ಡಿಯರ್, ಪೂರ‍್ಣೀ,
ನಿನಗೆ ವಯಸ್ಸು ಇಳಿಯುತ್ತಿದ್ದರೂ ತಂಟೆ, ಕ್ರೂರತನವಿನ್ನೂ ಹೋಗಿಲ್ಲ. ಮಲೆನಾಡ ಹುಡುಗಿಯ ನಾಗಕನ್ಯೆಯ ಕಥೆಯನ್ನು ಮುಗಿಸಿರುವೆನೆಂದು ನಾನು ಸಮಾಧಾನವಾಯಿತೆಂದು ತಿಳಿದುಕೊಳ್ಳವದರೊಳಗೆ, ಡಾಕ್ಟರರ ಮನೆಯನ್ನು ನೆನಪಿಗೆ ತಂದೆಯಲ್ಲಾ!ಅಲ್ಲಾ ಇದ್ದಕಿದ್ದ೦ತೆ ಅದೇಕೆ ನೆನಪಾಯಿತು? ೧೯೪೨ರೆಯ ವರುಷದ ನೆನಪು ೧೯೫೨ರಲ್ಲಿ ಏಕೆ? ಸಮಯ ಸಂದರ್ಭ ಒದಗದಿದ್ದಾಗ ಆಯಿತೇನೋ?
ಆದರಾಗಲಿ, ನನ್ನದೇನು ತಪ್ಪು ಅದರಲ್ಲಿ? ಆ ಕಥೆಯನ್ನು ನನ್ನ ನೆನಪಿಗೆ ತರುವಾಗ ಆ ಚಿತ್ರದಲ್ಲಿ ಬರುವ ಪಾತ್ರಗಳಲ್ಲಿ ನಿನ್ನ ಚಿಕ್ಕಮ್ಮನೇ ಖಳನಾಯಿಕಿ ಎಂಬುದನ್ನು ಮರೆತಿಲ್ಲವಷ್ಟೆ?
ಸಾಕಿದ ನಾಯಿ ಕಾಲು ಕಚ್ಚುವಂತೆ ಔಷಧಿ ಕೊಟ್ಟು, ಮಗಳನ್ನು ಉಳಿಸಿದ ಡಾಕ್ಟರ ಮನೆಗೆ ಮುಳುವಾಗಬೇಕೇ ಆ ನಿನ್ನ ಚಿಕ್ಕಮ್ಮ? ನನಗೇನೂ ಈ ಘಟನೆಯಿಂದ ಒಂದು ದೊಡ್ಡ ಪ್ರಯೋಜನವಾಯಿತು. ನನ್ನ ಜೀವನದಲ್ಲಿ ಇದೊಂದು ಆಕಸ್ಮಿಕವಾಗಿ ನಡೆದುಹೋಗದಿದ್ದರೆ ನಾನೆಲ್ಲಿ ‘ರಾಯರ ಸಂಸಾರ’ ಎಂಬ ನಾಟಕ ಬರೆದು ಬೆಂಗಳೂರಿನ ಪಟ್ಟಣಶೆಟ್ಟಿ ಹಾಲಿನಲ್ಲಿ ಪ್ರಯೋಗಿಸುತ್ತಿದ್ದೆ? ನಾಟಕ ಯಶಸ್ವಿಯಾಯಿತೋ, ನಾನು ನಾಟಕಕಾರನಾಗಿ ಉಳಿದೆನೋ, ಚಲಚ್ಚಿತ್ರಗಳನ್ನೂ ತಯಾರಿಸುವ ಹುರುಪು ತೋರಿದೆನೋ, ಆ ಕಥೆಯೇ ಬೇರೆ; ಆ ಉದ್ಯೋಗವೇ ಬೇರೆ. ಅದನ್ನೆಲ್ಲ ಪತ್ರದಲ್ಲಿ ಬರೆಯಲು ಸಾಧ್ಯವೇ? ಬರೆದರೆ ಒಳ್ಳೆಯ ಚಿತ್ರ ತಯಾರಿಕೆಗೆ ನಾನೇ ಒಂದು ಕಥಾವಸ್ತುವಾಗಬಹುದು. ಅದು ನನ್ನ ಇನ್ನೊಂದು ಮುಖ. ಕಲಾವಿದನಲ್ಲದಿದ್ದರೂ ಕಲಾಸೇವೆಗಾಗಿ ಹಾತೊರೆದು ಮುನ್ನುಗ್ಗಿ ಮೂತಿಯೊಡೆದು ಕೊಂಡು ಈಗ ತೆಪ್ಪನೇ ಪತ್ರಿಕೋದ್ಯಮಿಯಾಗಿರುವೆನು.
