ಇಳಾ – ೧೩

ಇಳಾ – ೧೩

ಚಿತ್ರ: ರೂಬೆನ್ ಲಗಾಡಾನ್

ಟೂರ್ ಮುಗಿಸಿ ಬಂದ ಇಳಾ ಮಂಕಾಗಿಯೇ ಇದ್ದಳು. ಪ್ರವಾಸದ ಆಯಾಸವೆಂದು ತಿಳಿದುಕೊಂಡ ಅಂಬುಜಮ್ಮ ‘ತೋಟಕ್ಕೆ ಒಂದೆರಡು ದಿನ ಹೋಗಲೇಬೇಡ. ಏನು ಮಾಡಬೇಕೊ, ಇಲ್ಲಿಂದಲೇ ಹೇಳು’ ಎಂದು ಕಟ್ಟುನಿಟ್ಟಾಗಿ ಹೇಳಿ ಅವಳನ್ನು ಯಾವ ಕೆಲಸ ಮಾಡೋಕೂ ಬಿಡಲಿಲ್ಲ. ಆಳುಗಳು ತಾವೇ ಬಂದು ಕೆಲಸದ ಬಗ್ಗೆ ಕೇಳಿಕೊಂಡರು. ಅಂಬುಜಮ್ಮನೇ ತೋಟಕ್ಕೆ ಹೋಗಿ ಕೆಲಸ ನೋಡಿಕೊಂಡು ಬಂದರು. ಮನೆಯಲ್ಲಿ ಕುಳಿತಿರಲು ಬೇಸರವೆಂದರೂ ಅಂಬುಜಮ್ಮ ಒಪ್ಪಲೇ ಇಲ್ಲ. ಅಷ್ಟರಲ್ಲಿ ಸ್ಫೂರ್ತಿ ಫೋನ್ ಮಾಡಿ ಗ್ರಾಮವೊಂದರಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಬೆಳಿಗ್ಗೆ ಬೇಗ ಬರುವಂತೆ ತಿಳಿಸಿದಳು. ಇಳಾ ಉತ್ಸಾಹದಿಂದ ಹೊರಟಳು.

ಸ್ಫೂರ್ತಿ ಅವಳಿಗಾಗಿಯೇ ಹಾಸನದಲ್ಲಿ ಕಾಯುತ್ತಿದ್ದಳು. ಇಬ್ಬರೂ ಆ ಗ್ರಾಮಕ್ಕೆ ಬಸ್ಸಿನಲ್ಲಿ ಹೊರಟರು. ಇವರು ಬರುವಷ್ಟರಲ್ಲಿ ಅವರ ತಂಡದ ಇತರರು ಕಾರ್ಯಕ್ರಮಕ್ಕೆ ಎಲ್ಲಾ ಏರ್ಪಾಡು ಮಾಡಿದ್ದರು. ರೈತರನ್ನು, ರೈತ ಕುಟುಂಬವನ್ನು ಅಲ್ಲಿ ಸೇರಿಸಿದ್ದರು. ಏನೋ ಕಾರ್ಯಕ್ರಮ ಎಂದು ಊರಿನ ಜನರೆಲ್ಲ ಸಮುದಾಯ ಭವನದಲ್ಲಿ ಸೇರಿಬಿಟ್ಟಿದ್ದರು. ಮುಖ್ಯ ಭಾಷಣಕಾರರಾಗಿ ಬಂದಿದ್ದವರು ಸಹ ಒಬ್ಬ ರೈತರೆ. ಅವರು ತಮ್ಮ ಮಾತಿನಿಂದಲೇ ರೈತರ ಆಸಕ್ತಿ ಕೆರಳಿಸಿದರು. ‘ಒಂದೇ ಬೆಳೆಗೆ ಜೋತುಬಿದ್ದು ರೈತ ಅವನತಿ ತಂದುಕೊಳ್ತಾ ಇದ್ದಾನೆ. ರಾಸಾಯನಿಕಗೊಬ್ಬರ, ಕ್ರಿಮಿನಾಶಕ ಅಂತ ಹೆಚ್ಚು ಖರ್ಚು ಮಾಡ್ತಾ ಇದ್ದಾನೆ. ನಾನು ಎಲ್ಲರೂ ಬೆಳೆಯುವ ರೇಷ್ಮೆ, ರಾಗಿ, ಭತ್ತ ಕೈಬಿಟ್ಟು ಕುಂಬಳಕಾಯಿ ಬೆಳೆಸಿದೆ. ಒಂದೊಂದು ಕಾಯಿ ೩೦ ರಿಂದ ೪೦ ಕೆ.ಜಿ. ಇಳುವರಿ ಬಂದಿತ್ತು. ಖರ್ಚು ಕಳೆದು ಒಂದೂವರೆ ಲಕ್ಷ ಲಾಭ ಬಂದಿದೆ.

ಈ ವರ್ಷ ಸಿಹಿಗುಂಬಳ ಹಾಕಿದ್ದೇನೆ ಎಕರೆಗೆ ಐದು ಟ್ರಾಕ್ಟರ್ ತಿಪ್ಪೆ ಗೊಬ್ಬರ ಹಾಕಿದ್ದೇನೆ. ಬಾಳೆ ಹಾಕಿದ್ದೇನೆ. ಬಾಳೆ ಮಧ್ಯ ನಡುವಿನ ಜಾಗದಲ್ಲಿ ಕೊತ್ತಂಬರಿ, ಮೆಂತ್ಯ, ಸಬ್ಬಸ್ಸಿಗೆ, ಹುರುಳಿ ಬಿತ್ತಿದ್ದೇನೆ. ಸೊಪ್ಪಿನಲ್ಲೂ ಆದಾಯವಿದೆ. ದಿನಾ ದುಡ್ಡು ನೋಡಬಹುದು. ಕುಂಬಳಕೊಯ್ಲಿನ ನಂತರ ಬಳ್ಳಿಯನ್ನು ಸಣ್ಣ ತುಂಡು ಮಾಡಿ ಕತ್ತರಿಸಿ ಬಾಳೆಗಿಡಗಳಿಗೆ ಹಾಕಿದರೆ ಕೊಳೆತು ಗೊಬ್ಬರವಾಗುತ್ತದೆ. ಬಾಳೆತೋಟದ ಅಂಚಿನಲ್ಲಿ ಚೆಂಡುಹೂವಿನ ಗಿಡ ಬೆಳೆದರೆ ಬಾಳೆಗೆ ಕೀಟಗಳ ಬಾಧೆ ತಪ್ಪಿಸಬಹುದು. ಎಲ್ಲರೂ ಬೆಳೆಯುವುದನ್ನೇ ನಾವು ಬೆಳೆದು ನಷ್ಟ ಅನುಭವಿಸುವುದಕ್ಕಿಂತ ಮಿಶ್ರ ಬೆಳೆ ಬೆಳೆದು ಒಂದರಲ್ಲಿ ನಷ್ಟವಾದ್ರೆ ಇನ್ನೊಂದರಲ್ಲಿ ತುಂಬಿಸಿಕೊಳ್ಳಬಹುದು. ಸದಾ ಆದಾಯ ತರೋ ರೀತಿ ರೈತ ಬೆಳೆ ಬೆಳೆಯಬೇಕು. ಸಾಲ ಮಾಡಿ ಸಾಲ ತೀರಿಸಲಾರದೆ ಸಾವಿಗೆ ಶರಣಾಗುವ ದುರ್ಬಲ ಮನಃಸ್ಥಿತಿಯಿಂದ ದೂರ ಬರಬೇಕು. ಬೇಸಾಯದಲ್ಲೂ ಅಪಾರ ಲಾಭಗಳಿಸಬಹುದು. ಆದರೆ ವಿವೇಚನೆ ಬೇಕು ಅಷ್ಟೆ ಎಂದು ಕರೆ ನೀಡಿದರು.

ಮತ್ತೊಬ್ಬರು ‘ಮಾನವನ ಮೂತ್ರ ಕೂಡ ಒಳ್ಳೆಯ ಗೊಬ್ಬರವಾಗುತ್ತೆ, ಬೇಕಾದಷ್ಟು, ರೈತರು ಮಾನವ ಮೂತ್ರ ಹಾಗೂ ಗೋಮೂತ್ರ ಬಳಸಿ ಕುಂಬಳಕಾಯಿ, ಬಾಳೆ ಬೆಳೆದಿದ್ದು ಉತ್ತಮ ಫಲಿತಾಂಶ ಪಡೆದಿದ್ದಾರೆ. ಖರ್ಚಿನ ದೃಷ್ಟಿಯಿಂದ ರಸಗೊಬ್ಬರಕ್ಕೆ ಬದಲಾಗಿ ಮಾನವ ಮೂತ್ರ ಬಳಕೆ ಉತ್ತಮ. ಹತ್ತು ಕುಂಟೆ ಭೂಮಿಯಲ್ಲಿ ಬೂದುಗುಂಬಳ ಬಳ್ಳಿಗೆ ೪೨೦ ಲೀಟರ್ ಮಾನವ ಮೂತ್ರವನ್ನು ಅಷ್ಟೆ ಪ್ರಮಾಣದ ನೀರಿನಲ್ಲಿ ಬೆರೆಸಿ ಮೂರು ಹಂತದಲ್ಲಿ ನೀಡಿದ್ದಕ್ಕೆ ಆರುನೂರು ಕಾಯಿಗಳು ಬಿಟ್ಟಿದ್ದು, ಅವು ೮ ರಿಂದ ೨೪ ಕೆ.ಜಿ. ತೂಗುತಿದ್ದವು’ ಎಂದು ಮಾಹಿತಿ ನೀಡಿದರು.

ರೈತರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸಿ ‘ಯಾರೂ ಹತಾಶರಾಗಬೇಡಿ- ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಸಿದ್ದರಾಗಿ ಹಳೆಯದಕ್ಕೆ ಜೋತುಬೀಳದೆ, ಹೆಚ್ಚು ಖರ್ಚು ಮಾಡದೆ ಸಾವಯವ ಕೃಷಿ ಮಾಡುವಂತೆ ಸಲಹೆ ನೀಡಿದರು. ಯಾವ ಕಾರಣಕ್ಕೂ ಅತಿ ಸಾಲ ಮಾಡಬೇಡಿ, ಆತ್ಮಹತ್ಯೆಯತ್ತ ಮನಸ್ಸು ಕೊಡಬೇಡಿ. ಒಂದಲ್ಲ ಒಂದು ಬೆಳೆಯಲ್ಲಿ ಲಾಭ ಬಂದೇ ಬರುತ್ತದೆ. ಒಂದೇ ಸಲಕ್ಕೆ ಶ್ರೀಮಂತರಾಗುವ ಆಸೆ ಬೇಡ. ಸಾಲ ಸಂದಾಯ ಮಾಡದೆ ಇರಬೇಡಿ, ಕನಿಷ್ಟ ಬಡ್ಡಿಯನ್ನಾದರೂ ಕಟ್ಟುತ್ತ ಬನ್ನಿ, ಸಾಲದ ಹಣವನ್ನು ಮದುವೆ, ತಿಥಿ ಅಂತ ಖರ್ಚು ಮಾಡದೆ ವ್ಯವಸಾಯಕ್ಕೆ ವ್ಯಯ ಮಾಡಿ. ಬಂದ ಲಾಭದಲ್ಲಿ ಒಂದಿಷ್ಟು ಹಣವನ್ನು ನಂದಲ್ಲ ಅಂತ ಬೇರೆಕಡೆ ಇಡಿ. ಅದು ಆಪತ್ಕಾಲಕ್ಕೆ ಆಗುತ್ತದೆ’ ಎಂದು ತಿಳುವಳಿಕೆ ಹೇಳಿದರು.

ಕೆಲ ರೈತರು ತಮ್ಮ ಅನುಭವ ತಿಳಿಸಿದರು. ಹೊಸ ಕೃಷಿ ಆಳವಡಿಸಿಕೊಂಡಿದ್ದರಿಂದ ತಾವು ಹೇಗೆ ಬೆಳೆಯನ್ನು ಲಾಭದಾಯಕವಾಗಿಸಿಕೊಳ್ಳಬಹುದು ಎಂಬುದನ್ನು ಆನುಭವಿಗಳಿಂದ ಕೇಳಿಕೊಂಡು ತಾವು ಆದರಂತೆ ನಡೆಯುವ ಉತ್ಸಾಹ ತೋರಿದರು ಸ್ಥಳೀಯ ರೈತರು. ಅವರ ಉತ್ಸಾಹ ಕಂಡು ತಾವು ನಡೆಸಿದ ಕಾರ್ಯಕ್ರಮ ಸಾರ್ಥಕವಾಯಿತೆಂದು ಸಂಘಟಕರು ಗೆಲುವಿನಿಂದ ಹಿಗ್ಗಿದರು. ಇಳಾಳಿಗೂ ಉತ್ಪಾಹ ಮೂಡಿತು. ಅವಳಿಗೂ ಪ್ರಯೋಜನವಾಗುವ ವಿಚಾರಗಳು ಅಲ್ಲಿ ಇದ್ದವು. ಒಟ್ಟಿನಲ್ಲಿ ಆ ದಿನ ಆನುಕೂಲವಾಗಿ ಮಾರ್ಪಟ್ಟಿತು. ಕಾರ್ಯಕ್ರಮ ಮುಗಿಸಿ ಸ್ಫೂರ್ತಿ ಇಳಾ ಒಟ್ಟಿಗೆ ಹಾಸನಕ್ಕೆ ಬಂದರು. ಸ್ಫೂರ್ತಿ ಇಳಾಳನ್ನು ತಾನು ಪಿ.ಜಿ. ಆಗಿದ್ದ ಮನೆಗೆ ಕರೆತಂದಳು. ಸ್ವಲ್ಪ ಹೊತ್ತು ಅಲ್ಲಿದ್ದ ಇಳಾ ತಡವಾಗುವುದೆಂದು ಊರಿಗೆ ಹೊರಟು ನಿಂತಳು.

ಬಸ್‌ಸ್ಟಾಂಡಿಗೆ ನಡೆದುಕೊಂಡೆ ಹೊರಟಳು ಇಳಾ. ಹಾಗೆ ಬರುವಾಗ ನಿವಾಸ್ ಆಕಾಶವಾಣಿಯಿಂದ ಹೊರಬರುತ್ತಿದ್ದ. ಅವನನ್ನು ಕಂಡು ನಿಂತಳು. ‘ಪ್ರೋಗ್ರಾಂಗೆ ಹೋಗಿದ್ದೀರಾ, ಹೇಗಾಯ್ತು’ ಅವಳನ್ನು ಕಂಡು ಹತ್ತಿರ ಬರುತ್ತ ಕೇಳಿದ. ನಡೆದದೆಲ್ಲವನ್ನು ಹೇಳಿದಳು. ಇಬ್ಬರೂ ಮಾತನಾಡುತ್ತ ಹೆಜ್ಜೆ ಹಾಕಿದರು. ಆಕಾಶವಾಣಿಯಲ್ಲಿ ಕೃಷಿ ವಿಚಾರವಾಗಿ ಮಾತುಕತೆ ರೆಕಾರ್ಡ್ ಇತ್ತೆಂದು, ಹಾಗೆಂದೇ ಆಲ್ಲಿಗೆ ಬರಲಾಗಲಿಲ್ಲವೆಂದು ತಿಳಿಸಿ ಊರಿನ ಸಮಾಚಾರ ಕೇಳಿದ. ಈಗ ಬಾಳೆ ಬಗ್ಗೆ ಅಂಗಾಂಶ ಕಸಿ ಮಾಡುತ್ತಿದ್ದು ಒಳ್ಳೆ ರಿಸಲ್ಟ್ ಬರುತ್ತದೆ ಎಂದು ತಿಳಿಸಿದಳು. ಗದ್ದೆಗೂ ಬಾಳೆ ಹಾಕಿಸುತ್ತಿರುವುದಾಗಿ, ಮಳೆ ಹೆಚ್ಚಾಗಿ ಕಾಫಿ ಬೀಜಗಳು ಉದುರುತ್ತಿದ್ದು, ಅಕಾಲದಲ್ಲಿ ಹೂವಾಗುವ ಹೆದರಿಕೆ ಇದೆ. ನೋಡೋಣ ಕೈ ಹಾಕಿದ್ದಾಗಿದೆ. ಕಾಫಿಯಲ್ಲಿ ಈ ಬಾರಿ ನಷ್ಟಕ್ಕೆ ಮಾನಸಿಕವಾಗಿ ಸಿದ್ದವಾಗಿದ್ದು, ಆ ನಷ್ಟವನ್ನು ಬೇರೆ ಬೆಳೆಯಲ್ಲಿ ತುಂಬಿಕೊಳ್ಳಲು ಯತ್ನಿಸುತ್ತಿದ್ದೇನೆ ಎಂದಳು. ಅವಳ ಸಿನ್ಸಿಯಾರಿಟಿ ಕಂಡು ಮೆಚ್ಚುತ್ತ ‘ಇಳಾ, ನಿನ್ನಂಥ ಧೈರ್ಯ ಪ್ರತಿ ಹೆಣ್ಣುಮಕ್ಕಳಿಗೂ ಬರಬೇಕು. ಆಗಲೇ ಈ ದೇಶದಲ್ಲಿ ಕೃಷಿಕ್ರಾಂತಿ ಮಾಡಬಹುದು, ಧೈರ್ಯವಾಗಿ ಹೀಗೆ ಮುನ್ನುಗ್ಗುವುದಕ್ಕೆ ಗಂಡಸರೇ ಹೆದರುತ್ತಾರೆ, ನೋಡು ಈ ಕ್ಷೇತ್ರದಲ್ಲಿ ನೀನು ಸಾಧನೆ ಮಾಡಿಯೇ ಮಾಡುತ್ತಿಯಾ ಅಂತ ನಂಗೆ ಭರವಸೆ ಇದೆ. ಮೊದಲೇ ವಿಜ್ಞಾನದ ವಿದ್ಯಾರ್ಥಿನಿ. ಹೊಸ ಹೊಸ ಪ್ರಯೋಗ ಮಾಡಿ ಈ ರಂಗಕ್ಕೆ ಬೆಳಕು ತೋರಿಸೋ ದೀಪವಾಗಬೇಕು ನೀನು’ ಮನಸ್ಸಿನಾಳದಿಂದ ನುಡಿದ. ‘ನಿಮ್ಮೆಲ್ಲರ ಪ್ರೋತ್ಸಾಹ ಸಾರ್, ನಂಗೆ ಈ ಕ್ಷೇತ್ರದಲ್ಲಿ ದುಡಿಬೇಕು ಅನ್ನೊ ಉತ್ಸಾಹ ಮೂಡ್ತಾ ಇದೆ. ಕೃಷಿ ರಂಗದಲ್ಲೂ ಲಾಭವಿದೆ, ಅದು ಕೂಡ ಒಂದು ಉತ್ಪಾದನಾ ಕ್ಷೇತ್ರ ಅನ್ನೋದನ್ನ ಮನವರಿಕೆ ಮಾಡಿ ಕೊಡ್ತೀನಿ ಸಾರ್’ ನಿರ್ಧಾರಿತ ದನಿಯಲ್ಲಿ ಹೇಳಿದಳು.

