Home / ಲೇಖನ / ಪತ್ರ / ಪೂರ‍್ಣಿಮ – ೧೮

ಪೂರ‍್ಣಿಮ – ೧೮

ಪ್ರಿಯ ಪೂರ‍್ಣಿಮಾ,

ಸ್ವಲ್ಪ ತಾಳು, ಎರಡು ವಾರ ನಾನೇಕೆ ಒಂದು ಪತ್ರವನ್ನೂ ಬರೆಯಲಿಲ್ಲವೆಂಬುದಕ್ಕೆ ಸಕಾರಣ ಕೊಟ್ಟು ಸಮಾಧಾನ ಪಡಿಸುವೆನು. ಚುನಾವಣೆ, ಮಹಾಚುನಾವಣೆ; ಕರ್ನಾಟಕದಲ್ಲಿ ಬಿರುಸಿನ ತುರಿಸು, ಇದು ಕಾಂಗ್ರೆಸ್ ಪ್ರಾಂತವಾದರೂ, ಕಾಂಗ್ರೆಸ್ಸಿನ ಪ್ರತಿಸ್ಪರ್ಧಿಗಳು ಇಲ್ಲಿ ಬಹಳ. ಹೀಗಾಗಿ ಕಾಂಗ್ರೆಸ್ಸು ತನ್ನ ಎದುರಾಳಿಗಳನ್ನು ಉದಾಸೀನತೆಯಿಂದ ನೋಡಲಾಗಲಿಲ್ಲ. ಅಂದ ಮೇಲೆ ಕಾಂಗ್ರೆಸ್ಸಿನ ಮುಖಪತ್ರದಂತಿರುವ ನಮ್ಮ ಪತ್ರಿಕೆಯು ತನ್ನ ಉದ್ದಗಲದಷ್ಟೂ ಕಾಂಗ್ರೆಸ್ಸಿನ ಪ್ರಚಾರವನ್ನು ಮಾಡಬೇಕಾಗಿದ್ದಾಗ ನನಗೆ ಎಂದಿನಂತೆ ನಿನಗೆ ಆರಾರು ಪುಟಗಳಷ್ಟು ಪತ್ರ ಬರೆಯುವುದಕ್ಕೆ ವೇಳೆ ಎಲ್ಲಿಂದ ತರಲಿ?

“ನಿದ್ದೆಗೆ, ಊಟಕ್ಕೆ, ಸಿನಿಮಾಕ್ಕೆ, ಎಲ್ಲಕ್ಕೂ ವೇಳೆ ಇದೆ. ನನಗೆ ನೀವು ಪತ್ರ ಬರೆಯುವ ವೇಳೆ ಯಾರಿಗೆ ಹೋಗಿದೆ? ಕೇಳಬೇಕೋ ಬೇಡವೋ?” ಎಂದು ಬಲು ಜೋರಿನಿಂದ ಕೇಳಿರುವಿ, ಇದಕ್ಕೆ ಉತ್ತರ ಮೇಲಿನಷ್ಟೇ. ನಂಬಿದರೆ ನಂಬು, ನಿನಗೆ ಪತ್ರ ಬರೆಯುವ ವೇಳೆಯು ಯಾರಿಗೂ ಹೋಗಿಲ್ಲ. ನಿನಗೇ ಅದು ಮೀಸಲು. ಉಳಿದವರು ಯಾರು ಓದಬೇಕು ಈ ನನ್ನ ಪುರಾಣವನ್ನು! ನಿನಗಂತೂ ವಿಧಿಯಿಲ್ಲ; ಅದು ನನ್ನ ಮತ್ತು ನಿನ್ನ, ಇಬ್ಬರ ಕತೆಯಲ್ಲವೆ?