ನಾನು ಆಡಿಸಿದ ನಾಟಕವನ್ನು ಮರೆತರೂ ನೀನು ಆಗ ನನ್ನೊಡನೆ ಆಡಿದ ಸಿಡಿಮಿಡಿಯ ನಾಟಕವನ್ನು ನಾನು ಮರೆಯಲಾರೆ. ರಾತ್ರಿ ನಾಟಕದ ರಿಹರ್ಸಲ್ಸ್ ನ್ನೆಲ್ಲ ಮುಗಿಸಿಕೊಂಡು ನಾನು ತಡವಾಗಿ ಮನೆಗೆ ಬರಬೇಕು. ನೀನು ಆರಿದ ಅನ್ನ ಮತ್ತು ಆರಲೆಂದು ತಟ್ಟೆಯಲ್ಲಿಟ್ಟ, ಸಾರನ್ನೂ ಬಾಯಿ ತೆರೆದಿಟ್ಟು ಮಲಗಿಕೊಂಡಿರಬೇಕು ಎಚ್ಚರವಾಗಿದ್ದರೂ, ಗಬಗಬನೆ ನಾನು ತಂಗಳನ್ನವನ್ನು ತಿನ್ನುತ್ತಿರುವುದನ್ನು ನೋಡಿಯೂ ಮುಚ್ಚಿದ ಕಣ್ಣಿನಲ್ಲೇ ಕಣ್ಣೀರು ಸುರಿಸುತ್ತಿದ್ದರೂ ನಿನ್ನನ್ನು ಸಮಾಧಾನಪಡಿಸದೆ ಸುಮ್ಮನೆ ನಾನು ಮೂಲೆಯ ಹಾಸಿಗೆಯೊಂದರಲ್ಲಿ ಮಲಗಿಕೊಳ್ಳುತ್ತಿದ್ದೆ. ಮು೦ಜಾನೆ ಏರಕ್ರಾಫ್ಟದ ಸಿಳ್ಳು ಆದಾಗ, ಹೊತ್ತಾಯಿತೆಂದು ಅವಸರದಿಂದ ಎದ್ದು ಅರ್ಧಮುಖ ತೊಳೆದು, ಓಡಿಹೋಗುತ್ತಿದ್ದುದ್ದು ಪುನಃ ಸಂಜೆ ಐದು ಗಂಟೆಗೆ ಬರುವದೇ ತಡ, ಕೋನೇನ ಅಗ್ರಹಾರದಿಂದ ಬೆಂಗಳೂರಿಗೆ ನಾನು ಇರುವ ನಾಲ್ಕು ಮೈಲುಗಳನ್ನು ನಡೆದುಕೊಂಡು ಹೋಗಿ ಮಧ್ಯರಾತ್ರಿಯ ಹೊತ್ತಿಗೆ ಮತ್ತೆ ನಡೆದುಬರುವದು, ಇವೆಲ್ಲವನ್ನು ನೋಡಿ ನಿನಗೆ ಸಾಕಾಗಿರಬೇಕು,ನಾಟಕದಮನೆ ಹಾಳಾಗಲಿ ಎಂದು ಶಪಿಸುವದೇ ನಿನ್ನ ಕೆಲಸವಾಗಿತ್ತಲ್ಲವೇ? ನೀನು ಪತಿವೃತೆಯಲ್ಲವೇ? ನೀನು ಹೇಳಿದಂತೆಯೇ ಅದೇ ನನ್ನ ಕಲಾಸೇವೆಯ ಕೊನೆಯ ಅಂಕವಾಯಿತು.
