Home / ಲೇಖನ / ಪತ್ರ / ಪೂರ‍್ಣಿಮ – ೧೬

ಪೂರ‍್ಣಿಮ – ೧೬

ಶ್ರೀಮತಿ,
ಪತಿವೃತೆ,

ಈ ಸಲ ಬಲು ಬೇಗ ಉತ್ತರವನ್ನು ಬರೆದು ಬಿಟ್ಟೆಯಲ್ಲ? ಒಳ್ಳೆಯದು. ನಾನು ಪತ್ರಕ್ಕಾಗಿ ಪೇಚಾಡುವುದನ್ನು ನೋಡಿ ನಿನಗೆ ಬಲ ಕೆಟ್ಟೆನಿಸಿರಬಹುದಲ್ಲವೆ? ಮರೆಯದೇ ರಾಯರ ನಾಟಕದ ಬಗ್ಗೆ ಬರೆಯಬೇಕೆಂದು ಬೇರೆ ಬರೆದುಕೊಂಡಿರುವೆ. ಏಕೆ, ಸವಿ ಹತ್ತಿತೆ ನೆನಪಿನ ಬುತ್ತಿ? ನಾಲಿಗೆಗೆ ರುಚಿ ತಗುಲಿತೇನು ನನ್ನ ಮಹಾಭಾರತ? ಇಲ್ಲ ಇಲ್ಲ, ನಾನು ಮರೆಯುತ್ತಿರುವದನ್ನು ನೀನು ನೆನಪು ಮಾಡುತ್ತಿರುವುದರಲ್ಲಿ ಏನೋ ಕುಚೋದ್ಯತನವಿದೆ. ನಿನಗೆ ನನ್ನ ಗುಟ್ಟೆಲ್ಲ ಗೊತ್ತು. ನಾನು ಬಾಯಲ್ಲಿ ಸುಳ್ಳು ಹೇಳಿದರೂ (ಒಮ್ಮೊಮ್ಮೆ ನಿನ್ನ ಮುಂದೆ ಮಾತ್ರ) ಬರೆಯುವಾಗ ಸುಳ್ಳು ಬರೆಯೆನು. ಏನಾಗುವುದೆಂಬುವುದರ ಪರಿಣಾಮವನ್ನು ಲೆಕ್ಕಿಸದೆ ಬರೆದು ಬಿಡುವೆನೆಂದು ತಿಳಿದುಕೊಂಡಿರುವಿ. ಪ್ರಸಂಗಗಳನ್ನು ನೆನಪಿಗೆ ತಂದುಕೊಟ್ಟು ಅವನ್ನು ಪತ್ರಗಳಿಗೆ ಈಡು ಮಾಡುತ್ತಿರುವೆ.

ಅಂದು ೧೯೪೬ನೆಯ ನವೆಂಬರು ತಿಂಗಳ ರಾತ್ರಿಯೊಂದರಲ್ಲಿ ಮಧ್ಯ ರಾತ್ರಿಯ ವರೆಗೆ ಮೇಲುಸಿರು ಬಿಡುತ್ತಾ ಏನು ಹೇಳಿದೆನೋ ಅದೆಲ್ಲವೂ ನಿಜ. ನೀನು ನನ್ನೆದೆಯನ್ನು ಮುಟ್ಟಿ ನೋಡಿದ್ದರೆ ಆಗ ತಿಳಿಯುತ್ತಿತ್ತು ನನ್ನ ಎದೆ ಎಷ್ಟರ ಮಟ್ಟಿಗೆ ಡವ್ ಡವ್ ಯೆಂದು ಹೊಡೆದುಕೊಳ್ಳುತ್ತಿತ್ತೆಂಬುದು. ಆ ಎದೆಯ ಬಡಿತವೇ ನನಗೊಂದು ರುದ್ರಾ೦ತದ ನಾಟಕದ ಕಥಾವಸ್ತುವನ್ನು ದೊರಕಿಸಿಕೊಟ್ಟಿತಲ್ಲವೆ? ಇಲ್ಲವಾದರೆ ನನ್ನ ಜೀವನದ ದ್ವಾದಶ ವೇಷದಲ್ಲಿ ನಾಟಕಕಾರನ ವೇಷವೂ ಸಿಕ್ಕದೇ ಹನ್ನೊಂದು ಆವತಾರಗಳಷ್ಟೇ ಆಗಿಬಿಡುತ್ತಿತ್ತು.

ನಾನು “ರಾಯರ ನಾಟಕ”ವನ್ನು, ಮರೆಯಬಹುದು. ರಾಯರನ್ನು ಮರೆಯಲು ಯತ್ನಿಸುವೆನು. ಆದರೆ ಅವರ ಸಂಸಾರದಲ್ಲಿ ಅನವಶ್ಯಕವಾಗಿ ಬಂದ ನಿಮ್ಮ ಚಿಕ್ಕಮ್ಮನನ್ನು ಮಾತ್ರ ಮರೆಯಲಾರೆ. ಈ ಖಳನಾಯಕಿಯನ್ನು ಮೇಲಿಂದ ಮೇಲೆ ನಿನ್ನ ಚಿಕ್ಕಮ್ಮನೆಂದು ಬರೆಯುವುದು ಚುಚ್ಚು ಮಾತಿಗಲ್ಲ. ನಿನಗೆಷ್ಟು ಸಂಬಂಧವೋ ನನಗೂ ಈಕೆ ಸೋದರಿಯಾಗಬೇಕು. ನನ್ನ ದೊಡ್ಡಪ್ಪನ ಮಗಳಲ್ಲವೇ ಈಕೆ? ನಿನ್ನ ತಾಯಿಗೆ ಈಕೆ ತಂಗಿಯಾದರೆ, ನನಗೂ ಅಕ್ಕನಾದಂತಲ್ಲವೆ? ನನಗೆ ಅಕ್ಕಳಾದರೆ ನನ್ನ ಲೇಖನಿಗೇನು ಸಂಬಂಧ? ಈ ಮಹಾರಾಯ. ತನ್ನ ಇಪ್ಪತ್ತನೆಯ ವರುಷದಲ್ಲೇ ಗಂಡನನ್ನು ಕಳೆದುಕೊಂಡರೆ, ಈಕೆಯು ಗಂಡ ಸತ್ತಾಗ ಎಲ್ಲಿಯಾದರೂ ಬಾವಿಗೆ ಹಾರಿಕೊಂಡು ಪ್ರಾಣಬಿಟ್ಟಳೆಂದು ಭಯ ಬಂದುದು ನನಗೆ ಚೆನ್ನಾಗಿ ನೆನಪಿದೆ. ನಾನಿನ್ನೂ ಆಗ ಮೈಸೂರಿನ ಮಿಡಲ್ ಸ್ಕೂಲಿನಲ್ಲಿ ಓದುತ್ತಿದ್ದೆನು.