‘ಈ ಛಲ, ಈ ಹಟ ಇದ್ದಾಗ ಖಂಡಿತಾ ಸಾಧನೆಯ ಮೆಟ್ಟಿಲೇರಬಹುದು. ನಾನು ಈ ಜಮೀನನ್ನು ನಂಬಿ ಬಂದಾಗ ನನ್ನನ್ನು ಆಡಿಕೊಂಡವರೆಷ್ಟೋ, ಮೂರ್ಖ, ಒಳ್ಳೆ ಸಂಬಳ ಬರುವ ಕೆಲಸ ಬಿಟ್ಟಿದ್ದಾನೆ. ವ್ಯವಸಾಯ ಎಂದರೆ ಸುಮ್ನೆನಾ, ಅದೇನು ಮಾಡ್ತಾನೋ ಅಂತ ನನ್ನ ಕಾಲೆಳೆದಿದ್ದರು. ಕೆಲಸ ಬಿಡಬೇಡ ಅಂತ ಅದೆಷ್ಟೋ ಜನ ಬುದ್ದಿ ಹೇಳಿದ್ದರು. ಆದರೆ ಆದೇ ಜನ ನನ್ನ ಮೆಚ್ತಾ ಇದ್ದಾರೆ. ಎಲ್ಲರೂ ಬಿಳಿ ಕಾಲರಿನ ಕೆಲಸವೇ ಬೇಕು ಅಂದ್ರೆ ನಾವು ತಿನ್ನೊ ಅನ್ನ ಕೊಡೋರು ಯಾರು. ಎಷ್ಟು ಜನಕ್ಕೆ ಕೆಲಸ ಸಿಗುತ್ತೆ. ಕೆಲಸ ಸಿಗದೆ ನಿರಾಶರಾಗುವ ಬದಲು ತುಂಡು ಭೂಮಿಲಿ ಕೂಡ ಚಿನ್ನ ಬೆಳೆಯಬಹುದು. ಆದರೆ ಅದನ್ನು ಅರ್ಥಮಾಡಿಕೊಳ್ಳಬೇಕಷ್ಟೆ- ಮಾತನಾಡುತ್ತಲೇ ಬಸ್‌ಸ್ಟಾಂಡ್ ತಲುಪಿದ್ದರು.

‘ಒಮ್ಮೆ ನಮ್ಮೂರಿಗೆ ಬನ್ನಿ ಸಾರ್, ನಮ್ಮ ತೋಟ, ನಮ್ಮ ಶಾಲೆ ಎಲ್ಲಾನೂ ನೋಡಿಕೊಂಡು ಬರಬಹುದು’ ಆಹ್ವಾನಿಸಿದಳು.

‘ಖಂಡಿತಾ ಬರ್ತಿನಿ, ನಂಗೂ ನಿಮ್ಮ ತೋಟ, ದನ, ಶಾಲೆ, ನಿಮ್ಮಮ್ಮ, ಅಜ್ಜಿನಾ ನೋಡಬೇಕು ಅಂತ ಅನ್ನಿಸಿದೆ. ಬಂದೇ ಬರ್ತಿನಿ’ ಅಂತ ಹೇಳಿ ಬೀಳ್ಕೊಟ್ಟ.

ಆತನ ಅಭಿಮಾನಕ್ಕೆ, ಆತನ ಆದರ, ಸ್ನೇಹಕ್ಕೆ ಇಳಾ ಮನಸೋತಿದ್ದಳು. ನಿವಾಸನ ಸರಳತೆ, ಯಾವುದೇ ಅಹಂ ಇಲ್ಲದ ನೇರ ನಡೆ ನುಡಿ ಅವಳನ್ನು ಸೆಳೆದಿತ್ತು. ಅವನನ್ನು ಕುರಿತು ಚಿಂತಿಸುತ್ತಲೇ ಮನೆ ತಲುಪಿದಳು.

ಸಂಜೆ ಬರುವ ಇಳಾಳಿಗಾಗಿ ಕಳಲೆ ಪಲ್ಯ ಮಾಡಿ, ಅವಳು ಬಂದೊಡನೆ ಬಿಸಿ ಬಿಸಿ ರೊಟ್ಟಿ ಮಾಡಿ ಅಂಬುಜಮ್ಮ ತಂದಿಟ್ಟರು. ಚೆನ್ನಾಗಿ ಹಸಿದಿದ್ದ ಇಳಾಗೆ ಕಳಲೆ ಪಲ್ಯ ಕಂಡು ಹಸಿವು ಮತ್ತಷ್ಟು ಹೆಚ್ಚಾಯಿತು. ಈ ಕಳಲೆ ಯಾವಾಗಲೂ ಸಿಗುವುದಿಲ್ಲ. ಅದು ಸುಲಭವಾಗಿಯೂ ಸಿಗುವುದಿಲ್ಲ. ಬಿದುರು ಮೆಳೆಗಳ ಮದ್ಯೆ ಮೊಳಕೆಯೊಡೆದು ನಿಂತ ಕಳಲೆಯನ್ನು ಕಿತ್ತು ತರುವುದು ಅಷ್ಟು ಸುಲಭದ ಕೆಲಸವಲ್ಲ, ಜಾಸ್ತಿ ಬಲಿಯದ ಹಾಗೂ ಹೆಚ್ಚು ಎಳೆಯದೂ ಅಲ್ಲದ ಕಳಲೆ ಕಿತ್ತುಕೊಂಡುಬಂದರೆ ಇದರ ಕೆಲಸ ಮುಗಿಯಲಾರದು. ಇದರ ಮೇಲಿನ ಸಿಪ್ಪೆಯನ್ನು ಒಂದಾದ ನಂತರ ಒಂದು ತೆಗೆದು ನಂತರ ಉಳಿಯುವ ಎಳೆಯ ಭಾಗವನ್ನು ಕತ್ತರಿಸಿ ನೀರಿನಲ್ಲಿ ನೆನೆಸಿಡಬೇಕು. ಆದರೆ ನೀರನ್ನು ಪ್ರತಿದಿನ ಬದಲಿಸುತ್ತ ಇರಬೇಕು. ಆ ಮೇಲೆಯೇ ಈ ಎಳೆ ಬಿದಿರು ಅಂದರೆ ಕಳಲೆಯನ್ನು ತಿನ್ನಲು ಯೋಗ್ಯ. ವರ್ಷದಲ್ಲಿ ಒಮ್ಮೆಯಾದರೂ ಕಳಲೆ ತಿನ್ನಬೇಕು ಎಂದು ಹಳ್ಳಿ ವೈದ್ಯರು ಸಲಹೆ ನೀಡುತ್ತಾರೆ. ಇದು ಎಷ್ಟು ರುಚಿಯೋ, ಅಷ್ಟೆ ಗರಂಕೂಡ ಹೌದು, ಮೂರು ನಾಲ್ಕು ತಿಂಗಳ ಎಳೆ ಬಸುರಿಯರಿಗೆ ಕಳಲೆಯನ್ನು ತಿನ್ನಲು ಕೊಡುವುದೇ ಇಲ್ಲ, ಮನೆಯ ಹಿರಿಯರು. ಮಲೆನಾಡ ಹೆಂಗಸರು ಕಳಲೆಯಿಂದ ಹತ್ತು ಹಲವು ಪದಾರ್ಥ ಸಿದ್ದಪಡಿಸುತ್ತಾರೆ. ಕಳಲೆ ಸಾಂಬಾರು, ಪಲ್ಯ, ಬಜಿ, ಚಿತ್ರಾನ್ನ, ಉಪ್ಪಿನಕಾಯಿ ಹೀಗೆ ತರಾವರಿ ಸಿದ್ದಪಡಿಸಿ ತಿನ್ನಿಸುತ್ತಾರೆ. ಆದರೆ ಶೂನ್ಯಮಾಸ ಆರಂಭವಾಯಿತೆಂದರೆ ಇಲ್ಲಿಯ ಜನ ಜಪ್ಪಯ್ಯ ಎಂದರೂ ಕಳಲೆ ಮುರಿಯುವುದಿಲ್ಲ, ತಿನ್ನುವುದಿಲ್ಲ. ವರ್ಷ ಪೂರ್ತಿ ಕಳಲೆ ತಿಂದರೆ ಬಿದಿರಿನ ಸಂತತಿ ನಾಶವಾದೀತು ಎಂದು ಚಿಂತನೆ ಇರಬಹುದು. ಆದರೆ ಕಳಲೆ ಮಾಡುವಾಗ ಕೆಲ ಎಚ್ಚರಿಕೆಗಳೂ ಇವೆ. ಕಳಲೆ ಹೆಚ್ಚಿದ ನಂತರ ಉಳಿದ ತರಕಾರಿಯ ಸಿಪ್ಪೆಯಂತೆ ಇದನ್ನು ದನಕರುಗಳಿಗೆ ಹಾಕಬಾರದು, ಇದನ್ನು ನೆನಸಿಟ್ಟ ತುಂಡು, ನೀರು, ಎಲ್ಲವೂ ಘೋರ ವಿಷವಾಗಿ ದನಕರುಗಳು ಸಾವನ್ನಪ್ಪುತ್ತವೆ. ದನಕರುಗಳು ಹೋಗುವ ಜಾಗದಲ್ಲಿ ಅವುಗಳನ್ನು ಹಾಕಬಾರದು. ಸೃಷ್ಟಿಯ ವೈಚಿತ್ರವೇ ಹೀಗಿದೆ. ದನಕರುಗಳು ತಿಂದರೆ ವಿಷ, ಮನುಷ್ಯರಿಗೆ ಮಾತ್ರ ಸವಿಯಾದ ತಿನಿಸು.

