Home / ಬಾಲ ಚಿಲುಮೆ / ಕಥೆ / ಅತಿದರ್ಪನ ಕಥೆ

ಅತಿದರ್ಪನ ಕಥೆ

ಒಂದಾನೊಂದು ಹುತ್ತದಲ್ಲಿ ಅತಿದರ್ಪನೆಂಬ ಒ೦ದು ಕರಿಯ ನಾಗರ ಹಾವು ಇತ್ತು. ಅದು ಬಲು ದೊಡ್ಡದು, ತೊಲೆಯತುಂಡೋ ಎನ್ನುವಷ್ಟು ದೊಡ್ಡದು. ಒ೦ದು ದಿನ ಅದು ತಾನು ಎಂದೂ ಬಂದು ಹೋಗುತ್ತಿದ್ದ ಮಾರ್ಗವನ್ನು ಬಿಟ್ಟು ಇನ್ನೊಂದು ಮಾರ್ಗದಿಂದ ಈಚೆ ಬಂತು. ಹಾಗೆ ಬಂದಾಗ, ದೈವವಶವಾಗಿ, ಆ ತೂತು ಸಣಾಗಿದ್ದುದರಿಂದ, ಅದಕ್ಕೆ ಏನೋ ತಗುಲಿ ಒಂದು ಗಾಯವಾಯಿತು. ಗಾಯದಿಂದ ರಕ್ತವು ಸೋರಿತು. ಪದೇ ಪದೇ ತಗುಲಿ ತಗುಲಿ, ಅಲ್ಲಿ ಕೀವು ಕಟ್ಟಿ ಕೊಂಡಿತು. ಕೀವಿನ ವಾಸನೆಗೆ ಇರುವೆಗಳು ಬಂದು ಮುತ್ತಿಕೊಂಡುವು. ಹಾವೂ ಎಷ್ಟನ್ನೋ ಕೊಂದಿತು. ಎಷ್ಟನ್ನೋ ಹೊಡೆಯಿತು. ಅವು ಕಚ್ಚುತ್ತ ಕಚ್ಚುತ್ತ ಹುಣ್ಣು ದೊಡ್ಡದಾಗುತ್ತ ಬಂತು. ಕೊನೆಗೆ ಇರುವೆಗಳು ಕಚ್ಚಿ ಕಚ್ಚಿ ಅದನ್ನು ಕೊಂದೂ ಬಿಟ್ಟವು. ಅದರಿಂದ “ಹಾವು ಹಿರಿದಾದರೂ, ಇರುವೆ ತಿಂದು ಹಾಕುವುದು” ಎಂದು ಹೇಳಿದೆನು.
ಈ ಸಂದರ್ಭದಲ್ಲಿ ನಾನು ಹೇಳಬೇಕಾದುದು ಅಷ್ಟು ಇದೆ, ಕೇಳು. ನಾನು ಸಾಮ ದಾನ ಭೇದ ದಂಡಗಳೆಂಬ ನಾಲ್ಕು ಉಪಾಯಗಳನ್ನೂ ಬಿಟ್ಟು, ಐದನೆಯದೊಂದನ್ನು ಅವಲಂಬಿಸುವೆನು. ನೀವು ನನ್ನನ್ನು ಶತ್ರುವೆಂದು ಅಪಮಾನಗೊಳಿಸಿ, ನಿಷ್ಟುರ ವಾಕ್ಕುಗಳಿಂದ ಚೆನ್ನಾಗಿ ತಿರಸ್ಕಾರಮಾಡಿ, ಶತ್ರುಗಳಿಗೆ ನಂಬಿಕೆಯಾಗುವಂತೆ ನನ್ನನ್ನು ರಕ್ತಮಯ ಶರೀರನನ್ನಾಗಿ ಮಾಡಿ, ಇಲ್ಲಿಯೇ, ಈ ಆಲದ ಮರದ ಕೆಳಗೆಯೇ ಹಾಕಿ, ನೀವೆಲ್ಲರೂ ಋಷ್ಯಮೂಕ ಪರ್ವತಕ್ಕೆ ಹೋಗಿ ಅಲ್ಲಿರಿ. ನಾನು ಶತ್ರುಗಳಿಗೆ ನಂಬಿಕೆ ಹುಟ್ಟುವಂತೆ ಮಾಡಿ ಅವರ ದುರ್ಗವೆಲ್ಲಿರುವುದು