ಮುನ್ನುಡಿ
ರಾಮನನ್ನರಿತವರು ಶಬರಿಯನು ಅರಿತಿಹರು,
ಮಾತು ಶಬರಿಯದಲ್ಲ, ಬರವೊನಲಿದಾಕಯದು.
೧ ಬೀಡ ಬಳಿಯೊಳು ಕುಳಿತು:
“ಒಬ್ಬಳೇ ಒಬ್ಬಳೀ ಕಾಡಿನೊಳಗಿರುವೆ,
ನನ್ನ ಹುಟ್ಟನು ತಿಳಿಯೆ, ಬಳೆದ ಬಗೆಯನ್ನರಿಯೆ,
ನಾನಾರು..? ಬಂದೆನೆಲ್ಲಿಂದಿಲ್ಲಿ..? ಏತಕ್ಕೆ..?
ಹಕ್ಕಿ-ಮಿಗಗಳನೆಲ್ಲ ತಾಯಿಗಳು ಪಡೆಯುವುವು,
ನನ್ನ ಪಡೆದವರಾರು..? ಎಲ್ಲವಾ ತಾಯಿಗಳು
ತಮ್ಮ ತಮ್ಮೆಳೆಯ ಹಿಳ್ಳೆಗಳನ್ನು ಮರಿಗಳನು
ಒಲವಿನಲಿ ಮುತ್ತಿಟ್ಟು, ಮೈಮೂಸಿ ಗುಟುಕಿತ್ತು,
ಮೊಲೆಯುಣಿಸಿ ಚಳಿಗಾಳಿಗಳ ತವಿಸಿ ಸಂತವಿಸಿ,
ಬಳೆಯಿಸುವುದನ್ನು ನಾನು ದಿನದಿನವು ನೋಡುವೆನು;
ಎಳೆಯತನದಿಂದೆನ್ನ ನೊಲಿದು ಸಲಹಿದರಾರು..? ೧೦
ಬಳೆದುದೊಡ್ಡವಳಾದುದೆಂತು..? ತಿಳಿಯದಲಿಹೆನು.
ಹಸಿವಾಗೆ ಹೊಸಹಣ್ಣತಿನಲು-ಬಾಯಾರಿರಲು
ಹೊಳೆಯ ತಿಳಿನೀರ ಕುಡಿಯಲು ತಿಳಿಯಿತೆಂತೆನಗೆ..?
ಹಕ್ಕಿಗಳ ಹಿಂಡನ್ನು-ಕೊತಿಗಳ ಬಳಗವನು-
ಮಿಗದ ಜಂಗುಳಿಯನ್ನು ನೋಡಿ ನನ್ನದು ನಾನೆ
ಹಣ್ಣುಗಳ ತಿಂದು ನೀರ್‌ಕುಡಿಯಲರಿತಿಹೆನೇನೋ..!”
“ಅಡವಿಮಿಗ..ಮಂಗ-ಹಕ್ಕಿಗಳು ತಮ್ಮಂತಿರುವ
ಒಡನಾಡಿಗಳ ಬೆರತು ಆಟಗಳನಾಡುವುವು;
ಊಟವನು ಮಾಡುವುವು, ಕುಣಿದು ಕೆಲೆದಾಡುವುವು;
ನನಗೆ..! ನನ್ನಂತಿರುವ ಒಡನಾಡಿಯೇ ಇಲ್ಲ; ೨೦
ಆಡುವೆನದಾರೊಡನೆ? ಊಡುವೆನದಾರೊಡನೆ
ಕೂಡಿ ಕೆಲೆದಾಡಿ ಮಾತಾಡುವೆನದಾರೊಡನೆ..?
ಹಕ್ಕಿಗಳ ಹಾಡುಗಳನೇ ಕೇಳಿ ಹಿಗ್ಗುವೆನು;
ಕೋತಿಗಳ ಕುಣಿತದೊಡನೆಯೆ ಕುಣಿದು ತಣಿಯುವೆನು;
ಮಿಗದ ಜಂಗುಳಿಯೊಡನೆ ನಗುತೆ ನೆಗೆದಾಡುವೆನು;
ಇವರನೇ ನನ್ನ ಕೆಳೆಯರನಾಗಿ ತಿಳಿದಿಹೆನು.