‘ಹೆಂಗಿದೆಯೊ ಕಳಲೆ ಪಲ್ಯ, ಮಗೂ’ ಅಜ್ಜಿ ಕೇಳಿದರು.

‘ನಿನ್ನ ಕೈ ರುಚಿ ಅಂದ್ರೆ ಕೇಳಬೇಕಾ ಅಜ್ಜಿ, ತುಂಬಾ ಚೆನ್ನಾಗಿದೆ. ಇನ್ನು ಸ್ವಲ್ಪ ಪಲ್ಯ ಹಾಕು, ಚೆನ್ನಾಗಿ ತಿಂದುಬಿಡ್ತೀನಿ, ಅಮ್ಮ ಬಂದಿಲ್ವಾ ಇನ್ನು.’

‘ಇಲ್ಲಾ ಕಣೆ ಮುದ್ದು, ಇವತ್ಯಾಕೋ ಇಷ್ಟು ಹೊತ್ತಾದರೂ ಬಂದಿಲ್ಲ. ಆಗ್ಲೆ ಬೆಲ್ ಆಯ್ತು ಮೀಟಿಂಗ್ ಮಾಡ್ತಾ ಇದ್ದಾರೇನೊ.’

‘ಇರಬಹುದೇನೋ ಬಿಡು, ಬರ್ತಾರೆ. ಅಮ್ಮಂಗೆ ಸ್ಕೂಲ್ ಒಂದು ಇದ್ದುಬಿಟ್ರೆ ಆಯ್ತು. ಅದೇ ಪ್ರಪಂಚದಲ್ಲಿ ಮುಳುಗಿ ಹೋಗಿ ಬಿಡ್ತಾರೆ, ನಾನಿದ್ದೇನಿ, ನೀನಿದ್ದೀಯಾ, ಈ ತೋಟ ಇದೆ ಅಂತ ನೆನಪಾದ್ರು ಇದೆಯೋ ಇಲ್ವೋ.’

‘ಹೋಗ್ಲಿ ಬಿಡು ಚಿನ್ನೂ, ಈ ಸ್ಕೂಲ್ ಒಂದು ಇರೋಕೆ, ಅವಳು ಒಬ್ಳು ಮನುಷ್ಯೆ ಆಗಿದ್ದಾಳೆ. ಇಲ್ಲದಿದ್ದರೆ ಕೊರಗಿ ಕೊರಗಿ ನಿಮ್ಮಪ್ಪನ ದಾರಿಯನ್ನ ಹಿಡಿದುಬಿಡ್ತ ಇದ್ದಳೇನೊ, ಅವಳಿಗೆ ಈ ತೋಟ ಈ ಮನೆ ಅಂದ್ರೆನೇ ಜಿಗುಪ್ಸೆ ಬಂದುಬಿಟ್ಟಿದೆ. ಏನೋ ಆ ಪುಣ್ಯಾತ್ಮ ಈ ಕಾಡಲ್ಲಿ ಒಂದು ಸ್ಕೂಲ್ ಶುರು ಮಾಡಿ ಈ ಮನೆನಾ ಉಳಿಸಿದ್ದಾನೆ. ದೇವ್ರು ಅವನ್ನ ಚೆನ್ನಾಗಿ ಇಟ್ಟಿರಲಿ. ಎಷ್ಟು ಮಕ್ಕಳಿಗೆ ಅನುಕೂಲವಾಯ್ತು’ ಬಾಯಿ ತುಂಬ ವಿಸ್ಮಯನನ್ನು ಅಂಬುಜಮ್ಮ ಹೊಗಳಿದರು.

ವಿಸ್ಮಯನ ನೆನಪಿನಿಂದಾಗಿ ಪ್ರವಾಸದ ಆ ಕ್ಷಣಗಳು ಮರುಕಳಿಸಿದಂತಾಗಿ ತುಟಿಗಳು ಬಿರಿದವು. ಬೆಟ್ಟ ಹತ್ತುವಾಗ ತನ್ನ ಭುಜ ಬಳಸಿ ವಿಸ್ಮಯ್ ಹತ್ತಿಸಿದ್ದು, ಅವನ ಸಾಮಿಪ್ಯ, ಆ ಮಾತುಗಳು ನೆನಪಾಗಿ ತನು ಮೆಲ್ಲನೆ ಕಂಪಿಸಿತು. ವಿಸ್ಮಯನ ನೆನಪುಗಳು ಮನದೊಳಗಿನ ಕೋಗಿಲೆಯನ್ನು ತಟ್ಟಿ ಎಬ್ಬಿಸಿ ಮಧುರವಾಗಿ ಹಾಡುವಂತೆ ಮಾಡಿತು. ತಾನು ಅವನಿಂದ ದೂರ ಸರಿದು ಅವನನ್ನು ಅವಾಯ್ಡ್‌ ಮಾಡಿದ್ದು, ಆತ ಮುನಿಸಿಕೊಂಡು ಮತ್ತೇ ತನ್ನೊಂದಿಗೆ ಮಾತೇ ಆಡದ್ದು, ಅವನ ಆ ರೀತಿಗೆ ತಾನು ಬೇಸರಿಸಿಕೊಂಡದ್ದು ಎಲ್ಲವೂ ನೆನಪಾಗಿ ನಕ್ಕಳು.

‘ಯಾಕೆ ಪುಟ್ಟಾ ಒಬ್ಬೊಬ್ಬಳೇ ನಗ್ತಾ ಇದ್ದೀಯಾ. ಏನು ನೆನಪಾಯ್ತು ನಿಂಗೆ, ನಂಗೂ ಹೇಳು, ನಾನು ನಗ್ತಿನಿ ನಿನ್ನ ಜೊತೆ’ ಅಂಬುಜಮ್ಮ ತಾವು ನಗುತ್ತ ಹೇಳಿದಾಗ ‘ಅಜ್ಜಿ ಟೂರ್‌ನಲ್ಲಿ ನಡೆದದ್ದು ನೆನಪಾಯ್ತು ಅಜ್ಜಿ, ವಿಸ್ಮಯ್ ಚಿಕ್ಕವರಿದ್ದಾಗ ಶ್ರವಣಬೆಳಗೊಳದ ಬೆಟ್ಟಕ್ಕೆ ಹೋಗಿದ್ದರಂತೆ, ಗೊಮ್ಮಟೇಶ್ವರ ಯಾಕೆ ಚಡ್ಡಿನೇ ಹಾಕಿಲ್ಲ ಅಂತ ಕೇಳಿ ಮೇಷ್ಟ್ರಿಂದ ಬೈಸಿ ಕೊಂಡಿದ್ದರಂತೆ. ಅದು ನೆನಪಾಗಿ ನಗು ಬಂತು’ ಎನ್ನುತ್ತ ಮತ್ತೇ ನಕ್ಕಳು.

