ಶಿವಪುರಾಣದಲ್ಲಿ ಗಜಾನನ ತಲೆಗೆ ಆನೆಯ ಸೊಂಡಿಲಿನ ತಲೆ ಜೋಡಿಸಿದ ಕಥೆ. ಮಹಾಭಾರತದಲ್ಲಿ……………. ದಂತಕಥೆಗಳನ್ನು ಕೇಳಿದ್ದೇವೆ. ಅವು ಎಷ್ಟು ಸತ್ಯವಾದ ಕಥೆಗಳು ಎಂಬುವುದು ವಿಜ್ಞಾನಿಗಳೇ ಹೇಳಬೇಕು. ಮೂಲ ಒಂದಾದರೆ ಬಾಯಿಯಿಂದ ಬಾಯಿಗೆ ಹರಡುತ್ತ ವೈಭವೀಕರಣಗೊಂಡು, ಚಕಿತಗೂಳಿಸುತ್ತವೆ. ಆದಾಗ್ಯೂ ಅಂದಿನ ಕಾಲದಲ್ಲಿಯೇ ತಲೆಗಳ ಕಸಿಗೊಳಿಸುವ ತಂತ್ರವಿತ್ತೆಂದು ಪುರಾಣಗಳು ಹೇಳುತ್ತವೆ. ಆದರೆ ೨೦ನೇ ಶತಮಾನದವರೆಗೆ ಪ್ರಪಂಚದಲ್ಲಿ ತಲೆಯ ಕಸಿಗೊಳಿಸುವ ನಿಜವಾದ ಘಟನೆ ಕಂಡುಬಂದಿದ್ದಿಲ್ಲ. ಆದರೆ ಇಂದು ವಿಜ್ಞಾನಯುಗ ತಾಂತ್ರಿಕ ಆವಿಷ್ಕಾರಗಳೊಂದಿಗೆ ಏನೆಲ್ಲ ಸಾಧನೆಗಳನ್ನು ಮಾಡುತ್ತಿರುವ ಸಂದರ್ಭ ಇಂದು ತಲೆಕಸಿಗೊಳಿಸುವ ವಿಜ್ಞಾನ ಈದೀಗ ಬಂದಿದೆ. ಆಮೇರಿಕಾದ
ಶಸ್ತ್ರಚಿಕಿತ್ಸಕ ಡಾ|| ರಾಬರ್ಟ್ ಜೆ. ವೈಟ್ ಇವರು ಅನೇಕ ಸಣ್ಣಜೀವಿಗಳ ಮೇಲೆ ಪ್ರಯೋಗ ಮಾಡಿ ಈ ಸತ್ಯವನ್ನು ಬಹಿರಂಗಗೊಳಿಸಿದ್ದಾರೆ. ತಲೆಯನ್ನು ಕಡಿದಾಗ ಕೆಳಗಿನ ಮುಂಡದ ಭಾಗದ ಅಂಗಾಗಗಳು ತಮ ಕಾರ್ಯವನು ಸ್ಥಗಿತಗೊಳಿಸುತ್ತವೆ. ಆದರೆ ತಲೆಬಾಗ ಮಾತ್ರ ಇನ್ನೂ ಜೀವಂತವಾಗಿರುತ್ತದೆ. ಇನ್ನೊಂದೆಡೆ ಓರ್ವವ್ಯಕ್ತಿಯ ಮಿದುಳು ಮೃತಗೊಂಡು ಇತರ ಆಂಗಗಳು ಕಾರ್ಯಶೀಲವಾಗಿದ್ದರೆ, ಅಂತಹ ರೋಗಿಗೆ ಇನ್ನೊಬ್ಬ ವ್ಯಕ್ತಿಯ ಶಿರಸ್ಸನ್ನು ಯಶಸ್ವಿಯಾಗಿ ಕಸಿ ಮಾಡಬಹುದೆನ್ನುವುದು ಅವರ ಹೇಳಿಕೆಯಾಗಿದೆ.
ಈ ಮೊದಲು ಈ ಪ್ರಯೋಗಗಳನ್ನು ಮಂಗಗಳ ಮೇಲೆ ನಡೆಯಿಸಿ ಯಶಸ್ವಿಯಾಗಿದ್ದಾರೆ. ಇದರಂತೆ ಮನುಷ್ಯರ ಮೇಲೂ ಸಹ ಯಶಸ್ವಿಯಾಗಿ ಚಿಕಿತ್ಸೆ
ಮಾಡಬಹುದು ಎಂಬ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. ಇದು ಪರಿಶೀಲನಾ ಹಂತದಲ್ಲಿದೆ.
