ಹೊಗಳಿಕೆ

ಹೊಗಳಿಕೆ

‘ಹಣವೆಂದರೆ ಹೆಣವೂ ಬಾಯಿ ತೆರೆಯುತ್ತದೆ’ ಎಂಬುದೊಂದು ಗಾದೆ. ‘ಹೊಗಳಿಕೆಯೆಂದರೆ ಹೆಣದಂತಿದ್ದವನೂ ಹುರುಪುದೊಟ್ಟು ನಿಲ್ಲುತ್ತಾನೆ’ ಎಂಬುದೊಂದು ಪ್ರತಿಗಾದೆ. ಹೊಗಳಿಕೆಯಾದರೆ ಸಿಹಿನುಡಿ, ಕಲ್ಲುಸಕ್ಕರೆಯಂತೆ ಎತ್ತ ಸವಿದರೂ ಸಿಹಿಯೇ. ಇದು ಭಾವನೆಗಳಿಗೆ ಕಚಕುಳಿಯಿಡುವಂತೆ ವಿಚಾರಗಳಿಗೆ ಪ್ರಚೋದನೆಯನ್ನು ಈಯುತ್ತದೆ. ಆಲಸಿಗೆ ಉತ್ಸಾಹವನ್ನು ದಯಪಾಲಿಸುವಂತೆ ಅಶಕ್ತನಿಗೆ ಪರಾಕ್ರಮವನ್ನು ಕೊಡುತ್ತದೆ. ಕಿವಿಗಷ್ಟೇ ಅಪ್ಯಾಯಮಾನವಾದುದಲ್ಲ, ಇಡಿಯ ವ್ಯಕ್ತಿಯನ್ನೇ ಆನಂದದ ಉಯ್ಯಾಲೆಯಲ್ಲಿ ಜೀಕುವಂತೆ ಮಾಡುತ್ತದೆ. ಹೊಗಳಿಕೆಯಲ್ಲಿ ಸಂಗೀತದ ಮಾಧುರ್ಯವಿದೆ; ಮಾನವನನ್ನು ಮರಳುಗೊಳಿಸುವ ಮಾದಕತೆಯಿದೆ; ಮಂದವಾಗಿ ಪ್ರವಹಿಸುವ ಸಲಿಲದ ಆತ್ಮಮಗ್ನತೆಯಿದೆ; ಎಲ್ಲಕ್ಕೂ ಹೆಚ್ಚಾಗಿ ವ್ಯವಹಾರಕುಶಲತೆಯ ಮರ್ಮವಿದೆ. ಹೊಗಳಿಕೆಯು ಮನುಷ್ಯನ ಇತಿಹಾಸದಷ್ಟೇ ಹಳೆಯದು. ಮಾನವ ಸೃಷ್ಟಿಗೊಳಿಸಿದ ಕೆಲ ಕ್ಷಣಗಳ ನಂತರ ಆ ಸೃಷ್ಟಿಯನ್ನು ಕಂಡು ದೇವನೇ ದಿಗ್ಭ್ರಾಂತಿಗೊಂಡಿರಬಹುದು. ತನ್ನ ಕ್ರತುಶಕ್ತಿಯನ್ನು ನೆನೆದುಕೊಂಡು ಹೆಮ್ಮೆಪಟ್ಟುಕೊಂಡಿರಬಹುದು. `What a genius I had then’ ಎಂದು ಸ್ವಿಷ್ಟನು ತನ್ನ ಗತಕಾಲದ ಪ್ರತಿಭೆಯನ್ನು ನೆನೆಸಿಕೊಂಡಂತೆ ದೇವರ ಗತಿಯೂ ಆಗಿರಬೇಕು. ಆತ್ಮಪ್ರಶಂಸೆಯಿಂದ ತೃಪ್ತನಾಗದೆ-ಸ್ತೋತ್ರಪ್ರಿಯನಾಗಿ ನಿಂತನೆಂದು ಕಾಣುತ್ತದೆ. ಹೀಗಾಗಿ ಸ್ತೋತ್ರಪ್ರಿಯತೆ ಭಗವಂತನಿಗೆ ಅನಿವಾರ್ಯವಾದ ಜಾಡ್ಯವಾಯಿತು. ಹೊಗಳುವ ಭಕ್ತನ ಮನದ ಮೊನೆಯ ಮೇಲೆ ನಿಂತ ಗೃಹವಿಹೀನ ದುರ್ದೈವಿ ಅವನು. ಭಕ್ತನು ಕೇಳಿದರೆ ಹೆಂಡತಿಯನ್ನೇ ಕೊಟ್ಟ ಭೋಳೆಶಂಕರನು. ಆತನು ನಿಂತು ಹೊಗಳಿದರೆ ಓಡಿಯಾಡಿ ಕೇಳುವ, ಕುಳಿತು ಹೊಗಳಿದರೆ ನಿಂತು ಕೇಳುವ, ಮಲಗಿ ಹೊಗಳಿದರೆ ಕುಳಿತು ಕೇಳುವ ಭಗವಂತ ನಮ್ಮ ಕನಿಕರಕ್ಕೆ ಪಾತ್ರನಾಗುತ್ತಾನೆ. ಅನ್ಯರ ಹೊಗಳಿಕೆಯನ್ನು ಸೈರಿಸದಿರುವುದು, ಅದಕ್ಕಾಗಿ ಕರಬುವುದು ಭಗವಂತನ ಕೀಳುಗುಣಗಳು. ಇಂದ್ರಪದವಿಗಾಗಿ ತಪಸ್ಸನ್ನು ಆಚರಿಸುವ, ಮಾನವನನ್ನು ಅಧಃಪತನದ ರಸಾತಳಕ್ಕೆ ತಳ್ಳಬಲ್ಲ ಗುಣವಿಶೇಷವೂ ಆತನಲ್ಲಿದೆ. ಅದಕ್ಕಂತಲೇ ದೇವರು ನಾಲ್ಕು ಗೋಡೆಗಳ ಮಧ್ಯ, ಗಂಟೆ ಜಾಗಟೆಗಳ ಕಿವುಡುಗಟ್ಟುವ ವಾತಾವರಣದಲ್ಲಿ, ದೀಪ ಧೂಪಗಳ ಹೊಗೆಯಲ್ಲಿ ಕಣ್ಮುಚ್ಚಿ ಭಕ್ತಾದಿಗಳು ತಂದು ಸುರುಹುವ ಹೂವಿನ ಸಂಬಾರದಲ್ಲಿ ಕಲ್ಲಿಗೂ ಕಲ್ಲಾಗಿ ಬಿದ್ದುಕೊಳ್ಳುವಂತಹ ಪ್ರಸಂಗ ಬಂದಿದೆ.

