ಬೀದಿಗಿಳಿದ ಕವಿತೆ
ಮತ್ತೆ ಬಾಗಿಲಿಗೆ
ಬಚ್ಚಿಟ್ಟ ಬೆಳಕು ಒಳಗೆ
ಕಣ್ ಕೋರೈಸುವ ಥಳುಕು ಹೊರಗೆ
ಹೊರಗೋ? ಒಳಗೋ?
ತರ್ಕದಲ್ಲಿ ಕವಿತೆ.
ಬೀದಿಯರಿಯದ ಕವಿತೆ
ಬಾಗಿಲಿಗೆ ಮೈಚೆಲ್ಲಿದೆಯಂತೆ
ಒಳಗಿನ ಬಗೆಗೆ ನಂಬಿಕೆಯಿಲ್ಲ
ಹೊರಗಿನ ಸೆಳೆತ ತಪ್ಪಿಲ್ಲ
ಹೊರಗೋ? ಒಳಗೋ?
ದ್ವಂದ್ವದಲ್ಲಿ ಕವಿತೆ.
ಹಾದಿ ತಪ್ಪಿದ ಕವಿತೆ
ಹೊರಳು ಹಾದಿಯಲ್ಲಿ
ಒಳಗುಳಿದು ಉಸಿರುಕಟ್ಟಲೋ
ಹೊರಗೋಡಿ ವಿಧಿಯ ಬೆನ್ನಟ್ಟಲೋ
ಒಳಗೋ? ಹೊರಗೋ?
ದುಗುಡದಲ್ಲಿ ಕವಿತೆ.
ಚೌಕಟ್ಟು ಮೀರಿದರೆ ಕವಿತೆ
ಮಿತಿ ಮೀರಿದ್ದೆಲ್ಲಾ ಕಥೆ
ಪ್ರಶ್ನೆ ದಾಳಿ ಮುಗಿದ ಮೇಲೆ
ಬಸವಳಿದು ಹೊಸ್ತಿಲಿಗಂಟಿ
ಒಳಗೋ? ಹೊರಗೋ?
ಸುಮ್ಮನೆ ಪ್ರಶ್ನಿಸಿಕೊಳ್ಳುತ್ತದೆ ಕವಿತೆ!
*****