Home / ಲೇಖನ / ಪತ್ರ / ಪೂರ‍್ಣಿಮ – ೧೭

ಪೂರ‍್ಣಿಮ – ೧೭

ಎಲ್ಲ ಕೆಲಸಗಳನ್ನು ಬಿಟ್ಟು, ವಿರಾಮದಿಂದ ಬಿಡುವು ಮಾಡಿಕೊಂಡು ಈಗಲೇ ಪತ್ರ ಬರೆಯಬೇಕಾಗಿದೆ ನಿನಗೆ. ನಾನಿಂದು ಏನನ್ನು ನೋಡಿದೆನೋ ಯಾವ ಯಾವ ಭಾವನೆಗಳು ನನ್ನನ್ನು ಅಳುವಂತೆ ಮಾಡಿಸಿದವೋ ಅವೆಲ್ಲವನ್ನೂ ತಿಳಿಸಿಬಿಡಬೇಕೆಂದು ಅವಸರವಸರವಾಗಿ ಪತ್ರ ಬರೆಯುತ್ತಿರುವೆನು.

ಧಾರವಾಡವು ಹುಬ್ಬಳ್ಳಿಗಿಂತ ಚೆನ್ನು. ಇಲ್ಲಿರಲು ನನಗೆ ಬಹು ಮನಸ್ಸಿದೆಯೆಂದು ನೀನು ಇಲ್ಲಿಗೆ ಬಂದಾಗ ಹೇಳಿದ್ದಿಯಲ್ಲವೇ? ಹೌದು, ಧಾರವಾಡ ನನಗೂ ಬಲುಚಂದ. ಅದನ್ನು ನೆನಸಿಕೊಂಡ ಮೊದಲೇ ನನ್ನ ಕಣ್ಣಿಗೆ ಶಿ. ಶಿ. ಬಸವನಾಳರು ಅವರ ಸಮಕ್ಕೆ ಅಂಬಿಕಾತನಯದತ್ತರು (ಪ್ರೊ. ದ. ರಾ.ಬೇಂದ್ರೆ) ಮುಂದೆ ಬಂದು ನಿಂತುಕೊಳ್ಳುವರು. ಆಗಿ ಹೋದ ಮುದವೀಡು ಕೃಷ್ಣರಾಯರ ಊರು ಇದೇ. ಈಗಿರುವ ಶ್ರೀ ಆಲೂರ ವೆಂಕಟರಾಯರೂ ಇಲ್ಲಿಯವರು. ಗಿಡಮರಗಳ ಸಂದಿನಲ್ಲಿರುವ, ಶಾಲೆಕಾಲೇಜುಗಳೆಲ್ಲಾ ಹಿಂದಿನ ಕಾಲದ ಗುರುಕುಲದಂತಿವೆ. ವಿದ್ಯಾರ್ಥಿಗಳು ಮಾತ್ರ ಆಗಿನ ಕಾಲದವರಲ್ಲ. ಸುಧಾರಿಸಿದವರು! ಕನ್ನಡದ ಶ್ರೀಯವರು ಬಲು ಬಯಸಿ, ಕೊನೆಯುಸಿರನ್ನು ಬಿಟ್ಟ ಊರಿದು. ಮಾಸ್ತಿಯವರು ಆಗಾಗ ವಿಶ್ರಾಂತಿಗೆಂದು ಬರುವ ಚೆಲುವಿನ ನಗರವಿದು. ತಮ್ಮ ತಮ್ಮ ಜೀವನ ಸುಖದುಃಖಗಳ ಕತೆಯನ್ನು ನೆನಿಸಿಕೊಂಡು (So sad, so fresh, the days that are no more) “ಅದೆಷ್ಟು ವ್ಯಸನಕರವಾಗಿ ಅದೆಷ್ಟು ಅಚ್ಚಳಿಯದಂತಿವೆ ಆ ಕಳೆದುಹೋದ ನನ್ನ ದಿನಗಳು” ಎಂದೆನ್ನುವ ನಿವೃತ್ತಿ ಜೀವಿಗಳಾದ, ಟೆನಿಸನ್ನರು ಧಾರವಾಡದಲ್ಲಿ ಎಲೆಯ ಮರೆಯ ಹಣ್ಣಾಗಿ ಇರುವರು. ವಿದ್ಯಾವರ್ಧಕ ಸಂಘವಿದೆ. ಮೈಸೂರು ಅರಸರ ಹೆಸರನ್ನೆತ್ತಿ ಹಾಡುವ ಸಂಸ್ಥೆ ಇದು. ಪ್ರಾದೇಶಿಕ ಗ್ರಂಥಭಾಂಡಾರ, ಕರ್ನಾಟಕ ವಿಶ್ವವಿದ್ಯಾನಿಲಯ, ಅನೇಕರ ಕೀರ್ತಿಯ ಗುರುವಾದ ಕರ್ನಾಟಕ ಕಾಲೇಜು ಇವೆಲ್ಲವೂ ಈ ಊರೊಂದರಲ್ಲಿಯೇ ಇವೆ. ಇಷ್ಟೇ ಅಲ್ಲ ಒಕ್ಕಲುತನದ ಕಾಲೇಜೂ ಇಲ್ಲಿದೆ. ಇನ್ನೇನು ಬೇಕು? ನಗರವು ಸುಸಂಸ್ಕೃತರಿಂದ ಸಂಸ್ಕಾರಗೊಂಡಿದೆ. ಇಷ್ಟಾದರೂ ಈ ಊರು ಇದೀಗ ಬಲು ನಿರ್ಭಾಗ್ಯ ಶಾಲಿ. ಹೊಟ್ಟೆಯ ಪಾಡಿಗಾಗಿ ನಾಡಿಗೊಬ್ಬನೇ ಕವಿಯಾದ ಅಂಬಿಕಾತನಯದತ್ತರನ್ನು ಸೊಲ್ಲಾಪುರಕ್ಕೆ ಕಳುಹಿಸಿಕೊಟ್ಟ ದೂರಿಗೆ ಈ ಊರು ಗುರಿಯಾಗಿದೆ. ದತ್ತರೇನು ಅಷ್ಟು ಸುಲಭರೇ? ಹೊರಗೆ ಎತ್ತಿ ಹಾಕಿದರೆ ಹೋಗಿ ಬಿಡುವಂತಹ ಜೀವವೇ ಅದು? ಯಾರು ಯಾವಾಗ ಹೋಗಿ ನೋಡಿದರೂ ಅವರು ಧಾರವಾಡದ ತಮ್ಮ ಮನೆಯಲ್ಲೇ ಇರುವರು, ಕೆಲವರ ಕಣ್ಣಿಗೆ ಮಾತ್ರ ಕಾಣಿಸಿಕೊಳ್ಳುವರು. “ ತಣಿತಿಣಿಕಿ…….. ಕುಣಿಯೋಣು ಬಾರಽ ಕುಣಿಯೋಣುಬಾರ?” ಎಂದು ಹೋದವರನೆಲ್ಲ ಅದೃಶ್ಯವಾಗಿ ಕರೆಯುತ್ತಿರುವರು. ನೀನೊಮ್ಮೆ ಅವರನ್ನು ಮನೆಗೆ ಕರೆದು ಕೊಂಡು ಬನ್ನಿಯೆಂದು ಆಗಂತುಕ ಗೃಹಸ್ತಿಯಾಗಿದ್ದಾಗ ಹೇಳಿದ್ದಿಯಲ್ಲವೇ? ಹಿಂದೊಮ್ಮೆ ನಿನಗೆ ಕವಿಗಳ ಹುಚ್ಚು ಹಿಡಿದಿದ್ದಾಗ ನೀವೂ ಬೇಂದ್ರೆ ಕುವೆಂಪುರಂತೆ ನಾಡಕವಿಗಳಿಗಾಗಿರಿಯೆಂದು ಹರಸಿದ್ದೆ. ಆದರೆ ನಿನ್ನ ಹರಕೆಯಲ್ಲಿ ಬಲವಿಲ್ಲ. ನನ್ನ ಲೇಖನಿಯಲ್ಲಿ ಹುರುಳಿಲ್ಲ. ನಾನೆಂತು ಆಗಬಲ್ಲೆ? ನಿನ್ನ ಬಯಕೆಗೂ ಇತಿಮಿತಿ ಇರಬೇಡವೆ? ಅದರ ಚಿಂತೆ ಈಗೇಕೆ? ಅವರನ್ನು ಕಂಡು, ಹಾಡಿ, ಅವರನ್ನು ಓದಿ, ಅವರನ್ನು ಕೇಳುವ ಭಾಗ್ಯವಿದೆಯಲ್ಲ ಅಷ್ಟೇ ಸಾಕು ನಮಗೆ ನಾವಿಬ್ಬರೂ ಹೆಚ್ಚು ಬಯಸಿ ಹುಚ್ಚರಾಗುವುದೇಕೆ?

