ಪೋಪ್ ಜಾನ್ ಪಾಲ್ ಭಾರತಕ್ಕೆ ಬಂದುಹೋದರು. ಹಿಂದೂ ಮತಾಂಧರ ಪ್ರಲಾಪ ಇನ್ನೂ ನಿಂತಿಲ್ಲ. ಒಬ್ಬ ಪೋಪ್ ಆಗಮನದಿಂದಾಗಿ ಒಂದು ಧರ್ಮವೇ ದಿಕ್ಕೆಡುತ್ತದೆ . ಆ ಧರ್ಮಕ್ಕೆ ಸೇರಿದ ಜನತೆ ತಮ್ಮ ಧರ್ಮವನ್ನು ಧಿಕ್ಕರಿಸಿ ಎಲ್ಲಿ ಕ್ರೈಸ್ತ ಧರ್ಮಕ್ಕೆ ಮರುಳಾಗಿ ಮತಾಂತರಗೊಳ್ಳುತ್ತಾರೋ ಎಂಬ ಭಯದ ಹಿನ್ನೆಲೆಯನ್ನು ಗಮನಿಸಿದಾಗ ಹಿಂದೂ ಧರ್ಮ ಅಷ್ಟೊಂದು ಬಲಹೀನವೆ ? ದಾರಿ ತಪ್ಪಿದೆಯೆ ? ಅದರ ದಾರಿಯಲ್ಲೇ ತಪ್ಪಿದೆಯೆ ? ಎಂಬ ಗುಮಾನಿ ಕಾಡದಿರದು. ಇಡೀ ದೇಶದಲ್ಲಿ ಎಲ್ಲಾ ಧರ್ಮಗಳೂ ಒಗ್ಗೂಡಿ ಬಾಳುತ್ತಿರುವ ಭಾರತದಲ್ಲಿ ಈ ಹಿಂದೂ ಧರ್ಮವೆಂಬುದು ಮಾತ್ರ ಕಾಲಕಾಲಕ್ಕೆ ಯಾಕಿಷ್ಟು ಅಭದ್ರತೆ, ಅಸ್ಥಿರತೆ, ಅಧೀರತೆ, ಅಸಹಾಯಕತೆ ಅಪ್ರಬುದ್ಧತೆಯಿಂದ ನರಳುತ್ತಿದೆ ! ಮುಸ್ಲಿಮರು ಅಧಿಕಾರ ಹಿಡಿದರೆ ಅಸೂಯೆಯಿಂದ ಕುದಿವ, ಕ್ರಿಶ್ಚಿಯನ್ ಪೋಪ್ ಒಬ್ಬರು ಅತಿಥಿಯಾಗಿ ಬಂದು ಹೋದರೂ ತತ್ತರಿಸಿ ಕಂಪಿಸುವ ಹಿಂದೂ ಮತಾಂಧರ ಧರ್ಮದಲ್ಲೇ ಏನೋ ಹುಳುಕಿರಬೇಕಲ್ಲವೆ ? ನಮ್ಮ ಜನತೆ ಎಲ್ಲಿ ಅನ್ಯ ಧರ್ಮದ ಪಾಲಾಗುವರೋ ಎಂಬ ಶಂಕೆಯು ಇವರನ್ನು ಹೈರಾಣ ಮಾಡುತ್ತಿದೆ ಎಂದಾಗ ಅಂತಹ ಧರ್ಮದ ಗಟ್ಟಿತನದ ಬಗ್ಗೆಯೇ ಸಂಶಯ ಉಂಟಾಗುತ್ತದೆ.