ಈಗಲೂ ನಿನಗೆ ಭಯ, ಮತ್ತೆ ನಾನು ನಾಟಕದ ಅಧ್ಯಾಯವನ್ನು ಆರಂಭಿಸುವೆನೋ ಎಂದು. ಇಲ್ಲಿ, ನಾನು ಬೇರೆ ನಾಟಕವನ್ನು ಕೈಕೊಳ್ಳಬೇಕಾಗಿಲ್ಲ. ನನ್ನ ನಾಟಕವೇ ದೊಡ್ಡ ನಾಟಕ, ನಾನೇ ಅದರ ಕಥಾನಾಯಕ ನೀನಂತೂ ಸದಾ ಸಿಂಗರಿಸಿಕೊಂಡಿರುವ ಕಥಾನಾಯಿಕಿ. ಬೆಂಗಳೂರ ಹುಬ್ಬಳ್ಳಿ ಗಳ ಮಧ್ಯ ಇರುವ ದೂರವೆಲ್ಲವೂ, ಉದ್ದಗಲವೆಲ್ಲವೂ ನಮ್ಮ ರಂಗಭೂಮಿಯ ಉದ್ದಗಲವೇ. ಆದುದರಿಂದ ನಾನು ಬೇರೆ ನಾಟಕ ಬರೆದು ಆಡಿಸಬೇಕಿಲ್ಲ. ಅದ್ದರಿಂದ ಭಯಪಡಬೇಡ.
ನಾಟಕದ ಮಾತೆತ್ತಿದರೆ ಆ ನನ್ನ ಒಂದೇ ಒಂದು ನಾಟಕದಲ್ಲಿ ರಂಗಯ್ಯನ ಪಾತ್ರವನ್ನು ವಹಿಸಿದ ಕಿಡಿಗೇಡಿ ಕೃಷ್ಣನ ನೆನಪಾಗುವದು. ನನ್ನ ಜೊತೆಯಲ್ಲಿ ನನಗೇ ಬಹು ವಿಧೇಯನಾಗಿ ಶಿಷ್ಯನಂತೆ ಇರುತ್ತಿದ್ದನು. ಆದರೆ ಅವನಾಗಲೇ ನನಗೆ ತಿಳಿಯದಂತೆಯೇ ನಿನ್ನ ಕಿವಿಯಲ್ಲಿ ಏನೇನೋ ಹೇಳಿ ಬಿಡುತ್ತಿದ್ದ. ನಾಟಕವನ್ನು ದಿಗ್ದರ್ಶಿಸುವ ನಾನು ಹೆಣ್ಣು ಪಾತ್ರದವರ ಜೊತೆಯಲ್ಲಿ ಮಾತನಾಡಲೇಬಾರದೇ? ಪಂಕಜಾಕ್ಷಿ, ಸೀತಾ ಇವರು ನನ್ನ ಕಡೆಗೆ ತಿರುಗಿ ನೋಡಿದರೆ ಸಾಕು. ಅದನ್ನೇ ಒಂದು ದೊಡ್ಡ ಕತೆಯಾಗಿ ಮಾಡಿ ನಿನ್ನೊಂದಿಗೆ ಹೇಳುತ್ತಿದ್ದನು. ಪಾಪ ನಿನಗೆ ಬಾಯಿಗೆ ಬಂದ ಕೋಪವು ತುಟಿ ಮೀರುತ್ತಿರಲಿಲ್ಲ. ಹೇಗೂ ಮೂರು ತಿಂಗಳು ನಮ್ಮ ಸಂಸಾರವು ಮೌನವಾಗಿ ಸಾಗಿತು. ೧-೧-೧೯೪೭ರ ದಿವಸವೇ ನಾನು ಬರೆದ ನಾಟಕದ ಪ್ರಯೋಗವಾಯಿತು. ಅಲ್ಲಿಗೆ ಮುಗಿಯಿತು ನನ್ನ ನಾಟಕ ಪ್ರಪಂಚ. ಇದಾದ ಮೂರು ತಿಂಗಳಲ್ಲೇ ನನ್ನ ಜೀವನ ನಾಟಕದ ದೇಶಭ್ರಷ್ಟತೆಯ ಅಧ್ಯಾಯವು ಆರಂಭವಾಯಿತಲ್ಲವೇ?
