ಮೇಷ್ಟ್ರುಗಳ ಮೇಷ್ಟ್ರು ಪ್ರೊ.ಎಸ್.ಅರ್.ಮಳಗಿ

ಪಾಠ ಹೇಳುವ ಮೂಲಕ ನಾಡುನುಡಿಯ ಏಳಿಗೆಗೆ ಪಾಲು ಸಲ್ಲಿಸಿದ, ಆ ಮೂಲಕ ಜನಮನದಲ್ಲಿ ನೆಲೆನಿಂತ ಕನ್ನಡ ಮೇಷ್ಟ್ರುಗಳ ಒಂದಷ್ಟು ಹೆಸರುಗಳನ್ನು ನೆನಪಿಸಿಕೊಳ್ಳಿ: ಹಳೆ ತಲೆಮಾರಿನ ಟಿ.ಎಸ್.ವೆಂಕಣ್ಣಯ್ಯ, ಎ.ಆರ್.ಕ್ಟಷ್ಣಶಾಸ್ತ್ರಿ, ಬಿ.ಎಂ.ಶ್ರೀಕಂಠಯ್ಯ, ಜಿ.ಪಿ.ರಾಜರತ್ನಂ… ಈ ತಲೆಮಾರಿನ ಕಿ.ರಂ.ನಾಗರಾಜ, ಜಿ.ಎಸ್.ಶಿವರುದ್ರಪ್ಪ, ಹಂ.ಪಾ. ನಾಗರಾಜಯ್ಯ, ಚಿ.ಶ್ರೀನಿವಾಸರಾಜು, ಎಚ್.ಎಸ್. ವೆಂಕಟೇಶ ಮೂರ್ತಿ… ಉಹುಂ, ನೆನಪಿನ ಬಳ್ಳಿ ಮತ್ತಷ್ಟು ಉದ್ದಕ್ಕೆ ಚಿಗುರುವುದಿಲ್ಲ. ತಿಣುಕಿದರೆ ಬೆರಳೆಣಿಕೆಯ ಮತ್ತಷ್ಟು ಹೆಸರುಗಳನ್ನು ಸೇರಿಸಬಹುದೇನೋ, ಅಷ್ಟೇ. ಆದರೆ ‘ಕನ್ನಡ ಮೇಷ್ಟ್ರುಗಳ ಪರಂಪರೆ ಅಷ್ಟು ಸಣ್ಣದಲ್ಲ. ಸ್ಕೂಲು-ಪಾಠಕ್ಕಷ್ಟೇ ಸೀಮಿತವಾಗಿಯೂ ನೂರಾರು ಮೇಸ್ಟ್ರುಗಳು ಸಾವಿರಾರು ವಿದ್ಯಾರ್ಥಿಗಳ ತಿದ್ದಿತೀಡಿ ಬೆಳೆಸಿದ್ದಾರೆ; ಕನ್ನಡಮ್ಮನ ತೇರು ಸಾಗಲು ಕೈಜೋಡಿಸಿದ್ದಾರೆ. ಆದರೆ ಆ ‘ಮೇಷ್ಟ್ರು’ ಗಳೆಲ್ಲ ತೆರೆಮರೆಯಲ್ಲಿಯೇ ಉಳಿದವರು. ಕಣ್ಣಿಗೆ ಕಂಡವರು ಕೃಷ್ಣಶಾಸ್ತ್ರಿ, ಬಿ‌ಎಂಶ್ರೀ, ರಾಜರತ್ನಂರಂಥ ಹಿರೀಕರು ಮಾತ್ರ. ಏಕೆಂದರೆ ಈ ಹಿರೀಕರ ಭುಜಕ್ಕೆ ‘ಮೇಷ್ಟ್ರು ಪದದೊಂದಿಗೆ ಸಾಹಿತ್ಯ ರಚನೆಯ ಪ್ರಖರ ನಕ್ಷತ್ರಬಿಲ್ಲೆಗಳೂ ಇದ್ದವು. ಹಾಗಾಗಿ ಇವರು ಮುನ್ನಡೆಯಲ್ಲಿ ಪ್ರಕಾಶಿಸಿದರು, ಉಳಿದವರು ಸಾಲಿನಲ್ಲಿ ನಿಂತು ತೋರಣವಾದರು. ಸಾಲಿನಲ್ಲಿ  ನಿಂತ ಆ ಘನ ಮೇಷ್ಟ್ರುಗಳ ಕಾರಣದಿಂದಲೇ ಹಿರೀಕರ ಘನತೆ ಇನ್ನಷ್ಟು ಘನವಾಯಿತು! ಸಾಲಿನಲ್ಲಿಯೇ ಉಳಿದ ಅಂಥ ಗಟ್ಟಿಗ ಮೇಷ್ಟ್ರುಗಳಲ್ಲೊಬ್ಬರು  ಪ್ರೊ.ಎಸ್.ಆರ್.ಮಳಗಿ.