ಮತಾಂತರ ನಮಗೆ ಹೊಸದೇನಲ್ಲ . ಮುಸ್ಲಿಮರು, ಕ್ರೈಸ್ತರು ಬರುವ ಮೊದಲೆ ಈ ನೆಲದಲ್ಲಿ ಬಾಳುವವರೇ ಹಿಂದೂ ಧರ್ಮದ ವಿರುದ್ಧ ಎರಡು ಸಾವಿರ ವರ್ಷಗಳ ಹಿಂದೆಯೇ ಬಂಡೆದ್ದು ಇತರೆ ಧರ್ಮಗಳ ಹುಟ್ಟಿಗೆ ಕಾರಣರಾದದ್ದು ಮತಾಂತರವಲ್ಲದೆ ಮತ್ತೇನು ? ಪೋಪ್ ಜಾನ್ ಪಾಲ್ ಮುಂದಿನ ಸಹಸ್ರಮಾನದಲ್ಲಿ ಏಷ್ಯಾ ದೇಶದ ಉದ್ದಗಲಕ್ಕೂ ಕ್ರೈಸ್ತ ಮತ ಹರಡಬೇಕು ಎಂದಾಶಿದ ಮಾತ್ರಕ್ಕೆ ಭಯಭೀತರಾದ ಮಠಾಧೀಶರು ಹಿಂದೂ ಧರ್ಮ ಉಳಿಸಿಕೊಳ್ಳಲು ಮನಬಂದಂತೆ ಪ್ರಲಾಪಿಸ ಹತ್ತಿರುವುದು ಎಂತಹ ವಿಪರ್ಯಾಸ.
ಹಿಂದೂ ಧರ್ಮವೆಂದರೆ ವೈದಿಕ ಧರ್ಮವೆಂದೇ ಗುರುತಿಸುವಂತಾಗಿಬಿಟ್ಟಿದೆ. ಅದರ ವಿರುದ್ಧ ಜನತೆ ಬಂಡೆದ್ದು ಅನ್ಯ ಧರ್ಮಗಳು ಇದೇ ನೆಲದಲ್ಲಿ ಹುಟ್ಟಲು ಕಾರಣವಾಗಿದ್ದು ಮಾತ್ರ ಸ್ವಯಂಕೃತ ಅಪರಾಧ, ಮನುಸ್ಮೃತಿಯನ್ನೇ ಬಲವಾಗಿ ನಂಬಿ ಶೂದ್ರರಿಗೆ ವಿದ್ಯಾದಾನ ಮಾಡದೆ ಸೇವಕರನ್ನಾಗಿ ದುಡಿಸಿಕೊಂಡಿದ್ದು ವಿದ್ಯೆ ಕಲಿಯುವುದಿರಲ್ಲಿ ಶ್ಲೋಕಗಳನ್ನು ಕೇಳಿದರೇನ ಕಿವಿಗೆ ಕಾದ ಸೀಸೆ ಸುರಿಯುವಷ್ಟು ಅಮಾನವೀಯವಾಗಿ ವರ್ತಿಸಿದ್ದರಿಂದ ವಿದ್ಯೆ ಕೆಲವರ ಸೊತ್ತಾಗಿ ಕೋಟ್ಯಂತರ ಜನ ವಿದ್ಯಾವಿಹೀನರಾಗಿ ಹಿಂದೂದೇಶ, ಹಿಂದುಳಿಯಲು ಪರೋಕ್ಷವಾಗಿ ಕಾರಣವಾಗಿದ್ದು, ಎಂತಹ ಧರ್ಮವಾದೀತು!
ಹಿಂದೂ ಧರ್ಮ ಅಲಿಯಾಸ್ ವೈದಿಕ ಧರ್ಮವನ್ನು ವಿರೋಧಿಸಿ ಹುಟ್ಟಿಕೊಂಡ ಬೌದ್ಧ ಧರ್ಮ ಪ್ರಬಲವಾಗಿ ಬೆಳೆದು ಜನಸಾಮಾನ್ಯರನ್ನು ಗೆದ್ದಾಗಲೂ ಹೀಗೆಯೇ ಬೊಬ್ಬೆಗಳಾದವು. ಶ್ರೀ ಶಂಕರಾಚಾರ್ಯರು ಹಿಂದೂ ಧರ್ಮದ ಪುನರುತಾನಕ್ಕೆಂದೇ ನಿ೦ತರು. ಬೌದ್ಧ ಧರ್ಮದ ಬಗ್ಗೆ ಅಪಪ್ರಚಾರ ನಡೆದು, ಹಲ್ಲೆಗಳಾಗಿ ಮಾನವೀಯ ಗುಣಗಳನ್ನು ಹೊಂದಿದ್ದ ಬೌದ್ದಧರ್ಮ ದೇಶವನ್ನೇ ಬಿಟ್ಟು ತೊಲಗಬೇಕಾಯಿತು. ಆದರೇನು, ವಿದೇಶಗಳಲ್ಲಿ ಈ ಧರ್ಮಕ್ಕೆ ಮೇರುಸ್ಥಾನ ದಕ್ಕಿತು. ನಂತರ ಬಂದ ಜೈನ ಧರ್ಮ ಅಹಿಂಸೆ ವಿದ್ಯೆಗೆ ಪ್ರಾಶಸ್ತ್ಯ ನೀಡಿತಾದರೂ ವಿಚಿತ್ರ ಸಂಪ್ರದಾಯಗಳನ್ನು ಮೈಗೂಡಿಸಿಕೊಂಡಿದ್ದರಿಂದ ತ್ಯಾಗ ಬಲಿದಾನಗಳಿಗೆ ಹೆಸರಾದ ಆ ಧರ್ಮ ಕೂಡ ಕಳಾಹೀನವಾಯಿತು. ಆಮೇಲೆ ಜನ್ಮ ತಾಳಿದ ಚಾರ್ವಾಕ ಧರ್ಮ ತನ್ನ ಸ್ವೇಚಾಚಾರಗಳಿಂದಾಗಿ ಬಹಳ ಕಾಲ ಬಾಳಲಿಲ್ಲ. ವೈದಿಕ ಧರ್ಮದಿಂದ ನೊಂದು ಬೆಂದವರೆಲ್ಲಾ ಬೌದ್ಧ ಜೈನ ಮತಾವಲಂಬಿಗಳಾದರು ಅರ್ಥಾತ್ ಮತಾಂತರಗೊಂಡರು. ನಂತರ ಬಂದ ವೀರಶೈವ ಧರ್ಮ ವೈದಿಕರನ್ನು ಬಲವಾಗಿಯೇ ವಿರೋಧಿಸಿ ಬೆಳೆದದ್ದು ಗಮನಾರ್ಹ. ಸರ್ವಸಮಾನತೆ ಸರ್ವರಿಗೂ ಶಿಕ್ಷಣ, ಗೊಡ್ಡು ಆಚರಣೆಗಳ ನಾಶ, ಸ್ತ್ರೀ ಸ್ವಾತಂತ್ರ, ಸರ್ವರಿಗೂ ಲೇಸನ್ನೇ ಬಯಸಿದ್ದರಿಂದ ಬಹಳಷ್ಟು ಜನ ವೀರಶೈವ ಧರ್ಮವನ್ನು ಅಪ್ಪಿಕೊಂಡರು – ಅಂದರೆ ಮತಾಂತರಗೊಂಡರು. ಬೌದ್ಧ, ಜೈನ, ವೀರಶೈವ ಎಲ್ಲಾ ಧರ್ಮಗಳು ತಮ್ಮ ತಮ್ಮ ಧರ್ಮಗಳ ಪ್ರಚಾರ ಮಾಡಿದ್ದುಂಟು. ಜನರಿಗೆ ವಿದ್ಯೆ , ಬುದ್ಧಿ , ಸಮಾನತೆ, ಸಹಬಾಳ್ವೆ ಕೊಡುವೆವು ಪಣತೊಟ್ಟಿದ್ದರಿಂದ ಜನರ ಮನಃ ಪರಿವರ್ತನೆಗೊಳಗಾಗಿ ಈ ಧರ್ಮವನ್ನು ಬಾಚಿ ತಬ್ಬಿಕೊಂಡಿತು. ಆಗಲೂ ಇದೇ ಹಿಂದೂವಾದಿಗಳು ಲಬಲಬೊ ಮಾಡಿದರು. ಸಂಚಿನಿಂದ ಬಸವಣ್ಣನನ್ನು ಮುಗಿಸಿದರು. ವೀರಶೈವ ಧರ್ಮ ತನ್ನ ಮೇರುಗುಣ ಮಾನವೀಯ ಪ್ರಭಾವಳಿಯ ಮಧ್ಯೆಯೂ ಬಸವಣ್ಣನ ನಂತರದಲ್ಲಿ ಕೇವಲ ಜಾತಿಯ ರೂಪ ತಾಳಿದ್ದರಿಂದ ಕರ್ನಾಟಕ ಬಿಟ್ಟು ಆಚೆ ಹೋಗಲಾರದೆ ತಾನು ಹುಟ್ಟಿದ ನೆಲೆಯಲ್ಲೇ ದಿಕ್ಕೆಟ್ಟ ಪರಿತಪಿಸುವಂತಾಗಿದ್ದು ಮತ್ತೊಂದು ದುರಂತ.
ಇವತ್ತು ಎಲ್ಲಾ ಧರ್ಮಗಳು ಜಾತಿಭೂತಗಳಾಗಿಬಿಟ್ಟಿವೆ. ಅಮಾನವೀಯ ಅನಾಗರಿಕ ಬರ್ಬರ ಕೃತ್ಯಗಳಿಗೆ ಬಲಿಯಾಗುವ ಅಮಾಯಕ ಜನ ಮತಾಂತರಗೊಳ್ಳದೆ ಮತ್ತೇನು ಮಾಡಲು ಸಾಧ್ಯ?
ಕ್ರಿಶ್ಚಿಯನ್ನರ ಮರೆಯುವಂತಿಲ್ಲ
ಕ್ರಿಶ್ಚಿಯನ್ನರು ನಮ್ಮ ದೇಶಕ್ಕಾಗಿ ಬಹಳಷ್ಟು ಮಾಡಿದುದನ್ನು ಮರೆಯುವಂತಿಲ್ಲ. ಮುದ್ರಣ ತಂದರು, ಶಿಕ್ಷಣ ಸಂಸ್ಥೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಿ ಬೆಳೆಸಿದರು, ಆರೋಗ್ಯ ಸಂಸ್ಥೆಗಳನ್ನು ತೆರೆದರು, ದೀನದಲಿತರ ಸೇವೆಗೆ ನಿಂತರು, ಅವರ ಮೈದಡವಿ ಮುಟ್ಟಿಮಾತನಾಡಿಸಿದರು. ಕಣ್ಣೀರು ತೊಡೆದರು. ಅವರ ಅಗತ್ಯಗಳನ್ನು ಪೂರೈಸಿ ನೆಲ, ಜಲ, ಔಷಧ, ಆಹಾರಗಳನ್ನು ಒದಗಿಸಿದರು. ಮುಖ್ಯವಾಗಿ ಈವರೆಗೂ ಸಿಗದಿದ್ದ ಪ್ರೀತಿಯನ್ನು ಧಾರೆ ಎರೆದರು. ಅಸಮಾನತೆ, ಅಸ್ಪಶ್ಯತೆಯಿಂದ ನರಳುತಾ ಬೇಸತ್ತಿದ್ದ ಮನಗಳು ಕ್ರೈಸ್ತರ ವಾತ್ಸಲ್ಯಕ್ಕೆ ಕರಗಿದವು, ಶರಣಾದವು. ಮತಾಂತರಕ್ಕೊಳಗಾದೆವು. ಒಂದು ನೆಲೆಯನ್ನು ಕಂಡುಕೊಂಡೆವು. ಇದೆಲ್ಲಾ ಅಂದು ಬಲವಂತವಾಗಿ ನಡೆಯಲಿಲ್ಲ ಇಂದೂ ನಡೆಯುವಂತಹದಲ್ಲ. ಯಾರನ್ನೂ ಬಲವಂತವಾಗಿ ಮತಾಂತರಿಸಲು ಅಸಾಧ್ಯ ಹಿಂದಿನಿಂದಲೂ ಈಗ ಜನ ಬುದ್ಧಿವಂತರಾಗಿದ್ದಾರೆಂಬುದರಲ್ಲಿ ಅನುಮಾನವಿಲ್ಲ. ಬೇಕೆನಿಸುವ ಧರ್ಮ ಸೇರಲು ಸಂವಿಧಾನದಲ್ಲೇ ಹಕ್ಕಿರುವಾಗ ಮತ್ತೆ ಅದರ ಬಗ್ಗೆ ಚರ್ಚೆಯಾಗಬೇಕೆನ್ನುವ ಮತಾಂಧರ ಹಪಹಪಿಕೆಗೆ ಅರ್ಥವಿಲ್ಲ. ವಿದ್ವಾಂಸ, ಮೇಧಾವಿ, ಸಂವಿಧಾನ ಶಿಲ್ಪಿ ಡಾ|| ಅಂಬೇಡ್ಕರ್ ಅಂಥವರೇ ಬೌದ್ಧ ಧರ್ಮಕ್ಕೆ ಮತಾ೦ತರಗೊಂಡರು ಎಂದಾಗ ಹಿಂದೂ ಧರ್ಮದಲ್ಲಿಯೇ ಯಾವುದೋ ದೋಶವಿರಬೇಕಲ್ಲವೆ. ಮುಸ್ಲಿಮರ ಆಡಳಿತಾವಧಿಯಲ್ಲೂ ಮತಾಂತರಗಳಾಗಿವೆ. ಜನ ತಮಗೆ ಕ್ಷೇಮ ಎನ್ನಿಸಿದ ಕಡೆ ಹೊಗೋದನ್ನು ಪ್ರತಿಭಟಿಸೋದು, ಹಂಗಿಸೋದು ತಪ್ಪು ಅನ್ನೋದೇ ಪರಮ ತಪ್ಪು, ಕ್ರೈಸ್ತ ಸನ್ಯಾಸಿನಿಯರ ಮೇಲೆ ಅತ್ಯಾಚಾರ, ಕ್ರೈಸ್ತ ಗುರುಗಳ ಹತ್ಯೆಗಳಿಂದ ಮತಾಂತರಗಳನ್ನು ತಡೆಗಟ್ಟಲು ಸಾಧ್ಯವೆಂಬುದು ಕೇವಲ ಕುಹಕವಾದೀತಷ್ಟೆ.
ಜಾತಿ ಮಠಗಳು
ನಮ್ಮಲ್ಲಿ ಸಮಾನತೆ ತರಲೆಂದೇ ಜನ್ಮ ತಳೆದ ಜಾತ್ಯಾತೀತ ಮಠಗಳೆಲ್ಲಾ ಇಂದು ಕೇವಲ ಜಾತಿ ಮಠಗಳಾಗಿಬಿಟ್ಟಿವೆ. ರಾಜಕೀಯ ಮಾಡುವುದರಲ್ಲಿ ಮಠಾಧಿಪತಿಗಳು ರಾಜಕಾರಣಿಗಳೇ ನಾಚುವಷ್ಟು ಪ್ರಬುದ್ಧರಾಗಿದ್ದಾರೆ. ಅಥವಾ ಪ್ರಚಂಡರಾಗಿದ್ದಾರೆ ಅಥವಾ ಕುತಂತ್ರಿಗಳಾಗಿದ್ದಾರೆ ಅಥವಾ ನಿರ್ಲಜ್ಜರಾಗಿದ್ದಾರೆ ಅಥವಾ ಇವೆಲ್ಲವೂ ಆಗಿದ್ದಾರೆ. ಪರದೇಶಗಳಿಗೆ ಟೂರ್ ಹೋಗಿ ತಮ್ಮತಮ್ಮ ಧರ್ಮಗಳನ್ನು ಪ್ರಚಾರಮಾಡಿ ಜನಿವಾರವನ್ನೋ, ಶಿವದಾರವನ್ನೋ ಕಟ್ಟುತ್ತಿರುವುದು, ದೇವಾಲಯಗಳನ್ನು ನಿರ್ಮಿಸುತ್ತಿರುವುದು, ತಪ್ಪಲ್ಲವೆಂದಾಗ ಕ್ರಿಶ್ಚಿಯನ್ನರ ಪ್ರಚಾರ ಚರ್ಚ್‌ಗಳ ನಿರ್ಮಾಣ ಮಾತ್ರ ಹೇಗೆ ತಪಾದೀತು. ಅದಕ್ಕೇಕೆ ಮತ್ಸರ? ಮಿನಿ ವಿಧಾನಸೌಧಗಳಂತಹ ಮಠಗಳಲ್ಲಿ ವಾಸಿಸುವ ಮಠಪತಿಗಳು ದೀನದಲಿತರಿಗಾಗಿ ಯಾವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ.
