ಮುಸ್ಸಂಜೆಯ ಮಿಂಚು – ೧೭

ಮುಸ್ಸಂಜೆಯ ಮಿಂಚು – ೧೭

ಅಧ್ಯಾಯ ೧೭ ಮೊದಲ ಸಾವು ಕಂಡ ರಿತು

ಬೆಳಗ್ಗೆಯೇ ಫೋನ್ ಹೊಡೆದುಕೊಂಡಿತು. ಯಾರಪ್ಪ ಇಷ್ಟು ಬೇಗ ಎಂದುಕೊಂಡು ರಿತು ಫೋನೆತ್ತಿದ್ದಳು. ಅತ್ತಲಿಂದ ವಾಸು, “ಮೇಡಮ್, ತಕ್ಷಣ ಬನ್ನಿ, ಶಾರದಮ್ಮನಿಗೆ ತುಂಬಾ ಸೀರಿಯಸ್” ಎಂದವನೇ ಪೋನ್ ಇಟ್ಟುಬಿಟ್ಟಿದ್ದ.

ಏನಾಯ್ತು ಶಾರದಮ್ಮನಿಗೆ? ನಿನ್ನೆ ಇಡೀ ದಿನ ಅತ್ತೂ ಅತ್ತು ಆರೋಗ್ಯ ಕೆಡಿಸಿಕೊಂಡಿದ್ದಾರೆ. ಎಷ್ಟು ಹೇಳಿದ್ರೂ ಕೇಳಲ್ಲವಲ್ಲ. ಅತ್ತುಬಿಟ್ರೆ ಹೋದ ಗಂಡ, ಮಗಳು ವಾಪಸ್ಸಾಗುತ್ತಾರೆಯೇ? ಛೇ ಏನು ಜನವೋ ಎಂದುಕೊಳ್ಳುತ್ತ ಅವಸರವಾಗಿ ಸ್ನಾನ ಮುಗಿಸಿ ಹೊರಟು ನಿಂತಳು. ತನುಜಾ, ಮನು ಇನ್ನೂ ಮಲಗಿಯೇ ಇದ್ದರು. “ಅಮ್ಮಾ, ನಾನು ಬೇಗ ಹೋಗ್ತಾ ಇದ್ದೇನೆ. ಶಾರದಮ್ಮನಿಗೆ ತುಂಬಾ ಹುಷಾರಿಲ್ಲವಂತೆ. ಯಾವುದಕ್ಕೂ ಫೋನ್ ಮಾಡಿ ತಿಳಿಸುತ್ತೇನೆ” ಎಂದು ಹೇಳಿ ಗಾಡಿ ಹೊರಗಿಟ್ಟು ಮನೆಗೆ ಲಾಕ್ ಮಾಡಿ, ಕಿಟಕಿಯನ್ನು ತೆರೆದು, ಒಳಕ್ಕೆ ಕೀ ಎಸೆದು, “ಅಮ್ಮಾ ಕೀ ಸೋಫಾದ ಮೇಲೆ ಎಸೆದಿದ್ದೇನೆ. ಎದ್ದು ಹುಡುಕಬೇಡ” ಕೂಗಿ ಹೇಳಿ ಗಾಬರಿಯಿಂದ ಹೊರಟಳು.

ಆಶ್ರಮಕ್ಕೆ ಬರುವಷ್ಟರಲ್ಲಿ ಎಲ್ಲರೂ ಶಾರದಮ್ಮನ ಕೋಣೆಯಲ್ಲಿ ಸೇರಿದ್ದರು. ಡಾ. ರಾಮದಾಸರು ಆಗಲೇ ಬಂದಿದ್ದರು. ಹತ್ತಿರಕ್ಕೆ ಹೋಗಿ ನೋಡಿದರೆ, ಶಾರದಮ್ಮ ಪ್ರಶಾಂತವಾಗಿ ಮಲಗಿದ್ದಾರೆ. ತುಂಬಾ ಸೀರಿಯಸ್ ಅಂತ ಹೇಳಿದ್ನಲ್ಲ ಈ ವಾಸು. ಇಲ್ಲಿ ನೋಡಿದರೆ ಸುಮ್ನೆ ಮಲಗಿದ್ದಾರೆ ಅಂದುಕೊಳ್ಳುತ್ತಿರುವಾಗಲೇ,

ಡಾ. ರಾಮದಾಸರು, “ಶೀ ಈಸ್ ನೋ ಮೋರ್” ಎಂದರು ಮೆಲುವಾಗಿ.