ಅವಳ ನಗುವನ್ನೇ ನೋಡುತ್ತ ‘ಎಷ್ಟು ಚೆನ್ನಾಗಿ ನಗ್ತಿಯೇ ತಾಯಿ, ನಿನ್ನ ನಗುವೇ ನಾನು ನೋಡಿರಲಿಲ್ಲ, ಆ ಪುಣ್ಯಾತ್ಮನ ಹೊಟ್ಟೆ ತಣ್ಣಗಿರಲಿ, ನಿನ್ನ ಮುಖದಲ್ಲಿ ನಗೆ ಮೂಡಿಸಿದನಲ್ಲ’ ವಿಸ್ಮಯನನ್ನು ಬಾಯಿ ತುಂಬಾ ಹೊಗಳಿದರು.

ಅಷ್ಟರಲ್ಲಿ ನೀಲಾ ಮನೆಗೆ ಬಂದಿದ್ದಳು. ‘ಏನೂ ಅಜ್ಜಿ ಮೊಮ್ಮಗಳು ಹಾಯಾಗಿ ಮಾತಾಡಿಕೊಂಡು ಕುತ್ಕೊಂಡು ಬಿಟ್ಟಿದ್ದೀರಾ, ಇಳಾ ಬೇರೆ ನಗ್ತ ಇದ್ದಾಳೆ’ ಪಕ್ಕದಲ್ಲಿ ಕೂರುತ್ತ ಕೇಳಿದಳು.

‘ಟೂರ್ ವಿಷಯ ಏನೋ ಹೇಳ್ತ ಇದ್ದಳು, ನೀನ್ಯಾಕೆ ಇಷ್ಟೊಂದು ತಡವಾಗಿ ಬಂದಿದ್ದೀಯಾ’ ಅಂಬುಜಮ್ಮ ತಿಂಡಿ ತಂದು ಕೊಡುತ್ತ ಕೇಳಿದರು.

‘ನಮ್ಮ ಶಾಲೆ ತೋಟ ತುಂಬಾ ಚೆನ್ನಾಗಿದೆ ಅಂತ ಯಾರೋ ಪೇಪರಿನೋರು ಬಂದಿದ್ದರು. ನಾಳೆ ಪೇಪರಿನಲ್ಲಿ ಹಾಕ್ತರಂತೆ. ಫೋಟೋ ತಗೋತ ಇದ್ದರು. ಅದಕ್ಕೆ ತಡವಾಯಿತು’ ವಿವರಣೆ ನೀಡಿದಳು.

‘ಪೇಪರಿನಲ್ಲಿ ಹಾಕಿಸೋ ಅಷ್ಟು ಚೆನ್ನಾಗಿದೆಯಾ ಅಮ್ಮ, ನಿಮ್ಮ ಮಕ್ಕಳು ಮಾಡಿರೋ ತೋಟ’ ಆಚರ್ಯ ಪಟ್ಟಳು ಇಳಾ.

’ನೀನು ಆ ಕಡೇ ಬಂದೇ ಇಲ್ಲ ಅಲ್ವಾ. ನೋಡು ಬಾ ಏನೇನು ಬೆಳೆದಿದಾರೆ ಅಂತ. ಮಾಸ್ಟರಿಗೆ ಅದೇನು ಆಸಕ್ತಿ ಅಂತಿಯಾ ಸಂಜೆ ಮೂರು ಗಂಟೆಯಿಂದ ಕಡ್ಡಾಯವಾಗಿ ಮಕ್ಕಳನ್ನು ತೋಟಕ್ಕೆ ಇಳಿಸಿಬಿಡುತ್ತಾರೆ. ದೊಡ್ಡ ಕೆಲಸಕ್ಕೆ ಆಳುಗಳ ನೆರವು ಪಡೆಯುತ್ತಾರೆ. ಪ್ರತಿ ಮಗುನೂ ಒಂದೊಂದು ಗಿಡ ತಂದು ಅದನ್ನು ತಾವೇ ಜವಾದ್ದಾರಿ ವಹಿಸಿಕೊಂಡು ಬೆಳೆಸಬೇಕು, ಹಾಗೆ ಕಡ್ಡಾಯ ಮಾಡಿದ್ದಾರೆ. ಎಷ್ಟು ಖರ್ಚಾದ್ರೂ ವಿಸ್ಮಯ್ ಹಿಂದೆ ಮುಂದೆ ನೋಡದೆ ಖರ್ಚು ಮಾಡುತ್ತಾರೆ. ಇನ್ನೇನು ಆಗಬೇಕು ತೋಟ ಸುಂದರವಾಗಿರೋಕೆ’ ಮತ್ತೆ ವಿಸ್ಮಯ್ ಗುಣಗಾನ.

‘ನಾಳೇ ಬೆಳಗ್ಗೆನೇ ನಿಮ್ಮ ಶಾಲೆಯ ತೋಟ ನೋಡಿಕೊಂಡು ಬರ್ತೀನಿ. ಅದೇನು ಬೆಳೆದಿದ್ದಾರೋ ನೋಡೋಣ’ ಕುತೂಹಲದಿಂದ ಹೇಳಿದಳು.

ಬೆಳಗ್ಗೆ ಎದ್ದವಳೇ ಶಾಲೆಯತ್ತ ನಡೆದಳು. ಶಾಲೆಯ ಪಕ್ಕದಲ್ಲಿಯೇ ತೋಟವಿತ್ತು. ಹಳೆಯ ಮರಗಳನ್ನು ಹಾಗೆಯೇ ಬಿಟ್ಟಿದ್ದರು. ಶಾಲೆಯ ಮುಂದಿನ ಜಾಗವನ್ನೂ ಖಾಲಿ ಬಿಟ್ಟಿರಲಿಲ್ಲ. ಅಚ್ಚಹಸಿರ ಹುಲ್ಲು ಬೆಳೆದು ಇಡೀ ಅಂಗಳ ಹಸಿರಾಗಿ ಕಾಣುತ್ತಿತ್ತು. ಹತ್ತಾರು ಔಷಧಿಯ ಗಿಡ ಬಳ್ಳಿಗಳು ಗಾಳಿ ಬೀಸಿದಾಗ ಬಳುಕುವ ಬಳ್ಳಿಗಳು, ಗಿಡ ಮರಗಳ ಮೇಲೆ ಕುಳಿತು ಚಿಲಿಪಿಲಿ ಗುಟ್ಟುತ್ತಿರುವ ಹಕ್ಕಿಗಳ ಬಳಗ, ಅಳಿಲುಗಳ ಪುಟ ಪುಟನೇ ಓಡಾಟ, ದುಂಬಿಗಳು ಒಂದು ಹೂವಿನಿಂದ ಮತ್ತೊಂದು ಹೂವಿಗೆ ಝೇಂಕರಿಸುತ್ತ ಹಾರಾಡುತ್ತಿದ್ದು ಕಣ್ಣಿಗೆ ಹಬ್ಬವೆನಿಸಿತ್ತು. ಈ ಗಿಡಗಳನ್ನೆಲ್ಲ ಅದೆಲ್ಲಿಂದ ತಂದು ಬೆಳೆಸಿದರೋ, ವಿವಿಧ ಬಣ್ಣದ ಗುಲಾಬಿಗಳು ಪಾಂಪ್ಲೆಂಟ್ ಬಳ್ಳಿ, ಚರ್ರಿ, ಬಗೆ ಬಗೆಯ ದಾಸವಾಳಗಳು, ರಾತ್ರಿ ರಾಣಿ, ತುಳಸಿ, ನಿಂಬೆಗಿಡ, ಕರಿಬೇವಿನ ಗಿಡ, ನುಗ್ಗೆ ಇವುಗಳ ಜೊತೆಗೆ ಸೊಪ್ಪುಗಳನ್ನು ಬೆಳೆಸಿದ್ದಾರೆ. ಗಿಡಗಳನ್ನು ಕತ್ತರಿಸಿ ಅಂದವಾದ ಆಕಾರ ಕೊಟ್ಟಿದ್ದಾರೆ. ಶಾಲೆಯ ಮುಂದೆ ಸಾಲಾಗಿ ಕುಂಡಗಳನ್ನು ಜೋಡಿಸಿದ್ದಾರೆ. ಅವು ವಿದ್ಯಾರ್ಥಿಗಳೇ ತಂದ ಕುಂಡಗಳಾಗಿವೆ, ಸುಂದರ ಶಾಲೆ, ಸುಂದರ ಉದ್ಯಾನ, ಸುಂದರ ಪರಿಸರ ಒಟ್ಟಿನಲ್ಲಿ ಶಾಲಾ ವಾತಾವರಣವೇ ಸುಂದರವಾಗಿದೆ. ಶಿಕ್ಷಕರ ಪರಿಸರ ಪ್ರೇಮವನ್ನು ಮೆಚ್ಚತಕ್ಕದ್ದೆ. ಮಕ್ಕಳಿಗೂ ಅದೇ ಪರಿಸರ ಪ್ರೇಮವನ್ನು ಬೆಳೆಸುತ್ತಿದ್ದಾರೆ. ಮೆಚ್ಚುಗೆ ತುಂಬಿ ಬಂತು. ಮೈಮರೆತು ಪ್ರಕೃತಿಯ ಆಸ್ವಾದನೆಯಲ್ಲಿ ಮುಳುಗಿ ಹೋಗಿದ್ದಾಳೆ. ಕಿವಿಯ ಬಳಿ ಕುಹೂ ಕುಹೂ ಅಂತ ಕೇಳಿದಂತಾಗಿ ಬೆಚ್ಚಿ ಇತ್ತ ತಿರುಗಿದರೆ ವಿಸ್ಮಯ್ ಜಾಗಿಂಗ್ ಡ್ರೆಸ್‌ನಲ್ಲಿ ನಿಂತು ವಿನೋದವಾಗಿ ನಗುತ್ತಿದ್ದಾನೆ.

