“ಮನೆಯು ಪಾಲಾಯ್ತು
ಒರ್‌ಬಾಳ್ವೆ ಹೋಳಾಯ್ತು
ಕರುಳೆರಡು ಸೀಳಾಯ್ತು
ಅಯ್ಯೊ! ಅಕಟಕಟಾ!
ಎರಡಾಯ್ತು ಬಾವುಟ”
ಎಂದು ಗೋಳಾಡದಿರು
ಓ, ಗೆಳೆಯನೇ!
ಕಲಹ ಪಾಲಿಗೆ ಮೊದಲು:
ಹೊಗೆಯಿತಸಮಾಧಾನ,
ಉರಿಯಿತು ದುರಭಿಮಾನ.
ತಮ್ಮ, ಪಸುಗೆಯ ಬಯಸಿ
ಕೈಮಾಡಿದನು, ಮುನಿದು;
ಒಬ್ಬಣ್ಣ ಸುಮ್ಮನಿರೆ
ಉಳಿದರಂತಿಹರೆ?
ಹೊಡೆತಕ್ಕೆ ಮರುಹೊಡೆತ;
ಮತದ ಮದ್ದಿನ ಸಿಡಿತ!
ಮಾರಿಗಾಯ್ತೌತಣ;
ನಾಡೆಲ್ಲ ರಣ ರಣ!
ತಡವೆ ರೋಗನಿದಾನ!
ಒಳಗೆಲ್ಲೊ ವಿಷದ ಸೆಲೆ
ಉಪಚಾರ ಮೇಲ್ಮೇಲೆ!
ಅರಿವು ಮೂಡಿದ ಮೇಲೆ
ನಿಜದ ಸಂಧಾನ.
ನಮ್ಮ ಮನೆ ಪಾಲಾಗೆ
ಬೇಕಾಯ್ತು ಕಡೆಗೆಮಗೆ
ಹೆರರ ತೀರ್ಮಾನ!
ಎಲ್ಲವೂ ಆಯ್ತು, ದಿಟ!
ಪಾಲಾಯ್ತು ಮನೆ ಮಠ,
ಹಣಕಾಸು ಆಳು ಭಟ;
ಒಂದೆಸೆದ ಬಾವುಟ!
ಗೆದ್ದಿತೆಲ್ಲರ ಹಟ!
ಇನ್ನೇತಕಾ ಗೋಳು?
ನೋಡು ನಾಳಿನ ಬಾಳು:
ನಗುತಿರಲಿ ಆ ಮನೆ,
ನಗುತಿರಲಿ ಈ ಮನೆ!
ಅವರ ಬಾವುಟವವರು
ನಮ್ಮ ಬಾವುಟ ನಾವು
ಏರಿಸುವ! ಹಾರಿಸುವ!
ಒಲುಮೆ ತೋರಿಸುವ!
ನಮ್ಮ ಕರುಳಿನ ನಂಟು
ಬಿಡಿಸಲಾಗದ ಗಂಟು:
ಈ ನಂಬಿಕೆಯ ಬೆಳಕೆ
ಒಡೆದ ಮನಕಂಟು!
ಬೇರೆಯಿಹ ಕೈಗಳನು
ಮುಗಿದು ವಂದಿಸಿದಂತೆ;
ಎರಡು ಕಣ್ಣಿನ ಕವಲು-
ನೋಟ ಸಂಧಿಸಿದಂತೆ;
ಇಬ್ಬಗೆಯ ಹೂಗಳನು
ಹಾರಕೊಂದಿಸಿದಂತೆ;
ಗಂಡು ಹೆಣ್ಣಿನ ಬಾಳ-
ನೊಲುಮೆ ಬಂಧಿಸಿದಂತೆ;
ಕವಲೊಡೆದ ಕಾವೇರಿ
ಮತ್ತೆ ಕೂಡಿದ ತೆರದಿ;
ಬೇಡನಾವನೊ ಬಂದು
ಎರಡು ಗೂಡಿನಲಿಟ್ಟ
ಜೊತೆಯ ಹಕ್ಕಿಗೆ ಕಟ್ಟ-
ಕಡೆಗೆ ಬಿಡುಗಡೆ ದೊರೆಯೆ
ಅವು ಹಾರಿ ನೆರೆವಂತೆ;
ಹುಟ್ಟು ಧರಿಸಿದ ಆತ್ಮ
ಪರಮಾತ್ಮನಲಿ ಕಡೆಗೆ
ಬೆರೆತೈಕ್ಯವಪ್ಪಂತೆ;
ನಾವು ಸೋದರರಿಂದು
ಬೇರಾದರೇನಂತೆ,-
ಮನವೊಡೆಯದಂತೆ
ಮನೆಯೊಡೆಯದಂತೆ
ಮತ್ತೆ ಬೆರೆಯೋಣ,
ಹೊಸ ಬಾಳ ತೆರೆಯೋಣ,
ಶಾಂತಿ ಸೌಹಾರ್ದಗಳ
ಅಮೃತವರ್ಷದ ಧಾರೆ
ಇಳೆಗೆಲ್ಲ ಕರೆಯೋಣ!
*****