ಆರು ವರ್ಷದ ಹುಡುಗ, ಕಲ್ಲು ಮುಳ್ಳಿನ ಏರುತಗ್ಗಿನ ಊರ ದಾರಿ ನಡೆದು ಸೋತಿದ್ದಾನೆ. ಆತನ ತಲೆಯ ಮೇಲೊಂದು ಬಾಳೆಯ ಕಂದು ಹೊರಲಾರದ ಹೊರೆಯದು ಅವನಿಗೆ. ಹೊತ್ತು ಕುತ್ತಿಗೆ ಸೋತಾಗ ಅದನ್ನು ಬಲ ಹೆಗಲ ಮಲೇರಿಸುವನು. ಅನಂತರ ಎಡ ಹೆಗಲ ಮೇಲೆ. ಅಲ್ಲಿಯೂ ನೋವಾದಾಗ ಬಲ ಕಂಕುಳಲ್ಲಿಟ್ಟು ಕೈಗಳಿಂದ ಹಿಡಿದುಕೊಳ್ಳುವನು. ಬಳಿಕ ಅದು ಎಡ ಕಂಕುಳಿಗೆ ಹೋಗುವುದು. ಅಲ್ಲಿಂದ ತಿರುಗಿ ತಲೆಯಮೇಲೆ. ಹೀಗೆ ಬಡವನಿಗೆ ಹಣದ ಚರಿಗೆ ಸಿಕ್ಕಿದರೆ ಹೇಗೋ ಛಲದಿಂದ ಹೊತ್ತು ಮನೆಯ ಕಡೆ ಸಾಗುವಂತೆ ಆ ಆರು ವರುಷದ ಬಳಕೆಯೂ ತೋರದ ಹರಕಂಗಿಯ ಕೌಪೀನದ ಬಾಲಕನು ಬಾಳೆಯ ಕಂದನ್ನು ಹೊತ್ತು ಕಾಲೆಳೆದು ಮುಂದೆ ಸಾಗುತ್ತಿದಾನೆ ಮನೆ ಹಾದಿ ಹಿಡಿದು. ಇನ್ನೂ ಎರಡು ಮೂರು ಗಳಿಗೆ ನಡೆಯಬೇಕು. ಆದರೆ ಈಗಾಗಲೇ ತೀರ ದಣಿದು ಸುಣ್ಣವಾಗಿದ್ದಾನೆ. ಹಣೆ, ಕುತ್ತಿಗೆ, ಎದೆಯಲ್ಲಿ ಬೆವರು. ಮೋರಿ ಕೆಂಪೇರಿ ಕನಲಿದೆ. ಆದರೂ ಆ ಬಾಳೆಯ ಕಂದನ್ನು ತೆಗೆದತ್ತ ಬಿಸುಡಲಾರ. ಮಾತ್ರವಲ್ಲ, ಬಿಗುವಾಗಿ ಹಿಡಿದರೆ ಅದೆಲ್ಲಿ ಜಜ್ಜಿ ಹೋಗುವುದೋ, ಸಡಿಲವಾಗಿ ಕೈಗೊಟ್ಟರೆ ಅದೆಲ್ಲಿ ಜಾರಿಬಿದ್ದು ಸುಳಿ ಮುರಿದು ನುಜ್ಜು ಗುಜ್ಜಾಗುವುದೋ ಎಂದು ಬೆದರಿ ಬಹು ಜಾಗರೂಕತೆಯಿಂದ ಹೊರುತ್ತಿದ್ದಾನೆ ಅದನ್ನು. ಹೆತ್ತಬ್ಬೆ ತನ್ನ ಮಗುವನ್ನು ಅಷ್ಟು ಜತನದಿಂದ ಹಿಡಿದುಕೊಳ್ಳುವಳೋ ಎಂದು ಸಂಶಯ ಬರಬೇಕು ನೋಡುವವರಿಗೆ.
“ಹೀಗೆ ಒಂದ ಬಿದ್ದರೆ ಹೇಗೆ ಮನೆ ಸೇರುವುದು? ಹೊತ್ತು ಇಳಿಯುವುದೂ ಕಾಣುವುದಿಲ್ಲವೆ? ಬೇಡಾ ಬೇಡಾ ಎಂದರೆ ಕೇಳದೆ ಹೊತ್ತೆ! ಯಾವ ಕರ್ಮಕ್ಕೆ ಅದು! ತೆಗೆದತ್ತ ಒಗೆದು, ಬೇಗ ಮುಂದೆ ಬಂದೀ ಆಯಿತು! ಇಲ್ಲವಾದರೆ ನಾನೇ ಎಳೆದು ಬಿಸಾಡುತ್ತೇನೆ, ನೋಡು!” ಎಂದು ಗದರಿಸುತ್ತಾಳೆ ಮುಂದೆ ಸಾಗುತ್ತಿರುವ ಅವನ ತಾಯಿ. ಅವಳಾದರೂ ಆ ಕಂದನ್ನು ತೆಗೆದುಕೊಳ್ಳಬಾರದೇ ಎಂದರೆ ಅವಳಿಗೊಂದು ಹೊರೆ ಬೇರೆಯೇ ಇದೆ, ಸುಮಾರು ಮೂರು ವರುಷದ ಮಗು! ಬಡ ತೌರಿಗೆ ಸೋಣೇ ತಿಂಗಳ ಬಿದ್ದಿಗೆ ಹೋಗಿ, ಹೊಕ್ಕ ಬಡಮನೆಗೆ ಹಿಂತಿರುಗಿ ಬರುತ್ತಿರುವವಳು ಅವಳು. ಅವಳ ತಾಯಿ ಕೊಟ್ಟ ನಾಲ್ಕು ಹಳೆಯ ಸೌತೆಯಕಾಯಿ, ಒಂದರೆ ಸೇರು ಅವಡೆ, ಒಂದ ತುಂಡು ಮರಸಣಿಗೆ, ಹರುವೆಯ ದಡಿ, ಕೆಸುವಿನ ಕಾಲು ಇತ್ಯಾದಿಗಳ ಒಂದು ಕಟ್ಟು ಬಲಗೈ, ತುದಿಯಿಂದ ತೂಗಿ ತೂಗಿ ಕೈ ತುಂಡಾಗುವಂತಾಗಿದೆ. ಎಡ ಕಂಕಳಲ್ಲಿದೆ ಆ ಮಗು-ನಡೆಯಲಿಕ್ಕೆ ಸಣ್ಣದು, ಹೊರಲಿಕ್ಕೆ ದೊಡ್ಡದು!
ತಾಯಿಯ ಗದರಿಕೆಯನ್ನು ಕೇಳಿ ಅವಳೆಲ್ಲಾದರೂ ಆ ಕಂದನ್ನು ಎಳೆದು ಬಿಸಾಡುವಳೋ ಎಂದು ಅವಳ ಹಿಂದೆಯೇ ಓಡಿಯೋಡಿ ನಡೆಯುತ್ತಿದ್ದ ನಾಲ್ಕು ವರ್ಷದ, ಹರಕು ಪಾವಡೆಯ, ಕಾಡಿಗೆಗಣ್ಣಿನ ಹುಡುಗಿಯೊಂದು ಅಣ್ಣನ ಕೈಯಿಂದ ಅದನ್ನು ತೆಗೆದುಕೊಂಡು ಅವನು ಮಾಡಿದಂತೆ ತಲೆ, ಹೆಗಲು ಕೈ ಕಂಕುಳಗಳನ್ನೆಲ್ಲ ಉಪಯೋಗಿಸಿ ಹೆಣಗಾಡಿ ಅಂತೂ ಸ್ವಲ್ಪ ದೂರ ತಂದಿತು. ಅಷ್ಟರಲ್ಲಿ ತುಸು ಸುಧಾರಿಸಿಕೊಂಡ ಅಣ್ಣನು ತಿರುಗಿ ತಲೆಗೊಟ್ಟ ಆ ಕಂದಿಗೆ. ಹೀಗೆ ಅಣ್ಣ ಸೋತಾಗ ತಂಗಿ, ತಂಗಿ ಸೋತಾಗ ಅಣ್ಣ ಎಂದು ಹಾಗೂ ಹೀಗೂ ಆ ಕಂದು ಬಂದಿಳಿಯಿತು ಅವರ ಗುಡಿಸಲು ಬಾಗಿಲಲ್ಲಿ.