ಕಾಡಿನೊಳಗಲೆದು ಓಡಾಡಿ ಬಳಲಿಕೆಯೊದವೆ
ಬೀಡಿನಲಿ ಬಂದು ಬಳಲನು ಕಳೆದುಕೊಳಲೆಂದು
ಕುಳಿತಿರುವೆ; ಇಲ್ಲದಿರೆ ಮಲಗಿರುವೆನೊಬ್ಬಳೇ;
ಬಳಿಯಲ್ಲಿ ಬೇರಾವ ಸುಳಿದಾಟವೇ ಇರದು; ೩೦
ಕಡಲಿನೊಳಗಲೆಯೆದ್ದು ಕುಣಿದಾಡುವಂತಾಗ
ಒಡಲಲ್ಲಿ ಎಂತಹದೊ ಕುಣಿದಾಟ ನಡೆದಂತೆ
ಎನಿಸುವುದು; ಬೆದರುವೆನು ‘ಇದು ಏನು’ ಎಂದೆನುತೆ.
ಇರಲಿರಲು ನನ್ನೊಡಲ ಕುಣಿದಾಟದೊಡನೆಯೇ
ಬೆರೆತು ಒಂದಾಗುವೆನು, ಹೊರಗನೇ ಮರೆಯುವೆನು;
ಬಗೆಬಗೆಯ ನೋಟಗಳ ನನ್ನೆದುರು ನೋಡುವೆನು
ಹಾಗೆಯೇ ನಾನಿರಲು ‘ನನ್ನ ನರಸುತ ನನ್ನ
ಒಡನಾಡಿ ಯಾವನೋ ಬರಲಿರುವ’ ಎಂತೆಂಬ
ಬಗೆಯೊಂದು ಹೊಳೆಯುವುದು; ಎದೆಯು ಜುಮ್ಮೆನ್ನುವುದು,
ಮೈಯ ನವಿರೇಳುವುದು, ಹಾರಿ ಬಿದ್ದೇಳುವೆನು; ೪೦
ತೆರೆದ ಕಣ್ಣುಗಳಿಂದ ಸುತ್ತಲೂ ನೋಡುವೆನು;
ನೆರೆಯೊಳೇನೂ ಇರದು; ಬೀಡ ಬಿಟ್ಟೇಳುವೆನು,
ಹೊರಹೊರಟು ಹುಬ್ಬುಗೈಯಲಿ ದೂರ ನೋಡುವೆನು;
ಸುಳಿವಾರದೂ ಸಿಕ್ಕದಿರಲಾಸೆಗುಂದುವೆನು.
ಕಳವಳದಿ ನಿಡುಸುಯಿದು ಮರಳಿ ಬೀಡನು ಸೇರಿ
ತಿಳಿಯದೇನೊಂದನೂ ಬಿದ್ದುಕೊಳ್ಳುವೆ ನಾನು.
ಏಗಲೂ ನನಗೆ ಹೀಗಾಗುತ್ತಿರುವುದದೇಕೊ..!
ಹೀಗೆಯೇ ಎನಿತು ದಿನ ಬದುಕ ನೂಕಲು ಬೇಕೋ..!
ನನ್ನವರು ಇನ್ನಾರು ಇಲ್ಲ! ನಾನಿದ ಬಲ್ಲೆ:
ಇನ್ನೊಂದನೇನ ಬಯಸದೆ ನನ್ನ ಕಾಡಿನಾ ೫೦
ಒಡನಾಡಿಗಳ ಬೆರೆತು ನಲಿಯುತಿರಬೇಕೆನುವೆ;
ಹಿಗ್ಗಿನಲ್ಲಿಯೆ ಬದುಕ ಹಾರಿಬಿಡಬೇಕೆನುವೆ;
ಆದರೇನಿದು ಆಶೆ! ಮಿಂಚಿನಂದದಿ ಮೂಡಿ
ಆಗಾಗ ಕೆಟ್ಟ ಕನಸುಗಳನ್ನು ಕಾಣಿಸುತೆ
ಇಲ್ಲದುದನಾವುದನೊ ಇದ್ದಂತೆ ತೋರಿಸುತೆ
ಬೆಲ್ಲದಂತಹ ಬಾಳ ಬೇವಾಗಿ ಮಾಡುತಿದೆ.
ಇರಬಹುದೆ ಯಾವನಾದರು ನನ್ನ ಒಡನಾಡಿ..!
ಅರಸುತಲಿ ಬರಬಹುದೆ ಆತ ನನ್ನೆಡೆಗೆ..!”