ಏಸುವಿಗೆ ತನ್ನನ್ನು ತಾನೇ ರಕ್ಷಿಸಿಕೊಳ್ಳುವ ಶಕ್ತಿಯಿಲ್ಲ. ಭಕ್ತರಿನ್ನೇನು ರಕ್ಷಿಸಿಯಾನು ಎಂದೊಬ್ಬ ಮಠಾಧೀಶನ ಕುಹಕ, ಹಾಗಾದರೆ ತ್ಯಾಗ ಬಲಿದಾನಗಳಿಗೆ ಅರ್ಥವೇ ಇಲ್ಲವೇ? ಹಿಂಸೆಗೆ ಹಿಂಸೆಯೇ ಪರಿಹಾರವೇ? ಗಾಂಧೀಜಿ ಒಂದು ಕೆನ್ನೆಗೆ ಹೊಡೆದವರಿಗೆ ಮತ್ತೊಂದು ಕೆನ್ನೆ ಒಡ್ಡು ಎಂದದ್ದು ಅವರ ರಣಹೇಡಿತನವೆನ್ನಬಹುದೆ?
ಅಂಥವರನ್ನು ಗುಂಡಿಟ್ಟು ಕೊಂದದ್ದು ಬ್ರಿಟಿಷರಲ್ಲ – ನಮ್ಮವರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲಾಗದ ಗಾಂಧಿ ಮಹಾತ್ಮರು ಹೇಗಾದರು? ಬಸವ ಭಕ್ತಿಭಂಡಾರಿ ಅದದ್ದು ಹೇಗೆ? ಇವರನ್ನೆಲ್ಲ ಹೇಡಿಗಳೆನ್ನಲಾದೀತೆ?
ಮತ್ಸರದ ಮಾತುಗಳಿಗೆ ಮೇರೆಯುಂಟೆ? ವಿಶ್ವಹಿಂದೂ ಪರಿಷತ್, ಭಜರಂಗದಳ, ಅರೆಸ್ಸೆಸ್ನವರು ಹಿಂದೂ ಧರ್ಮ ಪ್ರಚಾರಕ್ಕೆ ನಿಂತರೆ ಸರಿ. ಅನ್ಯರು ಅದನ್ನೇ ಮಾಡಿದರೆ ತಪ್ಪು, ಹಿಂದೂ ದೇಶದಲ್ಲಿ ಹಿಂದೂಧರ್ಮ ಒಂದೇ ಇಲ್ಲ. ಇದು ವಿವಿಧ ಧರ್ಮಗಳ ನೆಲೆವೀಡು. ಮಸೀದಿ ಕೆಡವಿದ್ದರಿಂದ, ಬಾಬಾಬುಡಾನ್‌ಗಿರಿ ದಾಂಧಲೆಯಿಂದ ಜನ ಪ್ರೀತಿಗಳಿಸಲು ಸಾಧ್ಯವೇ? ಪೋಪ್ ಜಾನ್ ಪಾಲ್ ಭೇಟಿಯನ್ನು ಪ್ರತಿಭಟಿಸಿದ್ದು ಸಜ್ಜನಿಕೆಯ ಲಕ್ಷಣವಲ್ಲ, ಹಿಂದೂ ಧರ್ಮ ಒಂದು ಮಹಾನ್ ಶಕ್ತಿ ಎಂದು ಭಾವಿಸಿರುವ ಇವರ ಹೃದಯಗಳಲ್ಲಿ ಅನ್ಯ ಧರ್ಮೀಯರನ್ನು ಕಂಡಾಗ ಅವಲಕ್ಕಿ ಕುಟ್ಟಿದಂತಾಗುವುದೇಕೋ? ಹೇಳಿಕೇಳಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲು ತವಕಿಸುತ್ತದೆ. ಪರಿತಪಿಸುತ್ತಿದೆ. ನೀರಿಗೆ ಜಗಳ, ಭಾಷೆಗೆ ಜಗಳ, ಹುಟ್ಟಿಗೆ ಜಗಳ, ಜಾತಿಗೆ ಜಗಳ, ಪ್ರಾಂತ್ಯಕ್ಕೆ ಜಗಳ, ನಿರಂತರವಾಗಿ ನಡೆಯುತ್ತಿದ್ದರೆ ಭಾರತ ಭಾರದಿಂದ ಕಸಿಯಲಾದೀತೇ ?
