ದಾಲೂರಪ್ಪ, ಇದು ಆತನ ಹೆಸರು. ಆದರೆ ಇದು ಆತನ ನಿಜ ಹೆಸರಲ್ಲ. ದಾಲೂ ಎಂಬ ಮಗ ಆತನಿಗಿದ್ದ. ಆತನ ಹೆಸರು ನನಗೆ ಇಂದಿಗೂ ಗೊತ್ತಿಲ್ಲ. ನಾನು ಸೇರಿದಂತೆ ನನ್ನ ಅಕ್ಕ, ತಮ್ಮ, ಅವ್ವೆ ಎಲ್ಲರೂ ಆತನನ್ನ ಕರೆಯುವುದು ದಾಲೂರಪ್ಪ ಎಂದು. ದಾಲೂನ ಅಪ್ಪ ’ದಾಲೂರಪ್ಪ’ ಎಂದು ನಾವು ಸರಳವಾಗಿ ಕರೆಯಲಾರಂಭಿಸಿದೆವು. ನಾನಾಗ ಏಳನೇ ತರಗತಿಯಲ್ಲಿದ್ದೆ. ಆಗ ಆತ ನನ್ನಜ್ಜಿ ಊರಾದ ಗಂಗಾವತಿಯಿಂದ ಇದ್ದಕ್ಕಿದ್ದಂತೆ ಹೊರಟು ಬಂದಿದ್ದ. ಆತನ ಬಗ್ಗೆ ನನಗೆ ತಿಳಿದದ್ದು ನನ್ನ ದೊಡ್ಡಮ್ಮನ ಮಗಳು ಲಕ್ಷ್ಮಿ ಯಿಂದ. ಆತನ ಹೆಸರನ್ನ ಕೇಳಬೇಕೆಂದಾಗಲಿ, ತಿಳಿದುಕೊಳ್ಳಬೇಕೆಂಬ ಹಂಬಲವಾಗಲಿ ನನ್ನಲ್ಲಿ ಬರಲೇ ಇಲ್ಲ.
ಈ ದಾಲೂರಪ್ಪ ತುಂಬಾ ಪ್ರೀತಿಸುತ್ತಿದ್ದ ಹೆಂಡತಿ ಇದ್ದಳು ಎಂದು ಒಮ್ಮೆ ಲಕ್ಷ್ಮಿ ಹೇಳಿದ್ದು ನೆನಪಿದೆ. ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ದಿನಗಳಲ್ಲಿ ನನಗೆ ಒಂದು ದಿನ ಯಾಕೋ ದಾಲೂರಪ್ಪನ ನೆನಪು ಒತ್ತರಿಸಿ ಬರತೊಡಗಿತ್ತು. ಕಾಲೇಜಿನ ದಿನಗಳಲ್ಲಿ ರಜೆ ಸಿಕ್ಕಾಗಲೆಲ್ಲಾ ಹಳ್ಳಿಗೆ ಹೋಗುತ್ತಿದ್ದ ನನಗೆ ದಾಲೂರಪ್ಪ ತೋರಿಸುತ್ತಿದ್ದ ಪ್ರೀತಿ ಅಚ್ಚರಿ ಹುಟ್ಟಿಸುತ್ತಿತ್ತಲ್ಲದೆ, ಮನುಷ್ಯನ ಮಾನವೀಯತೆಯ ಮುಖ ಅಂದ್ರೆ ಹೀಗೆ ಇರುತ್ತದೆ ಎಂದು ಅನ್ನಿಸುತ್ತಿತ್ತು. ಯಾವ ಸಂಬಂಧವೂ ಇಲ್ಲದ ದಾಲೂರಪ್ಪ ಸಂಬಂಧ ನಮ್ಮ ಮನೆಗೆ ಅಂಟಿದ ಬಗೆ ಸಹ ವಿಚಿತ್ರ ಅನ್ನಿಸತೊಡಗಿತು. ಯಾವ ಸಂಬಂಧಿಕರೂ ನಮ್ಮನ್ನು ದಾಲೂರಪ್ಪನ ರೀತಿ ಹಚ್ಚಿಕೊಂಡಿರಲಿಲ್ಲ. ಎಲ್ಲಾ ಸಂಬಂಧಗಳನ್ನು ಮುರಿದುಬಂದ ದಾಲೂರಪ್ಪ ನಮ್ಮ ಮನೆಯಲ್ಲಿ ಬೆಸೆದುಕೊಂಡ ರೀತಿ ಅನನ್ಯವಾಗಿತ್ತು. ದಾಲೂರಪ್ಪ ಆಗಾಗ ಹೇಳುತ್ತಿದ್ದ ಜೀವನ ಸಿದ್ಧಾಂತ ಯೋಚಿಸುವಂತೆ ಮಾಡುತ್ತಿತ್ತು.
’ನೀಲಾ…. ಹೆಂಡತಿ, ಮಕ್ಕಳು ಎಂಬುದು ಎಲ್ಲಾಸುಳ್ಳು. ಸಂಸಾರ ಎಂಬುದು ಎಲ್ಲಾ ಸುಮ್ನೆಯೇ. ನಿಮಗೆ ನೀವೇ, ನನಗೆ ನಾನೇಯಾ’ ಎಂದು ದಾಲೂರಪ್ಪ ಹೇಳುತ್ತಿದ್ದ ತಾತ್ವಿಕತೆ,’ ನಾ ಸತ್ತರೆ ನನ್ನ ಹೆಣನಾ ಊರಿಗೆ ಕಳ್ಸಬೇಡಿ. ನೀವೇ ಸುಟ್ಟುಹಾಕಿ. ನಾ ಯಾವಾಗಲೂ ನಿಮ್ಗೆ ಋಣಿಯಾಗಿರ್ತೇನೆ…. ನಾ ಸತ್ತ ಸುದ್ದಿಯನ್ನು ನನ್ನ ಮಕ್ಕಳಿಗೆ ತಿಳಿಸಬೇಡಿ…. ’ಎಂಬ ಮಾತುಗಳು ದಾಲೂರಪ್ಪನ ನೋವು, ನಿರಾಶೆಗಳನ್ನು ಸಾರುವಂತಿದ್ದವು.
ಆರು ಅಡಿ ಎತ್ತರದ ಅಜಾನುಬಾಹು ದಾಲೂರಪ್ಪಗೆ ಇದ್ದುದು ಒಂದೇ ಚಟ. ಬೀಡಿ ಸೇದುವುದು. ತಾನೇ ಸಂಗ್ರಹಿಸಿದ ಕಾಡಿನ ಎಲೆಯ ಸುಳಿ ಸುತ್ತಿ ತುಂಬಾಕು ತುಂಬಿ ದಿನಕ್ಕೆ ಒಮ್ಮೆ ಹೊಗೆ ಬತ್ತಿ ಸೇದಿದರೆ ಆತನಿಗೆ ಅದೇ ಸ್ವರ್ಗ. ಆಗಾಗ ಹೋಟೆಲ್ ತಿಂಡಿಗೂ ಆತ ಅಂಟಿಕೊಂಡಿದ್ದುಂಟು. ಖಾಂದಾ ಬಜಿ, ಲಾಡೂ ಎಂದ್ರೆ ದಾಲೂರಪ್ಪಗೆ ಎಲ್ಲಿಲ್ಲದ ಪ್ರೀತಿ. ಇದ್ದ ಎರಡು ಜೊತೆ ಪಂಚೆಯನ್ನೇ ಶುಭ್ರವಾಗಿ ಹರಿವ ತೊರೆಯಲ್ಲಿ ತೊಳೆದುಕೊಂಡು ತೊಡುವ ದಾಲೂರಪ್ಪ ಚೊಕ್ಕಟ ಮನುಷ್ಯ. ದಾಲೂರಪ್ಪ ಆಗಿನ ಕಾಲಕ್ಕೆ ಅಕ್ಷರ ಕಲಿತಿದ್ದ. ಮಿಲಿಟಿರಿ ಸೇರುವ ಆತನ ಆಸೆ ಕೊನೆಗೂ ಈಡೇರಲಿಲ್ಲ ಎಂಬ ಕೊರಗು ಆತನಿಗಿತ್ತು. ಯಾವಾಗಲಾದರೂ ಮಾತಿಗೆ ಮಾತು ಬಂದಾಗ ಆತ ಶಾಲೆಗೆ ಹೋದ ದಿನಗಳನ್ನು ಮತ್ತು ಮಿಲಿಟರಿ ಸೇರಬೇಕೆಂಬ ಕನಸನ್ನು ಹೇಳಿಕೊಳ್ಳುತ್ತಿದ್ದುದು ಸಹಜವಾಗಿತ್ತು. ಹೇಳಿದ್ದನ್ನೇ ಎಷ್ಟು ಸಲ ಈ ದಾಲೂರಪ್ಪ ಹೇಳುತ್ತಾನೆ ಎಂದಿನಿಸಿದರೂ ಆತನ ಮುಗ್ಧತೆ , ನೆನವರಿಕೆಗಳು ಎಂದೂ ಬೇಸರ ತರಸಿರಲಿಲ್ಲ.
ಎಲ್ಲವೂ ಸರಿಯಾಗಿ ನಡೆದಿರುವ ವೇಳೆ ಇದ್ದಕ್ಕಿದ್ದಂತೆ ಹೆಂಡತಿ ಬದುಕನ್ನು ಒಡೆದಾಗ ದಾಲೂರಪ್ಪ ಏನು ಮಾಡಬೇಕೆಂಬುದು ತಿಳಿಯದೇ ಕಂಗಾಲಾಗಿದ್ದ. ಮದುವೆಯಾದ ಪ್ರೀತಿಯ ಹೆಂಡತಿ ಬೇರೆಯವನೊಂದಿಗೆ ಓಡಿಹೋದಾಗ ದಾಲೂರಪ್ಪ ಭೂಮಿಗೆ ಕುಸಿದಿದ್ದ. ಎರಡು ಮಕ್ಕಳನ್ನು ಹೆತ್ತ ನಂತರವೂ ಆಕೆಯ ವ್ಯಾಮೋಹ ಕಂಡ ದಾಲೂರಪ್ಪ ತೀವ್ರ ನಿರಾಶೆ ಅನುಭವಿಸುದ್ದ.
ಪ್ರೀತಿಯ ಮಕ್ಕಳನ್ನು ದೂರಮಾಡಿ, ಪತ್ನಿ ಸಹ ದುರವಾಗಿದ್ದಳು. ಗೋಕರ್ಣದ ಬೀಚ್ ಬಂಕಿಕೊಡ್ಲ, ಗಂಗಾವಳಿಯಲ್ಲಿನ ತನ್ನ ಬಾಲ್ಯ ಮತ್ತು ಯೌವ್ವನದ ದಿನಗಳನ್ನು ಕಳೆದಿದ್ದ ದಾಲೂರಪ್ಪ ತನ್ನ ಪತ್ನಿ ಎಂಬುವವಳು ನೀಡಿದ ಅಘಾತದಿಂದ ಊರನ್ನೇ ತೊರೆದು ಬಂದವನು ಮತ್ತೆ ಆ ಕಡೆಗೆ ಮುಖ ಮಾಡಿರಲಿಲ್ಲ. ಇಂಥ ಆಕರ್ಷಕ ಮನುಷ್ಯನನ್ನು ಆತನ ಹೆಂಡತಿ ಯಾಕೆ ಬಿಟ್ಟು ಹೋದಳು ಎಂಬುದೇ ದೊಡ್ಡ ಒಗಟಾಗಿತ್ತು ನನಗೆ. ಈ ಒಗಟನ್ನು ದಾಲೂರಪ್ಪನಿಂದ ಬಿಡಿಸಲು ನನಗೆ ಸಾಧ್ಯವಾಗಿರಲಿಲ್ಲ.
ಒಂದು ದಿನ ಹೀಗಾಯ್ತು; ರಜೆಯ ದಿನಗಳಲ್ಲಿ ನಾನು ಹಿತ್ಲೋಳಿ ಕಡೆಗೆ ತಿರುಗಾಡಲು ಹೋಗಿದ್ದ ಸಮಯ. ದಾಲೂರಪ್ಪ ತರಕಾರಿ ಗಿಡಗಳಿಗೆ ನೀರುಣಿಸುತ್ತಿದ್ದ. ನನ್ನನ್ನು ಕಂಡವನೇ ಮಾತಿಗಿಳಿದ. ಅದು ಇದು ಮಾತನಾಡುತ್ತಿದ್ದಾಗ ತನ್ನ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟ…..