‘ಏನ್ರಿ ಪ್ರಪಂಚನೇ ಮರೆತು ನಿಂತುಬಿಟ್ಟಿದ್ದೀರಾ, ಎಚ್ಚರಿಸಬಾರದು ಅಂತಿದ್ದೆ, ಆದರೆ ಅವತ್ತಿನ ಕೋಪ ಹೋಗಿದೆಯೋ ಇಲ್ಲವೋ ಅಂತ ತಿಳ್ಕೊಬೇಕು ಅಂತ ಕೋಗಿಲೆತರ ನಿಮ್ಮ ಕಿವಿಯ ಹತ್ತಿರ ಕೂಗಿದೆ.’

ಅವನ ತುಂಟ ನಗು, ಕೀಟಲೆ ತುಂಬಿದ ಮಾತುಗಳಿಂದ ನಗು ಬಂದರೂ ಗಂಭೀರವಾಗಿ ‘ನಿಮ್ಮ ಮೇಲೆ ನಾನ್ಯಾಕೆ ಕೋಪ ಮಾಡಿಕೊಳ್ಳಲಿ, ಅಷ್ಟಕ್ಕೂ ನನಗ್ಯಾಕೆ ನಿಮ್ಮ ಮೇಲೆ ಕೋಪ’ ಅವನನ್ನೆ ನೋಡುತ್ತ ಹೇಳಿದಳು. ಮತ್ತಷ್ಟು ಹತ್ತಿರ ಬಂದ ವಿಸ್ಮಯ್ ‘ನಿಜ ಹೇಳಿ, ನನ್ನ ಮೇಲೆ ನಿಜವಾಗಲೂ ಕೋಪ ಇಲ್ಲವಾ’ ಅವಳ ಕಣ್ಣುಗಳನ್ನು ದಿಟ್ಟಸುತ್ತ ಹೇಳಿದ. ಅವನ ಕಣ್ಣುಗಳನ್ನು ಎದುರಿಸಲಾರದೆ ದೃಷ್ಟಿ ತಪ್ಪಿಸಿದಳು. ಅವನು ಅಷ್ಟು ಹತ್ತಿರದಲ್ಲಿ ನಿಂತಿರುವುದು ಉಸಿರು ಕಟ್ಟಿದಂತಾಗಿ ಒಂದೆರಡು ಹೆಜ್ಜೆ ಹಿಂದೆ ಸರಿದಳು. ವಿಸ್ಮಯ್ ಕೂಡ ಮುಂದಕ್ಕೆ ಹೆಜ್ಜೆ ಇರಿಸಿದ. ಅವಳ ಮೊಗವನ್ನು ಬೆರಳಿನಿಂದ ಮೆಲಕ್ಕೆತ್ತಿ ‘ನಿಮಗೆ ನಿಜವಾಗಲೂ ನನ್ನ ಮೇಲೆ ಕೋಪ ಇಲ್ಲ ಅಂದರೆ ನನಗೆ ತುಂಬಾ ಸಂತೋಷವಾಗುತ್ತೆ. ಆದರೆ ಈ ಮುಖ ಇಷ್ಟೊಂದು ಸುಂದರವಾಗಿದೆ. ಆದರೆ ಅದು ನಗುವಿನಿಂದ ಅರಳಬಾರದೆ? ನೀವು ನಕ್ಕಿದ್ದನ್ನ ನಾನು ನೋಡಿದ್ದು ಒಂದೇ ಸಲ. ನೋಡಿ ಆ ಹೂವು ಅರಳಿ ಎಷ್ಟೊಂದು ಸುಂದರವಾಗಿ ನೋಡುಗರಿಗೆ ಸಂತೋಷ ಕೊಡ್ತಾಯಿದೆ. ಆ ಸಂತೋಷ ನಿಮ್ಮಿಂದ ಬೇರೆಯವರಿಗೆ ಸಿಗಬಾರದು ಅನ್ನೋ ಸ್ವಾರ್ಥಿ ನೀವು’ ತನ್ಮಯವಾಗಿ ಅವಳನ್ನು ದಿಟ್ಟಿಸುತ್ತ ಮೆಲ್ಲನೆ ಉಸುರಿದ.

ತನ್ನ ಮುಖವನ್ನು ಹಿಡಿದು ಎತ್ತಿದ್ದ ಅವನ ಬೆರಳನ್ನು ಅತ್ತ ಸರಿಸಿ ಅಲ್ಲಿಂದ ಓಡಿ ಹೋಗಿಬಿಟ್ಟಳು. ಅವಳು ಓಡುತ್ತಿದ್ದರೆ ಜಿಂಕೆಮರಿ ಓಡುತ್ತಿದ್ದಂತೆ ಭಾಸವಾಗಿ ಅತ್ತಲೇ ನೋಡುತ್ತ ನಿಂತುಬಿಟ್ಟ. ಮನೆಗೆ ಬಂದರೂ ಅವಳ ಉಸುರಿನ ಏರಿಳಿತ ನಿಂತಿರಲಿಲ್ಲ. ಓಡಿಬಂದಿದ್ದರಿಂದ ಮುಖವೆಲ್ಲ ಕೆಂಪಾಗಿ ಬೆವರು ಹರಿಯುತ್ತಿತ್ತು. ಮನೆಯ ಮುಂದಿನ ಜಗಲಿ ಮೇಲೆ ಕುಳಿತು ಕಣ್ಮುಚ್ಚಿದಳು. ವಿಸ್ಮಯ್ ಇನ್ನು ಹತ್ತಿರದಲ್ಲಿರುವಂತೆ, ಅವನ ಬೆರಳು ತನ್ನ ಮುಖವನ್ನು ಸ್ಪರ್ಶಿಸುತ್ತಿರುವಂತೆ ಭಾಸವಾಗಿ ಮೆಲ್ಲನೆ ಕಂಪಿಸಿದಳು. ಉದ್ವೇಗದಿಂದ ಉಸುರಿನ ಗತಿ ಏರು ಪೇರಾಯಿತು. ಥೂ ವಿಸ್ಮಯ್ ತಾನು ಹೋಗಿದ್ದಾಗಲೇ ಅಲ್ಲಿಗೆ ಬರಬೇಕೆ? ತಾನು ಹೀಗೆ ಓಡಿಬಂದಿದ್ದಕ್ಕೆ ಏನು ಅಂದುಕೊಂಡನೊ. ತಾನಾದರೂ ಯಾಕೆ ಓಡಿ ಬರಬೇಕಾಗಿತ್ತು. ಅವನ ಬೆರಳನ್ನು ಸರಿಸಿ ಸಹಜವಾಗಿ ಮಾತನಾಡಬೇಕಿತ್ತು. ಅವನು ಹತ್ತಿರ ಬಂದಾಗ ತಾನು ದೂರವೇ ನಿಂತು ಉತ್ತರಿಸಬೇಕಿತ್ತು. ತನ್ನ ಮೌನದಿಂದ, ತನ್ನ ನಡವಳಿಕೆಯಿಂದ ಮತ್ತಷ್ಟು, ಬೇಸರವಾಯಿತೋ ಏನೋ, ಥೂ ತನಗೇನಾಯಿತು. ಏಕೆ ಅವನೊಂದಿಗೆ ಸಹಜವಾಗಿರಲು ತನ್ನಿಂದ ಸಾಧ್ಯವಾಗುತ್ತ ಇಲ್ಲ. ಅವನಿಂದ ತಪ್ಪಿಸಿಕೊಳ್ಳಲು ಏಕೆ ಸದಾ ಬಯಸುತ್ತೇನೆ ಎಂದು ಪರಿತಪಿಸಿದಳು.

ಕಾಫಿ ಕುಡಿಯುತ್ತ ಹೊರ ಬಂದ ನೀಲಾ, ಇಳಾ ಜಗುಲಿ ಮೇಲೆ ಕಣ್ಮುಚ್ಚಿ ಕುಳಿತಿದ್ದನ್ನು ಕಂಡು ಆತಂಕದಿಂದ ‘ಇಳಾ, ಇಲ್ಯಾಕೆ ಕುಳಿತಿದ್ದಿಯಾ? ಏನಾಯ್ತು? ಎಂದು ಕೇಳಿದಳು.

