ಕೌಸಲ್ಯಾ ನಂದನ

ಕೌಸಲ್ಯಾ ನಂದನ

ಮನೆಯಿಂದ ಅಣ್ಣ ಕಾಗದ ಬರೆದಿದ್ದರು: ‘ಇಲ್ಲೆಲ್ಲ ಸಿಡುಬಿನ ಗಲಾಟೆ ಬಹಳ ಜೋರಾಗಿದೆ. ಈ ರಜೆಯಲ್ಲಿ ಮನೆಗೆ ಬರಬೇಡ, ಅಲ್ಲೇ ಇರು. ಕ್ರಿಸ್‌ಮಸ್‌ ರಜಾ ಸಿಕ್ಕಿದಾಗ ಬಂದು ಕರೆದುಕೊಂಡು ಬರುತ್ತೇನೆ.’

ಬಹಳ ದಿನಗಳಿಂದ ಬಯಸಿ ಹಂಬಲಿಸಿದ ರಜೆಗೆ ಒಂದೇ ವಾರ ಬಾಕಿ ಇತ್ತು. ಹುಡುಗಿಯರೆಲ್ಲಾ ಊರಿಗೆ ಹೊರಡುವ ಸನ್ನಾಹ ಮಾಡುತ್ತಿದ್ದರು. ನಾನಂತೂ ಎಲ್ಲರಿಗಿಂತ ಮೊದಲೇ ಪುಸ್ತಕಗಳನ್ನೂ ಬಟ್ಟೆಗಳನ್ನೂ ಕಟ್ಟಿ ಮುಗಿಸಿದ್ದೆ, ರಜಾ ದಿನಗಳನ್ನು ಹೇಗೆ ಕಳೆಯಬೇಕು, ಏನೇನು ಮಾಡಬೇಕು ಎಂದು ಯೋಚಿಸಿ ಸಂತೋಷ ಪಡುತ್ತಿದ್ದಾಗ ಈ ಕಾಗದ! ಅಮ್ಮ, ಅಣ್ಣ, ಚಿಕ್ಕ ಮೋಹನ ಎಲ್ಲರನ್ನೂ ನೋಡಬೇಕೆಂದಿದ್ದ ಆಶೆ ನಿರಾಶೆ. ಓದಿ ಬಹಳ ಬೇಸರವಾಯ್ತು, ಆಗ ರೂಮಿನಲ್ಲಿ ಯಾರೂ ಇಲ್ಲದುದರಿಂದ ಕಣ್ಣೀರಿಗೂ ತಡೆಯುಂಟಾಗಲಿಲ್ಲ. ಹಾಗೆಯೇ ಮಂಚದ ಮೇಲೆ ಬಿದ್ದುಕೊಂಡು, ಹುಡುಗಿಯರೆಲ್ಲ ಹೋದ ಮೇಲೆ ಹೇಗಪ್ಪಾ ದಿನಗಳನ್ನು ಕಳೆಯಲಿ’ ಎಂದು ಚಿಂತಿಸತೊಡಗಿದೆ. ಅಷ್ಟರಲ್ಲಿ ಲಿನ್ನಿ ಬಂದಳು. ಅವಳ ಹೆಸರು ವಸಂತಿ, ಆದರೆ ಮೊದಲವಳು ಶಾಲೆಗೆ ಬಂದು ಸೇರಿದಾಗ ವಿನೋದ, ತೆಳ್ಳಗಿದ್ದ ಅವಳನ್ನು ನೋಡಿ ‘ಲೀನಿ’ ಎಂದು ತಮಾಷೆ ಮಾಡಿದ್ದಳು. ಅಂದಿನಿಂದ ಅವಳಿಗೆ ಲೀನಿ, ಲಿನ್ನಿ ಎಂಬ ಹೆಸರು ಸ್ಥಿರವಾಗಿಹೋಯ್ತು. ‘ವಸಂತಿ ಎಂದರೆ ಯಾವ ವಸಂತಿ?’ ಎಂದು ಎಲ್ಲರೂ ಕೇಳುತ್ತಿದ್ದರು. ಕೊನೆಕೊನೆಗೆ ಉಪಾಧ್ಯಾಯಿನಿಯರಿಗೂ ಅದೇ ಪಾಠವಾಗಿ ವಸಂತಿ ಎಂಬ ಹೆಸರೇ ಮರೆತುಹೋಗಿತ್ತು.

ಲಿನ್ನಿ ಬಲು ಚುರುಕು ಹುಡುಗಿ, ಎಲ್ಲರೂ ಅವಳಿಗೆ ಸ್ನೇಹಿತರು. ಮನಸ್ಸು ಮಾಡಿದ್ದರವಳು ಕ್ಲಾಸಿನಲ್ಲಿ ಮೊದಲನೆಯವಳಾಗಬಹುದಿತ್ತು. ನಮಗಾರಿಗೂ ತಿಳಿಯದಿದ್ದ ಲೆಕ್ಕವನ್ನವಳು ಬಲು ಸುಲಭದಲ್ಲಿ ಮಾಡಿ ಬಿಡುತ್ತಿದ್ದಳು. ಆದರೆ ಅವಳಿಗೆ ಪಾಠಕ್ಕಿಂತ ಆಟದಲ್ಲಿ ತಂಟೆಯಲ್ಲಿ ಮನಸ್ಸು ಹೆಚ್ಚು. ಮಾಡಬೇಡವೆಂದುದನ್ನು ಮಾಡುವುದಕ್ಕೆ ಬಯಕೆ ಬಹಳ. ನಮ್ಮ ಶಾಲೆಯ ಕಂಪೌಂಡಿನಲ್ಲಿದ್ದ ದೊಡ್ಡ ದೊಡ್ಡ ಮರಗಳ ಮೇಲೆಲ್ಲಾ ಹತ್ತಿ ಅದಕ್ಕಾಗಿ ಎಷ್ಟೋ ಸಾರಿ ಶಿಕ್ಷೆಯನ್ನನುಭವಿಸಿದ್ದಳು. ನಮ್ಮ ಶಾಲೆಯಲ್ಲಿ ಅವಳನ್ನು ಟೆನ್ನಿಸ್ ಆಟದಲ್ಲೂ ಈಜುವುದರಲ್ಲೂ ಮೀರುವವರಿರಲಿಲ್ಲ. ನೋಡುವುದಕ್ಕೆ ಸುಂದರಿಯಲ್ಲದಿದ್ದರೂ ಅವಳ ಸ್ವರ ಬಹಳ ಇಂಪು, ಪ್ರಾರ್ಥನೆಯ ಸಮಯದಲ್ಲಿ ಅವಳು ಹಾಡುವುದನ್ನು ಕೇಳುವಾಗ ಪ್ರಪಂಚವೇ ಮರೆತು ಹೋಗುತ್ತಿತ್ತು. ಸಂಗೀತದ ಸಮಯ (ಪೀರಿಯಡ್) ದಲ್ಲಂತೂ ಅವಳು ಹಾಡುವುದನ್ನು ಕೇಳುವುದಕ್ಕಾಗಿ ಜ್ವರಬಂದ ಹುಡುಗಿಯರು ಸಹ ಹಾಜರಾಗುತ್ತಿದ್ದರು. ಅಷ್ಟು ಇಂಪು ಅವಳ ಸ್ವರ. ಲಿನ್ನಿ ಯಾವಾಗಲೂ ನಗುತ್ತಲೇ ಇರುವಳು. ಅವಳಿಗೆ ಸಿಟ್ಟು ಬಂದುದನ್ನಾಗಲಿ ಅವಳತ್ತುದನ್ನಾಗಲಿ ನಾವಾರೂ ನೋಡಿರಲಿಲ್ಲ. ಯಾವಾಗಲೂ ಏನಾದರೂ ತಂಟೆ (Mischief ) ಯನ್ನು ಮಾಡುತ್ತಿರುವುದು ಅವಳ ಸ್ವಭಾವ. ಒಂದೇ ಒಂದು ನಿಮಿಷವಾದರೂ ಅವಳು ಸುಮ್ಮನೆ ಕೂರುವುದು ಅಪರೂಪ.

