ಈ ಮಾತುಗಳು ಮಾತೇ ಕೇಳಲೊಲ್ಲವು
ಮೊಳಕೆ ಒಡೆಯಲೊಲ್ಲವು
ಚಿಗುರಿ ಹೂತು ಕಾತು ಹಣ್ಣಾಗುವುದಂತೂ
ದೂ…ರ
ಷಂಡವಾಗಿವೆ ಮಾತು ಜೊಳ್ಳು ಬೀಜದಂತೆ
ಸಂತಾನ ಶಕ್ತಿಯೇ ಇಲ್ಲ
ಬರೀ ಬೆಂಕಿಯಲ್ಲಿ ತುಪ್ಪ ಹೊಯ್ದು
ಹೊಗೆ ಎಬ್ಬಿಸಿದಂತೆ
ಮಿಥ್ಯಾ ಮಾಯಾಬ್ರಹ್ಮದ ಮಂಜು
ಮೇಲೆ ಮುಚ್ಚಿದಂತೆ
ಹೊಗೆಯಲ್ಲಿ ಸ್ವರ್ಗದ ದೇವತೆಗಳು
ಬ್ರಹ್ಮ ವಿಷ್ಣು ಮಹೇಶ್ವರರು ಅಪ್ಸರೆಯರು
ತೇಲಾಡುತ್ತಿವೆ ಹೆಣ ಮೋಡಗಳಂತೆ
ಭಂಡವಾಗಿವೆ ಮಾತು
ಜೀವ ಇಲ್ಲ ಭಾವ ಇಲ್ಲ
ಗರ್ಭ ಗುಡಿಯಲ್ಲಿ ಹೂತು
ಮಂತ್ರ ಮಣ ಮಣ ಗಂಟೆ ಗಣ ಗಣ
ಗಟ್ಟಿಸಿಕೊಂಡಂತೆ ಬಂಡೆಗೆ ಮಂಡೆ
ಮತ್ತೆ ಮತ್ತೆ ಗುಡಿ ಕಟ್ಟುತ್ತಿವೆ
ಬೊಜ್ಜು ಬೆಳೆಯುತ್ತಿವೆ
ಕಮರುಡೇಗಿನಂತೆ ಮಾತು
ಮೊಂಡಾಗಿವೆ ಮಾತು ಏನನ್ನೂ ಚುಚ್ಚಲಾರವು
ಮರ್ಮಕ್ಕೆ ನಾಟಲಾರವು
ಮತ್ತೆ ಅದೇ ಆದೇ ಸುಪ್ರಭಾತ ಪಾಪ ಪುಣ್ಯ
ಸ್ವರ್ಗ ನರಕ ವೈರಾಗ್ಯ ಭಕ್ತಿ ಮುಕ್ತಿಗಳ
ಹಳೇ ಸವಕಲು ಪ್ಲೇಟು ಕಿರುಚಿದಂತೆ
ದಯೆಯೇ ಧರ್ಮ, ಅಹಿಂಸೆ, ಸತ್ಯಗಳ
ಉರುಳ ಕೊರಳಿಗೆ ಹಾಕಿ ಹಿಚುಕಿದಂತೆ
ಗುಳ್ಳೆಯಾಗಿವೆ ಮಾತು
ಭಾವ ಕವಿಗಳಂತೆ
ದೂರ ದೂರ ನಿಂತು ಪ್ರೀತಿ ಮಾಡುತ್ತವೆ
ಹತ್ತಿರ ಬಂದು ಅಪ್ಪಲಿಲ್ಲ
ಹಿಂಡಿ ರಸ ಹೀರಲಿಲ್ಲ
ಪರದೇಶಿ ಕಫ ಕೆಮ್ಮುಗಳ ವಾಂತಿ ಹರಡಿ
ನವ್ಯವಾದ ಕ್ಯಾನ್ಸರ್ ಏಡ್ಸ್ ರೋಗಗಳು
ಚಿಕನ್ ಗುನ್ಯಾ ಢೆಂಗೆ ಜ್ಜರಗಳು
ಅಕಾಡೆಮಿಗಳಿಗೆ ಏಣಿಯಾಗುತ್ತಿವೆ
ಪ್ರಾಧಿಕಾರ ಪ್ರಶಸ್ತಿಗಳಿಗೆ
ಜ್ಞಾನ ಪೀಠಗಳಿಗೆ ಲಗ್ಗೆ ಹಾಕುತ್ತಿವೆ
ಮಾತಿನಂಗಡಿಗಳು ವಿದ್ಯಾ-ಲಯಗಳಲ್ಲಿ
ತರ್ಕಗಳು ತಿಕ್ಕಾಡಿ ಮಣ್ಣು ಕಸ ಮುಕ್ಕಾಡಿ
ಜಾನಪದ ನೆಕ್ಯಾಡಿ
ತೊಟ್ಟಿಳಲ್ಲಿ ಕಾಗದದ ಉಂಡೆ ಉಂಡೆ
ಅದಕ್ಕೆ ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಾರೆ
ಬೇಳೆ ಬೇಯಿಸಿಕೊಳ್ಳುತ್ತಾರೆ ಹಲವರು
ಪೊಳ್ಳಾಗಿವೆ ಮಾತು ರಾಜಕಾರಣಿಗಳಿಗೆ
ದೇಶ ಲೂಟಿ ಮಾಡಿಕೊಳಲು ಹಡದಿ ಹಾಸುತ್ತವೆ
ಹಾದರಕ್ಕೆ ಗುರಿಯಾಗಿವೆ ಮಾತು
ಕಂಡ ಭಂಡರಿಗೆಲ್ಲ ಸೆರಗು ಹಾಸುತ್ತಿವೆ
ಜೊಳ್ಳಾಗಿವೆ ಮಾತು
ನಯವಂಚಕರ ನಮಸ್ಕಾರ ಚಮತ್ಕಾರಗಳ
ಸರ ಪೋಣಿಸಿ ಕೊರಳಿಗೆ ಹಾಕಿಕೊಂಡು
ಲಂಚ ಮಂಚದ ಮೇಲೆ ಹಾಯಾಗಿ
ಮಲಗುತ್ತಿವೆ ಮುಲುಗುತ್ತಿವೆ
ಬಂಡವಾಳವಾಗಿವೆ ಮಾತು
ಬುದ್ಧ, ಬಸವ ಸರ್ವಜ್ಞರನ್ನು
ಗಾಂಧಿ ವಿವೇಕಾನಂದರನ್ನು
ಹರಾಜಿಗೆ ಹಾಕಲು
ಇಷ್ಟಿಷ್ಟೆ ಅವರ ಹರಿದು ತಿನ್ನುತ್ತ
ತಮ್ಮ ಪೀಠಗಳ ಬಲಿಸಿಕೊಳ್ಳಲು
ಕುತ್ತಿಗೆ ಮಟ ಗಳಿಸಿಕೊಳ್ಳಲು
ಆಕ್ರಂದನ ಮಾಡುತ್ತಿವೆ ಮೇಲೆ ಆತ್ಮಗಳು
ಪರದೇಶಿಗಳಾಗಿ
ಇದ್ದ ದೇಶದಲ್ಲೆ – ಈ ದೇಶದಲ್ಲೆ
*****