ರಿತು ಶಾಕ್ ಹೊಡೆದಂತೆ ನಿಂತುಬಿಟ್ಟಳು. “ಬೆಳಗ್ಗೆಯೇ ಪ್ರಾಣ ಹೋಗಿದೆ. ಬಹುಶಃ ಹೃದಯಾಘಾತವಾಗಿದೆ. ನಿದ್ದೆಲೇ ಹೋಗಿಬಿಟ್ಟಿದ್ದಾರೆ. ಮುಂದಿನ ಏರ್ಪಾಡು ಮಾಡಿಕೊಳ್ಳಿ” ಎಂದರು.

ವೆಂಕಟೇಶ್, ಸೂರಜ್ ಎಲ್ಲರೂ ಅಲ್ಲಿಯೇ ಮೌನವಾಗಿ ನಿಂತಿದ್ದರು. ಎಲ್ಲರ ಕಣ್ಣಿನಲ್ಲೂ ನೀರಿನ ಸೆಲೆ. ಪಾಪ ನೊಂದು ನೊಂದು, ನೋಯುತ್ತಲೇ ಕಣ್ಣು ಮುಚ್ಚಿಕೊಂಡಿದೆ ಜೀವ.

ಶಾರದಮ್ಮನಿಗೆ ಇರುವವನೊಬ್ಬನೇ ಬಂಧು ಎಂದರೆ ಅಳಿಯ ಮಾತ್ರ. ಆ ಅಳಿಯ ಖಳನಾಯಕನಂತೆ ಇವರ ಬದುಕನ್ನು ಪ್ರವೇಶಿಸಿ, ಎಲ್ಲವನ್ನೂ ನಾಶಮಾಡಿದ ಕಟುಕ, ಈಗ ಈಕೆಯ ಅಂತ್ಯಸಂಸ್ಕಾರ ಅವನಿಂದ ನಡೆಸಿದರೆ, ಈ ಜೀವಕ್ಕೆ ಸದ್ಗತಿ ಸಿಗುವುದೇ? ಆ ಆತ್ಮಶಾಂತಿ ಪಡೆಯುವುದೇ? ಬದುಕಿರುವ ಕ್ಷಣದವರೆಗೂ ಆತನನ್ನು ದ್ವೇಷಿಸುತ್ತಿದ್ದ ಶಾರದಮ್ಮ, ಸತ್ತ ಮೇಲೆ ತನ್ನ ದೇಹಕ್ಕೆ ಆತನಿಂದಲೇ ಕೊಳ್ಳಿ ಇಡಿಸಿಕೊಳ್ಳುವುದನ್ನು ಊಹಿಸಿಕೊಂಡಿರಲು ಅಸಾಧ್ಯ. ಹಾಗಾಗಿ ಆತನಿಗೆ ತಿಳಿಸುವುದೇ ಬೇಡ ಎಂಬ ತೀರ್ಮಾನಕ್ಕೆ ಇಡೀ ಆಶ್ರಮವೇ ಬಂದಿತು.

