Home / ಲೇಖನ / ಪತ್ರ / ಪೂರ‍್ಣಿಮ – ೧೩

ಪೂರ‍್ಣಿಮ – ೧೩

ಶ್ರೀಮತಿಯವರೇ,

ತಮ್ಮ ಪತ್ರವನ್ನು ಎದುರುನೋಡಿದೆ. ಟಪ್ಪಾಲು ಬಂದಿತು. ತಮ್ಮ ಪತ್ರಗಳು ಬರುವ ದಿನಗಳು ನನಗಿಂತ ನಮ್ಮ ಕಚೇರಿಯ ಸಿಪಾಯಿಗೆ ಚೆನ್ನಾಗಿ ತಿಳಿದಿದೆ. ಇಂದು ಅವನಿಗೂ ನಿರಾಶೆಯಾಯಿತು. ನಿನ್ನ ಪತ್ರ ಬಂದಾಗ ಅದನ್ನು ಜೋಪಾನವಾಗಿ ತಂದುಕೊಟ್ಟಾಗ ನಾನು ಅದನ್ನು ಆತುರದಿಂದ ತೆಗೆದುಕೊಂಡ ಕೂಡಲೇ ಓದಿ ನೋಡಿದರೆ ಆ ಸಿಪಾಯಿಗೇ ಎಷ್ಟೋ ಕೃತ ಕೃತ್ಯತೆಯ ಸಮಾಧಾನ? ನಿನ್ನ ಪತ್ರ ಬರಬೇಕಾದ ದಿನಗಳಲ್ಲಿ ಬರದಿದರೆ ಅಂದು ಆ ಹುಡುಗ ನನ್ನೆದುರಿಗೇ ಬರಲು ಹಿಂಜರಿಯುವನು, ಪಾಪ, ಅವನಿಗೆಂತಹ ಹಿಂಸೆ? ಆದ್ದರಿಂದ ನೀನು ಪತ್ರ ಬರೆಯುವುದನ್ನು ಬಿಟ್ಟರೆ ಇಬ್ಬರಿಗೆ ಹಿಂಸೆ ಕೊಟ್ಟಂತಾಗುವುದು.

