ಕೈಯ ಕೈಯಲಿ ಇಟ್ಟು
ಕಣ್ಣ ಕಣ್ಣಲಿ ನಟ್ಟು
ಮುಂದಕ್ಕೆ ಸಾಗೋಣ, ನೋಡೋಣ ಬಾ;
ನಾನು ನೀನೂ ಕೂಡಿ
ವಿಧಿಯೊಡನೆ ಹೆಣಗಾಡಿ
ಜೀವನದ ರೂಪನ್ನೆ ಬದಲಿಸುವ, ಬಾ!
ನದಿಯ ತಣ್ದುಟಿ ಮೇಲೆ
ಶಶಿಯ ಒಲವಿನ ಓಲೆ
ಕೊರೆಸಿ ಕುಣಿವುದನು ಓದೋಣ ಬಾ;
ಬಾಳಿನಂಗಳದಲ್ಲಿ
ಸಾವ ಪಂಜರದಲ್ಲಿ
ಅಳಿದುಳಿದ ಕುಲವನ್ನು ಕಾಣೋಣ, ಬಾ!
ನಾಡ ಸುತ್ತಲು ಸುತ್ತಿ
ಹಾಡ ಮಿಂಚಿನ ಕತ್ತಿ
ಝಳಪಿಸುತ ಇರುಳನ್ನು ಇರಿಯೋಣ ಬಾ;
ನಾನು ನೀನೂ ಕೂಡಿ
ಜೀವನವ ಜಾಲಾಡಿ
ಹುದುಗಿರುವ ಮುತ್ತನ್ನು ಆಯೋಣ, ಬಾ!
ಸಿರಿಯ ಸಂತಸ ಕೂಟ,
ಹೊರೆಯ ಸಿಂಗರ ಮಾಟ,
ಮರೆಯ ಹೆಣ್ಣಿನ ಬೇಟ, ಕಾಣೋಣ ಬಾ;
ಅದಕೆ ಜೀವವ ತೆತ್ತ
ಲೆಕ್ಕವಿಲ್ಲದ ಮೊತ್ತ
ಜನರ ಜೀವನವನ್ನು ಎಣಿಸೋಣ, ಬಾ!
ನಾಡ ಬಿಡುಗಡೆಗಾಗಿ
ಓಡ ಅರಳುಗಳಾಗಿ
ಬಾಡಿರುವ ಹೂಗಳನು ಆಯೋಣ ಬಾ;
ಅವರ ಜೀವನದ ನಾಡಿ
ಸಿಡಿಲ ನದಿಗಳ ಕೋಡಿ
ಕೊಚ್ಚಿಸುತ, ಕ್ರಾಂತಿಯನು ಹರಡೋಣ, ಬಾ!
ಜಗವೆ ತನ್ನದು ಎಂದು,
ಕದ್ದು ಎಲ್ಲವ ತಂದು
ಕೂಡಿಟ್ಟ ಕಳ್ಳನನು ಅಳಿಸೋಣ ಬಾ;
ತನ್ನ ಬಾಳ್ವೆಯ ತೆತ್ತು,
ತಾನೆ ಉಳಿದರ ತೊತ್ತು
ಆಗಿ ಅಳಿಯುವ ಜೀವ ಉಳಿಸೋಣ, ಬಾ!
ಅವರ ಕೊನೆಯಿದು ಅಲ್ಲ,
ಇದು ಬರಿಯ ಉರಿಯಲ್ಲ,
ನಾಡಿನೆದೆಗಿಚ್ಚೆಂದು ಅರಿಯೋಣ ಬಾ;
ನಾನು ನೀನೂ ಕೂಡಿ
ಒಲವ ಹಾಡನು ಹಾಡಿ
ಜೀವನದ ರೂಪ, ಬದಲಿಸುವ ಬಾ!
*****