ಎಲ್ಲರ ಅಭಿಪ್ರಾಯವೂ ಒಂದೇ ಆಗಿದ್ದರಿಂದ ವೆಂಕಟೇಶ್‌ರವರೂ ಮರು ಮಾತನಾಡದೆ ಮುಂದಿನ ಕಾರ್ಯಕ್ಕೆ ಅಪ್ಪಣೆ ನೀಡಿದರು. ಹಿಂದೂ ಪದ್ಧತಿಯಂತೆ ಸಾಂಗವಾಗಿ ಶಾರದಮ್ಮನ ದೇಹಕ್ಕೆ ಸಂಸ್ಕಾರ ನಡೆಸಿದರು. ಅಂತಿಮ ದರ್ಶನ ಮಾಡಿ, ಎಲ್ಲಾ ಒಳಬಂದ ಆಶ್ರಮವಾಸಿಗಳು ಅಲ್ಲಿನ ಪದ್ಧತಿಯಂತೆ ಭಜನೆ ಪ್ರಾರಂಭಿಸಿದರು. ಹೆಚ್ಚು-ಕಡಿಮೆ ಎಲ್ಲಾ ಇಳಿವಯಸ್ಸಿನವರೇ ಆದ ಎಲ್ಲರ ಮನಸೂ ಇಂಥ ಸಾವುಗಳಿಂದ ಧೃತಿಗೆಡುತ್ತಿದ್ದವು. ತಮ್ಮ ಸರದಿ ಯಾವಾಗ ಎಂದು ಭೀತಿಯಿಂದ ಇದಿರು ನೋಡುವಂತಾಗುತ್ತಿತ್ತು. ಸಾವಿಗಾಗಿ ಎಷ್ಟೇ ಹಂಬಲಿಸಿದರೂ ಜೀವನದ ಸೋಲು, ನೋವು, ನಿರಾಸೆಗಳಿಂದ ಕಂಗೆಟ್ಟ ಜೀವ ಸಾವಿಗಾಗಿ ಬಯಸಿದರೂ, ನೇರವಾಗಿ ಸಾವನ್ನು ಕಂಡಾಗ, ತಾನೇ ಅಲ್ಲಿ ಮಲಗಿದ್ದರೇ ಎಂಬ ಕಲ್ಪನೆಯಿಂದಲೇ ಚಿತೆಗೇರುವ ದೇಹವನ್ನು ಉರಿದು ಭಸ್ಮವಾಗುವ ರೀತಿಯನ್ನು ಕಂಡಾಗ ಎಂಥವರ ಹೃದಯವೂ ಕೊಂಚ ಕದಲುವುದಂತೂ ನಿಜ. ಕೆಲವು ದಿನ ವೈರಾಗ್ಯ ಕಾಡಿ ಯಾವುದೂ ಬೇಡವೆನಿಸಿ, ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುತ್ತಿದ್ದದ್ದು ಸಹಜವಾಗಿತ್ತು. ಅಂಥ ಭಾವ ತೀವ್ರವಾಗಿ ಕಾಡಬಾರದೆಂದೇ ಭಜನೆಯ ಏರ್ಪಾಡು ಮಾಡಿದ್ದರು. ಪ್ರತಿ ದಿನ ಬೆಳಗ್ಗೆ, ಸಂಜೆ ಎಲ್ಲರೂ ಕೂಡಿ ಭಗವಂತನನ್ನು ಪ್ರಾರ್ಥಿಸುತ್ತಾ ಭಜನೆ ಮಾಡಿ ಮನದಲ್ಲಿ ಮೂಡಿದ ದುಗುಡವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರು.

ರಿತು ಬಂದ ಮೇಲೆ ಈ ಆಶ್ರಮದಲ್ಲಿ ಅವಳು ಕಂಡ ಮೊದಲ ಸಾವು. ಕೊಂಚ ಹೆಚ್ಚಾಗಿಯೇ ಆಘಾತಗೊಂಡಿದ್ದಳು. ಹಿಂದಿನ ದಿನವಷ್ಟೇ ತನ್ನೊಂದಿಗೆ ಅಷ್ಟೆಲ್ಲ ಮಾತನಾಡಿ, ನೋವನ್ನೆಲ್ಲ ಕಾರಿಕೊಂಡು ಅತ್ತಿದ್ದ ಶಾರದಮ್ಮ, ಇಂದು ಇಲ್ಲವೆಂದರೆ. ನಂಬುವುದಾದರೂ ಹೇಗೆ? ಸಾವು ಬೇಕೆಂದು ಹಂಬಲಿಸಿ ಹಂಬಲಿಸಿ, ಸಾವನ್ನೇ ತಂದುಕೊಂಡು ಬಿಟ್ಟಳಲ್ಲ ಗಟ್ಟಿಗಿತ್ತಿ? ಸಾವೆಂದರೆ ಇಷ್ಟು ಸುಲಭವೇ? ಬೇಕು ಎಂದ ಕೂಡಲೇ ದಕ್ಕಿಬಿಡುವುದೇ? ಏನು ವಿಚಿತ್ರ? ನಿನ್ನೆ, ಈ ಬದುಕು ನನಗೆ ಸಾಕಾಗಿದೆ, ಆ ಸಾವು ನನಗೆ ಬರಬಾರದೇ ಎಂದು ಹಂಬಲಿಸಿದ್ದಳು. ಇಂದು, ಅದೇ ಸಾವು ಬಂದು ಶಾರದಮ್ಮನನ್ನು ಕರೆದೊಯ್ದೇ ಬಿಟ್ಟಿದೆ. ಬದುಕುವ ಆಸೆ ಇಲ್ಲದ ಶಾರದಮ್ಮ ತಾನಾಗಿಯೇ ಸಾವನ್ನು ಆಹ್ವಾನಿಸಿದ್ದಳೇ? ಅಥವಾ ನೋವನ್ನು ತಾಳಲಾರದ ಆ ಜೀವ ಮಗಳು ಸತ್ತ ದಿನದಂದೇ ಒಡೆದು ಹೋಯಿತೇ ? ಏನು ವಿಧಿಲೀಲೆಯೋ! ಅಂತೂ ಸತ್ತು ಬದುಕಿದಳು. ಶಾರದಮ್ಮ, ಸತ್ತು ಬದುಕಿದಳು ಅಂದಕೂಡಲೇ ರಿತುವಿಗೆ ನೆನಪಾದದ್ದು ಅವನ ಗೆಳತಿ ಮಾಲಿನಿಯ ಅತ್ತೆ ಸತ್ತದ್ದು.

ಅವತ್ತು ತನುಜಾ ಮಾಲಿನಿಯ ಮನೆಗೆ ಹೋಗಿ, ಆಕೆಯ ಅತ್ತೆಯನ್ನು ಕಂಡು ಮಾತನಾಡಿಸಿಕೊಂಡು ಬಂದು, ರಿತುವಿನ ಹತ್ತಿರ ಹೇಳಿಕೊಂಡು ಪೇಚಾಡಿಕೊಂಡಿದ್ದಳು.

“ಪಾಪ, ಇಬ್ಬರು ಗಂಡುಮಕ್ಕಳಿದ್ದೂ ಅಮ್ಮನನ್ನು ಸಾಕಲು ಪೈಪೋಟಿ ಮೇಲೆ ನಿರಾಕರಿಸುತ್ತಿದ್ದಾರೆ, ಒಬ್ಬರ ಮೇಲೆ ಒಬ್ಬರು ಹಾಕಿಕೊಳ್ಳುತ್ತ ಕೊನೆಗೆ ವೃದ್ದಾಶ್ರಮಕ್ಕೆ ಸೇರಿಸುವ ನಿರ್ಧಾರ ಮಾಡಿದ್ದಾರೆ” ಎಂದು ತನುಜಾ ಹೇಳಿದಾಗ ರಿತುವಿಗೂ ಬೇಸರವಾಗಿತ್ತು. ನಮ್ಮ ಆಶ್ರಮಕ್ಕೆ ಸೇರಿಸಲಿ ಬಿಡು, ನಾನು ಇರುತ್ತೇನೆ’ ಎಂದಿದ್ದಳು.

ಆದರೆ ಮಾಲಿನಿ ಇಲ್ಲಿನ ಆಶ್ರಮಕ್ಕೆ ಸೇರಿಸಿದರೆ ಬಂಧುಗಳಿಗೆಲ್ಲ ಗೊತ್ತಾಗಿಬಿಡುತ್ತದೆ. ಆಗಾಗ್ಗೆ ಎಲ್ಲರೂ ಆಕೆಯನ್ನು ನೋಡಲು ಆಶ್ರಮಕ್ಕೆ ಹೋಗುತ್ತಿದ್ದರೆ, ತಮ್ಮ ಮರ್ಯಾದೆಗೆ ಕುಂದು ಎಂದು ಭಾವಿಸಿಕೊಂಡು, ಎಲ್ಲೋ ದೂರದಲ್ಲಿರುವ ಆಶ್ರಮಕ್ಕೆ ಸೇರಿಸಲು ಯೋಜನೆ ಹಾಕಿಕೊಂಡಿದ್ದರು.

ತನುಜಾ ಎಷ್ಟೋ ಬುದ್ದಿ ಹೇಳಿದ್ದಳು. ಬೇರೆ ಬೇರೆ ಪರ್ಯಾಯ ದಾರಿಗಳನ್ನೆಲ್ಲ ಸೂಚಿಸಿದ್ದಳು. ಮಾಲಿನಿ ಅದು ಯಾವುದಕ್ಕೂ ಒಪ್ಪಿಕೊಂಡಿರಲಿಲ್ಲ. ತನ್ನ ಮುಂದೆಯೇ ಮಕ್ಕಳು ವೃದ್ದಾಶ್ರಮಕ್ಕೆ ಸೇರಿಸುವ ಮಾತುಕತೆಯಾಡುತ್ತಿದ್ದರೆ ಆ ಅಸಹಾಯಕ ಮುದುಕಿ ಮಾತನ್ನೇ ಬಿಟ್ಟುಬಿಟ್ಟಿತು. ಊಟ-ತಿಂಡಿಯನ್ನೂ ತಿರಸ್ಕರಿಸಿಬಿಟ್ಟಿತು.

ತನುಜಾ ಮತ್ತೊಮ್ಮೆ ಹೋಗಿ ಆ ಹಿರಿಜೀವವನ್ನು ಮಾತನಾಡಿಸಿ ಬಂದಿದ್ದಳು. ಜತೆಯಲ್ಲಿ ಅತ್ತೆಯನ್ನು ಕರೆದುಕೊಂಡು ಹೋಗಿದ್ದಳು. ಯಾರೊಂದಿಗೂ ಮಾತನಾಡದಿದ್ದ ಮಾಲಿನಿಯ ಅತ್ತೆ ತನುಜಾ ಹೋದೊಡನೆ ಕಣ್ಣರಳಿಸಿ, ಸುಕ್ಕು ಕಟ್ಟಿದ ಮೊಗದಲ್ಲಿ ನಗೆ ಅರಳಿಸಿತ್ತು.

ಹತ್ತಿರ ಬಂದು ಕುಳಿತುಕೊಂಡ ತನುಜಾಳೊಡನೆ, ‘ನೂರು ವರ್ಷ ಚೆನ್ನಾಗಿ ಬಾಳು ತನ್ನ ತಾಯಿ, ಅತ್ತೆನಾ ತಾಯಿ ಹಾಗೆ ನೋಡ್ಕೊತಿರೋ ಪುಣ್ಯವತಿ, ನಿನ್ನಂಥವರಿಗೆ ಆ ದೇವರು ಆಯಸ್ಸು ಕೊಡಲಿ. ನನ್ನೆಲ್ಲ ಆಯುಸ್ಸು ನಿಂಗೆ ಸೇರಲಿ” ಅಂತ ಬಾಯ್ತುಂಬ ಹಾರೈಸಿ, ತಿನ್ನುವುದನ್ನೇ ನಿಲ್ಲಿಸಿದ್ದ ಆಕೆ ತನುಜಾ ಸುಲಿದುಕೊಟ್ಟ ಮುಸಂಬಿ ಹಣ್ಣನ್ನೆಲ್ಲ ತಿಂದಿತ್ತು, ಸಂತೃಪ್ತಿಯಿಂದ ನಕ್ಕಿತ್ತು.

ಅಂದೇ ರಾತ್ರಿ ಆಕೆ ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ತನುಜಾ ಅತ್ತೇ ಬಿಟ್ಟಿದ್ದಳು. ಅಂತಿಮ ದರ್ಶನ ಮಾಡುವುದಕ್ಕೂ ಹೋಗದೆ ಅಂದೆಲ್ಲ ಮಂಕಾಗಿಯೇ ಇದ್ದಳು.

ಆ ಸಾವು ಕೂಡ ಬಯಸಿ ಕಳೆದುಕೊಂಡಿದ್ದ ಆ ಜೀವ ಸಾವಿಗೆ ಶರಣಾಗಿತ್ತು. ಸತ್ತು ಆ ಜೀವ ಬದುಕಿತ್ತು. ಇನ್ನೂ ಬದುಕಿದ್ದರೆ ಹೆತ್ತ ಮಕ್ಕಳಿದ್ದೂ ಕಂಡವರ ನೆರಳಲ್ಲಿ ಬದುಕುತ್ತ, ಅನಾಥವಾಗಿ ವೃದ್ಧಾಶ್ರಮದಲ್ಲಿ ಕೊಳೆಯಬೇಕಿತ್ತು. ಅಂಥ ಬಾಳಿಗಿಂತ ಸಾವೇ ಮೇಲು ಎಂದುಕೊಂಡಿತ್ತೇನೋ ಆ ಜೀವ. ಅಂತೂ ಸತ್ತು ಮಾಲಿನಿಗೆ ನೆಮ್ಮದಿಯನ್ನು ತಂದಿತ್ತು.