ಇಂದು ಸ್ವಲ್ಪ ಬೇಸರದಿಂದಲೇ ಕಚೇರಿಯಿಂದ ಹೊರಬಿದ್ದೆನು. ನಿನ್ನ ಮೇಲೆ ಸ್ವಲ್ಪ ಕೋಪವೂ ಬಂದಿತ್ತು. ನೀನು ಮಕ್ಕಳ ತಾಯಾದಂತೆಲ್ಲಾ ನಿನಗೆ ಸ್ವಲ್ಪ ಜಂಭ ಜಾಸ್ತಿಯಾಯಿತಲ್ಲವೆ? ನಾನು ಸಹ ಎರಡು ತಿಂಗಳು ಒಂದೂ ಪತ್ರವನ್ನು ಬರೆಯಬಾರದು ಆಗ ಬುದ್ದಿ ಬರುತ್ತೆ ಎಂದು ಗೊಣಗಿಕೊಂಡೆ. ಕಾಫಿಗಾಗಿ ಕಚೇರಿಯ ಪಕ್ಕದಲ್ಲೇ ಇದ್ದ ‘ನ್ಯೂ ಗಣೇಶ ವಿಲಾಸ’ ಹೊಟೇಲಿಗೆ ಹೋದೆನು. ಅದು ನೀನು ಅನ್ನುವಂತೆ ನನ್ನ ಮಾವನ ಮನೆಯೇ ಸರಿ. ಅತ್ತೆಯಿಲ್ಲದ, ಮಗಳಿಲ್ಲದ ಮಾವನ ಮನೆ ಅಷ್ಟೆ? ಉಡುಪಿಯ ಆಚಾರ್ಯರಿಗೂ ನನಗೂ ಬಹಳ ಸ್ನೇಹ. ಹಣೆ ಬಹಳ ಅಗಲವಾಗಿದ್ದವರಿಗೆ ಬುದ್ಧಿ ಬಹಳವೆಂದು ಪ್ರತೀತಿ, ನಮ್ಮ ಈ ಹೋಟೇಲಿನ ಆಚಾರ್ಯರ ಹಣೆ ಅದೆಷ್ಟು ಆಗಲ; ತನ್ನಲ್ಲಿಗೆ ಹೋಗಿಬರುವ ಜನರನ್ನೆಲ್ಲಾ ನೋಡುತ್ತಲೇ ಇವರು ರಾಜಕಾರಣಿಗಳಾಗಿದ್ದಾರೆ. ಯಾರ ವಿಷಯವಾಗಲಿ ಯಾವ ವಿಷಯವಾಗಲಿ ಇವರು ಹುಬ್ಬಳ್ಳಿಯ ಬಹು ಹಳಬರಂತೆ ಮಾತನಾಡುವರು. ಈ ಆಚಾರ್ಯರೂ ಈ ಊರಿಗೆ ಎಳೆಗರುವಾಗಿ ಬಂದು ಈಗ ಎತ್ತಾಗಿರುವರು. ಇವರು ನನ್ನೊಂದಿಗೆ ಮಾತನಾಡದ ವಿಷಯವೇ ಇಲ್ಲ. ನಾನು ಈ ಊರಿಗೆ ಬಂದು ಐದು ವರುಷಗಳು ಸಮೀಪಿಸುತ್ತಿದ್ದರೂ, ಇವರಷ್ಟು ಪರಿಚಿತರು ನನಗಾರು ಇಲ್ಲ. ನಾನು ಸ್ವಲ್ಪ ನಗುತ್ತಿದ್ದರೆ, ಮುಖದಲ್ಲಿ ನೀನು ಬರೆದ ಮಾತುಗಳು ಮೂಡಿದ್ದರೆ, ಇವರು ಕೂಡಲೇ “ಊರಿನಿಂದ ಪತ್ರ ಬಂದಿತೇನು ಎಷ್ಟು ಪುಟದ್ದು?” ಎಂದು ಕೇಳಿಯೇ ಬಿಡುವರು. ಮುಖ ಸಪ್ಪೆಗಿದ್ದರೆ ಏಕೆ ಪತ್ರ ಬರಲಿಲ್ಲವೇ ಎಂದು ಕೇಳಿಬಿಡುವರು. ನೋಡಿದೆಯಾ ನಿನ್ನ ಪತ್ರ ಬರೆದಿದ್ದರೆ ನನ್ನ ಪಾಡು? ಪತ್ರ ಬರೆಯುವುದಕ್ಕೆ ರಾಘು ಕೈಬಿಡುವುದಿಲ್ಲವೆಂಬುದು ನಿನ್ನದೊಂದು ಸುಳ್ಳು ನೆಪ. ಅವನು ರಾತ್ರಿ ಮಲಗಿದ ಮೇಲೆ ಎದ್ದು ಕುಳಿತು ಬರೆದರೆ ಏನು? ನೀನು ಮೊದಲೇ ‘ನಿದ್ದೆಯ ಮುದ್ದೆ’ ಜ್ಞಾಪಕವಿದೆಯೇ? ಹಾಲಿನವಳು ಬೆಳಗಿನಾರು ಗಂಟೆಗೆ ಬೆಳಕುಹರಿಸಿ ಬಾಗಿಲು ತಟ್ಟಿ, ಅವ್ವಾವರೇ ಎಂದು ಕೂಗಿದರೆ, ಅವಳನ್ನು ತುಟಿಯೊಳಗೆ ಶಪಿಸುತ್ತ ಅತ್ತಲಿತ್ತ ಹೊರಳಾಡುವುದೂ, ನಿನ್ನ ಪಾಡನ್ನು ನೋಡಲಾರದೆ ನಾನೇ ಎದ್ದು ಹಾಲು ತೆಗೆದು ಇಡುತ್ತಿದ್ದುದು? ಆಗ ಹಾಲಿನವಳು ಒಳಗೊಳಗೇ ನಗುತ್ತ “ಏನ್ ಬುದ್ದಿ ಅಮ್ಮಾವ್ರಗೆ ಮೈಗೆ ಚೆನ್ನಾಗಿಲ್ವ?” ಎಂದು ಕೇಳುತ್ತಿದ್ದಳು. ನಾನು ಊ, ಮತ್ತು ಉಹು, ಎರಡನ್ನು ಇಲ್ಲ ಹೌದು ಎಂಬ ಎರಡರ್ಥ ಸೇರಿಸಿ ಉತ್ತರ ಕೊಟ್ಟು ಹಾಲನ್ನು ತಂದು ನಿನ್ನ ಹಾಸಿಗೆಯ ಹತ್ತಿರ ಇಟ್ಟು ಗಂಟೆ ಎಂಟಾಯಿತು ಎಂದು ಮಂತ್ರ ಜಪಿಸಲಾರಂಭಿಸಿದಾಗ ನಿಮ್ಗೇನು ಗಂಡಸರಿಗೆ ಸ್ವಲ್ಪವೂ ದಯೇನೇ ಇಲ್ಲ. ಉಪಕಾರ ಸ್ಮರಣೆ ಇಲ್ಲದೋರು ನೀವು” ಎಂದು, ಹೊರಳಾಡಿ, ಕೂಗಾಡಿ ಮೇಲಕ್ಕೇಳುವ ಹೊತ್ತಿಗೆ ಎಳೆ ಬಿಸಿಲು, ಕಿಟಕಿಯ ಕಿಂಡಿಯಿಂದ ಒಳಕ್ಕೆ ನುಗ್ಗಿ ನಿನ್ನ ಅರ್ಧ ಮೂಗು ಮುಚ್ಚಿಕೊಂಡ ಮುಖದ ಮೇಲೆ ಬಿದ್ದಾಗ, ನಾಚಿಕೆ ಬಂದು ದಡಾರನೆ ಎದ್ದು, “ನಿಮ್ಮ ಮುಖ ಯಾವಾಗಲೂ ರಾಹು ನಿಮ್ಮ ಮುಖ ತೋರಿಸಬೇಡಿ, ಬೆಳ್ಗೆ ಎದ್ದು ನಿನ್ನ ಮುಖ ನೋಡಿದರೆ ರಕ್ತಕಾಣೋದೇ, ಅಂತ ಹೇಳುತ್ತಲೇ ನಿದ್ದೆಯ ಕೋರೆಯಿಂದ ಕೂಡಿದ ನನ್ನ ಜೊಲ್ಲಿನ ಮುಖವನ್ನೇ ಬೆಳಗಿನ ಉಪಹಾರವನ್ನು ತಿನ್ನುವಂತೆ ತಿಂದು ಹೋಗುತ್ತಿದ್ದ ಆ ದಿನಗಳಲ್ಲಿ ನಿನಗಿನ್ನೂ ಮಕ್ಕಳ ಕಾಟವಿರಲಿಲ್ಲ. ಅತ್ತೆಯಂತೂ ಪರಲೋಕವಾಸಿಯಾಗಿ ಅಪ್ಪ ಸನ್ಯಾಸಿಯಾಗಿದ್ದರು. ನೀನೇ ಮನೆಗೆ ನನಗೆ ಒಡತಿ. ಆದ್ದರಿಂದಲೇ ನಿನಗಷ್ಟು ನಿದ್ದೆ. ಚಿಂತೆಯ ಸಂತೆಗಿನ್ನೂ ನೀನು ಹೋಗಿರಲಿಲ್ಲ. ಈಗದರ ಸಂತೆ ಸಾಕಷ್ಟಾಗಿದೆ. ಆದರೆ ನಿದ್ದೆ ಬರದೆ ಒದ್ದಾಡುವ ಬದಲು ಎದ್ದು ಕುಳಿತು ನನಗೆ ಪತ್ರ ಬರೆಯುವುದೇ ಒಳ್ಳೆಯ ಕೆಲಸವಲ್ಲವೆ? ಇನ್ನಾದರೂ ಬರೆ.

