ಆರು ಗಂಟೇಕ್ಕ ಚಾದಂಗಡಿ ಬಳಗ ಕಾಲಿಡ್ತಾನಽ ಕ್ಯಾಷಿಯರ್ ಬಾಬು ಬಂದು ಸಣ್ಣಗ ನಡಗೋ ದನಿಯಾಗ ಹೇಳಿದ ಮಾತು ಕೇಳ್ತಾನ ಎದಿ ಬಡಬಡಿಸಾಕ ಹತ್ತಿತ್ತು. ಭಯಕ್ಕ ಅಂವ ಬೆಂವತಿದ್ದ. ಮಾತು ತಡವರಿಸಿ ಬರತಿದ್ದವು. ಮೊದಲಿಗೆ ನೋಡ್ತಾನಽ ಏನೋ ಅವಘಡ ಆಗೇದ ಅನಿಸಿತ್ತು. ಕೇಳಿ ಅವಕ್ಕಾದೆ. ಆತಂಕದಿಂದಾನಽ ಚಪ್ಪಲಿ ಕಳದು ಲಕ್ಷ್ಮೀ ಪಟದ ಮುಂದ ಆರಿದ ಹಣತೆ ಹಚ್ಚಿಟ್ಟು, ಊದಿನ ಕಡ್ಡಿ ಬೆಳಗಿಸಿ ಕೈಮಗದೆ, ಮಾಮೂಲಿನಾಂಗ ಕುರ್ಚೇದ ಮ್ಯಾಲ ಕುಂಡ್ರಾಕ ಆಗದಾಂಗ ಚಡಪಡಕಿ ಇತ್ತು. ಏನ್ ಎಡವಟ್ಟು ಮಾಡಿ ಇಟ್ಟಾನ ಮಗಾ.
ಈಗೀಗ ಯಾಕಽ ಕೆಲಸ ಸರಿಯಾಗಿ ಮಾಡವಲ್ಲ ಅಂತ ಮೊನ್ನೀ ರಾತ್ರಿನಾಗ ಬಸವಗ ಕಪಾಳಕ್ಕೆ ಬಾರಿಸಿದ್ದು ಖರೇ. ನಾನು ಈಟ ವರ್ಷ ಈ ದಂಧೆದಾಗ ಪಳಗಿದವ. ಯಾವ್ಯಾವ ಹುಡುಗೂರು ಹ್ಯಾಂಗ್ಯಾಂಗ ಅನ್ನೂದು ಗುರ್ತಿಟ್ಟು ಅವರ ಹಲ್ಲು ಎಣಿಸಿ ಇಟಗಂಡವ. ಅವರಿಗೆ ಮುಂಗಡ ಕೊಟ್ಟೋ, ಅರವಿ ಹೊಲಿಸಿಕೊಟ್ಟೋ, ಬೀಡಿ-ಸಿನೇಮಾಕ್ಕ ಆಗಾಗ ರೊಕ್ಕ ಕೊಟ್ಟೂ, ಕೈಯಾಗ ಇಟಗೊಂಡವ. ಈ ಮಗಗೂ ಒಂದು ಸಾವಿರದ ನೋಟು ಮೊನ್ನೆ ಮೊನ್ನೆ ಕೊಟ್ಟೇನಿ. ‘ಬೆರಕಿ ನನ್‌ಮಗ, ನನಗಽ ಇಟ್ನಲ್ಲ ಬತ್ತೀನ’ ಮೆಲ್ಲಕ ಅಂದದ್ದು ನನಗಽ ಕೇಳ್ದಾಂಗ ತುಟೀಂದ ಹೊರಗ ಬಿತ್ತು. ಹಂಗಽ ನಾಲಗಿ ಹುಡಿ ಹಾರಿದಾಂಗ ಆದಾಗ ಕೇಟೀ ತರಾಕ ಬಿಳೀ ಮಾಣಿಗೆ ಹೇಳಿದೆ.
ಈಗ ನಾನ್ಯಾಕ ತಲೀ ಕೆಡಿಸಿಗೊಳ್ಲಿ ಅಂತ ನನ್ನಷ್ಟಕ್ಕ ಸಮಾಧಾನಿಸಿಕೊಂಡು ಬಗ್ಗಿ ‘ಪ್ರಜಾವಾಣಿ’ ಹಿಡದು ಗಲ್ಲೇಕ ಕುಂತೆ. ಯೋಳಽ. ಯಂಟ್ನೇತ್ತ ಕಲಿತಿರಬೇಕು. ಆದ್ರ ಧಿಮಾಕು ನೋಡಿದ್ರ ಇಡಾಕ ಜಾಗ ಇದ್ದಿಲ್ಲ. ಟಕ್ ಮಾಡಿಕೊಂಡು ಏಟೊಂದು ಹಾರ್‍ಯಾಡ್ತಿದ್ದ, ಸಿನೇಮಾದವ್ರ ಚೈನೀ, ಗುಟುಕಾದ ಮಜಾ, ತಯಾರಿ ಹೆಂಗುಸರ ‘ಸಾವಾಸ’ ಒಂದ, ಎರಡಽ? ಇದರ ನಡೂವ ರೊಕ್ಕಾ ರೊಕ್ಕಾ ಅನ್ಕೋತಾ ಮಟಕಾದ ಅಡ್ಡೆಗಳನ್ನು ಎಡತಾಕತಿದ್ದ. ಇಡೀ ಊರನ್ನು ದ್ವಾಸೀ ತಿರುವಿ ಹಾಕೋ ಹಾಂಗ ತಿರುವ್ಯಾಡ ಆ ಖುಸೀಮರ್ಜಿ ಹುಡಗನ ನಡವಳಕಿ ಹ್ಯಾಂಗ ಇದ್ರೂ, ನಮಗಂತೂ ಬಿಟ್ರೆ ಗತಿ ಇದ್ದಿಲ್ಲ. ಕೇಳಿದಷ್ಟು ಕೊಡತಿರತಾ ನಮ್ ಹೋಟ್ಲದಾಗ ಇಟಗಂಡಿದ್ದೆ.
ಚಾದಂಗಡಿಯಾಗ ಕುಂತ ಮಂದಿ ಚಾ ತಿಂಡಿ ತಿನ್ಕೋತಾ ಅದಽ ವಿಚಾರ ಹಚ್ಚಿದ್ರು. ನಾನು ಕೇಳಿಸಿಕೊಂತಾ ದುಗುಡ ಹಂಚಿಕೊಳ್ಳಾಕ ಬಾಬೂನ ಕಡೆ ನೋಡಿದೆ. ಅಂವ ಅದೇನು ಯೋಚನೀ ಹಚ್ಚಿದ್ನೋ ಗೊತ್ತಾಗಲಿಲ್ಲ. ಅಲ್ಲ, ಈ ಸೂಳೇಮಗಗ ಸಾಯಾಕ ನನ್ನ ಹೋಟ್ಲ ಬೇಕಾಗಿತ್ತ? ಅಮುಕಲಾಗದ ಮನಸ್ಸು ಒದ್ದಾಡುತಿತ್ತು. ಒಂದಽ ಸಲಕ್ಕ ಗಿರಾಕಿಗಳು ತುಂಬಿಕೊಂಡವು. ಆ ಕಡೀಗೆ ಲಕ್ಷ್ಯ ಇಡತಿರಬೇಕಾದರ ‘ಒಂದು ದ್ವಾಸೀ ಪಾರ್‍ಸಲ್’ ಅಂತ ಒಬ್ಬ ಬಂದು ಹತ್ರುಪಾಯಿ ಇಟ್ಟ. ಎರಡು ರೂಪಾಯಿ ಹಿಂದಕ ಕೊಡ್ತಾ ಮಸಾಲೆಗೆ ಆರ್ಡರ್ ಹೇಳಿದೆ. ಬಾಬು ಹೊರಗಡಿಗೆ ಬೀದ್ಯಾಗ ಪೀಸೀ ಒಬ್ಬ ಪಟಪಟೀಗೆ ಸ್ಟ್ಯಾಂಡ ಹಾಕಾಕ ಹತ್ತಿದ್ದನ್ನ ಸನ್ನೀಲೆ ತೋರಿಸಿದ.
ಒಳಗ ಬಂದ ಈರಣ್ಣ ಸೆಲ್ಯೂಟ್ ಮಾಡ್ತಾನ್ಽ ‘ನಿಮ್ಮ ಹುಡುಗ ಹಾಳ್ ಬಾಂವ್ಯಾಗ ಎಗರ್‍ಯಾನಲ್ರೀ ಭಟ್ರ’ ಅನ್ಕೋತಾ ಬಂದು ಗಲ್ಲೇಕ ಮೊಣಕೈ ಹಚ್ಚಿ ನಿಂತ. ಒಳಗ ಎದಿ ಕಟಿಯಾಕ ಹತ್ತಿದ್ರೂ, ಏನೂ ಹತ್ತಗೊಡದಾಂಗ ಸಂಪಾದಕೀಯದ ಅಕ್ಷರದಾಗಿಂದ ಕಣ್ಣು ತೇಲಿಸಲಿಲ್ಲ. ‘ಈ ಹಡಬಿಟ್ಟಿ ಮಗಗ ನನ್ ಡ್ಯೂಟಿ ಇದ್ದಾಗಽ ನೆದರು ಕೆದರಬೇಕಾಗಿತ್ತ? ಈ ಹೆಣಾ ಕಾಯಾ ಪೀಕಲಾಟ ಯಾಂವಗ ಬೇಕ್ರೀ’ ಅಂತಿರಬೇಕಾರ ಆಗಲೆ ತಟಗ ತಣ್ಣಗ ಅನಿಸಾಕ ಹತ್ತಿತ್ತು. ಅಂವ ತಿಂಡಿಗೆ ವಕ್ಕರಿಸೋಕ ಮೊದ್ಲು ನಾನಿದ್ದು, ‘ತಮ್ಮಾ ಈರಣ್ಣಗ ಅರ್ಧ ಕೇಟಿ ತಗೊಂಬಾ ಜಲ್ದೀ’ ಅಂತ ಹೇಳಿದೆ. ಈರಣ್ಣ ‘ಏ ಮೊದ್ಲ ಇಡ್ಲಿ ವಡಾ ತಗೊಂಬಾರಲೇ ತಮಾ’ ಎಂದು ಅದಕಾಗಿ ರಾತ್ರೆಲ್ಲಾ ಉಪವಾಸ ಬಿದ್ದೋರಾಂಗ ಹಾಳ್ ಮಾರ್‍ಯಾಗ ಬಡಬಡಿಸಿದ.