ನೆನಪು ಮತ್ತೆ ಎಲ್ಲೆಲ್ಲೋ ಹಾರತೊಡಗಿದೆ. ನಿನಗೆ ಡಾಕ್ಟರ ಸಂಸಾರದ ಕಥೆಯನ್ನು ಹೇಳಬೇಕೆಂದು ಆರಂಭಿಸಿದ ನಾನು ನನ್ನ ನಾಟಕವನ್ನೇ ಹೇಳಲಾರಂಭಿಸಿದೆ. ಹೋಗಲಿ, ಆ ಬಗ್ಗೆ ಎಲ್ಲ ವಿವರವನ್ನು ಇನ್ನೊಂದು ಪತ್ರದಲ್ಲಿ ಬರೆಯವನು.
ಮರೆತಿದ್ದೆ; ಪ್ರತಿ ಕಾಗದದಲ್ಲಿ ಬ್ರಹ್ಮಚಾರಿ ತೀರ್ಥಾನಂದರ ವಿಚಾರ ಕೇಳಬೇಕೆನ್ನುತ್ತಿದ್ದೆ. ಮನೆಗೆ ಮತ್ತೆ ಬಂದಿಲ್ಲವಲ್ಲ? ಬರುವುದೂ ಇಲ್ಲ. ನಾನವರಿಗೆ ಅವರ ಜೀವನದ ಉದ್ದಕ್ಕೂ ನೆನಪಿನಲ್ಲಿ ಉಳಿಯುವಂಥಹ ಒಂದು ಪತ್ರವನ್ನು ಬರೆದಿರುವೆನು. ಆ ಪತ್ರವನ್ನು ಓದಿದ ಮೇಲೆ ಅವರು ಬೆಂಗಳೂರನ್ನು ಬಿಡಬೇಕು. ಆದರೆ ಇಷ್ಟಕ್ಕೆಲ್ಲ ಹೆದರುವವರೇ ಈ ಸನ್ಯಾಸಿಗಳು ಎಂಬ ಪ್ರಶ್ನೆ ಎದ್ದು ನಿಲ್ಲುತ್ತದೆ. ಸದ್ಯ, ನಿನ್ನ ಮಾರುತಿ ಮುದ್ರೆ ಬೀಳುವದಕ್ಕೆ ಮೊದಲೇ ಆ ಸಾಧುಶ್ರೇಷ್ಠರು ಬದುಕಿಕೊಂಡರಲ್ಲವೇ?