ಅಕ್ಕನೆಂದು ನನ್ನಿಂದ ಕರೆಯಿಸಿಕೊಳ್ಳುವವರೆಗೂ ನಾನಾಕೆಯನ್ನು ಕಂಡರೆ ಬಹಳ ಪ್ರೀತಿಸುತ್ತಿದ್ದೆ. ಗಂಡನನ್ನು ನೆನಸಿಕೊಂಡು ಮುಖದ ಮೇಲೆ ಸೆರಗು ಮುಚ್ಚಿಕೊಂಡು ಆಳುತ್ತಿದ್ದಾಗ ನಾನು ಆಕೆಯಿದ್ದ ಕೋಣೆಗೆ ಹೋಗಿ “ಅಳಬೇಡಕ್ಕ ಸತ್ತವರು ಅತ್ತರೆ ಬರುವರೆ” ಎಂದು ಹೇಳಿ ಹೇಳಿ ಬಿಕ್ಕಿ ಬಿಕ್ಕಿ ಅಳುತ್ತಿದ್ದೆನು. ಅವಳು ಕೊರಗಿ ಸೊರಗಿ ಮಲಗಿಕೊಂಡಾಗ ಆಕೆಯ ಪಾದಗಳನ್ನು ಒತ್ತುತ್ತಾ ಕುಳಿತುಕೊಳ್ಳುತ್ತಿದ್ದೆನು. ಎಷ್ಟೋಸಲ ಆಕೆಯ ಮಲಗುವ ಕೋಣೆಯಲ್ಲಿಯೇ ಕುಳಿತು ಮಲಗಿ ನನ್ನ ಓದನ್ನು ಮುಗಿಸುತ್ತಿದ್ದೆನು. ಇಷ್ಟೆಲ್ಲವೂ ನಡೆದುದು ಆರು ತಿಂಗಳು ಮಾತ್ರ. ಅಷ್ಟರಲ್ಲಿಯೇ ಗಂಡನ ಆಸ್ತಿಯ ಹಕ್ಕು ಬಂದಿತು. ನನ್ನ ಸೋದರತ್ತೆಯ ಮಗ ಈಕೆಯ ದತ್ತಕ ಪುತ್ರನಾದನು. ಎದೆಯೆತ್ತರದ ಮಗ ದೊರಕಿದ ಮೇಲೆ ಸತ್ತ ಗಂಡನನ್ನು ನೆನೆಸಿಕೊಂಡು ಅಳುವುದು ಕಡಿಮೆಯಾಗುವುದೆಂದು ಭಾವಿಸಿದ್ದೆನು. ಆದರೆ ವರುಷ ಮುಗಿಯುವುದರಲ್ಲಿಯೇ ಆದ ಕತೆಯೇ ಬೇರೆ. ಎಲ್ಲವನ್ನೂ ಬಿಚ್ಚಿ ಬಿಚ್ಚಿ ಹೇಳ ಹೊರಟರೆ ನನ್ನ ಲೇಖನಿಯ ಹರಿತ ಎಲ್ಲಿಗೆ ಹೋಗಿ ಮುಟ್ಟುವುದೋ? ಈ ಅಕ್ಕನ ಕತೆ ಇಷ್ಟಕ್ಕೆ ಸಾಕು. ಇನ್ನು ಮಂದಿನ ಕತೆಯಲ್ಲಿ ಆಕೆ ನನ್ನ ಅಕ್ಕನಾಗಿ ಉಳಿದಿಲ್ಲ. ನನ್ನ ನಾಟಕದ ಖಳನಾಯಕಿಯಾಗಿ ಉಳಿದಿರುವಳು.

