ಸುಪ್ರಭಾತ ಗೀತಗಳಿಲ್ಲದೆ
ಅಂಗಳಕೆ ಹೆಂಗಳೆಯರ ರಂಗವಲ್ಲಿಗಳಿಲ್ಲದೆ
ಓಡಾಡಿ ಹಾಲು ಕೊಡುವ
ಪೇಪರ ಒಗೆಯುವ
ತರಕಾರಿ ಎಂದು ಕೂಗುವ ಹುಡುಗರಿಲ್ಲದೆ
ಘಮಘಮಿಸುವ ಹೂಮೊಗ್ಗುಗಳ
ಯಾವೊಂದೂ ಸ್ವಾಗತವಿಲ್ಲದೆ
ಸಿಟ್ಟಿಗೆದ್ದ ಸೂರ್ಯ ಧಗಧಗಿಸುತ್ತಲೇ ಹುಟ್ಟುತ್ತಾನೆ.
ಸೂರ್ಯಪೂಜೆ
ಸೂರ್ಯ ನಮಸ್ಕಾರಗಳಿಲ್ಲದೆ
ಜನರ ನಡುವೆ ಏಳುತ್ತಾನೆ
ಗಿಡಗಳ ನೆರಳಿಲ್ಲದ ಅರಮನೆಗಳಿಗೆ
ಬಡವರ ತುಂಬಿದ ದೊಡ್ಡಿಗಳಿಗೆ
ಮುನ್ನುಗ್ಗುತ್ತಾನೆ.
ಬಿಳಿಯರ ಬೆತ್ತಲೆ ತೊಗಲಿಗೆ ಮುದ್ದಿಸಿ
(ಸನ್‍ಬಾಥ್) ಪ್ರೀತಿಸಿಕೊಳ್ಳುವ
ಕರಿಯರಿಂದ ಸಿಟ್ಟಿಗೆಬ್ಬಿಸಿಕೊಳ್ಳುವ
ಬುರ್ಕಾದ ಅರೇಬಿಯರಿಗೆ ಮುಟ್ಟದೆ
ಎತ್ತರೆತ್ತರಕ್ಕೇರುತ್ತಾನೆ.
ತನ್ನ ದೇಹದೊಳಗೆ
ದಿಗಂಬರ ಬಂಜರು ಮರುಭೂಮಿಗೆ
ತೆಕ್ಕೆಯಾಗಿ
ಅವಳೊಳಗೆ ಇವನೋ
ಇವನೊಳಗೆ ಅವಳೋ ಆಗಿ
ಕುರುಹುಗಳು ಮೊಳಕೆಯೊಡೆಯುತ್ತವೆ
ಪರಿಶುದ್ಧ ಸ್ಫಟಿಕ ಜಲ (ಓಯಸಿಸ್)
ಕಣ್ಣು ಮುಚ್ಚಾಲೆಯಾಡುತ್ತದೆ
ಅಲ್ಲೊಂದು ಇಲ್ಲೊಂದು
ಕ್ಯಾಕ್ಟಸ್‌ಗಳು ಬಿಚ್ಚಿಕೊಳ್ಳುತ್ತವೆ.
ಪ್ರೀತಿಯ ಜೀನು ಮುತ್ತಿನ
ಖರ್ಜೂರಗಳ ಮಳೆಯುದುರುತ್ತದೆ.
ಸುಖ ದುಃಖಗಳ ಸೋಂಕು ಮರೆತು
ಈಗೀಗ ಅರೇಬಿಯದ ಸೂರ್ಯ
ಬರೆಯವವರಿಗೆ ಜೀವಂತ ಕಾವ್ಯವಾಗುತ್ತಿದ್ದಾನೆ.
“ಬಿಸಿಲಿನ ಧಗೆಯಲ್ಲೂ
ಹರಿದ್ವರ್ಣಿಸಿದ ಕ್ಷಣಗಳಿಗೆ
ಬೆಲೆ ಕಟ್ಟಲಾದೀತೆ?
ಉಸುಕಿನ ಕಣಗಳೊಡನೆ
ಓಯಸಿಸ್ ಹನಿಗಳೊಡನೆ
ಬೆಳೆಸಿದ ಕ್ಯಾಕ್ಟಸ್‌ಗಳೂಡನೆ
ಕಡಲಾಳ ಕಡಲಿತ್ತರದೊಡನೆ
ಬೆರೆಸಿದ ಉಸುರಿಗೆ
ಬೆಲೆ ಕಟ್ಟಲಾದೀತೆ?”
*****
ಗಾಂಜಾ ಡಾಲಿ