ಎಲೆ ವಿಯಟ್ನಾಮಿನ ಸುಂದರಿಯೆ ನಿನ್ನ
ಹೆಸರು ಹುಣ್ಣಿಮೆಯೆಂದು ಹೂವೆಂದು
ಹಸಿರು ಹುಲ್ಲಿನ ಬೆಟ್ಟವೆಂದು ಪ್ರಾತಃ–
ಕಾಲದ ಬೆಳಕೆಂದು ಸ್ವಪ್ನವೆಂದು
ಪ್ರೇಮವೆಂದು ಎಲ್ಲಿರಲ್ಲೂ ಇರುವ ಅಸೂಯೆ-
ಯೆಂದು ನಿದ್ರಿಸುವ ಜ್ವಾಲಾಮುಖಿಯೆಂದು
ಹೊತ್ತಿ ಉರಿಯುವ ಕಾಡೆಂದು ಹೇಳಿದ್ದಿ.
ಎಲ್ಲರನ್ನೂ ಕಳೆದುಕೊಂಡು ನೀನು
ಉತ್ತರ ವಿಯಟ್ನಾಮಿನಿಂದ ದಕ್ಷಿಣಕ್ಕೆ
ಪ್ರಯಾಣಿಸಿದೆ. ದನಗಳನ್ನು ಮೇಯಿಸಿದವಳೆ,
ಹುಲ್ಲುಗಾವಲುಗಳಲ್ಲಿ ಕುಣಿದವಳೆ
ಹೂವುಗಳ ಮುಡಿದವಳೆ, ಹಾಡಿದವಳೆ
ಮನುಷ್ಯರ ವಿಧ್ವಂಸಕ ಯುದ್ಧದಲ್ಲಿ
ಆಗಾಗ ಮಡಿದವಳೆ, ನಿನ್ನ ತೊಡೆಯೇರಿದ
ಗೆಳೆಯರು ಎಲ್ಲಿ ಚದರಿದರು ಹೇಳು–
ಗಂಡಿ ಪೇಟೆಯ ಅಣೆಕಟ್ಟಿನ ಕೆಳಗೆ
ನಿನ್ನೆದುರು ಕುಳಿತು ಯೋಚಿಸುವೆನು
ಸಿಡಿಮದ್ದು ನೆಲದ ಮುಖವ ಒಡೆಯು-
ತಿದ್ದಾಗಲೂ ಸೃಷ್ಟಿ ಮರೆತಿರಲಿಲ್ಲ ನಿನ್ನ!
ಅದು ಪ್ರೀತಿಯ ಕೈಯನಾಡಿಸುತ್ತಲೆ ಇತ್ತು
ನಿನ್ನ ಮೈಯ ಏರುತಗ್ಗುಗಳ ಮೇಲೆ
ಮೂಡಿಸುತಿತ್ತು ಎಂಥ ಅಪರೂಪದ ರಾಗಗಳ!
ನನ್ನ ಕಲ್ಪನೆ ನಿನ್ನ ನೆನಪೆಂದು ನನಗೆ ಗೊತ್ತು,
ದಾಟಲಾರದ ಇತಿಹಾಸವೆ ನಮ್ಮ ನಡುವೆ ಇತ್ತು
*****