ವ್ಯವಸ್ಥೆಯ ವಿರುದ್ಧ ತನ್ನದು ನಿರಂತರ ಹೋರಾಟವೆಂದು ಆ ಹೋರಾಟಕ್ಕಾಗಿ ತನ್ನ ಜನರನ್ನು ಸಜ್ಜುಗೊಳಿಸುವೆನೆಂದು ಹೇಳುತ್ತಲೇ ಪ್ರಸಿದ್ಧಿಗೆ ಬಂದ ತಿಪ್ಪೇಶಿಯ ಸೃಜನಶೀಲತೆ ಲೋಕವನ್ನು ಬೆರಗುಗೊಳಿಸಿತ್ತು. ಅವನ ಕಾವ್ಯ ನಾಟಕಗಳು ಸಮಾಜದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ತೀವ್ರ ಧಾಟಿಯಲ್ಲಿದ್ದು ಜನರನ್ನು ಚಿಂತನೆಗೆ ತೊಡಗಿಸುತ್ತಲೆ ಕನಸುಗಳ ಅದಮ್ಯ ತುಡಿತಕ್ಕೆ, ಜೀವೋಲ್ಲಾಸಕ್ಕೆ ಪ್ರೇರೇಪಿಸುತ್ತಿದ್ದವು.
ಒಬ್ಬ ನಿಜವಾದ ಸೃಜನಶೀಲ ಕವಿ, ಲೇಖಕ ಹೀಗಿರಬೇಕು ಎನ್ನುವುದಕ್ಕೆ ತಿಪ್ಪೇಶಿ ಸಾಕ್ಷಿಯಾಗಿದ್ದನ್ನು ಅವನ ವೈರಿಗಳೂ ಮೆಚ್ಚಿಕೊಂಡಿದ್ದರು. ಪ್ರತಿಭೆ ಗುಡಿಸಲಲ್ಲಿ ಜನ್ಮ ತಾಳುವುದು ಎಂಬಂತೆ ತಿಪ್ಪೇಶಿ ಕೆಳಸ್ತರದ ಬವಣೆಗಳ ಬೆಂಕಿಯಲ್ಲಿ ಬೇಯುತ್ತ ಶುದ್ಧ ಬಂಗಾರವಾದವನು. ಹಾಗೆಯೇ ಜನರ ಕಣ್ಣು ಕುಕ್ಕುವಂತೆ ಬೆಳೆದವನು.
ಗೋಷ್ಠಿಯಲ್ಲಿ ಅವನು ಕವಿತೆಯೋದಿದರೆ, ರಂಗಭೂಮಿಯ ಮೇಲೆ ನಾಟಕ ಪ್ರದರ್ಶಿಸಿದರೆ, ಸಮಾರಂಭದಲ್ಲಿ ಮಾತಾಡತೊಡಗಿದರೆ ಶತಶತಮಾನದಿಂದ ದಲಿತರ ಕೈಕಾಲು ಬಿಗಿದ ಶೃಂಖಲೆಗಳು ತಮ್ಮಷ್ಟಕ್ಕೆ ತಾವೇ ಕಳಚಿಕೊಳ್ಳುತ್ತಿದ್ದವು. ಮೂಕಧ್ವನಿಗೆ ಮಾತು ಬರುತ್ತಿತ್ತು. ಮುದುಡಿದ ಮೈಮನಸ್ಸಿಗೆ ಚೈತ್ರದ ಚೈತನ್ಯ ತುಂಬುತ್ತಿತ್ತು. ಕಂಬನಿ ಸುರಿಸುವ ಕಣ್ಣುಗಳಲ್ಲಿ ಸಾವಿರ ನಕ್ಷತ್ರಗಳು ಪಳಪಳ ಹೊಳೆಯುತ್ತಿದ್ದವು. ಮೇಲುಸ್ತರದ ವಾಮನರಿಂದ ತುಳಿಸಿಕೊಳ್ಳುತ್ತಿದ್ದ ದೇಹಕ್ಕೆ ಒಮ್ಮೆಲೆ ಉಕ್ಕಿನ ತಾಕತ್ತು ಬರುತ್ತಿತ್ತು.
