ಹುಡುಗನಾಗಿದ್ದ ದಿನಗಳ ನೆನಪು : ಆಗ
ನಮ್ಮೂರ ಹೊಳೆ ತುಂಗೆ ಶಾಂತನಿರ್ಮಲ ಅಂತರಂಗೆ;
ಹೊರಗಿನ ಬಿಸಿಲು
ಒಳಗೆ ಬಿಂಬಿಸಿ ತಳದ ತನಕ ನದಿಯ ಮನಸ್ಸು
ಸ್ವಚ್ಛ ಪ್ರತ್ಯಕ್ಷ ಸಂಪದ್ಯುಕ್ತ
ಜಲದ ರೇಸಿಮೆಹಾಳೆ ಸೀಳಿ ಹಾಯುವ, ಹಾಗೆ
ಹೀಗೆ ಹೇಗೋ ಹೊರಳಿ ಉರಿಯ ಚಿಮ್ಮುವ ಮೀನು,
ಕೆಳಗೆ ಥಳ ಥಳ ಮರಳು
ಬಾದಾಮಿ ದ್ರಾಕ್ಷಿ ಗೋಡಂಬಿ ಬಿಕ್ಕಿದ ಹಾಗೆ
ಹೊಳೆಯ ಮೂಕ ಸುಖಕ್ಕೆ ಮಾತು ದಕ್ಕಿದ ಹಾಗೆ
ಥರಾಥರಾವರಿ ಹರಳು.
ಇದೆಲ್ಲ ತಡಿಯಲ್ಲಿ.
ಆರಂಭದಿಂದ ಹತ್ತಾರು ಅಡಿಯಲ್ಲಿ
ಯಾರಿಗು ನಿರಾಳ, ಹೊಳೆ ಇಳಿದು ಹೋದಂತೆಲ್ಲ
ಒಳಒಳಗೆ ಕೆಳಕೆಳಗೆ
ಈಜುಗಲಿ ಸೀನ ಆಚಾರಿ ದತ್ತಣ್ಣನಿಗು
ತಳಸಿಗದ ಕಾಳಹಸುರಿನ ಆಳ ಆಭೀಳ,
ಯಾವ ಕಾಲದ್ದೊ
ಯಾರ್‍ಯಾರೆಲ್ಲ ಎಸೆದದ್ದೊ
ಗಂಗೆಯ ಹೆಸರು ಹೇಳಿ ಯಾರೆಲ್ಲ ಮುಡಿಸಿದ್ದೊ
ನೆರೆಮೊರೆದು ಕರೆಯೊಡೆದು ಜಾರಿ ಒಳಸೇರಿದ್ದೊ
‘ಮುಳುಗಿ ತರಬಲ್ಲೆಯೋ ಎಲ್ಲಿ ತಾ?’ ಎನ್ನುವ
ಸವಾಲಿನಲ್ಲಿ ಎಸೆದದ್ದೊ
ಆಣೆ ಪಾವಾಣೆ ರೂಪಾಯಿ ಚಿಲ್ಲರೆಯಿರಲಿ
ಪಾತ್ರೆ ಪಡಿ ಬೆಳ್ಳಿ ಬಂಗಾರ ನಡುಸಿಂಗಾರ ಕೂಡ ಇರುವ ವದಂತಿ
ಅರೆಕಂತಿ ನದಿ ನಡುವೆ ಕರೆಯುತ್ತ ನಿಂತಿರುವ
ಆನೆ ಬಂಡೆಯ ಬದಿಗೆ
* * *
ಕಲಿಯುಕ್ಕಿ ಆನೆಬಂಡೆಯ ಕಡೆಗೆ ಈಜಿರುವ
ಪಡ್ಡೆಹುಡುಗರ ದಂಡು.
ಹತ್ತಿ, ಬಂಡೆಯ ನೆತ್ತಿ ಕೂಗಿ ಹಾರುವ ದಿಟ್ಟ ಕಿಟ್ಟಡಿಗ.
ಹುಚ್ಚುಕೆಚ್ಚಿಗೆ ಕಟ್ಟುಬೆರಗಾಗಿ ನಿಂತ ಕಟ್ಟಾಳುಗಳ ಎದುರಲ್ಲಿ
ಹೊಸ ಹೊಸಾ ಕಸರತ್ತು.
ಐದಾರು ಆಳು ಆಳದ ಮರಳ ಮೈತಬ್ಬಿ ಬರುವ
ಬಿಟ್ಟಿ ಷರತ್ತು,
ಮುಳುಗಿದನೊ, ಉಸಿರು ಬಿಗಿಹಿಡಿದು, ದಿಟ್ಟಿಯ ನೆಟ್ಟು
ರಕ್ಷೆಕಾಯುವ ಗುಂಪು.