ಬಿಜಾಪುರದಿಂದ ಬೆಂಗಳೂರಿನವರೆಗೆ ಹತ್ತಾರು ಊರುಗಳ ನೀರು ಕುಡಿಯುತ್ತಾ ಪಾಠ ಹೇಳುತ್ತಾ ಶಿಷ್ಯ ಸಂತತಿ ವೃದ್ಧಿಸಿಕೊಂಡು ಬಂದಿರುವ ಸೇತುರಾಮ ಪಾಂಡುರಂಗ ಮಳಗಿ-ಪ್ರೊ.ಎಸ್.ಆರ್.ಮಳಗಿ ಎನ್ನುವ ಕಿರುಹೆಸರಿನಿಂದಲೇ ಪ್ರಸಿದ್ದರು. ನೂರಕ್ಕೆ ಸಮೀಪದಲ್ಲಿರುವ ಈ ಪ್ರೊಫಸರ್ ಅವರದ್ದು ಜೀವನೋತ್ಸಾಹದಲ್ಲಿ ೧೮ರ ಹುರುಪು. ಮಳಗಿಯವರೊಂದಿಗೆ ಮಾತಿಗೆ ಕೂರುವುದೆಂದರೆ ಸರಿದುಹೋದ ಪರಂಪರೆಯೊಂದಕ್ಕೆ ಮುಖಾಮುಖಿಯಾದಂತೆ; ಆ ಭೇಟಿಯಲ್ಲಿ ಬೇಂದ್ರೆ, ರಾಜರತ್ನಂ, ಗೋಕಾಕ್ ಎದುರಾಗುತ್ತಾರೆ. ಮಾಸ್ತಿ, ಶಂಬಾ ಜೋಷಿ, ತೀ.ನಂ.ಶ್ರೀಕಂಠಯ್ಯ, ಅನಕೃ, ಡಿವಿಜಿ, ಗೌರೀಶ್ ಕಾಯ್ಕಿಣಿ, ಆಲೂರು ವೆಂಕಟರಾದ್, ರಂ.ಶ್ರೀ.ಮುಗಳಿ, ಎ.ಆರ್.ಕೃಷ್ಠಶಾಸ್ತ್ರಿ, ವಿ.ಸೀತಾರಾಮಯ್ಯ, ಆರ್.ಎಚ್.ದೇಶಪಾಂಡೆ, ಕೃಷ್ಣಮೂರ್ತಿ ಪುರಾಣಿಕ, ಮಧುರಚೆನ್ನ…. ಮುಂತಾದ ಸಾರಸ್ವತ ಲೋಕದ ಪ್ರಾತಃಸ್ಮರಣೀಯರು ಮುಖ ತೋರಿಸಿ ಮರೆಯಾಗುತ್ತಾರೆ. ಇಷ್ಟೇ ಅಲ್ಲ ಕರ್ನಾಟಕ ಕಾಲೇಜು-ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಸೆಂಟ್ರಲ್ ಕಾಲೇಜು-ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ, ಧಾರವಾಡ, ಬೆಳಗಾವಿಯ ಓಣಿಗಳಲ್ಲಿ ಮಳಗಿ ಮೇಷ್ಟ್ರು ನಮ್ಮನ್ನು ಕೈಹಿಡಿದು ಅಡ್ಡಾಡಿಸಿ ಕರೆತರುತ್ತಾರೆ.

ಮಳಗಿಯವರದ್ದು ಆಚಾರ್ಯ ಮನೆತನ, ಮೇಷ್ಟ್ರುತನ ರಕ್ತಗತವಾಗಿ ಬಂದದ್ದು ಬಿಜಾಪುರ ಜಿಲ್ಲೆ ಬಾದಾಮಿ ತಾಲ್ಲೂಕಿನ ಖ್ಯಾಡ ಗ್ರಾಮದ ಮಳಗಿಯವರು  ಹುಟ್ಟಿದ್ದು ಜುಲೈ ೮, ೧೯೧೦ರಂದು. ಹೊಳೆ‌ಆಲೂರು, ಗದಗ, ಧಾರವಾಡದಲ್ಲಿ ಓದು ನಡೆಯಿತು. ಎಂ.ಎ. ಹಾಗೂ ಬಿ.ಟಿ. ಪದವಿ ಪಡೆದದ್ದೂ ಆಯಿತು. ಆನಂತರದ್ದು ಮೇಷ್ಟ್ರುಗಿರಿ.

ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಹೈಸ್ಕೂಲಿನಲ್ಲಿ ಶಿಕ್ಷಕರಾಗುವ ಮೂಲಕ ೧೯೩೮ರಲ್ಲಿ ಮೇಷ್ಟ್ರುವೃತ್ತಿ ಪ್ರಾರಂಭಿಸಿದ ಮಳಗಿ, ೧೯೮೯ರಲ್ಲಿ ಬೆಂಗಳೂರು  ವಿಶ್ವವಿದ್ಯಾಲಯದಲ್ಲಿ ಯು.ಜಿ.ಸಿ. ಪ್ರಾದ್ಯಾಪಕರಾಗಿ ನಿವೃತ್ತರಾಗುವ ಹೊತ್ತಿಗೆ ಸುಮಾರು ನಾಲ್ಕು ದಶಕಗಳ ಕಾಲ ಪಾಠ ಹೇಳಿದ್ದರು. ಧಾರವಾಡದ ಕರ್ನಾಟಕ ಕಾಲೇಜು, ಬೆಂಗಳೂರಿನ ಸೆಂಟ್ರಲ್ ಕಾಲೇಜು, ಸಾಗರದ ಲಾಲ್‍ಬಹದ್ದೂರ್ ವಿಜ್ಞಾನ ಮತ್ತು ಕಲಾ ಕಾಲೇಜು, ಬೆಂಗಳೂರಿನ ಸೇಂಟ್‍ಜಾನ್ಸ್ ಜೂನಿಯರ್ ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯ- ಹೀಗೆ ನಿರಂತರವಾಗಿ ಊರು ಕಾಲೇಜು ಸುತ್ತುತ್ತಾ ಬಂದ ಮಳಗಿ ಮೇಷ್ಟ್ರು- ಲೆಕ್ಚರರ್, ರೀಡರ್, ಪ್ರೊಫೆಸರ್, ಪ್ರಿನ್ಸಿಪಾಲ್ – ಅಲಂಕರಿಸಿದ ಪದಗಳು ಒಂದೆರಡಲ್ಲ ಕೆಲಸ ಯಾವುದಾದರೂ ಅವರ ಪ್ರಾಮಾಣಿಕತೆ ಬದುಲಾದುದಿಲ್ಲ ಪದ-ಪದವಿ ಕೈತಪ್ಪಿದರೂ ಶಿಷ್ಯ ವಾತ್ಸಲ್ಯ ಹಾಗೂ ಪಾಠದ ದಿಕ್ಕು ತಪ್ಪಲಿಲ್ಲ. ಹಾಗಾಗಿಯೇ ಮಳಗಿ ಮೇಷ್ಟ್ರು ನಮ್ಮ ನಡುವಿನ ಅಪರೂಪದ ಮೇಷ್ಟ್ರು.

