ನಿನ್ನ ಬರವನೇ ಕಾಯ್ದು ಇರುವೆ ಇರವೆಲ್ಲ ಕಾಯ್ವ ಚಿಂತೆ
ಬರದೆ ನೀನು ಬರಡಾದೆ ನಾನು ಬಾಗಿಲನು ತೆರೆದೆ ನಿಂತೆ
ಬಣ್ಣ ಬಣ್ಣ ವೇಷಗಳ ತೊಟ್ಟು ಬಯಲಾಟ ಬೊಂಬೆಯಂತೆ
ಬಣ್ಣಿಸಿದ್ದೆ ನಾ ಹಿಂದೆ ಅಂತೆಯೇ ಎಲ್ಲ ಅಂತೆ ಕಂತೆ
ಜಟೆಕಿರೀಟದಲಿ ನಾಲ್ಕು ಕೈಗಳಲಿ ವಿವಿಧ ಆಯುಧಗಳ
ರೇಷ್ಠ ಬಟ್ಟೆಗಳ ಚಿನ್ನದೊಡವೆಗಳ ಮುತ್ತು ರತ್ನ ಬಹಳ
ತೊಟ್ಟು ಬರುವಿ ನೀ ಬೆಳಕ ತರುವಿ ಝಗ್ಗೆಂದು ಕಣ್ಣ ಕುಕ್ಕಿ
ಎಂಬ ಭ್ರಮೆಯು ಈಗಿಲ್ಲ ತಂದೆ ತಿಳಿದಿಹುದು ತಿಳಿವು ಸಿಕ್ಕಿ
ಬಾ ಬಾರ ದೇವ ಬಂದೀಯ ನೀನು ಗುರುತಿಸಲು ಬಾರದಂತೆ
ಕಣ್ಣ ಮುಂದೆ ಹಗಲಿರುಳು ತಿರುಗಿದರು ನೋಟವರಿಯದಂತೆ
ಸುಕ್ಕುಗಲ್ಲ ಬರಿ ಎಲುಬು ಮೈಯಿ ಒಳಸೇರಿದಂಥ ದಿಟ್ಟಿ
ಭೂಮಿ ಭಾರ ಹೊತ್ತಂತೆ ಬೆನ್ನು ನಸುಬಾಗಿ ಕೋಲು ಕುಟ್ಟಿ
ಬರಿಮೈಯೊ ಏನೊ ಅರಮೈಯೊ ಏನೊ ಮಾನಕ್ಕೆ ಮರೆಯು ಬಟ್ಟೆ
ಬರಿಹೊಟ್ಟೆ ಏನೊ ಅರೆಹೊಟ್ಟೆ ಏನೊ ಬದುಕಿರಲು ನೆವವು ಹೊಟ್ಟೆ
ಮಾತನಾಡಿದರು ಮೂಕನಂತೆ ಮೌನದಲೆ ಎಲ್ಲ ಭಾಷ್ಯ
ಸುಮ್ಮನಿದ್ದರೂ ಮಗುವಿನಂತೆ ಲೀಲೆಯೊಳು ಕೃತಿಯು ವಶ್ಯ
ನೀನು ಬರಲು ಮೆರವಣಿಗೆಯಿಲ್ಲ ತುತ್ತೂರಿ ಕಹಳೆ ಇಲ್ಲ
ಬಾಲ ಹಿಂಬಾಲ ಬೊಗಳು ಹೊಗಳುಗಳು ಯಾರ ತರಲೆ ಇಲ್ಲ
ಗಾಳಿಯಷ್ಟು ಹಗುರಾಗಿ ಬರುವೆ ರವಿಕಿರಣದಂತೆ ನೇರ
ಬೆಳಕಿನಂತೆ ತಿಳಿಯಾಗಿ ಬರುವೆ ಜಲದಂತೆ ತೊಳೆಯ ಬಾರ
ಹಣ್ಣಿಗಿಂತ ಹಣ್ಣಾಗಿ ಬರುವೆ ಅನುಭಾವ ರಸವ ಹನಿಸಿ
ಹೂವಿನಂತೆ ಎದೆ ಅರಳುವಂತೆ ಪರಿಮಳದ ಪ್ರೇಮವೆನಿಸಿ
ತಿರೆಯ ಭ್ರಮಣ ಪರಿಯಂತೆ ಬಿಡುವಿರದ ಕಾಯಕರ್ಮನಿರತ
ಅಮರ ತತ್ವ ತೋರಿಸುವ ಮರಗಳೊಲು ಪ್ರಕೃತಿ ಧರ್ಮ ರಕ್ತ
ಋತು ಋತುವು ಹೊಸದು ಋತ ಸತ್ಯ ನಿತ್ಯ ನಿತ್ಯಾತ್ಮ ಲೀನ ನೀನು
ಇದ್ಧಿಲ್ಲದಂತೆ ಸದ್ದಿಲ್ಲದಂತೆ ಇರದಿರುವ ಯೋಗ ನೀನು
***