
ಮುದವೇ ವಿಮಲಾ ಬಾಳುವೆಬೆಲ್ಲಾ
ಇದುವೇ ಪಲ್ಲನ ಹಾಡಿನ ಪಲ್ಲಾ || ಪಲ್ಲ ||
೧
ನೀನು ಬೆಲ್ಲಾ ನೀನೇ ಬೆಲ್ಲಾ!
ನಿನ್ನ ಪಲ್ಲಾಕಾಕಾನು ಬೆಲ್ಲಾ
ನೀನೂ ಬೆಲ್ಲಾ ನಾನೂ ಬೆಲ್ಲಾ
ಬೆಲ್ಲಾ ಬೆಲ್ಲಾ ಎಲ್ಲಾ ಬೆಲ್ಲಾ!
೨
ನಮ್ಮ ವಿಮಲನ ಸಕ್ಕರಿ-ಕೈಗೆ
ಒಂದು “ಪಾಪಾ” ಒಂದೇ “ಪಾಪಾ”*
ಸವಿಸವಿ “ಪಾಪಾ” ಸಿಹಿಸಿಹಿ “ಪಾಪಾ”
ಚೊಕ್ಕ ಪಾಪಾಗೆ ತಕ್ಕ ಪಾಪಾ!
೩
ನಮ್ಮ ವಿಮಲನ ಒಳ್ಳೆ ಬಾಯಿಗೆ
ಒಂದು ಬೆಲ್ಲಾ ಒಳ್ಳೆ ಬೆಲ್ಲಾ &
ತಾತಾ ಬೆಲ್ಲಾ ತೋತೋ ಬೆಲ್ಲಾ
ಕಳ್ಳಿ ವಿಮಲಗೆ ಒಳ್ಳೆ ಬೆಲ್ಲಾ!
೪
ನಮ್ಮ ವಿಮಲನ ಮುದ್ದು ಗದ್ದಕೆ
ಒಂದು ಮುದ್ದು ಸದ್ದಿಲ್ಲದ ಮುದ್ದು
ನನೆ ನನೆ ಮುದ್ದು ಇನಿಇನಿ ಮುದ್ದು
ಮುದ್ದು ವಿಮಲಗೆ ಶುದ್ಧ ಮುದ್ದು!
೫
ನಮ್ಮ ವಿಮಲನ ತುಂಬುಗಲ್ಲಕೆ
ಒಂದು ಚುಂಬನ ಸಂಭ್ರಮಚುಂಬನ
ಅಂದ ಚುಂಬನ ಚಂದ ಚುಂಬನ
ಚುಂಬನಸಂಭ್ರಮ ಸಂಭ್ರಮಾ……..
ಸಂಭ್ರಮಾ!
*****
* ಪಾಪಾ:- ಮುದ್ದು (ಮರಾಠಿ) ಕೂಸು (ಕನ್ನಡ, ಬಾಲಿಶ ಭಾಷೆ )
& ಬೆಲ್ಲ :- ಮುದ್ದು (ಕನ್ನಡ, ಬಾಲಿಶ ಭಾಷೆ )

