ಬರಲಿಲ್ಲ ಒಂದು ಕ್ಷಣ
ಎಲ್ಲ ಕಣ್ಣುಗಳಲ್ಲಿ ತವಕ ಅಶಂಕೆ ಕಳವಳ ಏನೊ ತಳಮಳ.
ಮರುಚಣ
ಬಂದ ಹೋ ಹೋ ಬಂದ ಎಂಬ ಕೇಕೆಯ ನಡುವೆ
ಛಂಗನೇ ಮೇಲೆದ್ದು ಮರಳ ಸಾಕ್ಷಿಯ ತೂರಿ
ಈಜಿ ಸಾಗುವ ಛಂದ,
ಈ ಸಾಹಸಕ್ಕೆಲ್ಲ ಬೆಲೆಯಿತ್ತು, ಮೆಚ್ಚಿಗೆ ಇತ್ತು, ಮೇಲು ನೆಲೆಯಿತ್ತು.
ಮೇಲಾಟ ಹೂಡಿ ಸೆಣಸುವ ಸರಿಸವಾಲುಗಳ
ರಣಧೀರ ಪಡೆಯಿತ್ತು.
* * *
ಈಗ
ನದಿಯಲ್ಲಿ ನೀರಿಲ್ಲ,
ಏಕೊ ಕಾಲನೆ ಬಲ್ಲ,
ಕಾಸಿ ಬರೆ ಎಳೆದಂತೆ ತಳದ ಮೈಯಲ್ಲೆಲ್ಲ
ಕಪ್ಪು ಹಸಿರಿನ ನೀಳ ಪಟ್ಟೆ
ಕೊಳೆಯುವ ಬಟ್ಟೆ :
ನಡುನಡುವೆ ನಡೆಗೊಂದು ನಾಯಿಕೊಡೆ ಪಾಚಿತೊಡೆ,
ಹೆಸರಿರದ ದೆಸೆಯಿರದ ಸಸ್ಯ
ಕುರುಚಲು ಜೊಂಡು;
ರಕ್ತಮಾಂಸವೆ ಇರದ ಅಸ್ಥಿಪಂಜರ ತೆರೆದ
ಒಡಲ ಭೀತಿ
ನದಿಯ ರೀತಿ.
ಹರಿಗೋಲು ದೋಣಿ ತಪ್ಪೋತ್ಸವಗಳಿರಲಿ
ಹೆಜ್ಜೆ ಮುಳುಗದ ಲಜ್ಜೆನಡಿಗೆ ನದಿಗೆ.
ಬಣ್ಣ ಬಾವುಟವಿರದ
ಬಿದಿರ ಗುಮ್ಮಟ ಮುರಿದ
ಪಾಳುಗುಡಿ ತೇರಿನ ಬೋಳುಮಂಡೆ
ಅಸಿಧಾರೆ ಬಿಸಿಲಲ್ಲಿ ಆನೆಬಂಡೆ.
ಬಟ್ಟೆ ಒಗೆಯುವ ಕಲ್ಲು
ಊರೊಳಗೆ ಬಂದು
ಮನೆ ಮೆಟ್ಟಿಲು,
ಲಾರಿಗಟ್ಟಲೆ ಮರಳು ತೋಡಿ ಮಾಡಿದ ಹೊಂಡ
ವಟರುಗಪ್ಪೆ ಕುಲಕ್ಕೆ
ತೊಟ್ಟಿಲು.
* * *
ಬೆತ್ತಲಾಗಸದಲ್ಲಿ ಮುಂದೆಂದೊ ಮತ್ತೆ
ಕರಿಮುಗಿಲ ಜಹಜುಗಳ ಸಾಲು;
ಸಾಗಿ ಬರಲಿವೆ ದಿಕ್ಕುದಿಕ್ಕಿಂದ, ಸುಳಿವಂತೆ
ಭಾಗೀರಥಿಯ ಹೆಜ್ಜೆಗಾಲು.
ಪುಟ್ಟ ಮಸಿಗುಡ್ಡೆಗಳು ಮೈಗೆ ಮೈ ತಾಗಿ
ಬೆಳೆದೀತು ಕಾರ್ಮುಗಿಲ ಬೆಟ್ಟ;
ಇಷ್ಟು ದಿನಗಳ ಹೊಟ್ಟೆಯುರಿಯೆ ನಡಿಗೆಗೆ ನುಗ್ಗಿ
ನಡುಗದೇ ಕುಣಿತಕ್ಕೆ ಅಟ್ಟ?
ಬತ್ತಿ ಕೊಳೆಯುವ ಹೊಳೆಯ ಬಸಿರಿಗನಸು
ಕೆತ್ತಿರುವ ನೆಲದೆದೆಗೆ ಹಸಿರಿನುಣಿಸು
ಸಂದಾಯವಾದೀತು ಎಂದಾದರೊಂದು ದಿನ
ಸಪ್ಪೆ ಬಾಳಿಗೆ ಉಪ್ಪು ನಿಂಬೆ ಮೆಣಸು.
*****