‘ಸಾಹೇಬ್ರು ಬಾಂವಿ ಹಂತೇಲಿ ಅದಾರೀ. ಲಗೂನ ಕರಕಂಡು ಬಾ ಅಂದಾರ ನಡೀರಲಾ’ ಅಂತಿರತಾಽನ ಇಡ್ಲಿವಡಾ ಮೋಪಾಗಿ ಕತ್ತರಿಸಿ ಚಹಾ ಸೀಪಕೊಂತಾನ ಅಡಬರಸಿ ನನಗ ಊರ ಹೊರಗ ಕರಕಂಡು ಹೊಂಟ.
ಪೋಲೀಸು ಈರಣ್ಣನ ಗಾಡಿ ಮನುಷಾರ ಸುಳಿವಿರದ ಊರಾಚಿನ ದಾರೀನ ಭರ್ದಂಡು ಆಕ್ರಮಿಸ್ತಾ ಹೋತು. ಒಳಗುದಿಗೆ ಬಿಸಿ ತವದ ಮ್ಯಾಗ ಕುಂತಾಂಗ ಆಗಿ ಮಾತಾಡಾಕ ಬಾಯಿದ್ದಿಲ್ಲ. ತಣ್ಣನ ಗಾಳಿ ತೂರಿದಾಂಗೆಲ್ಲಾ ಮೈಯಾನ ಕಾವು ಇಳಿದಂತಹ ನಿಧಾನ ಆದರೂ ಮನಸಿನ ಕಟಿಪಿಟಿ ಹಂಗಾ ಇತ್ತು. ದೊಡ್ಡಾಲದ ಮರದ ತಳಗ ಗಾಡಿ ಬಂದಾಗ ನೆರೆದವರ ಗಮನ ನಮ್ಮತ್ತ ತಿರುಗಿತ್ತು. ನಾನು ದೂರದಿಂದ ಎಸೈ ಕುಂತ ಕಡೀಗೆ ಕೈ ಬೀಸಿ ಸೆಲ್ಯೂಟ ಮಾಡಿದೆ. ಗಾಡಿ ನಿಲ್ಲಸತಾನ ನನ್ನ ದಿನಮಾನ ಯಾವ ಕಡೀಗೆ ತೆರೆದುಕೊಂಡೀತು ಅಂಬೋ ಯಾವ ಸಂಶೇಕೂ ನನ್ನನ್ನ ಈಡು ಮಾಡಿಕೊಳ್ಳಲಿಲ್ಲ. ಸುತ್ತಲೂ ಸೇರಿದ್ದ ಗುಂಪು ಗದ್ದಲದ ಯಾವ ಉಸಾಬರೀನೂ ಹಚಗೊಳದಾ ನಿಸೂರ ಬಾಂವಿ, ಸನೇಕ ಹೋದೆ. ಬಂದವನ ಬಾವ್ಯಾಗ ಹಣಕಿದೆ.
ನಸುಕಿನಿಂದ ಎಡಬಿಡದಾ ದಂಡೆತ್ತಿ ಬಂದ ಜನರ ಗದ್ದಲಕ್ಕೆ ಬಾವಲಿಗಳು ಹೆದರಿ ಕಿಚಿಕಿಚಿ ಮಾಡುತ್ತಿದ್ದವು. ಹಂಗ ಮಾಡತಾನ ಮತ್ತಷ್ಟು ಕತ್ತಲಕ್ಕೆ ಒತ್ತಿ ಸರಿದಾಗ, ನಿಂತ ಕಿಚಿಪಿಚಿಗೆ ಬಾವಿ ಒಳಗೆಲ್ಲಾ ನೀರವತೆ ಆಡಿತ್ತು.
ಅದೊಂದು ಹಾಳು ಬಿದ್ದ ಬಾಂವಿ, ಅಷ್ಟುದ್ದಕ್ಕೂ ಕವಿದ ಕತ್ತಲಕ್ಕ ಅಡ್ಡ ಚಾಚಿದ ಆಲದ ಟೊಂಗೆ. ಟೊಂಗಿಗೆ ಸುತ್ತಿದ ಬಂದಳಿಕೆಯ ನಡುವ ಅಗದಿ ಕೆಳಗೆ ಹೆಣ ಹೌದೋ ಅಲ್ಲೊ ಕಾಣಾಕ ಹತ್ತಿತ್ತು. ಹೌಂದಾದ್ರ ಅದು ಬಸ್ಯಾಂದ ಅನ್ನೋ ಅನುಮಾನ ಕಾಡಸೋ ಮುಂದೆ ಹಿಂದಕ ತಿರುಗಿದೆ. ವಾತಾವರಣಾನೂ ಅಂಜಸೋದ್ರಾಗ ಹಿಂದಕ ಬೀಳದಾ ಮೊದಲಿನಾಂಗ ಗದ್ದಲ ಕೆದರಿಕೊಂಡು ನಿಂತಿತ್ತು. ಜನ ನನ್ನತ್ತ ಒಮ್ಮೆ ಎಸೈಯತ್ತ ಒಮ್ಮೆ ನೋಡಿ ಬಗೆಹರಿಯದ ಕಾತರ ತುಂಬಿಕೊಂಡಿದ್ದರು. ಆ ಹೆಣಾ ತನ್ನ ಹಿಂದಕ ಬಿಟ್ಟು ಹ್ವಾದ ಬದುಕನ್ನ ಕೆದಕೋ ಪ್ರಯತ್ನ ಅವರದಾಗಿ ಸತ್ತ ಸುದ್ದಿ ಅಲ್ಲೆಲ್ಲಾ ಅಡರಿತ್ತು. ಅಂವಾ ಸತ್ತದ್ದಕ್ಕ ಅಳೋರು ಯಾರೂ ಇರಲಿಲ್ಲ. ಆದರೂ ಯಾಕಾ ವಿನಾಕಾರಣ ಅಸಹಜ ಸಾವು ನನಗೆ ಆಮರಿಕೊಂಡೀತೇ ಎಂಬ ಭಯಕ್ಕ ಮೊದಲಾತು. ಮುಂದಕ ಏನೋ ನಡಿಯೋದದ ಅನಿಸಿತು. ಎಸೈ ನೋಡಿಯೂ ನೋಡದಂತೆ, ಸೆಲ್ಯೂಟ ಮಾಡಿಯೂ ತಿರುಗಿ ಮಾಡದೇ ನನ್ನನ್ನ ಮೂರ್‍ಕಾಸಿನ ಹಂದೀ ತರ ನೋಡಿದಂತಿತ್ತು.
ಹಂದಿಗಳು ಸ್ವಭಾವದಿಂದ ಪರಿಶುದ್ಧ ಪ್ರಾಣಿಗಳು. ಅವುಕ್ಕ ನೀರಿನಾಗ ಮುಳುಗಿರೋದು ಹಿತ ಕೊಡೋ ವಿಚಾರ. ಶುದ್ಧ ನೀರು ಸಿಗಲಾರದಾ ಅವು ಗಬ್ಬು ನೀರಿಗೆ ಎಳಸುತ್ತಿದ್ದವು. ಈ ಪೋಲೀಸರು ಸರಕಾರಿ ಸಂಬಳಾ ತೊಗೊಂಡೂ ತೊಂಬಲಕ್ಕ ಎಡತಾಕೋದು ಹಂದಿಗಿಂತನೂ ನಿಕೃಷ್ಟ ಆಗತದ.
ಹೀಂಗ ನನ್ನ ಯೋಚನೀ ಸಾಗತಿರಬೇಕಾರ, ಪೋಲೀಸರು ಕರೆತಂದ ನಾಲ್ವರು ಹಗ್ಗ, ಕುಡುಗೋಲು, ಚಾದರ ಹಿಡದು ಬಂದರು. ದಫೇದಾರ ಅವರನ್ನ ಬಾಂವಿ ಸನೇಕ ಕರೆದೊಯ್ದ. ಅವರು ಹ್ಯಾಂಗ್ಯಾಗ ನಡಕಾಬೇಕೆಂದು ಹೇಳತಾ ಇರಬೇಕಾರ ದೂರದಾಗ ನಾಯೊಂದು ಊಳಿಡೋ ದನಿ ಕೇಳಿ ಬಂತು. ಬಂದವರು ಅದ್ಯಾವುದನ್ನು ಲೆಕ್ಕಿಸದಾ ಬಾವಿ ಮಗ್ಗುಲ ಮರಕ್ಕೆ ಹಗ್ಗ ಕಟ್ಟಿದರು. ಅದರ ಇನ್ನೊಂದು ತುದೀನ ಗಡಗಡೆ ಇಲ್ಲದ ಹಾಳು ಬಾವ್ಯಾಗ ಇಳಿಬಿಟ್ಟರು. ಒಳಗಿಂದ ಹಕ್ಕಿಗಳು ಬುರಂತ ಹಾರಿ ಹೋಗುತ್ತಲೇ, ಹಣಕುತ್ತಿದ್ದ ಮಂದಿ ಒಮ್ಮೆ ಹೆದರಿದರು. ಪೋಲೀಸ ಲಾಠಿ ಇದಽ ವ್ಯಾಳ್ಯಾಕ್ಕ ಗಾಳ್ಯಾಗ ಹಾರಾಡಿತು. ಮೊದಲು ಬಾವ್ಯಾಗ ಇಳಿದಂವ ಅಡ್ಡ ಚಾಚಿದ ಕೊಂಬೀ ಸವರಿ, ದಾರಿ ಸಲೀಸು ಮಾಡಿ ಮ್ಯಾಲ ಬಂದ. ಹುಡುಗನಂಥೋನೊಬ್ಬ ನಿರಾಯಾಸ ಇಳದು ಜೋಲಿ ಥರ ಮಾಡಿದ ಚಾದರಕ್ಕೆ ಚಿನ್ನಾಛಿದ್ರವಾಗಿದ್ದ ವಾಸನೀ ಹೆಣಾನ ಎತ್ತಿಹಾಕಿ ಬಂದೋಬಸ್ತ ಬಿಗಿದು ಕಟ್ಟಿದ. ಮೇಲಿದ್ದವರಿಗೆ ಒದರಿ ಹೇಳಿದಾಗ ಹೆಣಾನ ಎಳೆದು ತೆಗೆದು ನೆಲಕ್ಕೆ ಇಳಿಸಿಕೊಂಡರು. ನಂತರ ಇಳಿಬಿಟ್ಟ ಹಗ್ಗಕ್ಕೆ ಜೋತುಬಿದ್ದು ಬಾವ್ಯಾಗ ಇಳಿದಿದ್ದ ಹುಡುಗ ಸರಸರ ಏರಿ ಬಂದ. ಜನರು ಹೆಣಾನ ನೋಡೋ ಅವಸರಕ್ಕೆ ಮುಕರಿದೋರು ಕಟ್ಟು ಬಿಚ್ಚತಾನಽ ಹಿಂದಕ ಸರಿದಿದ್ದರು.
