಸಂತಸವು ಇಲ್ಲ ಚಿಂತೆಗಳು ಇಲ್ಲ
ಇಂತು ಆ ಗಳಿಗೆ ಏನೇನು ಇಲ್ಲ.
ಕುದುರೆ ಕಾಲ್ದೆಗೆದು ರಣದಿಂದ ಮರುಳಿ
ಮದುವೆಯಾ ಮನೆಯ ಕಡೆ ಮೋರೆ ಹೊರಳಿ
ಬರುವಾಗ ಅದರದೆಯು ಕೆರಳಿ ಕೆರಳಿ
ತಿರುತಿರುಗಿ ನೋಡುತಿದೆ ಹೊರಳಿ ಹೊರಳಿ
ರಣಕಣವು ಆ ಸೃಷ್ಟಿ ಎಲ್ಲ ಇಹುದು
ಭಣಗುಟ್ಟಿ ಭಣಭಣವೆ ತೋರುತಿಹುದು
ಇದ್ದದ್ದು ಇದ್ದಂತೆ ಇರುವುದೆಲ್ಲ
ಇದ್ದೊಬ್ಬ ವೀರನೇ ಮಾತ್ರ ಇಲ್ಲ.
ಬಯಲು ಬತ್ತಲೆ ಕುದುರೆಯನ್ನು ನೋಡಿ
ಸುಯಿಲು ಬತ್ತಿತು ಜನಕೆ ಮೋರೆ ಬಾಡಿ
ಗಿಡಗಂಟಿ ಪಶುಪಕ್ಷಿ ಹಲುಬುತಿರಲು
ಒಡಲೆಂಬುದುರಿಯದೇ ಕುದುರೆ ಬರಲು?
ಧರಣಿಯೇ ಅಳುವಂತೆ ತೋರುತಿಹುದು
‘ಕರಬಲ’ಕೆ ಕಾರ್ಮೋಡ ಮುಸುಕಿರುವುದು
ರಕ್ತದಲಿ ರಣಭೂಮಿ ನೆನೆದಿರುವದು
ಚಿತ್ತ ಕಂಬನಿಗಳಲಿ ಮುಳುಗಿರುವದು
ಅಳುವವರು ಅಳುತಿರಲು ಒಂದು ಕಡೆಗೆ
ಉಳಿದವರು ಧ್ಯಾನಿಸುವರೊಂದು ಕಡೆಗೆ
ತನ್ನನುಳಿಸುವ ಹೇಡಿ ಉಳಿದು ಫಲವೆ ?
ತನ್ನ ನೀಡಿದ ಕಲಿಯ ಸಾವು ನಿಜವೆ ?
ಅಳಿವಿಲ್ಲದಾ ಕೀರ್ತಿ ಇಲ್ಲಿ ಅವಗೆ
ಅಳಿವಿಲ್ಲದಾ ರಾಜ್ಯ ಅಲ್ಲಿ ಅವಗೆ
ಅಳಿವಿಗೇ ಅಳುವವರು ಅಳುತೆ ಇಹರು
ಅಳಿವಿಲ್ಲದುದ ಗಳಿಸಿದವರೆ ನರರು.
*****