ಅದೊಂದು ರಸಬಾಳೆಯ ಕಂದು. ಅವರಜ್ಜಿಯ ಮನೆಯಲ್ಲಿ ರಸಬಾಳೆಯ ಚಿಕ್ಕದೊಂದು ಗೊನೆ ಬಲಿದಿತ್ತು. ಮೊಮ್ಮಕ್ಕಳು ಬರುವಾಗ ಹಣ್ಣಾಗಲೆಂದು ಆ ಮುದುಕಿ ಅದನ್ನು ಕಡಿಸಿ ತೂಗಿಸಿದಳು. ಆದರೆ ಇವರು ಅಜ್ಜಿಯ ಮನೆ ಸೇರುವುದಕ್ಕೆ ಎರಡು ದಿನ ಮುಂಚಿತವಾಗಿಯೇ ಅದು ಚೆನ್ನಾಗಿ ಮಾಗಿತ್ತು. ರಸಬಾಳೆಯ ಹಣ್ಣಲ್ಲವೇ? ಮಾಗಿದ ಮೇಲೆ ಗೊನೆಯಲ್ಲಿ ನಿಲ್ಲಲಿಲ್ಲ; ಮಗನ ಮಕ್ಕಳು ತಿನ್ನದೆಯೂ ಕೇಳಲಿಲ್ಲ. ಆದರೂ ಆ ಮುದುಕಿಯು ನಾಲ್ಕು ಹಣ್ಣುಗಳನ್ನು ಎಲ್ಲೊ ಮಡಿಕೆಯೊಳಗೆ ಅಡಗಿಸಿಟ್ಟಿದ್ದು, ತುಂಬ ತಿಂದಿದ್ದ ಆ ಮಕ್ಕಳ ಕಣ್ಣುತಪ್ಪಿಸಿ ಈ ಮೊಮ್ಮಕ್ಕಳಿಗೆ ಕೊಟ್ಟಳು. ಊರ ಜಾತ್ರೆಯಲ್ಲಿ ಅಂಗಡಿಯೆದುರು ತೂಗಿಸಿದ ಬಾಳೆಯ ಗೊನೆಗಳನ್ನು ಈ ಮಕ್ಕಳು ಕಂಡಿದ್ದರಲ್ಲದೆ ತಿಂದು ನೋಡಿದವರಲ್ಲ. ಜಾತ್ರೆಗೆ ಹೋದಲ್ಲಿ ಒಂದೆರಡು ಮಂಡಕ್ಕಿಯುಂಡೆ ಚಕ್ಕುಲಿಗಳಿಗಿಂತ ಹೆಚ್ಚಿನದೇನನ್ನೂ ಕೊಂಡುಕೊಡಲಾರದಷ್ಟು ಕಡು ಬಡತನ ಆ ಮಕ್ಕಳ ತಂದೆ ತೌಡನಿಗೆ. ಆದುದರಿಂದ ಹಣ್ಣು ಹಣ್ಣಾದ ಆ ಬಾಳೆಯ ಹಣ್ಣು ಅಮೃತಪ್ರಾಶನದಂತಾಯಿತು ಅವರಿಗೆ. ಅಜ್ಜಿಯ ಬಳಿ ಕುಳಿತು ಆದರ ಕತೆ ಕೇಳಿದರು. ಅಜ್ಜಿಯು ಹೇಳಿದಳು, ಆ ಉದ್ದದ ಕತೆಯನ್ನು ಗಿಡ್ಡಾಗಿ ಹೇಳುವುದಾದರೆ ಒಂದು ವರುಷದ ಹಿಂದೆ ಅವರ ಮಾವನೊಂದು ರಸಬಾಳೆಯ ಕಂದನ್ನು ತಂದು ನೆಟ್ಟಿದ್ದ. ಅದು ಗೊನೆ ಹಾಕಿತು. ಆದರೆ ಆ ಗೊನೆ ಬೇಗ ಹಣ್ಣಾಯಿತು. ಇವರು ಬಂದುದು ತಡವಾಯಿತು, ಈಗ ಆ ಬಾಳೆಯ ನಾಲ್ಕು ಕಂದುಗಳಿವೆ. ಅವೂ ಬೆಳೆದು ಗೊನೆ ಹಾಕುವುವು. ಆಗ ಒಂದು ಗೊನೆಯನ್ನೇ ಅವರಿಗೆ ಅವಳು ಕಳುಹಿಸಿ ಕೊಡುವಳು…. ಇದನ್ನು ಕೇಳಿದ ಆ ಮಕ್ಕಳಲ್ಲಿ ಒಂದು ಯೋಚನೆ ಮಿಂಚಿತು… ತಾವೂ ಅಲ್ಲಿಂದ ಒಂದು ಕಂದನ್ನು ಕೊಂಡುಹೋಗಿ ತಮ್ಮ ಮನೆಯೆದುರು ಮೋರೆ ತೊಳೆವಲ್ಲಿ ನೆಟ್ಟರಾಗದೆ- ಎಂದು. ಎರಡು ಮೂರು ದಿನ ಅದೇ ಹಂಬಲ ಅವರಿಗೆ. ಕೊನೆಗೆ ಮಾವನು ಅವರಿಗೊಂದು ಕಂದು ಕೊಡುತ್ತೇನೆಂದಾಗ ಅವರಿಗಾದ ಆನಂದ! ಬರೆದು ಬಣ್ಣಿಸಲಾದೀತೆ? ಮುಂದೇನಾಯಿತೆಂಬುದು ಗೊತ್ತೇ ಇದೆಯಲ್ಲ?