ಕೊಂಕು ನುಡಿ ನಿನ್ನ ಬುದ್ಧಿಯ ಬಂಡವಲು. ಅದನ್ನು ಬರೆಯದೆ ಒಂದು ಪತ್ರವನ್ನೂ ಮುಗಿಸುವಂತಿಲ್ಲ. “ತಾವು ಚುನಾವಣೆಯಲ್ಲಿ ಎಲ್ಲಿಗೆ ಚುನಾಯಿಸಲ್ಪಟ್ಟಿರುವಿರಿ.” ಎಂದು ಅಣಕವಾಡಿರುವಿ. ಹೌದು, ನೀನಲ್ಲದೆ ಇನ್ನಾರು ನನ್ನನ್ನು ಅಣಕಿಸಬೇಕು? ನಾನು ಚುನಾವಣೆಗೆ ನಿಂತೂ ಆಯಿತು. ಆರಿಸಿಯೂ ಆಯಿತು. ನನ್ನ ಮತಕ್ಷೇತ್ರದ ಹೆಸರು ಪೂರ‍್ಣಿಮಾ, ಇದರಲ್ಲಿ ಪ್ರತಿಸ್ಪರ್ಧಿಗಳೇ ಇರಲಿಲ್ಲ. ಪ್ರಚಾರದ ಅವಶ್ಯಕತೆಯಿಲ್ಲದೆ ಅವಿರೋಧವಾಗಿ ಆರಿಸಿ ಬಂದೆನು. ಆರಿಸಿ ಕೊಂಡವಳು ಪೂರ‍್ಣಿ; ಮತ್ತಾವ ಚುನಾವಣೆ ನನಗೆ?

ಈ ಸಲ ನಿನ್ನ ಪತ್ರದಲ್ಲಿ ಒಟ್ಟಿಗೆ ಮೂರೂ ನಾಲ್ಕು ಪ್ರಶ್ನೆಗಳನ್ನು ಸೇರಿಸಿರುವೆ. ಅಣಕದ ಮಾತಿರಲಿ “ಗಂಡುಸಿನ ಹೃದಯ” ನಿನ್ನದು ಎಂದು ನಾನು ಬರೆದರೆ, ಅದಕ್ಕೆ ಉತ್ತರಕೊಡುವಾಗ ಗುರುವಿಗೇ ತಿರು ಮಂತ್ರ ಹೇಳಿದೆ. ಗಂಡುಸಿನ ಹೃದಯವನ್ನು ಗಡುಸೆಂದು ನಿಮ್ಮ ಮಾತಿನಲ್ಲೇ ನೀವೇ ಒಪ್ಪಿಕೊಂಡಾಯಿತಲ್ಲವೆ?” ಎಂದು ತಕ್ಷಣವೇ ನನ್ನ ಮಾತನ್ನು ನನಗೇ ತಿರುಗಿಸಿ ಬಿಟ್ಟಿರುವೆ. ಪೂರ‍‍್ಣೀ, ಒಮ್ಮೆಲೇ ನೀನು ಇಷ್ಟೊಂದು ಬುದ್ಧಿವಂತೆಯಾಗಬೇಡ. ಸ್ವಲ್ಪ ತಾಳು, ನೀನು ಏನೇ ಹೇಳು ನನಗಿಂತ ನಿನ್ನ ಮನಸ್ಸು ಸ್ವಲ್ಪ ಕಠಿಣವೆಂದೇ ಹೇಳುವೆನು. ನೀನೊಪ್ಪಿಕೊಳ್ಳುವುದಿಲ್ಲ. ನನಗೆ ಗೊತ್ತು. ನೀನು ಯಾವುದನ್ನು ತಾನೆ ಒಪ್ಪಿಕೊಂಡಿರುವೆ ಹೇಳು, ನೋಡೋಣ. ಹೋಗಲಿ ನಿನ್ನ ಒಪ್ಪು ತಪ್ಪುಗಳನ್ನೆಲ್ಲಾ ಬದಿಗಿಟ್ಟು ನಿನ್ನನ್ನು ಒಪ್ಪಿಕೊಂಡು ಅಪ್ಪಿಕೊಂಡು ವರುಷ ಹದಿನೈದು ಮುಗಿದಿರುವಾಗ ಈಗೇಕೆ ಅದರ ವಿಮರ್ಶೆ? ಮತ್ತೆ ಸಿಟ್ಟಾಗಿ ಮಾರುದ್ದದ ಪತ್ರ ಬರೆದು ಮೋರೆ ಮೊಳದಷ್ಟು ಉದ್ದ ಮಾಡಿಕೊಂಡರೆ ಸಮಾಧಾನ ಪಡಿಸಲು ನಾನೇ ಗಾವುದ ಗಾವುದ ರೆಕ್ಕೆಯಿಲ್ಲದೇ ಹಾರಿಬಂದು ಆರೈಕೆ ಮಾಡಬೇಕಾದೀತು.