ಎಂಬುದನ್ನು ತಿಳಿದುಕೊಂಡು, ಹಗಲು ಕುರುಡರಾದ ಅವರನ್ನು ನಿರ್ಮೂಲ ಮಾಡುವೆನು. ಇನ್ನು ಯಾವ ತೆರದಲ್ಲೂ ನಾವು ಗೆಲ್ಲುವುದಿಲ್ಲ. ನಾನು ಅಲ್ಲಿಗೆ ಹೋದರೆ, ಅವರ ದುರ್ಗದ ಬಾಗಿಲುಗಳನ್ನೆಲ್ಲಾ ಮುಚ್ಚಿ ಹೊರಕ್ಕೆ ಹೋಗುವುದಕ್ಕೆ  ಅವಕಾಶವಿಲ್ಲದಂತೆ ಮಾಡಿ, ಅವರ ವಧವನ್ನು ಸಾಧಿಸುವೆನು. ನನ್ನ ವಿಚಾರದಲ್ಲಿ ಅಭಿಮಾನವಿಟ್ಬು ಕೊಂಡು, ನನ್ನನ್ನು ಇಲ್ಲಿ ಬಿಟ್ಟು ಹೋಗುವುದು ಹೇಗೆ ಎಂದು ಯೋಚಿಸಬೇಡಿ. ಪ್ರಾಣಸಮರೆಂದು ವಿಶ್ವಾಸದಿ೦ದ ಕಾಣುತ್ತ ಕಾಪಾಡುತ್ತಿರುವ ಲಾಲಿಸುತ್ತಿರುವ ಭೃತ್ಯರನ್ನೂ ಅರಸುಗಳು ಯುದ್ಧದಲ್ಲಿ ಒಣಗಿದ ಕಡ್ಡಿಗಳಂತೆ ಕಾಣಬೇಕು. ಭೃತ್ಯರನ್ನು ಪ್ರಾಣಗಳಂತೆ ನೋಡಿಕೊಳ್ಳಬೇಕು: ತನ್ನ ದೇಹದಂತೆ ಪೋಷಿಸಬೇಕು: ಇಷ್ಟೂ ಏಕೆ ಎಂದರೆ ಶತ್ರುವಿನೊಡನೆ ಯುದ್ಧ ಬಂದಾಗ ತನ್ನನ್ನು ಕಾಪಾಡಲೆಂದು ಅದರಿಂದ‌ ನಾನು ಮಾಡಬೇಕೆಂದಿರುವ ಕೆಲಸಕೆ ಅಡ್ಡಿ ಬರಬೇಡ” ಎಂದು ಹೇಳಿ ಮೇಘವರ್ಣನನ್ನು ಒಪ್ಪಿಸಿ, ತಾನೇ ಒಣ ಜಗಳವನ್ನು ಆರಂಭಿಸಿತು.
ಅಡ್ಡಿಯಿಲ್ಲದೆ, ಮಿತಿಮೀರಿ, ಮಾತನಾಡುತ್ತಿರುವ ಸ್ಥಿರಜೀವಿಯನ್ನು ಕಂಡು ಅರಸನ ಆಳುಗಳು ಅದನ್ನು ಕೊಂದು ಹಾಕಿಬಿಡುವುದಕ್ಕೆ ಹೊರಟವು. ಆಗ ಮೇಘವರ್ಣನು ಅಡ್ಡಿ ಬಂದು, “ನಿಲ್ಲಿ, ನಿಲ್ಲಿ. ನಾನೇ ಈ ದುಷ್ಟನನ್ನು ನಿಗ್ರಹಿಸುವೆನು. ಇವನು ಶತ್ರುಗಳಲ್ಲಿ ಪಕ್ಷಪಾತಿಯಾಗಿರುವನು” ಎಂದು ಹೇಳಿ, ಅದರ ಮೇಲೆ ಬಿದ್ದು, ಮೆತ್ತ ಮೆತ್ತಗೆ ಕೊಕ್ಕುಗಳಿಂದ ಚುಚ್ಚಿ, ಮೈಯೆಲ್ಲ ರಕ್ತವಾಗುವಂತೆ ಮಾಡಿ, ಅದನ್ನು ಅಲ್ಲಿಯೇ ನೂಕಿ, ತನ್ನ ಪರಿವಾರವನ್ನೆಲ್ಲ ಕರೆದುಕೊಂಡು ಋಷ್ಯಮೂಕ ಪರ್ವತಕ್ಕೆ ಹೊರಟು ಹೋಯಿತು.
