ಹೋಗೋಣ ಬಾರೆ ಸಖೀ ತೀರಕೆ
ಕಲಕಲ ಹರಿಯುವ ನದಿಯಾ ತೀರಕೆ || ಪ||
ಮಧುರ ರಸಾಮೃತ ನಾದವ ಹರಿಸುತ
ಮೋಹನ ಮುರಳೀ ಲೋಲನು ಇರುವ
ಹಸಿರೆಳೆ ಹುಲ್ಲನು ಮೇಯದೆ ಆಲಿಸಿ
ಗೋವುಗಳೆಲ್ಲಾ ನಿಂತಿಹ ತೀರಕೆ || ೧ ||
ತಳಿರಿನ ಸೊಗಸಿನ ಹಾಸಿಗೆ ಹಾಸಿ
ವಿಧ ವಿಧ ಹೂಗಳ ಮಾಲೆಯನರ್ಪಿಸಿ
ತೆಂಗಿನ ಗರಿಗಳ ಚಾಮರ ಬೀಸಿ
ವನದೇವಿಯು ಸೇವೆಯ ಗೈದಿಹಳು || ೨ ||
ಮನೆಗಳ ಜಂಜಡ ಕೆಲಸವ ಬಿಟ್ಟು
ಮನವನು ತಣಿಸಲು ಇಹವನು ಮರೆತು
ಗೋಪಾಲನ ಸಂಗೀತವ ಸವಿಯಲು
ಗೋಪಿಯರೆಲ್ಲರು ಹೋಗುತಲಿರುವರು || ೩ ||
*****