ನನ್ನ ನಿನ್ನ ನಡುವೆಯೇಕೊ
ಏನೊ ವಿರಸ ಸುಳಿಯಿತು,
ಮನದ ಕಣ್ಣಿಗದುವು ರಂಗು-
ಗಾಜ ತೊಡಿಸಿಬಿಟ್ಟತು!
ತಿಳಿಯ ನೀರು ಹೊಳೆವ ನಿನ್ನ
ಕಣ್ಣ ತಂಗೊಳದಲಿ
ಕಂಡೆನಯ್ಯೊ ಕ್ರೂರ ನ-
ಕ್ರಾಳಿಗಳನು ಭಯದಲಿ.
ಮಿಂಚಿನಂತೆ ಚಂಚಲಿಸುವ-
ಪಾಂಗ ಗರ್ಭದಾಳದಿ
ಬಂಡೆಯೆದೆಯ ಒಡೆವ ಸಿಡಿಲ-
ಮರಿಗಳೆಸಿತೊ ಕಂಡೆನು!
ಕೆಂಪು ತಂಪುಗಳನು ಸುರಿವ
ನಿನ್ನ ತುಟಿಯ ದಳದಲಿ
ಬಂಡುಣಿಯುಣಿ `ಡ್ರಾಸಿರ*’ದ
ರುದ್ರ ಕಾಂತಿ ಕಾಂಬೆನು!
ದಂತದಾಡಿಮವು ಕರೆವ
ನಗೆಯ ಮಧುರ ರಸದಲಿ
ಕೃತ್ರಿಮದ ವಿಷವು ಅಡಗಿ
ಕೂತ ಪರಿಯನರಿವೆನು!
ನಿನ್ನನೊಲಿವ ಮುನ್ನ ಬುದ್ಧಿ
`ನೀ ಕುರೂಪಿ’ ಯೆಂದಿತು
ಅದನು ನಕ್ಕು ಭಾವ ನಿನ್ನ
ಕೊರತೆಗಳನೆ ಮೆಚ್ಚಿತು.
ಹೆಚ್ಚು ನುಡಿಯಲೇಕೆ? ನಿನ್ನ
ಒಂದೊಂದು ಹಾವವೂ
ಅಂದು ಕಣ್ಗೆ, ಹಬ್ಬವೆನಿಸೆ,
ರಂಗುಗಾಜ ತೊಡಿಸಿತು.
ಬುದ್ಧಿ-ಭಾವ ಯುದ್ಧದಲ್ಲಿ
ಭಾವವಿಂತು ಗೆದ್ದಿತು.
ಸುಪ್ತ ಚಿತ್ತಗೋರಿಯೊಳಗೆ
ಬುದ್ಧಿಯನ್ನು ಹೂಳಿತು.
ಭಾವದ ಮೊನೆಯನ್ನು ನಿನ್ನ
ಕ್ರೌರ್ಯ ಮೊಂಡುಮಾಡಿತು
ಪ್ರೇತದಂತೆ ಬುದ್ಧಿಯೆದ್ದು
ಅದನೇಳಸಿ ಕಾಡಿತು.
ಹಿಂದೆ ತನಗೆ ಬಂದ ಸೋಲ
ನೆನೆದು ಬುದ್ಧಿ ಸೇಡೊಳು
ವಿಧ ವಿಧ ವಿಧ ಭೂತಗನ್ನ-
ಡಿಗಳ ಕಣ್ಗೆ ಕಟ್ಟಿತು!
* * *
ಹೃದಯಪಾತ್ರೆಯನ್ನು ತುಂಬಿ
ತುಳುಕುತಿದ್ದ ದುಗುಡವು
ಮಾಯವಾಯ್ತು, ದಿಟವು ಆದ-
ರದನು ಶೂನ್ಯ ತುಂಬಿದೆ.
ಶೂನ್ಯದ ಹರಹನ್ನು ಕಂಡು
ಮನವು ಬೆಚ್ಚಿ ನಡುಗಿದೆ
ಅದನು ತುಂಬೆ, ಮತ್ತೆ ಮತ್ತೆ
ಅಳಲನೇ ಕರೆದಿದೆ.
ಅಳಲು ಕೂಡ ಇಲ್ಲವೆಂಬ
ಅಳಲು ಅದನು ಕಾಡಿದೆ!
ಈ ವಿಚಿತ್ರ ತಾಪದಲ್ಲಿ
ಒಂದೆ ಸಮನೆ ಬಾಡಿದೆ!
ನನ್ನ ನಿನ್ನ ನಡುವಯೇಕೊ
ಏನೊ ವಿರಸ ಹುಟ್ಟಿತು!
ಮನದ ಕಣ್ಣಿಗದುವು ರಂಗು-
ಗಾಜ ತೊಡಿಸಿಬಿಟ್ಟತು!
*****
* ನೊಣಗಳನ್ನು ಆಕರ್ಷಿಸುವ, ಅನಂತರ ಅವುಗಳನ್ನು ಕಬಳಿಸುವ ಒಂದು ಮಾಂಸಾಹಾರಿ ಪುಷ್ಪ.

