ಮೆಲ್ಲನೆ ಕಣ್ಣುಬಿಟ್ಟು ತನ್ನ ಆಲೋಚನೆಯಿಂದ ಹೊರ ಬಂದ ಇಳಾ ‘ಯಾಕಮ್ಮ ಗಾಭರಿ ಆಗ್ತಿಯಾ? ಏನೂ ಆಗಿಲ್ಲ. ತೋಟದಿಂದ ಈಗ ತಾನೆ ಬಂದೆ. ತೋಟನ್ನೆಲ್ಲ ಸುತ್ತಿಬಂದೆ. ಎಷ್ಟೊಂದು ಚೆನ್ನಾಗಿ ತೋಟ ಮಾಡಿದ್ದರಮ್ಮ, ಅಲ್ಲಿ ಇಲ್ಲದೆ ಇರೋ ಗಿಡಗಳೇ ಇಲ್ಲವೇನೋ ಅನ್ನಿಸ್ತು. ನಮ್ಮ ಜಾಗದ ಚಿತ್ರಣವೇ ಬದಲಾಗಿಬಿಟ್ಟಿದೆ. ನಮ್ಮ ಜಾಗ ಖಾಲಿ ಇದ್ದು ಪಾಳುಬಿದ್ದಂತೆ ಕಾಣುತ್ತಿತ್ತು. ಈಗ ನೋಡು ನಂದನವನ ಆಗಿಬಿಟ್ಟಿದೆ. ಶಾಲೆ ಮುಂದೆ ಬೆಳೆಸಿರೊ ಲಾನ್ ಕೂಡ ಶಾಲೆಗೆ ಒಳ್ಳೆ ಕಳೆ ತಂದು ಕೊಟ್ಟಿದೆ. ಊಟಿಯಲ್ಲಿರೋ ಬಟಾನಿಕಲ್ ಗಾರ್ಡನ್ನಿನ ಒಂದು ಭಾಗವೇನೋ ಅನ್ನೋ ಹಾಗಿದೆ. ನಿಮ್ಮ ಶಾಲೆಯ ಉದ್ಯಾನವನ್ನು ಚೆನ್ನಾಗಿ ಮೇಂಟೇನ್ ಮಾಡಿದ್ದಿರಾ. ಎಲ್ಲಾ ಸುತ್ತಾಡಿ ಬಂದೆನಲ್ಲ ಸ್ವಲ್ಪ ಆಯಾಸ ಅನ್ನಿಸಿ ಕಣ್ಣುಮುಚ್ಚಿ ಕುಳಿತಿದ್ದೆ ಅಷ್ಟೆ. ಅಜ್ಜಿ ಕಾಫಿ ಕೊಡು’ ಅಲ್ಲಿಂದಲೇ ಅಜ್ಜಿಗೆ ಕೂಗು ಹಾಕಿದಳು. ಅವಳು ಬಂದಿದ್ದು ಗೊತ್ತಾಗಿ ಅಷ್ಟರಲ್ಲಾಗಲೇ ಅಂಬುಜಮ್ಮ ಕಾಫಿ ಬೆರಸಿ ತರುತ್ತಿದ್ದರು.

ಅಜ್ಜಿಯಿಂದ ಕಾಫಿ ತೆಗೆದುಕೊಂಡ ಇಳಾ ‘ಅಜ್ಜಿ ನಿಮಗೆ ಹೇಗೆ ನನ್ನ ಮನಸ್ಸು ಅರ್ಥವಾಗುತ್ತೆ. ನನಗೆ ಬಂದ ಕೂಡಲೇ ಕಾಫಿ ಕೊಡಬೇಕು ಅಂತ ಹೇಗಜ್ಜಿ ನಿಮ್ಗೆ ಗೊತ್ತಾಯ್ತು, ಮನಸ್ಸು ಓದೋ ವಿದ್ಯೆ ಬರುತ್ತಾ’ ಅಭಿಮಾನದಿಂದ ಕೇಳಿದಳು.

‘ಇದಕ್ಕೆ ಯಾಕೆ ಮುದ್ದು, ಮನಸು ಓದೋ ವಿದ್ಯೆ ಬೇಕು, ಈ ಚಳೀಲಿ ಅಲ್ಲಿವರೆಗೂ ಹೋಗಿದ್ದೀಯಾ, ನಡುಗ್ತ ಬಂದಿದ್ದೀಯಾ, ಈಗ ಬಿಸಿ ಬಿಸಿ ಕಾಫಿ ಬೇಕು ಅಂತ ಅನ್ನಿಸೋದು ಸಹಜ ಅಲ್ವೆ, ಅದಕ್ಕೆ ನಿನ್ನ ದನಿ ಕೇಳಿದ ಕೂಡಲೇ ಕಾಫಿ ಬೆರಸಿ ತಂದೆ’ ಸಹಜವಾಗಿಯೇ ಹೇಳಿದರು.

‘ಇಳಾ, ತೋಟಕ್ಕೆ ಬಾಳೆಗಿಡ ಹಾಕಿಸಿದಿಯಾ, ಗದ್ದೆಗೂ ಹಾಕಿಸಿದಿಯಾ, ಅದಕ್ಕೆಲ್ಲ ಕೆಲ್ಸ ಮಾಡೋಕೆ ಆಳುಗಳಿಗೆ ಕಷ್ಟವಾಗುತ್ತೆ ಕಣೆ, ಕಾಫಿ ತೋಟದ ಕೆಲಸ ಸಾಕಷ್ಟಿದೆ. ಇರೋ ಆಳುಗಳಲ್ಲಿ ಈಗ ಹಸು ನೋಡಿಕೊಂಡು, ಹಾಲು ಕರೆದು ಡೈರಿಗೆ ಹಾಕೋಕೆ ಬಿಟ್ಟಿದ್ದೀಯಾ, ನಿಂಗೆ ಗೊತ್ತಾಗಲ್ಲ ಇಳಾ. ಈಗ ಆಳುಗಳು ಸಿಗ್ತಾಯಿಲ್ಲ. ಇಲ್ಲಿರೋರು ಮೊದಲಿನಿಂದ ಇದ್ದೋರೇ, ಹೆಚ್ಚು ಕೆಲಸ ಅಂದ್ರೆ ಆಳುಗಳನ್ನು ಎಲ್ಲಿ ಹೊಂದಿಸೋದು’ ಕೊಂಚ ಚಿಂತೆಯಲ್ಲಿಯೇ ಹೇಳಿದಳು.

‘ಈಗೇನು ಅಂತ ಸಮಸ್ಯೆ ಬಂದಿಲ್ಲವಲ್ಲ, ನೋಡೋಣ ಮುಂದೆ- ಈಗ್ಲೆ ಯಾಕೆ ಚಿಂತೆ ಮಾಡ್ತೀಯಾ’ ನೀಲಾಳಿಗೆ ಸಮಾಧಾನಿಸಿದಳು.

‘ಹಾಗಲ್ಲ ಇಳಾ, ಇರೋ ದುಡ್ಡನ್ನೆಲ್ಲ ಸುರಿದಿದ್ದೀಯಾ, ಅದಕ್ಕೆ ತಕ್ಕಂತೆ ಕೆಲಸ ನಡಿಬೇಕು ತಾನೇ, ಲಾಭ ಬರದಿದ್ರೂ ಪರ್ವಾಗಿಲ್ಲ, ಆದರೆ ನಷ್ಟ ಆದ್ರೆ ಅದನ್ನ ನಿಭಾಯಿಸೊ ಶಕ್ತಿ ನಮಗೆ ಇರಬೇಕಲ್ಲ’ ನೀಲಾಳ ಚಿಂತೆ ಕಡಿಮೆಯಾಗಿರಲೇ ಇಲ್ಲ.

‘ಅಮ್ಮ, ನಿಧಾನವಾಗಿ ಕೆಲ್ಸ ಮಾಡಿಸಿದರೆ ಆಯ್ತು. ತೀರ ಸಾಲದೆ ಇದ್ರೆ ದೊಡ್ಡಪ್ಪಂಗೆ ಹೇಳೋದು, ಹೇಗೊ ಅಡೆಜಸ್ಟ್ ಮಾಡುತ್ತಾರೆ’ ಅನುಭವವಿಲ್ಲದ ಇಳಾ ಹೇಳುತ್ತಿದ್ದರೆ-

‘ಇಳಾ, ಇದೇ ಸಮಸ್ಯೆ ನಿಮ್ಮಪ್ಪ ಶುಂಠಿ ಹಾಕಿದಾಗಲೂ ಕಾಡಿತ್ತು. ಎಲ್ಲೂ ಆಳುಗಳು ಸಿಗದೆ ಬೇರೆ ಕಡೆಯಿಂದ ವ್ಯಾನ್ ಮಾಡಿ ಕರಿಸಿಕೊಂಡರು. ಅವರು ಚೆನ್ನಾಗಿ ಕೆಲಸ ಮಾಡಲಿ ಎಂದು ಒಂದಕ್ಕೆ ಎರಡರಷ್ಟು ಕೂಲಿ ಕೊಟ್ಟರು. ಅವರಿಗೆ ಕುಡಿಸಿ, ತಿನ್ನಿಸಿ ಹಣವನ್ನು ನೀರಿನಂತೆ ಚೆಲ್ಲಿದರು. ಹೇಗೂ ಶುಂಠಿ ರೇಟು ಸಿಕ್ಕೆಸಿಗುತ್ತೆ ಅನ್ನೊ ಧೈರ್ಯ ನಿಮ್ಮಪ್ಪಂಗೆ, ಏನಾಯ್ತು ಕೊನೆಗೆ… ಲಾಭ ಇರಲಿ, ಅಸಲು ಕೂಡ ಹುಟ್ಟದೆ ತಲೆ ಮೇಲೆ ತೀರಿಸೋಕೆ ಆಗದೆ ಇರೋ ಸಾಲ ಹೊತ್ಕೊಂಡು ಈ ಲೋಕನೇ ಬಿಟ್ಟು ಹೋದರು. ಅದಕ್ಕೆ ಹೇಳ್ತಾ ಇದ್ದೀನಿ. ಏನೇನೋ ಪ್ರಯೋಗ ಮಾಡೋಕೆ ಹೋಗಿ ಈಗ ತಿನ್ತ ಇರೋ ಅನ್ನಕ್ಕೂ ಕಲ್ಲು ಹಾಕಬೇಡ’ ಏಕೋ ಧ್ವನಿ ಕಠಿಣವಾಯ್ತು.