ಅವಳು ನನ್ನ ರೂಮ್ ಮೇಟ್ (Room Mate ), ಒಳಗೆ ಬಂದು ನಾನು ಮಲಗಿದುದನ್ನು ನೋಡಿ ‘ಏನು ಸೀತಾ, ಸೊಂಟ ಮುರಿದು ಹೋಗಿದೆಯೆ! ಬಿದ್ದುಕೊಂಡಿರುವುದೇಕೆ?’ ಎಂದು ಕೇಳಿದಳು. ಅವಳ ಮಾತು ಕೇಳಿ ನಗು ಬಂತು. ಕಣ್ಣುಗಳನ್ನೊರಸಿಕೊಂಡು ಎದ್ದು ಕೂತೆ. ಅವಳೂ ಬಂದು ನನ್ನ ಹತ್ತಿರ ಕೂತು ‘ಊರಿಂದ ಕಾಗದ ಬಂತೆ?’ ಎಂದು ಕೇಳಿದಳು. ಮೇಜಿನಮೇಲಿದ್ದ ಅಣ್ಣನ ಕಾಗದವನ್ನು ತೆಗೆದು ಅವಳಿಗೆ ಕೊಟ್ಟೆ. ಓದಿ ನೋಡಿ ‘ನಮ್ಮನೆಗೆ ಬಂದುಬಿಡು ಸೀತಾ, ಇನ್ನೊಂದು ಸಾರಿ ಬರುತ್ತೇನೆ, ಮತ್ತೊಂದು ಸಾರಿ ಬರುತ್ತೇನೆ ಎಂದು ಸುಳ್ಳು ನೆವನಗಳನ್ನು ಹೇಳುತ್ತಿದ್ದೆ. ಈ ರಜೆಯಲ್ಲಿ ಹೇಗಿದ್ದರೂ ಊರಿಗೆ ಹೋಗುವಂತಿಲ್ಲ, ಬಂದುಬಿಡು. ಇಲ್ಲವೆಂದರೆ ನಿನ್ನೊಡನಿನ್ನು ಮಾತಾಡುವುದಿಲ್ಲ’ ಎಂದಳು. ಎಲ್ಲರೂ ಹೋದ ಮೇಲೆ ನಾನೊಬ್ಬಳೇ ಇರಬೇಕಲ್ಲಾ ಎಂದು ಬಹಳ ಬೇಸರವಾಗಿತ್ತು. ಲಿನ್ನಿಯೂ ಬಹಳ ದಿನಗಳಿಂದ ತನ್ನ ಮನೆಗೆ ಬರಬೇಕೆಂದು ಕರೆಯುತ್ತಿದ್ದಳು. ಒಬ್ಬಳೇ ಇರುವುದಕ್ಕಿಂತ ಲಿನ್ನಿಯೊಡನೆ ಹೋಗುವದೆ ಲೇಸೆಂದು ‘ಆಗಲಿ’ ಎಂದೆ. ಅವಳಿಗೆ ಬಹಳ ಸಂತೋಷವಾಯಿತು. ಎಲ್ಲ ಹುಡುಗಿಯರೂ ಅವಳಿಗೆ ಸ್ನೇಹಿತರಾಗಿದ್ದರೂ ನಾನೆಂದರೆ ಅವಳಿಗೆ ಹೆಚ್ಚಿನ ಪ್ರೀತಿ, ನನಗಿಂತಲೂ ಅವಳು ಒಂದು ವರ್ಷ ಹಿರಿಯಳು. ದೊಡ್ಡ ಹುಡುಗಿಯರು ನನ್ನನ್ನು ಕೀಟಲೆಮಾಡುವಾಗ ನನ್ನ ಸಹಾಯಕ್ಕೆ ಯಾವಾಗಲೂ ಲಿನ್ನಿ ಬರುತ್ತಿದ್ದಳು. ಲಿನ್ನಿ ನನ್ನ ಪಕ್ಷವೆಂದು ತಿಳಿದ ಕೂಡಲೇ ಬೇರೆಯವರು ನನ್ನ ತಂಟೆಗೆ ಬರುವುದು ಕಮ್ಮಿಯಾಗಿತ್ತು. ಮೊದಲು ಮನೆಯವರನ್ನು ಬಿಟ್ಟು ಬಂದಾಗ ಉಂಟಾದ ಬೇಸರವು ಲಿನ್ನಿಯ ಸಹವಾಸದಿಂದ ಬಹಳಮಟ್ಟಿಗೆ ಕಮ್ಮಿಯಾಗಿತ್ತು. ದಿನಗಳು ಕಳೆದಂತೆ ನನಗವಳು ಒಡಹುಟ್ಟಿದ ಅಕ್ಕನಿಗಿಂತಲೂ ಆತ್ಮೀಯಳಾಗಿಬಿಟ್ಟಿದ್ದಳು. ಏನಾದರೂ ನಾನವಳಿಗೆ ಹೇಳದಿರುತ್ತಿರಲಿಲ್ಲ. ಕಳೆದ ರಜೆಯಲ್ಲಿ ನಮ್ಮ ಮನೆಗೆ ಬಂದು ಅಮ್ಮನ ಒಲುಮೆಯನ್ನೂ ಅಣ್ಣನ ಆದರವನ್ನೂ ಮೋಹನನ ಪ್ರೀತಿಯನ್ನೂ ಅಪಹರಿಸಿಬಿಟ್ಟಿದ್ದಳು. ಯಾರಾದರೂ ಸರಿ, ಲಿನ್ನಿಯನ್ನು ಪ್ರೀತಿಸದಿರುವುದಕ್ಕಾಗುತ್ತಿರಲಿಲ್ಲ. ಎಲ್ಲರನ್ನೂ ಒಲಿಸಿಕೊಳ್ಳುವಂಥ ಸುಂದರ ಗುಣಗಳು ನನ್ನ ಲಿನ್ನಿಯಲ್ಲಿದ್ದವು. ಆದುದರಿಂದಲೇ ಲಿನ್ನಿ ಪಾಠ ಕಲಿಯದೇ ತಮಾಷೆಯಲ್ಲೇ ಕಾಲ ಕಳೆದಾಗ ಶಿಕ್ಷೆಯನ್ನು ವಿಧಿಸಬೇಕೆಂದಿದ್ದ ಊಪಾಧ್ಯಾಯಿನಿ (ಮದರ್) ಅವಳ ಮುಖ ನೋಡಿ ಶಿಕ್ಷೆ ಮಾಡಲು ಮನವೊಪ್ಪದೆ ಎಷ್ಟೋ ಸಾರಿ ಅವಳನ್ನು ಕ್ಷಮಿಸಿಬಿಟ್ಟಿದ್ದರು.

– ೨ –
ಲಿನ್ನಿ ಊರಿಗೆ ಬರುತ್ತೇನೆಂದು ಬರೆದುದಕ್ಕಿಂತಲೂ ಒಂದು ದಿನ ಮುಂದಾಗಿ ನಾವು ಹೊರಟೆವು. ನಾವು ಆದಿನ ಬರುವುದು ಅವರ ಮನೆಯವರಿಗೆ ತಿಳಿದಿರಲಿಲ್ಲವಾದ್ದರಿಂದ ಸ್ಟೇಶನ್‌ದಲ್ಲಿ ನಾವು ರೈಲಿನಿಂದಿಳಿಯುವಾಗ ನಮ್ಮನ್ನು ಕರೆದುಕೊಂಡು ಹೋಗುವುದಕ್ಕೆ ಯಾರೂ ಬಂದಿರಲಿಲ್ಲ. ಸ್ಟೇಶನ್‌ದಿಂದ ಲಿನ್ನಿಯ ಮನೆಗೆ ಮೂರು ಮೈಲಿ ದೂರ, ಕಾನ್ವೆಂಟಿನಲ್ಲಿ ಜೈಲಿನಲ್ಲಿದ್ದವರಂತೆ ಇದ್ದವರಿಗೆ ಅನಾಯಾಸವಾಗಿ ಮೂರು ಮೈಲು ನಡೆಯುವುದಕ್ಕೆ ಅದೊಂದು ಸೌಭಾಗ್ಯದಂತೆ. ಲಿನ್ನಿಯ ಪರಿಚಯದವರು ಸ್ಟೇಶನ್ ಮಾಸ್ಟರ್. ಅವರು ಕಾರು ಮಾಡಿ ಕೊಡುತ್ತೇನೆಂದರೂ ಬೇಡವೆಂದು ಹಾಸಿಗೆ ಪೆಟ್ಟಿಗೆಗಳನ್ನವರ ಸ್ವಾಧೀನಕ್ಕೆ ಕೊಟ್ಟು ಹೊರಟೆವು. ಕಾಡುಗಳ ನಡುವಿನಿಂದ, ತೋಟಗಳ ಮಧ್ಯದಿಂದ ತೋಡುಗಳನ್ನು ದಾಟಿಕೊಂಡು ಓಡುತ್ತಾ ಕೂರುತ್ತಾ, ಕಂಡ ಕಂಡ ಕಾಡುಹೂಗಳನ್ನು ಕೀಳುತ್ತಾ, ಹೇಗೆ ದಾರಿ ಮುಗಿಯಿತೆಂಬುದೇ ತಿಳಿಯದಷ್ಟು ಬೇಗ ಲಿನ್ನಿಯ ಮನೆಯ ಹತ್ತಿರ ತಲುಪಿದೆವು. ಆಗ ಬೆಳಗಿನ ಒಂಬತ್ತು ಗಂಟೆಯಾಗಿತ್ತು. ಬಿಸಿಲಿನ್ನೂ ಹೆಚ್ಚಾಗಿರಲಿಲ್ಲ. ಅವರ ಮನೆ ಎತ್ತರವಾದ ಒಂದು ಗುಡ್ಡದ ಮೇಲಿತ್ತು. ಮನೆಗೆ ಹೋಗಬೇಕಾದರೆ ಮರಗಳ ಗುಂಪೊಂದನ್ನು ದಾಟಿ ಹೂವಿನ ತೋಟದ ನಡುವಿನಿಂನ ಹೋಗಬೇಕಾಗಿತ್ತು. ಮರಗಳ ಹತ್ತಿರ ಬಂದಿದ್ದೆವು. ಒಂದು ಮರದಡಿಯಲ್ಲಿ ಬಿದ್ದಿದ್ದ ಮರದ ಕುಂಟೆಯೊಂದರ ಮೇಲೆ ಯಾರೋ ಒಬ್ಬನು ಕೂತು Fitzgerald ನ ‘ಉಮರ್ ಖಯ್ಯಾಮ್’ ಗಟ್ಟಿಯಾಗಿ ಓದುತ್ತಿದ್ದನು. ರಸ್ತೆಯ ಕಡೆ ಬೆನ್ನು ಮಾಡಿ ಕೂತಿದ್ದುದರಿಂದ ಅವನ ಮುಖ ನನಗೆ ಕಾಣಿಸುತ್ತಿರಲಿಲ್ಲ. ಅವನನ್ನು ನೋಡಿ ಲಿನ್ನಿ ಶಬ್ದ ಮಾಡದಂತೆ ನನಗೆ ಸಂಜ್ಞೆ ಮಾಡಿ, ಮೆಲ್ಲ ಮೆಲ್ಲನೆ ಹಿಂದಿನಿಂದ ಹೋಗಿ ಅವನ ಕಣ್ಣುಗಳನ್ನು ಮುಚ್ಚಿದಳು. ಕೂತಿದ್ದಾತನು ಒಮ್ಮೆ ಫಕ್ಕನೆ ಬೆಚ್ಚಿಬಿದ್ದು ಕಣ್ಣುಗಳನ್ನು ಮುಚ್ಚಿದ್ದ ಲಿನ್ನಿಯ ಕೈಗಳನ್ನು ಹಿಡಿದು ನೋಡಿ ಬಹು ಮೆಲ್ಲನೆ ‘ವಸಂತ’ ಎಂದನು. ನಗುತ್ತಾ ಲಿನ್ನಿ ಅವನ ಕಣ್ಣು ಬಿಟ್ಟು ‘ನಾನೆಂದು ಹೇಗೆ ತಿಳಿಯಿತು ರಾಮು?’ ಎಂದಳು.