ನಿನ್ನ ಜಂಭ, ನಿನ್ನ ನಿದ್ದೆ ಇವನ್ನು ಬಣ್ಣಿಸುವುದರಲ್ಲಿ ನಾನು ಬರೆ ಯಬೇಕಾದ್ದನ್ನೇ ಮರೆತುಬಿಟ್ಟೆನು. ಬೆಳಗಿನ ಕಾಫಿ ತೀರಿಸಿಕೊಂಡು ಈಚೆಗೆ ಬಂದು ಎಳೆಬಿಸಿಲ ಕಡೆಗೆ ತಲೆಎತ್ತಿ ನೋಡುತ್ತಿರುವಾಗಲೇ ದಾರಿಯ ಪಕ್ಕದಲ್ಲಿ ಒಬ್ಬ ಸೈಕಲ್ ವಾಲಿ (ಹೆಂಗಸಲ್ಲ) ನಿಂತಿದ್ದನು. ಅವನ ಸೈಕಲನ್ನು ಸಾಲ ಕೇಳುವವರು ಹಿಡಿದು ನಿಲ್ಲಿಸುವಂತೆ ನಿಲ್ಲಿಸಿರುವ ಇಬ್ಬರು ಹುಡುಗಿಯರು ಹಿಡಿದಿದ್ದರು. ಆತ ಸೈಕಲನ್ನು ಬಿಡಲಾರ. ಹುಡುಗಿಯರನ್ನು ಮಾತನಾಡಿಸುವುದನ್ನೂ ಬಿಡಲಾರ. ನನ್ನ ಕಣ್ಣು ಹಾಗೆಯೇ ಅತ್ತಲೇ ಹರಿಯಿತು. ಕಾಲುಗಳು ಇದ್ದ ಭಾಗದಲ್ಲೇ ಇದ್ದವು. ಆ ಹುಡುಗಿಯರು ವೇಷಭೂಷಣದಿಂದ ಅವರು ಹುಬ್ಬಳ್ಳಿಯವರಲ್ಲವೆಂದು ತಿಳಿದುಕೊಳ್ಳುವುದು ತಡವಾಗಲಿಲ್ಲ. ಆದರೆ ಅವರೇಕೆ ಇಂದು ನಡುಬೀದಿಯಲ್ಲಿ ನಸುಬೆಳಕಿನಲ್ಲಿ ಈ ಸೈಕಲ್ ವಾಲಿಯನ್ನು ಹಿಡಿದು ನಿಲ್ಲಿಸಿರುವರು ಎಂಬುದು ಹೊಳೆಯಲಿಲ್ಲ. ನಾನು ನಿಂತು ನೋಡಲಾರಂಭಿಸಿದೆ. ಸೈಕಲ್ ಹಿಡಿದು ಅದರೊಂದಿಗೆ ಆಟವಾಡುವ ನೆವದಲ್ಲಿ ಪೆಡಲನ್ನು ಹೆತ್ತಿ ತುಳಿಯುವುದರಲ್ಲಿ ಅವರು ಮಾಡುತ್ತಿರುವ ಅಂಗವಿನ್ಯಾಸ ಬಹಳವಾಯಿತು. ಅಸಹ್ಯವಾಗುವಷ್ಟಾಯಿತು. ನಕ್ಕರು. ಕೇಕೆ ಹಾಕಿದರು. ಇನ್ನು ಸೈಕಲ್ ವಾಲಿಯನ್ನು ಹಿಡಿದು ಎಳೆಯಬೇಕು. ಅದೊಂದೇ ಉಳಿದಿತ್ತು. ನಾನು ನೋಟ ಕಡಿಮೆ ಮಾಡಿ ಕಿವಿಯನ್ನು ಅತ್ತ ಕೊಟ್ಟೆನು. ಮಾತುಗಳು ಹಿಂದಿಯಲ್ಲಿದ್ದರೂ ಏನೋ ವಿಚಿತ್ರವಾಗಿದ್ದವು. ಕೊನೆಗೆ ಅವರಿಬ್ಬರೂ ಆತನನ್ನು ಪೀಡಿಸುತ್ತಿದ್ದುದು ‘ಚಾರ ಆಣೆ’ಗೆಂದು ಅವರ ಮಾತುಗಳ ಮೇಲಿನಿಂದ ತಿಳಿಯಲಾರಂಭಿಸಿತು.