೨ ದಾರಿಯನು ನಡೆಯುತಿರೆ:
“ಎನಿತು ಸೊಗಸಿನದು ಇಂದಿನ ದಿನವು! ಹಗಲು ಬರೆ
ಬಿರುಮುಗುಳು ಅರಳುವೊಲು ಎಡೆಬಿಡದೆ ನನ್ನೆದೆಯು ೬೦
ಅರಳುತಿದೆ; ಅಡಿಯಿಂದ ಮುಡಿವರೆಗು ಮೈಯ ನರ-
ವುಬ್ಬುತಿವೆ; ತುಂಬುದಿಂಗಳು ಮಿರುಗುವಿರುಳಲ್ಲಿ
ತೊರೆಯ ಸಿರಿಯನು ನೋಡೆ-ಸಂಜೆಯಾಗಸನೋಡೆ-
ತಳಿತ ಬನವನು ನೋಡೆ-ಅಲರ ಕಾವಣ ನೋಡೆ-
ಎನಿಸುತಿಹ ಬಗೆಯನೆಲ್ಲವ ಬೆರಸಿದರು ಇದಕೆ
ಹೊಂದಿಕೆಯೆನಿಸದಹಹ! ಇಂದಿನಂತಹ ದಿನವೆ
ಎಂದೆಂದು ಇಬ್ಬರದು ಅಂದವೆನಿತಾಗುವುದು..!”
“ನಡುವಗಲು,ಬೇಸಗೆಯ ಸುಡುವಿಸಿಲು, ನಾಬೀಡಿ-
ನೆಡೆಯಲಿಯೆ ಕುಳಿತಿದ್ದೆನಿಂದು, ಬಳಿಯನು ಸಾರಿ
ಬಂದರಿಬ್ಬರದಾರೊ ದಾರಿಗರು; ಕೇಳಿದರು: ೭೦
“ಒಂದಿನಿತು ನೆಳಲಿನಾಸರೆ ದೊರೆವುದೇನಿಲ್ಲಿ?”
ಬೆರಗುಗೊಂಡೆನು; ಆಗ ಮರುನುಡಿಯನಾಡಲಿಕೆ
ಬರಲೆ ಇಲ್ಲೆನಗೆ; ಅವರನ್ನು ನೋಡೆ ನನ್ನನೇ
ಮರೆತುಬಿಟ್ಟೆನು ನಾನು; ಎನಿತು ನಿಟ್ಟಿಸಿದರೂ
ಸಾಕೆನವು ಕಣ್ಣುಗಳು;-ಎನಿತೊ ವೇಳೆಯನಂತೆ
ನೂಕಿದೆನು-ಬಳಿಕ ನಾ ನುಡಿಯಲಿಕೆ ಹವಣಿಸಿದೆ;
ಹೊರಡಲೊಲ್ಲದು ಮಾತು ನನ್ನ ಬಾಯಿಂದೊಂದು.
ಗಕ್ಕನೇ ನಾನೆದ್ದೆ; ಅವರಲ್ಲಿ ನಸುಮುಂದೆ
ನಿಂದವನ ಕೈಹಿಡಿದೆ, ಬೀಡಿನೊಳು ಕರೆದೊಯ್ದೆ,
ಎಳದಳಿರ ಜಗುಲಿಯೊಳು ಕುಳ್ಳಿಸಿದೆ; ಹಿಂಬದಿಗ ೮೦
ನಿಂದವನು ಬೆಂಬಿಡಿದು ಬಂದ, ಬೀಡನು ಸೇರಿ
ತಳಿರ ಹಾಸಿಗೆಯ ಬಳಿ ನೆಲದಲಿಯೆ ತಾ ಕುಳಿತ;
“ಚೆನ್ನರವರಿಬ್ಬರೂ ಅಣ್ಣತಮ್ಮದಿರಂತೆ!
ಬೀಡ ಮುಂದಣ ಮರದಲಿರುವ ಮಂಗನಿಗೆ ಮರಿ
ಜೋಡಾಗಿ ಇರುವವಲೆ! ಮೊದಲು ಹುಟ್ಟಿದುದಣ್ಣ,
ಬಳಿಕಿನದದುವೆ ತಮ್ಮ; ಅದರಂತೆಯೇ ಇವರು.
ತಳಿರ ಜಗುಲಿಯಲಿ ಕುಳ್ಳಿರಿಸಿದಾತನೆ ಅಣ್ಣ,
ಕೆಳಗೆ ಕುಳಿತವ ತಮ್ಮ; ಚೆಲುವರವರಿಬ್ಬರೂ
ಅದರಲಿಯು ಅಣ್ಣನನು ನೋಡಿ ನನ್ನೆದೆಯಲ್ಲಿ
ಮಿಂಚು ಹೊಳೆದಂತಾಯ್ತು, ನನ್ನ ದಿಟ್ಟಿಗಳನ್ನು ೯೦
ಬೆಸೆದುಕೊಂಡನು ಆತನೇ ತನ್ನ ಮೈತುಂಬ;
ಇನ್ನಾವದನು ನೋಡಿಲ್ಲದಾದುವು ಕಣ್ಣು.”
