Home / ಲೇಖನ / ಪತ್ರ / ಪೂರ‍್ಣಿಮ – ೧

ಪೂರ‍್ಣಿಮ – ೧

ಪ್ರಿಯೆ ಪೂರ‍್ಣಿಮಾ,

ಇಂದು ಮನೆಗೆ ಬಂದಾಗ ೨-೩೦. ಮಧ್ಯರಾತ್ರಿ ಮೀರಿತ್ತು. ಮನೆಯ ದಾರಿಯಲ್ಲಿ ಮಲಗಿದ್ದ ನಾಯಿಗಳು ಬೊಗುಳಿ ನನ್ನ ಸ್ಥಿತಿಯನ್ನು ತೆಗಳುತ್ತಿದ್ದವು. ಮನೆಯ ಮೌನ, ಅದರ ಕಳಾ ಶೂನ್ಯತೆ ಇವು ನನ್ನನ್ನು ಬೆನ್ನು ಹಿಡಿದು ಹಿಂದಕ್ಕೆ ನೂಕುತ್ತಿದ್ದವು. ನಾನು ಅವುಗಳನ್ನು ನೂಕಿಕೊಂಡು ಮನೆಯನ್ನು ಹೊಕ್ಕೆನು.

ಬಂದವನೇ ಹಾಸಿಗೆಯನ್ನು ಆಶ್ರಯಿಸಿದೆನು. ಅದಾದರೂ ಕರುಣೆಯನ್ನು ತೋರುವುದೆಂದು ಆಶಿಸಿದೆನು, ಇಲ್ಲ-ಅದೂ ನಿರ್ದಯವಾಗಿತ್ತು. ನಿದ್ರೆಕೊಡಲಿಲ್ಲ. ನಾಲ್ಕು ಬಡೆಯಲು ಹತ್ತು ನಿಮಿಷಗಳಾದರೂ ಕಣ್ಣನ್ನು ಭದ್ರವಾಗಿ ಮುಚ್ಚಿಕೊಂಡರೂ ಮಪ್ಪುರವೂ ಬರಲಿಲ್ಲ.

ಇಂದು ಒಂದು ರಾತ್ರಿಯೇಕೆ ಪ್ರತಿ ರಾತ್ರಿಯೂ ಇಂತೆಯೇ ಆಗುತ್ತಿದೆ. ನಿನ್ನನ್ನು ನನ್ನ ಮನಸ್ಸಿನ ವಿರುದ್ಧವಾಗಿ ಅನಿವಾರ್ಯವಾಗಿ ಎಳೆದುಕೊಂಡು ಹೋಗಿ ಅಲ್ಲಿಗೆ ಬಿಟ್ಟು ಇಲ್ಲಿಗೆ ಬಂದಾಗಿನಿಂದಲೂ ಇದೇ ಪ್ರಾಯಶ್ಚಿತ್ತ. ಮುಂಜಾನೆ ೧೦ ಘಂಟೆಗೆ ಮನೆಯನ್ನು ಬಿಟ್ಟರೆ ಪುನಃ ಮನೆಗೆ ಬರುವುದು ರಾತ್ರಿ ಎರಡು ಘಂಟೆಗೆ. ನೀನಿಲ್ಲದ ಮನೆ; ಮಕ್ಕಳಿಲ್ಲದ ಮನೆ ನಿಜವಾಗಿ ನಾನು ಈ ಮನೆಗೆ ಇಟ್ಟ ಹೆಸರಿನಂತೆ “ಬೇವಿನ ಮನೆ” (Neem cottage) ಯಾಗಿಯೇ ಇದೆ.

