ಬೆಳಗುಜಾವದಲಿ
ಹರಿ ನಿನ್ನ ದರ್ಶಿಸೆ
ನಯನಾನಂದವು|
ಪ್ರಸನ್ನ, ಕರುಣಾಸಂಪನ್ನ
ಹರಿ ನಿನ್ನ ಧ್ಯಾನಿಪೇ
ಮನಸಿಗೆ ಹರ್ಷಾನಂದವು|
ಹರಿ ನಿನ್ನನೆಬ್ಬಿಸುವ ಸುಪ್ರಭಾತವು
ಅದುವೇ ಕರ್ಣಾನಂದವು ||
ಉದಯ ರವಿಯು
ನಿನ್ನ ಗುಡಿ ಗೋಪುರದ
ಕಾಂತಿಯನು ಬೆಳಗುತಲಿ
ದ್ವಿಗುಣಗೊಳಿಸುತಿಹನು|
ಹಕ್ಕಿ ಚಿಲಿಪಿಲಿ ಕಲರವ,
ನದಿಯ ಝುಳುಝುಳು ಗಾನ
ಸಂಗೀತ ಸುಧೆಯನುಣಿಸುತ್ತಿಹುದು||
ವಿಪ್ರರೆಲ್ಲರು ಸೇರಿ ಬಗೆ ಬಗೆಯ
ಪೀತಾಂಬರ ಧರಿಸಿ|
ತಿಲಕ ನಾಮಾದಿಗಳನಿರಿಸಿ
ಸಂಧ್ಯಾವಂದನೆ ಮಾಡಿರಲು|
ವೈಕುಂಠ, ಕೈಲಾಸವೇ
ಧರೆಗಿಳಿದಿಹುದೆನಿಸುತ್ತಿಹುದು||
ವನಿತೆ, ಸುಮಂಗಳೆ
ಮುತ್ತೈದೆಯರೆಲ್ಲರು
ನಾರು ಮಡಿಯನುಟ್ಟು
ಹೆಜ್ಜೆ ಪ್ರದಕ್ಷಣೆಯ ಮಾಡಿರಲು|
ಅತ್ತ ಹವನ ಹೋಮಾದಿ
ಮಂತ್ರ ವೇದಘೋಷ ಮೊಳಗಿರಲು
ಈ ಭುವಿ ಸ್ವರ್ಗವೆನಿಸುತ್ತಿಹುದು||
*****