“ಕೆರೆಯ ನೀರಲಿ ನನ್ನ ಮೈನೆಳಲು ಮೂಡಿದುದ
ನಿರುಕಿಸುತ ಬಂದಿರುವೆ; ಇನಿತು ದಿನ ಈ ಬನದಿ
ನನ್ನಂತೆ ಇರುವವರನಾರನೂ ನೋಡಿಲ್ಲ!
ಇಂದೆನ್ನ ಬೀಡಿಗೈತಂದ ಅಣ್ಣನ ಮೈಯ
ಅಂದವದು ನನಗೆ ಸರಿಯೊಂದಿ ತೋರುತಲಿಹುದು;
ಕಣ್ಣಿಮೆಯ ಕದಲಿಸದೆ ಅಣ್ಣನನು ನೋಡಿದೆನು;
ನನ್ನಂತೆ ಕೈಕಾಲು, ನನ್ನ ಹಾಗೆಯೆ ಒಡಲು;
ಆದರೆಯು ನಮ್ಮಿಬ್ಬರೊಳು ನಸುವೆ ಬಿಡುವಿಹುದು. ೧೦೦
ಅರಳಿರುವ ಕನ್ನೈದಿಲೆಯ ಕಳೆಯದವನ ಮೊಗ,
ನನ್ನ ಮೊಗವಂತಿಲ್ಲ; ತಾರೆಗಳ ತೋಳಗವನ
ಕಣ್ಣೊಳಗೆ ನೆಲಸಿಹುದು, ನನಗದೇನೂ ಇರದು;
ನಗೆಯ ಮನೆ-ಮಾವಿನೆಳ ಚಿಗುರಿನೊಲು ಚೆಂದುಟಿಯು-
ಹೊಗರೊಗೆವ ಹಲ್ಲ ಸಾಲುಗಳು-ಮೇಲ್‌ದುಟಿಯಲ್ಲಿ
ಮೊಗದೋರುತಿಹ ಕರಿಯ ನವಿರು-ಆತನಿಗಿಹವು.
ಇಲ್ಲವೆನಗಾವುದೂ: ಬೇಸಗೆಯ ಬೆಳಗಿನಾ
ಬಾನ ಬಣ್ಣದ ಬೆಡಗು ಆತನೊಡಲಿಗೆ ಇಹುದು;
ಹಾಗಿರುವುದೇನೆನಗೆ..! ಎನಿತವನ ಮೈನುಣ್ಪು !
ಎನಿತು ಕರುಳಿನ ಕರ್ಪ್ಪು ! ಎನಿತು ತೋಳಿನ ಬಿಣ್ಪು ! ೧೧೦
ಕೈವಿಡಿದು ಬೀಡಿನೊಳಗುಯ್ದಾಗಿನಾ ಸೋಂಕು
ಎನಿತು ಸೊಗಸಿದ್ದಿತಹ ! ಇನ್ನು ಬೇಕೆನ್ನಿಸಿತು.
ಸುಗ್ಗಿಯಲಿ ಹಾಡುತಿಹ ಹಕ್ಕಿಗಳ ಇಂಚರವ
ಕುಗ್ಗಿಸಿಯೆ ಬಿಡುವುದಾತನದೊಂದೆ ಮೆಲುನುಡಿಯು;
ಹಣ್ಣುಗಳ ಬಯಕೆಯಲಿ ಹೊಟ್ಟೆ ಹಸಿದಿರುವ ತೆರ
ಅಣ್ಣನಿನಿನುಡಿಗಾಗಿ ನನ್ನ ಕಿವಿ ಹಸಿದಿಹವು;
ಇನ್ನು ಇನ್ನೂ ಆತನನ್ನು ನೋಡುವೆವೆಂದು
ಕಣ್ಣುಗಳು ಇದ್ದಲಿಯೆ ಇರಲೊಲ್ಲದಾಗಿಹವು.
ಅವನಾರು..? ಎಲ್ಲಿಯವ..? ಇಲ್ಲಿ ಬಂದಿಹನೇಕೆ..?
“ಕಿರಿಯನವ ಹಿರಿಯನನು ಕರೆಯುವನದೇನೆಂದು..? ೧೨೦
‘ಸಿರಿರಾಮ ! ಸಿರಿರಾಮ !!’ ಮಾತೆನಿತು ಅಂದವಿದು!
ಮೇಯಲೆಂದೈದಿದಾ ತಾಯಿಗಳು ಬಳಿಗೆ ಬರೆ
ಮರಿಗಳವು ಹಿಗ್ಗಿ ನೆಗೆದಾಡುವುದ ನೋಡಿಹೆನು;
ಹಾಗೆಯೇ ನನ್ನ ಬಗೆಯಿಹುದಿಂದು; ಏತಕಿದು..?