‘ಪಾಪ, ನಿನ್ನ ಕೈಗಳ ಪರಿಚಯವೇ ನನಗೆ ಇಲ್ಲ ಅಲ್ಲವೇ?’ ಎಂದವನು ನಕ್ಕು ‘ಇದೇನು ವಸಂತ, ನಾಳೆ ಬರುವುದೆಂದು ಸುಳ್ಳೇಕೆ ಬರೆದೆ?’ ಎಂದು ಕೇಳಿದ.

‘ನೋಡಿದೊಡನೆಯೇ ಸುರುಮಾಡಿದೆಯಲ್ಲ ಸುಳ್ಳು ಹೇಳುವವಳು ಎಂದು ಜಗಳಕ್ಕೆ? ನಾವು ಊಹಿಸಿದುದಕ್ಕಿಂತಲೂ ಒಂದು ದಿನ ಮುಂದಾಗಿ ರಜ ಸಿಕ್ಕಿತು. ಇನ್ನೊಂದು ದಿನ ತಡೆದಿದ್ದರೆ ನಿನ್ನನ್ನು ಈಗ ನೋಡಲಾಗುತ್ತಿತ್ತೇ?……’

ಲಿನ್ನಿ ಮಾತಿನ ಸಂಭ್ರಮದಲ್ಲಿ ನನ್ನನ್ನು ಮರೆತಿದ್ದಳು. ಅವರಿಬ್ಬರು ಮಾತನಾಡುವಾಗ ಮಧ್ಯ ಹೋಗುವುದು ನನಗೂ ಸರಿಯಾಗಿ ತೋರಲಿಲ್ಲ. ಅವರ ಕಡೆ ಬೆನ್ನು ಹಾಕಿ ನಿಂತು ಬಹು ದೂರದವರೆಗೂ ಮರಗಳ ಸಂದಿನೊಳಗಿಂದ ಹರಿದುಹೋಗುತ್ತಿದ್ದಂತೆ ಕಾಣಿಸುತ್ತಿದ್ದ ರಸ್ತೆಯನ್ನು ನೋಡತೊಡಗಿದೆ. ಕಣ್ಣುಗಳು ರಸ್ತೆಯನ್ನು ನೋಡುತ್ತಿದ್ದರೂ ಮನಸ್ಸು ಕೇಳುತ್ತಿತ್ತು: ‘ಈ ರಾಮು ಯಾರು! ಲಿನ್ನಿ ನನಗಿವನ ಸುದ್ದಿಯನ್ನು ಇಂದಿನವರೆಗೂ ಹೇಳಲಿಲ್ಲವೇಕೆ?’ ಎಂದು ಮುಂತಾಗಿ, ಎಷ್ಟು ಹೊತ್ತು ಹೇಗೆ ನಿಂತಿದ್ದೆನೋ ತಿಳಿಯದು. ನಾಯಿಯೊಂದು ಬೊಗಳುತ್ತಾ ನನ್ನ ಕಡೆ ಓಡಿಬರುವುದನ್ನು ನೋಡಿ ಭಯದಿಂದ ‘ಲಿನ್ನೀ’ ಎಂದು ಕಿರುಚಿಕೊಂಡೆ. ಲಿನ್ನಿ ಒಬ್ಬಳೇ ಎಂದಿದ್ದ ರಾಮು ನನ್ನ ಕೂಗು ಕೇಳಿ ತಿರುಗಿ ನೋಡಿದ. ಮಾತಿನಲ್ಲಿ ಮುಳುಗಿದ್ದ ಲಿನ್ನಿಗೂ ನಾನು ಇದ್ದೇನೆಂಬ ಸ್ಮೃತಿಯುಂಟಾಯಿತು. ‘ಟೆಡ್ಡಿ-ಟೆಡ್ಡಿ’ ಎಂದು ನಾಯಿಯನ್ನು ಹತ್ತಿರ ಕರೆದು ತಲೆ ಸವರುತ್ತಾ ‘ರಾಮು, ನನ್ನ ಸ್ನೇಹಿತೆ ಸೀತೆ ಇವಳು’ ಎಂದು ನನ್ನ ಕಡೆ ತಿರುಗಿ – ಸೀತಾ, ರಾಮು ನಿನ್ನಂತೆಯೇ ‘ಉಮರ್ ಖಯ್ಯಾಮ್’ ಮತ್ತು ‘ಕೌಸಲ್ಯಾನಂದನ’ ನ ಕತೆಗಳನ್ನೋದುವ ಹುಚ್ಚರಲ್ಲೊಬ್ಬ ಎಂದಳು. ‘ಕೌಸಲ್ಯಾನಂದನ’ನ ಕತೆಗಳೂ ಉಮರ್‌ಖಯ್ಯಾಮನ ಪದ್ಯಗಳೂ ನನ್ನ ಮೆಚ್ಚಿಕೆಯವು. ರಾಮುವೂ ಅವನ್ನು ಮೆಚ್ಚಿದವನೆಂದು ತಿಳಿದು ‘ನನಗೂ ಅವುಗಳೆಂದರೆ ಬಹಳ ಪ್ರೀತಿ’ ಎಂದೆ. ಆತ ಮುಗಳ್ನಗೆ ನಕ್ಕು ‘ವಸಂತಗೆ ನನ್ನ ಅವುಗಳ ಮೇಲಿನ ಪ್ರೀತಿ, ಹುಚ್ಚೆಂದು ಚೇಷ್ಟೆ ಮಾಡುವ ಸಾಧನ. ಎಡೆ ಸಿಕ್ಕಿದಾಗಲೆಲ್ಲಾ ನನ್ನನ್ನು ಹುಚ್ಚನೆಂದೆನ್ನುವ ಸುಸಂದರ್ಭವನ್ನು ಅವಳು ಎಂದೂ ಕಳೆದುಕೊಳ್ಳುವುದಿಲ್ಲ’ ಎಂದ. ‘ನೀವಿಬ್ಬರು ಹುಚ್ಚರೂ ಮಾತಿಗಾರಂಭಿಸಿದರೆ ಕತ್ತಲಾದರೂ ಮುಗಿಯುವಂತಿಲ್ಲ, ಒಳಗೆ ಹೋಗೋಣ’ ಎಂದು ಲಿನ್ನಿ ಹೊರಟಳು. ರಾಮುವೂ ಬಲು ಮೆಲ್ಲಗೆ ಹತ್ತಿರದಲ್ಲಿದ್ದ ದೊಣ್ಣೆಯೊಂದರ ಸಹಾಯದಿಂದ ಎದ್ದು ನಿಂತ. ನನ್ನ ಆಶ್ಚರ್ಯದ ಮೇರೆ ಮೀರಿತು. ಅವನ ಒಂದು ಕಾಲು ಕುಂಟು!