ಹೆಣ ಪುಟ್ಟಪೂರಾ ಜಜ್ಜರಿತ ಆಗಿತ್ತು. ಮೈಯಾಗಳ ಕೊಂಡೆಲ್ಲಾ ತಪ್ಪಿದ್ದಲ್ದಾ, ಒಣ ಕಟಗಿ ಆಗಿ ಸೆಟಗೊಂಡಿತ್ತು. ಕಣ್ಣುಗಳಿದ್ದಲ್ಲಿ ಏನೋ ತಿಂದಾಂಗ ವಿಕಾರವಾಗಿ ತೆಗ್ಗು ಬಿದ್ದಿತ್ತು. ರಾಮಾರಗತ ಆಗಿದ್ದು ಅಲ್ಲಲ್ಲೆ ಒಣಗಿ ನಾತಾ ಹೊಡೀತಿತ್ತು. ನೋಡಿದ ಕೆಲವರು ಮೂಗುಮುಚ್ಚಿ ಹಿಂದಕ ಸರಿದಿದ್ದರು. ಪೋಲೀಸಪ್ಪ ಉಳಿದವರನ್ನ ಹೊಡೆದಟ್ಟಿದ. ದಫೇದಾರ ಕೈಲಿ ಹಿಡಿದ ಪುಸ್ತಕದಾಗ ಏನೋ ಬರೆಯತೊಡಗಿದ್ದು ಜನಕ್ಕ ತವಕ ಹುಟ್ಟಿಸಿತು. ಯಾರೋ ಒಬ್ಬ ಅತ್ಲಾಗಿಂದ ಇತ್ಲಾಗಿಂದ ಚಕಚಕ ನಾಕಾರು ಫೋಟೋ ಹಿಡಿದುಕೊಂಡನು.
ಈಟೆಲ್ಲಾ ಕತೀ ನಡೀತಿರಬೇಕಾರ ಎಸೈ ಎಲ್ಲಿಗೋ ಹೋದಾತ ತಿರುಗಿ ಬಂದಿದ್ದ. ಎತ್ತಿದ ಹೆಣ ನೋಡಿ, ಸರಿಸ್ಯಾಡಿ ವಿಚಾರಿಸಿದ್ದಲ್ಲದಾ ದಫೇದಾರಗ ಕೊಡಬೇಕಾದ ಆದೇಶ ಕೊಟ್ಟು ತನ್ನ ಗಾಡಿ ಹತ್ರ ಬಂದಿದ್ದ. ನಾನು ಮಾತಿಗೆ ಹಚ್ಚಿದವರ ನಡುವೆ ಯಾವುದೊ ಗುಂಗನಾಗ ಇರಬೇಕಾದ್ರ ಮುಫ್ತಿ ಪೊಲೀಸನೊಬ್ಬ ‘ಎಸೈ ಸಾಹೇಬ್ರು ಕಾರ್‍ಯಾಕ ಹತ್ಯಾರ ಬರ್ರೀ’ ಅಂದಾತನ ಹಿಂದ ಹೊಳ್ಳಿದೆ. ಹಿಂದಕ ಮುಂದಕ ನಿಂತು ಮಾತಾಡೋ – ಅಂಡಲಿಯೋ ಮಂದಿ ನನ್ನ ಹಿಂಬಾಲ ಬಿದ್ದರು. ಪೊಲೀಸ ಈರಣ್ಣ ಅವರನ್ನ ಗದರಸ್ತಿರತಾನ ಸಾಹೇಬ್ರು ಕುಂತ ಎರೆಮಣ್ಣಿನ ದಿಬ್ಬದ ಸನೇಕ ಬಂದೆ. ನನ್ನತ್ತ ಕೆಂಗಣ್ಣು ಬಿಡುತ್ತಿದ್ದ ಎಸೈ ಎಲ್ಲಾ ಬಲ್ಲವರಾಂಗ ನಕ್ಕ. ಕುಂದ್ರಾಕ ಸನ್ನೆ ಮಾಡಿ ತೋರಿಸಿದಲ್ಲಿಂದ ಸ್ವಲ್ಪ ಹಿಂದಕ್ಕೆ ಮಾತಿಲ್ಲದಾ ಕುಂಡೆ ಊರಿದೆ. ನಮ್ಮಪ್ಪ ಹಮೇಶಾ ಹೇಳುತ್ತಿದ್ದದ್ದು – ‘ಅಧಿಕಾರಿಯ ಮುಂದ, ಕತ್ತೆಯ ಹಿಂದ ನಡೀಬ್ಯಾಡ’ ಎಂಬ ಮಾತು ದಿಡಗ್ಗನೆ ನೆನಪಿಗೆ ಬಂದಿತ್ತು.
ಮೊದಲು ಏನು ಮಾತಾಡೋದು ಎಂದು ತಡವರಿಸಿದೆ. ಆತನೇ ನನ್ನನ್ನು ಮಾತಿಗೆ ಎಳೆದುಕೊಂಡ. ಮತ್ತೊಮ್ಮೆ ಜಮಾಯಿಸಿದ್ದ ಜನರನ್ನ ಪೋಲಿಸನೊಬ್ಬ ಲಾಠಿ ಜಳಪಿಸಿ ಚದುರಿಸಿದನು. ಮಾತಿನ ನಡುವ ನನ್ನನ್ನು ಅನ್ಯಥಾ ಅನುಮಾನದಿಂದ ಕಾಣಾಕ ಹತ್ತಿದ್ದು ಗಮನಕ್ಕೆ ಬಂತು. ಈ ವಿಷಯದಾಗ ನಾನು ಹಿಂದಕ ನಿಲ್ಲಬಾರದು ಅನಕೊಂಡರೂ ಅಲ್ಲಿ ಅಂದು ಆಡೋ ಹಾಂಗಿದ್ದಿಲ್ಲ. ನಾನು ಒಂದು ಮಾತಾಡಹೋಗಿ ಒಂದಾದೀತು ಅಂಬ ಎಚ್ಚರ ಹಚ್ಚಿ, ತುಟಿ ಹೊಲಿದು ಕುಂತೆ. ಅತ್ತ, ಎಸೈ ಬಾಯಿಂದ ಇಲ್ಲದ್ದು ಏನಾರ ಬಂದೀತು ಎಂದೂ ಸಜ್ಜಾಗಿದ್ದೆ. ಆದರ ಆತ ಹಿಂದಕ ಎಂದೋ ಕೂದಲಿತ್ತು ಅನ್ನೋ ಗುರುತೂ ಇಲ್ಲದ ಹೊಳಿಯೋ ಬೋಡು ನೆತ್ತಿ ಮ್ಯಾಲ ಹನಿಗಟ್ಟಿದ ಬೆಂವರ ಕೈಯಾಡಿಸಿಕೋಂತಿದ್ದ. ಖಬರಿಲ್ಲದಾ ಮೈ ಸುಡಾಕ ಹತ್ತಿದ ಸೂರ್ಯನಿಂದ ಉಮರು ಕುಚ್ಚಾಕ ಹತ್ತಿರಬೇಕು. ಇಲ್ಲಾ ಪೋಲೀಸ ಬುದ್ಧಿಯೊಳಗ ಮನಸಿನ ವ್ಯಾಪಾರ ನಡೆದಿರಬೇಕು. ಮುಂಜಾನಿಗೇ ಕರೇ ಕಳಿಸಿದ್ದ ಎಸೈ ಈಟೊತ್ತನಕ ನೋಡಿನೂ ಸುಮ್ಮಕ ಇದ್ದ ಕಾರಣಾ ತಿಳೀಲಾರದ್ದಲ್ಲ. ನನ್ನ ವಿಚಾರದಾಗ ಉಲ್ಬಣಿಸುತ್ತಿದ್ದ ಆತನ ಗತ್ತು ನನ್ನನ್ನು ಅಪರಾಧಿ ಎಂದು ಗುಮಾನಿ ಪಡೋದಿರಲಿ, ನೂರಕ್ಕೆ ನೂರು ಪಕ್ಕಾ ನಿರ್ಧಾರ ತೊಟ್ಟಾಂಗಿತ್ತು. ಅನಿರೀಕ್ಷಿತವಾಗಿ ತಗಲಿಕೊಂಡದ್ದನ್ನ ನಾಜೂಕಾಗಿ ತೇಲಿಸುತ್ತಾ ನನ್ನನ್ನು ಕಿರಿಕಿರಿಗೆ ದಬ್ಬೋದ್ರಾಗ ಆತ ಸಮರ್ಥ ಅದಾನ ಅನಿಸತೊಡಗಿತು…
ಅಂದಂಗ ಈ ಬಸ್ಯಾ ಹಣಕ್ಕ ಹುಟ್ಟಿದ ಮಗ ಇರಬೇಕು ಎಂಬ ಎಂದೂ ಬಾರದ ಸಂಶೇ ಮೂಡಿ ಅಡಚಣೀಗ ಶುರುಹಚಗಂತು… ಈ ಮಗ ಬಿಟ್ಟು ಹೋದ ದಿನಮಾನ ತಗೊಂಡು ನಾನೇನ ಮಾಡ್ಲಿ. ಹೌದು ಮತ್ಯಾಕ ತಲೀ ಕೆಡಿಸಿಗೊಳ್ಲಿ. ಬೇವರ್ಸಿ ನನಮಗಗ ಹಿಂದಿಲ್ಲ ಮುಂದಿಲ್ಲ ಯಾಂವ್ ಬರ್‍ತಾನ ಬರ್‍ಲಿ ನೋಡೂನ… ತುಸ ಅಳಾರು ಅನಿಸಿತು ಮನಕ್ಕ.