ಡಾಕ್ಟರರ ಪರಿಚಯವಾದ ನಂತರ ನಾನು ಅವರ ಮನೆಗೆ ಹೋಗಿ ಬರಲು ಆರಂಭಿಸಿದ ಆರು ತಿಂಗಳ ನಂತರ ನಾನು ಆ ನಿಮ್ಮ ಚಿಕ್ಕಮ್ಮನನ್ನು ದಾರಿಯಲ್ಲಿ ಕಂಡೆನು. ಕಂಕುಳಲ್ಲಿ ಐದಾರು ವರುಷದ ಮಗುವಿದ್ದಿತು. ಇದಾರ ಮಗುವೋ ತಿಳಿಯದು. ಅಲ್ಲಿಗೆ ಆರು ವರುಷವಾಗಿತ್ತು ನಾನು ಶಂಕರಮ್ಮನನ್ನು ನೋಡಿ. ಆದರೆ ಅವಳ ಇತಿಹಾಸ ಮಾತ್ರ ನನ್ನ ಕಿವಿಗೆ ಬೇಡವೆಂದರೂ ಬೀಳುತ್ತಲೇ ಇದ್ದಿತು. ಅದೇ ಊರಿನಲ್ಲಿ ನಾವಿಬ್ಬರೂ ಇದ್ದರೂ ನಾನೂ ಆಕೆ ವಾಸಿಸುತ್ತಲಿದ್ದ ಬೀದಿಯ ಹತ್ತಿರವೇ ಹೋಗುತ್ತಿರಲೇ ಇಲ್ಲ. ಅಂದು ಆಸ್ಪತ್ರೆಗೆ ಹೋಗುತ್ತಿದ್ದಾಕೆ ನನ್ನ ಮುಖನೋಡಿದ ಕೂಡಲೇ ಮಾತನಾಡಿಸಿದಳು. ಸಿಟ್ಟು ಬರಲಿಲ್ಲ. ಮುಖ ತಪ್ಪಿಸಿ ಮುಂದಕ್ಕೆ ಹೋಗ ಬೇಕಾಗಿದ್ದಿತು. ಆದರೆ, ಮಾತು ಈ ಕಂಕುಳಲ್ಲಿದ್ದ ಕೂಸಿನ ಖಾಯಿಲೆ ವಿಚಾರ! ನನಗೂ ಡಾಕ್ಟರ್ ಶಾಮರಾವ್ ಇವರಿಗೂ ಇರುವ ಸ್ನೇಹದಿಂದ ಅವರಲ್ಲಿಗೆ ಕರೆದುಕೊಂಡು ಹೋಗಬೇಕೆಂದು ಅಂಗಲಾಚಿ ಬೇಡಿಕೊಂಡಳು. ಹೃದಯ ಕರಗಿತು. ಆಕೆಯ ಕುಟಿಲವರ್ತನೆ ನೆನಪಿಗೆ ಬಂದರೂ ಮೇಲುಸಿರು ಬಿಡುವ ಮಗುವಿನ ಬಗ್ಗೆ ಕರುಣೆ ಉಂಟಾಯಿತು. ಒಂದು ಪರಿಚಯದ ಚೀಟಿ ಬರೆದು ಕೊಟ್ಟೆ. ಅದುವೇ ಡಾಕ್ಟರ್ ಸಂಸಾರವನ್ನು ಸುಡುವ ಬೆಂಕಿಯ ಕಿಡಿಯಾಗಿ ಪರಿಣಮಿಸಿತು.

ಪೂರ‍‍್ಣೀ, ಓದುಬರಹ ಕಲಿತವರಿಗೆ ಆ ನಾಗರಿಕತೆಯ ಮಾತುಕತೆ, ವೈಯ್ಯಾರ, ಬಿಂಕ, ಬಿನ್ನಾಣ ಇವು ನಾನು ಆಕೆಯನ್ನು ಅಕ್ಕನಾಗಿಯೇ ನೋಡುತ್ತಿದ್ದುದರಿಂದ ತಿಳಿಯಲಿಲ್ಲ. ಡಾಕ್ಟರ್ ದೊಡ್ಡ ಹೆಂಡತಿ ಚಂಪ: ಚಿಕ್ಕ ಹೆಂಡತಿ ಮಂಜುಳ, ಇವರಿಬ್ಬರೂ ಶಂಕರಮ್ಮ ಸ್ನೇಹಿತಳಾದರು. ನಾನು ಆಕೆಯನ್ನು ಅಕ್ಕನೆಂದು ಹೇಳಿಕೊಳ್ಳುವ ಮೊದಲೇ ಪರಿಚಯವನ್ನು ತಾನೇ ಮಾಡಿಕೊಂಡ ಈ ಮಹಾರಾಯತಿ ಡಾಕ್ಟರ್ ಮನೆಯಲ್ಲಿ ಮನೆಯವಳಾದಳು. ನನಗೆ ಈಕೆಯ ಇಷ್ಟೊಂದು ಸಲಿಗೆ, ಕೆಲಸವಿಲ್ಲದ ಕೆಲಸ ಸರಿಬೀಳಲಿಲ್ಲ. ಯಾರಿಗೆ ಎಚ್ಚರ ಕೊಡಲಿ, ಹೇಗೆ ಏಚ್ಚರಿಸಲಿ ಎಂದು ನಿರ್ಧರಿಸುವದರೊಳಗೆ ಶಂಕರಮ್ಮನ ನಾಟಕವು ಆರಂಭವಾಗಿ ಅರ್ಧ ಮುಗಿದಿತ್ತು.

