ನಡೆವ ದಾರಿಯಲಿ ಹೆಜ್ಜೆಗಳು
ಮೂಡಲಿಲ್ಲ ಅನುರಣಿಸಿತು ಸಪ್ಪಳ
ನಡೆವ ದಾರಿಯ ಇಕ್ಕೆಲಗಳಲಿ
ಬಯಲ ಬಿಂಬ ದಾರಿಗೆ ಇಂಬು
ಹುಡುಕಾಟದ ಬಯಲಿನಲಿ
ಖಾಲಿಯಲಿ ತುಂಬಿಕೊಂಡ ಹಸಿರು.
ಬೆಳಕಿಗಾಗಿ ಕಂದೀಲನ ಮರೆಮಾಚಿ
ದೇಹ ಹೊತ್ತವರ ಹರಿದಾಟ ಇರುಳ
ಮೆಲ್ಲಗೆ ಕಂಪ ಮರೆತು ಮಾಯೆ ಒಳಗೆ
ಇಳಿದ ಕಪ್ಪು ಕತ್ತಲ ತುಂಬ ನೀಲಿ
ಆಕಾಶದ ನಕ್ಷತ್ರಗಳ ಮಿನುಗು
ಕಣ್ಣ ತುಂಬ ಜಗದ ಬೆಳದಿಂಗಳು.
ಹರಿವ ಹೊಳೆ ನಿಂತ ಗುಡ್ಡ
ಒಂದಕ್ಕೊಂದು ಹೊಂದಿ ಚಿಗುರು
ಚಿಮ್ಮಿದ ಗಿಡ ಮರಗಳು ಕುಳಿತು
ಹಕ್ಕಿಗಳು ಹಾಡಿದವು ರಾಗಗಳ
ಕ್ರಮಿಸಿದ ಹೆಜ್ಜೆಗಳು ಹಗುರಾಗಿ
ಗಾಳಿ ಬೀಸಿತು ತಂಪಾದ ಜಂಗಮ.
ಎಲ್ಲದರೊಳಗೆ ಇಲ್ಲವಾಗಿ ಕರಗಿ
ಇದ್ದುದರೊಳಗೆ ಶೂನ್ಯ ತುಂಬಿ
ಪಂಚಭೂತಗಳು ತೆರೆದ ಬಾಗಿಲು
ಕಿಟಕಿ, ಅಂಗಳದ ತುಂಬ ಮೌನ
ನಡೆದ ನಡುಗೆ ಕಲ್ಯಾಣದಿಂದ ಕದಳಿಗೆ
ಎಲ್ಲೆಲ್ಲೂ ಪಸರಿಸಿತು ಜ್ಞಾನ ಹೂವು, ಗಾಳಿ, ಗಂಧ.
*****