Home / ಕವನ / ಕವಿತೆ / ಬೆಳಗಿನ ವಾಯುವಿಹಾರ

ಬೆಳಗಿನ ವಾಯುವಿಹಾರ

ಇನ್ನೊಂದಿಷ್ಟು ದೂರದೂರ ಅಡ್ಡಾಡಿದರಾಯಿತೆಂದು
ನಸುಕಿನಲ್ಲಿಯೇ ವಾಕಿಂಗಿಗೆ ಹೊರಡುತ್ತೇನೆ
ಪುಕ್ಕಟೆಯಾಗಿ ನಾಯಿಮರಿಕೊಟ್ಟ
ಆಚೆ ಮನೆಯ ~ಆಂಥೋನಿ ಅವನ ಹೆಂಡತಿ ಮಕ್ಕಳು
ಗೇಟಿನ ಹತ್ತಿರ ನಿಂತು ನಯವಾಗಿ ಮಾತಿಗೆಳೆಯುತ್ತಾರೆ
ನಾಯಿಮರಿ ಊಟ ತಿಂಡಿಗೆ ಹೊಂದಿಕೊಂಡಿದೆಯೇ?
ಟಿನ್‌ಫುಡ್ ಮಾತ್ರಕೊಡಿ ಪ್ರೀತಿ ಹೆಚ್ಚು ಕೊಡಿ
ಇಂಜೆಕ್ಶನ್ ಹಾಕಿಸಿದ್ರಾ, ಈಗ ಸ್ವಲ್ಪ ದೊಡ್ಡದಾಗಿರಬೇಕಲ್ಲ !

ಹೀಗೆ ಇನ್ನೂ ಇನ್ನೂ
ನಾಯಿಮರಿ ಬೆಳೆಸುವ ಪಾಠಗಳು ಪ್ರಶ್ನೆಗಳು
ಪುಕ್ಕಟೆಯಾಗಿಯೇ ನಾಯಿಮರಿ ತೆಗೆದುಕೊಂಡಿದ್ದಕ್ಕೆ
ಅವರೊಂದಿಗೆ ಮಾತನಾಡುತ್ತಿದ್ದಂತೆಯೇ
ಬಿಸಿಲೇರುತ್ತದೆ ಮನೆಗೆ ಮರಳುತ್ತೇನೆ.

ಅಪರೂಪಕ್ಕೆ ಆಗಾಗ ನಮ್ಮ ಬಡಾವಣೆಯಲ್ಲಿಯೇ
ವಾಕಿಂಗಿಗೆ ಹೊರಡುತ್ತೇನೆ
ಎದುರಾಗುತ್ತಾರೆ ಸಾಕಿದ ತಮ್ಮ ನಾಯಿಗಳನು
ಬೆರೆಯವರ ಮನೆಗಳ ಮುಂದೆ ಏನೆಲ್ಲ ಮಾಡಲು ಬಿಟ್ಟು
ಮಾತು ಹರಟೆ ಹೊಡೆಯುವ ಪರಿಚಿತರು
ಸಾಹಿತ್ಯಾಸಕ್ತರೋ ಎನ್ನುವಂತೆ
ಹೇಗೆ ನಡೆದಿದೆ ನಿಮ್ಮ ಬರವಣಿಗೆ?
ನಡೆಸಬೇಡಿ ಓಡಿಸಿ ಓಡಿಸಿ
ಭಾಷಣ ಕೊರೆಯುತ್ತಲೇ ಇರುತ್ತಾರೆ
ಬಿಸಿಲೇರುತ್ತದೆ ಮನೆಗೆ ಮರಳುತ್ತೇನೆ.

ಪಶ್ಚಿಮದ ಕಡೆಗೆ ತುಂಬಿದ ಕೆರೆ
ಕೆಂಪು ಬಿಳಿ ನೈದಿಲೆಗಳ ಸಂಭ್ರಮ ತಂಗಾಳಿ
ಆರೋಗ್ಯಕ್ಕೆ ಇನ್ನೂ ಒಳ್ಳೆಯದೆಂದು
ಚುಮುಚುಮು ನಸುಕಿನಲ್ಲಿಯೇ ಹೊರಡುತ್ತೇನೆ
ನೈದಿಲೆಗಳ ಕದ್ದ ಕಳ್ಳರು ಪೇಟೆಗೆ ಓಡುವ ಭರಾಟೆ
ಸೆರೆಮನೆ ದಿನಗಳು ಕಳೆದು ಬಂದವರ
ಕತ್ತೆ ಮಸೆಯುವ ಮಾತುಕತೆಗಳು
ಕೂಲಿಕಾರರು ಚೊಂಬು ಖಾಲಿಮಾಡಿ ಎದುರಾಗುವ ದೃಶ್ಯ
ನೆಮ್ಮದಿಯೆನಿಸುವುದಿಲ್ಲ; ಮನೆಗೆ ಮರಳುತ್ತೇನೆ.

ಪೂರ್ವದ ಬೆಟ್ಟದ ಬದಿಯಲೊಂದು ದೇವಾಲಯ
ಮನಸ್ಸಿಗೆ ಪ್ರಶಾಂತವೆಂದು ಹೊರಡುತ್ತೇನೆ
ಆಗಲೇ ದೇವರನ್ನೆಬ್ಬಿಸುವ ಕ್ಯಾಸೆಟ್ಟುಗಳ ಕಿರುಚಾಟ
ಇರಲಿ ಹೇಗೋ ಬಂದಿದ್ದೆನಲ್ಲಾ
ದೇವರಿಗೊಂದು ಸೆಲ್ಯೂಟ್ ಹೊಡೆದರಾಯಿತೆಂದು
ಮೆಟ್ಟಲೇರುತ್ತಿದ್ದಂತೆಯೇ ಪೂಜಾರಿ
ಕರ್ಪೂರ ಹಾಕಿ ತಟ್ಟೆ ಹಿಡಿದೇ ಬಿಡುತ್ತಾನೆ
ಬರಿಗೈಯಲ್ಲಿ ಹೋದ ನಾನು ಒಳಗೆ ಹೋಗದೆ
ಇನ್ನೊಂದೆರಡು ಸುತ್ತೂ ಹೊಡೆಯದೆ ಮನೆಗೆ ಮರಳುತ್ತೇನೆ.

ಬೆಳಗಿನ ವಾಯುವಿಹಾರ ಯಾಕೋ ಒಮ್ಮೊಮ್ಮೆ
ಹೀಗೆ ಕಿರಿ ಕಿರಿ ಅದಕ್ಕೆಂದೇ ಈಗ-
ರೂಮಿನಲ್ಲಿ ಹುಲ್ಲಿನಂತೆ ಕಾಣುವ ಹಸಿರು ಕಾರ್ಪೆಟ್ ಹಾಸಿ
ಮೇಲೆ ಟ್ರೆಡ್‌ಮಿಲ್ (ವಾಕಿಂಗ್ ಬೆಲ್ಟ್) ಇಟ್ಟು
ಗೋಡೆಗಳಿಗೆಲ್ಲ ಸುರ್ಯೋದಯ, ಕೆರೆ, ನದಿ ಗಾರ್ಡನ್
ಗಿಡಗಂಟೆಗಳ ಪೋಸ್ಟರ್ ಹಚ್ಚಿ ಇದೇ ಸೂಕ್ತ ಜಾಗವೆಂದು
ಟ್ರೆಡ್ಮಿಲ್‌ನಲ್ಲಿಯೇ ಬೆಳಗಿನ ವಾಕಿಂಗಿಗೆ ಹೊರಡುತ್ತೇನೆ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...