ತಮ್ಮ ಗುಡಿಸಲು ಸೇರಿದ ಆ ಮಕ್ಕಳು-ಬೂದ ತುಕ್ರಿಯರು-ಮರುದಿನ ಬೆಳಗ್ಗೆ ಎಲ್ಲರಿಗಿಂತ ಮೊದಲು ಎಚ್ಚೆತ್ತು ತೌಡನನ್ನು ಬೇಡಿ ಕಾಡಿ ಅದನ್ನು ನೆಡಿಸಿದರು. ತೌಡನು ದಿನಗೂಲಿ ಮಾಡಿ ಸಂಸಾರ ಹೊರುವ ಕಡುಬಡವ. ಆದರೆ ಇರಲಿಕ್ಕೊಂದು ಮಾಡು ಬೇಕಲ್ಲ? ಆದಕ್ಕಾಗಿ ಕೋಟೆಮನೆ ನಾಗಪ್ಪನವರ ನಾಲ್ಕಾರು ಚೋಕು ತೆಂಗಿನ ಪಾಳು ತೋಟದ ಆ ಗುಡಿಸಲಲ್ಲಿ ಇದ್ದ. ಅದಕ್ಕೂ ಆರು ರೂಪಾಯಿ ಗೇಣಿ ಕೊಟ್ಟು ಗುಡಿಸಲು ಚಾವಣಿ ಮಾಡಿಕೊಳ್ಳಬೇಕಿತ್ತು. ಮೇಲಾಗಿ ಧನಿಯರ ಬಿಟ್ಟಿ ಬೇಗಾರಿಯಂತೂ ಇದ್ದದ್ದೇ. ಆ ಜಾಗದಲ್ಲಿ ಏನಾದರೂ ಬಾಳೆ ತರಕಾರಿಗಳನ್ನು ಬೆಳೆಯಿಸಬಹುದೆಂದರೆ ತೌಡನ ಪಾಳು ತೋಟವು ನೆರೆಹೊರೆಯ ಆಢ್ಯರ ಆಕಳುಗಳ ಆಹಾರ ಕ್ಷೇತ್ರ. ಅವನ್ನು ಹಾಗೆಲ್ಲ ಬಿಟ್ಟುಬಿಡಬಾರದೆಂದು ಹೇಳುವ ಅಥವಾ ಹೊಡೆದೋಡಿಸುವ ಎದೆಗಾರಿಕೆಯು ಬಡ ತೌಡನಿಗೆಲ್ಲಿಂದ? ನಾಳೆ ಅವರಲ್ಲಿಯೇ ದುಡಿದು ಎರಡು ಸೇರಕ್ಕಿಯ ಪಥ್ಯ ತರಬೇಕಲ್ಲ ಅವನಿಗೆ? ಅಲ್ಲದೆ ಆಢ್ಯರ ಅವಕೃಪೆಗೆ ಈಡಾಗಿ ಬಡವನು ಅವರೆಡೆಯಲ್ಲಿ ದಿನ ದೂಡಲಾಪನೆ? ಅದರಿಂದಾಗಿ ತೌಡನಾವುದನ್ನೂ ನೆಡುತ್ತಿದ್ದಿಲ್ಲ. ಆದರೆ ಈಗ ಈ ಮಕ್ಕಳ ಕಾಟಕ್ಕಾಗಿ ನೆಟ್ಟ. ನೆಟ್ಟ ಮತ್ತೆ ಕಾಪಾಡಿಕೊಡದಿದ್ದರೆ ಇವರ ಅನುದಿನದ ಗೋಳಾಟ ಅವನು ಮನೆಹೊಕ್ಕಾಗಲೆಲ್ಲ ತಪ್ಪುವಂತಿಲ್ಲ. ಆದುದರಿಂದ ಒಲೆಯೊಟ್ಟುವ ಅನಿವಾರ್ಯ ಅವಶ್ಯಕತೆಗಾಗಿ ಕೂಡಿಟ್ಟ ಕೊತ್ತಳಿಗೆಗಳನ್ನು ಆ ಕಂದಿನ ಸುತ್ತ ನೆಟ್ಟು ಗಟ್ಟಿಮುಟ್ಟಿನ ಬೇಲಿ ಮಾಡಿದ, ಅಷ್ಟಾದ ಮೇಲೆಯೇ ಆ ಮಕ್ಕಳು ಅಂದು ಗಂಜಿಯೂಟಕ್ಕೆ ಒಳಗೆ ಹೋದುದು.
