ಗದ್ದೆಯಲ್ಲಿರುವ ಒಂದು ಕಪ್ಪೆ ಎಲ್ಲಾ ಕಪ್ಪೆಗಳಂತೆ
ಕುಪ್ಪಳಿಸುವುದು ಧೂಳಿನಲ್ಲಿ ತೆವಳುವುದು
ಮೇಲೆ ಕಾಗೆಗಳಿಂದಲೂ ಕೆಳಗೆ ಹಾವುಗಳಿಂದಲೂ ತಪ್ಪಿಸಲು
ಹುಲ್ಲುಗಿಡಗಳ ಮರೆಗೆ ಅಡಗುವುದು, ಕೆಸರನ್ನು ಹೊಗುವುದು
ಮುಂಗಾರಿಗೆ ಸಂಗಾತಿಯನ್ನು ಹುಡುಕುವುದು
ಮೋಡದ ನೆರಳಲ್ಲಿ ವಟಗುಟ್ಟುವುದು
ಪೇಟೆಯಲ್ಲಿ ಮಂಕಾಗಿ ಉರಿಯುವ ದೀಪಗಳ ಬೆಳಕು
ಇದರ ಕಣ್ಣಿನಲ್ಲೂ ಪ್ರತಿಫಲಿಸುವುದು.
ಒಂದು ಕಪ್ಪೆಯ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ
ಅದು ಎಲ್ಲರನ್ನೂ ಕಡೆಗಣಿಸುವಂತೆ ತೋರುವುದು
ಒದ್ದು ಜಾಡಿಸಿದರೆ ಆಚೆಗೆ ಮುಗ್ಗರಿಸಿ ಬೀಳುವುದು
ಹೋಯಿತು ಪೀಡೆಯೆಂದರೆ ಮತ್ತೆ ಕಾಣಿಸಿಕೊಳ್ಳುವುದು.
(ಗದ್ದೆಯಲ್ಲಿರುವ ಕಪ್ಪೆ ಒಂದು ರೂಪಕವೇನೂ
ಆಗಿರಬೇಕಾಗಿಲ್ಲ) ರಾತ್ರಿ ರೈಲು ಹೋಗುತ್ತಿರುವಾಗ
ಒಂಟಿಯಾಗಿ ಬದುವಿನ ಮೇಲೆ ಕುಳಿತು ಅದು
ಏನನ್ನು ಚಿಂತಿಸುವುದೋ ದೇವರೆ ಬಲ್ಲ!
*****