ಡಾಕ್ಟರರ ಮೊದಲ ಹೆಂಡತಿ ಚಂಪ. ಆಕೆಗೆ ಬಹು ಲೋಕಾನುಭವ. ರಾಯರ ಐವತ್ತಕ್ಕೆ ಮೀರಿದ ವಯಸ್ಸಿಗೆ ತನ್ನ ಇಪ್ಪತ್ತೈದು ವರುಷಗಳನ್ನು ಹೊಂದಿಸಿಕೊಂಡು ಹೋಗುವಷ್ಟು ಬುದ್ದಿವಂತೆ ದೂರದೃಷ್ಟಿಯುಳ್ಳವಳು. ತನ್ನ ಮದುವೆಯಾದ ಮೇಲೂ ಡಾಕ್ಟರರು ತನ್ನ ಇಳಿಯಸ್ಸಿನಲ್ಲಿ ಆ ಎಳೆ ಹುಡುಗಿ ಮಂಜುಳೆಯನ್ನು ವಂಶಾಭಿವೃದ್ಧಿಗಾಗಿ ಮದುವೆ ಮಾಡಿಕೊಂಡರು. ಒದಗಿದ ಅಸಮಾಧಾನವನ್ನು ನುಂಗಿಕೊಂಡು ತನ್ನ ಪಾಲಿಗೆ ಸಿಕ್ಕಿದ್ದದನ್ನೇ ಅಮೃತವೆಂದು ನೆನೆದು ಅನುಭವಿಸುವುದನ್ನು ಚಂಪ ಕಲಿತಿದ್ದಳು. ತನ ಸಖಕ್ಕಿಂತ ಸುಳಿ ಬಾಳೆಯ ಎಲೆಯಂತೆ ಥಳ ಥಳ ಮಿನುಗುತ್ತಿರುವ ಮಂಜುಳೆಯ ಸುಖದ ಬಗ್ಗೆ ಬಲು ಸಹಾನಭೂತಿ ಇತು, ಮತ್ತು ಅಲ್ಪ ಸ್ವಲ್ಪ ಭಯವೂ ಇದ್ದಿತು. ಆದರೆ ಅದನ್ನು ಹೊರಗೆಡಹದಂತೆ ಮಂಜುಳೆಯನ್ನು ದುಃಖದಿಂದ ತಪ್ಪಿಸಲು ಯತ್ನಿಸುತ್ತಿದ್ದ ಚಂಪುಳ ಮೇಲೆ ಶಂಕರಮ್ಮನ ಪ್ರಭಾವವು ನಿರುಪಯೋಗವಾಯಿತು. ಆದರೆ ಮಂಜಳೆಗೆ ಕ್ರಮಕ್ರಮವಾಗಿ ಶಂಕರಮ್ಮನ ಸಿಹಿಮಾತಿನ ಸವಿಹತ್ತಿತು. ಅವಳು ಹೇಳುವ ಕತೆಗಳಲ್ಲಿ ಕಾಣಬಾರದ ಕನಸು ಕಂಡು ಮಂಜುಳೆಯ ಬಾಯಿಯಲ್ಲಿ ನೀರೂರಿದುದು ನನಗೆ ಗೊತ್ತಾದುದು, ನಾನು ಮತ್ತು ರಾಯರು, ಚಂಪ ಮತ್ತು ಮಂಜುಳ ಇವರೆಲ್ಲರೂ ಕೂಡಿಕೊಂಡು ಶಾಂತಾಆಪ್ಟೆ ನಟಿಸಿದ್ದ “ಮೊಹಬತ್” ಚಿತ್ರವನ್ನು ನೋಡಿದ ನಡುರಾತ್ರಿಯೊಂದರಲ್ಲಿ ಡಾಕ್ಟರ್ ಒಂದು ಪಕ್ಕಕ್ಕೆ ನಾನು ಮತ್ತೊಂದು ಪಕ್ಕಕ್ಕೆ ಮಂಜುಳೆ ಕುಳಿತುಕೊಂಡು ಸಿನೇಮಾ ನೋಡುವುದು, ಮಧ್ಯ ಊರಿನಿಂದ ಅಲ್ಲಿಗೆ ಹೋದಾಗಲೆಲ್ಲಾ ಸ್ವಾಭಾವಿಕವೇ ಆಗಿದ್ದಿತು. ಇದೇನೂ ಹೊಸದಲ್ಲ. ಆದರೆ ಅಂದು ರಾತ್ರಿ ಮಾತ್ರ ಮಂಜುಳೆ ತಾನು ಕುಳಿತಿರುವುದು ನನ್ನ ಪಕ್ಕದಲ್ಲೆಂಬುದನ್ನು ಮರೆತಳು. ರಾಯರಿಗೆ ತಿಳಿಯದಂತೆಯೆ, ನನಗೆ ತಿಳಿಯದಂತೆಯೇ, ಶಾಂತಾಆಪ್ಟೆ ಯು ಅಭಿನಯಿಸಿದ ‘ಮೊಹಬತ್’ನ್ನು ತಾನೂ ಅಭಿನಯಿಸಿದಳು. ನಿಜವಾಗಿಯು ಆಕೆಗೂ ನನಗೂ ಇದ್ದ ಸಲುಗೆಯಲ್ಲಿ ಒಬ್ಬಳೇ ಕುಳಿತು ಚಂದ ಅಡಿಗೆ ಮನೆಯಲ್ಲಿದ್ದರೂ ತಾನು ನಡುಮನೆಯಲ್ಲಿ ಕುಳಿತು, ತಾಸುಗಟ್ಟಲೆ ನನ್ನೊಂದಿಗೆ ಫಿಂಗರ್ ಬಿಲಿ ಯರ್ಡ್ಸ್ ಆಡುತ್ತಿದ್ದಳು. ನಾನು ಸಾಕು ಎನ್ನುವರೆಗೂ ರಾಯರಿಗೆ ಬೇಕಾಗಲಿ ಬೇಡದಿರಲಿ, ವೀಣೆಯನ್ನು ಬಾರಿಸುತ್ತಿದ್ದಳು. ನಾನು ಊರಿನಿಂದ ಅವರಲ್ಲಿಗೆ ಹೋಗುವುದು ಬಹಳ ದಿನವಾದರೆ ಸಣ್ಣ ಮಗುವಿನಂತೆ ಏಕೆ ಬರಲಿಲ್ಲವೆಂದು ಜಗಳವಾಡುತ್ತಿದ್ದಳು. ಇದೆಲ್ಲಕ್ಕೂ ನಿನ್ನನ್ನೇ ನಾನು ದೂರುವುದು, ಇವೆಲ್ಲ ನನ್ನ ಮತ್ತು ಡಾಕ್ಟರ್ ಸ್ನೇಹದಲ್ಲಿ ಒಂದು ವರುಷಕ್ಕಿಂತ ಹೆಚ್ಚಾಗಿ ಬಾಳಿದ ಸ್ನೇಹದ ಜತೆಯಲ್ಲಿ ಬೆಳೆದು ಬಂದ ನಿತ್ಯಕ್ರಮಗಳೇ ಆಗಿದ್ದವೆಂಬುದನ್ನು ನೀನು ಬಲ್ಲೆಯಷ್ಟೆ? ಆಗ ನೀನಿದ್ದುದು ಗುಂಡ್ಲುಪೇಟೆಯಲ್ಲಿ. ನಾನು ಮೈಸೂರಿಗೆ ಹೋಗಿ ಬಂದ ಕೂಡಲೇ ಡಾಕ್ಟರ್ ಮನೆಯ ಊಟ ಮಂಜುಳೆಯ ಸಂಗೀತ ಚಂಪಳ ಸಂಸಾರದ ವ್ಯವಹಾರ ನಾವು ನೋಡಿದ ಸಿನೇಮ ಇವೆಲ್ಲವುಗಳನ್ನೂ ನಿನಗೆ ಹೇಳಿ ಮುಗಿಸದಿದ್ದರೆ ನೀನು ಸುಮ್ಮನಿರುತ್ತಿರಲಿಲ್ಲ. ಕೊನೆಗೊಮ್ಮೆ ಮಂಜುಳೆಯ ನವಯೌವನ ರಾಯರ ಮುದುರುವ ವೃದ್ಧಾಪ್ಯ, ಇವುಗಳನ್ನು ನೆನೆದುಕೊಂಡು ‘ಅಯ್ಯೋಪಾಪ’ ಎಂದು ಹೇಳಿ ಅನಂತರ ನಾನು ತಂದ ಹಣ್ಣಿನ ಬಟ್ಟಿಗೆ ನೀನು ಕೈ ಹಾಕುತ್ತಿದ್ದೆ. ಕೊಂಕುನುಡಿಯುವುದರಲ್ಲಿ ಬಹು ಹೆಸರಾದ ನೀನು ಅದೇಕೋ ಈ ರಾಯರ ಸಂಸಾರದ ವಿಷಯದಲ್ಲಿ ಮತ್ತು ನನ್ನ ಅವರ ಸ್ನೇಹದ ಬಗ್ಗೆ ಸಹಾನುಭೂತಿಯನ್ನೇ ತೋರುತ್ತಿದ್ದೆ. ಏನೋ ನನ್ನ ಪುಣ್ಯ.