ಅಲ್ಲಿದ್ದ ಅರಿಮರ್ದನನ ಗೂಢಚಾರರು ಸ್ಥಿರಜೀವಿಯ ಕಥೆಯನ್ನು ಅದಕ್ಕೆ ತಿಳಿಸಿ, “ನಿನ್ನ ಶತ್ರುವು ನಿನಗೆ ಹೆದರಿ ಸಪರಿವಾರನಾಗಿ ಎಲ್ಲಿಗೋ ಹೊರಟು ಹೋದನು” ಎಂದು ವರದಿ ಮಾಡಿದರು. ಗೂಗೆಗಳ ಅರಸನು. ಸೂರ್ಯನು ಮುಳುಗುತ್ತಲೂ ವೈರವಧಕ್ಕೆಂದು ಸಪರಿವಾರನಾಗಿ ಹೊರಟಿತು: “ಬೇಗ, ಬೇಗ, ಭೀತನಾಗಿ ಓಡಿಹೋಗುತ್ತಿರುವ ಶತ್ರುವು ಕೈಗೆ ಸಿಕ್ಕಿದರೆ ಅದು ನಮ ಪುಣ್ಯ,” ಎಂದು ಅತಿವೇಗದಿಂದ ವಾಯಸ ದುರ್ಗಕ್ಕೆ ಬಂತು. ಆದರೆ ಅಲ್ಲಿ ಕಾಗೆಗಳು ಇಲ್ಲದಿರುವುದನ್ನು ಕಂಡು, ಬಹು ಸಂತೋಷಪಟ್ಟು ಆಲದ ಮರದ ಮೇಲೆ ಭದ್ರವಾಗಿ ಕುಳಿತಿತು. ಅರಸನನ್ನು ಹೊಗಳು ಭಟರು “ಜಯ ವಿಜಯ, ಅರಿಮರ್ದನ ಮಹಾರಾಜ, ನಿನ್ನ ಪ್ರತಾಪಕ್ಕೆ ಹೆದರಿ ಈ ಕಾಗಗಳು ನೆಲೆಬಟ್ಟು ಓಡಿ ಹೋದುವು. ಉಫೇ” ಎಂದು ಹೊಗಳಿದುವು. ಆಗ ಅರಿಮರ್ದನನು “ಎಲೈ, ಈ ಶತ್ರುಗಳು ಎಲ್ಲಿ ಹೋದರು, ಯಾವ ಮಾರ್ಗವಾಗಿ ಹೋದರು, ಎಂಬುದನ್ನು ಮೊದಲು ಗೊತ್ತುಮಾಡಿ, ಅವು ಹೋಗಿ ಬಂದು ದುರ್ಗವನ್ನು ಹಿಡಿದುಕೊಳ್ಳುವುದಕ್ಕೆ ಮೊದಲು ನಾವು ಅದನ್ನು ಹೊಡೆದು ಹಾಕಬೇಕು. ದುರ್ಗವನ್ನು ಹಿಡಿದುಕೊಂಡು, ಯುದ್ಧ ಸಾಮಗ್ರಿಗಳನ್ನೆಲ್ಲಾ ಸಿದ್ದ ಮಾಡಿಕೊಂಡಮೇಲೆ ಅವನ್ನು ಗೆಲ್ಲುವುದು ಕಷ್ಟವಾಗುವುದು” ಎಂದು ಅಪ್ಪಣೆ ಮಾಡಿತು.
ಅದನ್ನು ಕೇಳಿ ಸ್ಥಿರ ಜೀವಿಯು ಯೋಚಿಸಿತು:- “ಈ ನಮ್ಮ ಶತ್ರುಗಳು ನಮ್ಮ ವೃತ್ತಾಂತವೇನು ಎಂಬುದನ್ನು ಅರಿಯದೆ ಬಂದಂತೆ ಹೊರಟು ಹೋಗುವರು. ಈಗ ನಾನು ಮಾಡಬೇಕಾದುದು ಒ೦ದಷ್ಟು ಇದೆ. ಕೇಳಿಲ್ಲವೆ?