– ೩ –
ರಾಮು ಲಿನ್ನಿಯ ಸೋದರತ್ತೆಯ ಮಗ. ಚಿಕ್ಕಂದಿನಲ್ಲಿಯೇ ತಂದೆತಾಯಿಯರನ್ನು ಕಳೆದುಕೊಂಡಿದ್ದ ಅವನನ್ನು ಲಿನ್ನಿಯ ತಾಯಿ ತಂದೆಯರೇ ಸಾಕಿದ್ದರು. ಅದಕ್ಕೆ ಅವರಿಬ್ಬರೊಳಗೆ ಅಷ್ಟೊಂದು ಸಲಿಗೆ. ಸಣ್ಣ ಪ್ರಾಯದಿಂದಲೇ ರಾಮುವಿಗೆ ವಸಂತನನ್ನು ಕೊಡುವುದು ನಿಶ್ಚಯವಾದ ವಿಷಯ. ಆದರೆ ರಾಮು I.C. S. ಪರೀಕ್ಷೆಗೆ ಹೋಗಿದ್ದಾಗ ಕುದುರೆಯಿಂದ ಬಿದ್ದು ಒಂದು ಕಾಲು ಕುಂಟಾದಂದಿನಿಂದ ಅವಳ ತಂದೆತಾಯಿಯರು ಮಗಳನ್ನವನಿಗೆ ಕೊಡಲು ಹಿಂಜರಿಯುತ್ತಿದ್ದರು. ಲಿನ್ನಿ ಮಾತ್ರ ರಾಮುವನ್ನು ಮದುವೆಯಾಗದಿದ್ದರೆ ಮದುವೆಯೇ ಬೇಡ ಎಂದು ದೃಢವಾಗಿಯೇ ಹೇಳಿದ್ದಳು. ಆದರೂ ಅವಳ ತಂದೆತಾಯಿಯರು ಕುಂಟನಿಗೆ ಮಗಳನ್ನು ಕೊಡಲು ಹಿಂದೆಮುಂದೆ ನೋಡುತ್ತಿದ್ದರು. ಅದರಿಂದಲೇ ಎರಡುವರುಷಗಳ ಮೊದಲೇ ಆಗಬೇಕಾಗಿದ್ದ ಲಿನ್ನಿಯ ಮದುವೆ ಇನ್ನೂ ಆಗಿರಲಿಲ್ಲ. ರಾಮು ಕುಂಟನಾದಂದಿನಿಂದ ಅವಳನ್ನು ಮದುವೆಯಾಗಲು ಸಂಕೋಚಪಡುತ್ತಿದ್ದ. ಕುಂಟನಾದ ತನ್ನನ್ನು ಲಿನ್ನಿ ಕರುಣೆಗಾಗಿ ಮದುವೆಯಾಗಬಯಸುವಳೆಂಬ ನಂಬಿಕೆಯಿಂದ ಅವನಿಗೊಂದು ಹುಚ್ಚು-ತಾನು ಜೀವಿಸಲೇ ಯೋಗ್ಯನಲ್ಲವೆಂದು, ಲಿನ್ನಿಯನ್ನವನು ಪ್ರೀತಿಸುತ್ತಿದ್ದರೂ ತನ್ನ ವ್ಯವಹಾರಗಳಿಂದ ಎಂದೂ ಆ ಪ್ರೀತಿಯನ್ನು ತೋರಗೊಡುತ್ತಿರಲಿಲ್ಲ. ಅವಳು ಅವನೊಡನೆ ಕೂತು ಮಾತಿಗಾರಂಭಿಸಿದರೆ ಅವಳಿಗೆ ನೋವಾಗುವಂತಹ ಮಾತುಗಳನ್ನಾಡಿ ನೋಯಿಸುತ್ತಿದ್ದ, ಹಾಗಾದರೂ ಲಿನ್ನಿ ತನ್ನನ್ನು ಪ್ರೀತಿಸದಿರಲೆಂದು. ಪಾಪ, ಲಿನ್ನಿ ಅವನ ಕಠೋರವ್ಯವಹಾರದಿಂದ ಬಹಳ ದುಃಖಿತಳಾಗುತ್ತಿದ್ದಳು. ಯಾವಾಗಲೂ ನಗು ತುಂಬಿ ತುಳುಕುತ್ತಿದ್ದ ಅವಳ ಕಣ್ಣುಗಳು ಕಣ್ಣೀರುತುಂಬಿರುವುದನ್ನು ನೋಡುವಾಗ ‘ತುಂಟಾಟಿಕೆಯು ಲಿನ್ನಿಯ ಹೃದಯಾಂತರಾಳದಲ್ಲಿ ಇಷ್ಟೊಂದು ಪ್ರೇಮ, ಇಷ್ಟೊಂದು ಗಂಭೀರತೆ ಅಡಗಿರಲು ಸ್ಥಳವೆಲ್ಲಿ?’ ಎಂದೆನಿಸುತ್ತಿತ್ತು ನನಗೆ. ನಗುವಿನಲ್ಲೇ ಜೀವನವನ್ನು ತೇಲಿಸುತ್ತಿದ್ದ ಲಿನ್ನಿಯ ಮುಖವನ್ನು ವಿಷಾದ ಆವರಿಸಿದಾಗಲೆಲ್ಲ ರಾಮುವಿನ ಮೇಲೆ ಬಹಳ ಕೋಪ ಬರುತ್ತಿತ್ತು. ಹಾಗೇಕೆ ಮಾಡುತ್ತಿರುವೆ ಎಂದವನನ್ನು ಕೇಳಲೇ ಎಂದು ಎಷ್ಟೋ ಸಾರೆ ಯೋಚಿಸಿದೆ. ಆದರೆ ಈ ರೀತಿ ನಾನು ಕೇಳಿದುದು ಲಿನ್ನಿಗೆ ತಿಳಿದರೆ…. ಪರಿಣಾಮವನ್ನು ನೆನಸಿ ಸುಮ್ಮನಾಗುತ್ತಿದ್ದೆ.

ಅರ್ಧೋದಯದ ದಿನ ಬಂತು. ಮುಂದಿನ ದಿನವೇ ನಿಶ್ಚಯವಾದಂತೆ ಎಲ್ಲರೂ ಹೊಳೆಗೆ ಸ್ನಾನಕ್ಕೆ ಹೊರಟೆವು. ಹೊಳೆಯು ದೂರವಾದುದರಿಂದ ನಡೆದು ಹೋದರೆ ಸ್ನಾನ ತೀರಿಸಿ ಮನೆಗೆ ಹಿಂತಿರುಗುವುದು ತಡವಾಗುವುದೆಂದು ಕಾರಿನಲ್ಲೇ ಹೋಗಿ ಬರುವುದೆಂದು ನಿಶ್ಚಯವಾಗಿದ್ದುದರಿಂದ ರಾಮುವೂ ಬರಬಹುದಾಗಿತ್ತು. ಲಿನ್ನಿ, ಅವಳ ತಾಯಿ ತಂದೆ, ನಾನು ಎಲ್ಲರೂ ಅವನನ್ನು ಕರೆದುಕೊಂಡು ಹೋಗಬೇಕೆಂದು ಬಹಳ ಪ್ರಯತ್ನಿಸಿದೆವು. ‘ನಾನು ಬರುವುದಿಲ್ಲ’ ಎಂದು ಎಲ್ಲರಿಗೂ ಒಂದೇ ಅವನ ಪ್ರತ್ಯುತ್ತರ, ಹಿಂದಿನ ದಿನ ರಾಮು ಬರಬಹುದೆಂದು ನಂಬಿಕೆಯಿಂದ ಆನಂದದಿಂದ ಹಿಗ್ಗುತ್ತಿದ್ದ ಲಿನ್ನಿಗೆ ಬಹಳ ಬೇಸರವಾಯಿತು. ಅವಳ ಮನೋಭಾವವನ್ನರಿತು ನನಗೂ ರಾಮುವಿನ ಮೇಲೆ ತಡೆಯಲಾರದಷ್ಟು ಕೋಪಬಂತು. ‘ಈ ಆತ್ಮಾಭಿಮಾನಿ ಕುಂಟನಲ್ಲೇನು ಗುಣವನ್ನು ಕಂಡು ಲಿನ್ನಿ ಇವನನ್ನಿಷ್ಟು ಪ್ರೀತಿಸುವಳು!’ ಎಂದೆನಿಸಿತು. ಯೋಚಿಸಿದಷ್ಟು ನನ್ನ ಲಿನ್ನಿಗೆ ರಾಮು ಖಂಡಿತವಾಗಿಯೂ ಯೋಗ್ಯನಾದ ವರನಲ್ಲೆಂಬುದು ದೃಢವಾಗುತ್ತಿತ್ತು. ತಂದೆ ತಾಯಿಯರ ಮಾತು ಮೀರಿ ತನ್ನನ್ನು ಪ್ರೀತಿಸುವ ಲಿನ್ನಿಯನ್ನು ರಾಮು ತಿರಸ್ಕರಿಸಿದರೂ ಲಿನ್ನಿ ಸಹಿಸಿಕೊಂಡಿರುವುದನ್ನು ನೋಡುವಾಗ ನನಗೆ ದೃಢವಾಯಿತು: ನಿಜವಾಗಿಯೂ ‘ಪ್ರೇಮ ಕುರುಡೆ’ಂದು.

ಲಿನ್ನಿಗೆ ಈಜುವುದೆಂದರೆ ಬಹಳ ಇಷ್ಟ. ಶಾಲೆಯಿಂದ ವನಭೋಜನ (Picnic) ಕ್ಕೆಂದು ಹೊಳೆಯ ತೀರಕ್ಕೆ ಹೋದಾಗಲೆಲ್ಲ ಅವಳನ್ನು ಹೊಳೆಯಿಂದ ಹೊರಕ್ಕೆ ಬರುವಂತೆ ಮಾಡಬೇಕಾದರೆ ಉಪಾಧ್ಯಾಯಿನಿಯರಿಗೆಲ್ಲ ಸಾಕಾಗಿ ಹೋಗುತ್ತಿತ್ತು. ಮನೆಯಿಂದ ಹೊರಡುವಾಗಿದ್ದ ಬೇಸರವನ್ನೆಲ್ಲ ಲಿನ್ನಿ ಹೊಳೆಯನ್ನು ನೋಡುವಾಗ ಮರೆಯುವಳೆಂದಿದ್ದೆ. ನಾನೆಣಿಸಿದಂತೆ ಹೊಳೆಗೆ ತಲುಪಿದ ಮೇಲೂ ಲಿನ್ನಿಗೆ ಯಾವಾಗಲಿನಂತೆ ಉತ್ಸಾಹ ಉಂಟಾಗಲಿಲ್ಲ. ನೀರನ್ನು ನೋಡಿದರೆ ಮೀನಿನಂತೆ ಈಜಾಡುತಿದ್ದವಳು ಐದೇ ನಿಮಿಷಗಳಲ್ಲಿ ಸ್ನಾನವನ್ನು ಪೂರೈಸಿ ದಡಕ್ಕೆ ಬಂದು ಬಿಟ್ಟಳು. ಆ ಕುಂಟನ ಆತ್ಮಾಭಿಮಾನಕ್ಕೆ ಲಿನ್ನಿ ಬಲಿಯಾಗುವುದನ್ನು ನೋಡಿ ನನಗೆ ಸಹಿಸಲಾಗಲಿಲ್ಲ. ಮನೆಗೆ ತಲುಪಿದೊಡನೆಯೆ ಅವನಿಗೆ ಚೆನ್ನಾಗಿ ಅಂದುಬಿಡಬೇಕೆಂದು ಖಂಡಿತಮಾಡಿಕೊಂಡೆ.