ದೇವಾಂಶಸಂಭೂತರಾದ ರಾಜ ಮಹಾರಾಜರಂತೂ ಹೊಗಳಿಕೆಯ ದಾಸಾನುದಾಸರಾಗಿದ್ದರು. ಪರಾಕ್ರಮಿಗಳಾಗಿ ಮೂರುಲೋಕದ ಗಂಡರೆನ್ನಿಸಿಕೊಂಡರೂ ಹೊಗಳಿಕೆಯ ಶಕ್ತಿಯ ಮುಂದೆ ಕಾಲು ಚಾಚಿ ಬಿದ್ದುಕೊಂಡ ಹೇಡಿಗಳು. ಯುದ್ಧಗಳು ಎಂದಾದರೂ ಬರುವ ಆಕಸ್ಮಿಕಗಳಾಗಿದ್ದವು. ಇನ್ನುಳಿದ ಕಾಲವೆಲ್ಲ ಅಂತಃಪುರದ ಕೋಮಲ ವಾತಾವರಣದಲ್ಲಿ ಆಹಾರ ವಿಹಾರಗಳಲ್ಲಿ, ನೋಟ ಬೇಟೆಗಳಲ್ಲಿ ಕಳೆಯುತ್ತಿತ್ತು. ವಿದೂಷಕ ಅವರ ಪ್ರೀತಿಯ ಸಖ. ರಾಜನು ಅವನಲ್ಲಿ ಹೇಳದ ವಿಷಯವಿರಲಿಲ್ಲ. ತೆರೆಯಲಾರದ ಗೌಪ್ಯವಿರಲಿಲ್ಲ. ಆಪ್ತಮಿತ್ರನಾಗಿ ರಾಜನ ಪ್ರೇಮಗಾಥೆಗಳನ್ನು ಕೇಳುತ್ತಿದ್ದನು. ಅವನ ಬೇಸರವನ್ನು ಹಾಸಪರಿಹಾಸಗಳಿಂದ ಕಳೆಯುತ್ತಿದ್ದನು ಮತ್ತು ಕಾಲಕಾಲಕ್ಕೆ ಮುಖಸ್ತುತಿಯ ಇಂಜೆಕ್ಶನ್ನು ಮಾಡುತ್ತ ಅದಕ್ಕೆ ತಕ್ಕ ಫೀಯನ್ನು ದೊರಕಿಸಿಕೊಳ್ಳತ್ತಿದ್ದನು. ತನ್ನ ವಾಕ್ಚಾತುರ್ಯದಿಂದ ರಾಜನ ಮಂಕುಬೂದಿಯನ್ನು ತಣಿಸುತ್ತ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತಿದ್ದನು. ಒಮ್ಮೊಮ್ಮೆ ತಪ್ಪೂನುಡಿದು ರಾಜರ ಕೋಪಕ್ಕೆ ಈಡಾಗಿ, ನರಕ ಸದೃಷ ಶಿಕ್ಷೆಗಳನ್ನು ಅನುಭವಿಸಿದ್ದೂ ಉಂಟು. ರಾಜ ಮಹಾರಾಜರ ಅನುಗ್ರಹ ಅಥವಾ ಕೋಪಗಳು ಸ್ಥಿರವಲ್ಲ. ಯುದ್ಧ ಮತ್ತು ಸ್ತ್ರೀ ಉಂಟು ಮಾಡಬಹುದಾದ ಸಂಕಷ್ಟಗಳಿಗಿಂತ ಹೆಚ್ಚಾಗಿ ರಾಜರ ಚಾಂಚಲ್ಯ ಕೋಪ ತಾಪಗಳನ್ನು ಉಂಟು ಮಾಡುತ್ತದೆ ಎಂದು ಶೇಕ್ಸ್‍ಪಿಯರನು ಹೇಳಿದ ಮಾತಿನಲಿ ಸತ್ಯಾಂಶವಿದೆ. ಅದಕ್ಕಾಗಿಯೇ, ವಿದೂಷಕರ ವಾಗ್ಧೋರಣೆಯು ರಾಜರ ಮನವನ್ನು ತೃಪ್ತಿಗೊಳಿಸುವಂತೆ ಹೊಗಳಿಕೆಯಿಂದ ಕೂಡಿರುತ್ತಿತ್ತು.