ಅದೋ, ಧಾರವಾಡದ ನಿಸರ್ಗದ ಸೊಬಗನ್ನು ಚಿತ್ರಿಸುವಾಗ ಬರೆಯಬೇಕಾದ ಮುಖ್ಯ ವಿಷಯವನ್ನೇ ಮರೆತು ಬಿಟ್ಟೆನು. ಅದೇ ನಾನು ಮೇಲೆ ಹೇಳಿದಂತೆ ಧಾರವಾಡದ ಸೌಭಾಗ್ಯ ಕಳಚಿ ಹೋಯಿತು. ಪ್ರೊ. ಶಿ. ಶಿ. ಬಸವನಾಳರು ತೀರಿಕೊಂಡರು ಹೃದಯವಿಕಾರದಿಂದ, ಯಾರಿಗೂ ಹೇಳದೆ ಕೇಳದೆ ೨೨ ಡಿಸೆಂಬರ ೧೯೫೧ ಮಧ್ಯಾನ ಕರ್ನಾಟಕ ವಿಶ್ವ ವಿದ್ಯಾಲಯದ ಸಿಂಡಿಕೇಟಿನ ಸಭೆಯಿಂದ ಎದೆ ನೋಯುವುದೆಂದು ಮನೆಗೆ ಬಂದವರೇ ಮೆಚ್ಚಿನ ಮಡದಿ ಕಾಫಿಯನ್ನು ತಂದು ಕೊಡುವುದರೊಳಗಾಗಿ ಬಸವನಾಳರು ಶಿವೈಕ್ಯರಾದರು.

ಪೂರ‍‍್ಣೀ, ನನ್ನಲ್ಲಿ ಶಬ್ದ ಸಂಪತಿ ಇಲ್ಲ ಬಸವನಾಳರನ್ನು ಪರಿಚಯ ಮಾಡಿಕೊಡಲು, ಒಂದೇ ಮಾತಿನಲ್ಲಿ ಅವರ ಸಾವಿನ ನಷ್ಟವನ್ನು ಸರಿಯಾಗಿ ಹೇಳಬೇಕಾದರೆ, ಬಿ. ಎಂ. ಶ್ರೀ. ಇವರನು ಇನ್ನೊಂದು ಸಾರಿ ಕಳೆದುಕೊಂಡಂತಾಗಿರುವುದು. ಅವರಿನ್ನೂ ಕನ್ನಡವನ್ನು ಸಂಸ್ಕರಿಸಲು, ಸಂಶೋಧಿಸಲು, ಕೊನೆಯಪಕ್ಷ ಇಪ್ಪತ್ತು ವರುಷಗಳಾದರೂ ಜೀವಿಸಿರ ಬೇಕಾಗಿದ್ದಿತು. ಇಂಗ್ಲೆಂಡಿನ ಬರ್ನಾರ್ಡ ಷಾರವರಿಗೆ ೯೦ ವರುಷಗಳಾದರೂ ಜೀವಿಸಿರಲು ಅನುವುಮಾಡಿಕೊಟ್ಟ ವಿಧಿ ಧಾರವಾಡದ ಬಸವನಾಳರಿಗೆ ಅರವತ್ತು ವರುಷದ ಷಷ್ಟ್ಯಬ್ಧಿಯಾಗುವುದರ ಮುನ್ನ ಅವರನ್ನು ಹಿಂದಕ್ಕೆ ಕರೆದುಕೊಳ್ಳುವಷ್ಟು ಜಿಪುಣನಾದನು. ಕನ್ನಡವನ್ನು ಕಂಡರೆ ಸರಸ್ವತಿಗೆ ಬಲು ಇಷ್ಟವಾದರೂ ಅವಳ ಗಂಡ ಬ್ರಹ್ಮನಿಗೆ ಕನ್ನಡ ಕುಲ ಪುರುಷರ ಮೇಲೆ ಇಷ್ಟೊಂದು ಮಾತ್ಸರ್ಯವೇಕೋ ತಿಳಿಯದು.