ಮೇಷ್ಟ್ರು ಎನ್ನುವುದಕ್ಕಿಂತ ‘ಮೇಷ್ಟ್ರುಗಳ ಮೇಷ್ಟ್ರು’ ಎನ್ನುವ ವಿಶೇಷಣವೇ ಮಳಗಿಯವರಿಗೆ ಹೆಚ್ಚು ಒಪ್ಪುತ್ತದೆ. ಸುಮ್ಮನೆ ಅವರ ಶಿಷ್ಯರ ಪಟ್ಟಿಯ ಮೇಲೆ ಕಣ್ಣಾಡಿಸಿ: ಗಿರೀಶ್ ಕಾರ್ನಾಡ, ಕಿ.ರಂ.ನಾಗರಾಜ, ಚಂದ್ರಶೇಖರ ಪಾಟೀಲ, ಚೆನ್ನವೀರ ಕಣವಿ, ಚಿ.ಶ್ರೀನಿವಾಸರಾಜು, ಸಿದ್ಧಲಿಂಗ ಪಟ್ಟಣಶೆಟ್ಟಿ, ರಾಘವೇಂದ್ರರಾವ್, ಪಾಟೀಲ ಪುಟ್ಟಪ್ಪ, ಸು.ರಂ.ಎಕ್ಕುಂಡಿ, ಜಿ.ಎಸ್.ಆಮೂರ, ಸಿ. ನೀರಣ್ಣ ವತ್ಸಲಾ, ಬರಗೂರು ರಾಮಚಂದ್ರಪ್ಪ, ಚನ್ನಪ್ಪ ಗೌಡರ್, ಗಿರಡ್ಡಿ ಗೋವಿಂದರಾಜು, ಹೀಗೆ ಶಿಷ್ಯಸಂತತಿಯ ರಸಬಳ್ಳಿ ಹಬ್ಬುತ್ತದೆ. ಈ ಸಂತತಿಯಲ್ಲಿ ಅನೇಕರು ಹೆಸರುವಾಸಿಯಾದ ಮೇಷ್ಟ್ರುಗಳು. ಹೀಗಾಗಿ ಪ್ರೊ.ಮಳಗಿ ‘ಮೇಷ್ಟ್ರುಗಳ ಮೇಷ್ಟ್ರು’! ಮಳಗಿಯವರ ಪುಣ್ಯವೂ ದೊಡ್ಡದು; ಇಂಥದೊಂದು ಪ್ರತಿಭಾವಂತ ಶಿಷ್ಯಗಣ ಹೊಂದುವ ಭಾಗ್ಯ ಎಷ್ಟು ಮೇಷ್ಟ್ರುಗಳಿಗಿದ್ದೀತು?

ಪ್ರೊ. ಮಳಗಿ ಮೇಷ್ಟ್ರು ಮಾತ್ರವಲ್ಲ; ಲೇಖಕರೂ ಹೌದು. ಕವಿತೆಗಳನ್ನೂ ಬರೆದಿದ್ದಾರೆ. ಅನುವಾದದಲ್ಲಿ ಸೈ ಅನ್ನಿಸಿಕೊಂಡಿದ್ದಾರೆ. ಬ್ರಹರ್ಷಿ ದೈವರಾತರ ‘ಛಂದೋದರ್ಶನ’ ಕೃತಿಯನ್ನು ವೈದಿಕ ಸಂಸ್ಕೃತದಿಂದ ಇಂಗ್ಲಿಷ್‍ಗೆ ಅನುವಾದಿಸಿದ ಅಗ್ಗಳಿಕೆ ಅವರದು. ಭಾರತೀಯ ವಿದ್ಯಾಭವನ ಈ ಕೃತಿಯನ್ನು ೧೯೬೮ರಲ್ಲಿ ಪ್ರಕಟಿಸಿದೆ. ‘ಬಿಡುಗಡೆಯ ಬೆಳ್ಳಿ’ (ಕರ್ನಾಟಕದಲ್ಲಿ ಸ್ವಾತಂತ್ರ ಸಂಗ್ರಾಮ ಚರಿತ್ರೆ), ‘ವಾಕ್ಯ ಮಾಣಿಕ್ಯ ಕೋಶ’, ‘ಹರಿಶ್ಚಂದ್ರ ಕಾವ್ಯ ಕಥೆ’, ‘ಶ್ರೀ ಆರವಿಂದರು-ಪ್ರವೇಶಿಕೆ’ ಮಳಗಿಯವರ ಇತರ ಪ್ರಮುಖ ಕೃತಿಗಳು. ‘ಕೇಶಿರಾಜನ ಶಬ್ದಮಣಿ ದರ್ಪಣ ಸಂಗ್ರಹಂ’, ವಿವಿಧ ಕವಿಗಳ ನೂರು ಕವಿತೆಗಳ ಸಂಕಲನ ‘ಕವಿ ದರ್ಶನ’, ಡಾ, ಮಧು ಉಪಾಧ್ಯಾಯರ ‘ಸೃಜನಶೀಲ ಪ್ರತಿಭೆ’ ಮಳಗಿಯವರ ಸಂಪಾದಕತ್ವದಲ್ಲಿ ಹೊರಬಂದ ಮುಖ್ಯ ಕೃತಿಗಳು. ಪಾಂಡಿಚೆರಿಯ ಶ್ರೀ ಅರವಿಂದ ಸಮಾಜ ಪ್ರಕಟಿಸುವ ‘ಆಖಿಲ ಭಾರತ ಪತ್ರಿಕೆ’ಯ ಪ್ರಧಾನ ಸಂವಾದಕರಾಗಿ ಮಳಗಿ ೨೫ ವರ್ಷ (೧೯೭೧-೧೯೯೬) ದುಡಿಯುವ ಮೂಲಕ ಪತ್ರಕರ್ತರಾಗಿಯೂ ಮಳಗಿ ಅನುಭವ ಹೊಂದಿದ್ದಾರೆ.

ಧಾರವಾಡದ ಕರ್ನಾಟಕ ಕಾಲೇಜ್‍ನ ‘ಕಮಲಮಂಡಲ ಪ್ರಕಾಶನ’ದ ವತಿಯಿಂದ ಮಳಗಿಯವರು ಹೊರತಂದ ‘ವಂಶವೃಕ್ಷ’ (೧೯೫೪) ಹಾಗೂ ‘ಭೃಂಗನಾದ’  (೧೯೫೯) ಸಂಕಲನಗಳನ್ನು ವಿಶೇಷವಾಗಿ ನೆನಪಿಸಿಕೊಳ್ಳಬೇಕು. ಬೇಂದ್ರೆ, ಗೋಕಾಕರ ಕವಿತೆಗಳೊಂದಿಗೆ ಇವತ್ತಿನ ಪ್ರಮುಖ ಬರಹಗಾರರಾದ ಚಂಪಾ ಹಾಗೂ  ಗಿರಡ್ಡಿಯವರ ಬರಹಗಳು ಆ ಸಂಕಲನದಲ್ಲಿದ್ದವು. ಪ್ರಸಿದ್ದ ಕವಿಗಳ ಪುಸ್ತಕ ಪ್ರಕಟಣೆಯೇ ದುಸ್ಸಾಧ್ಯವಾದ ಕಾಲದಲ್ಲಿ ಮಳಗಿಯವರ ನೇತೃತ್ವದಲ್ಲಿ ಹೊರಬಂದ ಈ ಸಂಕಲನಗಳ ಮಹತ್ವ ದೊಡ್ಡದು. ಪುಸ್ತಕ ಪ್ರಕಟಣೆ ಮಾತ್ರವಲ್ಲದೆ, ಕರ್ನಾಟಕ ಕಾಲೇಜು- ಆ ಮೂಲಕ ಧಾರವಾಡದೊಂದಿಗೆ ನಾಡಿನ ಪ್ರಮುಖ ಸಾಹಿತಿಗಳು ಸಂಪರ್ಕ ಹೊಂದಲು ಮಳಗಿ ಕಾರಣವಾದರು. ಅವರು ಕರ್ನಾಟಕ ಕಾಲೇಜಿನ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದಾಗ ಕಾಲೇಜಿಗೆ ಬಂದು ಹೋಗದ ಸಾರಸ್ವತ ಲೋಕದ ತಾರೆಗಳು ಕಡಿಮೆ.