ಅಲ್ಲಾ ಪೂರ‍್ಣಿ, ಅದೇಕೆ ಆ ಓದುವ ಹುಡುಗಿ ನಿನ್ನ ತಂಗಿ ನಳಿನಿಯ ಮದುವೆಯ ಬಗ್ಗೆ ಅಷ್ಟು ಅವಸರ ಪಡುತ್ತಿರುವೆ? ನಿನ್ನ ಅವಸರಕ್ಕೆ ಬೇರೆ ಅರ್ಥ ಮಾಡುತ್ತಿರಲಿಲ್ಲ. ನೀನೇ, ನಾನು ಹೋದ ಸಾರೆ ಬೆಂಗಳೂರಿಗೆ ಬಂದಿದ್ದಾಗ ಕಿವಿಯಲ್ಲಿ “ಈ ಕಾಲದಲ್ಲಿ ಹೆತ್ತ ತಾಯಿಯಾದರೂ ನಂಬಬಾರದ್ರೀ ನೋಡ್ರಿ, ನಳಿನಿಗೆ ಎಲ್ಲ ಒಳ್ಳೆಯ ಗಂಡು ಸಿಕ್ಕದಿದ್ದರೆ, ನಮ್ಮ ಅಮ್ಮನ ಮನಸ್ಸಿನಲ್ಲಿ ಏನಿದೆ ಗೊತ್ತೇ? ನಿಮಗೇ ಉಪಾಯ ಮಾಡಿಬಿಡತಾಳೆ, ಅದಕ್ಕೇ ನೀವು ಮೊನ್ನೆ ಊರಿಗೆ ಹೋಗಿದ್ದಾಗ ಹೊಸ ಹೊಸ ತರಹದ ಉಪಚಾರ. ನೀವು ನಳಿನಿಯನ್ನು ಹಾಸ್ಯ ಮಾಡುತ್ತಾ ಇದ್ದರೆ, ಅಮ್ಮ ಒಳಗೊಳಗೆ ನಗುತ್ತಾ ಇರತಾ ಇದ್ದಳು. ನೀವೇನಪ್ಪಾ ಗಂಡಸರು ಹೇಗೆ ಮನಸ್ಸು ತಿರುಗತದೋ ಹೇಳಲಿಕ್ಕೆ ಬರುವುದಿಲ್ಲ. ನೀವಂತೂ ಮೆಲ್ಲಗೆ ಮಾತಾಡುವವರ ಮಡಿಲ ಕೂಸು” ಎಂದು ಪೇಚಾಡಿ ನನ್ನ ಹೊಟ್ಟೆಯ ಮೇಲೆ ಉರುಳಾಡಿದ ದೃಶ್ಯವೂ ನೆನಪಿಗೆ ಬಂದಿತು. ನೆನಸಿಕೊಂಡಂತೆಲ್ಲಾ ನನಗೆ ನಗು ಬರುತ್ತಿದೆ. ನಿನ್ನ ತಿಳಿಗೇಡಿತನವನ್ನು ಕಂಡು ನಕ್ಕುಬಿಡಲೆ? ಸ್ತ್ರೀಯ ಸ್ವಾರ್ಥದ ಪ್ರೇಮದ ಬಗ್ಗೆ ತನ್ನ ಹೆತ್ತ ತಾಯನ್ನ ನಂಬಳು, ತನ್ನ ಗಂಡನನ್ನೂ ಸಂದೇಹಿಸುವಳು. ತನ್ನ ಅರ್ಧ ದೇಹವನ್ನು ಬೇಕಾದರೂ ಕೊಯ್ದು ಕೊಡಬಲ್ಲ ಸ್ತ್ರೀ ಮಾತೆಯಾಗಿ ತನ್ನ ಜೀವನವನ್ನು ಬಲಿದಾನವಾಗಿ ಕೊಡಬಲ್ಲ ಸ್ತ್ರೀ ತನ್ನ ಪ್ರೇಮ ಸಾಮ್ರಾಜ್ಯದಲ್ಲಿ ತಾನು ರಾಣಿಯಾಗಿರುವ ತನ್ನ ಸೀಮೆಯಲ್ಲಿ ಅನ್ಯರ ನೆರಳು ಬಿದ್ದರೂ ಸಹಿಸಳು. ಇಂತಹ ಶಕ್ತಿಯಿಂದಲೇ ಸ್ತ್ರೀ ಯುಗಶಕ್ತಿಯಾಗಿ ಆರ್ಯಭೂಮಿಯಲ್ಲಿ ಬಾಳಿ ಬೆಳಗಿದಳು. ಇಂಥಹ ದೊಡ್ಡ ಉದಾಹರಣೆ ಈಗೇಕೆ? ಸವತಿ ಬರುವ ಮೊದಲೇ ಸವತಿ ಮಾತ್ಸರ್ಯವನ್ನು ತೋರಿಸುವ ಈ ನನ್ನ ಮಹಾಸತಿಗೆ ಹಿಂದೊಮ್ಮೆ ಇಂತಹದೇ ಒಂದು ಪ್ರಶ್ನೆಗ ಬಂದಿರಲಿಲ್ಲವೇ? ನಿಮ್ಮ ಚಿಕ್ಕಮ್ಮನ ಮಗಳೊಬ್ಬರು. ಇನ್ನು ಮುಂದೆ ನಿನಗೆ ಗಂಡು ಮಕ್ಕಳೇ ಆಗುವದಿಲ್ಲವೆಂದು, ನಿನ್ನ ಮದುವೆಯಾದ ಎರಡು ವರ್ಷದಲ್ಲಿ ಊಹಿಸಿ, ಆ ಹುಡುಗಿಯನ್ನು ನನಗೆ ಕಟ್ಟ ಬೇಕೆಂದಿದ್ದುದೂ ನಮ್ಮ ತಾತ ಮೂರು ಮದುವೆ ಮಾಡಿಕೊಂಡಿದ್ದನಂತೆ. ಅವರಿಗೆ ಹದಿನೆಂಟು ಮಕ್ಕಳಂತೆ ಅಂತಹನ ಹೆಸರನ್ನುಳಿಸಲು ನಾನು ಇನ್ನೊಂದು ಮದುವೆಯಾಗಬಾರದೇ ಎಂಬುದೇ ನನ್ನ ತಂದೆಯ ಬಂಧುಗಳ ಮತ್ತು ಸೋದರತ್ತೆಯ ಉಪದೇಶವಾಗಿತ್ತು. ಆ ಹುಡುಗಿಯೂ ಸಹ ನಿನಗೆ ಸವತಿಯಾಗಿ ಬರಲು ಹೆದರಲಿಲ್ಲ; ಹಿಂದೆಗೆಯಲಿಲ್ಲ. ಅಕ್ಕನೆಂಬ ಸಲಿಗೆ ಯಿಂದಿರಬಹುದು. ನಿನ್ನನ್ನು ಆಗೆಂತು ಪರೀಕ್ಷಿಸಿದೆನೆಂಬುದು ಜ್ಞಾಪಕಕ್ಕೆ ಬಂದಿತೇ?
ಆ ಹಡುಗಿಯನ್ನು ಮದುವೆಯಾಗಲೇ ಎ೦ದು ನಿನ್ನನ್ನೂ ಕೇಳಿದೆನು. ಆಗಿನ್ನೂ ಗಂಡಸುತನದ ಗಂಟಲೂ ಗಂಡಸುತನದ ಹೆಂಗುಸು ತನವೂ ನಿನಗೆ ಬಂದಿರಲಿಲ್ಲ. ಆದರೂ ಆಗ ನೀನು ಕೊಟ್ಟ ಉತ್ತರವನ್ನು ಮರೆಯುವಂತಿಲ್ಲ. ಅದೆಷ್ಟು ಉಪಮಬದ್ಧವಾಗಿದ್ದಿತು ನಿನ್ನ ಉತ್ತರ? “ತಿನ್ನಲೇಬೇಕೆಂಬ ಆಸೆಯಿಂದ ಎರಡು ಹೋಳಿಗೆಗಳನ್ನು ಎಲೆಯ ಮೇಲೆ ಹಾಕಿಕೊಂಡಿರುವಾಗ ಅದೇ ಎಲೆಯ ಬದಿಗೆ ಮತ್ತೊಬ್ಬರು ಬಂದಾಗ ಆ ಎಡೆಗೆ ಒಂದು