– ೪ –
ಲಿನ್ನಿಗಾಗಿ, ಅವಳ ಸುಖಕ್ಕಾಗಿ, ಅವಳ ಮೇಲಿನ ನನ್ನ ಪ್ರೇಮಕ್ಕಾಗಿ ನಾನು ಮಾಡಿದ ನಿಶ್ಚಯದ ಪರಿಣಾಮವು ನನಗೆ ಮೊದಲೇ ತಿಳಿದಿದ್ದರೆ ನಾನೆಂದೂ ರಾಮುವನ್ನು ದೂಷಿಸುವ ಪ್ರಯತ್ನಕ್ಕೆ ಕೈಹಾಕುತ್ತಿರಲಿಲ್ಲ. ನನಗೇನು ಗೊತ್ತು, ನನ್ನ ಮಾತುಗಳ ಫಲಿತಾಂಶವಾಗಿ ರಾಮು ದೇಶಾಂತರಕ್ಕೆ ಹೊರಟು ಹೋಗುವನೆಂದು! ಲಿನ್ನಿಯ ಒಳ್ಳೆಯದಕ್ಕಾಗಿ ಮಾಡಿದ ಯತ್ನದಿಂದ ಅವಳಿಗಿದ್ದ ಕೊಂಚ ಸುಖವೂ ಮಣ್ಣು ಪಾಲಾಗಬಹುದೆಂದು ನನಗೆ ಮೊದಲೇ ಗೊತ್ತಾಗಿದ್ದರೆ, ನಾನೆಂದೂ ರಾಮುವಿಗೆ ನಿಷ್ಠುರದ ನುಡಿಗಳನ್ನಾಡುತ್ತಿರಲಿಲ್ಲ. ಆದರೆ ಮುಂದಾಗುವ ವಿಷಯಗಳು ತಿಳಿಯುವುದಾದರೆ ಲೋಕದಲ್ಲಿ ಎಷ್ಟೋ ಬದಲಾವಣೆಗಳು ಬಹು ಸುಲಭವಾಗಿ ಆಗಿ ಹೋಗುತ್ತಲಿದ್ದವು. ಈಗೆಣಿಸುವಾಗ ನಾನು ರಾಮುವನ್ನು ನಿಂದಿಸಿದುದು ತಪ್ಪೆಂದು ತೋರಿದರೂ ಆಗ ನನಗೆ ಅದೇ ಸರಿಯೆಂದು ತೋರಿತ್ತು. ಆ ದಿನ ಲಿನ್ನಿಯ ಸುಖವನ್ನು ಕೋರಿ ನಾನಾಡಿದ ಕೆಲವು ಕ್ರೂರ ಶಬ್ದಗಳು ರಾಮುವನ್ನು ನಿಜವಾಗಿಯೂ ನೋಯಿಸುವಂತಹವುಗಳಾಗಿದ್ದವು. ಇಲ್ಲದಿದ್ದರೆ ರಾಮು-ಸರಳ ಮನಸ್ಸಿನ ರಾಮು-ಯಾರಿಗೂ ಹೇಳದೆ ಆ ರಾತ್ರಿ-ಅಮಾವಾಸ್ಯೆಯ ಕಗ್ಗತ್ತಲೆಯಲ್ಲಿ ಚಿಕ್ಕಂದಿನಿಂದಲೂ ಸಾಕಿ ಸಲಹಿದ ತಾಯಿತಂದೆಯರಿಗಿಂತಲೂ ಹೆಚ್ಚಾದ ಅತ್ತೆ ಮಾವಂದಿರ ಆಶ್ರಯವನ್ನು ಬಿಟ್ಟು ಹೊರಟು ಹೋಗುವಷ್ಟು ಕಠಿನ ಮನಸ್ಸಿನವನಾಗಿರಲಿಲ್ಲ.

ಲಿನ್ನಿಗೆ ಒಳ್ಳೆಯದನ್ನು ಮಾಡಲು ಯತ್ನಿಸಿದ ನಾನು ಕೆಡುಕನ್ನೇ ಮಾಡಿದಂತಾಯಿತು. ರಾಮು ಹೊರಟು ಹೋದುದರ ಕಾರಣವು ಯಾರಿಗೂ ತಿಳಿದಿರಲಿಲ್ಲ. ಹೇಳಲು ನನಗೂ ಧೈರ್ಯವಾಗಲಿಲ್ಲ. ಲಿನ್ನಿಯ ನಗುಮುಖವು ಬಾಡಿರುವುದನ್ನು ನೋಡುವಾಗಲೆಲ್ಲಾ ನನ್ನ ಹೃದಯಕ್ಕಿರಿದಂತಾಗುತ್ತಿತ್ತು. ಸ್ನೇಹಿತೆಯೆಂದು ಪ್ರೀತಿಯಿಂದ ತನ್ನ ಮನೆಗೆ ನನ್ನನ್ನು ಕರೆತಂದುದರ ಪರಿಣಾಮವು ಅವಳಿಗೆ ತಿಳಿದಿದ್ದರೇನೆನ್ನುತ್ತಿದ್ದಳೋ! ನೆನಿಸಿ, ಲಿನ್ನಿಯ ಸ್ನೇಹವನ್ನು ಕಳೆದುಕೊಳ್ಳುವ ಸಂಭವವನ್ನು ಯೋಚಿಸಿ ಹೃದಯ ನಡುಗುತ್ತಿತ್ತು. ನನ್ನಪರಾಧವನ್ನು ಒಪ್ಪಿ ಕೊಳ್ಳುವ ಸಾಹಸ ಹಿಮ್ಮೆಟ್ಟುತ್ತಿತ್ತು.

ರಜ ಕಳೆಯುವದಕ್ಕೆ ಇನ್ನೂ ಎರಡು ದಿನಗಳಿರುವಾಗಲೆ ಶಾಲೆಗೆ ಹಿಂತಿರುಗಿದೆವು. ಬೇರೆ ಯಾವ ಹುಡುಗಿಯರೂ ಬಂದಿರಲಿಲ್ಲ; ನಾವಿಬ್ಬರೇ, ಲಿನ್ನಿ ಯೊಡನೆ ಕಳೆಯುವ ಪ್ರತಿಯೊಂದು ನಿಮಿಷವೂ ನನಗೆ ಅತ್ಯ ಮೂಲ್ಯವಾಗಿದ್ದರೂ ನನ್ನ ತಿಳಿಗೇಡಿತನದಿಂದ ಅವಳ ಜೀವನದ ಬೆಳಕನ್ನು ನಂದಿಸಿದ ನನಗೆ ಅವಳ ಮುಖವನ್ನು ನೋಡಲು ಹೆದರಿಕೆಯಾಗುತ್ತಲಿತ್ತು. ರಜ ತೀರಿ ಹುಡುಗಿಯರೆಲ್ಲರೂ ಹಿಂತಿರುಗಿ ಬಂದಾಗ ಲಿನ್ನಿಯ ತುಂಟಾಟಿಕೆಯಿಲ್ಲದ ಹಾಸ್ಯರಹಿತ ಗಂಭೀರ ಮುಖ, ಇಳಿಸಿದ್ದ ಕಣ್ಣುಗಳು, ಏಕಾಂತವಾಗಿರಬೇಕೆನ್ನುವ ಇಚ್ಛೆ ಇವನ್ನೆಲ್ಲ ನೋಡಿ ಆಶ್ಚರ್ಯದಿಂದ ’ ಸೀತಾ, ಲಿನ್ನಿಗೆ ಏನಾಯ್ತು?’ ಎಂದು ನನ್ನೊಡನೆ ಕೇಳುತ್ತಿದ್ದರು. ನಾನೇನೆನ್ನಲಿ? ದಿನಗಳು ಕಳೆದಂತೆ ಲಿನ್ನಿ ಮೊದಲಿನ ಆಟ, ತಮಾಷೆ, ಹಾಸ್ಯ ಎಲ್ಲವನ್ನೂ ಬಿಟ್ಟು ಯಾವಾಗಲೂ ಓದುತ್ತಲೇ ಇರುವಳು. ಅವಳೀಗ ಉಪಾಧ್ಯಾಯಿನಿಯರ ಮೆಚ್ಚಿಕೆಯ ಶಿಷ್ಯೆ, ಕ್ಲಾಸಿನಲ್ಲಿ ಮೊದಲನೆಯವಳು. ರಜೆ ಬರುವುದಕ್ಕೆ ಮೊದಲಿನ ಲಿನ್ನಿ ಸಂಪೂರ್ಣವಾಗಿ ವ್ಯತ್ಯಾಸಹೊಂದಿದ್ದಳು. ಮೊದಲು ದೀಪ ಆರಿಸಿ ಮಲಗಿದ ಮೇಲೆ ಲಿನ್ನಿ ಏನಾದರೂ ಮಾತನಾಡುತ್ತಿರುವುದು ವಾಡಿಕೆ. ಆದರೀಗ ರೂಮಿಗೆ ಬಂದೊಡನೆಯೇ ಸುಮ್ಮನೆ ಮಲಗಿ ಬಿಡುತ್ತಿದ್ದಳು. ನಿದ್ರೆ ಬರುತ್ತಿರಲಿಲ್ಲವೆಂದು ನನಗೆ ಗೊತ್ತಿದ್ದರೂ ಮಾತಾಡಿಸುವುದಕ್ಕೆ ಮಾತ್ರ ಸಾಹಸ ಉಂಟಾಗುತ್ತಿರಲಿಲ್ಲ. ನಾವು ಒಂದೇ ರೂಮಿನಲ್ಲಿದ್ದರೂ ಕೊನೆಕೊನೆಗೆ ದಿವಸಕ್ಕೆ ಒಂದು ಮಾತು ಆಡುವುದು ಸಹ ಬಹಳ ಅಪರೂಪವಾಗಿ ಹೋಯ್ತು.