ಬೆಂಗಳೂರಿನಲ್ಲಿ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಮೂಲಕ ಚಿ.ಶ್ರೀನಿವಾಸರಾಜು (ರಾಜುಮೇಸ್ಟ್ರು) ಮಾಡಿದ ಕೆಲಸವನ್ನು ಮಳಗಿ ಮೇಸ್ಟ್ರು ಉತ್ತರ  ಕರ್ನಾಟಕದಲ್ಲಿ ದಶಕಗಳ ಹಿಂದೆಯೇ ಮಾಡಿದರು. ಆದರೆ ಬೆಂಗಳೂರಿನಲ್ಲಿ ನಡೆದ ಕೆಲಸಕ್ಕೆ ಮಾತ್ರ ಪ್ರಾಮುಖ್ಯತೆ ದೊರೆಯುವುದರಿಂದ ಮಳಗಿ ತೆರೆಮರೆಯಲ್ಲಿಯೇ ಉಳಿದುಬಿಟ್ಟರು. ಆದರೆ, ‘ಹೆಸರುಗಳಾಚೆಗಿನ ಸಾರ್ಥಕತೆಯ ಜೀವಂತಿಕೆ ಮಳಗಿ ಅವರ ಬದುಕು’ ಎಂದು ಹಿರಿಯ ವಿಮರ್ಶಕ ಹಾಗೂ ಮಳಗಿಯವರ ಶಿಷ್ಯರೂ ಆದ ಡಾ.ಎಚ್.ಎಸ್.ರಾಘವೇಂದ್ರರಾವ್ ಹೇಳತ್ತಾರೆ.

ಬೆಂಗಳೂರಿನ ಸೆಂಟ್ರಲ್ ಕಾಲೇಜು ಎಂದಾಕ್ಷಣ ಅಲ್ಲಿನ ಕನ್ನಡ ಸಂಘ ಹಾಗೂ ರಾಜರತ್ನಂ ನೆನಪಿಗೆ ಬರುತ್ತಾರೆ. ಕನ್ನಡ ಸಂಘದ ಚಟುವಟಿಕೆಗಳಲ್ಲಿ ಮಳಗಿ ಮೇಷ್ಟ್ರು ಪಾಲೂ ದೊಡ್ಡದಿತ್ತು ಎನ್ನುವುದು ಬಹಳ ಜನಕ್ಕೆ ಗೊತ್ತಿಲ್ಲ. ರಾಜರತ್ನಂ ನಿಧನದ ನಂತರ ಕನ್ನಡ ವಿಭಾಗದ ಮುಖ್ಯಸ್ಥರಾದ ಮಳಗಿ- ಕನ್ನಡ ಸಂಘವನ್ನು ಕೆಲಕಾಲ ನಡೆಸಿದರು.

ಧಾರವಾಡದ ಹಿರಿಮೆಯ ಒಂದು ಭಾಗವೇ ಆಗಿರುವ ಬೇಂದ್ರೆ ಅವರೊಂದಿಗೆ ಮಳಗಿ ಮೇಷ್ಟ್ರಿಗೆ ಆಪ್ತ ಒಡನಾಟವಿತ್ತು, ಸಲಿಗೆಯಿತ್ತು. ಬೇಂದ್ರೆಯವರ ‘ಗೆಳೆಯರ ಬಳಗ’ದ ಎರಡನೇ ತಂಡದಲ್ಲಿ ಮಳಗಿ ಸಕ್ರಿಯರಾಗಿದ್ದರು. ಬೇಂದ್ರೆ ನೇತೃತ್ವದಲ್ಲಿ ನಡೆಯುತ್ತಿದ್ದ ‘ಮೌನ ಸಪ್ತಾಹ’ ದಲ್ಲಿ ಭಾಗವಹಿಸುತ್ತಿದ್ದ ಏಳುಮಂದಿಯಲ್ಲಿ ಮಳಗಿಯೂ ಒಬ್ಬರು. ವರ್ಷಕ್ಕೊಮ್ಮೆ ಮೂರು ಸಲ ನಡೆದ ಈ ಮೌನ ಸಪ್ತಾಹದಲ್ಲಿ ಏಳೂ ಗೆಳೆಯರು ಒಂದೆಡೆ ತಂಗುತ್ತಿದ್ದರು. ಮಾತಿಲ್ಲ ಕಥಯಿಲ್ಲ; ಮೌನದಲ್ಲೇ ಸೃಜ್ನಶೀಲ ಕ್ರಿಯೆಗಳು ವಿಕಸಿಸುತ್ತಿದ್ದವು.