ಎಲ್ಲಕ್ಕಿಂತ ಇಂದಿನ ರಾತ್ರಿ ತೀರ ಹಗಲಾಗಿ ಬಿಟ್ಟಿತು. ಮಲಗುವುದು ಬೇಡವಾಯಿತು. ಎದ್ದು ಕುಳಿತೆನು, ದಿಂಬನ್ನು ಒರಗಿಕೊಂಡೆ. ಒಮ್ಮೆಲೇ ನನ್ನ ನೆನಪಿನ ತೆರೆಯು ತೆರೆಯಿತು. ಮಂಚದಿಂದ ಇಳಿದು ಬಂದು- ನೆನಪಿನ ಒತ್ತಡದಲ್ಲಿ ಲೇಖನಿಯನ್ನು ಹಿಡಿದು ಕುಳಿತಿರುವೆನು.

ಏನನ್ನು ಬರಸುವುದೋ ಬರೆಸಲಿ ಎಂದು ತೆರೆದ ಹೃದಯದಿಂದ ಉಕ್ಕಿ ಬಂದ ಭಾವನೆಗಳ ಬಡಿತದಿಂದ ಸಿದ್ಧನಾಗಿರುವೆನು.

ಪೂರ‍್ಣೀ, ನನ್ನ ಜೀವನವನ್ನು ಪ್ರಯೋಗ ಶಾಲೆಯೆಂಬ ಒಳ್ಳೆಯ ಹೆಸರಿನಿಂದ ಕರೆದುಕೊಳ್ಳುವುದಕ್ಕಿಂತ, ಪ್ರಾಯಶ್ಚಿತ್ತದ ಮಂಟಪವೆಂದು ಕರೆದುಕೊಳ್ಳುವುದು ಸರಿಯಾದೀತು. ಬಾಲ್ಯ, ಯೌವನ, ವೃದ್ಧಾಪ್ಯ, ಬಡತನ, ಸಿರಿತನ, ಸೊಬಗು, ಬೆಡಗು, ಇವೆಲ್ಲವನ್ನೂ ನಲವತ್ತು ವರುಷ ತುಂಬುವುದರಲ್ಲೇ ನುಂಗಿ ನೀರು ಕುಡಿದಿರುವ ನನಗೆ, ಜೀವನ ಬೇಸರವಾಗಿ, ಮರಣವು ಆಪ್ಯಾಯನವಾಗಿದ್ದರೆ ಆಶ್ಚರ್ಯವೇಕೆ? ನೀನು ನಮಗಾಗಿ ಬದುಕಿರಿ ಎಂದೇನೋ ಹೇಳುತ್ತಿರುವಿ ನಿಜ, ನಿನಗಾಗಿ ನಾನು ನನಗಾಗಿ ನೀನು, ನಾನು ಮತ್ತು ನೀನೂ, ಇಬ್ಬರೂ ಮಕ್ಕಳಿಗಾಗಿ ಬದುಕುವುದು ಬದುಕಬೇಕಾದುದು ಸಹಜವೇ ಆದರೂ ನನಗೇಕೆ ಜೀವಿಸಿರ ಬೇಕೆಂಬ ಬಯಕೆಯೇ ಹುಟ್ಟುತ್ತಿಲ್ಲವಲ್ಲ? ಕಷ್ಟಗಳಿಗೆ ಹೆದರುವ ಹೇಡಿತನ ವಿಲ್ಲದಿದ್ದರೂ, ಶಿಕ್ಷೆಗಳಿಗೆ ಬೆದರದ ಎದೆತನವಿದ್ದರೂ, ಈ ಲೋಕವನ್ನು ಕಂಡರೆ ಇಷ್ಟೊಂದು ವ್ಯಾಕುಲವೇಕೆ?