ಒಂದು ದಿನ ಎಂದಿನಂತೆ ದೀಪ ಆರಿಸಿ ಮಲಗಿದ್ದೆವು. ಇಬ್ಬರಿಗೂ ನಿದ್ರೆ ಬಂದಿರಲಿಲ್ಲ. ಲಿನ್ನಿ ‘ಸೀತಾ’ ಎಂದಳು. ನಾವು ಮಾತಾಡಿಕೊಳ್ಳದೆ ಎಷ್ಟೋ ದಿನಗಳಾಗಿದ್ದವು. ಲಿನ್ನಿ ‘ಸೀತಾ’ ಎಂದು ಕೂಗಿದುದು ಕೇಳಿ ಹಿಂದಿನ ದಿನಗಳು, ನಮ್ಮಿಬ್ಬರೊಳಗಿನ ಸ್ನೇಹ ಎಲ್ಲಾ ಜ್ಞಾಪಕವಾಗಿ ಅಳು ಬಂದು ಬಿಟ್ಟಿತು. ತಡೆಯಲು ಯತ್ನಿಸಿದರೂ ಆಗಲಿಲ್ಲ. ಬಿಕ್ಕಿ ಬಿಕ್ಕಿ ಅಳತೊಡಗಿದೆ. ಆದರೂ ತಪ್ಪೊಪ್ಪಿ ಕ್ಷಮೆ ಬೇಡಲು ಧೈರ್ಯವಾಗಲಿಲ್ಲ. ನಾನಳುವ ಶಬ್ದ ಕೇಳಿ ಲಿನ್ನಿ ಎದ್ದು ಬಂದು ನನ್ನ ಕೈಗಳನ್ನು ಹಿಡಿದು ‘ಸೀತಾ, ನನ್ನ ಸೀತಾ, ಕ್ಷಮಿಸು’ ಎಂದಳು.

‘ಕ್ಷಮಿಸು’! ನಾನು ಅವಳ ಕಾಲು ಹಿಡಿದು ಹೇಳಬೇಕಾದಮಾತದು. ಸರಳ ಮನಸ್ಸಿನ ಲಿನ್ನಿ ನನ್ನೊಡನೆ ಯಾವ ಅಪರಾಧದ ಸಲುವಾಗಿ ಕ್ಷಮೆ ಬೇಡಬೇಕು? ಅವಳು ಪುನಃ ಹೇಳತೊಡಗಿದಳು: ‘ನಾನು ನಿನ್ನೊಡನೆ ಮೊದಲಿನಂತೆ ಬಾಯಿ ಬಡಿಯದಿದ್ದರೂ ಮೊದಲಿಗಿಂತಲೂ ಹೆಚ್ಚಿನ ಗೆಳತಿ ನಿನೀಗ ಸೀತಾ, ನಿನಗೆ ನನ್ನ ಗೊತ್ತಿರುವಂತೆ ನನ್ನ ತಾಯಿಗೂ ಸಹ ಗೊತ್ತಿಲ್ಲ. ಸೀತಾ, ನನ್ನ ಈಗಿನ ವ್ಯವಹಾರದಿಂದ ನಿನಗೆ ಬೇಸರವಾಗಲು ಕಾರಣವಿದೆ. ಆದರೂ ನಿನೀಗ ಮೊದಲಿಗಿಂತಲೂ ನನಗೆ ಹತ್ತಿರ ವಾಗಿರುವಿ ಸೀತಾ ಸೀತಾ, ಸೀತಾ……’

ಲಿನ್ನಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಸಮಾಧಾನಪಡಿಸುವುದು ಹೇಗೆಂದು ತಿಳಿಯಲಿಲ್ಲ. ಅವಳನ್ನು ತಬ್ಬಿಕೊಂಡು ಹೆಗಲ ಮೇಲೆ ತಲೆಯಿರಿಸಿ ಮೌನವಾಗಿ ಕಣ್ಣೀರು ಸುರಿಸತೊಡಗಿದೆ.

– ೫ –
ಒಂದು ವರ್ಷ ಕಳೆದುಹೋಯಿತು. ನಮ್ಮ ಹೈಸ್ಕೂಲ್ ವಿದ್ಯಾಭ್ಯಾಸವೂ ಪೂರೈಸಿತ್ತು, ನನ್ನ ತಂದೆ ವಿದ್ಯಾಭ್ಯಾಸಕ್ಕೆ ಉತ್ತೇಜನ ಕೊಡುವವರಾದುದರಿಂದ ಕಾಲೇಜು ಶಿಕ್ಷಣಕ್ಕೆ ನನ್ನನ್ನು ಕಳುಹಿಸ ಬೇಕೆಂದು ನಿಶ್ಚಯಿಸಿದ್ದರು. ಲಿನ್ನಿಯೂ ಓದಲಿಚ್ಚಿಸಿದ್ದರೆ ಅವಳ ತಾಯಿ ತಂದೆಯರು ಅಡ್ಡಿಯಾಗುತ್ತಿರಲಿಲ್ಲ. ಆದರವಳು ಮನೆಯಲ್ಲೇ ಇರಲು ಬಯಸಿದಳು. ಒಂಬತ್ತು ವರ್ಷಗಳಿಂದ ಜೊತೆಯಾಗಿದ್ದ ನನಗೆ ಒಬ್ಬರನ್ನೊಬ್ಬರು ಅಗಲುವ ಸಮಯದಲ್ಲಿ ಬಹಳ ಕಷ್ಟವಾಯಿತು. ನನಗಂತೂ ಹೊರಡುವಾಗ ಅವಳ ಮುಂದಿನ ಜೀವನವನ್ನು ನೆನಸಿ ತಡೆಯಲಾರದಷ್ಟು ಸಂಕಟವಾಯಿತು. ಆದರೂ ರಾಮು ಮನೆಯಿಂದ ಹೊರಡಲು ಕಾರಣ ಹೇಳಲು ಮಾತ್ರ ಧೈರ್ಯವಾಗಲಿಲ್ಲ. ಮದರಾಸಿಗೆ ಹೋದ ಮೇಲೆ ಬರೆದು ಕ್ಷಮೆ ಬೇಡುವೆನೆಂದು ನಿಶ್ಚಯಿಸಿ ಕೊನೆಗೂ ಹೇಳದೆ ಹೊರಟು ಬಿಟ್ಟೆ. ನಾನು ಮದರಾಸಿಗೆ ಹೋದ ವರ್ಷವೇ ಅಣ್ಣನಿಗೂ ಅಲ್ಲಿಗೇ ವರ್ಗವಾದುದರಿಂದ ಹಾಸ್ಟೆಲ್ ವಾಸ ತಪ್ಪಿ ಹೋಯ್ತು. ಮನೆಯಿಂದಲೇ ಕಾಲೇಜಿಗೆ ಹೋಗುತ್ತಿದ್ದೆ. ನಮ್ಮ ಮನೆ ಮದರಾಸಿನಲ್ಲಾದ ಮೇಲೆ ಲಿನ್ನಿಗೆ ನಮ್ಮಲ್ಲಿಗೆ ಬಂದು ಕೆಲವು ದಿನ ಇದ್ದು ಹೋಗಬೇಕೆಂದು ಅನೇಕ ಕಾಗದಗಳನ್ನು ಬರೆದೆ. ಏನೇನೋ ನೆವನಗಳನ್ನು ಹೇಳಿ ಬರಲಾಗುವುದಿಲ್ಲವೆಂದು ಬರೆದಳು. ಅವಳೇ ಬಂದಾಗ ಎಲ್ಲವನ್ನೂ ಹೇಳುವೆನು ಎಂದು, ಇನ್ನೂ ರಾಮುವು ದೇಶಾಂತರವಾಸಿಯಾದುದರ ಕಾರಣವನ್ನು ಲಿನ್ನಿಗೆ ತಿಳಿಸಿಯೇ ಇರಲಿಲ್ಲ. ಅವಳು ಬರುವುದಿಲ್ಲ ಎಂದು ಬರೆದ ಮೇಲೆ ನಾನೇ ಅಲ್ಲಿಗೆ ಹೋಗುವೆನೆಂದು ನಿಶ್ಚಯಿಸಿಕೊಂಡೆ. ಆದರೆ ಆ ಸಾರಿಯ ರಜೆಯಲ್ಲಿ ಮೋಹನನಿಗೆ ಕಾಯಿಲೆಯಾದುದರಿಂದ ಹೋಗಲಾಗಲಿಲ್ಲ. ಮೋಹನನ ಕಾಯಿಲೆಯಿಂದ ನನ್ನ ಜೀವನವೇ ಪರಿವರ್ತನೆಯಾಯಿತು. ಅವನ ಕಾಯಿಲೆಯನ್ನು ನೋಡಲು ಬರುತ್ತಿದ್ದ ಡಾಕ್ಟರ್ ಅರುಣಾದೇವಿ ಕನ್ನಡ ನಾಡಿನ ಮಹಿಳೆ, ಮೋಹನನ ಕಾಯಿಲೆ ವಾಸಿಯಾಗುವುದರೊಳಗಾಗಿ ನಮಗಿಬ್ಬರಿಗೂ ಸ್ನೇಹವಾಗಿ ಬಿಟ್ಟಿತ್ತು. ಕೊನೆಗೆ ಅವಳ ಮಾತಿನ ಮೇಲೆ F, A ಆದ ಮೇಲೆ ಮೆಡಿಕಲ್ ಪರೀಕ್ಷೆಗೆ ಹೋಗ ಬೇಕೆಂದು ದೃಢಮಾಡಿಕೊಂಡೆ. ಅಮ್ಮನಾಗಲಿ, ಅಣ್ಣನಾಗಲಿ ವಿರೋಧಿಸಲಿಲ್ಲವಾದುದರಿಂದ ಎಂಟು ವರ್ಷಗಳಾಗುವಾಗ ನಾನು M. B, B. S. ಪರೀಕ್ಷೆಯಲ್ಲಿ ಪಾಸಾಗಿ ಡಾಕ್ಟರ್ ಆಗಿ ಬಿಟ್ಟೆ. ಆ ಎಂಟು ವರ್ಷಗಳೂ ಲಿನ್ನಿಗೆ ಕಾಗದಗಳನ್ನು ಬರೆಯುತ್ತಿದ್ದರೂ ಅವಳನ್ನು ನೋಡಲು ಸಾಧ್ಯವಾಗಿರಲಿಲ್ಲ. ಅವಳೂ ನಮ್ಮ ಮನೆಗೆ ಬಂದಿರಲಿಲ್ಲ. ಅವಳು ಬರೆಯುತ್ತಿದ್ದ ಕಾಗದಗಳಿಂದ ಮದುವೆಯಾಗುವುದೇ ಇಲ್ಲ ಎನ್ನುವುದು ಅವಳ ಅಭಿಪ್ರಾಯವೆಂದು ನನಗೆ ಗೊತ್ತಾಗಿತ್ತು. ಹಾಗಾಗುವುದಕ್ಕೆ ನಾನೇ ಕಾರಣಳಾದೆನಲ್ಲಾ ಎನ್ನುವುದು ಮಾತ್ರ ಮತ್ತೂ ನನ್ನ ಮನಸ್ಸಿನಲ್ಲಿ ಕೊರೆಯುತ್ತಿತ್ತು.