ಇಂದು ಮಹಾರಾಜರಿಲ್ಲ. ಆದರೆ ಆ ಸ್ತೋತ್ರಪ್ರಿಯತೆ ಮಾತ್ರ ಮನುಷ್ಯನ ರಕ್ತದ ಕಣಕಣದಲ್ಲಯೂ ಹರಿಯುತ್ತದೆ. ಆತನು ಎಷ್ಟು ಸ್ತೋತ್ರಪ್ರಿಯನೋ ಅಷ್ಟೇ ನಿಷ್ಟುರನುಡಿಯ ದ್ವೇಷಿಯು. ಮಾನವನೆಂದರೆ ಆಸೆ ಆಮಿಷಗಳ ಮೊಟ್ಟೆ. ಈ ಆಶೆ ಆಮಿಷಗಳ ಸಾಲಿನಲ್ಲಿ ಪ್ರಥಮ ಪ್ರಾಶಸ್ತ್ಯವಿರುವುದು ಹೊಗಳಿಕೆಗೆ. ನಾಲ್ಕು ಜನರಿಂದ ಒಳ್ಳೆಯನೆನ್ನಿಸಿಕೊಳ್ಳಬೇಕು. ಇಲ್ಲದ್ದನ್ನು ಇದೆ ಎನಿಸಿಕೊಳಬೇಕು ಎನ್ನುವ ಮಾತು ಎಲ್ಲರ ಹೃದಯಾಂತರಾಳದಲ್ಲಿ ಸುಪ್ತವಾಗಿರುತ್ತದೆ. ಈ ಸ್ವಭಾವ, ನೀಚ ಸ್ಪಭಾವೇನೂ ಅಲ್ಲ, ಇಲ್ಲಿ ನಾಚಿ ತಲೆ ತಗ್ಗಿಸಬೇಕಾದ ಪ್ರಮೇಯವೇನೂ ಇಲ್ಲ. ಅದು ತೀರ ಸ್ವಾಭಾವಿಕವೆನ್ನಬಹುದಾದ ಪ್ರವೃತ್ತಿ. ನಮ್ಮ ವಿಚಾರಗಳು ನಮ್ಮ ನಡತೆಯನ್ನು ಎಷ್ಟರಮಟ್ಟಿಗೆ ರೂಪಿಸುತ್ತವೆ ಎನ್ನುವುದು ಸಂಶಯಾಸ್ಪದ ವಿಷಯವಾಗಿದೆ. ಸಾಮಾಜಿಕ ಅಭಿಪ್ರಾಯವು ನಮ್ಮ ನಡತೆಯ ತಳಹದಿಯಾಗಿದೆ. ಸಾಮಾನ್ಯರಾದ ನಮ್ಮ ಜೀವನವು ಸಾಮಾಜಿಕರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಡಯುವ ಕಾಲುದಾರಿ. ನಾವು ಹಮ್ಮಿದ ನೂರು ಯೋಜನೆಗಳಲ್ಲಿ ಕೈಕೊಂಡ ನೂರು ಕಾರ್ಯಗಳಲ್ಲಿ ತೊಂಬತ್ತರಷ್ಟು ಸಾಮಾಜಿಕ ಸದಭಿಪ್ರಾಯದ ಮೇಲೆ ಕಣ್ಣನ್ನಿರಿಸಿ ಹೂಡಿದಂತಹವು. ಅದಕ್ಕಾಗಿಯೇ ನಮಗಾಗಿ ಪ್ರತ್ಯೇಕವಾದ ಮನಸ್ಸು ಹೃದಯ ಬುದ್ಧಿಗಳಿದ್ದರೂ ಸಮಾಜಕ್ಕೆ ಒತ್ತೆ ಇರಿಸಿದೇವೆ. ಅಡಿಗರು ಹೇಳುತ್ತಾರೆ -ನನ್ನ ಮನವ ನನಗೆ ಕೊಡು ಹೇ ಸಮಾಜ ಭೈರವಾ’. ಆ ಸಮಾಜ ಭೈರವನ ಪದದಡಿಯಲ್ಲಿ ಬಿದ್ದ ಹುಲ್ಲೆಗಳು ನಾವು.