ನೀನು ನಿನ್ನ ಎದೆಯ ಬಡಿತವನ್ನು ಬಿಗಿಹಿಡಿದುಕೊಳ್ಳುವುದಾದರೆ ಬಸವನಾಳರ ಸಾವಿನ ದೃಶ್ಯವನ್ನು ಹೇಳಿಬಿಡುವೆನು. ನಾನವರನ್ನು ದೂರದಿಂದಲೇ ನೋಡಿದವನು. ಅವರ ದೇಹತ್ಯಾಗದ ನಂತರವೇ ಅವರ ಬಳಿ ನಿಂತು ನೋಡಿದೆನು. ಎಂತಹ ದೃಶ್ಯವದು ಪೂರ‍‍್ಣೀ! ಬಸವನಾಳರ ಆ ಆಮೃತ ಮುಖದಲ್ಲಿ ಇರುವ ಸಾತ್ವಿಕ ತೇಜಸ್ಸಿನ ಸಂಸ್ಕಾರದ ಪ್ರಭೆಯನ್ನು ದಿಟ್ಟವಾಗಿಯೇ ನೋಡಿದೆನು. ಇನ್ನು, ಇನ್ನೂ ನೋಡಬೇಕೆಂಬ ಆಶೆ. ಆದರೆ ಆ ಅಲುಗದ ಮುಖವನ್ನೂ ಗಲ್ಲವನ್ನೂ ಅಲುಗಿಸುತ್ತಾ ಭೋರೆಂದು ರೋದಿಸುವ ಬಸವನಾಳರ ಶ್ರೀಮತಿಯವರನ್ನು ನೋಡುವುದು ನನ್ನಿಂದಾಗಲಿಲ್ಲ. ಯಾರಿಗೆ ಎಷ್ಟು, ಎದೆ, ಆ ಕರುಳು ಕೊರೆಯುವ ದುಃಖದ ದೃಶ್ಯವನ್ನು ನೋಡಲು?

ಪೂರ‍‍್ಣೀ, ನಿಜವಾಗಿಯೂ ಹೇಳುವೆನು. ನೀನು ಅಷ್ಟೊಂದು ಅಳುವುದಾದರೆ ನಾನು ನಿನ್ನ ಕಣ್ಣೆದುರಿನಲ್ಲಿ ಸಾಯಲು ಬಯಸುವುದೇ ಇಲ್ಲ; ಕೈಲಾಸಪರ್ವತವನ್ನೂ ಏರುತ್ತಿದ್ದ ಬಸವನಾಳರನ್ನು ಹಿಂದು ಹಿಂದಕ್ಕೆಳೆಯುತ್ತಿದ್ದ ಆ ಆರ್ತರವವನ್ನು ಕಲ್ಲು ಹೃದಯಗಳು ಕಲ್ಲಾಗಿ ನಿಂತು ಕೇಳಬೇಕು.

