ಬಸವನೆಂದರೆ ಒಂದು ವ್ಯಕ್ತಿಯಲ್ಲ
ಯಾವುದಕು ಹೋಲಿಸಲು ಸಾಟಿಯಲ್ಲ || ಪ ||
ಯುಗಯುಗದ ತಪವೆಲ್ಲ ಸಿದ್ದಿಯಾಕೃತಿಯಾಗಿ
ಬಸವಣ್ಣನೆಂಬ ರೂಪವ ತಳೆಯಿತು
ಯುಗಯುಗಗಳನು ಮೀರಿ ನಿಂತಿರುವ ದರ್ಶನಕೆ
ಬಸವ ನಿನ್ನಯ ದ್ವನಿಯು ತಾ ಮೊಳಗಿತು ||ಅ.ಪ.||
ಬಸವನೆಂದರೆ ಬೆಳಕು ಬರಿಯ ಮಿಣುಬೆಳಕಲ್ಲ
ಕಣ್ಣು ಕೋರೈಸುವ ಮಿಂಚು ವಿದ್ಯುತ್ತು
ಹಿಂದೆ ಶತಮಾನಗಳ ಕತ್ತಲೆಯು ಕಳೆದಿತ್ತು
ಮುಂದೆ ಶತಮಾನಗಳ ತೊಳಗಿ ಬೆಳಗಿತ್ತು || ೧ ||
ಆ ಬೆಳಕಿನಲ್ಲಿ ಹೊಸ ಧರ್ಮವೆ ಉದಿಸಿತ್ತು
ಕಿರಿಯ ಮತ ಧರ್ಮಗಳು ಮರೆಯಾದವು
ಆ ಬೆಳಕಿನಲ್ಲಿಯೇ ಕವಿಯಾಗಿ ಶರಣ ಗಣ
ಹೊಸದು ಮನ್ವಂತರದ ಸಿರಿಯಾದವು || ೨ ||
ಬಸವನೆಂದರೆ ಬಳ್ಳಿ ಹಬ್ಬಿತ್ತು ನಾಡೆಲ್ಲ
ಕರುನಾಡ ತೋಟದಲಿ ತಾನೆ ತಾನು
ಕಳೆ ಕಸುವು ನಶಿಸಿದವು ಹೊಸ ಹೂವು ಅರಳಿದವು
ಸಿರಿಕಂಪು ಮಾಧುರ್ಯ ಎಂಥ ಜೇನು || ೩ ||
ಜಾನಪದ ಸೋಗಡನ್ನು ಮಣ್ಣಿನೊಳ ಕಸುವನ್ನು
ಹೀರಿ ಜನಮನವನದಿ ವ್ಯಾಪಿಸಿತ್ತು
ನಡೆನುಡಿಯ ಬಳಸಿತ್ತು ತಿದ್ದಿತ್ತು ಬೆಳೆಸಿತ್ತು
ತನಿಹಣ್ಣು ರಸವಾಗಿ ರೂಪಿಸಿತ್ತು || ೪ ||
ಬಸವನೆಂದರೆ ಹೊಳೆಯು ಬರಿಯ ಕಿರು ಹೊಳೆಯಲ್ಲ
ಭೋರ್ಗರೆವ ಮಹಾಲಿಂಗ ಭಾವಧಾರೆ
ಕೂಡಿದ್ದ ಗತಕಾಲ ಕಶ್ಮಲವ ಕೊಚ್ಚುತ್ತ
ತಿಳಿವು ತಿಳಿ ಹೊನಲಾಗಿ ಜೀವಧಾರೆ || ೫ ||
ಬರಡಾದ ಮಾನವತೆ ತಂಪು ಜಲವನು ಹೀರಿ
ಚಿಗುರೊಡೆದು ಆನಂದ ಪಲ್ಲವಿಸಿತು
ತಿಳಿಜಲದಿ ಮಿಂದು ಪರಿಶುದ್ಧ ಜೀವದ ರಾಶಿ
ಹಾಡು ಎದೆಯೊಳಗಿಂದ ಹೊಮ್ಮಿಸಿತು || ೬ ||
ಬಸವನೆಂದರೆ ಬೆಂಕಿ ಪಾಪಗಳನುರಿಸಿತ್ತು
ಜಾತಿ ಮತ ಭೇದಗಳ ಸುಟ್ಟು ಹಾಕಿ
ಮೌಢ್ಯ ಹುಸಿಗಳು ಬೂದಿ ಅಜ್ಞಾನ ನಶಿಸಿತ್ತು