ಎಲ್ಲೋ, ನೀನು ಓದಿರಬಹುದು, ವಾಲ್ಟೇರನ ಆ ಸ್ತ್ರೀ ಪಕ್ಷಪಾತಿತ್ವದ ಮಾತುಗಳನ್ನು ನಾನು, ಓಮ್ಮೊಮ್ಮೆ ಸ್ತ್ರೀ ಸಹಾನುಭೂತಿ ಪರನಾದಾಗ ಅಂತಹ ಜನರ ಮಾತುಗಳನ್ನು ನಿನಗೆ ಓದಿ ಹೇಳುತ್ತಿದ್ದೆ. ಅದನ್ನೆಲ್ಲಾ ನೆನಪಿನಲ್ಲಿಟ್ಟುಕೊಂಡು ನನ್ನ ಮೇಲೆಯೇ ಅಧಿಕಾರವನ್ನು ಚಲಾಯಿಸುತ್ತಿರುವಂತಿದೆ.

“All reasoning of men are not worth one sentiment of woman” ಅಂದರೆ “ಮನುಷ್ಯನ ವಿವೇಚನಾ ಶಕ್ತಿಯೆಲ್ಲವೂ, ಸ್ತ್ರೀಯ ಒಂದು ಭಾವನಾ ಬಲದೊಂದಿಗೆ ಸರಿದೂಗಲಾರದು” ಎಂದು ಈ ಮಹಾರಾಯ ಹೇಳಿಬಿಟ್ಟು ಕೆಲವು ಗಂಡಸರ ಪ್ರಾಣಕ್ಕೆ ಸಂಚಕಾರ ತಂದಿರುವನು. “ನಿಮ್ಮ ಸುಖಕ್ಕಾಗಿ, ನಿಮ್ಮ ಎಳಿಗೆಗಾಗಿ, ನಿಮ್ಮ ಶ್ರೇಯಸ್ಸಿಗಾಗಿ, ಇಲ್ಲಿ ಏಕಾಕಿಯಾಗಿ ನಾನು ಬಾಳುತ್ತಿರುವೆನು. ನಿಮ್ಮ ಸಂಪಾದನೆಗಿಂತ ನಿಮ್ಮ ಅಗಲುವಿಕೆಯು ಕಷ್ಟ ನನಗೆಷ್ಟಿದೆ ಆದರೂ ಅದನ್ನು ಸಹಿಸಿಕೊಂಡಿರುವೆನು. ನಿಮಗದು ತಿಳಿದಿಲ್ಲ” ಎಂದು ನೀನು ಮೊನ್ನಿನ ಪತ್ರದಲ್ಲಿ ಸಿಟ್ಟಿಗೆದ್ದು ಬರೆದಿರುವೆ. ಇದು ಸ್ತ್ರೀಯ ಭಾವ ಶಕ್ತಿ. ಈ ಶಕ್ತಿಯ ಮುಂದೆ ನಾನು ನಿನಗೆ ಈ ನಾಲ್ಕು ವರುಷಗಳಲ್ಲಿ ಬರೆದ ನನ್ನ ನೂರಾರು ಪತ್ರಗಳು ನಿರ್ಜೀವಿಯಾದವೆಂದು ತಿಳಿದು ಕೊಳ್ಳಬಾರಬೇಕೆ?

