ಆ ಅಸೀಮದಾ ಸಂಚುಹೊಂಚಿನಲಿ ಒಂದು ಕುದ್ರ ಘಟಕ
ವೈಶ್ವಾನರನ ಆವರ್ತನೃತ್ಯರಂಗದಲಿ ಸಣ್ಣ ಚುಟುಕ.
ಬಟಾಬಯಲು ಇದು, ಹೋ ಅಭಂಡ ತಾನರ್ಥಹೀನ ಹಳವು
ಅಕಸ್ಮಾತ್ತೊ ಎನುವಂತೆ ಬಂತು ಭೂಮಿಯಲಿ ನರನ ಫಲವು.
ತನ್ನ ನರೆತ ಅಜ್ಞಾನದಲ್ಲಿ ತಾನೆರೆತ ಒಂದು ಪ್ರಾಣಿ
ನೆರಳು ಬೆಳಕು ಅರ್ಧಾರ್ಧವಿರುವ ಮನ; ಬದುಕಿನೊಂದು ಕಾಣಿ
ಮರ್ತ್ಯಲೋಕದೀ ಬಂದಿ, ತಿಳಿವ ಶ್ವಾಸೋಚ್ಛ್ವಾಸ ಹರುಷ.
ಹೇಗೊ ಬಾಳುವನು ಕುಂಟುಕೂರಿಗೆಯ ಕ್ಷಣಿಕ ನೂರು ವರುಷ
ಆದರೇನು ಆಂತರ್ಯ ಪ್ರಗತಿ ದೈವಿಕರ ಅಚ್ಚಛಲವು
ಚಿನ್ಮಯದ ಅಜ್ಞಾನ ನಿಶೆಯ ಚೇತನದ ಚೊಕ್ಕ ಬಲವು
ಬರುವೆ ಎನ್ನುತಿದೆ ಪರಂಜ್ಯೋತಿ ಸಾಕ್ಷಾತ್ಕರಿಸಿಕೊಂಡು
ಆ ಅದೃಷ್ಟ ನಿಷ್ಕರುಣ ಶಕ್ತಿಗಳನಿದಿರು ಎದುರುಗೊಂಡು
ಅಚಿತ್ತಾದ ಈ ಮಣ್ಣಿನಲ್ಲಿ ದಿವ್ಯತ್ವದೂರ್ಧ್ವಭಾವ
ಕಾಂಬೆನೆನ್ನುವದು ಮಂದಗತಿಯೊಳೇ ಚಿರಂತನದ ಜಾವ.
*****