* * *
ಅಂದಿನಿಂದ ಬೂದ-ತುಕ್ರಿಯರು ಹೊತ್ತಾರೆ ಎದ್ದು ಕಣೋರಸೊರಸಿಕೊಳ್ಳುತ್ತಾ ಹೋಗಿ ಮೊದಲು ನೋಡುವುದು ಆ ಕಂದನ್ನು. ದಿನದಲ್ಲಿ ಅದನ್ನೆಷ್ಟು ಸಲ ನೋಡುತ್ತಿದ್ದರೋ
ಲೆಕ್ಕವಿಟ್ಟವರಾರು? ಮೂಸಂಜೆಗೆ ಗುಡಿಸಲು ಸೇರುವ ಮೊದಲೊಮ್ಮೆ ಅದನ್ನು ನೋಡಿಕೊಂಡು ಬರದಿದ್ದರೆ ಅವರಿಗೆ ನಿದ್ದೆ ಹತ್ತದು. ಹೀಗೆ ಅವರು ದಿನ-ದಿನ ನೋಡು ನೋಡುತ್ತಿದ್ದಂತೆ, ಅದರ ಬುಡದಲ್ಲಿ ಹೋಗಿ ನಿಂತು ಅದರ ಬೆಳವಣಿಗೆಯ ಕುರಿತು ಮಾತುಕತೆಯಾಡುತ್ತಿದ್ದಂತೆ, ಆ ಕಂದು ಸುಳಿಸುಳಿಯಾಗಿ ಬೆಳೆಬೆಳೆದು ಬಾಳೆಯ ಮರವಾಯಿತು. ಬೇಸಿಗೆಯು ಬಂದಾಗ ಬೂದ-ತುಕ್ರಿಯರಿಗೆ ಕುಡಿಕೆ ಹಿಡಿದು ಕೆರೆಯಿಂದ ನೀರು ಹೊತ್ತು ಬಾಳೆಯ ಬುಡಕ್ಕೆ ಸುರಿದಷ್ಟು ಸಾಲದು. ಅದರಿಂದಾಗಿ ಆ ಮಕ್ಕಳ ಮೈಯಿಂದೆಷ್ಟು ಬೆವರು ಸುರಿದಿತ್ತೋ ಅಳೆದವರಾರು?
ಬೇಸಿಗೆಯು ಹೋಗಿ ಮುಂಗಾರು ಮಳೆಯ ಮೋಡವೆದ್ದಿದ್ದ ಅದೊಂದು ರಾತ್ರಿ ಬೂದನೆದ್ದು ಅಳತೊಡಗಿದ-“ಅಯ್ಯೋ ಗಾಳಿ! ಗಾಳಿ! ನಮ್ಮ ಬಾಳೆ ಮರಿದು ಬಿದ್ದರೆ!” ಎಂದು ಬಿಕ್ಕಿ ಬಿಕ್ಕಿ ಕೂಗಿದ. ತೌಡನೆದ್ದು ಹೋಗಿ ಅದಕ್ಕೆ ಸುತ್ತಲೂ ನಾಲ್ಕು ಕೊತ್ತಳಿಗೆಗಳನ್ನು ಊತುಕೊಟ್ಟು ಕಟ್ಟಿ ತೋರಿಸಿ ಸಮಾಧಾನಗೊಳಿಸಿದ ಮೇಲೆ ಹುಡುಗನು ಹೋಗಿ ತಿರುಗಿ ನಿದ್ದೆ ಮಾಡಿದ.
ಒಂದು ದಿನ ತುಕ್ರಿಯು ಬಾಳೆಯ ಬುಡದಲ್ಲಿ ನಿಂತು ಕುಣಿಕುಣಿದು “ಅಣ್ಣಾ! ಅಣ್ಣಾ!” ಎಂದು ಕೂಗಿದಳು. ಬೂದನು ಓಡಿಹೋಗಿ ನೋಡುತ್ತಾ ಬಾಳೆಯ ತುದಿಯಲ್ಲಿ ಹೂವಿನ ಮೂತಿ! ದಿನಹೋದಂತೆ ಹೂವು ಹೊರಬಂತು; ಬೆರಳು ಬಿಟ್ಟಿತು. ಬೆರಳುಗಳು ಬಲಿಬಲಿತು ತೋರಕಾಯಿಗಳಾದವು. ಬೂದ-ತುಕ್ರಿಯರೊಂದಿಗೆ ಚಿಕ್ಕದೂಮನೂ ಹೋಗಿ ಗೊನೆಯನ್ನು ನೋಡುತ್ತ ನಿಲ್ಲುತ್ತಿದ್ದೆ. ಅದು ಹಣ್ಣಾದಾಗ ಅವನಿಗೂ ಪಾಲು ಕೊಡುವುದಾಗಿ ಅಣ್ಣಂದಿರು ಹೇಳುತ್ತಿದ್ದರು. ಅವರು ಹೊತ್ತುತಂದ ಕಂದು; ಅವರಪ್ಪ ನೆಟ್ಟ ಕಂದು; ಅವರು ನೀರೆರೆದು ಬೆಳೆಯಿಸಿದ ಕಂದು; ಅದು ಬಿಟ್ಟ ಗೊನೆಯು ಅವರದು. ಅದು ಹಣ್ಣಾದಾಗ ಅದನ್ನೆಲ್ಲರಿಗೆ ಪಾಲುಮಾಡಿ ಹಂಚುವವರೂ ಅವರೇ. ಅವರಜ್ಜಿಗೂ ಒಂದು ಪಾಲಿದೆ ಅದರಲ್ಲಿ.