ಅತ್ತೆಯ ತಿಥಿಯನ್ನು ಅದ್ದೂರಿಯಾಗಿ ಮಾಡುತ್ತಿರುವುದಾಗಿ ಹೇಳಿ ಕರೆಯಲು ಬಂದಿದ್ದ ಮಾಲಿನಿಯ ಬಗ್ಗೆ ರಿತುವಿಗೂ ತಿರಸ್ಕಾರ ಮೂಡಿತ್ತು. ಇರುವ ತನಕ ಅನ್ನ, ನೀರು ಕೊಡದೆ ನರಳಿಸಿ, ಸತ್ತ ಕೂಡಲೇ ಛತ್ರದಲ್ಲಿ ಅದ್ದೂರಿಯಾಗಿ ತಿಥಿ ಮಾಡಿ, ಸಾವಿರಾರು ಜನಕ್ಕೆ ಊಟ ಹಾಕಿಸಿದರೆ ಬಂತೇ ಭಾಗ್ಯ? ಸತ್ತ ಜೀವ ಅದನ್ನೆಲ್ಲ ನೋಡುತ್ತದೆಯೇ? ಈ ತಿಥಿ, ಸಂಸ್ಕಾರಗಳಲ್ಲಿನ ನಂಬುಗೆಯೇ ರಿತುವಿಗೆ ಹೋಗಿಬಿಟ್ಟಿತ್ತು. ಸತ್ತ ದೇಹವನ್ನು ಏನು ಮಾಡಿದರೆ ಏನು? ಅದರ ಅರಿವಾಗುತ್ತದೆಯೇ ಆ ಕೊರಡು ದೇಹಕ್ಕೆ? ಇರುವಾಗಲೇ ಆ ದೇಹ, ಮನಸ್ಸನ್ನು ತೃಪ್ತಿಪಡಿಸಿದ್ದರೆ, ನೆಮ್ಮದಿಯಿಂದ ಬಾಳಿಸಿದ್ದರೆ ಒಂದಿಷ್ಟು ಸುಖವನ್ನಾದರೂ ಪಡುತ್ತಿತ್ತೇನೋ ಆ ಜೀವ. ನಮ್ಮ ಮನಸ್ಸಾಕ್ಷಿಗಾದರೂ ಅಂಜಿ ನಡೆಯಬೇಡವೇ? ಯಾವ ಅಂಜಿಕ, ಆಳುಕೂ ಇಲ್ಲದೆ, ಮಾಲಿನಿ ಆಂಟಿ ಅದು ಹೇಗೆ ಬೀಗುತ್ತಿದ್ದರು? ನೇರವಾಗಿಯೇ ಹೇಳಿಕೊಂಡಿದ್ದರು. ಸದ್ಯ, ಇಷ್ಟು ಬೇಗ ಬಿಡುಗಡೆ ಸಿಕ್ತು ನನಗೆ. ನನಗಂತೂ ತೊಳೆದು, ಬಳಿದು ಸಾಕಾಗಿ ಹೋಗಿತ್ತಪ್ಪ ನಾನಂತೂ ನನ್ನ ಮಕ್ಕಳಿಗೆ ಹೀಗೆಲ್ಲ ತೊಂದ್ರೆನೇ ಕೊಡೋದಿಲ್ಲ. ಅವರು ಹೇಳೋಕೆ ಮುಂಚೆನೇ ನಾನೇ ತಿಳ್ಕೊಂಡು ವೃದ್ದಾಶ್ರಮ ಸೇರಿಬಿಡುತ್ತೇನೆ” ಎನ್ನುವಾಗ, “ಯಾವ ನೈತಿಕ ಹಕ್ಕಿದೆ ಎಂದು ಮಕ್ಕಳನ್ನು ಸಾಕಿ ಎಂದು ಕೇಳುತ್ತೀರಾ? “ಮಾಡಿದ್ದುಣೋ ಮಹಾರಾಯ” ಎಂಬಂತೆ, ನೀವು ಮಾಡಿದ್ದು ನೀವೇ ಅನುಭವಿಸಬೇಕು ತಾನೇ? ದೋಸೆ ಮಗುಚಿ ಹಾಕಿದಂತೆ. ಇವತ್ತು ನಿಮ್ಮ ಕಾಲ, ಆಮೇಲೆ ನಮ್ಮ ಕಾಲ” ಎಂದು ಮಾಲಿನಿ ಆಂಟಿಗೆ ಹೇಳಿ ಆಕೆಯ ಮುಖ ಅವಮಾನದಿಂದ ಕಪ್ಪಿಡುವಂತೆ ಮಾಡಿ, ಅಮ್ಮನಿಂದ ಬೈಸಿಕೊಂಡದ್ದು ನೆನಪಾಗಿ, ನಾನು ಹೇಳಿದ್ದು ಸರಿಯಾಗಿತ್ತು. ಅಂಥ ಕಠಿಣ ಹೃದಯಿಗಳಿಗೆ ಮಾತಿನ ಪೆಟ್ಟು ಹಾಕಲೇಬೇಕು ಎನ್ನಿಸಿದ್ದಂತೂ ಸತ್ಯವಾಗಿತ್ತು.