ಪರೀಕ್ಷೆಯ ಗಲಾಟೆ ಎಲ್ಲಾ ಮುಗಿದು ಬಿಡುವಾದ ಮೇಲೆ ಅವಳ ಮನೆಗೆ ಹೊರಟೆ. ಹಿಂದಿನ ಅದೇ ಸ್ಥಳ; ಅದೇ ದಾರಿ; ಅದೇ ಮನೆ. ಆದರೆ ಆ ಸಾರಿ ಹೋಗುವುದಕ್ಕೂ ಈ ಸಾರಿ ಹೋಗುವುದಕ್ಕೂ ಎಷ್ಟು ಅಂತರ! ಆ ಲಿನ್ನಿಗೂ ಈ ಲಿನ್ನಿಗೂ ಅದೆಷ್ಟೊಂದು ವ್ಯತ್ಯಾಸ! ಹಾಗಾಗುವುದಕ್ಕೆ ಕಾರಣ ನಾನು ಈ ಏಳು ವರ್ಷಗಳಲ್ಲಿ ಲಿನ್ನಿಯ ಜೀವನ ಸಂಪೂರ್ಣವಾಗಿ ವ್ಯತ್ಯಾಸ ಹೊಂದಿತ್ತು. ರಾಮನನ್ನು ಇನ್ನು ಕಾಣುವುದು ಅಸಾಧ್ಯವೆಂದು ಅವಳಿಗೆ ಗೊತ್ತಿತ್ತು. ಮೊದಲವಳ ಮುಖದಲ್ಲಿ ಅವನನ್ನು ಕಾಣಬಹುದೆಂದು ವಿಂಚುತ್ತಿದ್ದ ಆಸೆಯ ಸ್ಥಾನವನನ್ನೀ ಶಾಂತಿ ಆವರಿಸಿತ್ತು. ಆಗ ಸುಮ್ಮನೆ ಕೂತು ಯೋಚಿಸಿ ಚಿಂತಿಸುತ್ತಿದ್ದ ಲಿನ್ನಿ ಈಗ ಏನಾದರೂ ಕೆಲಸಗಳನ್ನು ಮಾಡುತ್ತ ಅವನನ್ನು ಮರೆಯಲು ಯತ್ನಿಸುತ್ತಿದ್ದಳು. ಕೆಲಸಗಳು ಮುಗಿದು ಬಿಡುವಾದಾಗ ಕೌಸಲ್ಯಾ ನಂದನನ ಕತೆಗಳನ್ನು ಓದುತ್ತಿದ್ದಳು. ಮೊದಲು ನಾನು ಅವುಗಳನ್ನು ಓದುವಾಗ ಹುಚ್ಚಿ ಎಂದು ನಗುತ್ತಲಿದ್ದ ಲಿನ್ನಿಗೆ ಈಗವುಗಳ ಮೇಲೆ ತುಂಬಾ ಆದರ ಉಂಟಾಗಿತ್ತು. ಕೇಳಿದರೆ ‘ಕೌಸಲ್ಯಾನಂದನನ ಕತೆಗಳನ್ನೋದಿದರೆ ಅದೊಂದು ತರದ ಶಾಂತಿ ದೊರೆಯುತ್ತದೆ ಸೀತಾ, ಬೇಸರವಾದಾಗಲೆಲ್ಲಾ ಅವುಗಳನ್ನೋದಿದರೆ ಸಮಾಧಾನವಾಗುತ್ತಿದೆ’ ಎನ್ನುತಿದ್ದಳು. ನಿಜವಾಗಿಯೂ ಅವನ ಪುಸ್ತಕಗಳಲ್ಲಿ ಆ ಶಕ್ತಿ ಇತ್ತು. ಹೊಸದಾಗಿ ಪ್ರಕಟವಾದ ಅವನ ವಸಂತಕುಸುಮಗಳೆ’ಂಬ ಪುಸ್ತಕವಂತೂ ಓದಿದವರು ಅವನನ್ನೆಂದೂ ಮರೆಯದಿರುವಂತೆ ಮಾಡುವ ಪುಸ್ತಕವಾಗಿತ್ತು.

ಮನೆಯಿಂದ ಹೊರಡುವಾಗಲೇ ದೃಢಮಾಡಿಕೊಂಡು ಬಂದಿದ್ದೆ, ಲಿನ್ನಿಗೆ ರಾಮು ಮನೆ ಬಿಡುವುದಕ್ಕೆ ಕಾರಣ ನಾನೆಂದು ಹೇಳಿಯೇ ತೀರ ಬೇಕೆಂದು. ಹಿಂತಿರುಗಲು ಒಂದು ದಿನ ಮೊದಲಿನ ರಾತ್ರಿ ಬೆಳುದಿಂಗಳಿನಲ್ಲಿ ಅಂಗಳದ ಕೊನೆಯಲ್ಲಿದ್ದ ಮಾವಿನ ಮರದಡಿಯಲ್ಲಿ ಕೂತಿದ್ದಾಗ ಎಲ್ಲಾ ಹೇಳಿ ಅವಳ ಕ್ಷಮೆ ಬೇಡಿದೆ.

‘ಸೀತಾ, ಆಗಿ ಹೋದುದಕ್ಕಾಗಿ ಚಿಂತಿಸಿ ಫಲವೇನು ಹೇಳು? ಕ್ಷಮಿಸೆನ್ನುವಿಯೇಕೆ? ನಿನಗೆ ಗೊತ್ತಿದೆ, ನನಗೆ ನಿನ್ನ ಮೇಲೆ ಕೋಪ ವಿಲ್ಲವೆಂದು, ಇನ್ನೆಂದೂ ಆ ವಿಷಯ ಎತ್ತಬೇಡ.’

‘ಲಿನ್ನಿಯೊಡನೆ ಹೇಳಿ ಅವಳ ಕ್ಷಮೆ ಬೇಡಿದ ಮೇಲೆ ಹೊತ್ತ ಹೊರೆ ಇಳಿಸಿದಷ್ಟು ಸುಖವಾಯಿತು. ಅವಳ ಮುಖ ನೋಡಿ ಮಾತಾಡಲು ಧೈರ್ಯವಾಯ್ತು. ಮರುದಿನ ಹೊರಡುವಾಗ ಲಿನ್ನಿಯೂ ನನ್ನೊಡನೆ ನಮ್ಮ ಮನೆಗೆ ಬಂದಳು.