* * *
“ತಡಾ ಆ ಗೇಣಿ ಬಾಕಿ ಎರಡು ರೂಪಾಯಿ ಯಾವಾಗ ಕೊಡುವುದೊ? ಅದೇನು ನಿನ್ನ ವರ್ಗದ ತೋಟವೆಂದು ತಿಳಿದೆಯ?” ಎಂದು ಗುಡುಗುಡಿಸಿ ನುಡಿದರು ನಾಗಪ್ಪಯ್ಯ. ತೌಡನು ಅವರ ಮೊರೆ ನೋಡದೆ ಕತ್ತು ತಗ್ಗಿಸಿಕೊಂಡು ದೀನತೆಯ ಬೀಳುದನಿಯಲ್ಲಿ “ಈ ಮಳೆಗಾಲ ಸಾಗಲಿ ಕಬ್ಬು ಹೂಡುವ ಆಲಿಯ ಕಾಲದಲ್ಲಿ ಹೇಗಾದರೂ ದುಡಿದು ಉಳಿಸಿ ತೀರಿಸುತ್ತೇನೆ” ಎಂದ. ಧನಿಯರು ಏನೇನೋ ಸಿಟ್ಟು ಮಾಡಿ ಕೊನೆಗೆ, “ಯಾವಾಗ ಕೇಳಿದರೂ-ಇಂದಿಲ್ಲಿ ಮುಂದೆ-ಎಂದೆನ್ನುವ ನಿನ್ನ ರೋಗ ಇದ್ದೇ ಇದೆ! ಆಗಲಿ, ಆಲಿಯ ಕಾಲದವರೆಗೂ ಕಾದು ಬಿಡುತ್ತೇನೆ” ಎಂದು ಸಮಾಧಾನಕ್ಕೆ ಬಂದು, “ಆಗ ತೋಟದತ್ತ ಕಡೆಯಿಂದ ಬರುತ್ತಿದ್ದಾಗ ಆ ಬಾಳೆಯ ಗೊನೆಯನ್ನು ನೋಡಿದೆ, ನಾಡದು ಹುಣ್ಣಿಮೆ ನಮ್ಮಲ್ಲೊಂದು ಸತ್ಯನಾರಾಯಣ. ನಾಳೆಯೇ ಕಡಿದಿಟ್ಟರೆ ಅಂದಿಗೆ ಹಣ್ಣಾದೀತು, ಹುಣ್ಣಿಮೆಯ ಬೆಳಿಗ್ಗೆ ತಂದುಕೊಟ್ಟುಬಿಡು! ತಿಳೆಯಿತೇ” ಎಂದರು. ತೌಡನಿಗೆ ಸಿಡಿಲು ಬಡಿದಂತಾಯಿತು! ಅವನೇನು ಹೇಳಿಯಾನು? ಮೌನವಾಗಿದ್ದ. “ಏನು ಹೇಳಿದ್ದು ಕೇಳಿತೇ?” ಎಂದರು ತುಸು ಬಿರುಸಿನ ದನಿಯಲ್ಲಿ ಧನಿಯರು. ತೌಡನು ಅಂಜುತ್ತಂಜುತ್ತ ನಾಲಿಗೆ ತಡವರಿಸುತ್ತಾ, “ಮಕ್ಕಳು ಬಹಳ ಆಸೆಯಿಂದ ಬೆಳೆಸಿದ್ದು, ಕೆಳಗಿನ ಒಂದೆರಡು ಸಣ್ಣ ಹಣಿಗೆಯಾದರೂ ಆ ಮಕ್ಕಳಿಗೆ…” ಎನ್ನುವಷ್ಟಲ್ಲೇ ಧನಿಯರು, “ಮಕ್ಕಳಿಗೆ ರಸಬಾಳೆ ಹಣ್ಣೋ, ಮಣ್ಣೋ! ದೇವರ ಬಾಯಿಗೆ ಬೀಳಲಿ! ಮಕ್ಕಳ ಮೈಕೈ ಸುಖಕೊಡುತ್ತಾನೆ. ಸತ್ಯನಾರಾಯಣ! ಮಕ್ಕಳಿಗಿಟ್ಟುಕೊಂಡು ದೇವರಿಗೆ ಕೊಡೋದೇ? ಹೀಗೆಲ್ಲ ಮಾಡೋದ್ರಿಂದ್ಲೆ ನಿತ್ಯ ದರಿದ್ರ ತಪ್ಪೋದಿಲ್ಲ ನಿಮಗೆಲ್ಲ!” ಎನ್ನುತ್ತ ತಿರುಗಿ ಕೆಂಪೇರತೊಡಗಿದರು.