ಮೌನವಾಗಿಯೇ ಅಂದೆಲ್ಲ ಕಳೆದುಬಿಟ್ಟಳು. ಯಾರೊಂದಿಗೂ ಮಾತನಾಡಲು ಮನಸ್ಸಿಲ್ಲ. ಮಿಂಚುವನ್ನು ಆಡಿಸಲು ಸಹ ಮನಸ್ಸು ಬರುತ್ತಿಲ್ಲ. ಅದು ಆಸೆಯಿಂದ ಹತ್ತಿರಬಂದರೆ ಯಾಂತ್ರಿಕವಾಗಿ ಎತ್ತಿಕೊಂಡಿದ್ದಾಳೆ ಅಷ್ಟೇ. ಅವಳ ಮೌನ ಸಹಿಸದ ಮಿಂಚು ಅತ್ತು, ಹಠ ಮಾಡಿದಾಗ ರುಕ್ಕುವಿಗೆ ಒಪ್ಪಿಸಿ, ದೂರ ಕರೆದುಕೊಂಡು ಹೋಗು ಎಂದುಬಿಟ್ಟಳು.

ದೂರದಿಂದಲೇ ರಿತುವನ್ನು ಗಮನಿಸುತ್ತಿದ್ದ ಸೂರಜ್ ರಿತುವಿನ ಹತ್ತಿರ ಬರುತ್ತ, “ಏನು ರಿತು, ತುಂಬಾ ಯೋಚ್ನೆ ಮಾಡ್ತಾ ಇರೋ ಹಾಗಿದೆ” ಕೇಳಿದ.

“ಹು, ನಿನ್ನೆ ತಾನೆ ನನ್ನ ಹತ್ರ ಅಷ್ಟು ಚೆನ್ನಾಗಿ ಶಾರದಮ್ಮಮಾತಾಡಿದ್ರು. ನಿನ್ನೆ ಅವರ ಮಗಳು ಸತ್ತ ದಿನ ಅಂತೆ. ತುಂಬಾ ಅಪ್‌ಸೆಟ್ ಆಗಿದ್ದರು. ನಿನ್ನೆ ಇಡೀ ದಿನ ಅಳ್ತಾ ಇದ್ದರು. ಸಾವೇಕೆ ನನ್ನ ಹತ್ರ ಬರ್ತಾ ಇಲ್ಲ ಅಂತ ಗೋಳಾಡಿದ್ರು. ನಾನೇ ಬಯ್ದು ಬುದ್ದಿ ಹೇಳಿದ್ದೆ. ಸಾವು ತಾನಾಗಿಯೇ ಬರಬೇಕೇ ವಿನಾ ನಾವಾಗಿಯೇ ತಂದುಕೊಳ್ಳಬಾರದು ಅಂತ ಹೇಳಿದ್ದೆ. ನಿನ್ನ ತಾನೇ ಸಾವಿನ ಮಾತಾಡಿದ ಶಾರದಮ್ಮ ಇವತ್ತು ಇಲ್ಲ ಅಂದ್ರೆ ಶಾಕ್ ಆಗ್ತಾ ಇದೆ. ನಂಬೋಕೆ ಸಾಧ್ಯವಾಗ್ತಾ ಇಲ್ಲ. ನಮ್ಮಮ್ಮನ ಫ್ರೆಂಡ್ ಅತ್ತೆ ಒಬ್ರು ಹೀಗೆ ಸಾವನ್ನ ಬಯಸಿ ತಂದುಕೊಂಡು, ಅದರ ಬಗ್ಗೆನೇ ಯೋಚನೆ ಮಾಡ್ತಾ ಇದ್ದೆ. ಈ ಬದುಕು ಅದೆಷ್ಟು ವಿಚಿತ್ರ ಅಲ್ವಾ ಸರ್? ನಿನ್ನೆ ಇದ್ದವರು ಇವತ್ತಿಲ್ಲ, ಇವತ್ತಿದ್ದವರು ನಾಳೆ ಇಲ್ಲ. ಈಗಷ್ಟೇ ನಾವು ಅನ್ನೋ ಸತ್ಯ ತಿಳಿಯದೆ ಬದುಕಲು ಹೋರಾಡುತ್ತೇವೆ” ಗಂಭೀರವಾಗಿ ನುಡಿದಳು.

