Home / ಕವನ / ಕವಿತೆ / ಶ್ರೀ ಕೃಷ್ಣನ ಕಾಣಿಕೆ

ಶ್ರೀ ಕೃಷ್ಣನ ಕಾಣಿಕೆ

[ಒಂದಾನೊಂದು ದಿನ ಸುಧಾಮನ ಸಹಧರ್ಮಿಣಿ ತನ್ನ ಪತಿರಾಯನನ್ನು ಕುರಿತು ಹೀಗೆ ನುಡಿದಳು]
ಭಾಗ್ಯವನು ಬಳೆದುಕೊಂಡಿಹರು ಕೆಲ ಜನರು ಸೌ-
ಭಾಗ್ಯವನು ಸುರಿದುಕೊಂಡಿಹರು ಹಲ ಜನರು ಸೌ-
ಭಾಗೃತಿಲಕನೆ ಕೇಳು ಭಾಗ್ಯಲಕ್ಷ್ಮಿಯು ನಮ್ಮ
ಗುಡಿಸಲವ ತೊಲಗಿ ತಾನು!
ಈಗ್ಗೆ ಹೋದಳು- ನೆಲೆಯು ಹತ್ತದೀ ಬಡತನದ
ತಗ್ಗಿನೊಳಗಿಂದ ಹೊರಬರುವ ಹಾದಿಯ ಕಾಣೆ
ಮುಗ್ಗಿ ಹೋಗಿದೆ ಮನವು ತಗ್ಗಿ ಹೋಗಿದೆ ತನುವು
ನಮಗೆ ಯಾರಿಲ್ಲವೇನು?
[ಆಗ ಅಂತಃಕರಣಕ್ಕೆ ಒಳಒಳಗಿಂದೇ ಅಳುವು ಬಂದು ಸುದಾಮನು ತನ್ನ ಪತ್ನಿಗೆ ಈ ಪ್ರಕಾರ ಹೇಳಿದನು:-]
ಬಂಧುಬಳಗದ ಜನರು ಯಾರಿಲ್ಲ, ಅಣ್ಣ ತ-
ಮ್ಮಂದಿರನು ನಾನು ಹುಟ್ಟಾ ಕಾಣೆ ಮಡದಿಯೇ
ಮುಂದೆ ಕರೆವವರಿಲ್ಲ ಹಿಂದುಮುಂದಿಲ್ಲ ಹಾಯ್
ನಮಗೀಗ ಯಾವನಿಲ್ಲ!
ಇಂದು ನೆರವಿನ ನರನು ನಮಗಿಲ್ಲ ಜಗದಲ್ಲಿ
ಹಿಂದೆ ಗುರ್ವಾಶ್ರಮದೊಳಿದ್ದನೊಬ್ಬನು ಕೃಷ್ಣ
ಚೆಂದ ಚೆನ್ನಿಗ ಚೆಲುವ- ದ್ವಾರಕೆಯೊಳಿರುವಾತ-
“ಎಳೆಮನದ ಗೆಳೆಯ” ನೊಬ್ಬ!
[ಕೃಷ್ಣನಿಂದಾದರೂ ತನ್ನ ಬಡತನ ಬತ್ತಿತೆಂದು ಬಗೆದು ಸಹಧರ್ಮಿಣಿಯು “ಕೃಷ್ಣನ ಕಡೆಗೆ ಹೋಗಿ ಬರ್ರಿ” ಎಂದು ಹೇಳಿದ್ದಕ್ಕೆ ಸುದಾಮನು ಒಪ್ಪಿ ಎಲ್ಲಿಂದಲೋ ಒಪ್ಪಿಡಿ ಅವಲಕ್ಕಿಯನ್ನು ಪತ್ನಿ ತಂದು ಕೊಟ್ಟಿದ್ದನ್ನು ತೆಗೆದುಕೊಂಡು ಹೊರಟು ದ್ವಾರಕೆಗೆ ಬಂದು ತನ್ನ ಗೆಳೆಯನಿಗೆ ಹೀಗೆ ಹೇಳಿದನು:-]
ಒಪ್ಪಿಡಿಯ ತುಂಬಿರುವ ಅವಲಕ್ಕಿಯನು ತಗೋ
ಒಪ್ಪಾಗಿ ಒಪ್ಪುತಿಹ ಭಾಗ್ಯಲಕ್ಷ್ಮಿಯ ನಲ್ಲ
ಅಪ್ಪಯ್ಯ ನಿನಗೆಂದು ತಂದಿರುವೆನೀ ಒಂದೆ
ಹಿಡಿಯ ಅವಲಕ್ಕಿಯನ್ನು!
ಉಪ್ಪಿಲ್ಲ ಊಟಕ್ಕೆ ತುಪ್ಪವಿಲ್ಲವು ತುಟಿಗೆ
ಕಪ್ಪಿಟ್ಟು ಹೋಗಿರುವೆ ಮತ್ತೆ ಮೇಲಿಂದ ಮೇಲ್
ಬಪ್ಪ ಬಡತನವನ್ನು ಭಂಗಿಸೋ ಹಿಂಗಿಸೋ-
ಭಾಗ್ಯವನು ಸೂರೆಗೊಳಿಸೋ!