ಇಷ್ಟೆಲ್ಲ ಬೆಳೆದು ಬಂದ ಸರಳ ಸಂಬಂಧದಲ್ಲಿ ಮ೦ಜುಳೆಯು ಅಂದು ವಿಕಾರವಶಳಾಗಿದ್ದು ಅಷ್ಟಕ್ಕೆ ಸುಮ್ಮನಿದ್ದರೆ, ಶಾಂತಾ ಆಟ್ಟೆಯು ಮೈ ಬಿಟ್ಟು ನಾಚಿಕೆ ತೊರೆದು ನಟಿಸಿದ ಸನ್ನಿವೇಶಗಳ ಪರಿಣಾಮಕ್ಕೆ ಹೊಣೆ ಮಾಡುತ್ತಿದ್ದೆ.

ಆದರೆ ಪೂರ‍್ಣಿ, ಮಂಜುಳ ಒಂದು ಹೆಜ್ಜೆಯನ್ನು ಮುಂದಿಟ್ಟಳು. ಇದಕ್ಕೆ ಸದ್ಯದ ಕಾರಣ ಈ ಚಲನಚಿತ್ರವಾಗಿದ್ದರೂ, ಸೂತ್ರಧಾರಿ ಆ ಮಹಾ ತಾಯಿ ಶಂಕರಮ್ಮನವರೇ. ಅವರು ತಮ್ಮ ನಿತ್ಯದ ಮಂತ್ರವನ್ನು ನನ್ನ ಮೇಲೆ ಮೊದಲು ಪ್ರಯೋಗಿಸಿ ಮಂಜುಳೆಯನ್ನು ತನ್ನ ಲೋಕಕ್ಕೆ ಕರೆದುಕೊಳ್ಳ ಬೇಕೆಂದು ಹಾಕಿಕೊಂಡ ಹೊಂಚಾಗಿದ್ದಿತು.

ನನಗೆ ನಿನ್ನನ್ನು ಡಾಕ್ಟರ ಮನೆಗೆ ಕರೆದುಕೊಂಡು ಹೋಗಲು ಸಮಯ ಸಿಕ್ಕಲೇ ಇಲ್ಲ. ಏಕೆಂದರೆ ನೀನು ಅದೇ ವರ್ಷ ಗರ್ಭಿಣಿ: ಬಾಣಂತಿ ಎಳೆ ಮಗುವಿನ ತಾಯಿ. ಹೀಗಾಗಿ ಮೈಸೂರಿಗೆ ಬರುವುದು ಸರಿಯೆನಿಸಲಿಲ್ಲ. ಇದೇ ಶಂಕರಮ್ಮನ ಸಮಯ ಸಾಧನೆಗೆ ಒಳ್ಳೆಯ ಕಾರಣವಾಯಿತು. ಮಂಜುಳೆಯ ಕಿವಿಯಲ್ಲಿ ಉರುಬಿದ ಮಂತ್ರದಿಂದ ಮಂಜುಳ ನಾನಲ್ಲಿಗೆ ಹೋಗಿ ಬರುವುದನ್ನು ಅನ್ಯಥ ಭಾವಿಸಿಬಿಟ್ಟಿದ್ದಳು. ನಾನು ಆಗಿಂದಾಗ್ಗೆ ತೋರಿಸುತ್ತಿದ್ದ ಮರುಕಕ್ಕೆ ಅಪಾರ್ಥವನ್ನು ಕಲ್ಪಿಸಿಕೊಂಡಿದ್ದಳು. ನಿಮ್ಮ ಚಿಕ್ಕಮ್ಮ ಮಾಡಿದ ಕರುಣೋಪದೇಶ ಏನು ಗೊತ್ತೆ? “ನಮ್ಮ ಹುಡುಗನ ಹೆಂಡತಿ ಹೆಸರಿಗೆ ಮಾತ್ರ ಹೆಂಗಸು. ಆಕೆ ಕಪ್ಪೆಂದರೆ ಕಪ್ಪು, ನಮ್ಮಾತ ರಾಮನಂತಹ ಒಳ್ಳೆ ಹುಡುಗ, ಏನಿದ್ದರೇನು ಹಲ್ಲಿದ್ದರೆ ಕಡಲೆಯಿಲ್ಲ ಕಡ್ಲೆಯಿದ್ದರೆ ಹಲ್ಲಿಲ್ಲ. ಅವನಿಗೆ ಅದೊಂದೇ ಕೊರಗು” ಎಂದು ಆರಂಭಿಸಿದ ಆಕೆಯ ಯಕ್ಷಿಣಿಮಂತ್ರವು ಮಂಜುಳೆಯನ್ನು, ಅಂದು ಆ ಚಿತ್ರವನ್ನು ನೋಡಿ ಹಿಂದಿರುಗಿ ಬಂದ ರಾತ್ರಿ, ನಾನು ಮಹಡಿಯ ಮೇಲೆ ಮಲಗಿದ್ದ ಕೊಠಡಿಯ ಎದುರಿಗೆ ಆವೇಶ ಬಂದವರಂತೆ ಬರಲು ಪ್ರೇರೇಪಿಸಿತು.