ಮಹಜರು ನಡಸಿದ ವರದಿಗೆ ಸಾಕ್ಷಿ ಹಾಕಾಕ ಹೇಳುತ್ತಿದ್ದಂತೆ ನೆರೆದ ಜನ ಕರಗತೊಡಗಿದ್ದರು. ಕರೆತಂದ ಆಳುಗಳ ಸಹಾಯದಿಂದ ನೊಣಾ ಮುಕರಿದ್ದ ಹೆಣಾನ ಮರಣೋತ್ತರ ಪರೀಕ್ಷಾಕ್ಕ ದವಾಖಾನಿಗೆ ಸಾಗಿಸಿದರು.
ಪಂಚನಾಮೆ ಮುಗಸಿದ ಎಸೈ ಅಲ್ಲೆ ನನಗೆ ಮೆತ್ತಗ ತನಿಖೆ ಮಾಡಾಕ ಉಪಕ್ರಮಿಸಿದ.
‘ಈಗ ಹೆಣದ ಮ್ಯಾಲಿನ ಲೀಗಲ್ ಕ್ಲೈಮು ಯಾರದು?’ ಎಂಬ ಪ್ರಶ್ನೇದ ಜತೀಗೆ ಪೀಠಿಕೆ ಹಾಕಿದ್ದ.
‘ಅದು ದಿಕ್ಕಿಲ್ಲದ ಪರದೇಸೀ ಸಾರ್ – ಅನಾಥ’ ಎಂದೆ.
‘ಈ ಸಾವಿನ ಬಗ್ಗೆ ನೀವೇನಂತೀರಿ?’
‘ನಾನು ಏನ್ ಹೇಳ್ಲಿ ಸಾರ್, ಇದು ಆತ್ಮಹತ್ಯೆ ಅನಿಸ್ತದ’ ಎಂದೆ ಯಾವುದಽ ಶಾಣ್ಯಾತನ ತೋರಿಸದೆ. ಆತಗ ಒಳಗೆಲ್ಲೊ ಏನೋ ಅನಿಸಿರಬೇಕು. ಒಂದು ಥರ ತಿರಸ್ಕಾರದ ನೋಟದಾಗ ನನ್ನಡೆ ನೋಡಿದ. ಯಾರ ಮ್ಯಾಲೂ ಸೇಡು ಇರದಿದ್ದರೂ ಮನುಷಾರ ಇಡೀ ಕುಲಾನ ಸಂಶೇದಿಂದ ನೋಡತಾ, ಹಗೆತನ ತೋರಸೋ ವ್ಯವಸ್ಥಾಕ್ಕ ಸೇರಿದ ಈ ಬೆರಕಿ ಎಸೈ ಒಮ್ಮಕಲೆ ‘ಜನಾ ಇದನ್ನ ಕೊಲೆ ಅಂತಾರಲ್ರೀ ಭಟ್ರ’ ಎಂದದ್ದು ನನ್ನನ್ನು ನೇರ ಆರೋಪಿಸದಿದ್ದರೂ ಆತ ಹೇಳಿದ ರೀತೀನ ಹಾಂಗಿತ್ತು. ಅಸಲಿಗೆ ನಾನು ಇಡಿ ಊರನ್ನ ತಿರುವಿ ಹಾಕಿದವನಿದ್ದರೂ, ಹೀಂಗ ಖೂನಿ-ಗೀನಿ ಅಂತ ಮನಸಿನಾಗೂ ಯೋಚಿಸೋ ಪ್ರಮೇಯ ಈ ತನಕ ಬಂದದ್ದಿಲ್ಲ.
‘ಮಂದಿಗೆ ಹೇಳಾಕ ಏನ್ರೀ. ಅವರ ಬಾಯಿ ಮುಚ್ಚಿಸೋದು ಯಾರ ಕೈಯಾಗ ಐತ್ರೀ?’ ಆತ ಹೆಣಿಯಾಕ ಹತ್ತಿದ ಸಮಸ್ಯೆಯ ಹಿಂದ ಮಸಲತ್ತು ಕಾಣಿಸಿ ಒಳಗಽ ದಿಗಿಲು ಆಗಾಕ ಹತ್ತಿತ್ತು.
‘ಅಂವೆ ಆತ್ಮಹತ್ಯೆ ಮಾಡ್ಕೊಳ್ಳಾಕ ಬಲವಾದ ಕಾರಣಾ ಇರಬೇಕಲ್ರೀ’
‘ಕಾರಣಾ ನಾನೆಂಗ ಹೇಳ್ಳಿ ಸಾರ್’
‘ಮತ್ತ ಅವ ನಿಮ್ಮತ್ರ ಕೆಲಸಕ್ಕ ಇದ್ದಾತ. ನೀವಿಷ್ಟು ಕರೆಕ್ಟ ಹೇಳತೀರಬೇಕಾರ ನಿಮಗ ಗೊತ್ತಿರಲೇ ಬೇಕು’ – ಮತ್ತೂ ಸಂಬಂಧಿಲ್ಲದ ಜಾಡು ಹಿಡ್ಯಾಕ ಹತ್ತಿದ್ದು ಮ್ಯಾಗ ಕಾಣತಿತ್ತು. ಮಾನಸಿಕ ಕ್ಷಣಗಳು ಈಗ ಹೊಯ್ದಾಡಿದರ ಈಟ ವರ್ಷ ದುಡಿದು ಗಳಿಸಿದ ಹಣ, ಸ್ಥಾನಮಾನ ಎಲ್ಲಾ ಮಣ್ಣುಗೂಡೀತು. ಪ್ರಸ್ತುತ ಯಾವ ಧಕ್ಕೇನೂ ಬರದಾಂಗ ನೋಡಕ್ಯಾಬೇಕು.
‘ನನಗೆ ಗೊತ್ತಿದ್ದಾಂಗ ಅಂಥಾದ್ದೇನಿಲ್ಲ ಬಿಡ್ರಿ’
‘ಹಂಗಾರ ಜನ ಗುಮಾನಿ ಪಡೋದು ಸುಳ್ಳು ಅಂತೀರೇನು?’ ಎಸೈ ಈ ಮಾತು ಶುರು ಹಚ್ಚಿದಾಗ ಏನೂ ಅರಿಯದ ಮುಗ್ಧನಾಂಗ ಕಂಡರೂ ಮಕದಾಗ ಯಾಕಽ ಸೌಜನ್ಯಾನ ಎಳದು ತಂದಾಂಗಿತ್ತು.
‘ನಾನ್ಯಾಂಗ ಹೇಳ್ಳಿ ಸಾರ್’ ಎಂದೆ.
‘ಮತ್ತೆ ನೀವು ಮೊನ್ನಿ ರಾತ್ರಿ ಅಂವಗ ಹೊಡೆದದ್ದು ಸುಳ್ಳೇನು?’ – ನನಗಽ ಕಪಾಳಕ್ಕ ಹೊಡೆದಾಂಗ ಸವಾಲು ತೂರಿದಾಗ ನನ್ನ ಚಡ್ಡೀ ಒಳಗ ಕೈ ತೂರಿಸಿದಂಥ ಹಿ೦ಸೆಗೆ ಮೊದಲಾತು.
ನಾನು ಮುಂಜಾನೆ ಬಾವಿ ಕಡೀಗೆ ಬಂದಾಗಽ ಹೋಟಲ್ಲು ಹುಡುಗರನ್ನ ವಿಚಾರಣೀ ಮಾಡಿದ್ದರು. ಆ ಸಂಬಂಧದಾಗ ದೊರೆತ ಮಾಹಿತಿ ಮ್ಯಾಲ ಒಬ್ಬ ಸಪ್ಲೆಯರ್‌ನ ಬಂಧಿಸಿದ್ದು ಮಾತಿನ ನಡುವ ತಿಳಿದು ಬಂತು. ನನ್ನನ್ನ ಅಧೀರಗೊಳಿಸೋ ಹಿಕ್ಮತ್ತು ಈ ಬಂಧನದ ಹಿಂದೈತಿ ಎಂದು ತಿಳೀಲಾರದಷ್ಟು ಹೈರಾಣ ಆಗಿರಲಿಲ್ಲ. ಈಗ ತಾಕಲಾಟದ ನಡುವ ಒಂದು ಸುಳ್ಳು ಹೇಳಾಕ ಹೋದ್ರ, ಹತ್ತು ಸುಳ್ಳು ಹೇಳಿ ಸಿಗೇ ಬೀಳಾದು ಖರೆ. ಸಂಶಯ ಬರದಾಂಗ ಖುಲ್ಲಾ ಹೇಳಿ ಬಿಡಬೇಕು ಎಂದು ನಿಕ್ಕಿ ಮಾಡಿದೆ. ಆಗ ಹೊಸ ಆಯಾಮಕ್ಕ ತೆರೆದುಕೊಂಡೇನು ಅನ್ನಾಕ ನನ್ನತ್ರ ಯಾವ ಸಬೂಬು ಇರಲಿಲ್ಲ.