ಬಡತನವನ್ನೇ ಹೊದ್ದು ಮಲಗಿದಂತಿದ್ದ ಜೋಪಡಿಯ ಕಿಂಡಿಯಿಂದ ಬೆಳಕು ದಾಲೂರಪ್ಪನ ಮುಖದ ಮೇಲೆ ರಾಚಿತು. ಪಕ್ಕದಲ್ಲೇ ಮಲಗಿದ್ದ ಬೊಮ್ಮಿ ಆಗಲೇ ಎದ್ದು ಹೋಗಿದ್ದಳು. ಚಹಾಕ್ಕೆ ಒಲೆ ಹೊತ್ತಿಸುತ್ತಿರಬೇಕೆಂದುಕೊಂಡ ಮನದಲ್ಲೇ.
ಹಾಗೆ ಮಗ್ಗಲು ಹೊರಳಿಸಿದ, ನಿನ್ನೆ ದಿನ ಒಡೆಯ ಗಣಪಯ್ಯ ಹೆಗಡೆಯವರ ತೋಟದಲ್ಲಿ ತೆಂಗಿನಮಗಳನ್ನು ಏರಿ ಒಣಗಿದ ಗರಿಗಳನ್ನೆಲ್ಲಾ ಕೆಳಕ್ಕೆ ಕೆಡವಿ ಮರಗಳ ಉಸಿರಾಟಕ್ಕೆ ಸರಳ ಮಾಡಿಕೊಟ್ಟಿದ್ದ. ಎಂಥ ಎತ್ತರಕ್ಕೆ ಬೆಳೆದ ಮರಗಳು. ಗಂಗಾವಳಿ ನದಿಯ ಬದಿಯ ಫಲವತ್ತಾದ ಮಣ್ಣಲ್ಲಿ ಬೇರಿಳಿಸಿ ಅಗಸದೆತ್ತರಕ್ಕೆ ಬೆಳೆದಿದ್ದವು. ಗಣಪಯ್ಯ ಹೆಗಡೆಯವರ ಈ ತೋಟದ ತೆಂಗಿನ ಮರಗಳಂತೆ ಗಂಗಾವಳಿ ಸೀಮೆಯಲ್ಲಿ ಬೇರೆ ಯಾರ ತೋಟದ ತೆಂಗಿನ ಮರಗಳೂ ಬೆಳೆದಿರಲಿಲ್ಲ. ನಿನ್ನೆ ಇಡೀ ದಿನ ತೋಟದ ಕೆಲಸ ಮಾಡಿಬಂದಿದ್ದ ದಾಲೂರಪ್ಪ ಇಂದು ಮೈಕೈ ಯಾಕೋ ನೋಸಿದಂತಾಗಿ ಕೊಂಚ ಹೆಚ್ಚಿಗೆ ನಿದ್ದೆಮಾಡಿದ್ದ.
ದಾಲೂರಪ್ಪ ಎಂದೂ ಹಾಸಿಗೆಯಲ್ಲಿ ಬೆಳಕು ಮೂಡುವವರೆಗೆ ಮಲಗಿದವನೇ ಅಲ್ಲ. ಸೂರ್ಯ ಹುಟ್ಟುವ ಮೊದಲೇ ನದಿಯ ಕಡೆಗೆ ಹೋಗಿಬಂದು ಬೊಮ್ಮಿ ಮಾಡಿದ ತಣ್ಣಿಗಂಜಿ ಕುಡಿದು ಒಡೆಯರ ಕೆಲಸಕ್ಕೆ ತೆರಳಿದನಂದರೆ ಮತ್ತೆ ಮನೆ ಸೇರುತ್ತಿದ್ದುದು ರಾತ್ರಿಯೇ. ಒಡೆಯರು ’ನಾಳೆ ಬೇಗ ಬಾರೋ, ಮಳೆಬರೋಹಂಗ ಕಾಣ್ತದೆ…… ತೋಟ ಹದ ಮಾಡಿ, ಗೊಬ್ರ ಹಾಕೋದಿದೆ. ಭತ್ತದ ಬೀಜ ಚೆಲ್ಲಲು ಮಡಿಬೇರೆ ಮಾಡಬೇಕಿದೆ….’ ಎಂದು ಹೇಳಿದ್ದು ದಾಲೂರಪ್ಪಗೆ ನೆನಪಾಯ್ತು. ಒಡೆಯರು ಬೈತಾರೇನೋ ಎಂಬ ಅಳುಕಿನಿಂದ ಮೇಲೇಳಬೇಕೆಂದ್ರೆ ಬೊಮ್ಮಿ ಚಹಾ ತರಲಿಲ್ಲ. ಎಲ್ಲಿ ಹೋದಳು ಬೊಮ್ಮಿ’ ಎಂದು ಯೋಚಿಸತೊಡಾಗಿದ. ಹಾಸಿಗೆಯಿಂದ ಮೇಲೆದ್ದವನೆ ಗುಡಿಸಲಲ್ಲೇ ಅಡಿಗೆ ಮಾಡುತ್ತಿದ್ದ ಮೂಲೆಗೆ ನುಗ್ಗಿದ. ಬೊಮ್ಮಿ ಅಲ್ಲಿರಲಿಲ್ಲ. ಎಲ್ಲಿ ಹೋದಳು ಎಂದು ಮನೆಯ ಹಿತ್ತಲೂ ಸೇರಿದಂತೆ ಎಲ್ಲ ಕಡೆ ಹುಡುಕಾಡಿದ. ಬೆಳಿಗ್ಗೆಯೇ ಬೊಮ್ಮಿ ಕಾಣೆಯಾಗಿದ್ದಾಳೆ! ದಾಲೂರಪ್ಪಗೆ ಏನ ಮಾಡ್ಬೇಕೆಂದು ತೋಚದಾಯಿತು….