ಸರಿ! ಅಹುದು! ಅವನೆನ್ನ ತಾಯಿಯೇ ಇರಬಹುದು !
ಅಲ್ಲದಿರೆ ಆಗಾಗ `ನನ್ನ ನರಸುತಲೊಬ್ಬ
ಒಡನಾಡಿ ಬರಲಿರುವ’ ಎಂದು ಹೊಳೆಯುವುದಲಾ !
ಅವನೆ ಇವನಿರಬಹುದೆ..? ಕನಸು ನನಸಾಗಿಹುದೆ..?
ಏನಾದರೂ ಇರಲಿ, ಇದುವರೆಗು ಕಾಣದುದ-
ನಿಂದು ನಾ ಕಂಡಿಹೆನು; ಕೈಗೆ ದೊರೆದೀಹಣ್ಣು ೧೩೦
ಎಂದೆಂದು ಅಗಲದೊಳು ಏನ ಮಾಡಲಿ ನಾನು..?
“ಬೀಡಿನಲ್ಲವರು ಒಳಲನು ಕಳೆದುಕೊಳುತಿಹರು;
ಅವರ ಹಸಿವನು ತಣಿಸೆ ಸವಿಸವಿಯ ಹಣ್ಣ್‌ಗಳನು
ತರಲಿಕೆಂದೀಗಿಲ್ಲಿ ಹೊರಟು ಬಂದಿಹೆ ನಾನು;
ಬಳಿಯೊಳೆಲ್ಲಿಯು ಇಲ್ಲಿ ಚೆಲುವ ಹಣ್ಣುಗಳಿಲ್ಲ,
ಹೊಳೆಯಾಚೆ ಹೆಬ್ಬೆಟ್ಟವಿರುವುದಲೆ! ಮೇಲೇರೆ
ನಡುಬೆಟ್ಟದಲ್ಲಿ ಹಣ್ಣ ಗಿಡಗಳೇ ತುಂಬಿಹವು;
ಕಡಿದು ಬಲು ಬೆಟ್ಟವದು ! ಏರಿ ಹೋಗುವುದಕ್ಕೆ
ದಾರಿಯೇ ಸರಿಯಿಲ್ಲ ! ಮುಳ್ಳು-ಕಲ್ಲುಗಳೇನು,
ಹಳ್ಳ-ತೆವರುಗಳೇನು ! ಕೋತಿಗಳಿಗಾದೊಡೆಯು ೧೪೦
ಏರಲಿಕೆ ಬಾರದದು; ಏನಿದ್ದರೂ ಇರಲಿ !
ಹೊಳೆಯೀಸಿ ನಾನೀಗ ಹೋಗಿ ಬೆಟ್ಟವನೇರಿ
ಚೆಲುಚೆಲುವ ತನಿವಣ್ಣುಗಳ ತಂದೆ ತೀರುವೆನು.”
೩ ನಡುಬೆಟ್ಟವನ್ನೇರಿ:
“ಬೆಟ್ಟವನ್ನು ಹತ್ತಿಬರಲೆಷ್ಟು ತೊಂದರೆಯಾಯ್ತು..!
ಎಡವಿ ಮುಗ್ಗರಿಸಿ ನನ್ನಡಿಯ ಬೆರಳೊಡೆದಿಹವು;
ಕುತ್ತುರೊಳು ನುಸುಳಿ ಬರುತಿರಲು ಮೊನೆಮುಳ್ಳುಗಳು
ಕಿತ್ತುಬಿಟ್ಟಿವೆ ನನ್ನ ಮೈದೊವಲನಲ್ಲಲ್ಲಿ;
ಒಂದೆಡೆಗೊ..ದಾರಿ ಬಲು ಕಡಿದಿನದು, ಬಲಗಡೆಗೆ
ಬರಿಯ ಮುಳ್ಳಿನ ಮೆಳೆಯ ಕೊಂಪೆಗಳು; ಎಡಗಡೆಗೆ
ಆಳವಾಗಿಹ ಕೊಳ್ಳ, ಅರಿತರಿತು ಅಡಿಯಿಡುತ ೧೫೦
ಬರುತಿದ್ದೆ; ಒಂದು ಸಲ ಅಡಿಬುಡದ ಕಲ್ಲು ನಸು
ಅಲುಗೆ ತಪ್ಪಿತು ತೂಕ; ಉರುಳಿ ಬೀಳುತಲಿದ್ದೆ
ಕೊಳ್ಳದಲಿ; ಅನಿತರೊಳೆ ಕೈಗೊಂದು ಮುಳ್ಳಮೆಳೆ
ದೊರೆಯಲದನೇ ಗಟ್ಟಿ ಬಿಗಿದು ಕೈಯಲ್ಲಿ ಹಿಡಿದೆ;
ಕೊಳ್ಳದಲಿ ಬೀಳುವವಳುಳಿದೆನಾದರು ಕೈಗೆ
ಮುಳ್ಳುಗಳು ಮುರಿದು ನಸು ನೋವದೇನೋ ಆಯ್ತು;
ಏರಿಬಂದಾಯ್ತಲೇ ಬೆಟ್ಟವನು ! ಸರಿ ! ಈಗ-
ಆರಿಸುವೆ ಬಗೆಬಗೆಯ ತನಿವಣ್ಣುಗಳ ಬೇಗ.”