ಇವರೇನು ಭಿಕ್ಷುಕಿಯರೆ? ವೇಷ ಅಂತಿಲ್ಲ. ಮತ್ತೆ ಸಂಭಾವಿತ ಬಡ ಸ್ತ್ರೀಯರೇ? ಅಲ್ಲ. ಅವರೇಕೆ ಈ ನಡುಬೀದಿಯಲ್ಲಿ ಈ ರೀತಿ ಸರ್ಕಸಮಾಡಿ ಹಣ ಕೇಳುತ್ತಿರುವರು? ನಾನು ತಲೆ ಕೆರೆದುಕೊಂಡೆ. ಕೊನೆಗೆ ಅರ್ಥವಾಯಿತು ಆ ಹುಡುಗಿಯರಾರೆಂಬುದು. ಅರ್ಥವಾದ ಮೇಲೆ ಅವರ ಚಾರಾಣೆಯ ಆಟಕ್ಕೆ ನನಗೆ ಸಿಟ್ಟು ಬರಲಿಲ್ಲ. ಹೊಟ್ಟೆಯುರಿ ಬ೦ದಿತು. ಎಲ್ಲೋ ಹುದುಗಿದ್ದ ಸಂಕಟವು ಉಕ್ಕಿಬಂದಿತು.

ಗಾಂಧೀಜಿ ಒಮ್ಮೆ ಅಂದಮಾತು ತಟ್ಟನೆ ನೆನಪಿಗೆ ಬಂದಿತು. “ಸೀತಾ ಸಾವಿತ್ರಿಯರ ನಾಡಿದು, ಇಂತಹ ನಾಡಿನಲ್ಲಿ ಭಾರತದ ಸ್ತ್ರೀಗೆ ಆಗುತ್ತಿರುವ ಅಪಮಾನ ಅಪಚಾರವನ್ನು ನನ್ನಿಂದ ನೋಡಲಾಗದು” ಎಂದು ಅವರು ಪಂಜಾಬಿನ ದುರಂತವನ್ನು ನೋಡಿ ಅಂದಿದ್ದರು. ಸರಿ, ಸಾಲು ಸಾಲಾಗಿ ಭಾರತ ವಿಭಜನೆಯ ಚಿತ್ರವೇ ಇತಿಹಾಸವಾಗಿ ನನ್ನ ಕಣ್ಣು ಮುಂದೆ ಹಾಯ್ದಿತು.

ಅಯ್ಯೋ ಪಾಪ! ಇಂತಹ ಗತಿಯೇ ಎಂಬ ಉದ್ಗಾರ ನನ್ನ ಕರುಳಿನಲ್ಲಿ ಕೊರೆಯುತ್ತಿತ್ತು. ಪೂರ‍್ಣೀ, ನಿನಗನ್ನಿಸಿರಬಹುದು ನನ್ನ ಈ ಉದ್ಗಾರ, ಈ ಸಂಕಟ, ವಿಚಿತ್ರವೆಂದು. ದಾರಿಯಲ್ಲಿ ಹೋಗಿಬರುವವರಿಗೆಲ್ಲಾ ಮರುಗುತ್ತಿರಿ ಎಂದು ನೀನು ಎಂದಿನಂತೆ ಚೇಷ್ಟೆ ಯಾಡಬಹುದು.

ಆದರೆ ಪೂರ‍್ಣಿ ನಾನು ಚೇಷ್ಟೆ ಯಾಡುವಂತಿಲ್ಲ. ಈ ಹುಡುಗಿಯರು ಮಾಡುತ್ತಿರುವ ಚೇಷ್ಟೆಯನ್ನೂ ಸಹಿಸಬೇಕಾಗಿದೆ.