“ಸಾವನ್ನ ಹತ್ತಿರದಿಂದ ನೋಡಿದ್ರಲ್ಲ ಅದಕ್ಕೆ ವೇದಾಂತಿ ಆಗ್ತಾ ಇದ್ದೀರಿ. ಕಾಲ ಎಲ್ಲವನ್ನೂ ಮರೆಸುತ್ತೆ. ಮರೆವು ಇಲ್ಲದೆ ಹೋಗಿದ್ರೆ ಮನುಷ್ಯ ಬದುಕೋಕೆ ಸಾಧ್ಯ ಆಗ್ತಾ ಇರಲಿಲ್ಲ. ಜೀವನದ ಚಿತ್ರ ಮುಂದೆ ಮುಂದೆ ಹೋದ ಹಾಗೆ ಸಾವಿಗೆ ಹತ್ತಿರವಾಗ್ತಾ ಹೋಗ್ತಿವಿ. ಈ ಸತ್ಯ ಸೃಷ್ಟಿ ನಿಯಮ. ಈ ನಿಯಮ ಮೀರಿ ಯಾರಿಂದಲೂ ಬದುಕಲು ಸಾಧ್ಯವಿಲ್ಲ. ಸಾವು ಕಟ್ಟಿಟ್ಟ ಬುತ್ತಿ. ಹಾಗಂತ ಯಾವತ್ತೋ ಸಾಯ್ತಿವಿ ಅಂತ ಇಂದೇ ಚಿಂತೆ ಮಾಡ್ತಾ ಕುಳಿತರೆ ಬದುಕು ಸಾಗುವುದಾದರೂ ಹೇಗೆ ಹೇಳಿ? ಎಲ್ಲಾ ನೈಸರ್ಗಿಕ ಕ್ರಿಯೆಗಳಂತೆ ಸಾವು ಕೂಡ ಒಂದು ಕ್ರಿಯೆ. ಅದನ್ನು ಸ್ವಾಭಾವಿಕವಾಗಿ ಸ್ವಾಗತಿಸಬೇಕು. ಅದಕ್ಕೆ ಅಷ್ಟೊಂದು ಪ್ರಾಮುಖ್ಯತೆ ಕೊಡಬಾರದು. ನಿಲ್ದಾಣಗಳು ಬಂದಾಗ ನಾವು ಇಳಿಯಲೇಬೇಕು ತಾನೇ? ನಾವು ಇಳಿದೆವು ಅಂತ ರೈಲು ಮುಂದೆ ಹೋಗೋದನ್ನು ನಿಲ್ಲಿಸುತ್ತಾ? ಇವತ್ತು ಶಾರದಮ್ಮನ ನಿಲ್ದಾಣ ಬಂತು, ಇಳಿದು ಹೋದ್ರು. ಮುಂದೆ ನಮ್ಮದು ಒಂದು ದಿನ ಬರುತ್ತೆ. ಏಳಿ, ನೀವು ಹೀಗೆ ಮಂಕಾಗಿ ಕುಳಿತುಕೊಳ್ಳಬಾರದು. ಎಲ್ಲರಿಗೂ ಧೈರ್ಯ ತುಂಬುವ ನೀವೇ ಹೀಗೆ ಕೂತ್ಕೊಂಡು ಬಿಟ್ರೆ ಹೇಗೆ? ಏಳಿ, ಸ್ವಲ್ಪ ಆಡಿಟ್ ನೋಡೋಣ” ಎಂದು ಬಲವಂತವಾಗಿ ಏಳಿಸಿದ.

ಕೆಲಸದ ಕಡೆ ಗಮನ ಹರಿಸಿದರೆ ರಿತುವಿನ ಮನಸ್ಸು ತಿಳಿಯಾಗಬಹುದೆಂದು ಭಾವಿಸಿ ಆಫೀಸಿಗೆ ಕರೆದೊಯ್ದ. ಆ ಕೆಲಸದಲ್ಲಿ ಮುಳುಗಿ ಹೋದ ರಿತು ಶಾರದಮ್ಮನ ಸಾವನ್ನು ಪಕ್ಕಕ್ಕೆ ಸರಿಸಿಬಿಟ್ಟಿದ್ದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಳಿ ಮಾತು
Next post ಹೂವಿನ ಧ್ಯಾನ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…