ಒಡೆಯರ ಮನೆಕೆಲಸಕ್ಕೆ ಅಂದು ಹೋಗಲು ಮನಸ್ಸಾಗಲಿಲ್ಲ. ಮನೆಗೆಲಸಕ್ಕೆ ಹೋಗುತ್ತಿದ್ದ ಸರಸಕ್ಕನ ಮನೆಕಡೆಗೆ ಸಹ ಹೋಗಿಬಂದ. ಬೊಮ್ಮಿ ಅಲ್ಲಿಯೂ ಇರಲಿಲ್ಲ. ಸರಸಕ್ಕ ಮನೆಯಿಂದ ಬರುವಾಗ ಗೌಡರ ಓಣಿಕಡೆಯಿಂದ ದಾಲೂರಪ್ಪ ಬಂದ. ಈರಾ ಮನೆ ಬೀಗ ಹಾಕಿದ್ದು ಕಾಣಿಸಿತು. ಈರಾ ಎಲ್ಲಿಗೆ ಹೋದ. ಮೊನ್ನೆ ತಾನೆ ಮನೆಗೆ ಬಂದವನು ಅದು ಇದು ಮಾತನಾಡಿ ಬೊಮ್ಮಿಯ ಹತ್ತಿರವೂ ಎಂದಿನಂತೆ ಮಾತಾಡಿ ಹೋಗಿದ್ದ. ದಾಲೂರಪ್ಪನ ಮನದಲ್ಲಿ ಏನೋ ಕೊರೆದಂತೆ ಆಗತೊಡಗಿತು. ವೇಗವಾಗಿ ಮನೆಯತ್ತ ಹೆಜ್ಜೆ ಹಾಕಿದ. ಹಾಸಿಗೆ ಯಲ್ಲಿದ್ದ ಮಕ್ಕಳು ಅಳತೊಡಗಿದ್ದವು. ಮಕ್ಕಳನ್ನು ಸಂತೈಸಿದ ದಾಲೂರಪ್ಪ ಮನೆಯಲ್ಲಿದ್ದ ತಂಗಳು ಕೂಳನ್ನು ಮಕ್ಕಳಿಗೆ ನೀಡಿ, ಮತ್ತೆ ಯೋಚಿಸಿದೆ. ಈರ ಮನದಲ್ಲಿ ಸುಳಿಯತೊಡಗಿದ. ಸಂಜೆತನಕ ಮನೆಯಲ್ಲಿ ಕುಳಿತಿದ್ದ ದಾಲೂರಪಗೆ ಓಣಿಯಲ್ಲಿಯ ಮಾತುಗಳು ಕಿವಿಗೆ ಬೀಳತೊಡಗಿದವು.
’ಬೊಮ್ಮಿ ಈರನೊಂದಿಗೆ ಓಡಿಹೋದಳಂತೆ’ ಎಂಬ ಮಾತುಗಳು ಕಿವಿಯನ್ನು ಹೊಕ್ಕುತ್ತಿದ್ದಂತೆ… ಸಮುದ್ರದ ರುದ್ರ ಅಲೆಗಳ ಹೊಡೆತಕ್ಕೆ ದೋಣಿ ಸಿಲುಕಿದಂತಾಯ್ತು. ಜಲಪಾತ ಬಳಿ ಪ್ರಪಾತಕ್ಕೆ ಜಾರಿ ಬಿದ್ದಂತ ಸ್ಥಿತಿ ದಾಲೂರಪ್ಪನದಾಯ್ತು. ಗ್ರಾಮದ ಕಟ್ಟೆಯ ಬಳಿಯ ದೆವ್ವ ಗಾತ್ರದ ಆಲದ ಮರ ಮುಂಗಾರಿನ ಮೊದಲ ದಿನವೇ ಇಬ್ಬಾಗವಾಗಿ ಉರುಳಿ ಬಿದ್ದದ್ದು ಕಣ್ಮುಂದೆ ಸುಳಿಯುತು. ದಾಲೂರಪ್ಪ ಕುಸಿಯತೊಡಗಿದ್ದ. ತನ್ನ ಮದ್ವೆಗೂ ಮುಂಚೆ ಈರಾ ಬೊಮ್ಮಿ ಪರಸ್ಪರ ಪ್ರೀತಿಸುತ್ತಿದ್ದುದನ್ನು ಕಡೆಮನೆಯ ಗೋವಿಂದ ಹೇಳಿದ್ದು ನೆನಪಾಯ್ತು.
ಹೀಗೆ ಮಾತ್ಗೆ ಮಾತು ಬಂದಾಗ ಗೋವಿಂದ ಹೇಳಿದ್ದ ’ಬೊಮ್ಮಿ ಭಲೇ ಹೆಂಗ್ಸು. ಅವ್ಳ ಯೌವ್ವನದಾಗ ಈರ ಬಿದ್ದಿದ್ನೇನೋ… ಅಂತ ಚೆಲ್ವಿ ಆಕೆ. ನೀನೇ ಬಲು ಅದೃಷ್ಟವಂತ ಬಿಡು… ಗೋವಿಂದನ ಮಾತಲ್ಲಿ ವ್ಯಂಗ್ಯ ಮತ್ತು ಅಸೂಯೆ ಎರ್ಡು ಇತ್ತು. ಸಲುಗೆಯೂ ಇತ್ತು. ದಾಲೂರಪ್ಪ ಮೇಲೆ ಗೋವಿಂದನ ಮಾತುಗಳು ದಾಳಿಮಾಡತೊಡಗಿದವು. ಮುರು ಮಕ್ಕಳಾದ ಮೇಲೂ ಈರನ ಬಗ್ಗೆ ಬೊಮ್ಮಿಗೆ ಉಳಿದ ಆಸೆ, ಈರ ಮದ್ವೆಯಾಗದಿದ್ದುದು ಎಲ್ಲವೂ… ಒಮ್ಮಿ ಇದ್ದಕ್ಕಿದ್ದಂತೆ ಕಾಣೆಯಾದದಕ್ಕೆ ತಳುಕು ಹಾಕಿಕೊಳ್ಳತೊಡಗಿದವು. ಕಾಮ ಎಂಬುದು ಬಿಡಿಸಲಾಗದ ಒಗಟು ಎಂದು ಭಾಗವತರು ಯಕ್ಷಗಾನ ಪ್ರಸಂಗದ ವೇಳೆ ವಿವರಣೆ ನೀಡಿದ್ದು ಗುಂಯ್ಯಗುಡತೊಡಗಿತು. ’ಕಳ್ಳ ಮುಂಡೇಮಗ, ಎಷ್ಟು ದಿನದಿಂದ ಹೊಂಚು ಹಾಕಿದ್ದನೇನೋ’ ಎಂದು ಮನದಲ್ಲೇ ಕುದಿಯ ತೊಡಗಿದ. ಸಿದ್ದಾಪುರದಲ್ಲಿ ಈರನಿಗೆ ಇದ್ದ ಅಂಗಡಿ ಮತ್ತು ಮನೆಯ ತೋಟದ ಒಡೆತನ ಬೊಮ್ಮಿಯನ್ನ ಆಕರ್ಷಿಸಿರಲು ಸಾಕು ಎಂದು ತರ್ಕಿಸತೊಡಗಿದ. ಮನಸ್ಸು ಕುದಿವ ಗಂಜಿಯನ್ನು ಅಡಗಿಸಿಕೊಂಡ ಮಡಿಕೆಯಾಗಿತ್ತು. ನಂತರ ಎಲ್ಲವೂ ಹೊಳೆಯತೊಡಗಿತು….
ಮರುದಿನದ ಹೊತ್ತಿಗೆ ಬೊಮ್ಮಿ ಓಡಿಹೋದ ಸುದ್ದಿ ಊರೆಲ್ಲಾ ಗುಲ್ಲಾಯ್ತು. ಮಕ್ಕಳು ಅಳತೊಡಗಿದವು. ಊರಲ್ಲಿ ತಿರುಗಾಡುವುದೆಂತು ಎಂದು ದಾಲೂರಪ್ಪ ಚಿಂತೆಗೊಳಗಾದ. ಒಡೆದೀರು ಎಲ್ಲಾ ತಿಳ್ಕೋತಾರೆ. ಆದರೆ ಜಾತಿ ಬೋಳಿಮಕ್ಕಳ ಚುಚ್ಚು ಮಾತು ಕೇಳುವುದೇ ಅಸಹನೆಯ ವಿಷಯವಾಗಿತ್ತು.
ದಾಲೂರಪ್ಪ ಸಂಬಂಧಿಕರನ್ನು ಕರೆತಂದು ಮಕ್ಕಳನ್ನು ಸಂತೈಸಿ ಸಾಕಲು ನಿರ್ಧರಿಸಿದ. ಮನಸನ್ನು ಕಲ್ಲುಬಂಡೆ ಮಾಡಿಕೊಂಡ. ಒಂದು ವಾರದ ಹೊತ್ತಿಗೆ ಬೊಮ್ಮಿ ಈರನ ಜೊತೆ ಸಿದ್ದಾಪುರದಲ್ಲಿ ಇರುವ ಸುದ್ದಿ ಗಂಗಾವಳಿಯನ್ನ ತಲುಪಿತು. ಬೊಮ್ಮಿಯನ್ನ ಕರೆತರುವ ಗೋಜಿಗೆ ದಾಲೂರಪ್ಪ ಮನಸ್ಸು ಮಾಡಲಿಲ್ಲ. ಬದುಕು ಎಂದಿನಂತೆ ಉರುಳುತೊಡಗಿತು….
***
ಈರಾ – ಬೊಮ್ಮಿ ಹೊಸ ಮದುಮಕ್ಕಳಂತೆ ಬಾಳತೊಡಗಿದರು. ಹೊರಜಗತ್ತಿಗೆ ಇದೊಂದು ಹಾದರದ ಸಂಬಂಧವಾದರೂ, ಯಾವ ಸುಖ ದಂಪತ್ಯಕ್ಕೂ ಕಡಿಮೆಯಿಲ್ಲದಂತೆ ಅವರು ಬದುಕು ಪ್ರಾರಂಭಿಸಿದರು. ಬೊಮ್ಮಿ ಹುಲ್ಲು ಹೊರೆತಂದು, ದನಗಳನ್ನು ಸಾಕಿ, ಹಾಲು ಮಾರಿ, ಸರಸಕ್ಕನ ಮನೆಯ ಮುಸುರೆ ತೊಳೆದು ಬದುಕಿದ ದಿನಗಳನ್ನು ಮರೆತು ಬಿಟ್ಟಿದ್ದಳು. ಈರಾ ಆಕೆಯ ಬದುಕಿನ ಸಾಮ್ರಾಜ್ಯದ ಒಡೆಯನಾಗಿದ್ದ. ಈರನ ಅಪ್ಪ ಸತ್ತು ಬಹು ದಿನಗಳೇ ಉರುಳಿದ್ದವು. ಈರನ ಅವ್ವೆ ಚಿಕ್ಕ ವಯಸ್ಸಿನಲ್ಲೇ ತೀರಿಹೋಗಿದ್ದಳು. ಅಪ್ಪ ಮಾಡಿಟ್ಟ ಆಸ್ತಿಯನ್ನು ಈರ ಉಳಿಸಿಕೊಂಡಿದ್ದ. ಸಿದ್ದಾಪುರ ದೇವಿಕೆರೆಯ ಮುಖ್ಯ ರಸ್ತೆಯಲ್ಲೇ ಅಂಗಡಿಯಿಟ್ಟಿದ್ದ. ಸಾಕಷ್ಟು ವ್ಯಾಪಾರ ವಹಿವಾಟು ಆಗುತ್ತಿದ್ದರಿಂದ ಹಣಕ್ಕೆ ಕೊರತೆಯಿರಲಿಲ್ಲ. ಮದುವೆಯೂ ಆಗದ ಈರಾ ಪ್ರೀತಿಸಿದವಳನ್ನು ಮೂರು ಮಕ್ಕಳಾದ ನಂತರವೂ ಹಾರಿಸಿಕೊಂಡು ಬಂದಿದ್ದ. ಅಂಥ ಗಾಢತೆ ಅವಳ ಪ್ರೀತಿಗಿತ್ತು. ಈರನಗಾಗಿ ಮಕ್ಕಳು, ಗಂಡನನ್ನೇ ಮರೆತ ಬೊಮ್ಮಿ ಆತನೊಡನೆ ಅನ್ಯೋನತೆಯಿಂದಿದ್ದಳು.