ಬೇಂದ್ರೆ ಅವರಂತೆ ಮಳಗಿ ಅವರನ್ನು ಸೆಳಕೊಂಡ ಮತ್ತೊಂದು ಪ್ರಭಾವಲಯ ಶ್ರೀ ಅರವಿಂದರು.  ‘ಕಾವ್ಯಕ್ಕೆ ಬೇಂದ್ರೆ ಗುರುವಾದರೆ ಅಧ್ಯಾತ್ಮಕ್ಕೆ ಅರವಿಂದರು.  ನಾನು ಅರವಿಂದರ ಭಕ್ತ’ ಎನ್ನುವ ಮಳಗಿ, ತಮ್ಮನ್ನು ಅಧ್ಯಾತ್ಮ ದೃಷ್ಟಿಯ ಕವಿ-ಮೇಷ್ಟ್ರು ಎಂದು ಹೇಳಿಕೊಳ್ಳುತ್ತಾರೆ.

ಮಳಗಿಯವರದ್ದು ಆಚಾರ್ಯ ಮನೆತನ. ಮೇಷ್ಟ್ರುತನ ರತ್ತಗತವಾಗಿ ಬಂದದ್ದು ಬಿಜಾಪುರ ಜಿಲ್ಲೆ ಬಾದಾಮಿ ತಾಲ್ಲೂಕಿನ ಖ್ಯಾಡ ಗ್ರಾಮದ ಮಳಗಿಯವರು  ಹುಟ್ಟಿದ್ದು ಜುಲೈ ೮, ೧೯೧೦ರಂದು. ಹೊಳೆ‌ಆಲೂರು, ಗದಗ, ಧಾರವಾಡದಲ್ಲಿ ಓದು ನಡೆಯಿತು. ಎಂ.ಎ. ಹಾಗೂ ಬಿ.ಟಿ. ಪದವಿ ಪಡೆದದ್ದೂ ಆಯಿತು. ಆನಂತರದ್ದು ಮೇಷ್ಟ್ರುಗಿರಿ. ಅರ್ಹತೆ ಇದ್ದಾಗ್ಯೂ ಮಳಗಿ ಮೇಷ್ಟ್ರು ಅನೇಕ ಪದವಿ-ಪ್ರಶಸ್ತಿಗಳಿಂದ ವಂಚಿತರಾದರು. ತಮ್ಮ ಕಣ್ಣಮುಂದೆಯೇ ಕಿರಿಯರು ಮೇಲೇರುವುದನ್ನು ಕಂಡೂ  ಸಮಚಿತ್ತರಾಗಿಯೇ ಉಳಿದರು. ಹತ್ತಾರು ಪುಸ್ತಕ ಬರೆದರೂ ಚೌಕಟ್ಟಿನಲ್ಲಿಯೇ  ಉಳಿದರು. ೧೯೯೧ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ದೊರೆತದ್ದು ಬಿಟ್ಟರೆ ಮಳಗಿ ಕ್ಯಾಮರಾ ಬೆಳಕಿನಲ್ಲಿ ಮಿಂಚಿದ್ದು ಕಡಿಮೆ. ೨೦೦೦ ಇಸವಿಯಲ್ಲಿ ನಡೆದ ರಾಜಾಜಿನಗರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದು ಮಳಗಿಯಜ್ಜನವರಿಗೆ ಖುಷಿ ತಂದಿದೆ.