ನಾಲ್ಕಾಣೆಯ ತಿರುಪೆಯ ಮಾತಿರಲಿ, ಇವರಾರು ಇಲ್ಲಿಗೇಕೆ ಬಂದರು, ಎಲ್ಲಿಯವರು ಎಂಬುದನ್ನು ವಿಚಾರಿಸುವ ಮೊದಲೇ ಇವರು ನಿರಾಶ್ರಿತೆಯರು ಎಂದು ನನಗನ್ನಿಸಿತ್ತು. ಹಿಂದೊಮ್ಮೆ ನನ್ನ ಆಫೀಸ್ ರೂಮಿನೊಳಕ್ಕೆ ಬಂದು ಕುರ್ಚಿಯ ಮೇಲೆ ಕುಳ್ಳಿರದೆ, ಮೇಜಿನ ಮೇಲೆ ಕುಳಿತುಕೊಳ್ಳಲೂ ಸಿದ್ಧವಾಗಿದ್ದ ಅಸ್ಸಾಮದ ನಿರಾಶ್ರಿತೆಯರಿಬ್ಬರ ನೆನಪು ಬಂದಿತು.

ಸ್ತ್ರೀಯ ಅತ್ಯಂತ ಪವಿತ್ರ ಧನವಾದ ಲಜ್ಜೆಯನ್ನು ತುಳಿದು ನಿಂತ ಈ ಸ್ತ್ರೀಯರನ್ನು ಕಂಡರೆ ಒಮ್ಮೊಮ್ಮೆ ಹೇಸಿಕೆಯಾಗುವುದು. ನಾವು ಸ್ತ್ರೀಯರನ್ನು ಪೂಜಿಸುವುದು ಗೌರವಿಸುವುದು ಅವರ ಶೀಲಕ್ಕಾಗಿ. ನಾನು ಅಕುಲೀನ ಸ್ತ್ರೀಯ ದರ್ಶನವಾದರೆ ಸ್ತ್ರೀಯರಲ್ಲಿ ನನಗೆ ಇರುವ ಅಪಾರ ಗೌರವಕ್ಕೆ ಎಲ್ಲಿ ಕುಂದು ಬಂದುಬಿಡುವುದೋ ಎಂಬ ಹೆದರಿಕೆಯಿಂದ, ನಾನು ಅಂತಹ ಸನ್ನಿವೇಶವನ್ನೇ ಕಣ್ಣುಗಳಿಗೆ ತಂದುಕೊಳ್ಳುವುದಿಲ್ಲ. ಸುಸಂಸ್ಕೃತೆಯಾದ ಸ್ತ್ರೀ, ದೇವರ ಹಣೆಯ ಮೇಲಿನ ತಿಲಕವಿದ್ದಂತೆ. ಆದರೂ ಈ ನಿರಾಶ್ರಿತ ಸ್ತ್ರೀಯರ ಪರಿಸ್ಥಿತಿಯನ್ನು ನೋಡಿದಾಗ ನನಗೆ ಅವರ ಬಗ್ಗೆ ತಿರಸ್ಕಾರ ಬರದೆ ಕರಳು ಕೀಳುವ ವೇದನೆಯಾಗುವುದು.

ಭಾರತದ ಸ್ವಾತಂತ್ರವು ನಮಗಿತ್ತ ಶಾಪವಿದೇನೋ ಎಂದನ್ನಿಸುವುದು, ಆ ಹಿಂದು ಮುಸ್ಲಿಂ ದೊಂಬೆಯ ಕಾಲದಲ್ಲಿ ಬರುತ್ತಿದ್ದ ಸುದ್ದಿಗಳನ್ನು ಓದುವದಿರಲಿ ಅದನ್ನು ಭಾಷಾಂತರಿಸಿ ನಮ್ಮ ಪತ್ರಿಕೆಯಲ್ಲಿ ಪ್ರಕಟಸಬೇಕಾಗಿ ಬಂದಾಗಲೇ ನನ್ನ ಹೃದಯವು ಕಮರಿ ಹೋಗುತ್ತಿತ್ತು. ಸೇಡಿಗೆ ಸೇಡು ತೀರಿಸಿಕೊಳ್ಳುವಾಗ ಸ್ತ್ರೀಯರ ಮಾನದ ಚಲ್ಲಾಟವಾಡಿದಾಗ ಸ್ವತಂತ್ರದೇವಿ ರಕ್ತರಂಜಿತ ವಸ್ತ್ರವನ್ನುಟ್ಟು ಬಂದಂತೆ ಕಾಣುತ್ತಿತ್ತು. ಅಪಹೃತ ಸ್ತ್ರೀಯರ ಸಂಖ್ಯೆಯನ್ನು ಧಾರಾಳವಾಗಿ ಬರೆಯುತ್ತಿದ್ದ ಕೈ ಓದುತ್ತಿದ್ದ ಬಾಯಿ ಇವೆಲ್ಲವೂ ಈ ನಿರಾಶ್ರಿತ ಹುಡುಗಿಯರನ್ನು ನೋಡಿದಾಗ ನೆನಪು ಬಂದಿತು.