ಮನದಾಗ ಯಾವ ಪಡಪೋಶಿ ಇಲ್ಲದಾ ‘ಮೊನ್ನಿ ನಾನು ಹೊಡೆದದ್ದು ಖರೆ’ ಎಂದೆ. ಇಲ್ಲಿತನ ಬೆತ್ತ ಸಿಕ್ಕರ ಸಾಕೆಂದು ಕುಂತಿದ್ದ ಎಸೈ ಕೈಗೆ ಕಣಗ ಸಿಕ್ಕಷ್ಟು ಸಂತೋಷ ಆತು. ಹುಚ್ಚು ನಗಿ ನಕ್ಕು ‘ಹಾಂ, ಹಾಂಗ ಹೇಳ್ರ್‍ಈ ಮತ್ತಽ. ಈಗ ಲೆಕ್ಕಾಚಾರ ಬರೋಬರಿ ಆತು. ನೋಡಪಾ ಈರಣ್ಣ’ ಎಂದು ಪೀಸೀ ಕಡೆ ತಿರುಗಿ ಹೇಳಿದ. ಹೀಂಗ ಹೇಳಾಕಾರ ಹಣಕಿದ ವ್ಯಂಗ್ಯದ ಏರಿಳಿತ ಗುಣಾಕಾರಕ್ಕೆ ಸಿಗದಽ ನನಗ ಹ್ಯಾಂಗ್ಯಾಂಗೋ ಆತು. ಈ ಹೊತ್ನಾಗ ಕುಗ್ಗಬಾರದು ಎಂಬ ಎಚ್ಚರಕ್ಕ ನಾನು ನಂಬಿದ್ದು ನನ್ನ ಬಾಯನ್ನು. ಆದರ ಅಷ್ಟಕ್ಕ ವಿಚಾರಣೆ ಮುಗೀತು, ತಾನು ಗೆದ್ದೆ ಎಂಬಂತೆ ವಿಜಯದ ನಗಿ ನಗುತ್ತಾ ಎಸೈ ಎದ್ದು ನಿಂತ. ಆತನಲ್ಲಿ ಬೆಳೀತಿದ್ದ ದುಷ್ಟತನ ಗುರುತಿಸಿ ನಾನು, ಅಸಹಾಯಕ ಆಗಬಾರದು, ವಿವೇಕ ಕಳಕೋ ಬಾರದು ಅನಕೊಂಡು, ಮೌನದಿಂದ ಎದ್ದು ಆತನ ಹಿಂದ ಹೆಜ್ಜೀ ಹಾಕಿದೆ.
ಪೋಲೀಸು ಜೀಪಿನಾಗ ಕುಂದ್ರತಾನ ಆತ ‘ನೀವು ಹೇಳಿದಂತೆ ಆತ್ಮಹತ್ಯೆನೇ ಖರೇವಂದರ ನೀವು ಹೊಡೆದ ಕಾರಣಕ್ಕ ಬೇರೆ ಕೆಲಸಗಾರರ ಎದುರು ಮಾನ ಹೋಗಿ ಹಾಂಗ ಮಾಡಿಕೊಂಡಿರಬೇಕು. ಇಲ್ಲಾಂದರೆ ನೀವಽ ಅವನನ್ನ ಹೊಡೆದುಕೊಂಡು ಬಾವಿಗೆ ಎಸದಿರಬೇಕು. ಇದಕ್ಕ ನೀವೇನಂತೀರಿ?’ ಎಂಬ ನೇರವಾದ ಆರೋಪಕ್ಕ ನನ್ನನ್ನ ಗುರಿಪಡಿಸಿದ. ಆತನ ಬಗ್ಗೆ ಇಲ್ಲಿತನ ಇದ್ದ ಆಟೀಟು ಗೌರವ ಜರ್ರನ ಇಳೀತು. ದಂಗು ಬಿದ್ದು, ಮಾತಿನ ದಾಟೀಗೆ ಅಸಹನೆನೂ ಮೂಡಿತು. ಎಲ್ಲೋ ಒಂದ ಕಡೀಗೆ ಗಾಬರೀನೂ ಆಗಿ ತ್ರಸ್ತ ಮೈ ಬೆಂವರಿ ಆಯಾಸಗೊಂಡಿತ್ತು. ಎಸೈಗೆ ತನ್ನ ಮಾಲ್ಕಿ ಹಕ್ಕನ್ನ ಚಲಾಯಿಸಲು ನಾನು ಸಲೀಸು ದಾರಿ ಮಾಡಿಕೊಟ್ಟಂಗಾಗಿತ್ತು. ಉತ್ತರಾ ಇಲ್ಲದ ಪ್ರಶ್ನೇಕ್ಕ ಗಂಟಲಾಗಿಂದ ದನಿ ಹೊರಗ ಬರಾಂಗಿದ್ದಿಲ್ಲ. ಈಟು ನಿಸೂರ ಇಟ್ಟ ಗುನ್ನೇಕ್ಕ ಕಿರಿಕಿರಿ ಅನಿಸಿ ಈತಂದು ರೊಕ್ಕಾ ಮಾಡೋ ಹುನ್ನಾರು ಇರಬಹುದು ಅನ್ನೋ ಗುಮಾನಿ ಎದ್ದಿತು. ಈಗ ಗುದಮುರಗಿ ಹಾಕೋದು ಆಗದ ಕೆಲಸ. ಹಂಗಂತ ಸುಮ್ಮಕಿದ್ದರೂ ಒಳಗಽ ಕುಟುಕೋ ಜಾತಿದು. ಆತನ ಅನಿರೀಕ್ಷಿತ ದಾಳಿ ನನಗ ಗೊಂದಲ ಮಾಡಿತು. ಆಖೈರುಗೊಳಿಸಲಾಗದ ನಿರಾಶಕ್ಕ ಚೆಂಡು ಬಗ್ಗಿಸಿ ಸುಮ್ಮಕ ಕುಂತಿದ್ದೆ.
‘ಏನು ಯೋಚಿಸಾಕ ಹತ್ತೀರಿ ಭಟ್ರ..? ಎಂದು ಮತ್ತೆ ಎಚ್ಚರಿಸಿದ.
‘ನಿಮ್ಮ ಮೌನ ನೋಡಿದರ ನೀವು ಒಪ್ಪಿದಾಂಗ ಕಾಣಸ್ತದ… ಖರೇ ಹೇಳ್ರೀ ಹೆಂಗ ಕೊಂದ್ರಿ? ಯಾಕ ಕೊಂದ್ರಿ?’ ಎಂದ. ಉದ್ದಕೂ ಆತ ನನಗ ಮರ್ಯಾದಿ ಕೊಟ್ಟು ಮಾತಾಡಸ್ತಿದ್ದ. ಒಳಗಽ ರೇಗಿದ್ರೂ ಹತ್ತಗೊಡದಾಂಗ ‘ಸರಽ ನಾನಂಥ ಮನಷಾ ಅಲ್ಲ… ನೀವು ಹೀಂಗ ಸುಳ್ಳಪಳ್ಳ ಆರೋಪ ಹಚ್ಚಿದರ ನನಗ ಮಾತಾಡಾಕ ಬರಲ್ಲ. ಅದಕಽ ಸುಮ್ಮಕಿದ್ದೆ’ ಎಂದೆ.
ಇಲ್ಲಿ ನನ್ನ ಯಾವ ಶಾಣ್ಯಾತನಾನೂ ಉಪಯೋಗಕ್ಕೆ ಬರಲ್ಲ, ಹಂಗಂತ ಇಂವನ ತಲೀ ಬಾಗಿಸಿದರ ಸ್ವಾಭಿಮಾನ ಬಿಟ್ಟುಕೊಡಬೇಕು. ಆಗ ನನ್ನಷ್ಟು ದಡ್ಡ ಇನ್ನೊಬ್ಬನಿರಲ್ಲ… ತಹತಹಿಸ್ತಾ ಇರತಿರಕಲೇ ಲಿಂಗನ ಗೌಡರ ನೆನಪಾತು. ಮಧ್ಯವರ್ತಿ ಇಲ್ಲದಾ ಈ ಅವಾಂತರ ಬಗೆ ಹರಿಯಾಕಿಲ್ಲ. ಹೆಂಗಾರ ಮಾಡಿ ರಾಡಿ ತೊಳಕೊಂಡರ ಸಾಕು ಅನಿಸಿತು. ಗೌಡರದ್ದು ತಲಾಂತರದ ಊರೊಟ್ಟಿನ ಯಜಮಾನಿಕೆ. ಆ ಐನಾತಿ ಆಸಾಮಿ ಎದುರು ಮಂದಿ ಜೋರಾಗಿ ಕೆಮ್ಮತಿರಲಿಲ್ಲ. ಗೌಡ್ರು ಒಮ್ಮೆ ಬಾಯಿ ಹಾಕಿದ್ರು ಅಂದ್ರೆ ಅಲ್ಲಿ ದುಸರಾ ಮಾತು ಇರಲ್ಲ. ಅಂಥವರ ನಡುವ ನನಗ ನ್ಯಾಯಾ ದಕ್ಕೀತು… ಹೀಂಗ ಜೀಪಿನ ಒಳಗ ಕುಂತು ಯೋಚನೀ ಮಾಡ್ತಾ ಸ್ಟೇಷನ್ ಸನೇಕ ಬಂದಿದ್ವಿ. ‘ನಾನು ಸ್ವಲ್ಪ ಲಿಂಗನಗೌಡ್ರನ್ನ ಕಂಡು ಬರತೀನಿ ಸರಽ ಅಂದೆ. ಎಸೈ ‘ನೀವು ಸ್ಟೇಷನ್‌ದಾಗ ಕುಂದರ್ರೀ, ಯಾರನ್ನ ಕರಸಬೇಕು ಹೇಳ್ರ್‍ಈ. ನಾನ ಕರಸ್ತೀನಿ’ ಅಂದ.