ಬಸವನಾಳರು ಬಾಳಿದರು, ಬೆಳಗಿದರು, ಬೆಳಗಿಸಿದರು; ಇನ್ನೂ ಬೆಳಗುತ್ತಲೇ ಇರುವರು. ಇಂದು ಅಗಲಿಕೆಯ ಆವೇಶದಲ್ಲಿ ಬಸವನಾಳರ ಹೆಂಡತಿ ಮಕ್ಕಳು, ಅಳುತ್ತಿದ್ದರೆ, ಈ ನೋವಿನ ಕಾವು ತೀರಿದ ಮೇಲೆ ಅವರು ಇಹಲೋಕದಲ್ಲಿ ಉಳಿಸಿ ಹೋದ ಕೀರ್ತಿಯ ಪಾರಿಜಾತ ಗಿಡವು ನೀಡುವ ತಿಳಿಗಾಳಿಯ ಗಂಧ ಇವರೆಲ್ಲರಿಗೂ ಸಮಾಧಾನವನ್ನುಂಟು ಮಾಡುವುದು, ನಾನು ಸತ್ತರೆ, ನಿನಗೆ ನನ್ನ ನೆನಪಿಗಾಗಿ ಉಳಿಯುವ ಲೀಲಾ, ಶಂಕರ, ರಾಘು ಇವರಲ್ಲದೆ ಮತ್ತೇನೂ ಇಲ್ಲ. ಬಸವನಾಳರ ಸಾಹಿತ್ಯದ ಸಾವಿರಾರು ಸಾಹಿತಿಗಳನ್ನು ಹೆತ್ತಿತು. ಅವರಿಗೊಮ್ಮೆ ಸಾವಿರ ರೂಪಾಯಿಗಳ ಸಂಬಳದ ಕೆಲಸವನ್ನು ಕೈಗೊಳ್ಳುವಿರಾ ಯೆಂದು ಬೇಡಿಕೊಂಡಿದ್ದರಂತೆ. ಆಗ ಕೆಲಸದ ಬಗ್ಗೆ ಮಾತನಾಡಲು ಬಂದವರನ್ನು ಕುರಿತು ಅವರು “ಅಯ್ಯೋ ಹುಚ್ಚ, ಸಾವಿರ ರೂಪಾಯಿ ಪಗಾರವನ್ನು ತೆಗೆದುಕೊಳ್ಳುವ ಸಾವಿರಾರು ಜನರನ್ನು ತಯಾರಿಸಬಲ್ಲೆ. ನನಗೇಕೆ ಬೆನ್ನು ಬಿದ್ದೆ. ಹೋಗು, ಹೋಗು, ಮತ್ತಾರನ್ನಾದರೂ ನೋಡು ಹೋಗು” ಎಂದು ಹೇಳಿ ಕಳುಹಿದರಂತೆ. ಇವರೆಲ್ಲಿ? ಹೊಟ್ಟೆಯ ಪಾಡಿಗಾಗಿ ಊರಿಂದೂರಿಗೆ ಅಲೆಯುತ್ತಿರುವ ನಾನೆಲ್ಲಿ? ನನ್ನ ಸಾಹಿತ್ಯವೆಂದರೆ ನಾನು ನಿನ್ನನ್ನು ಕುರಿತು ಬರೆಯುತ್ತಿರುವ ಈ ಪತ್ರಗಳಷ್ಟೇ. ಇವು ನಮ್ಮಿಬ್ಬರ ಸಂಸಾರದ ಸಾಹಿತ್ಯ, ನಾನು ಪತ್ರಿಕೋದ್ಯಮಿಯಾಗಿರುವ ಮಾತ್ರಕ್ಕೆ ನನ್ನನ್ನು ನಾನು ಸಾಹಿತಿಯೆಂದು ಕರೆದುಕೊಳ್ಳಲಾರೆ. ಏಕೆಂದರೆ, ಕಾರ್ಯನಿರತ ಪತ್ರಿಕೋದ್ಯಮಿಯು ಎಂದೂ ನಿಜವಾದ ಸಾಹಿತಿಯಾಗಿ ಉಳಿಯಲಾರ. ಸಾಹಿತ್ಯದ ಅವಶ್ಯಕತೆ ಅಷ್ಟಿಷ್ಟು ಇದ್ದರೂ ನಿಜವಾದ ಸಾಹಿತಿಯ ಅವಶ್ಯಕತೆ ಈಗಿನ ಪತ್ರಿಕೋದ್ಯಮಕ್ಕೆ ಬೇಕಾಗಿಲ್ಲವೆಂಬುದೇ ನನ್ನ ಭಾವನೆ. ಇದು ಅಭಿಪ್ರಾಯದ ಮಾತು. ಕೆಲವರೂಪ್ಪುವ ಕೆಲವರೊಪ್ಪದ ವಿಷಯ, ಅದರ ವಿವರಣೆ ಇಲ್ಲೇಕೆ ಗಂಡ ಹೆಂಡತಿಯ ಈ ಪತ್ರವ್ಯವಹಾರದಲ್ಲಿ?