ಏಷ್ಯಾದಲ್ಲೆಲ್ಲಾ ಕ್ರೈಸ್ತ ಧರ್ಮ ಹರಡಲೆಂದು ಪೋಪ್ ಆಶಿಸಿದಾಕ್ಷಣ ಅಳುಕೇಕೆ! ಧರ್ಮವಾದರೂ ಅಷ್ಟೆ, ಭಾಷೆಯಾದರೂ ಅಷ್ಟೆ. ಯಾವುದು ಗಟ್ಟಿಯೋ ಅದು ಉಳಿಯುತ್ತದೆ. ಜೊಳ್ಳು ತೂರಿ ಹೋಗಲೇಬೇಕು. ಕ್ರೈಸ್ತರು ಏಸು ಒಬ್ಬನೇ ಮುಕ್ತಿಗೆ ಮಾರ್ಗ ತೋರುವ ದೇವರು ಎಂದಾಕ್ಷಣ ಅಸೂಯೆಯಿಂದ ಪತರಗುಟ್ಟುವುದೆ. ವೀರಶೈವ ಧರ್ಮೀಯರು ಇದನ್ನೇ “ಏಕದೆವೋಪಾಸನೆ’ ಎಂದು ಸಾರುತ್ತಾ ಅದಕ್ಕೆ ಒತ್ತು ಕೊಡುತ್ತಿಲ್ಲವೆ. ಅವರವರ ನಂಬಿಕೆ ಪದ್ಧತಿ ಆಚರಣೆಗಳನ್ನು ಬದಲಿಸುವುದು ಅಷ್ಟೊಂದು ಸುಲಭದ ಕಾಯಕವಲ್ಲವೆಂದಾಗ ಮತಾಂತರ ಗೊಳಿಸುವುದು ಹಗುರವಾದ ಕೆಲಸವಲ್ಲ, ಅಷ್ಟಕ್ಕೂ ಇಚ್ಛೆಯಿಂದ ಮತಾಂತರಗೊಂಡರೆ ಅದೇನು ಗಂಡಾಂತರವಲ್ಲ, ಕ್ರಿಶ್ಚಿಯನ್ ಸಂಸ್ಥೆಗಳಿಗೆ ಮಾತ್ರ ‘ಫಾರಿನ್ ಏಡ್ಸ್’ ಬರುತ್ತದೆ ಎಂದು ಬೊಂಬ್ಡಿ ಹೊಡೆವವರು ಭಾರತದಲ್ಲಿನ ಧರ್ಮಾಂಧರಿಗೂ ಫಾರಿನ್ ಹಣ ದಂಡಿಯಾಗಿ ಬರುತ್ತದೆಂಬುದನ್ನು ಮರೆಮಾಡುತಾರೇಕೋ!
ಧರ್ಮ ಪ್ರಚಾರ ಹಾಗೂ ಮತಾಂತರ ನಿಷಿದ್ಧವಲ್ಲ ಎಂದ ಮೇಲೆ ಆಯ್ಕೆಯನ್ನು ಜನರಿಗೇ ಬಿಡುವುದು ಒಳಿತು. ಹಿಂದೂವಾದಿಗಳು ಜನರ ಪರ ವಕಾಲತ್ತು ವಹಿಸುವ ಅಗತ್ಯವಿಲ್ಲ, ಅರುಣ್ ಶೌರಿಗಳಂತಹ ಮಹತ್ವದ ಪತ್ರಕರ್ತರು ಒಂದು ಪಕ್ಷದ, ಒಂದು ಮತದ ಕರಪತ್ರವಾಗಿ ಕೇವಲ ಸುದ್ದಿಜೀವಿಗಳಾಗುತ್ತಿರೋದು ದೊಡ್ಡ ದುರಂತವೆನ್ನದೆ ವಿಧಿಯಿಲ್ಲ, ಅವರ ದೈವಶಕ್ತಿಗಳೇ ಅವರನ್ನು ಕಾಪಾಡಬೇಕು. ನಮ್ಮವರನ್ನು ನಾವು ಪ್ರೀತಿಸದಿದ್ದರೆ ಕಣ್ಣೋರೆಸದಿದ್ದರೆ ಮತಾಂತರವೇನು ದೇಶಾಂತರವೂ ಆದೀತು.
*****