ಜಾತೀಯತೆ ವಿಷವು ಅದೆಷ್ಟು ಕ್ರೂರವೆಂಬುದನ್ನು ಮನಗೊಂಡ ಪಂ. ನೆಹರು, ತನ್ನ ಪ್ರತಿಭಾಷಣದಲ್ಲಿ ಪ್ರತಿಮಾತಿನಲ್ಲೂ ಈ ವಿಷದ ನಿರ್ಮೂಲನವಾಗದೆ ಭಾರತಕ್ಕೆ ಕಲ್ಯಾಣವಿಲ್ಲವೆಂದು ಒಂದೇ ಸವನೆ ಹೇಳುತ್ತಲೇ ಇರುವುದನ್ನು ನೀನು ಪತ್ರಿಕೆಯಲ್ಲಿ ಓದುತ್ತಿರುವೆಯಲ್ಲವೆ?

ನಿರಾಶ್ರಿತರ ಕರುಣ ಕತೆಯನ್ನು ಕೇಳಿದರೆ ಕರಳು ಕಳಚಿಬೀಳುವವು. ಅವರು ಮನೆಮಾರು ಕಳೆದುಕೊಂಡು ನಿರ್ಗತಿಕರಾಗಿ ಬೀದಿಯ ಅಂಚಿನಲ್ಲಿ ಮೈದಾನದಲ್ಲಿ ಮರದ ಕೆಳಗಡೆ ಮೃಗಗಳಂತೆ ಸಂಸಾರ ಜೀವನವನ್ನು ಸಾಗಿಸುತ್ತಿರುವುದನ್ನು ನೋಡುವುದು ನಮಗೆ ಅತಿ ಸಾಮಾನ್ಯವಾದ ಮಾತಾಗಿದೆ. ಅದನ್ನು ಹೇಗಾದರೂ ಗಟ್ಟಿ ಮನಸ್ಸು ಮಾಡಿಕೊಂಡು ನೋಡಬಹುದು. ಆದರೆ ತಾವು ಸ್ತ್ರೀಯರು. ತಮ್ಮ ಲಜ್ಜೆಯೇ ತಮಗೆ ದೇವರು ಎಂಬ ಆರ್ಯಸ್ತ್ರೀಯ ಮರ್ಯಾದೆಯನ್ನು ಬೀದಿಯಲ್ಲಿ ಮಾರಿ ನಾಲ್ಕಾಣೆಗಾಗಿ ಏತಕ್ಕಾದರೂ ಸಿದ್ಧವಾಗಿರುವ ನಡುಹರೆಯದ ಹುಡುಗಿಯರನ್ನು ನೋಡುವುದೆಂತು ಸಾಧ್ಯ? ಭಾರತವು ನೀತಿಪ್ರಧಾನವಾದ ರಾಷ್ಟ್ರ, ಓರ್ವ ಸೀತೆ ಅಬಲೆಯಾಗಿ ಏಕಾಕಿಯಾಗಿ ಕಾಮುಕಿ ದಶಮುಖರಾವಣನಿಗೆ ಮಾರಿಯಾಗಿ ನಿಂತ ಆರ್ಯ ಭೂಮಿ ಇದು. ಪ್ರತಿಯುಗದಲ್ಲೂ ಯುಗಶಕ್ತಿಯಾಗಿ ಸ್ತ್ರೀಯು ವಿಜೃಂಭಿಸಿದ ಭಾರತದಲ್ಲಿ ಇದಾವ ಕೇಡಿಗೇ ಈ ಪರಿಸ್ಥಿತಿ
ಬ೦ದಿತೋ?