ಕೃಷ್ಣ ಕೊಳಲಿನ ಕೃಷ್ಣ! ಕೆನೆವಾಲ ಕೃಷ್ಣನೇ!
ಕೃಷ್ಣೆಯಾ ದೇವಕಿಯ ಸವಿಮಾವೆ-ಗಿಳಿಮಾವೆ!
ವಿಷ್ಣು ವರ್ಣಗಳುಳ್ಳ ವಿಶ್ವವನು ವ್ಯಾಪಿಸಿದ
ಭಾಗ್ಯಸ್ವರೂಪ ರೂಪ!
ನಿಷ್ಣಾತ ಯೋಗೀಂದ್ರ ಬವರದಲ್ಲಿಯ ಬಂಟ!
ಉಷ್ಣತೆಯು ಹೃದಯವನು ತುಂಬಿಹುದು ಹೃದಯದೀ
ಕೃಷ್ಣೆಯನು ಕಡೆಗೋಲ ಬೆಣ್ಣೆಯಲಿ ಸಂತೈಸಿ
ಸೊಗಸುಗೊಳಿಸೀಗ ಬೇಗ!
ನೋಯುತ್ತ ನೆರಳುವೆನು ಬೇಯುತ್ತ ಬಳಲುವೆನು
ಕಾಯವೀ ತೋಯದೊಳು ತೋಯುತ್ತ ತೊಳಲುವದು
ಕಾಯಬೇಕೆನ್ನ ಮಿತ್ರನೆ ಮೀಯಿಸೀಗ ನಿನ್ನಯ
ನನ್ನಿ-ನನ್ನಿ ಯಲ್ಲಿ!
ನೋಯುತ್ತ ಬಸಿಯುತಿಹ ಗಾಯವನ್ನಾರೈಸಿ
ಮಾಯಿಸೈ, ಸೀಯಾದ ತೋಯವನು-ಪೀಯೂಷ-
ಪ್ರಾಯವಹ ತೋಯವನು ತಾಯೀಗ ಸಾಯುವೆನು
ನೀರಡಿಕೆಸಾವಿನಿಂದ!
[ಆಗ ಶ್ರೀಕೃಷ್ಣನು ಪ್ರೇಮಾಂತಃಕರಣದಿಂದ ಗೆಳೆಯನನ್ನು ಬಿಗಿತಾಗಿ ಅಪ್ಪಿಕೊಂಡು ಇಂತೆಂದನು:-]
ಅಣ್ಣಯ್ಯ ಅಲ್ಲಯ್ಯ ಈ ಸೊಲ್ಲು ಸಲ್ಲದೈ
ಕಣ್ಣೀರುಗಳು ತುಂಬಿ ಕೋಡಿಯೊಡೆಯುವದೀಗ
ತಣ್ಣನ್ನ ಶಿಲೆಯಂತೆ ನಾನೇನು ಕೂತಿರುವದಿಲ್ಲವೋ
ಇಲ್ಲ ಇಲ್ಲ!
ನಿನ್ನನ್ನು ನಿನ್ನ ಮೊಗವನು ನೋಡಿ ಜೀವದ-
ಲ್ಲಿನ್ನು ಕಳೆ ಬಂದಿತೈ, ಮೊಗದಲ್ಲಿ ನಗೆ ಬಂತು
ಅಣ್ಣಯ್ಯ ನನ್ನದೀ ಭಾಗ್ಯವೆಲ್ಲವು ನಿನ್ನದೇ,
ನನ್ನದಿರುವದಿಲ್ಲ!
ಮೇಲೆ:-
ಕೃಷ್ಣ ನೂರೊಳಗೆ ಗೆಳೆಯನು ಇರುವ ಕಾಲದಲಿ
ಕೃಷ್ಣನೇ ಉಪಚರಿಸಿ ಕಳಿಸಿದನು ಕೊಡದೆ ಗಡ,
ಕೃಷ್ಣ ಕೊಡದದ್ದೆ ತನ್ನೂರಿಗೈತಂದ ಬಳಿಕಾಯಿತೈ
ಭಾಗ್ಯ ಸಾಕ್ಷಾತ್!
ಕೃಷ್ಣನೀಯುವ ಬೇವೆ ಮಾವಾಗಿ ಫಲಿಸುವದು!
ಕೃಷ್ಣನೀಯುವ ಕನಸೆ ನನಸಾಗಿ ಜನಿಸುವದು!
ಕೃಷ್ಣ ಕೊಡುವಂಥ ವಿಷ ಪೀಯೂಷವಾಗಿ ರುಚಿಸುವದೀಗ
ಪೃಥ್ವಿಯಲ್ಲಿ!
*****
Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...