ಕಾಲ ಚಕ್ರದಲಿ
ಎಲ್ಲವೂ ಕಾಲಾತೀತ|
ಕಾಯಕ, ಕಾರಣ
ಕರ್ಮ ಫಲಗಳೆಲ್ಲವೂ ಕ್ಷಣಿಕ|
ಕಾಲ ಚರಣದಲಿ
ನಾನು ನೀನೆಂಬ ಅಹಂ
ಅಹಂಕಾರಗಳೆಲ್ಲವೂ ಅಣಕ||
ನಿನ್ನೆಯಂತೆ ಈಗಿರುವುದಿಲ್ಲ
ಈಗಿನಂತೆ ನಾಳೆ ಸಿಗುವುದಿಲ್ಲ|
ಇಂದಿನದು ಇಂದಿಗೆ, ನಾಳೆಯದು
ಆ ವಿಧಿಯ ಲೀಲೆ ಕೈಯೊಳಗೆ |
ಏನ ಪಡೆದೆಯೋ ಇಂದು
ಅದು ಮಾತ್ರವೇ ನಿನಗೆ ||
ಬಯಸಿದ ಭಾಗ್ಯಗಳೆಲ್ಲವೂ
ಕೈಗೂಡುವುದಿಲ್ಲ
ಈಗಿರುವ ಸೌಭಾಗ್ಯಗಳೆಲ್ಲವೂ
ಸದಾ ಹೀಗೆಯೆ ಇರಲೂ ಸಾಧ್ಯವಿಲ್ಲ|
ಎಲ್ಲವೂ ಎಲ್ಲರಿಗೂ ಬೇಕು
ಈಗಿರುವ ಹೊಸದು
ಹಳೆಯದಾಗಲೇ ಬೇಕು,
ಇನ್ನಾವುದೋ ಹೊಸದೆನಿಸುತ್ತಿರಬೇಕು|
ಕಾಲ ಕಾಲಗರ್ಭದಲಿ ಎಲ್ಲವೂ ಸೇರಿ
ಗತವೆನಿಸುವ ಸತ್ಯ ತಿಳಿಯಲುಬೇಕು||
*****