ಸೈಕಲವಾಲಿಯ ಹತ್ತಿರ ನಿಜವಾಗಿಯೂ ಒಂದು ಪೈಯೂ ಇದ್ದಂತೆ ತೋರಲಿಲ್ಲ. ಆತ ಎಷ್ಟು ಹೇಳಿದರೂ ಅವರಿಗೆ ಚಾರಾಣೆ ಲಾಭವಾಗದೆ ಬಿಡುವಂತಿರಲಿಲ್ಲ. ಸೈಕಲನ್ನು ನೆಲಕ್ಕೆ ಉರುಳಿಸಿದರು. ಬೆಲ್ಲು ಬಾರಿಸಿದರು. ಅದರ ಮೇಲೆ ಹತ್ತಿ ಕುಣಿದರು. ದಾರಿಯಲ್ಲಿ ಹೋಗುವವರ ಲಕ್ಷ್ಯ ಸೆಳೆಯುವಂತೆ ಕೇಕೆ ಹಾಕಿ ನಕ್ಕರು. ಆದರೂ ಅವರಿಗೆ ನಾಲ್ಕಾಣೆ ದೊರೆಯಲಿಲ್ಲ. ಸೈಕಲ್ ವಾಲಿಯು ನಿರುಪಾಯವಾಗಿ, ನಮ್ಮ ಮನೆ ಹತ್ತಿರವಿದೆ; ಅಲ್ಲಿಗೆ ನನ್ನೊಡನೆ ಬನ್ನಿ ಕೊಡುವೆನು ಎಂದನು. ಸರಿ ಅವನ ಮೈಗೆ ಮೈ ತಗಲಿಸುತ್ತಾ, ಬೆನ್ನು ಹಿಡಿದು ಚಪ್ಪರಿಸುತ್ತ ಅವನ ಮನೆಯ ಕಡೆಗೆ ಚಾರಾಣೆಗಾಗಿ ಹೊರಟರು!

ಪೂರ‍್ಣೀ, ನನ್ನಿ೦ದ ನೋಡಲಾಗಲಿಲ್ಲ. ಸೀದಾ ಒಳಗೆ ಬಂದು ಮೇಜಿಗೆ ಆತು ಕುಳಿತು ನನ್ನ ವ್ಯಸನವಷ್ಟನ್ನು ಈ ಪತ್ರದಲ್ಲಿ ತೋಡಿಕೊಂಡಿರುವೆನು. ಇಂತಹ ಭಾವನೆಯ ಬಡಿತಗಳನ್ನೂ ಭಾವದೇಶ್ವರಿಯಾದ ನಿನ್ನಲ್ಲಲ್ಲದೆ ಇನ್ನಾರಲ್ಲಿ ಹೇಳಿಕೊಳ್ಳಲಿ?
ಸ್ತ್ರೀಯು ಆಡುವ ಮಾತೂ ಸುಶ್ರಾವ್ಯವಾದ ಸಂಗೀತದಂತಿರಬೇಕೆಂದು ಆಕೆ ಗಟ್ಟಿಯಾಗಿ ಒರಟಾಗಿ ಎತ್ತಿದ ಕರಟುದನಿಯಲ್ಲಿ ಮಾತನಾಡಿದರೆ, ಆಕೆಯ ನಯವಿಹೀನೆಯೆಂದು ಭಾವಿಸಿಬಿಡುವ ನನಗೆ ಇಂತಹ ಪ್ರಸಂಗಗಳೂ ಒದಗಬಾರದೆಂದು ನಾನು ಬಹಳ ಜಾಗರೂಕನಾಗಿರುವೆನು. ಆದರೆ ನದಿಯಲ್ಲಿ ಈಜುವಾಗ ಮೈಗೆ ನೀರು ಅಂಟದಂತೆ ನೋಡಿಕೊಳ್ಳುವುದು ಸಾಧ್ಯವೆ? ಪೂರ‍್ಣಿ ಹೇಳು.

ಇತಿ ನಿನ್ನ ಪತಿ
*****

Tagged:

Leave a Reply

Your email address will not be published. Required fields are marked *

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...