ಅಮೇರಿದ ‘ಕ್ಲಿವ್ ಲ್ಯಾಂಡ್’ ವಿಶ್ವವಿದ್ಯಾನಿಲಯದ ಡಾ|| ವೈಟ್ ಅವರು ಮಸ್ತಿಷ್ಕದ ಜೈವ ರಾಸಾಯನಿಕ ಸಂರಚನೆಯ ಬಗೆಗೆ ಅತ್ಯಂತ ಸೂಕ್ಷ್ಮ ಅಧ್ಯಯನ ಕೈಗೊಂಡಿದ್ದಾರೆ. ಮಸ್ತಿಷ್ಕದಲ್ಲಿ ರೋಗ ನಿರೋಧಕ ಶಕ್ತಿ ಇತರ ಅಂಗಗಳಿಗಿಂತಲೂ ಹೆಚ್ಚಾಗಿರುತ್ತದೆ. ಮೆದುಳಿನ ಪ್ರತ್ಯಾರೋಹಣದ ನಂತರ ಶರೀರದಿಂದ ಅಸ್ವೀಕಾರ ಮಾಡುವ ಸಾಧ್ಯತೆ ಇತರ ಅಂಗಗಳಿಗಿಂತಲೂ ಕಡಿಮೆ. ರೋಗಗ್ರಸ್ತ ಶರೀರದಿಂದ ತಲೆಯನ್ನು ಬೇರ್ಪಡಿಸಿ ಒಂದು ಯಂತ್ರಕ್ಕೆ ಅಳವಡಿಸಲಾಗುತ್ತದೆ. ನಂತರ ಆದನ್ನು ಹೊಸ ದೇಹದ ಭಾಗಕ್ಕೆ ಅಳವಡಿಸುವವರೆಗೆ ಅದಕ್ಕೆ ಕೃತಕ ಶ್ವಾಸಕೋಶ, ಹೃದಯ, ಮೂತ್ರಕೋಶ, ಯಕೃತ್ತುಗಳ ಕಾರ್ಯದ ಸಂಪರ್ಕವನ್ನು ಮುಂದುವರಿಸಲಾಗುತ್ತದೆ. ನಂತರವೇ ಅದನ್ನು ಮುಂಡಕ್ಕೆ ಸೇರ್ಪಡೆ ಮಾಡಲಾಗುತ್ತದೆ. ಅನಾರೋಗ್ಯದ ಶರೀರವನ್ನು ಬೇರ್ಪಡಿಸಿ ಹೊಸ ಶರೀರವನ್ನು ಅಳವಡಿಸಿದಲ್ಲಿ ಮಿದುಳಿನ ಶಕ್ತಿ ಇನ್ನಷ್ಟು ಪ್ರಖರಗೊಳ್ಳುತ್ತದೆಂದು ಡಾ|| ವೈಟ್ ತಿಳಿಸುತ್ತಾರೆ. ಆದರೆ ಅದರ ಮೂಲಸ್ಥಿತಿ ಮಾತ್ರ ಹಾಗೆಯೇ ಇರುತ್ತದೆ. ವ್ಯಕ್ತಿಯು ಮಾತನಾಡುವ ಕೇಳುವ, ನೋಡುವ, ಅನುಭವಿಸುವ ಕಾರ್ಯವು ಮಸ್ತಿಷ್ಕದಿಂದಲೆ ಸಂಚಲಿತಗೊಳ್ಳುತ್ತದೆ. ಹೀಗೆ ಅಳವಡಿಸಿದಾಗ ಅವರವರ ಸ್ಮೃತಿಗಳು ಮಿದುಳಿನಲ್ಲಿಯೇ ಸುರಕ್ಷಿತವಾಗಿರುತ್ತವೆ. ಹೀಗೆ ಕಸಿಮಾಡಿದ ನಂತರವೂ ಏನೂ ವ್ಯತ್ಯಾಸವಾಗಲಾರವು. ಶರೀರದ ಇತರೆ ಯಾವುದೇ ಅಂಗಗಳಿಗೆ ತಮ್ಮದೇ ಆದ ಸ್ಮೃತಿ ಆಥವಾ ಭಾವನೆಗಳಿರುವುದಿಲ್ಲ. ಈ ಪ್ರಯೋಗ ಮನುಷ್ಯರ ಮೇಲೆ ಯಶಸ್ವಿಯಾಗಿ ನಡೆದು ಬಂದರೆ ವೈದ್ಯಕೀಯ ರಂಗದಲ್ಲಿ ಹೊಸಗಾಳಿ ಬೀಸಿದಂತಾಗುತ್ತದೆ.
*****
ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು