ಶ್ರೀರಾಮ ಪಟ್ಟಾಭಿಷೇಕದಲಿ ಒಲಿಯುತ್ತ
ಜಾನಕಿಯು ರಘುವರನ ಸಂಜ್ಞೆಯರಿತು.
ಹನುಮಂತನಿಂದಾಯ್ತು ರಾಮದರ್ಶನಮೆಂದು
ನವರತ್ನಹಾರಮಂ ಕೊರಳಿಗಿತ್ತು
ಸಿಂಗರಿಸೆ ಹೊಳೆ ಹೊಳೆದ ದೇದೀಪ್ಯಮಾನದಲಿ
ರಾಮರತ್ನವ ಧರಿಸಿ ನುಡಿಯ ಮರೆತು.
ಒಂದೊಂದೆ ರತ್ನಮಂ ಪರಿಕಿಸುತ ಕಡಿಯುತ್ತ
ಪುಡಿಗೈಯುತುಗುಳಿದಂ ರುಚಿಯನರಿತು.
ಆ ಸರದ ರತ್ನಗಳ ಹಾಳುಮಾಡಿ
ಶ್ರೀರಾಮರಡಿಗಳಲಿ ಹಾಕಿ ಹಾಡಿ
ತಾಯಿಯಾ ಕೂಪಮಂ ನೊಂದ ನೋಡಿ
ಕೋಡಗಕೆ ಮಣಿಯೇಕೆಯೆಂದ ಬೇಡಿ.
ಕಪಿಗೆ ಸಿಂಗರಮೇಕೆ ಗೌರವಂ ಸಲ್ಲುವುದೆ
ಕುಲಬುದ್ಧಿಯಂ ತೋರ್‍ದೆ ಪುಡಿಯ ಗೈದು
ಸಾಲದಾದುದೆ ನಿನಗೆ ನವರತ್ನಹಾರಮಿದು
ಹಣ್ಣೆಂದು ಬಗದೆಯಾ ಹಸಿವ ನೆನೆದು.
ಇದೊ ಶಾಪ ನಿನಗೆಂದು ಕುಪಿತಳಾದಳು ತಾಯಿ
ಹಣ ಚಾಚಿದನು ಪದದಿ ದೇಹಕೆಡೆದು.
ಈ ಮಹಾ ಹಾರದೊಳು ರಾಮನಾಮದ ಸವಿಯ
ಕಾಣದಾಂ ಬಿಸುಡಿದೆನು ಹುರುಳನರಿದು
ನಿಸ್ಸಾರವೀ ಹಾರ ಕ್ಷಮಿಸು ತಾಯಿ
ರಾಮನಾಮದ ರತ್ನ ಸೌಖ್ಯದಾಯಿ
ರಾಮಸನ್ನಿಧಿಯಿರಲು ಬೇರೆ ಬೇಕೆ
ನಿಮ್ಮ ಮಗುವಾಗಿರಲು ಹಾರಮೇಕೆ?
ನಸುನಕ್ಕನಾ ರಾಮ ಸಂತವಿಸಿ ಸೀತೆಯನು
ಅವನ ಕೊಂಡಾಡಿದಳು ನಿಜವನರಿತು.
ರಾಮನಾಮದ ಮಹಿಮೆಯರಿತವನು ಹನುಮಂತ
ರಾಮನೊಲಿದಿಹನವಗೆ ತನ್ನನಿತ್ತು
ಭಕ್ತಿಮರುಳಿಂ ಕುಣಿವ ಹನುಮಂತನೊಡನಿರುವ
ತೊಡಕಾಯ್ತು ರಾಜ್ಯಮಂ ನಡೆಸಲೆನಿತು.
ಅವನು ನೆನೆದಲ್ಲಿರುವ ಅವನ ಪ್ರೇಮಕ ಮಣಿವ
ಅಡವಿಯೇ ಮನೆಯಾಯ್ತು ಕಪಿಯ ಬೆರೆತು.
ರಾಮನಾಮವ ಹಾಡಿ ಕುಣಿಯುತಿಹನು
ಮೈಮರೆತು ದಾಶರಥಿ ನಗುತಲಿಹನು
ರಾಮ ಬಂದುದ ಕಾಣ ಅಳುತಲಿಹನು
ಮಾರುತಿಯ ನುಡಿಸಿದನು ಭರದಿ ತಾನು.
ಹಾಡುತಿರೆ ನೀನಿಲ್ಲಿ ರಾಜಕಾರ್ಯದ ನಾವೆ
ಎಂತು ನಡೆವುದು ಹೇಳು ರಾಜನಿರದೆ.
ಹಾಡು ಹಾಕುತ ಚಿಟಿಕಿ ಶಯನ ಕಾಲದಿ ಬಂದು
ಆಕಳಿಪ ಸಮಯದೊಳು ಎನಲು ನಿಜದೆ.
ತಾಯಿಯೊಡನಿರುವಾಗ ಸೆಜ್ಜೆಯೊಳು ಬಹೆನೆಂತು
ಅಲ್ಲೇಕೆ ಇಲ್ಲಿರುವೆ ಚಿಂತೆಯಿರದೆ.
ಆಗದಾಗದು ಹನುಮ ಅರಮನೆಯ ಬಾಗಿಲೊಳ್
ಇರ್‍ದು ನೀ ಇರುಳಿನೊಳು ನೆನೆದು ಬಿಡದೆ.
ಚಿಟಿಕಿಯಂ ಹಾಕಿದೊಡೆ ಆಕಳಿಸುವೆ
ಎನಲಯೋಧ್ಯಯನೈದಿ ರಾಮ ಸೇವೆ
ಯಲಿ ನಿಂದ ಭಕ್ತಿಯಲಿ ಆಯ್ತು ಮರವೆ
ಚಿಟಿಕಿ ಹಾಕುತ ಕುಣಿದ ಹೇಳಲಳವೆ!
ಬಿಟ್ಟ ಬಾಯ್ ಮುಚ್ಚದಿಹ ಮಲಗಿರುವ ರಘುರಾಮ
ಸೀತೆಗಚ್ಚರಿಯಾಯ್ತು ಭಯದಿ ಬಂದು
ಗುರು ವಸಿಷ್ಠಂಗರುಹೆ ಓಡಿಬಂದರು ಹನುಮ
ನಿರವರಿತು ಅಪ್ಪಿದರು ಕೈಯ ತಂದು.
ರಾಮನಿರವನ್ನೊರೆಯೆ ತಪ್ಪನೊಪ್ಪುತ ಬಂದು
ಅಜನ ಪಟ್ಟವ ಪಡೆದ ಪದದಿ ನಿಂದು.
ಎಲೆ ರಾಮ ನೀ ಸುಲಭ ಮೋಡಿಗಳ ಮಾಡುವೆಯ
ಎನುತ ನಮಿಸಿದ ಕಣ್ಣನೀರ ತಂದು
ಅಚ್ಚರಿಯ ತಾಳಿದಳು ಸೀತೆ ಮನದಿ
ಮಚಿದಳು ಮಾರುತಿಯ ಹಿಗ್ಗಿ ಭರದಿ
ಚಿರಜೀವಿಯಾಗೆಂದು ಹರಸಿ ಹೊಗಳಿ
ಅರೆನಗೆಯ ನಕ್ಕಳಾ ದೇವಿ ಮಗುಳಿ.
*****