ಶೋಷಿತ ಸಮುದಾಯದ ಕಣ್ಣು ತೆರೆಸಿದ ಕವಿ. ಹೊಸ ಬದುಕಿನ ಆನ್ವೇಷಕ. ಮಾನವೀಯತೆಯ ದೃಷ್ಟಾರ ಎಂಬಿತ್ಯಾದಿ ಬಿರುದು-ಬಾವಲಿಗಳಿಗೆ, ಪ್ರೀತಿ-ಅಭಿಮಾನಕ್ಕೆ ಪಾತ್ರನಾದ ತಿಪ್ಪೇಶಿ ಆಕಾಶದೆತ್ತರಕ್ಕೆ ಬೆಳೆದ. ಅಕೆಡೆಮಿ, ಸಂಸ್ಕೃತಿ ಇಲಾಖೆ, ಸರಕಾರ ಅವನಿಗೆ ಮನ್ನಣೆ ನೀಡಿದವು. ಊರ್ಧ್ವಗೊಂಡಿತು ಅವನ ವ್ಯಕ್ತಿತ್ವ. ತಾನು ಎಲ್ಲಿರಿಗಿಂಥ ಭಿನ್ನವೆಂದು ಗುರುತಿಸಿಕೊಳ್ಳುವಲ್ಲಿ ಮುತುವರ್ಜಿ ವಹಿಸಿದ. ತನ್ನ ಬದುಕು ಮತ್ತು ಬರಹ ಒಂದೇ ಎಂದ. ಅನ್ಯ ವಿಚಾರಗಳೊಂದಿಗೆ ರಾಜಿಯಾಗಲು ತನ್ನಿಂದ ಸಾಧ್ಯವೇ ಇಲ್ಲವೆಂದು ಡಂಗುರ ಸಾರಿದ. ಹೀಗೆ ಬಡಬಡಿಸುತ್ತಲೇ ಅಧಿಕಾರಿಗಳು, ರಾಜಕಾರಣಿಗಳು, ಮಠಾಧೀಶರು ಇವರ ನೆರಳಲ್ಲೇ ಸದಾ ಸುಖಿಗಳಾಗಿರುವ ನಿರ್ಲಜ್ಜರ ನಡುವೆ ಸಿಕ್ಕಿ ಹಾಕಿಕೊಂಡ. ಕೊನಗೆ ಅವನ ಸ್ಥಿತಿ ಎಣ್ಣೆ ಪಾತ್ರೆಯಲ್ಲಿ ಅಸ್ತಿತ್ವಕ್ಕಾಗಿ ಪರದಾಡುವ ನೊಣದ ಗತಿಯೇ ಆಯಿತು.
ತನ್ನ ಸಿದ್ಧಾಂತಗಳಿಗೆ ಬದ್ಧನಾಗಿ ತಮ್ಮ ಬದುಕಿಗೆ ಬುದ್ಧನಾಗಿ ಅನೂನವಾಗಿರುವನೆಂಬ ವಿಶ್ವಾಸದಲ್ಲಿದ್ದ ದಲಿತರು ಅವನ ರೀತಿಗೆ ಮರುಗುತ್ತಿರಬೇಕಾದರೆ, ಮೇಲುಸ್ತರದವರಿಗೋ ಹಿಗ್ಗೋ ಹಿಗ್ಗು. ಅವನ ವೀರಾವೇಶದ ಧ್ವನಿಯನ್ನು ಅಡಗಿಸಿದ ಬಗ್ಗೆ, ಬಂಡಾಯ ಮನೋಧರ್ಮದ ಬೀಜಗಳನ್ನು ಹುರಿದು ಮುಕ್ಕಿದ ಬಗ್ಗೆ, ಅವನನ್ನು ಪೂರ್ತಿ ಆವರಿಸಿಕೊಂಡಿರುವ ತೆವಲುಗಳ ಬಗ್ಗೆ ಹೆಮ್ಮೆ ಪಡುತ್ತಲೇ ಹೋದರು. ಕೊನೆಗೂ ಅವರ ಉದ್ದೇಶ ಈಡೇರಿತ್ತು. ತಿಪ್ಪೇಶಿ ಅವರ ದಾಸಾನುದಾಸನಾದ. ತನ್ನ ಮೇಲಿನ ಅವರ ಸವಾರಿಯನ್ನು ಅವನು ಉದಾರತೆಯೆಂದು ಬಗೆದ. ಒಂದು ಸಮಯಕ್ಕೆ ತನ್ನ ನೆರಳು ಕಂಡರೆ ಅಸಹ್ಯ ಪಡುತ್ತಿದ್ದವರು ಈಗ ಆತ್ಮೀಯತೆಯಿಂದ ಸ್ಪರ್ಶಿಸುತ್ತ ಮಹತ್ವ ಕೊಡುವ ಪರಿಯಿಂದ ತೃಪ್ತಿಗೊಂಡ. ಅವರ ಬ್ರಿಟಿಷ್ ತಂತ್ರಗಳ ಸೂಕ್ಷ್ಮ ತಿಳಿಯದೆ ಹೋಯಿತವನಿಗೆ. ಅವರ ಮುಖವಾಡಗಳೇ ಚಂದವೆನಿಸಿ ಅವನು ಅವರಿಂದ ಮೆಲ್ಲಗೆ ಹತ್ತಿಕ್ಕಿಸಿಕೊಂಡ. ಅವರ ಕ್ರೌರ್ಯ ದಬ್ಬಾಳಿಕೆಗಳಿಗೆಲ್ಲ ಹರಕೆಯ ಕುರಿಯಾಗಿ ತಣ್ಣಗುಳಿದ. ಅವನೊಳಗಿನ ಬುದ್ಧ ಅನಾಥ ಪ್ರಜ್ಞೆಯಿಂದ ನರಳಿ ನರಳಿ ಒಂದಿನ ಸತ್ತು ಹೋದ. ದಲಿತರು ತೀವ್ರ ವೇದನೆ ಅನುಭವಿಸುತ್ತ ಕಣ್ಣೀರು ಹಾಕಿದರು.
ಅವರನ್ನು ತಿಪ್ಪೇಶಿ “ಅಳುಬರುಕಿಗಳು ಎಂದೂ ಉದ್ಧಾರ ಆಗೋದಿಲ್ಲ. ನನ್ನಂತೆ ನಿಮಗೆ ಗರಿಗಳು ಮೂಡೋದಿಲ್ಲ ನೀವು ಆಕಾಶಕ್ಕೆ ಹಾರೋದಿಲ್ಲ” ಎಂದು ಮೂದಲಿಸಿದ.
“ನಿನ್ನ ಹಾರಾಟಕ್ಕೆ ನಮ್ಮ ರಕ್ತ-ಮಾಂಸವನ್ನು ಧಾರೆಯೆರೆದಿದ್ದೇವೆ. ಉಸಿರು ನೀಡಿದ್ದೇವೆ. ಹೆಸರು ನಮ್ಮದು, ಬಸಿರು ಅವರದೋ?” ಜನ ಪ್ರತಿಭಟಿಸಿದ್ದರು.
“ಹೂವಿನ ಜತೆಗೆ ನಾರು ಸ್ವರ್ಗಕ್ಕೆ ಹೋಗಬೇಕು. ನಾನು ಆ ಧಾವಂತದಲ್ಲಿದ್ದೇನೆ ನಿಮಗೆಲ್ಲ ಮತ್ಸರ” ಎಂದ ತಿಪ್ಪೇಶಿ.
“ನಿನಗೆ ಧಿಕ್ಕಾರವಿರಲಿ” ಶೋಷಿತರು ಒಂದೇ ಸಮನೆ ಕೂಗಿದರು.