ಪೂರ‍‍್ಣೀ, ಇನ್ನು ಮುಂದೆ ಇಂತಹ ಶಕ್ತಿಯನ್ನು ನನ್ನ ಮೇಲೆ ಪ್ರಯೋಗಿಸಬೇಡ. ಹೌದು, ಹೌದು, ನೀನೇ ಕೊನೆಯಲ್ಲಿ ಪತ್ರವನ್ನು ಮುಗಿಸುವಾಗ ಇನ್ನು ಹೆಚ್ಚು ಬರೆದು ನಿಮ್ಮ ಹೆಣ್ಣಿನ ಹೃದಯವನ್ನು ನೋಯಿಸಲು ಇಷ್ಟವಿಲ್ಲ” ಎಂದು ಬರೆದಿರುವಿ. ನನ್ನದು ಹೆಣ್ಣಿನ ಹೃದಯವಲ್ಲ ‘ಹೆಣ್ಣು ಹೃದಯ’ ಗೊತ್ತಾಯಿತೇ? ಒಂದಕ್ಷರದಲ್ಲಿ ಬೆಟ್ಟದಷ್ಟು ಅರ್ಥ ಅಂತರವಾಗುವುದು.

ಈಗ ಕೈ ಬಿಡುವಾಗಿದೆ; ಕರ್ನಾಟಕದಲ್ಲಿ ಕಾಂಗ್ರೆಸ್ಸು ಜಯಭೇರಿಯನ್ನು ಹೊಡೆಯಿತು. ಪ್ರತಿಸ್ಪರ್ಧಿಗಳ ತೇಜೋವಧೆ – ಆಗಬಾರದಷ್ಟು ಆಯಿತು. ಪ್ರಚಾರ ಅಪಪ್ರಚಾರಗಳ ಘರ್ಷಣೆಯಲ್ಲಿ ಹಳ್ಳಿ ಹಳ್ಳಿಗಳಲ್ಲಿ ಕಾಂಗ್ರೆಸ್ಸಿನ ಸಂದೇಶವು ಮನೆಯನ್ನು ತೂರಿ ಮನೆಮಂದಿಯಲ್ಲಿ ಮನೆಮಾಡಿ ಕೊಂಡಿತು. ಜೂಜಿನ ಕುದುರೆಯ ಬೆನ್ನಿಗೆ ಚಾಟಿ ಏಟು ಬಿದ್ದಂತಾಗಿ ಕಾಂಗ್ರೆಸ್ಸು ಎಚ್ಚೆತ್ತು ಕೊಂಡಿತು. ಈ ದೃಷ್ಟಿಯಿಂದಲೇ ನಮ್ಮ ಪತ್ರಿಕೆಯ ಪುಟಗಳಷ್ಟು ಕಾಂಗ್ರೆಸ್ಸಿನ ಸಂದೇಶವನ್ನು ಅಹೋರಾತ್ರಿ ಸಾರುತ್ತಿದ್ದವು. ನಮ್ಮ ಪತ್ರಿಕೆಯ ಸಂಪಾದಕರಾದ ಶ್ರೀ ನೆಸ್ವಿಯವರೂ ಲೋಕ ಸಭೆಗೆ ಕಾಂಗ್ರೆಸ್ಸ ಉಮೇದವಾರರಾಗಿದ್ದುದರಿಂದ ಅವರ ಸಲುವಾಗಿ ಇಷ್ಟೊಂದು ಪ್ರಚಾರವೆಂಬ ಟೀಕೆಗೆ ಪತ್ರಿಕೆ ಗುರಿಯಾದರೂ ವಿಚಾರಪರರಾಗಿ ರಾಷ್ಟ್ರೀಯ ದೃಷ್ಟಿಯಿಂದ ನೋಡುವವರಿಗೆ ಈ ಪ್ರಚಾರದ ವಿಶಾಲದೃಷ್ಟಿ ಗೊತ್ತಾಗುವುದು. ಶ್ರೀ ನೆಸ್ವಿಯವರು ತಮ್ಮ ಎದುರಾಳಿಯಾದ ಪ್ರಜಾ ಪಕ್ಷದ ಜೀವನಾಡಿಯಾದ ಶ್ರೀ ಹೊಸಮನಿ ಸಿದ್ದಪ್ಪನವರನ್ನು ಸೋಲಿಸುವುದಕ್ಕೆ ಪ್ರಚಾರದ ಅವಶ್ಯಕತೆಯಿರಲಿಲ್ಲ. ಏಕೆಂದರೆ ಅವರು ಚುನಾವಣೆಗಾಗಿ ಕಾಂಗ್ರೆಸ್ ಸೇರಿದವರಲ್ಲ. ಕಾಂಗ್ರೆಸ್ಸು ಅಧಿಕಾರಕ್ಕೆ ಬರುವುದೆಂಬ ಬಯಕೆಯಿಂದ ಕಾಂಗ್ರೆಸ್ಸಿಗೆ ಬಂದವರಲ್ಲ, ಕಾಂಗ್ರೆಸ್ಸಿನ ಕಾರ್ಯಕರ್ತನಾಗಿ ನಿಲ್ಲುವುದು ಜೀವನ ಮರಣ ಪ್ರಶ್ನೆಯಾಗಿದ್ದಾಗ ಬ್ರಿಟಿಷರ ಗುಂಡಿನ ಕಾರಭಾರವಿದ್ದಾಗ ಚಳುವಳಿಯಲ್ಲಿ ಧುಮುಕಿ ನಿಮಿಷ ನಿಮಿಷಕ್ಕೂ ಜೀವವನ್ನು ಪಣವಾಗಿಟ್ಟು ಸ್ವಾತಂತ್ರ್ಯವನ್ನು ಸಂಪಾದಿಸಿದ ದೇಶವೀರರು ಅವರೆಂಬುದನ್ನು ಕರ್ನಾಟಕವೆಲ್ಲವೂ ಚೆನ್ನಾಗಿ ತಿಳಿದಿರುವಾಗ ಅವರನ್ನು ತಮ್ಮ ಪ್ರತಿನಿಧಿಯಾಗಿ ಒಪ್ಪಿಕೊಳ್ಳುವುದು ಹೊಸದಲ್ಲ. ಈ ಹಿಂದೆ ನಡೆದ ಚುನಾವಣೆಗಳಲ್ಲಿ ಅವರನ್ನು ಆರಿಸಿತಂದ ಕರ್ನಾಟಕಕ್ಕೆ ಅವರ ಬಗ್ಗೆ ಅವರ ಪತ್ರಿಕೆಯು ಹೇಳಕೊಳ್ಳಬೇಕಾದ ಆವಶ್ಯಕತೆಯಿರಲಿಲ್ಲ.