ಮತ್ತೆ ಮರೆತೆನು ಪೂರ‍್ಣಿ, ಒಂದನ್ನು ಹೇಳಹೋಗಿ ಹನ್ನೊಂದನ್ನು ಹೇಳುವ ನನ್ನ ಚಟಕಿನ್ನೂ ಔಷಧಿ ದೊರೆತಿಲ್ಲ. ಬಸವ ಸಾಹಿತ್ಯವನ್ನು ಅರಗಿಸಿಕೊಂಡ ಬಸವನಾಳರ ಹೃದಯವು, ಹೃದಯವಿಕಾರಕ್ಕೆ ಈಡಾಯಿತೆಂಬುದು ಸೋಜಿಗದ ಸಂಗತಿ. ಹೃದಯ ರೋಗದ ಚಿನ್ಹೆ ಇದ್ದುದು ಇವರಿಗಲ್ಲ, ಇವರ ಪತ್ನಿಗೆ. ಇದೊಂದೇ ಬಸವನಾಳರ ಎದೆಯನ್ನು ಕೊರೆಯುತ್ತಿದ್ದ ಕೊರಗು. ಅಂದು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟಿನ ಸಭೆಯಿಂದ ಎದೆಯ ನೋವೆಂದು ಹಿಂದಿರುಗಿದಾಗ ತನ್ನ ಹೆಂಡತಿಯನ್ನು ಕುರಿತು ವೈದ್ಯರು ಗುಣಪಡಿಸದ ನಿನ್ನ ಹೃದಯ ರೋಗವನ್ನು ನಾನೇ ತೆಗೆದುಕೊಂಡಿದ್ದೇನೆ, ಎಂದಂದು ಗಂಟೆಯೊಂದೂ ಕಳೆದಿಲ್ಲ. ಹೃದಯ ವಿಕಾರದಿಂದ ವಿಧಿವಶರಾದರು ಬಸವನಾಳರು. ನಿಜವಾಗಿಯೂ ಇಂತು ಈ ಲೋಕವನ್ನು ಇವರು ಬಿಟ್ಟಿದ್ದರೆ ಅವರಿಗೆ ಅಭಿಷೇಕವು ಸಾಹಿತ್ಯ ಲೋಕದಲ್ಲಿ ಮಾತ್ರವಲ್ಲ, ಪ್ರೇಮ ಸಾಮ್ರಾಜ್ಯದಲ್ಲೂ ಸಹಾ, ಬಸವನಾಳರನ್ನು ಪತಿಯನ್ನಾಗಿ ಪಡೆದ ಈ ಸತಿಯ ಸೌಭಾಗ್ಯವೆಷ್ಟು? ಬಸವನಾಳರನ್ನು ಕನ್ನಡಿಗರಾಗಿ ಪಡೆದ ಕನ್ನಡಿಗರಿಗೆ ಎಷ್ಟು ಅಭಿಮಾನ? ಅದೋ, ಅದೇದೃಶ್ಯ ಧಾರವಾಡ, ಮಾಳಮಡಿ; ಪಕ್ಕದಲ್ಲಿ ಉಳವಿ ಚೆನ್ನಬಸವೇಶ್ವರನ ದೇವಾಲಯ. ಅಲ್ಲಿಯೇ ಅಚ್ಚು ಮೆಚ್ಚಿನ ಮನೆ, ಮನೆ ಮುಂದೆ ಜನ. ಅದರ ಮಧ್ಯೆ ಪೂಜೆಗೆ ಸಿದ್ಧವಾದ ಉತ್ಸವ ಮೂರ್ತಿಯಂತೆ ಕುಳಿತ ಬಸವನಾಳರ ಭೌತಿಕ ದೇಹ. ಅದನ್ನು ನೋಡಿ ನೋಡಿ, ರಾಗವಾಗಿ ಆಕ್ರಂದನ ಸ್ವರದಲ್ಲಿ ಗಂಟಲು ಗೀಚಿಹೋಗುವಂತೆ, ಭಜನೆ ಗೀತೆಗಳನ್ನು ಹಾಡುವ ಭಜನೆಯ ಮೇಳ. ಈ ಮೇಳದ ಸ್ವರವನ್ನು ಮೀರಿಸಿ ರೋದಿಸುವ ಶ್ರೀಮತಿಯವರ ಶೋಕಧ್ವನಿ, ಇವು ಕಣ್ಣಿಗೆ ಕಟ್ಟಿ ಹೋಗಿವೆ. ನನಗೆ ಬಸವನಾಳರ ನಿಕಟ ಪರಿಚಯವಿಲ್ಲ. ಅವರೊಡನೆ ಮಾತನಾಡಿಯೂ ಇಲ್ಲ. ಅವರ ಕೀರ್ತಿ ಕೇಳಿ, ಅವರನ್ನು ದೂರದಿಂದ ನೋಡಿದ ನನಗೇ ಅವರ ಸಾವು ಇಂತು ಎದೆಯ ಚಿತ್ರವಾಗಿರುವಾಗ, ಅವರ ಒಡನಾಡಿಗರಿಗೆ ಅವರಿಂದ ಬೆಳೆದವರಿಗೆ ಎಷ್ಟೊಂದು ದುಃಖವಾಗಿರಬೇಕು ಊಹಿಸಿಕೋ.

ಈ ಪತ್ರದಲ್ಲಿ ಮತ್ತಾವುದನ್ನೂ ಸೇರಿಸಲಾರೆ. ನೆನಪಿನ ಶಕ್ತಿಯೂ ಕುಂಠಿತವಾಗಿದೆ ಭಾವಪ್ರಧಾನತೆಯ ಒತ್ತಡದಿಂದ. ಆದುದರಿಂದ ಈ ಪತ್ರವನ್ನು ಇಲ್ಲಿಗೇ ಮುಗಿಸುವೆನು.

ಇತಿ ನಿನ್ನ “ಲಕ್ಷ್ಮೀಶ”
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...