“ನಿಮ್ಮ ಕೂಗಾಟ, ಪ್ರತಿಭಟನೆ ನನಗೆ ಅಮೃತ ಸಮಾನ” ಎಗ್ಗೆಯಿಲ್ಲದೆ ಹೇಳಿದ ತಿಪ್ಪೇಶಿ.
“ಸ್ವರ್ಗದ ಮಾತು ಹೇಳಿ ನಮ್ಮನ್ನು ನರಕಕ್ಕೆ ತಳ್ಳಿದೆ ನೀನು” ಜನ ಆರೋಪಿಸಿದರು.
“ನಿಮ್ಮ ಅಜ್ಞಾನದಿಂದ ನರಕಕ್ಕೆ ಬಿದ್ದಿರಿ”.
“ಬಿದ್ದವರನ್ನು ಎಬ್ಬಿಸುವ, ಆಳುವವರ ಕಣ್ಣೀರು ಒರೆಸುವ ಮಾತು ಹೇಳಿದ್ದೆ ನೀನು.”
“ನಿಮ್ಮ ಕತ್ತಲಿನ ಪ್ರೀತಿ ಹೋಗಿಲ್ಲ; ಬೆಳಕಿನ ಕನಸು ಕಾಣುತ್ತಿದ್ದೀರಿ”.
“ನಿನ್ನ ಸ್ವಾರ್ಥಕ್ಕೆ ನಮ್ಮನ್ನು ಬಳಸಿಕೊಂಡೆ. ಮೆಟ್ಟಲು ಮಾಡಿಕೊಂಡು ಎತ್ತರಕ್ಕೇರಿದೆ.”
“ಬುದ್ಧಿಗಾಗಿ ನೀವು ಹೆಮ್ಮೆ ಪಡಬೇಕು. ನನ್ನಿಂದಾಗಿ ನಿಮಗೆ ಬೆಲೆ ಬಂತು.”
“ನಿನ್ನ ಹೃದಯ ತಲೆ ಎಲ್ಲ ಕೊಳಕು. ಬಾನಾಡಿ ಆಗು ಎಂದರೆ ರಣ ಹದ್ದು ಆದೆ ನೀನು. ನಿನಗೆ ಧಿಕ್ಕಾರವಿರಲಿ…. ನಿನಗೆ ಧಿಕ್ಕಾರವಿರಲಿ” ಆಕ್ರೋಶ ವ್ಯಕ್ತಪಡಿಸಿದರು ಜನ.
ತಿಪ್ಪೇಶಿ ಅದಕ್ಕೆ ಮುಗುಳ್ನಗೆಯನ್ನು ಪ್ರತಿಕ್ರಿಯಿಸಿದ.
ಕಾಲದ ಹರಳಿನಲ್ಲಿ ಏನೆಲ್ಲ ಆಯಿತು.
ತಿಪ್ಪೇಶಿಗೆ ಅಮೃತ ತೋರಿಸಿದ ಮೇಲುಸ್ತರದ ಜನ ಅದನ್ನು ಅವನಿಗೆ ಕುಡಿಸಲಿಲ್ಲ.
ಅವನನ್ನು ಎದುರಿಗಿಸಿಕೊಂಡೇ ತಮ್ಮ ಪಾರುಪತ್ಯ ನಡೆಸಿದರು, ಪ್ರಚಂಡವಾದರು.
ತಿಪ್ಪೇಶಿ ಕ್ಷೀಣಿಸಿದ್ದ. ಅವನಿಗೆ ತನ್ನ ತಪ್ಪಿನ ಅರಿವು ಆಗುವುದರೊಳಗೆ ಎಲ್ಲ ಮುಗಿದಿತ್ತು. ಅವರು ಬೃಂದಾವನವಾಗಿ ಊರೊಳಗೆಲ್ಲ ನಳನಳಿಸುತ್ತಿದ್ದರು. ಊರ ಹೊರಗೇ ಉಳಿದ ತಿಪ್ಪೇಶಿ ಅನಾಥ ಪ್ರಜ್ಞೆಯಲ್ಲಿ ನರಳುತ್ತಿದ್ದ.
*****