ಕಾರ್ಯವನಾರಂಭಿಸದಿಹುದು | ಮೊದಲನೆ ಲಕ್ಷಣ ಬುದ್ಧಿಯದು ॥ 
ಆರಂಭಿಸೆ ಅದು ಮುಗಿಸುವುದು ॥ ಎರಡನೆ ಲಕ್ಷಣ ಬುದ್ಧಿಯದು ॥೨೩॥ 
ಅದರಿಂದ ಆರಂಭಿಸಿ, ಅದನ್ನು ಬಿಟ್ಟು ಬಿಡುವುದಕ್ಕಿ೦ತ ಆರಂಭಿಸದಿರುವುದು ಒಳ್ಳೆಯದು. ಅದರಿಂದ ಈಗ ಸದ್ದು ಕೊಟ್ಟು ನಾನು ಇಲ್ಲಿರುವೆನೆಂದು ತೋರಿಸಿಕೊಳ್ಳುವೆನು” ಎಂದು ಗೊತ್ತು ಮಾಡಿಕೊಂಡು ಮೆತ್ತಗೆ ಕೊರಗಿದ ದನಿಯಲ್ಲಿ ಕೂಗಿತು. ಅದನ್ನು ಕೇಳಿ ಗೂಗೆಗಳು ಅದನ್ನು ಸಂಹರಿಸಲು ಎಲ್ಲವೂ ಅಲ್ಲಿಗೆ ಬಂದುವು. ಆಗ ಕಾಗೆಯು ಅವನ್ನು ಕಂಡು “ಅಯ್ಯಾ, ನಾನು ಸ್ಥಿರಜೀವಿಯೆಂಬುವನು ಮೇಘವರ್ಣನ ಮಂತ್ರಿಯಾಗಿದ್ದವನು. ಮೇಘವರ್ಣನೇ ನನ್ನನ್ನು ಈ ಸಾಯುವ ಸ್ಥಿತಿಗೆ ತಂದನು. ಇದನ್ನು ನಿಮ್ಮ ಅರಸನಿಗೆ ತಿಳಿಸಿ. ನಾನು ಆತನಿಗೆ ಹೇಳಬೇಕಾದುದು ಬಹಳ ಇದೆ.” ಎಂದಿತು.
ಅವು ಉಲೂಕ (ಗೂಗೆ) ರಾಜನಿಗೆ ಆ ಸುದ್ದಿಯನ್ನು ತಿಳಿಸಿದವು. ಆ ಅರಸು ಅದನ್ನು ಕೇಳಿ ಆಶ್ಚರ್ಯಪಟ್ಟು ತಾನೇ ಅದರ ಬಳಿಗೆ ಹೋಗಿ “ಇದೇನು? ನಿನಗೆ ಇಂತಹ ಅವಸ್ಥೆಯು ಹೇಗೆ ಬಂತು?” ಎಂದು ಕೇಳಿದನು. ಸ್ಥಿರಜೀವಿಯು ಹೇಳಿದನು:- ದೇವ, ಕೇಳಬೇಕು. ನಿನ್ನೆಯ ದಿನ ದುರಾತ್ಮನಾದ ಮೇಘವರ್ಣನು ತಾವು ಕಾಗೆಗಳ ಗುಂಪು ಗುಂಪುಗಳನ್ನೇ ಕೊಂದಿರೆಂದು ಕೋಪದಿಂದಲೂ ಶೋಕದಿಂದಲೂ ಕೂಡಿ ತಮ್ಮ ಮೇಲೆ ಯುದ್ಧಕ್ಕೆ ಹೊರಟನು. ಆಗ ನಾನು, ಸ್ವಾಮಿ, ಉಲೂಕರಾಜನ ಮೇಲೆ ಯುದ್ಧವು ನ್ಯಾಯವಲ್ಲ. ಅವರು ಬಲವಂತರು, ನಾವು ಬಲಹೀನರು, ಕೇಳಿಲ್ಲವೆ?
ಬಾರದೈ ವಿರೋಧಂ ಬಲಿಯೊಡನೆ ॥ 
ಬಾಳಬೇಕೆಂದಿರಲು ದುರ್ಬಲಿಗೆ ॥ 
ಅತಿಬಲನ ಕೊಲ್ಲುವುದಿರಲಿ ತಾನೆ | 
ಬೆಂಕಿಗೆರಗಿದ ಚಿಟ್ಟೆಯಂತಹನು ॥೨೪॥ 
ಅದರಿಂದ ಬಲಿಷ್ಟನಾದ ಶತ್ರುವು ಬಂದಾಗ ಸರ್ವವನ್ನೂ ಕೊಟ್ಟಾದರೂ ಪ್ರಾಣವನ್ನು ಕಾಪಾಡಿಕೊಳ್ಳಬೇಕು. ಪ್ರಾಣವಿದ್ದರೆ ಮಿಕ್ಕೆಲ್ಲವನ್ನೂ ಸಂಪಾದಿಸಬಹುದು. ಅದರಿಂದ ಕಾಣಿಕೆ ಕೊಟ್ಟು ಸಂಧಿ ಮಾಡಿಕೊಳ್ಳುವುದು ಉತ್ತಮ” ಎಂದೆನು. ಅದನ್ನು ಕೇಳಿ ಆತನೂ ಇತರ ಮಂತ್ರಿಗಳೂ ರೇಗಿದರು. ಹೀಗೆ ರೇಗಿದ ಆತನು ನನ್ನನ್ನು ತಮ್ಮಲ್ಲಿ ಅಭಿಮಾನವುಳ್ಳವನೆಂದುಕೊಂಡು ನನ್ನನ್ನು ಈ ಗತಿಗೆ ಈಡು ಮಾಡಿದನು. ಈಗ ನನಗೆ ತಮ್ಮ ಪಾದಗಳೇ ಗತಿ. ಬಹುವಾಗಿ ಏನು ಹೇಳಲಿ? ನನಗೆ ಕೊಂಚ ಬಲ ಬಂದು ಓಡಾಡುವುದಕ್ಕೆ ಬಂದರೆ, ದೇವರ ಪಾದದಾಣೆ! ತಮ್ಮನ್ನು ಕರೆದುಕೊಂಡು ಹೋಗಿ ವಾಯಸ ಕುಲವನ್ನೇ ನಾಶ  ಮಾಡುವೆನು” ಎಂದನು.