ಜೀವನವೊಂದು ಕಣ್ಣು ಮುಚ್ಚಾಲೆಯ ಆಟ. ತೋರಿಕೆಯ ಪ್ರದರ್ಶನ ಶೂನ್ಯವಿದ್ದರೂ ಹೊರಗಿನ ಆಡಂಬರ ಲಕ್ಷದ ಮೈಲುಗಲ್ಲನ್ನು ದಾಟಿರುವಂತಹದು. ಒಳಗೆ ಮಂಗತನವಿದ್ದರೂ ಹೊರಗೆ ಮಹಾತ್ಮನ ವೇಷಭೂಷಣ. ಇರುವದೊಂದು-ಮಾತಾಡುವದಿನ್ನೊಂದು ಮಾನವನ ಕೇಂದ್ರಗುಣವಾಗಿದ್ದಂತೆ, ಇರುವದು ಒಂದು-ತೋರಿಸುವದಿನ್ನೊಂದು, ಇದು ಮನುಷ್ಯನ ಇನ್ನೊಂದು ಗುಣ. ಪಂಡಿತನಾಗುವುದು ಕಲ್ಲುಮುಳ್ಳಿನ ಹಾದಿ. ಪ್ರಯತ್ನಾಂತ್ಯದಲಿ ದೊರಕೊಳ್ಳಬಹುದಾದ ಅನಿಶ್ಚಿತ ಪ್ರತಿಫಲವದು. ಪಂಡಿತನೆನ್ನಿಸಿಕೊಳ್ಳುವುದು ಸುಲಭದ ಹಾದಿ. ನಾಲ್ಕು ಜನ ಹೊಗಳುಭಟ್ಟರ ಗುಂಪು ಬಾಲ ಬಡಿಯುತ್ತಿದ್ದರೆ ಸಾಕು. ಪೀತ ಪತ್ರಿಕೆಗಳ ಬೆಂಬಲವಿದ್ದರೆ ಸಾಕೇ ಸಾಕು. ಉದಾರವಾಗಿರುವದು ಕಡುಕಷ್ಟ. ತನ್ನ ಚಾಣಾಕ್ಷತನದಿಂದ ಅನ್ಯರ ಬೆವರಿನಿಂದ ತನ್ನ ಬೊಕ್ಕಸ ತುಂಬಿಕೊಂಡು ಸಾಕ್ಷಾತ್ ಲಕ್ಷ್ಮಿಯನ್ನು ಅನ್ಯರಿಗೆ ಕೊಡುವ ಮನಸ್ಸಾದರೂ ಯಾರಿಗೆ ಆದೀತು? ಅದರೆ ಉದಾರ ಎನ್ನಿಸಿಕೊಳ್ಳಲು ಕಾಸನ್ನು ಅನ್ಯರಿಗೆ ಕೊಡದ ವ್ಯಕ್ತಿ ಹಣವನ್ನು ಸೂರೆಗೈದಾನು. ನಾಲ್ಕು ಜನರ ಮೇಲೆ ಇಂಪ್ರೆಶನ್ ಒಗೆಯುವುದೇ, ತನ್ನ ಬಗ್ಗೆ ಭವ್ಯ ಕಲ್ಪನೆ ಮಾಡಿ ಕೊಡುವುದೇ. ಮಾನವನ ಎಲ್ಲ ಚಟುವಟಿಕೆಗಳ ಮೂಲಕೇಂದ್ರವಾಗಿವೆ.

ಈ ರೀತಿ ಮಾನವನೊಬ್ಬ ಶಾಪಗ್ರಸ್ತಜೀವಿ. ನಾಲ್ಕು ಜನ ತನ್ನನ್ನು ಹೊಗಳಿದರೆ ತೀರಲಿಲ್ಲ. ನಾಲ್ಕು ಜನರ ಮುಂದೆ ಡಂಗುರ ಸಾರುತ್ತ ಇರಬೇಕು. ಹೊಗಳಿಕೆಯು ಎಲ್ಲರ ಕೈಗೆ ನಿಲುಕುವ ಸುಲಭಸಾಧ್ಯದ ವಸ್ತುವಲ್ಲ. ಎಲ್ಲಿ ಯಾವಾಗ ಎಂತಹ ಹೊಗಳಿಕೆಯ ಮಾತ್ರೆಗಳನ್ನು ಉಪಯೋಗಿಸಬೇಕೆನ್ನುವುದನ್ನು ಬಲ್ಲವರೇ ಬಲ್ಲರು. ದುರ್ದೈವದಿಂದ ನಾನು ಬಲ್ಲವನಲ್ಲ. ಮಾತಿನ ಬಣ್ಣಗಾರಿಕೆಯನ್ನಾಗಲಿ, ಅದರ ಸೂಕ್ಷ್ಮಾತಿಸೂಕ್ಷ್ಮಗಳನ್ನಾಗಲಿ ಅರಿತವನಲ್ಲ. ನಾನು ನಿಷ್ಟುರನುಡಿಯ ಅನಾಗರಿಕ; ಕಚ್ಚಾಮಾಲು ಜೀವನದ ಮಹಾಯಂತ್ರದಲ್ಲಿ ಸಾಗಿಹೋಗಿ ಒಂದು ಪಕ್ಕಾವಸ್ತುವಾಗಿ ಹೊರಬೀಳಬೇಕಾಗಿದೆ. ಎಷ್ಟೋ ಸಾರೆ ನಿಷ್ಟುರ ನುಡಿಯಿಂದ ಗೆಳತನದ ಸೌಧಗಳು ಮುರಿದುಹೋಗಿವೆ. ಇಂಥ ನನಗೆ ಒಂದು ಕಾಲಕ್ಕೆ ಅಸಂಖ್ಯಗೆಳೆಯರಿದ್ದರು. ಅವರಲ್ಲಿ ಭೂಷಣರು ತಮ್ಮ ಭಾರದ ವ್ಯಕ್ತಿತ್ವದಿಂದ ನನ್ನ ಹೃದಯದ ಮೂಲೆಯನ್ನು ಆಕ್ರಮಿಸಿದ್ದಾರೆ; ಅಲ್ಲ ಆಕ್ರಮಿಸಿದ್ದರು. ಮನುಷ್ಯರು ಬಹಳ ಒಳ್ಳೆಯವರು. ತಮಗೂ ತಮ್ಮ ಕುಟುಂಬದವರಿಗೂ-ಅವರ ಬಾಯಿಂದ ಒಂದಾದರೂ ಕಟುನುಡಿಯು ಬಂದುದನ್ನು