ಹೋಳಿಗೆಯನ್ನು ಕೊಡದೇ ವಿಧಿಯೇ ಇಲ್ಲ. ಇದರಲ್ಲಿ ಮನಸ್ಸಿನ ಪ್ರಶ್ನೆ ಏನು ಬಂದಿತು? ನೀವು ಇಷ್ಟೊಂದು ಪುರಾಣ ಓದಿದವರು. ನಿಮಗೆ ಯಾವ ಸ್ತ್ರೀಯೂ ತನ್ನ ಗಂಡನನ್ನು ಇತರರಿಗೆ ಹಂಚಿ ಕೊಡಲು ಸಿದ್ಧವಿಲ್ಲವೆಂಬ ಸಿದ್ಧಾಂತವನ್ನು ತಿಳಿದುಕೊಂಡಿಲ್ಲವೇ? ಎ೦ದು ಮೆಲ್ಲ ಮೆಲ್ಲನೆ ದಬಾಯಿಸಿ ಬಿಟ್ಟೆ. ನಾನು ನಗುತ್ತಲೇ ಪಾರಾದೆನು. ಹೇಗೋ ಆ ಹುಡುಗಿಯ ಕಂಕಣಪ್ರಾಪ್ತಿ ಬೇರೆಯವರಿಗೆ ಆಯಿತೆನ್ನು. ಇಲ್ಲವಾದರೆ ನಾನು ನಿಮ್ಮಿಬ್ಬರಿಗೂ ಪತ್ರ ಬರೆದೂ ಬರೆದೂ ಒಳಜಗಳಗಳನ್ನು ಸಮಾಧಾನ ಮಾಡುವದರಲ್ಲೇ ನನ್ನ ಸಮಯವೆಲ್ಲ ಕಳೆಯಬೇಕಾಗಿತ್ತು.
ಆಗಿನ ನನ್ನ ಇಪ್ಪತ್ತೆರಡು ವರ್ಷದ ಪ್ರಾಯದಲ್ಲೇ ಮತ್ತೊಬ್ಬ ಹೆಂಡತಿಗೆ ಹೆದರಿಕೊಂಡ ನಾನು ಈಗ ವಾನಪ್ರಸ್ತಾಶ್ರನದತ್ತ ಮುಖಮಾಡುತ್ತಿರುವಾಗ ಇನ್ನೊಂದು ಮದುವೆಗೆ ಒಪ್ಪುವೆನೆ? ಹುಚ್ಚೀ, ನಿನ್ನ ತಾಯಿಯನ್ನು ದೂರಬೇಡ. ನಳಿನಿಗೊಬ್ಬ ಗಂಡನನ್ನು ನಾನೇ ಹುಡುಕುತ್ತಿರುವೆನು, ಆದುದರಿಂದ ಅವಳ ಮದುವೆಗೆ ಅವಸರ ಮಾಡಬೇಡ, ತಿಳಿಯಿತೋ?
ಈ ಪತ್ರ ಎಲ್ಲಿಯಾದರೂ ನಳಿನಿಗೆ ಸಿಕ್ಕಿತು, ಅವಳು ಕಳ್ಳಿ. ಅಂದು ಹಿಂದೊಮ್ಮೆ ನಿನಗೆ ಬರೆದಿದ್ದ ಪತ್ರವು ಆಕೆಯ ಆಲಜಿಬ್ರಾ ರಫ್ ನೋಟ ಪುಸ್ತಕದಲ್ಲಿ ಇದ್ದುದನ್ನು ನಾನು ನೋಡಿದ್ದೇನೆ. ಎಚ್ಚರ. ನೀನು ಪತ್ರ ಬರೆಯುವಾಗ ಬಹು ತಿಣುಕುವಂತೆ ಕಾಣುತ್ತದೆ. ಏಕೆಂದರೆ ಅಕ್ಷರಗಳನ್ನು ಸುತ್ತಿಸುತ್ತಿ ಬರೆದಿರುವೆ. ಕೂಡಲೇ ಪತ್ರ ಬರೆ,
ಇತಿ ನಿನ್ನವನೇ.
*****
