ನನ್ನನ್ನು ಆಡಿಸುವ ವಿಧಿ, ಬರಿಯ ಬಡತನವನ್ನು ಕೊಟ್ಟರೆ ಬೇಡವೆನ್ನುವರಾರು? ಅದರ ಜೊತೆಗೆ ಅಗಲಿಕೆಯನ್ನೂ ಜೋಡಿಸುವನೇಕೆ ? ಹೀಗೆಂದ ಕೂಡಲೇ ಕಾಮ ಜೀವನದ – ಕಾತುರವೆಂದರ್ಥ ಮಾಡುವರು ಮಾಡಿಕೊಳ್ಳಲಿ. ಅವರಿಗೇನು ಗೊತ್ತು, ಪ್ರೇಮದ ಗಾಳಿಯು ತಿಳಿ ಹೃದಯಗಳಲ್ಲಿ ನೀಡುವ ತಂಗಾಳಿಯ ಸೊಗಸು!

ಮದುವೆಯಾಗಿ ಇಂದಿಗೆ ೧೫ ವರುಷಗಳು ಕಳೆದವು. ನೀನು ನಾಲ್ಕು ಮಕ್ಕಳ ತಾಯಿ, ಅಂದಮೇಲೆ ನಾನೂ ನಾಲ್ಕು ಮಕ್ಕಳಿಗೆ ತಂದೆಯಾದೆನಲ್ಲವೆ? ಅನುಭವಿಸಿದ ಕಷ್ಟ ನಿಷ್ಟುರಗಳ ನೆನಪು ಬಂದರೆ ಭಯವಾಗುವುದಿಲ್ಲ. ಬಡತನದ ಭೂತವು ನಾಲ್ಕು ಕೋರೆಗಳನ್ನು ಕಟ್ಟಿಕೊಂಡು ಬಂದರೂ ಅದನ್ನು ದಿಟ್ಟಿಸಿ ನೋಡುವ ದಿಟ್ಟತನವಿದೆ. ಆದರೆ ಬಲವಂತವಾಗಿ, ಇರಬೇಕಾದ ಈ ಅಗಲಿಕೆಯು ನನಗೆ ಶೂಲಕ್ಕೇರಿಸಿದಂತಾಗಿದೆ.

ಜೊತೆಯಲ್ಲಿ ಜೀವಿಸಿರಬೇಕಾದರೆ ಇದೋ ಗುಟುಕುಗಂಜಿ! ಅಗಲಿರ ಬೇಕಾದರೆ, ಹಿಡಿ, ಹಿಡಿಯನ್ನವನ್ನು ಎಂದು ವಿಧಿ ನನ್ನೊಂದಿಗೆ ಚಕ್ಕಂದವಾಡುತ್ತಿರುವನು. ಯಾವುದನ್ನು ಸ್ವೀಕರಿಸಲಿ ಪೂರ‍್ಣಿಮಾ? ಈ ಆಯ್ಕೆಯಲ್ಲಿ ನಿನ್ನದೂ ಪಾತ್ರವಿದೆ. ನಿನಗಾವುದು ಬೇಕೆಂಬುದನ್ನು ತಿಳಿದು ಮಕ್ಕಳೂ ಅರೆಹೊಟ್ಟೆ ಇರಬಲ್ಲಿರೋ, ಅಥವಾ ನನ್ನಿಂದ ದೂರವಿದ್ದು ಹೊಟ್ಟೆ ತುಂಬಿಸಿಕೊಳ್ಳುವಿರೋ. ಗೊತ್ತಿದೆ ಪೂರ‍್ಣಿಮಾ, ನಿನ್ನ ಹೃದಯವೂ ನನಗೆ ಗೊತ್ತಿದೆ. ನಿನ್ನ ಬಯಕೆಯೂ ತಿಳಿದಿದೆ; ನಿನಗೆ ನಾನು ಬೇಕು, ಮತ್ತು ಹೊಟ್ಟೆ ತುಂಬುವಷ್ಟು ಅನ್ನ ಮೈದುಂಬುವಷ್ಟು ಅರಿವೆ ಬೇಕು. ಪಾಪ, ಇದೇನು ನೀನು ಬೇಡಬಾರದ ಆಸೆಯೆ? ಇರಬಾರದ ಇಚ್ಛೆಯೇ? ಆದರೆ ನನ್ನ ವಿಧಿಯ ಇಚ್ಛೆಯೇ ಬೇರೆಯಾಗಿರುವಾಗ, ಅವನಿಗೆದುರು ಗೊಣಗುಟ್ಟಲು ನಾವೆಷ್ಟರವರು.