ಅವರ ನಿಕಟವರ್ತಿಗಳೇ ಕೇಳಿಲ್ಲವೆಂದರೆ, ಅವರ ಕುಸುಮಾದಪಿ ಮೃದೂನಿ ಹೃದಯದ ಪರಿಚಯವಾದೀತು. ಅಂಥ ತೂಕದ ವ್ಯಕ್ತಿಯ ಗೆಳೆತನದ ಭಾಂಡವಲಿನ ಮೇಲೆ ನನಗಿಂತಲೂ ತೂಕದ ವ್ಯಕ್ತಿಗಳೊಂದಿಗೆ ಜಗಳ ಕಾದಿದ್ದೂ ಉಂಟು. ನಮ್ಮ ಸ್ನೇಹ ಸುಧಾರಸದಲ್ಲಿ ಒಂದು ಕ್ಷುಲ್ಲಕ ಘಟನೆ ಹುಳಿ ಹಿಂಡಿತು. ಅದು ನಡೆದದ್ದು ಹೀಗೆ- ನಾನು ಭೂಷಣರೂ ಸಹ ಸಮ್ಮೇಳನಗಳಿಗೆ ತಪ್ಪದೆ ಭೆಟ್ಟಿ ಕೊಡುವ ಸಭಾಜೀವಿಗಳು. ಭಾಷಣಕಾರರ ಚರ್ವಿತ ಚರ್ವಣವನ್ನೂ ಸಭಿಕರ ನಾನಾ ವಿಧದ ಪ್ರತಿಕ್ರಿಯೆಗಳನ್ನೂ ದೂರ ನಿಂತು ಆಸ್ವಾದಿಸುವ ರಸಿಕರು. ಎರಡನೆಯವರ ದೋಷಗಳನ್ನು ಎತ್ತಿತೋರಿಸುವಲ್ಲಿ ಪ್ರವೀಣತೆಯನ್ನು ಪಡೆದ ನಮ್ಮ ಕೊಂಕು ಮನಕ್ಕೆ ಹಬ್ಬದೂಟ ಸಿಕ್ಕಂತಾಗುವದು. ಭೂಷಣರದು ಒಂದೇ ಪಲ್ಲವಿ-“ನಮಗೆ ಭಾಷಣಮಾಡುವ ಅವಕಾಶವಿದ್ದರೆ ತೋರಿಸುತ್ತಿದ್ದೆ ಒಂದು ಕೈ.” ಅವರು ಕೈ ತೋರಿಸಲು ಒಂದು ಅವಕಾಶ ಸೂಚಿಸಿದೆ. ಅವಕಾಶಕ್ಕೇನು ಕಡಿಮೆ ಈಗಿನ ಕಾಲದಲ್ಲಿ? ನಿಂತರು ಭಾಷಣ ಮಾಡಲು, ನಡುಗಿದರು ಬಾಯಿಗೆ ಮಾತುಬಾರದೆ-ಬೆವೆತರು ತಲೆಯಿಂದ ಬುಡದವರೆಗೆ-ಕಡೆಗೆ ನಾಲ್ಕು ಮಾತುಗಳನ್ನಾಡಿದರು. ಎಂಥ ಮಾತು ಅದು! ನಾನು ನಾಚಿಕೆಯಿಂದ ತಲೆತಗ್ಗಿಸಿದ್ದೆ. ಗುಂಡು ಗುಂಡಾಗಿ ಬೆಳೆದ ಭೂಷಣರು ಇದಾವುದಕ್ಕೂ ಲಕ್ಷ ಕೊಡದೆ, ತಮ್ಮದೇ ಆದ ನೂತನ ನಗುವಿನಿಂದ ಇಳಿದರು. ಅವರ ಮಿತ್ರವೃಂದ ಕುಚೇಷ್ಟೆಯ ನಗುವಿನಿಂದ ಕೈಕುಲುಕಿಸಿತು. ಬೆನ್ನು ಚಪ್ಪರಿಸಿತು. ನಾನು ಕಣ್ಣು ತಪ್ಪಿಸಿ ದೂರ ನಿಂತಿದ್ದರೂ ಸಾಗಿ ಬಂದರು ರಭಸದ ನಡಿಗೆಯಿಂದ. ಸಮೀಪದಲ್ಲಿ ಬಂದು, “ಹೇಗಾಯಿತು” ಎಂದು ಸೂಚ್ಯವಾಗುವ ಅಟ್ಟಹಾಸದ ಮುಖಮುದ್ರೆಯಿಂದ ಕೇಳಿದರು. ನಾನು ಹೇಳಿದೆ-‘ನಿಮ್ಮನ್ನು ಹೊಗಳಬೇಕೋ ಇದ್ಧಸ್ಥಿತಿ ಹೇಳಬೇಕೋ?’ ಅವರ ಸೂಚನೆಯ ಮೇರೆಗೆ ಧೈರ್ಯವಾಗಿ ಹೇಳಿದೆ-“ಇನ್ನೊಮ್ಮೆ ವೇದಿಕೆಯ ಮೇಲೆ ಏರಬೇಡಿರಿ.” ನನ್ನ ಮಾತಿಗೆ ನಡುಗಿಹೋದರು. `Truth is unpalatable’ (ಸತ್ಯ ಬಹು ಕಹಿ) ಎನ್ನುವ ಮಾತು ನಿಶ್ಚಯವಾಗಿ ಪರಿಣಮಿಸಿತು. ನನ್ನನ್ನಂದು ಕೊಸರಿಕೊಂಡು ಹೋದವರು ಆಮೇಲೆ ಭೆಟ್ಟಿಯಾಗಲಿಲ್ಲ. ಮನೆಗೆ ಹೋದರೆ ಇಲ್ಲವೆಂದು ಉತ್ತರ. ಬೀದಿಗಳಲ್ಲಿ ಸಿಕ್ಕರೆ ತಪ್ಪಿಸಿಕೊಂಡು ಹೋಗುತ್ತಾನೆ. ನನ್ನ ನಿಷ್ಟುರನುಡಿ ಗೆಳೆತನದ ಬೇರುಗಳನ್ನು ಕಿತ್ತುಹಾಕಿತು. ಇಂದಿಗೂ ನನ್ನ ಮೂರ್ಖತನಕ್ಕಾಗಿ ನನ್ನನ್ನು ನಾನು ಶಪಿಸಿಕೊಳ್ಳುತ್ತೇನೆ.

