ಪ್ರಿಯ ಸಖಿ,
ಆಗಿನ್ನೂ ಬೆಳಗಿನ ಚುಮಚುಮು ಬೆಳಕು ಪಸರಿಸುತ್ತಿದೆ. ಕೊರೆವ ಚಳಿಯಲ್ಲಿ ರಾತ್ರಿಯಿಡೀ ಆ ಹಿಮಪರ್ವತದ ಮೇಲೆ ಗಡಿ ಕಾಯುತ್ತಾ ಇವನು ಬೆಂಡಾಗಿದ್ದಾನೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಇವನ ಪಾಳಿ ಮುಗಿಯಲಿದೆ. ಆಮೇಲೆ ಚೆನ್ನಾಗಿ ನಿದ್ದೆ ಮಾಡಬಹುದು ಎಂದುಕೊಂಡೊಡನೆ ಆಕಳಿಕೆ ಬಂತು. ಒಂದು ಕ್ಷಣ ಕಣ್ಣನ್ನು ಮೆಲ್ಲಗೆ ಮುಚ್ಚಿದ….ಅಷ್ಟರಲ್ಲೇ ಹತ್ತಿರದಲ್ಲೇ ಎಲ್ಲೋ ಶಬ್ದ. ತಕ್ಷಣ ಇವನು ಬೆಚ್ಚಿ ಕಣ್ತೆರೆದ. ಕೈಲಿದ್ದ ರೈಫಲ್ ತನ್ನಂತೆ ತಾನೇ ಸಿದ್ಧವಾಯ್ತು! ಎಚ್ಚರದ ಕಣ್ಣಿನಿಂದ ಸುತ್ತಮುತ್ತ ಗಮನಿಸಲಾರಂಭಿಸಿದ. ಮೆಲ್ಲಗೆ ತೆವಳುತ್ತಲೇ ಸ್ವಲ್ಪ ದೂರ ಹೋಗಿ ಬಂದ. ಮತ್ತೆ ಪಟ ಪಟ ಶಬ್ಧ, ಈಗ ಮತ್ತೂ ಹತ್ತಿರದಿಂದ ಕೇಳಿದಾಗ ಮತ್ತಷ್ಟು ಕಿವಿನಿಮಿರಿಸಿ ಕುಳಿತು ರೈಫಲನ್ನು ಶಬ್ದದೆಡೆಗೆ ಹೊರಳಿಸಿ ಗುರಿಯಿಟ್ಟು ಕಾದ.
ಕೆಲಹೊತ್ತು ನಿಶ್ಶಬ್ದ. ಇದ್ದಕ್ಕಿದ್ದಂತೆ ಶತ್ರು ದೇಶದ ಭೂಮಿಯೆಡೆಯಿಂದ ಭರ್ರನೆ ಹಾರಿ ಬಂದ ಹಕ್ಕಿ ನಮ್ಮ ದೇಶದ ಮೇಲೆ ಕುಳಿತು ಪಟಪಟನೆ ರೆಕ್ಕೆ ಬಡಿಯಿತು! ಇವನು ಕ್ಷಣಕಾಲ ಸ್ತಂಭೀಭೂತನಾಗಿ ಕುಳಿತು ಬಿಟ್ಟ ಆ ಹಕ್ಕಿ ಶತ್ರು ದೇಶದ್ದೋ ? ತನ್ನ ದೇಶದ್ದೋ ? ಅದನ್ನು ಕೊಲ್ಲಲೋ ? ಬೇಡವೋ ? ಯೋಚಿಸಲಾರಂಭಿಸಿದ.
ತನ್ನ ಯೋಚನೆಗೆ ಅವನಿಗೆ ನಗು ಬಂತು. ಪಕ್ಕದಲ್ಲೇ ಎಲ್ಲೋ ಅಸ್ಪಷ್ಟವಾಗಿ ನದಿ ಹರಿಯುವ ಶಬ್ಧ ತನ್ನ ದೇಶದ ನದಿ. ಶತ್ರು ದೇಶಕ್ಕೆ ಹರಿಯುವ ಶಬ್ಧ. ತನ್ನ ದೇಶದ ನದಿ ಶತ್ರು ದೇಶಕ್ಕೆ ಹರಿದು ಹೋಗುತ್ತಿದೆ. ಶತ್ರು ದೇಶದಿಂದ ಬೀಸಿದ ಗಾಳಿ ತನ್ನ ದೇಶವನ್ನು ಆವರಿಸುತ್ತಿದೆ. ಇತ್ತಲಿನ ಪರ್ವತದ ಮುಖ ತನ್ನ ದೇಶದ್ದು. ಅತ್ತಲಿನ ಪರ್ವತದ ಮುಖ ಶತ್ರು ದೇಶದ್ದು. ಪರ್ವತ ಒಂದೇ ಆದರೂ ಹೆಸರು ಮಾತ್ರ ಎರಡು.
ಶತ್ರು ದೇಶದ ಈ ನದಿ, ಗಾಳಿ, ಪರ್ವತಕ್ಕೆ ಈಗಷ್ಟೆ ಶತ್ರುದೇಶದಿಂದ ಹಾರಿ ಬಂದ ಆ ಹಕ್ಕಿಗೆ ಹೇಗೆ ಗುಂಡಿಕ್ಕಿ ಕೊಲ್ಲಲಿ ? ಸೃಷ್ಠಿ ಎಂದಾದರೂ ಗಡಿಗಳನ್ನು ಹಾಕಿಕೊಂಡಿದೆಯೇ ? ಮಾನವನಿಗಷ್ಟೆ ಈ ಗಡಿ ! ನದಿ, ಗಾಳಿ, ಮಳೆ, ಭೂಮಿ, ಪ್ರಾಣಿ ಪಕ್ಷಿಗಳೂ ಮಾನವನಂತೆಯೇ ಗಡಿಗಳನ್ನು ಹಾಕಿಕೊಂಡು ತಮ್ಮ ತಮ್ಮಲ್ಲೇ ವಿರೋಧಿ ಬಣಗಳನ್ನು ಸೃಷ್ಟಿಸಿಕೊಂಡು ಬಿಟ್ಟರೆ… ಆಗೇನು ಮಾಡುವುದು ? ಈ ಆಲೋಚನೆ ಬಂದೊಡನೆ ಆ ಕೊರೆವ ಚಳಿಯಲ್ಲೂ ಅವನು ಬೆವೆತು ಹೋದ. ಮನದಲ್ಲೇ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾ ‘ಹೇ ದೇವ, ಮಾನವನ ಸ್ವಾರ್ಥದಿಂದಷ್ಟೇ ಗಡಿಗಳ ಸೃಷ್ಟಿಯಾಯ್ತು. ಸೃಷ್ಟಿಗೂ ಶತ್ರು – ಮಿತ್ರನೆಂಬ ಗಡಿಯನ್ನು ನೀ ಎಳಿಯಲಿಲ್ಲವಲ್ಲ’ ಎನ್ನುತ್ತಾ ನಿಟ್ಟುಸಿರಿಟ್ಟ ಏಕೋ ಕೈಯಲ್ಲಿದ್ದ ರೈಫಲ್ ಎತ್ತಲಾಗದಷ್ಟು ಭಾರವಾಗುತ್ತಿದೆ ಎನಿಸಿ ಭೂಮಿಗೆ ಕುಸಿದು ಕುಳಿತ!
*****