ತೌಡನು ಗುಡಿಸಲಿಗೆ ಬಂದ. ನಡೆದ ಸಂಗತಿಯನ್ನೆಲ್ಲ ಹೆಂಡತಿ ದೆಯ್ಯಿಗೆ ಗುಟ್ಟಾಗಿ ಹೇಳಿದ. ಅವಳು “ಅಯ್ಯೋ ದೇವರೇ, ಮಕ್ಕಳು ಒಂದು ವರ್ಷದಿಂದ ಬೆವರು ಸುರಿದು ನೀರೆರೆದು ಹಣ್ಣು ತಿಂದೇವೆಂದು ಆಸೆ ಮಾಡಿ ಮಾಡಿ ಕಡೆಗೆ…” ಎನ್ನುವಷ್ಟರಲ್ಲೇ ಅವಳಿಗೆ ಕಣ್ಣೀರು ಬಂತು, ಕುತ್ತಿಗೆ ಬಿಗಿಯಿತು, ಮಾತು ಮುಂದುವರಿಯದಂತಾಯಿತು. ಆದರೇನು ಮಾಡುವುದು? ಹಣ್ಣಿನ ಗೊನೆಯು ಹುಣ್ಣಿಮೆಯ ದಿನ ಧನಿಯರ ಅಂಗಳವೇರಲೇಬೇಕು! ತೌಡನು ಗೊನೆಯನ್ನು ಕಡಿದ. ಮಕ್ಕಳು ಸಂತೋಷದಿಂದ ಕುಣಿದಾಡಿದವು. ಹಲವು ಪ್ರಶ್ನೆಗಳನ್ನು ಕೇಳಿದವು. “ನೀವೆಲ್ಲ ರಗಳೆ ಮಾಡಬೇಡಿರಿ ನೋಡೋಣ” ಎಂದೊಂದೇ ಮಾತಿನಿಂದ ತನ್ನ ರಗಳೆಯನ್ನು ನುಂಗಿಕೊಳ್ಳುತ್ತ ಅವರ ಬಾಯಿ ಕಟ್ಟಿಸಿ, ಗೊನೆಯನ್ನು ಒಳಗೆ ತೂಗಹಾಕಿ ಹರಕು ಬಟ್ಟೆ ಸುತ್ತಿದ. ಮಕ್ಕಳು ದಿನದಿನವೂ ಅದು ಹಣ್ಣಾಯಿತೊ ಎಂದು ಹಲವು ಹದಿನೆಂಟು ಸಲ ಎಡೆಯಿದ್ದಲ್ಲಿ
ಇಣಕಿ ನೋಡುತ್ತಿದ್ದವು. ಹುಣ್ಣಿಮೆಗೆರಡು ದಿನ ಮುಂಚೆ ಬಟ್ಟೆಯು ಹರುಕಿನೆಡೆಯಲ್ಲಿ ಕಾಯಿಯೊಂದು ಅರಸಿನ ಬಣ್ಣ ತಾಳಿದುದನ್ನು, ಬೂದ ಕಂಡು ಹಿರಿಹಿರಿ ಹಿಗ್ಗಿ ತಂದೆಯ ಬಳಿಗೋಡಿ ಹೇಳಿದ. “ಇಲ್ಲ ಅದಿನ್ನೂ ಚೆನ್ನಾಗಿ ಹಣ್ಣಾಗಿಲ್ಲ. ನೀವು ನಡುನಡುವೆ ಹೇಗೆಲ್ಲ ರಗಳೆ ಮಾಡಿದರೆ ನಾನದನ್ನು ತೆಗೆದು ತೋಡಿಗೆ ಬಿಸಾಡುತ್ತೇನೆ” ಎಂದು ತೌಡನೆಂದುದೇ ತಡ, ಮಕ್ಕಳು ಬೆದರಿ ಮೌನವಾದರು.