ಮೆಟ್ಟಲೇರಿ ಹೋದರ ಅಲ್ಲಿಂದ ಬೇರೇನೆ ಆದ ದುನಿಯಾ ಕಂಡಿತು. ಅಲ್ಲಿದ್ದ ಪೋಲೀಸ ಜಾತಿ ಕಾಣಿಸಿದ ಅಪರಿಚಿತ ಅನುಭವ ದಟ್ಟವಾಗತಾ ಹೊಂಟುವು… ಅದನ್ನೂ ಹೇಳ್ಕ್ಯಂತ ಹ್ವಾದ್ರ ಮುಗಿಲಾರದ ಕತಿಯಾದೀತು… ಇಲ್ಲದ ಉಸಾಬರಿ ನಂಗ್ಯಾಕ ಅಂತ ನಿಶ್ಯಬ್ದ ಕುಂತಿದ್ದೆ. ಗೌಡ್ರು ಊರಾಗಿಲ್ಲ ಅನ್ನೋ ಸಂದೇಶ ಸಿಕ್ಕಾಗ ಮತ್ತೊಮ್ಮೆ ಕೈಕಾಲು ಆಡದಾಂಗಾದವು.
ನನ್ನ ಜೋಲು ಮಾರಿ ನೋಡಿದ ಎಸೈಯಿಂದ ‘ಭಟ್ರ ನೀವೀಗ ಚಿಂತೀಲಿ ಗಾಬರೀ ಬೀಳಬ್ಯಾಡ್ರಿ. ಈ ವಿಚಾರದಾಗ, ನಾನೂ ನಿಮ್ಮೊಂದಿಗೆ ಅದೀನಿ. ಹಂಗ ಬ್ಯಾರೆ ವ್ಯವಸ್ಥಾ ಮಾಡಾನ’ ಎಂಬ ಗೌಡಕೀ ಮಾತು ಹಿಂದಽ ಬಂತು. ಈ ವಿಶ್ವಾಸದ ಮಾತಿಗೆ ನಾನು ಅಲ್ಲೇ ಸ್ಪಂದಿಸೋ ಹಾಂಗಿದ್ದಿಲ್ಲ. ಒಮ್ಮಕಲೇ ಪಲ್ಲಟ ಆದ ಹುನ್ನಾರು ಹೊಸ ಉದ್ದಗಲ ಹಚ್ಚಿ ಗಿರ್ಧ ಲಕ್ಷದ ಎಣಕೀಗೆ ಬಂದು ನಿಂತಿತು. ‘ಭಟ್ರೆ.. ಹೆಂಗೂ ಅನಾಥ ಅಂತೀರಿ. ನೀವು ರೊಕ್ಕಕ್ಕ ಒಪ್ಪಿದರ ನಿರಾಳ ಹೋಗಿ ಗಲ್ಲೇಕ ಕುಂದ್ರತೀರಿ. ಇಲ್ಲಾಂದ್ರ ಕಂಬಿ ಎಣಿಸ್ಕೊಂತ ಗಲ್ಲು ಶಿಕ್ಷಾ ಮುಂಗಾಣಬೇಕು… ಹೆಂಗಿರಬೇಕು ಅನ್ನೋದು ನಿಮಗಽ ಬಿಟ್ಟಿದ್ದು… ಪ್ರಾಸವಾಗಿ ಹೇಳತಾ ‘ಈಗ ನಿನ್ನ ಭವಿಷ್ಯ ನನ್ನ ಮುಟಗಿ ಒಳಗ ಐತಿ’ ಅನ್ನೋ – ಹಾಂಗಿತ್ತು ಗತ್ತು. ಯಾಕಽ ವಿಪರೀತಕ್ಕ ಇಟ್ಟು ದಿಕ್ಕು ಕಾಣದಾಂಗ ಆದಾಗ ಬಲ ಉಡುಗಿತು. ಕುಂತರ ನಿಂತರ ಬೆಂತರ ಬೆನ್ನು ಬಿದ್ದಾಂಗ ಆಗಿತ್ತು. ಸಾವಂದರ ಈಟೊಂದು ಕಗ್ಗಂಟು ಇರ್‍ತದ ಅಂತ ಇವತ್ತಽ ಗೊತ್ತಾಗಿದ್ದು.
ಆವಾಗ ಎಸೈಗೆ ನಮಸ್ಕರಿಸುತ್ತ ಒಳಬಂದ ವಕೀಲ ಚನ್ನಪ್ಪನವರು ನನ್ನ ಕಡೀಗೆ ನೋಡಿ ಪರಿಚಿತ ನಗಿ ನಕ್ಕರು. ಅದನ್ನು ಗಮನಿಸಿಯೂ, ಗಮನಿಸದಾಂಗ ಎಸೈ ನನಗ ಹೊರಗಿನ ಕೋಲ್ಯಾಗ ಕುಂದ್ರಾಕ ಹೇಳಿದ.
ವಕೀಲರ ಗಾಳಿ ನನಗೂ ಬಡೀತು. ನನ್ನನ್ನ ಅಪರಾಧಿ ಕಟಕಟೇಲಿ ನಿಂದ್ರಸೋಷ್ಟು ಪುರಾವೆ ಈತನ ತಾವ ಐತೇನು ಎಂದು ಯೋಚಿಸಿದೆ. ಏನಂದ್ರೂ ಆರೋಪ ಸಾಬೀತು ಮಾಡಾಕ ಆಗಾಂಗಿಲ್ಲ. ಆಧಾರ ಇತ್ತಂದ್ರ ಎಸೈಗೆ ಈಟೆಲ್ಲಾ ಗೋಗರಿಯೋ ಕಾರಣಾ ಇರಲ್ಲ. ಜಬರದಸ್ತೀಲೆ ಅಧಿಕಾರ ಚಲಾಯಿಸ್ತಿದ್ದ… ರೊಕ್ಕಾ ಎಬ್ಬಾಕಾಗಿ ಸುತ್ತೂ ಬಳಸಿ ಗುದಮುರಗಿ ಹಚ್ಚ್ಯಾನ… ನಾನು ಇಲ್ಲಿಗೆ ಬರೋಕ ಮೊದಲಾ, ಪೋಲೀಸ ಶಂಕೆಗೆ ಸರಿಯಾಗಿ ಅನಾಮಧೇಯ ಸುದ್ದಿಗಳು ಎಲ್ಲೆಲ್ಲಿಂದಲೋ ಬಂದು ಉರುಲು ಹೆಣಿಯಾಕ ಸಜ್ಜಾಗಿದ್ದವು. ಹಾದಿಬೀದಿಯ ಸಂಶೇದ ನಾಲಗೀಗೆ ಜೋತುಬಿದ್ದು, ನಾನು ಜವಾಬ್ದಾರನಲ್ಲದ ಘಟನೇಕ್ಕ ನನ್ನನ್ನ ತಳಕು ಹಾಕಾಕಾಗಿ ಕೆಲವರಿಗೆ ಪುಟಗೀ ಕೊಟ್ಟಿದ್ದ, ಸಾಕ್ಷಿ ಹುಟ್ಟಿಸಿದ್ದ. ಹಿಂದಾಗಡೆ ನಮ್ಮ ಸಪ್ಲೆಯರಗ ಬೂಟುಗಾಲೀಲೆ ಒದ್ದು ಬೆದರಿಸಿದ ರೀತಿ ನನಗ ಬವಳಿ ತರಿಸಿತ್ತು. ಕತ್ಲ ಬಾವ್ಯಾಗಿಂದ ಮ್ಯಾಲ ಬಂದ ಬಸ್ಯಾನ ಹೆಣಾ ಹೀಂಗ ನನ್ನ ಮ್ಯಾಲ ಸ್ವತ್ತುಗಾರಿಕೆ ಹೇರಿ ಈಟೊಂದು ರಂಪಾಟ ಒಡ್ಡೀತು ಅನಕಂಡಿರಲಿಲ್ಲ. ಮನುಷಾ ಊಹಿಸದಽ ಒಮ್ಮೊಮ್ಮೆ ಅನಪೇಕ್ಷಿತವಾಗಿ ಹೀಂಗ ಸವಾಲುಗಳು ಎದುರಾಗಿ ಬರತಾವ.
ಚನ್ನಪ್ಪನವರು ಹೊರಗ ಬರತಾನ ನಾನು ಅವರತ್ತ ದೌಡಾಯಿಸಿದೆ. ನಾನು ತುಟಿ ಎರಡು ಮಾಡಬೇಕಿದ್ರ ಅವರಾ ‘ಎಲ್ಲಾ ಕೇಳಿ ತಿಳಕಂಡೀನ್ರಿ, ಸಂಜೀವಳಗ ಬಿಟ್ರ ನಂಗ ತಿಳಿಸಿ ಹೋಗ್ರಿ. ಇಲ್ಲಾಂದ್ರೆ ನನ್ನ ಜೂನಿಯರ್‌ಗೆ ಕಳಿಸ್ತೀನಿ, ಅಂವ ಎಲ್ಲಾ ವ್ಯವಸ್ಥಾ ಮಾಡತಾನ’ ಎಂದು ಅವಸರಸಿ ಹೊಂಟುಹೋದ್ರು.
ಆಗಳಿಂದ ನನಗ ಹೊರಗದೇಕಿಲೂ ಬಿಡದಾ ಒಂದ್ರೀತೀಲಿ ಬಂಧನ ಹಾಕಿದ್ರು, ಮಧ್ಯಾಹ್ನದ ಊಟ ಅಲ್ಲಿಗೇ ತರಿಸಿದ್ದರು. ಹೊಟ್ಟಿ ಹಸದಿದ್ರೂ ಶಾಸ್ತ್ರಕ್ಕೆ ಕುರಕಿ ತಿಂದಿದ್ದೆ.