ಅರಿಮರ್ದನನು ಅದನ್ನು ಕೇಳಿ, ತನ್ನ ತಂದೆ ತಾತ ಮುತ್ತಾತರ ಕಾಲದಿಂದಲೂ ಕುಲ ಕ್ರಮವಾಗಿ ಮಂತ್ರಿಗಳಾಗಿರುವವರನ್ನು ಕರೆದು ಅವರೊಡನೆ ಆಲೋಚನೆ ಮಾಡಿದನು. ಆತನ ಮಂತ್ರಿಗಳು, ರಕ್ತಾಕ್ಷ, ಕ್ರೂರಾಕ್ಷ, ದೀಪ್ತಾಕ್ಷ, ವಕ್ರನಾಸ, ಪ್ರಾಕಾರಕರ್ಣ, ಎ೦ದು ಐವರು. ಅವರಲ್ಲಿ ಮೊದಲನೆಯವನಾದ ರಕ್ತಾಕ್ಷನು ಹೇಳಿದನು:- “ದೇವ, ಈ ವಿಷಯದಲ್ಲಿ ಚಿಂತಿಸಬೇಕಾದುದು ಏನೂ ಇಲ್ಲ. ವಿಚಾರವೇ ಇಲ್ಲದೆ ಇವನನ್ನು ಕೊಂದುಬಿಡತಕ್ಕದ್ದೆ! ಬಲ ಹೀನನಾಗಿರುವ ಶತ್ರುವನ್ನು, ಅವನು ಬಲವಂತನಾಗುವುದಕ್ಕೆ ಮುಂಚೆಯೇ ಕೊಲ್ಲಬೇಕು. ಅವನು ಮತ್ತೆ ಬಲಿಷ್ಠನಾದರೆ, ಅವನನ್ನು ಗೆಲ್ಲುವುದು ಅಸಾಧ್ಯವಾಗುವುದು. ಹಾಗಾದರೆ, ಲೋಕದಲ್ಲಿ ತಾನಾಗಿ ಬಂದ ಲಕ್ಷ್ಮಿಯನ್ನು ತಿರಸ್ಕಾರ ಮಾಡಿದರೆ ಆ ಲಕ್ಷ್ಮಿಯು ಶಾಪ ಹಾಕುವಳು” ಎನ್ನುವ ಮಾತು ನಿಜವಾಗುವುದು. ಜೀವನದಲ್ಲಿ ಕಾದಿರುವ ಮನುಷ್ಯನಿಗೆ ಒಂದೇ ಒಂದು ಸಲ ಅವಕಾಶವು ಒದಗುವುದು. ಆಗಲೇ ಅದನ್ನು ಉಪಯೋಗಿಸಿ ಕೊಳ್ಳಬೇಕು. ಕಾಲ ಬಂದಾಗ ಅದಕ್ಕೆ ತಕ್ಕ ಕರ್ಮವನ್ನು ಮಾಡದವನಿಗೆ ಮತ್ತೆ ಆ ಸುಕಾಲವು ಬರುವುದಿಲ್ಲ. ಕೇಳಿಲ್ಲವೆ?
ಬೆಂದ ಚಿತಿಯನು ನೋಡು | ಮುರಿದ ಹೆಡೆಯನು ನೋಡು ॥ 
ಸ್ನೇಹ ಕೂಡಿಸಬಹುದೆ! ಒಡೆದ ಗೆಳೆತನವಾ ॥ ೨೫ ॥
ಅರಿಮರ್ದನನು ಅದು ಹೇಗೆ ಎಂದು ಕೇಳಲು, ರಕ್ತಾಕ್ಷನು ಹೇಳಿದನು:-
*****
ಹೊನ್ನು ಕೊಡುತ್ತಿದ್ದ ಹಾವಿನ ಕಥೆ ಓದಿ
Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...