ಜನನದಿಂದ ಆ ಮರಣದವರೆಗೆ
ಜೀವನದ ಮಧ್ಯ ಮಹಜಾಲದುಡಿಗೆ
ಭೂಮ್ಯೋಮ ಭೂಮ ವಿನ್ಯಾಸವಿಹುದು
ಸಂಸಾರ ಮತ್ತು ಸನ್ಯಾಸವಿಹುದು
ಮನಮೊನೆಯ ಮೇಲೆ ಕುಳಿತಿಹುದು ಹರಣ
ಹಾರುವುದೆ ಅದರ ಅತ್ಯಂತ ಧ್ಯಾನ
ಹನಿಹನಿಯು ಕೂಡಿ ಹಗರಣದ ಹಣವು
ಸೋರುವುದೆ ಅದರ ಚಿರನವ್ಯ ಗುಣವು
ಚಣಚಣವು ಹರಿದು ಬಾಳಾಯ್ತು ನದಿಯು
ಕುಣಿಕುಣಿದ ಸೂತ್ರ ನಿರ್ಣಯದ ವಿಧಿಯು
ಅರಳುವುದು ಸುಮವು ತುಂಬುವುದು ಮನವು
ಹೊರಳುವುದು ನೆಲಕೆ ಅದೊ ನೋಡು ನೆನವು
ತೊಗಲುಡಿಕೆಯದಕೆ ಮಾಂಸಲದ ಜೆಲುವು
ಹಗಲುಡಿಗೆ ಕಳಚಿ ರಾತ್ರಿಯಲಿ ಎಲುವು
ಚಿರ ಯೌವನದಲಿ ಮೆರೆಯುವಳು ಮುದುಕಿ
ನವ ಭಾವದಲ್ಲಿ ಬುದ್ದಿಯನು ಮುಸುಕಿ
ನಗು ಹೂವು ನೋಡ ಅಳುದೇಟಿಗಂಟಿ
ಸುಖ ಚೆಂಗುಲಾಬಿ ನೋವಾಗೆ ಕಂಟಿ
ಬಂದಿಹುದು ಪ್ರಾಣ ಇರಲಿಕೇನಲ್ಲ
ಬಂದಿಹುದು ವಯಸು ಚಿರವಾಗಿಯಲ್ಲ
ಅಹ ಸೃಷ್ಟಿ ಮೂಲ ಬಹು ಚಿತ್ರ ಚಿತ್ರ
ನಗುತಿಹುದು ತತ್ವ ತಿಳಿದಂಥ ನೇತ್ರ
ನೆರೆದಂತೆ ಜಾತ್ರೆ ಮರುದೀನಕೆ ಬಯಲು
ಬಯಲಾಟ ರಾತ್ರಿ ಬೆಳಗಾಗೆ ಬಯಲು
ಬೀಸಿದಳು ಅಕ್ಕ ಬಯಲಿನಲಿ ಬಟ್ಟೆ
ಬಟ್ಟೆಯನು ಹಿಡಿಯೆ ಅದು ಮೂರ ಬಟ್ಟೆ
ಸೆಳೆಹುದು ಜಾಲ ಹಣ ಬೆಡಗಿನಲ್ಲಿ
ನಂದನದಿ ಬಾಲ ಬೆರಗಾಗಲಿಲ್ಲಿ
ನಗುವೇನು ಆಟ ಹರಿದಾಟಗಳಲಿ
ಚಿಗುರುವುದು ಒಗರು ಹಾರಾಟಗಳಲಿ
ಸೂತ್ರಕ್ಕೆ ಕುಣಿದು ಮೈಮೈಯ ಮಣಿದು
ಪಾತ್ರಗಳ ಬಣ್ಣ ಬಣ್ಣದಲಿ ಹೆಣೆದು
ಮಳೆ ಬಂದು ನಿಂತ ಅಡವಿಯಲಿ ಮೌನ
ಇಳೆಗಾಯ್ತು ಧನ್ಯದೋಕುಳಿಯ ಮಾನ
ಬೀಜಕ್ಕೆ ಇಳೆಗೆ ಬರುವಂಥ ತವಕ
ಬೇನೆಯಲಿ ಬಳಲಿ ಜೀವರಸ ಪಾಕ
ಆಕ್ರಂದನಕ್ಕೆ ತೊಟ್ಟಲಿನು ಕಟ್ಟಿ
ಆನಂದವೆನುತ ಹೆಸುರಿಟ್ಟು ತಟ್ಟಿ
ತಾಯ್ತನದ ಸಿರಿಯ ಹೂ ಮಾಲೆ ಮುಡಿದು
ಬೀಗುವುದು ಕಲ್ಲು ಹಿರಿತನವ ಪಡೆದು
ಅತ್ತಿತ್ತ ಕಾಲ ಲಯದಲ್ಲಿ ಹಾಕಿ
ಒಂದೆರಡು ಒಡೆದು ಒಂದಾಗಿ ಸೋಕಿ
ಕೇಂದ್ರವನೆ ಹಿಡಿದು ಸುತ್ತಲೂ ಸುತ್ತಿ
ಜೀವಾಣು ಬಹುದು ಕೇಂದ್ರಕ್ಕೆ ಒತ್ತಿ
*****