“ಇದೊ ಇದೋ! ಮಾಮರವು? ಕಿರುಬೆಟ್ಟದಂತಿಹುದು.
ಅಡಿಯ ನೆಲದಲಿಯೆ ಹಣ್ಣಿಡೆಬಿಡದೆ ಬಿದ್ದಿಹವು; ೧೬೦
ಹುಡಿಗೂಡಿಹವು ಕೆಲವು ! ಕೊಳೆಯಲಾಗಿವೆ ಕೆಲವು !
ಹಕ್ಕಿ ತಿಂದುವು ಕೆಲವು ! ಬಿದ್ದ ಹಣ್ಣಿವು ಬೇಡ !
ತಲೆಯ ಸೆಳೆಕೊಂಬಿನೊಳು ತನಿವಣ್ಣು ತೂಗುತಿವೆ;
ಎಳಬಿಸಿಲ ಬಣ್ಣವನು ತಳೆದಂತೆ ತೋರುತಿವೆ.
ತರುವೆನವುಗಳನೀಗ ಸರಸರನೆ ಮರವೇರಿ!”
* * *
“ಇಲ್ಲಿಹುದು ಬೋರೆಮರ ! ಹಣ್ಣ ಹೊಳಪದು ಹಬ್ಬಿ
ಬೆಳಗಿನಾ ಮೂಡುವೆಟ್ಟದ ಕೋಡೊ! ಎನಿಸುತಿದೆ;
ಕೊಯ್ವೆನಿವುಗಳನೀಗ; ಅಯ್ಯೋ ಏನಿದು ಮರವು !
ಒಳ್ಳೆ ಹಣ್ಗಳ ಜೊತೆಗೆ ಮುಳ್ಳನೂ ಪಡೆದಿಹುದು;
ಹಣ್ಣ ಹಿಡಿಯಲು ಹೋಗೆ ಮುಳ್ಳು ಕೈಕೊರೆಯುವುದು. ೧೭೦
ಇರಲಿ ! ಕೊರೆಯಲಿ! ಹಣ್ಣು ದೊರೆತುವೆನಗಿದೆ ಸಾಕು!”
* * *
“ಇದೋ! ಇಲ್ಲಿ ನೇರಿಳೆಯ! ಅದೊ ಅಲ್ಲಿ ಪೇರಿಳೆಯು
ಹಣ್ಣುಗಳ ಹೊರೆಯಿಂದ ಹೊಂದಿಹವು ನೆಲದೆಡೆಯ;
ಹೆಚ್ಚೇನು ಬೇಡವಿವು, ತೆಗೆದುಕೊಳ್ಳುವ ಕೆಲವ!”
* * *
“ಇನ್ನು ಸಾಕಲ್ಲವೇ! ಹಿರಿದು ಹೊರೆಯಾಗುವುದು;
ಕಡಿದಾದ ದಾರಿಯಲಿ ನಡೆಯೆ ಜಡವಾಗುವುದು;
ಸಾಕಿನಿತು ! ಎಲ್ಲವನ್ನು ಸಲ್ಲಿಸುವೆನಾತನಿಗೆ;
ಇನ್ನೊಂದು ಮಾತಿಹುದು; ಹಣ್‌ಗಳಿವನೆಲ್ಲವನು
ಹೀಗೆಯೇ ಒಪ್ಪಿಸಲು ಚೆನ್ನಹುದೆ..! ಇವುಗಳಲಿ
ಕೆಲವು ಹುಳಿಯಿರಬಹುದು, ಕೆಲವು ಹುಳುಕಿರಬಹುದು,೧೮೦
ಕೆಡುಕು ಕೆಲವಿರಬಹುದು, ಇದಕೇನ ಮಾಡುವುದು..!
ಬೇರೆ ಮತ್ತಿದೆಯೇನು ! ಎಲ್ಲ ಹಣ್ಣುಗಳನೂ
ಹಲ್ಲಿಂದ ನಸುನಸುವೆ ಕಚ್ಚಿ ಸವಿನೋಡುವೆನು !