ಎಸೈ ಬ್ಯಾರೆಬ್ಯಾರೆ ಸಾಧ್ಯತೆಗಳನ್ನ ತನ್ನ ಬೆರಳ ತುದೀಲಿ ಹಿಡದಿಟ್ಟುಕೊಂಡಽ ಹೊರಗಡಿಗೆ ಎಲ್ಲೋ ಹ್ವಾಗಿದ್ದ.
ಮೊದಮೊದಲು ತುಮುಲ ನನ್ನನ್ನ ಕಂಗೆಡಿಸಿದ್ದು ಖರೆ. ಪಾಪಪ್ರಜ್ಞೆನೂ ಆವರಿಸಿ ಬಿಟ್ಟಿತ್ತು. ಆವಾಗಽ ನಾನು ಬಸ್ಯಾಗ ಹೊಡೆದದ್ದನ್ನ ಮುಚ್ಚಮರೆ ಇಲ್ಲದಽ ಒಪ್ಪಿಟ್ಟಿದ್ದೆ…
ಬರ್‍ತಾ ಬಾರ್‍ತಾ ಮನಸು ತಮಣಿಗೆ ಬಂದಾಂಗೆಲ್ಲಾ ನನ್ನ ತಪ್ಪು ಅರಿವಾಗಾಕ ಹತ್ತಿತು. ಬಗ್ಗಿದಾತನ್ನ ಈಗಿಂದೀಗ ಹ್ಯಾಂಗ ಬಳಸಬಹುದು ಎಂದು ಬಲಾಡ್ಯರು ಯೋಚಿಸ್ತಾ ಇರತಾರ ಎಂಬ ಅರಿವಿರಬೇಕಾಗಿತ್ತು. ಪೋಲೀಸರು ನನ್ನ ಹಿಂಬಾಲ ಬೀಳೊ ಪೀಕಲಾಟ ಯಾರಿಗೆ ಬೇಕಿತ್ತು? ‘ಬಸ್ಯಾನ ಕೆಲಸದಿಂದ ತೆಗೆದು ಹಾಕಿ ಒಂದು ವಾರ ಆತು’ ಅಂದಿದ್ದರ ಈ ಹುದಲಿನಾಗ ಸಿಲಕೋ ಪ್ರಮೇಯ ಇರತಿರಲಿಲ್ಲ. ನಾನು ಖರೆ ಹೇಳಿ ದುಡಕಿ ಬಿಟ್ಟೆ…
ಒಮ್ಮೆ ಆತಗ ಕೊಡೋದು ಕೊಟ್ಟು ಕೈ ತೊಳಕೊಂಡರೆ ಈ ಪಜೀತಿ ಎಲ್ಲಾ ಇಲ್ಲಿಗೆ ಮುಗದು, ನಾಳೀಕ ನಾನ್ಯಾರೋ, ಅವನ್ಯಾರೋ!… ಆದರೆ ಇದು ನನ್ನ ಭ್ರಮೆ.. ಯಾಕಂದರ ಬಿಟ್ಟೆನೆಂದರೂ ಬಿಡದ ಈ ಪೋಲೀಸ ಮಾಯೆ ನನಗ ಹೊಸತೇನು?… ಹಂಗಽ ಈ ವಕೀಲೇನು ಸಾಚಾ – ಸುಳ್ಳಿದ್ದಿದ್ದು ನಿಜ ಮಾಡತಾನ; ನಿಜ ಇದ್ದದ್ದನ್ನ ಸುಳ್ಳು ಮಾಡತಾನ – …ಒಟ್ಟಾರೆ ಮುಳ್ಳು ಮ್ಯಾಲಿನ ಅರಬಿ, ನಿಧಾನಕ್ಕೆ ತಕ್ಕೋಬೇಕು.
ಈ ಪೋಲೀಸ ವ್ಯವಸ್ಥಾದೊಂದಿಗೆ ಸಂಬಂಧ ಬೆಳಸಿದಾಂಗೆಲ್ಲಾ ನನ್ನನ್ನವರು ಸೂಗನ್ನ ಮಾಡತಾರ. ಈಗ ರೊಕ್ಕಾ ನನ್ನ ನೆರವಿಗೆ ಬಂದಾಂಗ ಅನುಭವ ಬಾರದು ಅನಿಸಿ, ಈ ಕ್ಷಣಾ ಹಣ ಕೊಟ್ಟು ಆಪಾದನೆಯಿಂದ ಮುಕ್ತ ಆಗಬೇಕು ಎಂಬ ಹೊಯ್ದಾಟದಾಗ ಮತ್ತೊಮ್ಮೆ ಮುಳುಗಿದ್ದೆ. ಮರುಕ್ಷಣ ಗಿರಕಿ ಹೊಡದ ಮನಸ್ಸು ಯಾವ ಹೊಂದಾಣಿಕೆಗೂ ಮಣೀಬಾರದು ಅಂದುಕೊಂಡಾಗ ಮೈಯಲ್ಲಾ ಉರಿಯೋ ಬೆಂಕಿ ಆತು. ಒಡಂಬಟ್ಟರೆ ನನ್ನ ಕುತಗೀಗೆ ನಾನು ಕುತ್ತು ತಂದ್ಕಂಡಾಂಗ. ತಿಳೀಲಾಗದ ವ್ಯವಸ್ಥಾದ ಪ್ರತೀಕ ಆದ ಎಸೈನ ಈಗ ಎದುರಿಸಾಕ ಬೇಕು. ಇದಿರಿಸಿದ್ನಂದರ ನಾನು ಮನುಷಾ ಆಕ್ಕೀನಿ. ಭಯಕ್ಕ ಬಿದ್ದು ಕತ್ತು ಹೊಳ್ಳಿಸಿದ್ರ ಈ ಸಮಾಜದಲ್ಲಿರಾಕ ನಾಲಾಯಕ ಆದೀನು…
ಅದಽ ಸಂಕ್ರಮಣದಾಗ ಹಠಾತ್ ನಿರ್ಧಾರದಾಗ ಅದೇ ಆಗ ಒಳಬಂದ ಎಸೈ ಎದುರು ‘ನೀವು ಹೊರಿಸಿದ ಆರೋಪಕ್ಕೆ ಸಾಕ್ಷಿ ಐತೇನು ನಾನೂ ನೋಡ್ತೀನಿ’ ಎಂದು ಏರುದನಿಯಾಗ ಕೇಳಿದೆ. ಆತನ ಅಧಿಕಾರಕ್ಕೆ ಸವಾಲೆಸೆದಂತೆ ಬಡಿದ ಅನಿರೀಕ್ಷಿತ ಉಸಿರಿಗೆ ಆತ ತುಸ ಅಳುಕಿದಾಂಗ ಕಂಡಿತು. ಇದೀಗ ಬಂಡಾಯ ಅಂಬೋದು ನನ್ನ ಒಳಗೆಲ್ಲೊ ಹುದುಗಿದ್ದು ಕೈ ಮೀರಿದ ಗಳಿಗ್ಗೆ ಬಸವನ ಹುಳದ ಹಾಂಗ ಮಕ ಹೊರಗೆ ಬಂದಿತ್ತು. ಅಂದಾಗ್ಯೂ ನನ್ನ ಬೆನ್ನ ಕೋಲಿನ ಉದ್ದಗಲಕ್ಕೂ ಇಳ್ಯಾಕ ಹತ್ತಿದ ಬೆವರನ್ನ ಕಡೆಗಣಿಸಿ ‘ಇನ್ನೊಬ್ಬರನ್ನ ಅರ್ಥ ಮಾಡಿಕೊಳ್ಳಬೇಕಾದ್ರ ನಿಮಗೂ ಇಂಥಾ ಸ್ಥಿತಿ ಬರಬೇಕು. ನನಗ ಸಂಬಂಧ ಇಲ್ಲದ್ದನ್ನ ನನ್ನ ಕೊಳ್ಳಾಗ ಕಟ್ಟಿ ಜೀಂವಾ ಹಿಂಡಾಕ ಕುಂತೀರಿ. ತಮಾಷಾ ಮಾಡ್ತೀರೇನ? ನಿಮ್ಮದಿದು ಉದ್ದಟತನ ಆಗತತೀ’ ಎಂದು ಗತ್ತೀಲೆ ಹೇಳಿದೆ. ಅಲ್ಲಿದ್ದೋರು ಒಮ್ಮೆಲೆ ಗಪ್ಪಾಗಿ, ನನಗ ಹುಚ್ಚು ಗಿಚ್ಚು ಹಿಡೀತೇನೊ ಅನಕಂಡಿರಬೇಕು… ‘ಹೀಂಗಾದ್ರ ಮ್ಯಾಲಿನವರಿಗೆ ಕಂಪ್ಲೆಂಟ ಕೊಡಬೇಕಾಗ್ತದ’ ಅನ್ನೋ ಜಬರದಸ್ತು ಮುಂದುವರೆದು,
‘ನಾನು ಸುಳ್ಳು ಹೇಳಿದರ ಜೇಲಿಗೆ ಹಾಕ್ತಿನಿ ಅಂತೀರಿ. ನೀವು ಸುಳ್ಳು ಆರೋಪ ಮಾಡಿ ರೊಕ್ಕ ಸುಲಿಯಾಕ ನೋಡ್ತೀರಲ್ಲ. ನಾಚಕೀ ಇರಲಿ ನಿಮ್ಮ ಜನ್ಮಕ್ಕ’ ಎಂದು ಆ ಬಲವಂತಗ ಎದುರಾಳಿಯಾದೆ. ಯಾವತ್ತೂ ತಲೆ ತಗ್ಗಿಸೋಂಥ ಹಲ್ಕಾ ಕೆಲಸ ಮಾಡದ ನನಗ ಆತನ್ನ ಎದುರಿಸೋ ಅಳಕು ಅಷ್ಟಾಗಿ ಆಗಲಿಲ್ಲ. ನಿಧಾನಕ ಅಲ್ಲಿದ್ದೋರು ತಮ್ಮ ನಿಲುವು ಬದಲಿಸಿ ನನ್ನ ಎದೆಗುದೀನ ಗೊರ್ತ ಹಚ್ಚಿರತಾರ, ನಂದು ಗಾಳಿಗೆ ಗುದ್ದಿದ ಮಾತಾಗಲಿಲ್ಲ ಅನ್ನೋ ಸಮಾಧಾನ ಕಂಡಿತು.
