ಗಾಳಿಯೊಳಗೆ ಬೆಸೆದು
ರೆಂಬೆ ಕೊಂಬೆಗಳಲ್ಲಿ ಹರಿದಾಡಿ
ಹಕ್ಕಿ ಗೂಡೊಳಗೆ ನುಸುಳಿ
ರೆಕ್ಕೆ ಪುಕ್ಕ ಕಟ್ಟಿಕೊಂಡು
ಬಾನಿಗೇರಿ ಬಲಿತು
ಕಂಡಕಂಡವರ ಹೆಗಲೇರಿ
ಹದತಪ್ಪಿ ಹಾಲಾಹಲವಾಗಿ
ಕೊನೆಗೂ ಬಾಯಿ ತೀಟೆ ತೀರಿಸಿಕೊಳ್ಳುತ್ತದೆ.
ಮನಸ್ಸುಗಳು ಮುರಿದು
ಮನೆಗಳು ಮುಚ್ಚಿಕೊಂಡ
ಹಂಚು ಹೊದಿಕೆಗಳೆಲ್ಲ ಹರಾಜಾಗಿ
ಇನ್ನೆನೋ ಆಗಿ
ಬೂದಿಯೊಳಗಣ ಕೆಂಡ
ಕಂಕುಳಲ್ಲೆ ಕಟ್ಟಿಕೊಳ್ಳುತ್ತದೆ.
ಆಗಾಗ ಪತ್ರಿಕೆಯ ಮುಖಪುಟ
ರಾರಾಜಿಸುತ್ತದೆ
ರುಂಡ ಮುಂಡ ಬೇರ್ಪಟ್ಟ
ದೇಹಗಳು ಪತ್ತೆ.
ಬಂಧ ಅನುಬಂಧಗಳು ಕೆಟ್ಟು
ಜೀವ ಭಾವ
ಬತ್ತಿದ ಒಡಲುಗಳು ಕಣ್ಣೀರಿನ
ಅಗುಳುಂಡು.
ಹಾಲ್ಕುಡಿದ ತುಟಿಗಳು ಹಂಬಲಿಸಿ
ಅಳುವುಂಡು
ಬದುಕ ನರಕದ ಮಹಲು
ಮಾಡುವ ಗಾಳಿಮಾತು
*****