ನೂರಕ್ಕೆ ಎರಡು ವರ್ಷ ಬಾಕಿ ಯಿರುವ ಮಳಗಿ ಆಜ್ಜನವರಿಗೆ ನಾಲಗೆ ತೊದಲುವುದಿಲ್ಲ. ಅಲ್ಲಲ್ಲಿ ಚರ್ಮ ಸುಕ್ಕಾಗಿರುವುದು ಬಿಟ್ಟರೆ ನೆನಪುಗಳ ಇಸ್ತ್ರಿ ಮಾಸಿಲ್ಲ. ಜೀವನೊತ್ಸಾಹಕ್ಕೆ ಎಲ್ಲೆಯೇ ಇಲ್ಲ ಓದು ಹಾಗೂ ಬರಹದಲ್ಲಿ ಬಿಡುವು ಕಳಕೊಂಡಿರುವ ಮಳಗಿ ಮೇಷ್ಟ್ರು ಕನಸುಗಳನ್ನು ಕಳಕೊಂಡಿಲ್ಲ. ತಮ್ಮ ಚದುರಿದ ಕವಿತೆಗಳನ್ನೆಲ್ಲ ಒಟ್ಟುಗೂಡಿಸಿ ಸಂಕಲನ ತರಬೇಕು; ಸಾಧ್ಯವಾದರೆ ನೆನಪುಗಳನ್ನು  ಒಟ್ಟುಗೂಡಿಸಿ ಅಕ್ಷರಕ್ಕಿಳಿಸಬೇಕು ಎನ್ನುವ ಕನಸು ಅವರದು.

ಸರಿ ಮೇಷ್ಟ್ರೇ, ಈಗಿನ ಶಿಕ್ಷಣ ಬಗ್ಗೆ ನಿಮಗೇನನ್ನಿಸುತ್ತೆ? ಹೇಳೋದೇನಾದ್ರೂ ಇದ್ಯಾ? ಎಂದು ಕೇಳಿದರೆ- ಮಳಗಿ ಮೇಷ್ಟ್ರು ಕೊಂಚ ನಿಧಾನಿಸುತ್ತಾರೆ.  ‘ವಿದ್ಯಾರ್ಥಿಗಳಿಗೆ ಈಗ ಮೇಷ್ಟ್ರುಗಳ ಬಗ್ಗೆ ಗೌರವವಿಲ್ಲ ಆದಕ್ಕಾಗಿ ನಾನು ಯಾರನ್ನೂ ಟೀಕಿಸುವುದಿಲ್ಲ, ಮನ್ವಂತರ ಬದಲಾಗಿದೆ ಎನ್ನುತ್ತಾರೆ. ಆದರೆ, ತಮ್ಮ ಕಾಲದ ಗುರುಶಿಷ್ಯ  ಸಂಬಂಧದ ಬಗ್ಗೆ ಹೆಮ್ಮಯಿಂದ ಹೇಳಿಕೊಳ್ಳುವ ಅವರು- ಈಗಿನ ಮೇಷ್ಟ್ರುಗಳು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವ ಬಗೆಗೆ ಸಣ್ಣದನಿಯಲ್ಲಿ ಅನುಮಾನ ವ್ಯಕ್ತಪಡಿಸುತ್ತಾರೆ. ‘ಆಗಿನ ಕಾಲದ ಮೇಷ್ಟ್ರುಗಳಾದ ನಾವು ಯಾರಲ್ಲೂ ಭೇದಭಾವ ಮಾಡದೆ ಕಲಿಸುತ್ತಿದ್ದೆವು. ವಿದ್ಯಾರ್ಥಿಗಳು ನಮ್ಮನ್ನು ಮೆಚ್ಚಿಕೊಂಡರು. ಮೇಷ್ಟ್ರುಗಳಲ್ಲಿ ಅಧ್ಯಾತ್ಮ ದೃಷ್ಟಿ ಇತ್ತು. ಈಗ ಇಲ್ಲ’ ಎನ್ನುತ್ತಾರೆ.

ನಿಜ, ಮನ್ವಂತರ ಬದಲಾಗಿದೆ. ಮಳಗಿ ಮೇಷ್ಟ್ರು ಹೇಳುವ ಆಧ್ಯಾತ್ಮದ ಪರಿಕಲ್ಪನೆಯೂ ಬದಲಾಗಿದೆ.

ಆಂದಹಾಗೆ, ಮಳಗಿ ಮೇಷ್ಟ್ರ ಆತ್ಮಚರಿತ್ರಯೇನಾದರೂ ಹೊರಬಂದಲ್ಲಿ ಅದೊಂದು ಕವಿ-ಕೃತಿ ಚರಿತ್ರೆಯೇ ಆದೀತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೈಗುಣ
Next post ಆ ದನಿ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…