ಒಂದು ವೇಳೆ, ಉಳಿದ ಮಿತ್ರವೃಂದದಂತೆ ಮುಖಸ್ತುತಿ ಮಾಡಿದ್ದರೆ, “ನಿಮ್ಮ ಸಮಾನ ಮಾತುಗಾರರು ಹಿಂದೆಂದೂ ಆಗಿರಲಿಲ. ಮುಂದೆ ಹುಟ್ಟುವ ಭರವಸೆಯಿಲ್ಲ”-ಎಂದು ಶಕುನ ನುಡಿದಿದ್ದರೆ. ಕೃಪಾಛತ್ರದಂತಹ ಗಳೆತನ ಮುಂದುವರಿಯಬಹುದಿತ್ತು. ಕಾಫೀ ದೋಸೆಗಳ ಸರಬರಾಯಿ ಆಗಬಹುದಿತ್ತು. ನಾಳೆ ಎರಡನೆಯವರೊಂದಿಗೆ ಪರಿಚಯ ಮಾಡಿಕೊಡುವಾಗ ನನ್ನನ್ನು ‘ಸ್ಕಾಲರ್’ ಎಂದು ಅವರು ಬಿರುದು ಬಾವಲಿಗಳನ್ನು ಕೊಡಬಹುದಾಗಿತ್ತು. ನಾಳೆ ಇಲೆಕ್ಷನ್‌ಗೆ ನಾನು ನಿಂತರೆ ನನಗಾಗಿ ಒಂದು ವೋಟನ್ನು ಕಾದಿರಿಸಿ ಪ್ರಚಾರ ಮಾಡಬಹುದಿತ್ತು. ಇಂದು ಮಾತ್ರ ನನ್ನ ನಿಷ್ಟುರನುಡಿಯಿಂದ ಈ ‘ರೆ’ ರಾಜ್ಯದ ಸುಖದ ಸುಖ ಸೌಭಾಗ್ಯಗಳಿಗೆ ಎರವಾದೆ. ಹೊಗಳಿಕೆಗೂ ನಿಷ್ಟುರತೆಗೂ ನಡುವೆ ಈ ಅಗಾಧವಾದ ಅಂತರವಿದೆ.

ಈ ರೀತಿ ಹೊಗಳಿಕೆಯ ಕಲಾ-ಪರಿಚಯವಿರದ ನಾನು ವ್ಯವಹಾರ ಜಗತ್ತಿನಲ್ಲಿ ಬಹಳ ಹಿಂದುಳಿದುಬಿಡುತ್ತೇನೆ. ಸರಿಕದವರು ಈ ತಂತ್ರವನ್ನು ಉಪಯೋಗಿಸಿ ಯಾವ ಯಾವದೋ ದೊಡ್ಡ ಹುದ್ದೆಯಲ್ಲಿರುವುದನ್ನೂ ಪ್ರಮೋಶನ್‌ಗಳನ್ನು ಪಡೆದಿರುವುದನ್ನೂ ಕಂಡಾಗಲೊಮ್ಮೆ ನನ್ನನ್ನು ನಾನು ಅವಹೇಳನ ಮಾಡಿಕೊಳ್ಳುತ್ತೇನೆ. ಇಂಥವರನ್ನು ಕಂಡಾಗಲೊಮ್ಮೆ-ಒಡೆಯನ ಮುಂದೆ ಬಾಲಮುದಿರಿಸಿ ನಿಂತ ನಾಯಿಯ ನೆನಪಾಗುತ್ತದೆ. ನಾಯಿಯೊಂದಿಗೆ ಇವರನ್ನು ಹೋಲಿಸಿ ನನ್ನನ್ನು ಸಾಂತ್ವನಗೊಳಿಸಿಕೊಳ್ಳುತ್ತೇನೆ. ಮಾನವ ಸ್ವಭಾವವನ್ನು ಅರಿಯುವ ಅವರ ನೈಪುಣ್ಯವು ಪ್ರಶಂಸನೀಯವಾಗಿದೆ. ಯಾವ ರೋಗಕ್ಕೆ ಯಾವ ಔಷಧ ಬೇಕು ಎಂದು ಚಟ್ಟನೇ ಅರಿಯಬಲ್ಲ ಜಾಣ ಡಾಕ್ಟರರಂತೆ ಇವರ ರೀತಿ. ತಮ್ಮ ಪುರುಷಸಂತಾನದ ಪಾಂಡಿತ್ಯವನ್ನು ಹೇಳಿಕೊಳ್ಳುವುದರಲ್ಲೇ ಬೈಗುಬೆಳಗನ್ನು ಕಾಣುತ್ತಿರುವ ಆ ತಂದೆಗಳಿಗೆ ಅವರ ಕುಮಾರನ ವರ್ಣನೆ, ಹೊಗಳಿಕೆಗೆ ಬಲಿಯಾದ ವ್ಯಕ್ತಿ ಸಾಹಿತಿಯಾಗಿದ್ದರೆ ಅವನ ಕೃತಿಯ ಅನಧಿಕೃತವಾದ ಪ್ರಶಂಸೆ, ಇದು ಒಂದು ರೀತಿಯಾದರೆ ಇವರಿಗೆ ವೈರಿಯಾದ ಅಥವಾ ಬೇಡವಾದ ವ್ಕಕ್ತಿಯ ಕುನಿಂದೆ. ಇದು ಎರಡನೆಯ ರೀತಿ. ಈ ಎರಡೂ ಮಾರ್ಗಗಳಿಂದ-ಸಂಬಂಧಿಸಿದ ವ್ಯಕ್ತಿಯನ್ನು ಹೊಗಳಿ ಹೊನ್ನಶೂಲಕ್ಕಲ್ಲದಿದ್ದರೂ ಕನಿಷ್ಠ ಶೂಲಕ್ಕಾದರೂ ಏರಿಸಬಹುದು; ಸೋಲಿಸಿ ತೆಗೆಯಬಹುದು.

