ಭಾವ ರವಿಯೆ ಶಮ ಶಾಂತ ಶಶಿಯೆ
ನಿನ್ನ ನೋಟ ದಾಳವೆತ್ತರ ನಿಲುಕದು
ಕಸವೊಽ ರಸವೊಽ
ಸರಸ ವಿರಸವೊಽ
ನಿನ್ನ ನೋಟದಿ ಸಮರಸ
ಮುಗಿಲಿನೆದೆಗೂ ಮಣ್ಣ ವಾಸನೆ
ತೋರೋ ನಿನ್ನಯ ಗಾರುಡಿ
ಕಡಲ ತೆರೆಯ ನೊರೆಯ ತೊರೆಗೊ
ಕಣ್ಣೀರ ಛಾಯೆಯ ಮುನ್ನುಡಿ
ಬೀಸೊ ಗಾಳಿಗೂ ಭಾವ ಸಾಸಿರ
ಜೀವ ಜಲಕು ಒನಪಿನೋಗರ
ಪಂಕ್ತಿಯಲ್ಲೂ ಜಂಗಮದ ದರ್ಶನ
ಖಗ-ಮಿಗ-ಜಂತುಗಳಲೂ ನೇಹದ ಸ್ಪರ್ಶನಾಽ
ಹೆಪ್ಪುಗಟ್ಟಿ ಕರಗೊ ತುಹಿನವು
ನಿನ್ನ ಕಣ್ಣ ಕರಣಕೆ ಕಾರಣ
ವೈಶಾಖ, ವರ್ಷಿಣಿ, ಹಿಮಂತ ಸಾಲ್ಗಳು
ಪದ ಪಾದದಕ್ಕರ ತೋರಣ.
ಹುಟ್ಟು ಸಾವು ನೋವು ನಲಿವು
ನಿನಗಾತ್ಮಾನಂದದ ಸಂತಸ
ದೃಷ್ಟಿಯಂತರದೃಷ್ಟಿಯು
ನಿನ್ನ ಚಿತ್ತದೊಲ್ಮೆ ಬಲ್ಮೆಯ ನವರಸ
ಬಯಲ ಜಗದ ಬಯಲಗಣ್ಣಿಗೆ
ಬಯಲೆ ನೂಪುರದಾಲಯ
ಕವಿಯೆ ನಿನ್ನಯ ಕಾವ್ಯಗಣ್ಣಲಿ
ಬಯಲು ಬಯಲಿಗೂ ಶೃತಿಲಯ…..
*****