ಹೋಗಲಿ, ಕರ್ನಾಟಕದ ರಾಜಕಾರಣವೇಕೆ ನನ್ನ ನಿನ್ನ ಈ ಪತ್ರವ್ಯವಹಾರದಲ್ಲಿ ಬರಬೇಕು? ಒಂದನ್ನು ಮಾತ್ರ ಈ ಸಂದರ್ಭದಲ್ಲಿ ಬರೆಯಲೇ ಬೇಕಾಗಿದೆ. ಅದು ಜವಾಹರಲಾಲರು ಹುಬ್ಬಳ್ಳಿಗೆ ಬಂದು ಹೋದ ವಿಷಯ ಈಗಲೇ ಬರೆಯಬೇಕೆಂದಿದ್ದೆನು. ಈ ಪತ್ರ ಉದ್ದವಾಗುವುದೆಂಬ ಭಯದಿಂದ ಇನ್ನೆಂದಾದರೂ ಅದನ್ನೆಲ್ಲ ಬರೆಯುವೆನು. ಸದ್ಯಕ್ಕೆ ನಿನಗೆ ಈಗ ಯಾವ ಬಗೆಯ ಪತ್ರಗಳು ಬೇಕು, ತಿಳಿಸು.

ಇತಿ ನಿನ್ನ “ಹೆಣ್ಣಿನ ಹೃದಯದವ”
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...