ನನ್ನ ಎದೆಯೊಡತಿ, ನಾನು ನಿಶ್ಚಯಿಸಿರುವೆನು ಎಲ್ಲವನ್ನೂ ಮರೆತು ಎಲ್ಲರನ್ನೂ ಬಿಟ್ಟು ಬರಿಯ ದುಡಿತವನ್ನೇ ಶರಣು ಹೋಗಬೇಕೆಂದು. ದುಡಿತದಲ್ಲಿ ಬಳಲಿಕೆ ಕಂಡರೂ, ಬವಣೆಯ ಭಯವು ಕಾಣುತ್ತಿಲ್ಲ. ನಾಳೆ ನನ್ನ ಮಕ್ಕಳಿಗೆ ಏನು ಗತಿ ಈ ದುರ್ಭಿಕ್ಷದಲ್ಲಿ ಎಂಬ ಕಳವಳವನ್ನು ನನ್ನಿಂದ ದೂರಾಗಿಸುವ ಈ ನನ್ನ ಕೆಲಸವೇ ನನಗೆ ಬೆಳದಿಂಗಳ ಜೊತೆಗಾತಿ. ಮಲಗುವಾಗ ಏಳುವಾಗ ಸಣ್ಣ ದನಿಯಲ್ಲಿ ಕಣ್ಣು ಕುಣಿಸುತ್ತ ಇನ್ನು ಮಲಗಿರಿ, ಇನ್ನು ಏಳಿ, ಎಂದು ವೈಯಾರದಿಂದ ಸಂಧ್ಯಾರಾಗ, ಉದಯರಾಗಗಳನ್ನು ಹಾಡುವ ನನ್ನ ಎಡಬಲದ ವೈಯ್ಯಾರಿ ಈ ನನ್ನ ಹಗಲು ರಾತ್ರಿಯ ಕೆಲಸವೇ ಆಗಿದೆ.

ನನ್ನ ಕೆಲಸ, ನನ್ನ ದುಡಿತ, ನನ್ನ ಕಸುಬು ಇವು ನಿನಗೆ ಸವತಿ ತಿಳಿಯಿತೆ? ಸರಿಯಾದ ಹೋಲಿಕೆಯನ್ನು ಕೊಟ್ಟಂತಾಯಿತಲ್ಲವೆ ಲೋಕದವರ ಕಡೆಗೆ ಕೈ ತೋರಿಸಬೇಡ. ಅವರಂತೆ ಪಾಪ-ತಾಪಗಳಿಗೆ ಪುರೋಹಿತರಿಗೆ ದಕ್ಷಿಣೆ ಕೊಟ್ಟು ಅವರಿಂದ ಪುಣ್ಯಾರ್ಚನೆ ಮಾಡಿಸಿ ಪರಿಶುದ್ಧಿಗೊಳಿಸುವ ಶಕ್ತಿ ಅಥವಾ ಯುಕ್ತಿ ನನ್ನಲ್ಲಿ ಇಲ್ಲ. ದಕ್ಷಿಣೆಯ ಬಲವೂ ಇಲ್ಲ! ಪುರೋಹಿತರ ಒಲವೂ ಇಲ್ಲ. ನನಗಿರುವುದು ನಿನ್ನ ಮತ್ತು ನಿನ್ನ ಸವತಿಯ ಒಲವು. ಕೂಡಲೇ ಉತ್ತರ ಬರೆಯುವೆಯಲ್ಲವೆ.

ಹೂಬಳ್ಳಿ ಇತಿ ನಿನ್ನ ಚೆನ್ನ,
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...