ಹದಿನೈದು ವರುಷಗಳು ಉರುಳಿದ್ದೇ ಗೊತ್ತಾಗಲಿಲ್ಲ. ಕಾಲ ತನ್ನ ಪಯಣವನ್ನು ಮುಂದುವರಿಸಿತ್ತು. ಕಾಲನ ಕರೆಗೆ ಓಗೊಟ್ಟ ಈರಾ ಕಣ್ಮುಚ್ಚಿದ. ಈರಾನ ಸಾವಿನನಂತರ ಒಂದು ವರ್ಷ ಸಿದ್ದಾಪುರದಲ್ಲಿ ಕಳೆದ ಬೊಮ್ಮೆ ಈರನ ಆಸ್ತಿಯನ್ನೆಲ್ಲಾ ಮಾರಿ ಗಂಗಾವಳಿಗೆ ಮರಳಿಬಂದಳು.
***
ಬೊಮ್ಮಿಯ ಮೂರು ಮಕ್ಕಳಲ್ಲಿ ಕೊನೆಯವಳಾಗಿದ್ದ ಸೋಮಿ ಮದುವೆಗೆ ಬಂದಿದ್ದಳು. ಸೋಮಿಗೆ ತನ್ನ ಅವ್ವೆ ಬಂದ ಸುದ್ದಿ ಗಂಗಾವಳಿಯಲ್ಲಿ ಹರಡುತ್ತಿದ್ದಂತೆ ನೋಡುವ ಕಾತುರವೂ ಹೆಚ್ಚಿತು. ಹೆಗರೆ ಹತ್ತಿರದ ಮನೆಕಡೆಗೆ ಆಕರ್ಷಣೆ ಬೆಳಿಯತೊಡಗಿತು. ಹೆಗರೆ ಬಳಿ ಬೊಮ್ಮಿಯ ತಾಯಿ ನೀಡಿದ್ದ ಮನೆಯೊಂದಿತ್ತು. ಬೊಮ್ಮಿ ತಾಯಿ ಸಾವಿನ ನಂತರ ಆ ಮನೆ ಅನಾಥವಾಗಿತ್ತು. ಬೊಮ್ಮಿ ಸಿದ್ದಾಪುರದಿಂದ ಬಂದಾಗ ಮೊದಲು ಕಂಡಿದ್ದು ಶ್ಯಾಮಭಟ್ಟರನ್ನು. ಬೊಮ್ಮಿ ತಾಯಿ ಸುಕ್ರಿ ಸಾಯುವ ಮುನ್ನ ಶ್ಯಾಮ ಭಟ್ಟರಲ್ಲಿ ಭಾಷೆ ಪಡೆದು, ’ಮನೆಯನ್ನು ತನ್ನ ಮೊಮ್ಮಳಿಗೆ ಕೊಡಿ. ನನ್ನ ಮಗಳು ಮರಳಿ ಬಂದ್ರೆ ಅವಳು ನೆಲೆ ನಿಲ್ಲಲು ಮನೆ ನೀಡಿ ಎಂದಿದ್ದರು’ ಸುಕ್ರಿಯ ಇಚ್ಛೆಯಂತೆ ಮನೆಯನ್ನು ಬೊಮ್ಮಿಗೆ ನೀಡಿದ ಭಟ್ಟರು ಆಕೆಯ ತಾಯಿಯ ಭಾಷ ನೆನಪಿಸಿದರು…..’ ನೋಡು ಬೊಮ್ಮಿ, ಮಗಳ ಮದ್ವೆ ಮಾಡಿ, ಮನೆಯನ್ನೇ ಉಡುಗೊರೆಯಾಗಿ ನೀಡಲು ಸುಕ್ರಿ ಹೇಳ್ತಿತ್ತು. ನೀನು ಏನ್ ಹೇಳ್ತಿ ’ ಮರುಮಾತನಾಡದ ಬೊಮ್ಮಿ ’ಆಗಲಿ ಭಟ್ಟರೇ’ ಎಂದಿದ್ದಳು.
ಬೊಮ್ಮಿ ಗಂಗಾವಳಿಗೆ ಬಂದಿದ್ದೇ ತಡ; ಸಂಧಾನ ಪ್ರಕ್ರಿಯೆಗಳು ಆರಂಭವಾದವು. ಬೊಮ್ಮಿಯ ಸಂಬಂಧಿಕರು ಆಕೆಯ ಬಳಿ ಅಪಾರ ಹಣವಿದೆ. ಈರನ ಆಸ್ತಿಯನ್ನೆಲ್ಲಾ ಮಾರಿ ಹಣ ತಂದಿದ್ದಾಳೆ ಎಂದು ಅದ್ ಹೇಗೋ ಗೊತ್ತಾಗಿಹೋಗಿತ್ತು. ಬೊಮ್ಮಿಯ ಮಗಳನ್ನು ಮದ್ವೆಯಾಗಲು ಸಂಬಂಧಿಕರಿಂದಲೇ ಪ್ರಸ್ತಾಪಗಳು ಬರತೊಡಗಿದವು. ಬೊಮ್ಮಿಯ ಗಂಡುಮಕ್ಕಳಿಗೂ ಅವ್ವೆಯ ಬಳಿ ಹಣವಿದೆ ಎಂಬ ಸುದ್ದಿ ತಲುಪಿತು.
ದಾಲೂರಪ್ಪ ಮಾತ್ರ ಇದನ್ನೆಲ್ಲಾ ಕೇಳಿ ಕಿರಿಕಿರಿ ಅನುಭವಿಸತೊಡಗಿದ. ಮಕ್ಕಳು ತಾಯಿಯ ಬಗ್ಗೆ, ಆಕೆಯ ಬಳಿಯ ಹಣದ ಬಗ್ಗೆ ಮಾತಾಡುವುದು ಕೇಳಿ ಕಸಿವಿಸಿ, ಸಂಕಟ ಅನುಭವಿಸತೊಡಗಿದ. ಮಕ್ಕಳನ್ನು ಸಾಕಿ ಬೆಳೆಸಿದ ಕಷ್ಟಮನದ ಮುಂದೆ ತೇಲಿಬಂತು.
***
ದಾಲೂರಪ್ಪಗೆ ಆಗಿನ್ನು ಇಪ್ಪತ್ತರ ಹರೆಯ. ಶಾಲೆ ಬಿಟ್ಟ ನಂತರ ತೋಟದ ಕೆಲಸಗಳಿಗೆ ಅಂಟಿಕೊಂಡಿದ್ದ. ಗಂಗಾವಳಿಯಲ್ಲಿ ದಾಲೂರಪ್ಪ ತೆಂಗಿನ ಮರ ಏರುವುದರಲ್ಲಿ ಪ್ರಸಿದ್ಧನಾಗಿದ್ದ. ಬೊಮ್ಮಿ ಸರಸಕ್ಕನ ಮನೆಕೆಲಸಕ್ಕೆ ಹೋದಾಗ ದಾಲೂರಪ್ಪನ ಕುರಿತಂತೆ ಕೇಳಿದ್ದಳು. ಅದ್ ಹೇಗೋ ದಾಲೂರಪ್ಪನ ಅವ್ವನಗೂ ಮತ್ತು ಬೊಮ್ಮಿಯ ತಂದೆಗೂ ಇದ್ದ ಸ್ನೇಹದಿಂದ ಮಕ್ಕಳ ಮದ್ವೆತನಕ ಸಂಬಂಧ ಬೆಳೆದಿತ್ತು. ಬೊಮ್ಮೆ-ದಾಲೂರಪ್ಪ ನಡುವೆ ಮದ್ವೆಯೂ ಆಗಿಹೋಗಿತ್ತು. ಬೊಮ್ಮಿಯನ್ನು ಗುಟಾಗಿ ಪ್ರೀತಿಸುತ್ತಿದ್ದ ಈರ ಮಾತ್ರ ದಾಲೂರಪ್ಪ ಬೊಮ್ಮಿಯನ್ನು ಮದ್ವೆ ಆಗುವ ಸುದ್ದಿಕೇಳಿ ಉರಿದುಹೋಗಿದ್ದ.
ತಕ್ಷಣಕ್ಕೆ ಬೊಮ್ಮಿಯನ್ನು ಓಡಿಸಿಕೊಂಡು ಹೋಗದ ಸ್ಥಿತಿ ಈರನದಾಗಿತ್ತು. ಇದೇ ವೇಳೆಗೆ ಈರನ ತಂದೆ ಹಾಸಿಗೆ ಹಿಡಿದು ದಿನಗಳನ್ನು ಎಣಿಸುತ್ತಿದ್ದ. ಸಿದ್ಧಾಪುರದಲ್ಲಿನ ಅಪಾರ ಆಸ್ತಿಯನ್ನು ಈರನ ದೊಡ್ಡಪ್ಪ ನೋಡಿಕೊಳ್ಳುತ್ತಿದ್ದ. ಅವಿವಾಹಿತನಾಗಿದ್ದ ದೊಡ್ಡಪ್ಪ ಈರನನ್ನೇ ತನ ಮಗನಂತೆ ಕಾಣುತ್ತಿದ್ದ. ಈರ ಧರ್ಮ ಸಂಕಟಕ್ಕೆ ಸಿಲುಕಿದ. ಬೊಮ್ಮಿಯ ಮದ್ವೆಯನ್ನು ತಡೆಯಲು ಅವ್ನಗೆ ಸಾಧ್ಯವಿರಲಿಲ್ಲ. ಓಡಿಸಿಕೊಂಡು ಹೋಗುವಂತೆಯೂ ಇರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಬೊಮ್ಮಿ ಮತ್ತು ಈರಾ ರಾಜಿ ಮಾಡಿಕೊಂಡು ಮದ್ವೆ ನಂತರವೂ ಸಂಬಂಧ ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಈ ಒಳ ಒಪ್ಪಂದ ಬಯಲಾದದ್ದು ಮಾತ್ರ ಬೊಮ್ಮಿ ಐದು ವರ್ಷ ಜೀವನ ಮಾಡಿ ಸಿದ್ದಾಪುರಕ್ಕೆ ಈರನೊಂದಿಗೆ ಓಡಿಹೋದಾಗಲೇ.
ಬೊಮ್ಮಿ ಮದುವೆಯಾಗುವಾಗಲೇ ಬಸಿರಿದ್ದಳು ಎಂಬ ಸಂಶಯ ಬಂದದ್ದು ಬೊಮ್ಮಿ ಓಡಿಹೋದಾಗ. ಗೋವಿಂದ, ಈರ ಮತ್ತು ಬೊಮ್ಮೆಯ ನಡುವಿನ ಸಂಬಂಧವನ್ನ ದಾಲೂರಪ್ಪನ ಎದುರು ಬಹಿರಂಗ ಪಡಿಸಿದಾಗ. ದಾಲೂರಪ್ಪನ ಮೊದಲ ಮಗ ಕಲ್ಲ, ಈರನ ಮಗನಿರಬೇಕೆಂದು ಅನ್ನಿಸತೊಡಗಿತು. ಬೊಮ್ಮಿ ಈರನೊಂದಿಗೆ ಓಡಿಹೋದಾಗ ಅನುಭವಿಸಿದ ಅವಮಾನ, ಸಂಕಟಕ್ಕಿಂತ ಹೆಚ್ಚಿನ ತಳಮಳ ಬೊಮ್ಮಿ ಗಂಗಾವಳಿಗೆ ಮರಳಿ ಬಂದಾಗ ಆಗತೊಡಗಿತ್ತು.