ದುಷ್ಟ ದೌರ್ಜನ್ಯಗಳ ಮಟ್ಟ ಹಾಕಿ || ೭ ||
ವಿಷಮತೆಯ ಅವಲೋಹ ಸುಟ್ಟುರಿದು ಕರಕಾಗಿ
ಚೊಕ್ಕ ಚಿನ್ನದ ಸಮತೆ ನೆಲೆಗೊಂಡಿತು
ದೌರ್ಬಲ್ಯ ಹೇಡಿತನ ಆಲಸ್ಯ ಸಣ್ಣತನ
ಕೆಟ್ಟ ಹುಳುಗಳ ಬಳಗ ಕೆಟ್ಟೋಡಿತು || ೮ ||
ಬಸವನೆಂದರೆ ಬಯಲು ಕೊನೆಯಿಲ್ಲದಾಕಾಶ
ಮಾನವನ ಉತ್ತುಂಗ ಸಿದ್ದಿ ಕಳಶ |
ಭುವಿ ಬಾನುಗಳನೊಂದು ಮಾಡುತ್ತ ನಿಂತಂಥ
ಪಾರಮಾರ್ಥದ ಗುರಿಯು ತುರೀಯಾಶ || ೯ ||
ಕಾಯಕ್ಕೆ ಮಿತಿಯುಂಟು ಜೀವಕ್ಕೆ ಗತಿಯುಂಟು
ವಿಶ್ವವ್ಯಾಪೀ ಭಾವ ಬಯಲ ಬೆರಗು
ತಿಳಿದಂತೆ ಹೊಳೆ ಹೊಳೆದು ಅರಿವನ್ನು ಬೆಳೆಸುವುದು
ತಿಳಿಯುವುದು ಇನ್ನು ಇನ್ನೂ ಉಳಿವ ಕೊರಗು || ೧೦ ||
ಬಸವನೆಂದರೆ ಕಡಲು ಕರುಣೆ ಶಾಂತಿಯ ಒಡಲು
ಶರಣಗಣ ನದಿಗಳಿಗೆ ಗಮ್ಯ ತಾಣ
ಅಸಹಾಯ ನಿರ್ಗತಿಕ ನೊಂದ ಜೀವರಿಗೆಲ್ಲ
ಸಾಂತ್ವನದ ಅಭಿಮಾನ ಸೆಲೆ ಪೂರಣ || ೧೧ ||
ಬಸವನೆಂದರೆ ಪ್ರೀತಿ ಜಗದಗಲ ತಟ್ಟುವುದು
ಲೇಸು ದಾರಿಯು ಮಾತ್ರ ಅಚ್ಚುಮೆಚ್ಚು
ಬಸವನೆಂದರೆ ಕತ್ತಿ ಕೆಟ್ಟುದನು ಕೊಚ್ಚುವುದು
ವಜ್ರದಂತೆಯ ಕಠಿಣ ಅದರ ಕೆಚ್ಚು || ೧೨ ||
ಬಸವನೆಂದರೆ ಬೆಳಗು ಅರುಣೋದಯದ ಕಾಂತಿ
ನವ ಸಮಾಜವು ಕಣ್ಣು ತೆರೆಯಲಿಕ್ಕೆ
ಗಾಢ ನಿದ್ದಯನೊದ್ದು ಜನಮನವು ತಿಳಿದೇಳೆ
ಅಜ್ಞಾದಂಧತಮ ಹರಿಯಲಿಕ್ಕೆ || ೧೩ ||
ಬಸವನೆಂದರೆ ಚಂಡಮಾರುತವು ಕಸರಜಕೆ
ಜೊಳ್ಳನೆಲ್ಲವ ತೂರಿ ಶುಚಿ ಮಾಡಲು
ಬಸವನೆಂದರೆ ಮಂದ ಮಾರುತವು ದಣಿದವಗೆ
ನೊಂದ ಬೆಂದವರನ್ನು ಸಂತವಿಡಲು || ೧೪ ||
ಬಸವನೆಂದರೆ ಮಂತ್ರ ದಂಡವದು ಸಾಧನೆಗೆ
ಕಲ್ಪತರು ಅರ್ಥಿಯಿಂ ಬೇಡುವರಿಗೆ
ಬಸವ ನಂದಾದೀಪ ಎಂಥ ಬಿರುಗಾಳಿಯಲು
ನಸುನಗೆಯ ಹೊಂಬೆಳಕ ಕಾಂಬವರಿಗೆ || ೧೫ ||
*****