ಒಳಿತಾದುವಿರಲವಗೆ, ಹುಳಿಕೆಡುಕು ಇರಲೆನಗೆ.”
* * *
“ಅಹಹ ! ಮಾವುಗಳೆಲ್ಲ ಜೇನ ಸೊನೆಯಂತಿಹವು,
ಬೋರೆಹಣ್ಣಿನ ಸವಿಯು ಬಾಯ ತಣಿಸದೆ ಬಿಡದು,
ಎಲ್ಲವೂ ಒಳ್ಳೆಯವೆ, ಜೊಳ್ಳು ಒಂದೂ ಇಲ್ಲ!
ಸಲ್ಲಿಸುವೆನೆಲ್ಲವನ್ನವಗೆ; ಉಳಿಯವು ನನಗೆ..!
ಉಳಿಯದಿರಲದಕೇನು ! ಇಂದಿನೊಂದೇ ದಿನವು
ಒಡಲ ಹಸಿವಿನ ನೋವ ತಡೆದುಕೊಳ್ಳಲಾರೆನೇ ? ೧೯೦
ಹೊರಡುವೆನು ನಾನಿನ್ನು, ಹಗಲು ಮುಗಿಯಲಿಕಾಯ್ತು.”
೪ ಹೊಳೆಯಂಚಿನೊಳು ಕುಳಿತು:
“ಹೊರಟೆ ಹೋದನು ಆತ; ಇರು ಇಲ್ಲಿಯೇ ಎನುತ
ಎನಿತೊ ಹಂಬಲಿಸಿದೆನು ಎಣಿಕೆಗೇ ತರಲಿಲ್ಲ
ನನ್ನ ಹಂಬಲಿಕೆಯನು; ಹೊರಡಲಿಕೆ ಅನುಗೊಂಡ;
`ಇಂದೊಂದೆ ದಿನವಾದೊಡೆಯು ಇರಲು ಬಾರದೇ?’
ಎಂದು ನಾ ನುಡಿದ ಮರುಕದ ಮಾತಿಗವನೆಂದ:
‘ಬಂದೆಬರುವೆನು ಮತ್ತೆ ನಿನ್ನೆಡೆಗೆ, ಸೊಗದಲಿರು!’
ಎಂದುದಕೆ ಮರುಮಾತ ನುಡಿಯಲಾರದೆ ನಿಂತೆ,
ಬಂದವರು ಬಂದವೊಲೆ ಹೊರಟು ನಡೆದರು ಹಾಗೆ.
“ಹೊರಟಿರಲು ಹಿರಿಯಣ್ಣ ನಿರುಕಿಸಿದನಲೆ ನನ್ನ! ೨೦೦
ಎನಿತಂದವದು ನೋ! ಎದೆಯನಲುಗಾಡಿಸಿತು;
ನಿನ್ನೆಯಾ ದಿನವೆನಗೆ ಮಿಂಚಿನಂದದಿ ಮೂಡಿ
ಮರೆಯಾದ ತೆರದಿ ತೋರುತಿದೆ; ಆತನ ಬರುವು
ಕನಸಿನಲಿ ಕಂಡಿರುವ ಕಣಸೇನೊ! ಎನಿಸುತಿದೆ;
ಅನಿತು ಬೇಗನೆ ಮುಗಿಯಿತೇಕೆ ನಿನ್ನೆಯ ಹಗಲು..!”
“ಮರಳಿ ಬರುವೆನು ಎಂದು ಅರುಹಿ ಹೋಗಿರುವನವ,
ಬರುವನೋ ಬರದಿರುವನೋ ! ಅರಿವುದೆಂತೀಗ..!
ಇದ್ದುಬಿಟ್ಟಿದ್ದರೊಳ್ಳೆಯದಿದ್ದಿತವನಿಲ್ಲಿ..!
ದಿನದಿನವು ಹೋಗಿ ನಾ ತನಿವಣ್ಣ ತರುತಿದ್ದೆ;
ತಾಯಿ ತನ್ನಯ ಮರಿಗೆ ತಿನಿಸಿ ತಣಿಯುವ ತೆರದಿ ೨೧೦
ನಾನೆಯವನಿಗೆ ಹಣ್ಣತಿನಿಸಿ ಹಿಗ್ಗುತಲಿದ್ದೆ;
ಇಬ್ಬರೂ ಜೊತೆಗೂಡಿ ಹೊಳೆಯ ತಡಿಯೊಳಗಾಡಿ,
ತಿಳಿನೀರೊಳೀಸಾಡಿ, ತಳಿರ ನೆಳಲಲಿ ಕುಳಿತು,
ಬೆಳುದಿಂಗಳೊಳು ಕುಣಿದು, ತಳೆಯುತಿದ್ದೆವು ಸೊಗವ;
ಉಳಿದಿದೆಲ್ಲವನು ತೆರಳಿದನದೇತಕೊ! ತಿಳಿಯೆ.”