ಹೊಗಳಿಕೆಗೆ ಪಾತ್ರನಾದ ವ್ಯಕ್ತಿಯ ಸ್ಥಿತಿ ಕರುಣಾಜನಕವಾಗಿರುತ್ತದೆ. ಹೊಗಳುವವನು ಬೇಟೆಗಾರನಾದರೆ, ಹೊಗಳಿಸಿಕೊಳ್ಳುವವನು ಬೇಟೆಯ ವಸ್ತು. ಕೊಡುವವನ ಕೈ ತಕ್ಕೊಳ್ಳುವವನ ಕೈಗಿಂತ ಯಾವಾಗಲೂ ಮೇಲೆ ಎಂಬ ಹೇಳಿಕೆ ಪ್ರಚಲಿತವಾಗಿರುವಂತೆ ಹೊಗಳುವವನ ಸ್ಥಿತಿ ಹೊಗಳಿಕೆಗೆ ಬಲಿಯಾದವನ ಸ್ಥಿತಿಗಿಂತ ಚೆನ್ನಾಗಿಯೇ ಇರುತ್ತದೆ. ಹೊಗಳಿಕೆಗೆ ಬಲಿಯಾದವನನ್ನಾದರೂ ನೋಡಿರಿ. ಮುಖ ಅಗಲವಾಗಿರುತ್ತದೆ. ಅಸಹ್ಯ ನಗು ತುಂಬಿರುತ್ತದೆ. ಗಲ್ಲ ಅಸ್ತವ್ಯಸ್ತವಾಗಿರುತ್ತದೆ. ತೃಪ್ತಿಯ ನೋಟ ತೇಲುತ್ತಿರುತ್ತದೆ. ತಾನೇ ಸರ್ವಜ್ಞನೆಂಬ ಅಹಂಭಾವದ ಕಪ್ಪುಛಾಯೆ ಮುಖದ ಮೇಲೆಲ್ಲ ಹರಡಿರುತ್ತದೆ. ಔದಾರ್‍ಯದ ಗಳಿಗೆ ಬಂದುಬಿಟ್ಟಿರುತ್ತದೆ. ಇನ್ನು ಹೊಗಳುವವನಾದರೋ ಕುರಿಮರಿಯೊಂದನ್ನು ಲೀಲಾಜಾಲವಾಗಿ ಕರಕರನೆ ಕೊಯ್ದುನಿಂತ ಕಟುಕನಂತೆ ವಿಜಯೋಲ್ಲಾಸದ ಕೇಕೆ ಹಾಕುತ್ತಾನೆ.

ನಾವು ಮುಖವನ್ನೇನೋ ನೋಡುತ್ತೇವೆ. ಆದರೆ ಆ ಮುಖದ ಹಿಂದಿನ ವ್ಯಕ್ತಿಯನ್ನು ಅರಿಯಲಾರೆವು. ಅದರಂತೆ ಹೊಗಳಿಕೆಯನ್ನೇನೋ ಕೇಳುತ್ತೇವೆ. ಆದರೆ ಉದ್ದೇಶವನ್ನು ತಿಳಿಯಲಾರೆವು. ನನಗೆ ಇನ್ನೊಬ್ಬ ಗೆಳೆಯರಿದ್ದಾರೆ. ಈ ಕಲೆಯ ಬಹು ಮೆಟ್ಟಲುಗಳನ್ನು ಏರಿ ನಿಂತವರು. ಹೊಗಳಿಕೆಯು ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ಐಚ್ಚಿಕ ವಿಷಯವಾಗಿದ್ದರೆ ಅವರು ರ್‍ಯಾಂಕನ್ನೇನಾದರೂ ಪಡೆಯುತ್ತಿದ್ದರೇನೋ. ಅವರು ಜೀವನವನ್ನು ಹೊಗಳಿಕೆಯ ಮಾತುಗಳಿಂದ ಅಳೆಯತಕ್ಕವರು; ಪ್ರಶಂಸೆಯ ಕನ್ನಡಕದಿಂದ ಕಾಣತಕ್ಕವರು. ಹೊಗಳಿಕೆಗಾಗಿ ಹೊಗಳಿಕೆಯೆನ್ನದೆ ಲಾಭಕ್ಕಾಗಿಯೇ ಹೊಗಳಿಕೆ ಎನ್ನುವ ಲೌಕಿಕರು. ಶ್ರದ್ದೆಯಿಂದ ಹೊಗಳಿ ಲಾಭ ಪಡೆಯುತ್ತಿರುವುದನ್ನು ಮುಚ್ಚುಮರೆಯಿಲ್ಲದೆ ಧಾರಾಳವಾಗಿ ಹೇಳತಕ್ಕ ಮಾತುಗಾರರು. ಅವರು ನಾಲಗೆಯಿಂದ ಶ್ರೀಮಂತರೇ ಹೊರತು ಮನಸ್ಸಿನಿಂದಲ್ಲ. ಅವರು ಈ ತಂತ್ರವನ್ನು ಎಲ್ಲೆಡೆಯಲ್ಲಿಯೂ ಉಪಯೋಗಿಸುಲು ಹಿಂದೆ ಮುಂದೆ ನೋಡುವವರಲ್ಲ. ಡಾಕ್ಟರರೊಬ್ಬರ ಕಡೆಗೆ ಹೋಗಿ ಅವರನ್ನು ಚೆನ್ನಾಗಿ ಅಟ್ಟದ ಮೇಲೇರಿಸಿ, ಅವರಿಂದ ಔಷಧಿಯನ್ನೂ ಇಂಜೆಕ್ಷನನ್ನೂ ಪುಕ್ಕಟೆಯಾಗಿ ಪಡೆದೆನೆಂದು ಹೇಳಿಕೊಳ್ಳುವರು. ಅಕ್ಕರ ಊರಿಗೆ ಹೋಗಿ- ‘ನೀನು ಮಾಡಿದ ಉಂಡಿ ಬಹಳ ರುಚಿ’ ಎಂದು ಅದೇ ಅಸ್ತ್ರ ಉಪಯೋಗಿಸಿ ಮನಸಾರೆ ತಿಂದು ತೇಗಿದವರು. ಸ್ವಾರ್ಥಸಾಧನೆಗಾಗಿ ಬೇಕಾದಷ್ಟು ಬಣ್ಣದ ಮಾತುಗಳನ್ನು ಆಡತಕ್ಕವರು; ಆಡಿ ತಮ್ಮ ಶ್ರೇಷ್ಠತೆಯನ್ನು ಸಾರ ತಕ್ಕವರು.