ಆದರ ನಾನಿದ್ದದ್ದು ಆತನ ಜಗತ್ತೆಂಬ ಪೋಲೀಸ ಠಾಣೆದಾಗ ಎಂಬುದನ್ನು ಆ ಕ್ಷಣಕ್ಕೆ ಮರತಿದ್ದೆ.
ನಾನು ಯದ್ವಾತದ್ವಾ ಕೈ ತಗೊಂಡಿದ್ದು ಪಕ್ಕಾ ವ್ಯಾಪಾರಿಯಾಗಿದ್ದ ಎಸೈನ ರೇಗಿಸಿತ್ತು. ಒಮ್ಮೆಲೆ ಎಲ್ಲಿತ್ತೋ ಆವೇಷ – ‘ಬದ್ಮಾಷ್’ ಎಂಬ ಪೋಲೀಸ ಭಾಷಾ ಬಳಸಿದ್ದ, ಅದರ ಹಿಂದಕ ಗಿಟ್ಟದ ಲೆಕ್ಕಾಚಾರದ ಜತೀಗೆ ಎಸೈಯ ಅಧಿಕಾರಕ್ಕೆ ಸವಾಲಾದದ್ದು ಆತನಲ್ಲಿ ರೋಷ ಎಬ್ಬಿಸಿತ್ತು. ಕೇಳಿಸಿಕೊಂಡ ಜವಾರಿ ಶಬ್ದ ನನ್ನನ್ನೂ ಕಲಕಿತ್ತು ಎಂದು ಅಲಾಯ್ದ ಹೇಳಾದು ಬೇಕಾಗಿಲ್ಲ.
ಎಸೈ ಭರದಿಂದ ಎದ್ದು ನಿಂತು ಕುರ್ಚಿ ಹಿಂದಕ ದೂಕಿ ‘ಈತನ್ನ ಖಾಲಿ ಸೆಲ್‌ಗೆ ದಬ್ಬಲೇ ಬರಮ್ಯಾ’ ಎಂದು ಅಲ್ಲಿದ್ದ ಸೆಂಟ್ರಿಗೆ ಸಿಟ್ನಿಂದ ಆದೇಶಿಸಿ ಹಣಾಹಣಿಗೆ ಒಲ್ಲದಽ ಹೊರಗ ನಡದಿದ್ದ.
ಎಂದೂ ಅನ್ನಿಸಿಕೊಳ್ಳದ ಮಾತಿಗೆ ಇದ್ದು ಸತ್ತಾಂಗ ಆಗಿ ಕೈಕಾಲು ಉಡಗಿತ್ತು. ಅನಾಮತ್ತು ಎಲ್ಲಾ ಉಪರಾಟೆ ಆದಾಗ ನನ್ನದು ಅವಿವೇಕ ಆತೇನೋ ಅನಿಸಿತು. ಮಗ ನನಗ ಕಾಡಸಾಕಾಗೇ ಸತ್ತಾಂಗಿತ್ತು. ನೀರಿಂದ ಮ್ಯಾಲೆತ್ತಿದ ಮೀನಿನ ಪಾಡು ಆತು…
ಮತ್ತ ಎಸೈ ಸಿಗಲಿಲ್ಲ. ಪೇದೆಗಳು ಆತನ ಆದೇಶ ಪಾಲಿಸೋದು ಬಿಟ್ಟು ಅವ್ರವ್ರ ಕೆಲಸದಾಗ ಬಿದ್ದಿದ್ರು… ಎಸೈನ ದೌರ್ಬಲ್ಯ ನನ್ನ ಅರಿವಿಗೆ ಬಂದಂತೆಲ್ಲಾ ಆತನ ಹಿಂಜರಿಕೆ ನಿಚ್ಚಳಾ ಆಗಿತ್ತು. ಒಟ್ನಾಗ ನಾನು ಈ ವ್ಯವಸ್ಥಾನ ಎದುರಿಸಿಬಿಟ್ಟೀನಿ. ಇನ್ನು ಆದದ್ದಾಗಲಿ ಎಂಬ ಹುಮ್ಮಸ್ಸಿನ ಒಳಗ ಸಾಪಳಿಸುತ್ತಾ ತಲೀಗೆ ಕೈಹಚ್ಚಿ ಕುಂತಿದ್ದೆ.
ಜಮೇದಾರ ಅದೇ ಆಗ ಒಳಗ ಬರತಾನಽ ಸಾಲ ವಸೂಲಿ ಮಾಡಾಕ ಬಂದ ಮಾರವಾಡಿ ತರ ಕಾಣಿಸಿದ. ಬಂದವನಽ ‘ಸಾರು ಹೇಳಿದಾಂಗ ಎಡ್ಜಸ್ಟ ಮಾಡಕೋ ಸಾಮಿ, ನಿನಗ ಬೇಷಿ…’ ಎಂದು ಬಡಬಡಿಸಿದ. ಇದೆಲ್ಲಾ ಮ್ಯಾಲಿನವರ ಅಣತಿ ಇರಬೇಕು. ಯಾಕಂದ್ರ ನಾ ಠಾಣೇಕ ಬಂದಾಗಿಂದ ಇಲ್ದಾತ ಒಮ್ಮೆಲೆ ಕೂಡೋ ಕಳಿಯೋ ಮಾತು ಆಡಿದ್ದ. ಆತ ತುಸ ಅಮಲಿನಾಗ ಇದ್ರೂ ‘ನೀನು ಇನ್ಮ್ಯಾಲ ಯಾತಕೂ ಊರು ಬಿಟ್ಟು ಹೋಗಾಂಗಿಲ್ಲ. ದಿನಾ ಟೇಶನಕ ಬಂದು ಸಹಿಮಾಡಿ ಹೋಗಬೇಕು…’ ಎಂಬಂತೆ ತೆಲುಗು ಮಿಶ್ರಿತ ಕನ್ನಡದಾಗ ಆದೇಶಿಸಿದ. ಮುಚ್ಚಳಿಕೆ ಬರದದ್ದಕ್ಕ ಮಾತಾಡದಽ ರುಜು ಹಾಕಿದೆ.
ಅಲ್ಲಿಂದ ಮೆತ್ತಗ ನನ್ನ ಕೈ ಹಿಡದು ಕುಂತ ಜಮೇದಾರ ‘ಸಾದಿಲ್ವಾರು’ ಹೆಸರೀಲೆ ಇದ್ದ ರೊಕ್ಕನೆಲ್ಲಾ ಬಳಕೊಂಡು ಕೈ ಬಿಟ್ಟ. ಹಂಗಽ ನನಗ ಮನೀಗೆ ಹೋಗಾಕ ಅಪ್ಪಣೀನೂ ಆತು. ಮುರಸಂಜೀಗೆ ನಡಕೋಂತ ಹೋಟೆಲ್ಗೆ ವಾಪಾಸು ಬರಬೇಕಾದ ಹೆಜ್ಜೆಗೂಳು ಒಜ್ಜೀ ಅನಿಸಾಕ ಹತ್ತಿದ್ದವು.
ರಾತ್ರಿ ಎಂಟು ಗಂಟೇಕ ಹೆಣಾ ದವಾಖಾನೀ ಒಳಗ ಕೊಳೀತಿರಬೇಕಾರ ಯಾರೂ ಅಪೇಕ್ಷಿಸಿದ ಒಂದು ವಿಚಾರ ತಿಳಿದು ಬಂತು.
ಬಸ್ಯಾಗ ಆರು ತಿಂಗಳ ಹಿಂದ್ಽ ಮದ್ದಿಲ್ಲದ ರೋಗ ಅಂಟಿಕೊಂಡಿತ್ತು. ಅಂವ ತನ್ನ ಜೊತೆಗಾರಗ ಇದನ್ನ ಗುಟ್ಟಾಗಿ ಇಡಾಕ ಕೇಳಿಕೊಂಡಿದ್ದ. ಹಂಗಾಗಿ ಬಸ್ಯಾನ ದುಡುಕು ಯಾರಿಗೂ ಗೊತ್ತಾಗಿರಲಿಲ್ಲ. ಅವನ ಟ್ರಂಕು ಗೆಬರ್‍ಯಾಡಿ ನೋಡಿದಾಗ ರಕ್ತದ ಪರೀಕ್ಷಾ ವರದಿ ಜೊತೀಗೆ ಅಂವ ಹಿಂದಕ ಎಂದೋ ಬರೆದಿಟ್ಟಿದ್ದ ಪತ್ರ ಸಿಕ್ಕಿತು. ಅವ ಅನುಭವಿಸಿದ ಮಾನಸಿಕ ಹಿಂಸೀ ಜತೀಗೆ ಒಕ್ಕಣೆಯ ಒಟ್ಟಾರೆ ಸಾರಾಂಶ ಹೀಗಿತ್ತು: ‘….ನನ್ನ ತಪ್ಪು ಮಂದಿಗೆ ಗೊತ್ತಾಗಿ ಅಸ್ಪೃಶ್ಯರಾಂಗ ಬಳಲಾಗದ ಈ ಅನಾಥನಿಂದ ಯಾರಿಗೂ ತೊಂದರೀ ಆಗಬಾರದು ಎಂದು ಸಾಯಾಕ ಹೊಂಟೀನಿ. ನನ್ನ ಸಾವಿಗೆ ಯಾರೂ ಕಾರಣಾ ಅಲ್ಲ…’ ಓದಿ ಗಲಿಬಿಲಿ ಆತು. ನನಗಽ ಅರಿವಿಲ್ಲದಾಂಗ ನಿಟ್ಟುಸಿರು ಹೊರಗ ಬಂತು.
*****