ಅಯ್ಯೋ ಪಾಪ! ನನಗಂದು ಮಂಜುಳೆಯನ್ನು ನೋಡಿ ಹೆದರಿಕೆ ಯಾಯಿತು. ಎಲ್ಲವನ್ನೂ ಶಂಕರಮ್ಮನು, ಹೇಳಿದುದೆಲ್ಲವನ್ನೂ ಜಳಜಳನೆ ಹೇಳಿ ಹಾಸಿಗೆಯ ಮೇಲೆ ಕುಳಿತ ಮಂಜುಳೆಯನ್ನು ನೋಡಿ ಮುಖದ ತುಂಬ ನನಗೆ ಬೆವರು ಬಂದಿತು. ಆದರೂ ನನ್ನಲ್ಲಿ ಇಲ್ಲದ ಧೈರ್ಯದಿಂದ ನಾನು ಆಕೆಗೆ ಹಿತೋಪದೇಶ ಮಾಡಿದೆ. ಅವಳ ಚೆಲುವನ್ನು ಕಣ್ಣೆತ್ತಿ ನೋಡಲಿಲ್ಲ. ಯಾರ ಪುಣ್ಯವೋ, ನಿನ್ನ ಪ್ರೀತಿಯ ಮಹಿಮೆಯೋ, ನನ್ನ ಅಮ್ಮನ ಸಂಸ್ಕಾರದ ಬಲವೋ, ಮಂಜಳೆಯನ್ನೂ ಸಮಾಧಾನಪಡಿಸಿ ನನ್ನ ಎಂದಿನಂತಹ ತಂಗಿಯನ್ನಾಗಿಯೇ ಉಳಿಸಿ ಕಳುಹಿಸುವುದರಲ್ಲಿ ಯಶಸ್ವಿಯಾದೆ. ಆದರೆ ಅಪವಾದ ತಪ್ಪುವಂತಿರಲಿಲ್ಲ. ಮಂಜುಳೆ ಮಹಡಿಯಿಂದ ಇಳಿಯುವಾಗ ಜಾರಿ ಬಿದ್ದಳು. ನಾನು ಕೊಠಡಿಯಿಂದ ಕೆಳಗೆ ಇಳಿದು ಅವಳ ನೆರವಿಗೆ ಬರುವುದರೊಳಗಾಗಿ ಶ್ಯಾಮರಾಯರು ಚಂಪಳೊಂದಿಗೆ ಬಂದು ನಿಂತಿದ್ದರು. ಅವರನ್ನು ನನಗೆ ನೋಡಲಾಗಲಿಲ್ಲ. ಮಂಜುಳೆಯ ಕಾಲು ನೋವಾಗಿದ್ದರೂ ಮಾತಾಡಿಸದೆ ಸಮಯದ ಗಂಭೀರತೆಯನ್ನು ತಿಳಿದು ಅವರು ಒಳಗೆ ಹೋದರು. ಚಂಪ ಬಿಕ್ಕಿ ಬಿಕ್ಕಿ ನನ್ನನ್ನು ನೋಡುತ್ತ ನಿಂತಿದ್ದಳು. ಪೂರ‍‍್ಣೀ, ತಿಳಿದುಕೊ ಆಗ ನನ್ನ ಪರಿಸ್ಥಿತಿ ಏನಾಗಿರಬೇಕೆ೦ದು? ಅಲ್ಲಿ ಯಾರಿಗೂ ನನ್ನ ಮಾತು ಬೇಕಾಗಿರಲಿಲ್ಲ. ನನ್ನ ವರ್ತನೆಯ ಬಗ್ಗೆ ಸಮಾಧಾನದ ಮಾತನ್ನು ಕೇಳಲು ಯಾರಿಗೂ ತಾಳ್ಮೆಯಿರಲಿಲ್ಲ. ಸನ್ನಿವೇಶದ ಗಂಭೀರತೆ ಅವರನ್ನು ಸ್ತಬ್ಧರನ್ನಾಗಿ ಮಾಡಿದ್ದಿತು. ಮಂಜುಳೆ ಮಾತ್ರ ದೀನವದನದಿಂದ ನನ್ನನ್ನು ನೋಡುತ್ತ, ಮೌನವಾಗಿಯೇ ಕ್ಷಮೆ ಕೋರುತ್ತಿದ್ದಳು. ಆಕೆಯನ್ನು ನಾನು ಕ್ಷಮಿಸುವದಿರಲಿ, ನನ್ನನ್ನು ಯಾರು ಕ್ಷಮಿಸಬೇಕು ಪೂರ‍‍್ಣೀ? ಈ ಸನ್ನಿವೇಶಕ್ಕೆ ಯಾರು ಹೊಣೆ ಹೇಳು? ಡಾಕ್ಟರರು ಬೆಳಗಿನಲ್ಲಿ ಬೇಗ ಎದ್ದು, ನಾನು ಮಾಳಿಗೆಯಿಳಿದು ಬರುವದರೊಳಗಾಗಿ ಹೊರಗೆ ಹೋಗಿದ್ದರು. ಚಂಪ ಗಂಭೀರವದನಳಾಗಿ ಒಂದು ಕಪ್ಪು ಕಾಫಿಯನ್ನು ನನ್ನ ಮುಂದಿಟ್ಟು ಮಾತನಾಡಿಸದೆ ಹೋದಳು. ಅಂದು ಮುಗಿದ ಸ್ನೇಹದೊಂದಿಗೆ ರಾಯರ ಸಂಸಾರದ ಸಂಬಂಧವೂ ತಪ್ಪಿತು.