ಹುಣ್ಣಿಮೆಯ ದಿನ ಹೊತ್ತಾರೆ ಮಕ್ಕಳೆದ್ದು ನೋಡುತ್ತಾರೆ. ಬಾಳೆಯ ಗೊನೆಯೂ ಇಲ್ಲ! ತಂದೆಯೂ ಇಲ್ಲ! ಗೊಳೋ ಗೋಳು ಮೂರು ಮಕ್ಕಳದು! ದೆಯ್ಯಿಯು ಅವರನ್ನು ಸಮಾಧಾನಗೊಳಿಸುವುದಕ್ಕೆ ಏನೇನೋ ಕಾಳಬೆಕ್ಕು ತಿಂದುಹೋದ ಕತೆ ಹೇಳಿದಳು. ಅದನ್ನು ಕೇಳಿ ಚಿಕ್ಕ ದೂಮನು, “ಆ-ಆ-ಆ-ಆ ಕಾಲ ಬೆಬ್ಬೆಬ್ಬೆಕ್ಕೂ ಸ-ಸ-ಸ್ಸತ್ತೇ ಓ-ಓ-ಓಗ್ಲ್ಯೀ!” ಎಂದರೂ, ಬೂದ ತುಕ್ರಿಯರು ಅಂತಹ ಕತೆಯನ್ನು ನಂಬಿ ಸಮಾಧಾನವಾಗುವಂತಿದ್ದಿಲ್ಲ. ಕೊನೆಗೆ ದೆಯ್ಯಿಯು ಅದನ್ನು ಧನಿಯರಲ್ಲಿಗೆ ಅಪ್ಪ ಕೊಂಡುಹೋದರು. ಅಲ್ಲಿ ಸತ್ನಾರ್ಣದೇವ್ರಿಗೆ ಅದು ಬೇಕಂತೆ!” ಎಂದಳು. “ದೇವ್ರು ಅದನ್ನು ತಿನ್ನುತ್ತಾರೆಯೇ?” ಎಂದು ಬೂದನ ಪ್ರಶ್ನೆ. “ದೇವ್ರಿಗೆ ಆಷ್ಟೂ ಬೇಕಿತ್ತೇ? ನಮಗೆ ಎರಡೆರಡು-ಒಂದೊಂದು ಆದರೂ ಇರಬಾರದಾಗಿತ್ತೆ?” ಎಂದು ತುಕ್ರಿಯ ತರ್ಕ. “ಹೋಗಲಿ, ಆ ಆಲೋಚನೆ ಬಿಡಿ. ಅದರ ಎರಡು ಮೂರು ಕಂದುಗಳಿವೆ. ಯಾವುದಾದರೊಂದು ಬೇಗನೆ ದೊಡ್ಡದಾಗಿ ಗೊನೆ ಹಾಕಿತ್ತು. ಅದು ಪೂರಾ ನಿಮಗೆ” ಎನ್ನುತ್ತ ಮಕ್ಕಳ ಆ ಅಳು ಮೋರೆಯನ್ನು ನೋಡಲಾರದೆ ಒಳಗೆ ಹೋಗಿಬಿಟ್ಟಳು ತಾಯಿ. ಆದರೆ ಆ ಮಕ್ಕಳು ಮನೆಯಲ್ಲಿ ಏನೋ ಮಹಾವಿಪತ್ತು ಸಂಭವಿಸಿದ್ದಂತೆ ತಲೆಗೊಂದು ಕೈಗೊಟ್ಟು ಜೋಲುಮೋರೆ ಹಾಕಿ ಕಣ್ಣೀರೊರೆಸಿಕೊಳ್ಳುತ್ತ ಜಗಲಿಯಲ್ಲಿ ಕುಳಿತಿದ್ದುವು. ತುಸು ಹೊತ್ತಾದ ಮೇಲೆ ಅದೇನು ಯೋಚನೆ ಹೊಳೆಯಿತೋ ಆ ಬೂದನಿಗೆ-ನೋಡಿ, ಅವನು ಅಂಗಳಕ್ಕೆ ಹಾರಿದ! “ತುಕ್ರಿ, ಬಾ” ಎನ್ನುತ್ತ ಬಾಳೆಯ ಕಂದುಗಳಿರುವೆಡೆಗೆ ಧಾವಿಸುತ್ತಿದ್ದಾನೆ. ತುಕ್ರಿಯೂ ಓಡಿ ಸೇರಿದ್ದಾಳೆ. ನೋಡಿ, ಬೂದನು, ಆ ಕಂದುಗಳನ್ನು ಒಂದೊಂದಾಗಿ ಹಿಡಿಹಿಡಿದು ಬಗ್ಗಿಸಿ, ತಿರುತಿರುವಿ ಮುರಿಯುತ್ತ, ‘ಇ ಇ ಇ ಇವು ಗೋನೆ ಹಾಕೋದೂ ಬೇಡಾ! ಆ ಆ ಆ ಆ ಸತ್ಯನಾರಾಣೇ ತಿತಿತ್ತಿನ್ನೋದೂ ಬೇಡಾ!’ ಎನ್ನುತ್ತ ಅವನ್ನೆಲ್ಲ ಸೀಳಿ ಸೀಳಿ ಮುರಿಮುರಿದು ಹಾಕಿ ಅಲ್ಲೆಲ್ಲ ಕಸರೇಳುವಂತೆ ಅವುಗಳ ಮೇಲೆ ತಕತಕ ಕುಣಿಯುತ್ತಿದ್ದಾನೆ. ತುಕ್ರಿಯೂ ಕುಣಿಯುತ್ತಿದ್ದಾಳೆ! ಅದೇನು ಆವೇಶ! ಆದಂತಹ ನೃತ್ಯ!
*****
೧೯೩೮
Super
ಇನ್ನೂ ತಾಜಾ ಆಗಿರುವ ಮಾನವೀಯ ಮಿಡಿತದ ಕತೆ. ಒಂದೆಡೆ ದೈವವೂ, ಒಂದೆಡೆ ಹಸಿವೂ….. 🙏🙏🙏