– ೬ –
ಲಿನ್ನಿ ನಮ್ಮ ಮನೆಗೆ ಬಂದು ಎಂಟು ದಿನಗಳಾಗಿದ್ದವು. ಡಾಕ್ಟರ್ ಅರುಣಾ ದೇವಿಗೂ ಅವಳಿಗೂ ಪರಿಚಯವನ್ನು ಮಾಡಿಸುವುದರ ಸಲುವಾಗಿ ಆ ದಿನ ಅವಳನ್ನು ಅವರ ಮನೆಗೆ ಕರೆದುಕೊಂಡು ಹೋದೆ. ನಾವು ಹೋಗುವಾಗ ಅವಳೊಬ್ಬಳೇ ಕುಳಿತುಕೊಂಡು ಹೊಲಿಯುತ್ತಿದ್ದಳು. ಲಿನ್ನಿಯನ್ನು ನೋಡಿ ಅವಳಿಗೆ ತುಂಬಾ ಸಂತೋಷವಾಯಿತು. ಅರುಣಾ ದೇವಿಗೆ ಸಂಗೀತವೆಂದರೆ ಬಹಳ ಇಷ್ಟ. ಇಬ್ಬರು ಸಂಗೀತ ಪ್ರೇಮಿಗಳು ಸೇರಿದಾಗ ಸಂಗೀತದ ಗಂಧವೇ ಗೊತ್ತಿಲ್ಲದ ನಾನು ಅವರೊಡನೆ ಮಾತಾಡುವುದಾದರೂ ಏನು? ಒಂದು ಮೂಲೆಯಲ್ಲಿ ಕೂತು ಮೇಜಿನ ಮೇಲಿದ್ದ ಕೌಸಲ್ಯಾನಂದನನ ಪುಸ್ತಕವೊಂದನ್ನು ತೆಗೆದು ಓದತೊಡಗಿದೆ. ನಾನು ಆ ಪುಸ್ತಕವನ್ನು ತೆಗೆದುದನ್ನು ನೋಡಿ ‘ಸೀತಾ, ಅಣ್ಣನೂ ಕೌಸಲ್ಯಾನಂದನನೂ ಬೆಳಗಿನ ರೈಲಿನಲ್ಲಿ ಬಂದಿದ್ದಾರೆ. ಈಗೆಲ್ಲೋ ತಿರುಗಾಡಲು ಹೋಗಿರುವರು. ನಿನ್ನ ಮೆಚ್ಚಿಕೆಯ ಕತೆಗಳ ಲೇಖಕನನ್ನು ಏಳು ಗಂಟೆಯವರೆಗಿದ್ದರೆ ನೋಡಬಹುದು’ ಎಂದಳು. ನನಗೂ ಲಿನ್ನಿಗೂ ಇಬ್ಬರಿಗೂ ಕೌಸಲ್ಯಾನಂದನನನ್ನು ನೋಡುವ ಆಸೆ ಬಹಳ ಇತ್ತು, ಆದುದರಿಂದ ಅವನನ್ನು ನೋಡುವ ಸುಯೋಗ ಸಿಕ್ಕಿದುದಕ್ಕೆ ಬಹಳ ಸಂತೋಷವಾಯಿತು.

ತಿರುಗಾಡಲು ಹೋದವರು ಎಷ್ಟು ಹೊತ್ತಿಗೆ ಹಿಂತಿರುಗಬಹುದು? ಎಂಬ ತವಕದಿಂದ ಪುಸ್ತಕದ ಹಾಳೆಗಳನ್ನು ತಿರುವಿಹಾಕುತ್ತಿದ್ದೆ. ಅರುಣಾದೇವಿ ಲಿನ್ನಿಯ ಇದಿರು ಹಾರ್ಮೋನಿಯಮ್ ಇಟ್ಟು ಬಾರಿಸುವಂತೆ ಹೇಳುತ್ತಿದ್ದಳು. ಲಿನ್ನಿ ಹಾರ್ಮೋನಿಯಮ್ ಬಾರಿಸುತ್ತ ಹಾಡಲು ತೊಡಗಿದೊಡನೆ ಪುಸ್ತಕವನ್ನು ಮುಚ್ಚಿ ಬೇರೆ ಎಲ್ಲವನ್ನೂ ಮರೆತು ಕೇಳತೊಡಗಿದೆ. ಅರುಣಾದೇವಿಯಂತೂ ಮಂತ್ರಮುಗ್ಧಳಾದವಳಂತೆ ಲಿನ್ನಿಯನ್ನೇ ಎವೆಯಿಕ್ಕದೆ ನೋಡುತ್ತ ಪ್ರತಿಮೆಯಂತೆ ಕೂತಿದ್ದಳು. ಲಿನ್ನಿಯ ಸ್ವರ ಅಷ್ಟು ಇಂಪು; ಹಾಡುವ ಹಾಡು ಅಷ್ಟೊಂದು ಭಾವ ಪೂರ್ಣವಾದುದು-ಲೈಲಾ ಮತ್ತು ಮಜನುವಿನ ಪ್ರೇಮಗೀತೆ, ಲಿನ್ನಿಯ ಜೀವನವು ಚೆನ್ನಾಗಿ ತಿಳಿದ ನನಗೆ ಅವಳು ಆ ಮಧುರ ಸ್ವರದಲ್ಲಿ ಆ ಮನೋಹರ ಗೀತೆಯನ್ನು ಹಾಡುವಾಗ ಕಣ್ಣೀರು ತಡೆಯಿಲ್ಲದೆ ಹರಿಯತೊಡಗಿತು. ಅರುಣಾದೇವಿಯ ಹರಿಯುವ ಕಣ್ಣೀರಿನ ಪರಿವೆಯಿಲ್ಲದೆ ಲಿನ್ನಿಯ ಮುಖವನ್ನೇ ನೋಡುತ್ತಾ ಬೆಪ್ಪಾಗಿ ಕೂತು ಬಿಟ್ಟಿದ್ದಳು. ಲಿನ್ನಿಯ ಹಾಡು ಮುಗಿಯಿತು. ಭಾವ ಸಾಮ್ರಾಜ್ಯದಲ್ಲಿದ್ದ ನಾವು ಎಚ್ಚರಗೊಂಡೆವು. ಅರುಣಾದೇವಿಯು ಲಿನ್ನಿಯ ಕೈ ಹಿಡಿದು ‘ಸೀತೆಯ ಬಾಯಿಂದ ನೀವು ಚೆನ್ನಾಗಿ ಹಾಡುವಿರೆಂದು ಕೇಳಿದ್ದರೂ ಇಷ್ಟೊಂದು ಚೆನ್ನಾಗಿ ಹಾಡುವಿರೆಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ.’ ಎಂದಳು. ಲಿನ್ನಿ ‘ನಾನು ಹಾರ್ಮೋನಿಯ ಮುಟ್ಟದೆ ಬಹಳ ದಿನಗಳಾದವು, ಬಾರಿಸುವ ಪಾಠ ತಪ್ಪಿ ಹೋಗಿದೆ’ ಎಂದು ಹೇಳುತ್ತಾ ಎದ್ದು ನಿಂತಳು. ಲಿನ್ನಿಯ ಸರಳತೆ ಅರುಣಾದೇವಿಯನ್ನು ಸಂಪೂರ್ಣವಾಗಿ ಒಲಿಸಿಕೊಂಡಿತು.

ಲಿನ್ನಿಯ ಹಾಡುವಿಕೆಯಿಂದಾಗಿ ಹೊತ್ತು ಹೋದುದೇ ತಿಳಿದಿರಲಿಲ್ಲ. ಗಡಿಯಾರವನ್ನು ನೋಡುವಾಗ ೭|| ಗಂಟೆಯಾಗಿತ್ತು. ಕೌಸಲ್ಯಾ ನಂದನನು ಬಂದಿರಲಿಲ್ಲ. ಮರುದಿನ ಬರುವೆವೆಂದು ಹೇಳಿ ಹೊರಟೆವು. ಹೊರಜಗುಲಿಗೆ ಬರುವಾಗ ಅವರಿಬ್ಬರೂ ಕೂತಿದ್ದುದು ಕಾಣಿಸಿತು. ಕತ್ತಲಾಗಿದ್ದುದರಿಂದ ಮುಖ ಕಾಣಿಸಲಿಲ್ಲ. ಅರುಣ ‘ಅಣ್ಣ, ಬಂದೆಷ್ಟು ಹೊತ್ತಾಯ್ತು?’ ಎಂದಳು. ಆತ ಒಂದು ಗಂಟೆಯ ಹಿಂದೆಯೇ ಬಂದೆವು. ಒಳಗಿನಿಂದ ಹಾಡು ಕೇಳುತ್ತಿದ್ದುದರಿಂದ, ಒಳಗೆ ಹೋದರೆ ಅದು ನಿಂತು ಹೋಗಿ ಕೇಳುವ ಸುಯೋಗವು ತಪ್ಪಬಹುದೆಂದು ಇಲ್ಲೇ ಕೂತು ಕೇಳುತ್ತಿದ್ದೆವ’ ಎಂದ. ಅವನೊಡನೆ ‘ಹಾಡಿದವರು ಇವರು’ ಎಂದು ಅರುಣಾದೇವಿ ಲಿನ್ನಿಯ ಕಡೆ ತಿರುಗಿ ‘ಇವನು ನನ್ನ ಅಣ್ಣ, ಇವರು ಕೌಸಲ್ಯಾನಂದನ’ ಎಂದಳು. ಅಷ್ಟರಲ್ಲಿ ಒಳಗಿನಿಂದ ಆಳು ದೀಪ ತಂದಿರಿಸಿದ. ಬೆಳಕಿನಲ್ಲಿ ನೋಡಿದೆವು. …ಆಶ್ಚರ್ಯದ ಪರಮಾವಧಿ! ಕನ್ನಡಿಗರ ಒಲವಿನ ಕೌಸಲ್ಯಾನಂದನ-ಲಿನ್ನಿಯ ಮನವನ್ನು ಕದ್ದ ರಾಮು! ತುಂಟ ರಾಮು!!

ಆಶ್ಚರ್ಯದಿಂದ ಆನಂದದಿಂದ ಲಿನ್ನಿ ‘ರಾಮು’ ಎಂದಳು. ನಾವೆಲ್ಲರಿರುವೆವೆಂಬುದನ್ನೇ ಮರೆತು ರಾಮು ಅವಳ ಕೈಗಳೆರಡನ್ನೂ ಹಿಡಿದು ‘ನನ್ನ ವಸಂತ!’ ಎಂದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿಕ್ಷಣ
Next post ಅಮೃತ ಘಳಿಗೆ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…