ಆದರೇನು ಪೂರ‍‍್ಣೀ, ಯಾರು ಹೇಗೆ ಬೇಕಾದರೂ ಅರ್ಥಮಾಡಿ ಕೊಳ್ಳಲಿ. ನನಗೆ ಡಾಕ್ಟರ ಶಾಮರಾಯರು ಕಥಾನಾಯಕರಾಗಿ ಮಂಜುಳ ಎಂಬ ದಿವ್ಯ ಕಥಾವಸ್ತುವನ್ನು ನನ್ನ ನಾಟಕ ಸಾಹಿತ್ಯಕ್ಕೆ ದಯಪಾಲಿಸಿದರು. ಅಂದಿನ ರಾತ್ರಿ ಮಂಜುಳೆಯ ಮುಖದಲ್ಲಿ ಕಂಡ ಆ ಭಾವನೆಯ ವಿರಾಟರೂಪವು ನನಗೆ ಸಮಾಜದ ಗರ್ಭವನ್ನು ನೋಡಲು ಕಿಡಿ ಗಣ್ಣನ್ನು ದಾನ ಮಾಡಿತು. ಇಲ್ಲವಾದರೆ ನಾನು ಈ ಅಂಧ ಸಮಾಜದ ಅಂಧ ದಾಸರಲ್ಲಿ ಒಬ್ಬನಾಗಿದ್ದು ಜೀವಸಾಹಿತ್ಯವನ್ನು ಪಡೆಯುವದರಿಂದ ವಂಚಿತನಾಗಿಬಿಡುತ್ತಿದ್ದೆನೋ ಏನೋ?

ಈಗ್ಗೆ ಒಂದುವರ್ಷದ ಹಿಂದೆ ನಾನೂ ನೀನೂ ಮೈಸೂರು ಮಾರ್ಕೆಟಿನ ಮುಂದೆ ಬಳೆ ಅಂಗಡಿಯವನಿಗೆ ತಿಂಗಳ ಕಾಣಿಕೆಯನ್ನು ಒಪ್ಪಿಸುತ್ತಿದ್ದಾಗ ನಮ್ಮ ಪಕ್ಕಕ್ಕೆ ಒಂದು ಹುಡುಗಿ ಬಂದು ನಿಂತಳು. ಅವಳ ಪಕ್ಕದಲ್ಲಿ ಉನ್ನತ ಆಕೃತಿಯ ಭೀಮಕಾಯದ ಮಿಲಿಟರಿ ಉಡುಪಿನ ಒಬ್ಬ ಪುರುಷ ನಿಂತಿದ್ದನು. ಈ ಹುಡುಗಿ ನನ್ನ ಮುಖ ನೋಡಿದೊಡನೆಯೇ ತಲೆ ತಗ್ಗಿಸಿದುದು ನಿನಗೆ ಕಾಣಲಿಲ್ಲ. ಅದೆಲ್ಲವನ್ನೂ ಮೇಲು ಸೆರುಗಿನಲ್ಲಿ ಮುಚ್ಚಿಕೊಂಡಳು. ಆದರೆ ನನ್ನ ಕಡೆಗೆ ನೋಡಿದಾಗ ಆಕೆಯ ಕಣ್ಣಲ್ಲಿ ದೀನತೆ ತುಂಬಿದ್ದಿತು. ಅತ್ತ ಆಕೆ ಸರಿದಕೂಡಲೇ ನಿನ್ನ ಹೆಗಲು ಚಿವುಟಿ ಈಕೆಯೇ ಡಾಕ್ಟರ ಶಾಮರಾಯರ ಮಂಜುಳೆ ಎಂದು ನಾನು ತೋರಿಸಿದಾಗ ನೀನು ಮಾರ್ಕೆಟ್ಟಿನಲ್ಲಿರುವುದನ್ನು ಮರೆತು, ಅಯ್ಯೋ, ಎಷ್ಟು ಚೆಲುವೆ ಈ ಹುಡುಗಿ ಎಂದು ನಿಟ್ಟುಸಿರನ್ನು ಬಿಟ್ಟ ನೆನಪಿದೆಯೇ? ಕೊನೆಗೆ ಆಕೆಯ ಜೊತೆಯಲ್ಲಿ ಇದ್ದವರಾರೆಂದು ಕೇಳಿದಾಗ ನಿನಗೆ ನಾನು ಉತ್ತರವೇನೂ ಹೇಳಲಾಗಲಿಲ್ಲ. ಶಂಕರಮ್ಮನ ಮಂತ್ರ ಫಲಿಸಿರಬೇಕು.