“ಈ ಬನವು ಈ ಬೆಟ್ಟ- ಈ ಹೊಳೆಯ ತಿಳಿವೊನಲು-
ಎಂದಿನವೆ ಇರುವುವಲೆ! ಅಂದು ನೋಡಿದ ಚೆಲುವು
ಇಂದಿಲ್ಲ, ಏತಕಿದು..! ಬಂದಿದ್ದ ಚೆಲುವನವ
ಅಂದಿನಾ ಅಂದಚೆಂದವನೆಲ್ಲ ತನ್ನೊಡನೆ
ಎತ್ತಿಕೊಂಡೊಯ್ದಿಹನೊ..! ತಿಳಿಯೆನೀ ಹೊಲಬನ್ನು; ೨೨೦
ಬೇಸರೊದವಿರಲು ನಾನೀಯೆಡೆಯೊಳೈತಂದು,
ಹೊಳೆಯ ತಿಳಿನೀರಿನಲ್ಲಿ ಕಾಲಿಟ್ಟು ಕುಳಿತಿದ್ದು,
ಬಳಿಯ ನೀರ್ವಕ್ಕಿಗಳ ಬೆಡಗಿನಲಿ ಕಣ್ಣಿಟ್ಟು,
ತಡಿಯ ತೋಪಿನ ಹಕ್ಕಿ ಕಲಕಲಿಸೆ ಕಿವಿಗೊಟ್ಟು,
ಹೊಡೆದು ಹಾಕುತಲಿದ್ದೆ ಬಲುಬೇಸರೆಲ್ಲವನು;
ಇಲ್ಲಿಯೂ ಸೊಗಸನಿಸದಿಹುದಿಂದು..! ಏನು ಇದು!”
“ಹಸಿವು ಬಾಯಾರಿಕೆಯ ಹೆಸರನೇ ಮರೆತಿರುವೆ;
ದಿನದಿನವು ತಿನುವ ಇನಿವಣ್ಣ ಬಯಸದು ಬಗೆಯು;
ಹಸಿವಿನಾ ನೋವಿನಿಂದೆನಿತೊ ಹಿರಿದಾಗಿರುವ
ನೋವದಾವುದೊ ಕರುಳ ತುಳಿತುಳಿದು ಮೆಟ್ಟುತಿದೆ; ೨೩೦
ಬಿಸಿಲ ಬೇಗೆಯೊಲೇನೊ ಬಸಿರಿನಲಿ ಬೇಯುತಿದೆ;
ಆತನಲ್ಲದಲೆ ಇನ್ನೇತರದು ನೆನಹಿರದು;
ಬರುವುದೆಂದೋ ಮುರಳಿಯವನು..! ಮಾಡುವುದೇನು..!
ಸರಿ! ಅರಿತೆ! ಅಹುದಹುದು! ಇನಿತು ಮಾಡುವೆನಿನ್ನು;
ಕಣ್ಣೆದುರು ಕಟ್ಟಿಹುದು ಅವನ ಚೆಲುವಿನ ರೂಪು;
ಅದು ಕದಲಿ ಅಳಿಸಲು ಕಣ್ಣೆರಡನೂ ಮುಗಿದು
ನಿಲಿಸಿಕೊಳುವೆನು ಹಾಗೆ! ಅವನ ಸವಿನುಡಿಯಿಂಪು
ಕಿವಿಗಳಲಿ ತುಂಬಿಹುದು; ಹೊರಗೆಯದು ಹೋಗದೊಲು
ಕಿವಿಗಳನ್ನು ಮುಚ್ಚಿ ಎಡೆಬಿಡದೆ ಕೇಳುವೆನಿನ್ನ!
ಕಿರಿಯನವ ಹಿರಿಯನನು ಕರೆಯುತಿಹ ತೆರದಿಂದೆ ೨೪೦
`ಸಿರಿರಾಮ ! ಸಿರಿರಾಮ !’ ಎಂದು ಕರೆಯುತಲಿರುವೆ!
ನಿನ್ನೆ ಕಂಡುಂಡ ಹಿಗ್ಗಿನ ಬಗೆಯನೇಗಲೂ
ತಂದುಕೊಳಲೆಂದು ಹವಣಿಸುತ ಬದುಕನು ಕಳೆವೆ.
ಬಂದೆ ಬಹೆನೆಂದಿಹನು, ಎಂದು ಬರುವನೊ ಬರಲಿ!”
*****