ಮೊದಲ ಮಗ ಕಲ್ಲ, ಮಗಳು ಗೌರಿ ತಾಯಿ ಕಡೆಗೆ ಪಕ್ಷಾಂತರ ಮಾಡಿದ್ರು. ದಾಲೂ ಎಂಬ ಮಗ ಗೋವಾಕ್ಕೆ ಕೆಲ್ಸಕ್ಕೆ ಹೋದವ ಮರಳಿರಲಿಲ್ಲ. ಪ್ರೀತಿಯ ಮಗ ದಾಲೂ ಸಹ ದೂರವಾದಾಗ, ಬದುಕು ನಶ್ವರ ಎಂದು ಭಾಗ್ವತರು ಹೇಳುತ್ತಿದ್ದುದು ದಾಲೂರಪ್ಪನ ಕಿವಿಯಲ್ಲಿ ಕೊರೆಯತೊಡಗಿತು. ಬೊಮ್ಮಿ ಗಂಗಾವಳಿಗೆ ಕಾಲಿಟ್ಟು ಎರಡು ದಿನವಾಗಿತ್ತು. ಗುಡಿಸಲಿಂದ ದಾಲೂರಪ್ಪ ಹೊರಬೀಳಲಿಲ್ಲ. ಮಗಳು ಗೌರಿ ಅವ್ವೆಯ ಬಗ್ಗೆ ಏನು ಹೇಳಿದ್ರು ದಾಲೂರಪ್ಪ ಮರು ಮಾತಾಡಲಿಲ್ಲ. ಏನು ತಿನ್ನಲು ಆತನ್ಗೆ ಮನಸ್ಸಾಗಲಿಲ್ಲ.
ಮಾರನೇ ದಿನ ರಾತ್ರಿಯೇ ದಾಲೂರಪ್ಪ ಯಲ್ಲಾಪುರದ ಕಡೆಗೆ ಪಯಣ ಬೆಳೆಸಿದ.
ಮಧ್ಯೆರಾತ್ರಿ ಮನೆಯಿಂದ ಹೊರಟಾಗ ಬೆಳದಿಂಗಳು ಭೂಮಿಯನ್ನ ತಬ್ಬುತ್ತಿತ್ತು. ಗಂಗಾವಳಿಯ ದಡಕ್ಕೆ ಬಂದ ದಾಲೂರಪ್ಪ ಮೋಟು ಮರಕ್ಕೆ ಕಟ್ಟಿದ್ದ ಥಾಕು ಹರಿಕಂತ್ರನ ಪಾತಿ ದೋಣಿಯ ಹಗ್ಗ ಬಿಚ್ಚಿ ಹುಟ್ಟುಹಾಕಿ ಗಂಗಾವಳಿಯನ್ನು ದಾಟಿ ತನ್ನೂರಿಗೆ ಮರಳಲಾರೆ ಅಂದುಕೊಂಡ. ಮನದಲ್ಲೇ ಶಪಥ ಮಾಡಿಕೊಂಡಾ. ಮಕ್ಕಳು ನೀಡಿದ ಅಘಾತದಿಂದ ಆತ ವ್ಯಗ್ರನಾಗಿದ್ದ.
ಬೊಮ್ಮಿಯ ಜೊತೆ ಮದ್ವೆಯಾದ ಹೊಸತರಲ್ಲಿ ಗಂಗಾವಳಿ ದಾಟಿ ಕಾರವಾರದಲ್ಲಿ ಸಂಬಂಧಿಕರ ಮನೆಗೆ ಬಂದದ್ದು, ಸದಾಶಿವಗಡ ಕೋಟಿ ಏರಿ ದರ್ಗಾದಲ್ಲಿ ಮೊದಲ ಮಗ ಹುಟ್ಟಿದಾಗ ಸಂತನ ಸಮಾಧಿಗೆ ಹಣೆಹಚ್ಚಿದ್ದು ಎಲ್ಲವೂ ನೆನಪಿನ ಆಳದಿಂದ ನುಗ್ಗಿಬಂತು. ಗಂಗಾವಳಿಯಲ್ಲಿ ದೋಣಿಯ ಹುಟ್ಟುಹಾಕುವಾಗ ಅವನ ಕಣ್ಣುಗಳು ಒದ್ದೆಯಾದವು. ಬೊಮ್ಮಿ ಯಾಕೆ ಹೀಗೆ ಮಾಡಿದ್ಲು ಎಂಬುದಕ್ಕೆ ಕಳೆದ ಹದಿನೈದು ವರ್ಷಗಳಿಂದಲೂ ಆತನಿಗೆ ಉತ್ತರ ದೊರಕಲಿಲ್ಲ. ಉತ್ತರ ದೊರೆಯುವ ಪ್ರಶ್ನೆ ಅದಾಗಿರಲಿಲ್ಲ. ಎಲ್ಲವೂ ಒಮ್ಮೆ ಮರುಕಳಿಸುವ ವೇಳೆಗೆ ಗಂಗಾವಳಿಯ ಈಚೆ ದಡಕ್ಕೆ ಬಂದಿದ್ದ. ಬೆಳಗಿನ ಜಾವದ ವೇಳೇಗೆ ಅರಬೈಲ್ ಘಟ್ಟವನ್ನು ಹತ್ತುವಾಗಲೂ ದಾಲೂರಪ್ಪ ಗೆ ದಣಿವಾಗಿರಲಿಲ್ಲ.
ಎಲ್ಲವನ್ನು ಕಳಚಿಕೊಂಡಂತಿದ್ದ ದಾಲೂರಪ್ಪ ನಿರಾಳನಾಗಿದ್ದ. ಬೆಳಕು ಹರಿಯುವ ಹೊತ್ತಿಗೆ ಯಲ್ಲಾಪುರ ತಲುಪಿದ್ದೆ. ನೀಲಕಂಠ ಭಟ್ಟರ ಚಹಾ ಹೋಟೆಲಿನಲ್ಲಿ ಚಹಾ ಕುಡಿದ. ಆಗಲೇ ಕಣ್ಣಿಗೇರಿಯಲ್ಲಿದ್ದ ಮಾಸ್ತಿ ಗೌಡನ ನೆನಪು ಕಣ್ಮುಂದೆ ಬಂತು. ಕಣ್ಣಿಗೇರಿ ಯತ್ತ ದಾಲೂರಪ್ಪ ಹೆಜ್ಜೆ ಹಾಕಿದ…..
(ಸೆಪ್ಟೆಂಬರ್ ೨೦೦೩)
*****