ಇಂಥ ನನ್ನ ಸ್ನೇಹಿತರ ತಳಬುಡವನ್ನು ಅರಿತ ನನ್ನ ಮೇಲೂ ಹೊಗಳಿಕೆಯ ಪ್ರಯೋಗವನ್ನು ಆಗೀಗ ಮಾಡುತ್ತಿರುವುದುಂಟು. ಒಮ್ಮೆ ನನ್ನ ರೂಮಿಗೆ ಬಂದರು. ಅವರ ಮಾತಿನ ಓಘ, ಧೋರಣೆ, ಬಣ್ಣಗಾರಿಕೆ, ನಯಗಾರಿಕೆ ಇವುಗಳನ್ನೆಲ್ಲ ನೋಡಿ ನನ್ನ ಸೂಕ್ಷ್ಮ ಸಂವೇದಿಯಾದ ಮನ ಹೇಳಿತು. ‘ಈ ನನ್ನ ಪರ್ಸಿನ ಮೇಲೆ ಕಣ್ಣನಿರಿಸಿ ಆಡಿದಂತಹ ಮಾತುಗಳಿವು’ ಎಂದು ಮನದಲ್ಲೇ ಅಂದುಕೊಂಡೆ. ಒಂದಿಷ್ಟು ಹಣ ಕೇಳಿದರು. ಇಲ್ಲವೆನ್ನದೆ ಕೊಟ್ಟೆ. ಅದೇ ರಾಗವನ್ನೇ ಅವರು ಮುಂದುವರೆಸಿದರು. ಈಗ ಕೊಟ್ಟ ಹಣಕ್ಕೂ ನಿಮ್ಮ ಹೊಗಳಿಕೆಯ ಮಾತಿಗೂ ಲೆಕ್ಕ ಸರಿಹೋಯಿತಷ್ಟೇ? ಎಂದು ದೈನ್ಯದಿಂದ ಕೇಳಿದೆ. ಅಂದಿನಿಂದ ನನ್ನ ಮುಂದೆ ತಮ್ಮ ಕುಶಲತನದ ಪ್ರದರ್ಶನ ಮಾಡಲು ಹೆದರುತ್ತಾರೆ.

ಹೊಗಳಿಕೆಯು ವ್ಯವಹಾರ ಕುಶಲತೆಯ ದ್ಯೋತಕವಾಗಿದೆ. ಬುದ್ಧಿಮತ್ತೆಯ ಕುರುಹು ಆಗಿದೆ. ಹೊಗಳಿಕೆಗೆ ಹಿಗ್ಗುವುದು ತೆಗಳಿಕೆಗೆ ಕುಗ್ಗುವುದು ಮನುಷ್ಯನ ಸ್ಪಭಾವವಾಗಿದೆ. ಸ್ವಭಾವಕ್ಕೆ ಔಷಧಿಯಿಲ್ಲ. ಮಿತವಾದ ಉಪಯೋಗದಿಂದ ವಿಸ್ಮಯಕಾರೀ ಪರಿಣಾಮವನ್ನು ಪಡೆಯಲು ಸಾಧ್ಯವಿರುವಂತೆ ಸಿಕ್ಕಾಪಟ್ಟೆ ಪ್ರಯೋಗದಿಂದ ಹಾನಿಯೂ ಸಂಭವಿಸುವುದುಂಟು. ಅಷ್ಟೊಂದು ಉಚ್ಚತರವಲ್ಲದ ಈ ಪ್ರವೃತ್ತಿಯು ಕಲೆಯಾಗಿ ಮಾರ್ಪಡುವುದು ಜಾಣತನದ ಉಪಯೋಗದಿಂದಲೇ ಸಾಧ್ಯ. ಈ ಕಲೆಯು ಮಾನವನಿಗೆ ಬಿಡಲಾರದ ಕರ್ಮವಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನಗೆ ಒಂದು ಮಾತು ಹೇಳಬೇಕು
Next post ಒಬ್ಬ ವಿಯೆಟ್ನಾಮೀ ಸುಂದರಿಗೆ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…