ಇಳಾಗೆ ಅಮ್ಮನ ಮಾತು ಒರಟು ಎನಿಸಿದರೂ ಬೇಸರಗೊಳ್ಳಲಿಲ್ಲ. ಅಮ್ಮಂಗೆ ಇವತ್ತಲ್ಲ ನಾಳೆ ಗೊತ್ತಾಗುತ್ತೆ, ನಾನು ಅಪ್ಪನ ರೀತಿ ಹೆಜ್ಜೆ ಇಡದೆ ಬೇರೆ ತರನೇ ಇದ್ದೀನಿ ಅಂತ. ಬರೀ ಕಾಫಿನೇ ನೆಚ್ಚಿಕೊಂಡಿಲ್ಲ. ಬಾಳೆನೂ ನೆಚ್ಚಿಕೊಂಡಿಲ್ಲ, ಇನ್ನೊಂದು ವರ್ಷ ಹೇಗೆ ಆದಾಯ ಬರೋಕೆ ಶುರುವಾಗುತ್ತೆ ಕಾಯೋ ತಾಳ್ಮೆ ಅಮ್ಮನಿಗಿಲ್ಲ ಎಂದುಕೊಂಡು ಏನೂ ಮಾತಾಡದೆ ಎದ್ದು ಒಳ ನಡೆದಳು.

ಅವಳು ಅತ್ತ ಹೋಗುತ್ತಿದ್ದ ಹಾಗೆ ಅಂಬುಜಮ್ಮ ನೀಲಾಗೆ ‘ನೀಲಾ ಅಷ್ಟೊಂದು ಒರಟಾಗಿ ಮಾತನಾಡಬಾರದಿತ್ತು ನೀನು, ಮಗು ನೊಂದುಕೊಂಡು ಹೋಯಿತು. ಅವಳು ತುಂಬಾ ಜಾಣೆ ಕಣೆ, ಯಾವುದನ್ನು ಮುಂದಾಲೋಚನೆ ಇಲ್ಲದೆ ಮಾಡುವುದಿಲ್ಲ. ಈ ರೀತಿ ತೋಟ ಮಾಡೋಕೆ ಮುಂಚೆ ಅಂತಹ ಹತ್ತಾರು ತೋಟ ನೋಡಿಕೊಂಡು ಅವರು ಲಾಭ ಗಳಿಸುತ್ತಿರೋದನ್ನ ನೋಡಿಯೇ ನಮ್ಮ ತೋಟದಲ್ಲಿ ಹಾಗೆ ಮಾಡ್ತ ಇದ್ದಾಳೆ. ಅವಳೇನು ಹಾಳು ಮಾಡಬೇಕು ಅಂತ ಇದ್ದಾಳಾ. ಬೇರೆ ಹೆಣ್ಣುಮಕ್ಕಳಾಗಿದ್ರೆ ಟಿ.ವಿ. ನೋಡ್ಕೊಂಡು ಹೇಗೊ ಕಾಲ ತಳ್ಳಿಬಿಡುತ್ತಿದ್ದವು. ಈ ವಯಸ್ಸಿನಲ್ಲಿ ತೋಟದ ಜವಾಬ್ಧಾರಿ ಹೊತ್ತುಕೊಂಡು ಬಿಡುವಿಲ್ಲದೆ ದುಡಿಯುತ್ತ ಇದ್ದಾಳೆ. ಹಾಲಲ್ಲೇ ನೋಡು, ಪ್ರತಿ ತಿಂಗಳು ತಪ್ಪದೇ ಆದಾಯ ಬರ್ತಾ ಇದೆ. ಅದರ ಗೊಬ್ಬರದಿಂದ ಬೇರೆ ಗೊಬ್ಬರ ಕೊಳ್ಳೋದು ತಪ್ಪಿತು.

ನಿನ್ನ ಗಂಡನ ತರ ಸುಮ್ನೆ ದುಡ್ಡು ಚೆಲ್ತ ಇಲ್ಲ. ಒಂದಕ್ಕೆರಡು ಲಾಭ ಬರೋ ಹಾಗೆ ಪ್ಲಾನ್ ಮಾಡಿದ್ದಾಳೆ. ತೋಟದಲ್ಲಿ ಸಿಗೊ ಎಲ್ಲಾ ಪದಾರ್ಥಗಳಿಗೂ ರೇಟು ಇದೆ. ಅದನ್ಯಾರು ಮಾರ್ತಾರೇ ಅಂತ ನಿನ್ನ ಗಂಡ ಹಾಳು ಬಿಟ್ಟಿದ್ದ. ಈಗ ನೋಡು ಇಳಾ ಅದಕ್ಕೂ ಗಿರಾಕಿ ಹೊಂದಿಸಿ ದಿನಾ ಒಂದೊಂದನ್ನ ಮಾರ್‍ತಾ ಇದ್ದಾಳೆ. ಕಿತ್ತಲೆ ಹಣ್ಣು, ಗೋಡಂಬಿ, ಸೀಗೆ ಹೀಗೆ ಎಲ್ಲಕ್ಕೂ ದುಡ್ಡು ಸಿಗ್ತಾ ಇದೆ. ಹೇಗೋ ಖರ್ಚಿಗೆ ಆಗುತ್ತಾ. ಅವಳನ್ನ ಏನೇನೋ ಅಂದು ಆಡಿ ಆ ಮಗು ಮನಸ್ಸನ್ನು ನೋಯಿಸಬೇಡ, ಹೇಗೂ ಎಲ್ಲವನ್ನು ಮರೆತು ಗಂಡು ಹುಡುಗನಂತೆ ದುಡೀತಾ ಇದೆ. ನೀನೇನೋ ಸ್ಕೂಲ್ ಅಂತ ಹೋಗಿಬಿಡ್ತೀಯಾ. ಅವಳು ಆಸಕ್ತಿ ತೊಗೊಳ್ದೆ ಇದ್ದಿದ್ರೆ ತೋಟ ಹಾಳು ಬಿದ್ದುಹೋಗ್ತಾಯಿತ್ತು’ ವಿವರವಾಗಿ ಅವಳ ಮನಸ್ಸಿಗೆ ಇಳಾ ಮಾಡ್ತ ಇರೋದು ಸರಿ ಅನ್ನುವಂತೆ ಸ್ಪಷ್ಟಪಡಿಸಿದರು. ಇಳಾ ಬೇಸರಿಸಿಕೊಂಡು ಎದ್ದುಹೋದದ್ದು ನೀಲಾಳಿಗೂ ಕಸಿವಿಸಿ ಎನಿಸಿತ್ತು. ದೊಡ್ಡಮ್ಮ ಹೇಳಿದ ಮೇಲೆ ಇನ್ನು ಯಾವ ವಿಚಾರಕ್ಕೂ ತಲೆ ಹಾಕಬಾರದೆಂದು ನೀಲಾ ನಿರ್ಧರಿಸಿಕೊಂಡಳು. ಏನಾದರೂ ಮಾಡಿಕೊಳ್ಳಲಿ ತಾನಂತು ಎಲ್ಲದಕ್ಕೂ ಸಿದ್ದವಾಗಿರಬೇಕು. ಲಾಭನಾದ್ರೂ ಆಗಲಿ ನಷ್ಟವಾದರೂ ಆಗಲಿ ಎಷ್ಟು ವರ್ಷ. ಒಂದು ಮದುವೆ ಮಾಡಿಬಿಟ್ರೆ ಅವಳ ಗಂಡ ಜವಾಬ್ದಾರಿ ವಹಿಸಿಕೊಳ್ಳುತ್ತಾನೆ. ಆಗ ತಾನು ನೆಮ್ಮದಿಯಾಗಿರಬಹುದು ಎಂದುಕೊಂಡು ದೊಡ್ಡಮ್ಮನ ಮಾತನ್ನು ವಿರೋಧಿಸದೆ ಸುಮ್ಮನಾದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನೆಯು ಪಾಲಾಯ್ತು
Next post ಮಿಂಚುಳ್ಳಿ ಬೆಳಕಿಂಡಿ – ೫೧

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…