ನನಗೆ ಇತ್ತೀಚೆಗೆ ತಿಳಿದ ಸುದ್ದಿಯಂತೆ ಚಂಪಳೊಬ್ಬಳೇ ಡಾಕ್ಟರರಿಗೆ ಉಳಿದಳು. ಮಂಜುಳೆ ಮನೆಯಿಂದ ಹಾರಿಹೋದ ಹಕ್ಕಿಯಂತಾದಳಂತೆ. ಶಂಕರಮ್ಮನ ಸ್ನೇಹ ಬಹಳವಂತೆ. ಹೋದ ದಸರಾದಲ್ಲಿ ನಾನು ಹೆಚ್ಚು ಧೈರ್ಯಮಾಡಿ ಇವರ ಯೋಗಕ್ಷೇಮ ತಿಳಿದುಕೊಳ್ಳಲು ಮನೆಗೆ ಹೋದೆ. ರಸಿಕ ರಾಯರಮನೆಯ ವೀಣೆಯ ಮೇಲೆ ಧೂಳು ಕುಳಿತಿದ್ದಿತು. ರಾಯರಿರಲಿಲ್ಲ, ಚಂಪಳೊಬ್ಬಳೇ ಮೊದಲ ಮೆಲುನಗೆಯಲ್ಲಿಯೇ ನನ್ನನ್ನು ಸ್ವಾಗತಿಸಿದಳು. ಹೋಗಿ ಕಾಫಿ ಕುಡಿದ ಮೇಲೆ ಮಂಜುಳೆ ಎಲ್ಲಿ ಎಂದು ಕೇಳಿದೆ. ಚಂಪ ತಲೆ ತಗ್ಗಿಸಿ ಉಗುರಿನಿಂದ ನೆಲ ಕೆರೆದಳು. ಮೆಲುದನಿಯಲ್ಲಿಯೇ ಆಕೆ ಈಗ ಇಲ್ಲಿ ಇಲ್ಲ ಎಂದಳು. ಹೆಚ್ಚು ಕೇಳಲಿಲ್ಲ. ಡಾಕ್ಟರ ಎಲ್ಲಿ ಎಂದು ಕೇಳಿದಾಗ ಬೆಂಗಳೂರಿಗೆ ಹೋಗಿರುವರೆಂದು ಉತ್ತರ ಬಂತು. ಅವರಿಗೆ ನಾನು ಬಂದಿದ್ದೆನೆಂದು, ಈಗ ನಾನು ಹುಬ್ಬಳ್ಳಿಯಲ್ಲಿರುವೆನೆಂದು ಹೇಳಿರೆಂದು ಸೂಚಿಸಿದೆ. ಚಂಪ ನನ್ನನ್ನು ಊಟಕ್ಕೆ ನೆಪಮಾತ್ರಕ್ಕೂ ಕರೆಯಲಿಲ್ಲ. ನನಗಾಗಿ ವಿಶೇಷ ಉತ್ಸಾಹದಿಂದ ಕಾಯಿ ಚಟ್ನಿಯನ್ನು ಮಾಡುತ್ತಿದ್ದ ಚಂಪಳಿಗೆ ನನಗೆ ಊಟ ಬಡಿಸ ಬೇಕೆಂದರೆ ಬಲು ಸಡಗರ. ಈ ಸೋದರಿ ಪ್ರೇಮವೆಲ್ಲವನ್ನೂ ಸೂರೆ ಗೊಂಡು ರಾಯರ ಸಂಸಾರಕ್ಕೆ ಬೆಂಕಿಯಿಟ್ಟ ಮಹಾತಾಯಿ ಶಂಕರಮ್ಮ. ಈಕೆಗೆ ನಲವತ್ತು ತುಂಬಿದರೂ ಇನ್ನೂ ಸಾವು ಬಾರದು. ಇಂತಹರನ್ನು ಕಂಡರೆ ಯಮನಿಗೆ ಎಲ್ಲ ಇಲ್ಲದ ಕರುಣಿ! ಸಾಕಾಯಿತು. ಕೈ ನೋವು, ಬರೆಯುವಷ್ಟನ್ನು ಬರೆದನು. ಇನ್ನು ಮುಂದೆ ನನ್ನ ನೆನಹಿನ ಬುತ್ತಿಯನ್ನು ಮನಸ್ಸಿಗೆ ಬಂದಂತೆ ನನ್ನನ್ನು ಕೇಳದೆ ಬಿಚ್ಚಲು ಯತ್ನಿಸಬೇಡ.

ಇಲ್ಲಿ ಬರೆದು ಸಾಕಾದರೆ ಗಾಳಿಹಾಕುವರಿಲ್ಲ. ಬಾಯಾರಿದರೆ ಕಾಫಿಯನ್ನು ತಂದು ಕುಡಿಸುವವರಿಲ್ಲ. ಭಾವನೆಯ ಉದ್ವೇಗ ನೆತ್ತಿಗೇರಿ ತಲೆಯರಿ ಬಂದರೆ ತಲೆನೀವುವರಿಲ್ಲ. ಇಷ್ಟು ದೂರ ನನ್ನನ್ನು ಬಿಟ್ಟು ಅಲ್ಲಿಂದಲೇ ಕುಳಿತು ನಾಡಿಯನ್ನು ಮಿಡಿದು ನಿನಗೆ ಬೇಕಾದುದನ್ನು ಬರೆಸಿಕೊಳ್ಳುವ ಬಿನ್ನಾಣ ಸಾಕಿನ್ನು. ಇನ್ನು ಮುಂದೆ ನಾನೆಷ್ಟು ಬರೆಯುವೆನೋ ಅಷ್ಟೇ ಸಾಕು. ತಲೆ ಹರಟೆ ಮುಂದೆ ಮಾಡಿ ನನ್ನೆಲ್ಲ ಕಥೆಯನ್ನು ಕಾಗದದ ಮೇಲೆ ಇಳಿಸಬೇಡ. ಎಚ್ಚರ! ನನ್ನಿಂದ ಬರೆಯಿಸಬೇಕಾದರೆ, ಮುದ್ದಣನ ಮುಂದೆ ಮುದ್ದು ಮುದ್ದಾಗಿ ನಿಂತು ಮಾತಾಡಿ ಜಗಳ ಹೂಡಿ ರಾಮಾಶ್ವಮೇಧವನ್ನು ಬರೆಸಿದ ಮನೋರಮೆಯಂತೆ ಬರೆಸುವದಾದರೆ ಬರೆಸು. ನಾನೊಲ್ಲೆ ನೆನ್ನುವುದಿಲ್ಲ.

ಈ ಪತ್ರದಲ್ಲಿ ಬರೆದಿರುವದೆಲ್ಲವೂ ನಿಮ್ಮ ಚಿಕ್ಕಮ್ಮನಿಗೆ ಗೊತ್ತಾದರೆ? ಗೊತ್ತಾಗಲೇಳು; ನನಗೇನು ಭಯ? ನೀತಿಗೆಟ್ಟವರಿಗೆ ಇರುವ ಎದೆತನದ ಎತ್ತರ ನನಗೆ ಗೊತ್ತು. ಅವರು ಲೋಕದ ಮುಂದೆ ಹಿರಿಯ ಹೆಂಬೇಡಿಗಳು.

ಇತಿ ನಿನ್ನ ಒಲವಿನ ಪತಿ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...