ಪರೆಯು ಪರೆಯು ತಾ ಹರಿಯುತಿಹುದು ಪರವಾದ ನೋಟದೀಟಿ
ತೆರೆಯು ತೆರೆಯು ತಾವೋಡುತಿಹವು ಹರವಾಗೆ ಕಡಲದೋಟಿ
ಹೆಜ್ಜೆ ಹೆಜ್ಜೆ ಸಜ್ಜಾಗುತಿಹವು ಬೆಳೆ ಬೆಳೆವ ಒಜ್ಜೆ ಹೊರಲು
ಚರ್ಮ ಮರ್ಮದೊಳಕಡೆಗೆ ತೂರಿ ತುತ್ತೂರಿಯೇನೊ ಬರಲು
ಪೆಟ್ಟು ಪೆಟ್ಟು ಬಡಿದಾಗ ಹಾವ ಭಾವದಲಿ ಭಾವಮೂರ್ತಿ
ಕೆಟ್ಟು ಸುಟ್ಟು ಕಸವಳಿದು ಗಟ್ಟಿ ಗಟ್ಯಾಗಿ ಲೋಹ ಕೀರ್ತಿ
ನೆನೆದು ನೆನೆದು ನೀರುಂಡು ಕಲ್ಲು ತಾ ವಜ್ರಕಾಯವಾಗಿ
ಬೆಂದು ನೂಂದು ಪರಿಪಕ್ವವಾಗಿ ಭೋಜನವು ಭೋಜ್ಯವಾಗಿ
ಕಳಚುತಿಹುದು ಒಂದೊಂದೆ ಬಟ್ಟೆ ಬಯಲಾಗಿ ಮೈಯ ಮರ್ಮ
ಕಣ್ಣ ಪರದೆ ಪರೆ ಹರಿದು ಬರಿದು ತಿಳಿದೃಶ್ಯ ಹೃದಯ ಕರ್ಮ
ಮೌಲ್ಯ ಮೌಲ್ಯ ಹಳವಾಗಿ ಹೋಗಿ ಹೊಸ ಅರ್ಥ ತೆರೆಯುತಿಹವು
ಪುಟವು ಪುಟವು ಹಿಂದಾಗಿ ಜೀವಕಾವ್ಯಕ್ಕೆ ಹೊಸದು ತಿರುವು
ಮೈಲು ಕಲ್ಲುಗಳು ದಾಟಿ ದಾಟಿ ಹೊಸ ಮಜಲು ತೋರುತಿಹವು
ಹಗಲು ಇರುಳು ಕಣ್ಮುಚ್ಚಿ ತೆರೆದು ಭೂಮವ್ವ ನೋಟ ಮಹವು
ಹರಿವ ನದಿಗೆ ಹರಿದಂತೆ ಹಳ್ಳ ಕೊಳ್ಳಗಳು ಸೇರುತಿಹವು
ಬೆಳೆವ ಮರಕೆ ಹಲವಾರು ರೆಂಬೆ ಕೊಂಬೆಗಳು ಅರಳುತಿಹವು
ಮಸೆತಗಳಲಿ ಮಸಗಾಡಿ ಕತ್ತಿ ಚೂಪಾಗಿ ಹೊಳೆಯುತಿಹುದು
ಹೊಸೆತಗಳಲಿ ನೂರಾರು ನಾರು ಮಿಣಿಹಗ್ಗ ಹೊಸೆಯುತಿಹುದು
*****